ಸಾಪ್ತಾಹಿಕಪ್ರಭ

ಅಮ್ಮ, ನಿನ್ನ ಎದೆಯಾಳದಲ್ಲಿ...

ನನ್ನ ಹಲವು ಭಾವಗೀತೆಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು 'ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು/ ಮಿಡುಕಾಡುತಿರುವೆ ನಾನು' ...

ಅಮ್ಮ, ನಿನ್ನ ಎದೆಯಾಳದಲ್ಲಿ...
Published On :

ನನ್ನ ಹಲವು ಭಾವಗೀತೆಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು 'ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು/ ಮಿಡುಕಾಡುತಿರುವೆ ನಾನು' ಎಂಬ ಗೀತೆ. ಅಪರಿಚಿತರಿಗೆ, 'ನಾನು ಲಕ್ಷ್ಮಣರಾವ್‌' ಅಂದರೆ, 'ಯಾವ ಲಕ್ಷ್ಮಣರಾವ್?' ಅಂತ ಕೇಳ್ತಾರೆ. 'ಅದೇ, ಅಮ್ಮ ನಿನ್ನ ಎದೆಯಾಳದಲ್ಲಿ, ಅನ್ನೋ ಹಾಡಿದೆಯಲ್ಲ, ಅದನ್ನು ನಾನೇ ಬರೆದದ್ದು' ಅಂದರೆ, 'ಓ ಹೌದಾ?' ಅಂತ ಅಭಿಮಾನದಿಂದ ನೋಡ್ತಾರೆ. ನನಗೂ ಹೆಮ್ಮೆ! ಖುಷಿ! ನಾನು ನೆಚ್ಚಿದ ತಾಯಿ ಮತ್ತು ಭೂತಾಯಿ- ಈ ಇಬ್ಬರನ್ನೂ ಒಟ್ಟಿಗೆ ಉದ್ದೇಶಿಸಿ ಬರೆದ ನನ್ನ ಆ ಹಾಡನ್ನು ಕನ್ನಡ ಸಮುದಾಯ ತನ್ನದಾಗಿಸಿಕೊಂಡಿದೆಯಲ್ಲ, ಅಂತ. ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ಏಕೆಂದರೆ ಅಮ್ಮ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹೆಂಗಸರಾಗಲೀ ಗಂಡಸರಾಗಲೀ ಅಮ್ಮ ಅಂದ ಕೂಡಲೇ ಎಲ್ಲರೂ ಸಹಜವಾಗಿ ಭಾವುಕರಾಗ್ತಾರೆ. ಹೃದಯದ ತಂತಿ ಮಿಡಿಯುತ್ತೆ. ನನಗಂತೂ ಅಮ ಹೃದಯವಂತಿಕೆಗೆ ಒಂದು ರೂಪಕ.
ನನ್ನ ತಾಯಿಯ ಹೆಸರು ವೆಂಕಟಲಕ್ಷ್ಮಮ್ಮ. ಆಕೆಯ ತಂದೆ ಗುಡಿಬಂಡೆ ಲಕ್ಷ್ಮಣರಾವ್ ಅಂತ ಶ್ರೀಮಂತ ಜಮೀನ್ದಾರರು (ಅದೇ ಹೆಸರು ಮುಂದೆ ನನಗೆ ಬಂತು!). ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲ ಅವರ ಊರು. ಅವರಿಗೆ ಏಳೆಂಟು ಗಂಡು ಹೆಣ್ಣು ಮಕ್ಕಳಿದ್ದವಂತೆ. ಯಾವ್ಯಾವುದೋ ಕಾಯಿಲೆ ಕಸಾಲೆಗೆ ಸಿಕ್ಕಿ, ಒಬ್ಬೊಬ್ಬರಾಗಿ ಅಸುನೀಗಿ, ಕೊನೆಯವಳಾದ ನನ್ನ ತಾಯಿ ಮಾತ್ರ ಉಳಿದುಕೊಂಡಳು. ಆಕೆಯನ್ನು ತಬ್ಬಲಿ ಮಾಡಿ ತಂದೆ ತಾಯಿ ಸಹ ತೀರಿಕೊಂಡರು. 'ಕೂಡಲೇ ಮದುವೆ ಮಾಡಿದರೆ ಈಕೆ ಒಬ್ಬಳಾದರೂ ಉಳಿಯಬಹುದು' ಎಂದು ಯಾರೋ ಶಾಸ್ತ್ರ ಹೇಳಿದರು. ಹೀಗಾಗಿ ನನ್ನ ತಾಯಿಯ ಚಿಕ್ಕಜ್ಜ ಶ್ಯಾಮಣ್ಣನವರು, ಎಂಟು ವರ್ಷ ವಯಸ್ಸಿನ ತಮ್ಮ ಮೊಮ್ಮಗಳನ್ನು ವರಿಸಿ, ಮನೆಅಳಿಯನಾಗಿ ಬರಲು ಒಪ್ಪಿಗೆ ಇರುವ 'ವರ ಬೇಕಾಗಿದ್ದಾನೆ' ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರು. ಆಗ್ಗೆ ಹದಿನಾಲ್ಕು ವರ್ಷ ವಯಸ್ಸಿನ ನನ್ನ ತಂದೆ ರಾಜಾರಾವ್ ಬೀರೂರಿನಲ್ಲಿ ತನ್ನ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡು, ತನ್ನ ತಾಯಿ ಮತ್ತು ತಂಗಿಯರೊಂದಿಗೆ ಕಡು ಬಡತನದಲ್ಲಿದ್ದರು. ಜಾಹೀರಾತನ್ನು ಗಮನಿಸಿದ ಅವರ ಸೋದರಮಾವ ಸಂಬಂಧ ಕುದುರಿಸಿದರು. ಹೀಗೆ ನನ್ನ ತಂದೆ ಬೀರೂರು ಬಿಟ್ಟುಬಂದು, ನನ್ನ ತಾಯಿಯನ್ನು ಮದುವೆಯಾಗಿ, ಚೀಮಂಗಲ ಗ್ರಾಮದಲ್ಲಿ ನೆಲೆನಿಂತರು. ಮುಂದೆ, ಮಕ್ಕಳ ವಿದ್ಯಾಭ್ಯಾಸಕ್ಕೆಂದು ಚಿಂತಾಮಣಿಗೆ ತಮ್ಮ ಸಂಸಾರವನ್ನು ವರ್ಗಾಯಿಸಿ, ಅಲ್ಲಿ ಒಂದು ಫೋಟೋ ಸ್ಟುಡಿಯೊ ತೆರೆದರು. ಶಾಸ್ತ್ರ ನಿಜವಾಗಿ, ನನ್ನ ತಾಯಿ ಉಳಿದುಕೊಂಡಳು. ಅಷ್ಟೇ ಅಲ್ಲ, ವಂಶೋದ್ಧಾರಕರಾದ ನಾವು ಒಂಬತ್ತು ಮಂದಿ ಮಕ್ಕಳು ಇಂದಿಗೂ ಗುಂಡುಕಲ್ಲುಗಳಂತೆ ಉಳಿದಿದ್ದೇವೆ!
ನನ್ನ ತಂದೆಯ ಸೋದರಮಾವನವರಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಯಾಕೆ ರತ್ನಮ್ಮ. ಆಕೆ ಚಿಕ್ಕಂದಿನಿಂದಲೂ ನನ್ನ ತಂದೆಯನ್ನು ತುಂಬ ಪ್ರೀತಿಸುತ್ತಿದ್ದರು. ಮದುವೆಯಾದರೆ ಅವರನ್ನೇ ಎಂದು ಹಠ ಹಿಡಿದು ಕೂತರು. ಹೀಗಾಗಿ, ಈಗಾಗಲೇ ವಿವಾಹಿತರಾಗಿ ನಾಲ್ಕಾರು ಮಕ್ಕಳಿದ್ದರೂ, ನನ್ನ ತಂದೆ ವಿಧಿಯಿಲ್ಲದೆ ಆಕೆಯನ್ನು ಗುಟ್ಟಾಗಿ ದೇವಸ್ಥಾನವೊಂದರಲ್ಲಿ ಮದುವೆಯಾದರು. ವಿಷಯ ಗೊತ್ತಾದಾಗ ಅಸಹಾಯಕಳೂ, ಒಬ್ಬಂಟಿಯೂ ಆದ ನನ್ನ ತಾಯಿ ಮೌನವಾಗಿ ತನ್ನ ನೋವು ನುಂಗಿಕೊಂಡಳು. ಆದರೆ ತನ್ನ ಸವತಿಯನ್ನು ಚಿಂತಾಮಣಿಯ ತನ್ನ ಮನೆಗೇ ಕರೆತರಲು ನನ್ನ ತಂದೆ ಸನ್ನಾಹ ನಡೆಸುತ್ತಿರುವುದು ಗೊತ್ತಾದಾಗ ಆಕೆಗೆ ದಿಕ್ಕು ತೋಚದಂತಾಯಿತು. ನನಗಾಗ ಹದಿನಾರು ವರ್ಷ. ದಾವಣಗೆರೆಯ ನನ್ನ ಸೋದರತ್ತೆಯ (ತಂದೆಯ ತಂಗಿ) ಮನೆಯಲ್ಲಿ ಉಳಿದುಕೊಂಡು ಪಿಯುಸಿ ಓದುತ್ತಿದ್ದೆ. ನನ್ನ ತಾಯಿ ನನ್ನ ಸೋದರಮಾವನವರಿಗೆ ವಿಷಯ ತಿಳಿಸಿ ಪತ್ರ ಬರೆದರು. ಅವರಾದರೋ ನನ್ನ ತಾಯಿಯನ್ನು ತನ್ನ ಒಡಹುಟ್ಟಿದಳೆಂದು ಭಾವಿಸಿದ್ದರು. ಆದ್ದರಿಂದ ನನ್ನ ತಂದೆಯ ಸನ್ನಾಹಕ್ಕೆ ತಡೆಯೊಡ್ಡಲು, ನನಗೆ ವಿಷಯವನ್ನೆಲ್ಲ ತಿಳಿಸಿ, ಕೂಡಲೇ ಚಿಂತಾಮಣಿಗೆ ಕಳಿಸಿದರು. ನಾನು ನನ್ನ ತಾಯಿಯ ಪರವಾಗಿ ನಿಂತು, ತಂದೆಯೊಂದಿಗೆ ಜಗಳವಾಡಿ, ಅವರ ಪ್ರಯತ್ನ ನಿಲ್ಲಿಸಿದೆ. ಅಂದಿನಿಂದ ನನ್ನ ತಾಯಿಗೆ ನನ್ನ ಬಗ್ಗೆ ವಿಶೇಷ ಅಭಿಮಾನ. 'ಮಗ ದೊಡ್ಡವನಾದ. ನಾನಿನ್ನು ಅಸಹಾಯಕಳಲ್ಲ' ಎಂಬ ನಿರಾಳತೆ.
ಹಾಗೆಂದು ನನ್ನ ತಂದೆ ಖಂಡಿತ ಕೆಟ್ಟವರಲ್ಲ. ನನ್ನ ತಾಯಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಒಬ್ಬಂಟಿಯಾಗಿ ಹಗಲೂರಾತ್ರಿ ಸ್ಟುಡಿಯೋದಲ್ಲಿ ದುಡಿದು, ತಮ್ಮ ಒಂಬತ್ತೂ ಮಕ್ಕಳನ್ನು ಅಕ್ಕರೆಯಿಂದ ಸಾಕಿ ಸಲುಹಿ ವಿದ್ಯಾವಂತರನ್ನಾಗಿ ಮಾಡಿದರು. ಸಾಕಷ್ಟು ಆಸ್ತಿಯನ್ನೂ ಗಳಿಸಿದರು. ಆದರೆ, ಅದೇಕೋ ಮೊದಲಿನಿಂದಲೂ ಅವರಿಗೂ ನನಗೂ ಎಣ್ಣೆಸೀಗೇಕಾಯಿ. ಅವರು ಏತಿ ಅಂದರೆ ನಾನು ಪ್ರೇತಿ. ನಾನು ಬೆಂಗಳೂರಲ್ಲಿ ಬಿಎ ಮುಗಿಸಿ, ಎಂಎ ಮಾಡಲು ನಿರ್ಧರಿಸಿದಾಗ, ಅವರು ಸುತರಾಂ ಒಪ್ಪಲಿಲ್ಲ. ಚಿಂತಾಮಣಿಯಲ್ಲೇ ನಿಂತು, ಸಂಸಾರ ನಿರ್ವಹಣೆಯಲ್ಲಿ ತನ್ನೊಂದಿಗೆ ಕೈಜೋಡಿಸಲು ಹೇಳಿದರು. ನಾನು ಹಠ ಹಿಡಿದು ಕೂತಾಗ, 'ಹಾಗಾದರೆ ನೀನುಂಟು, ನಿನ್ನ ಎಂಎ ಉಂಟು. ನನ್ನಿಂದ ಚಿಕ್ಕಾಸನ್ನೂ ನಿರೀಕ್ಷಿಸಬೇಡ, ಹೋಗು' ಎಂದರು. ನಾನು 'ಎಂಎ ಮಾಡಿಯೇ ಸಿದ್ಧ' ಎಂದು, ಮನೆ ಬಿಟ್ಟು ಬೆಂಗಳೂರಿಗೆ ಹೋಗಲು, ಸೂಟ್‌ಕೇಸಿನೊಂದಿಗೆ ಅನುವಾದೆ. ತಂಗಿಯರು ಹಿತ್ತಲಲ್ಲಿ ಕೂತು ಕಣ್ಣೀರುಗರೆಯುತ್ತಿದ್ದರು. ತಂದೆ ಸೆಟೆದುಕೊಂಡು ನಿಂತಿದ್ದರು. ತಾಯಿ ಏನೊಂದೂ ಹೇಳದೆ ಮೌನವಾಗಿದ್ದಳು. ನನ್ನನ್ನು ತಡೆಯುವ ಗೋಜಿಗೂ ಹೋಗಲಿಲ್ಲ. ನಾನು ಮೊಣಕಾಲೂರಿ, ಆಕೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿ, ತಲೆಯೆತ್ತಿ ಒಮ್ಮೆ ಅವಳ ಕಂಗಳಲ್ಲಿ ಕಣ್ಣಿಟ್ಟು ನೋಡಿದೆ. ಅಲ್ಲಿ ವಾತ್ಸಲ್ಯ, ವಿಷಾದದ ಜೊತೆಗೆ ಮತ್ತೆ ಆ ಹಿಂದಿನ ಅಸಹಾಯಕತೆ ನನಗೆ ಕಂಡಿತು. ತಕ್ಷಣ ಕರಗಿಹೋದೆ. ಹಠ ಕೈಬಿಟ್ಟೆ. ಚಿಂತಾಮಣಿಯಲ್ಲೇ ಉಳಿದೆ. ಅದಕ್ಕಾಗಿ ಪಶ್ಚಾತ್ತಾಪ ಪಡಬೇಕಾದ ಪ್ರಮೇಯ ಮುಂದೆಂದೂ ಬರಲಿಲ್ಲ ಎಂಬುದಂತೂ ನಿಜ.
ಆ ನಂತರದ ಕೆಲವು ವರ್ಷಗಳು ನನ್ನ ತಾಯಿ ತುಂಬಾ ಸಂತೋಷದಿಂದ, ಸಂತೃಪ್ತಿಯಿಂದ ಇದ್ದ ಕಾಲ. ನನ್ನ ಮತ್ತು ನನ್ನ ಮೂವರು ತಂಗಿಯರ, ಮೂವರು ತಮ್ಮಂದಿರ ಮದುವೆಗಳಾದವು. ತಾನು ಸಾಕಷ್ಟು 'ಅತ್ತೆಯ ಕಾಟ' ಅನುಭವಿಸಿ, ಹೈರಾಣಾಗಿದ್ದ ಆಕೆ ತನ್ನ ಸೊಸೆಯರಿಗೆ ಅತ್ತೆಯಾಗಲಿಲ್ಲ. ಅವರೆಲ್ಲ ತಮ್ಮ ಅತ್ತೆಯನ್ನು 'ಅಮ್ಮ' ಎಂದೇ ಕರೆಯುತ್ತಿದ್ದರು. ಆಕೆಯೂ ಹಾಗೇ ನಡೆದುಕೊಂಡಳು. ಪ್ರತಿ ವರ್ಷ ಆಕೆಯನ್ನು ನಮ್ಮೊಂದಿಗೆ ಅನೇಕ ಸ್ಥಳಗಳಿಗೆ ಪ್ರವಾಸ ಕರೆದೊಯ್ದೆವು. ಮೊಮ್ಮಕ್ಕಳ ಒಡನಾಟದ ಸುಖ ಸವಿದಳು. ಮನೆಗೆ ಯಥೇಚ್ಛವಾಗಿ ಬಂದುಹೋಗುತ್ತಿದ್ದ ನನ್ನ ಸಾಹಿತಿ, ಕಲಾವಿದ ಮಿತ್ರರನ್ನೂ, ಗಣ್ಯರನ್ನೂ ಆದರದಿಂದ ಸತ್ಕರಿಸಿದಳು. ಮಕ್ಕಳ ಅಭ್ಯುದಯ ಕಂಡು ಸಂಭ್ರಮಿಸಿದಳು. ಹೀಗಿರುವಲ್ಲಿ ಒಂದು ಅನಿರೀಕ್ಷಿತ ಆಘಾತ ನಮ್ಮ ಕುಟುಂಬಕ್ಕೆ ಬಂದೆರಗಿತು.
ನನ್ನ ಕೊನೆಯ ತಂಗಿ ಉಷಾ ತಾನು ಚಿಂತಾಮಣಿಯ ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ ಒಬ್ಬ ಮುಸ್ಲಿಂ ಯುವಕನನ್ನು ಪ್ರೀತಿಸಿದಳು. ಅವನ ಹೆಸರು ಸಿರಾಜ್. ಅವನು ನನಗೂ ವಿದ್ಯಾರ್ಥಿಯಾಗಿದ್ದವನೇ. ತುಂಬ ಒಳ್ಳೆಯ ಹುಡುಗ. ಇವರಿಬ್ಬರ ಪ್ರೇಮ ಪ್ರಕರಣ ಹೆಚ್ಚುಕಾಲ ಗುಟ್ಟಾಗಿ ಉಳಿಯಲಿಲ್ಲ.
ನಮ್ಮ ತಂದೆಗೆ ತಮ್ಮ ಬ್ರಾಹ್ಮಣ ಜಾತಿ, ಮನೆತನದ ಬಗ್ಗೆ ಅಪಾರ ಅಭಿಮಾನವಿತ್ತು. ತಮ್ಮ ಮಗಳ ಈ ಧರ್ಮಬಾಹಿರ ಕೃತ್ಯದ ಬಗ್ಗೆ ಅವರು ಸಹಜವಾಗಿಯೇ ಸಿಡಿದೆದ್ದರು. ಅದನ್ನು ಕುಡಿಯಲ್ಲಿಯೇ ಚಿವುಟಿಹಾಕಲು ಶಕ್ತಿ ಮೀರಿ ಪ್ರಯತ್ನಿಸಿದರು. ನಾನಾದರೋ ನನ್ನ ಕಾಲೇಜಿನ ದಿನಗಳಲ್ಲೇ ಜಾತಿ ಜನಿವಾರ ಬಿಟ್ಟವನಾದ್ದರಿಂದ ತಂಗಿಯ ಪ್ರೇಮ ಪ್ರಕರಣದ ಬಗ್ಗೆ ಸಹಾನುಭೂತಿ ಉಳ್ಳವನಾಗಿದ್ದೆ. ಆದರೆ ಅವರ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದೆ. ತಂಗಿಗೆ ಹಾಗೂ ಸಿರಾಜಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಿ, ನೌಕರಿ ಹಿಡಿದು, ಸ್ವಾವಲಂಬಿಗಳಾಗಿ, ನಂತರ ಮದುವೆಯಾಗಲು ಸೂಚಿಸಿದ್ದೆ. ಆದರೆ ನಮ್ಮ ತಂದೆಯ ಒತ್ತಾಯವೇ ಕಾರಣವಾಗಿ ತಂಗಿಯ ಮದುವೆ ಒಬ್ಬ ಬ್ರಾಹ್ಮಣ ವರನೊಂದಿಗೆ ನಿಷ್ಕರ್ಷೆಯಾಯಿತು. ತಂಗಿಯೂ ನಿರ್ವಾಹವಿಲ್ಲದೆ ಒಪ್ಪಿಕೊಂಡಳು. ಆದರೆ ಮದುವೆಗೆ ಕೆಲವೇ ದಿನಗಳ ಮೊದಲು ಅವಳು ಸಿರಾಜನೊಂದಿಗೆ ಗುಟ್ಟಾಗಿ ಪರಾರಿಯಾದಳು.
ತಂದೆಯಂತೂ ಕೆಂಡಾಮಂಡಲವಾದರು. 'ನಮ್ಮ ಮನೆತನಕ್ಕೆ ಕಳಂಕ ತಂದವಳು ಇನ್ನು ಮುಂದೆ ನನ್ನ ಮಗಳಲ್ಲ. ಇಂದಿಗೆ ನನ್ನ ಅವಳ ಋಣಾನುಬಂಧ ಹರಿಯಿತು' ಎಂದು ಕೈತೊಳೆದುಕೊಂಡರು. ತಾಯಿ ಮೌನವಾಗಿ ಕಣ್ಣೀರಿಟ್ಟಳು.
ಸಿರಾಜನ ಅಣ್ಣಂದಿರು ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿಗಳಾಗಿದ್ದವರು. ಅವರು, 'ನಿನ್ನ ತಂಗಿ ಬೇರೆಯಲ್ಲ, ನಮ್ಮ ತಂಗಿಯರು ಬೇರೆಯಲ್ಲ. ನಾವು ಅವಳಿಗೆ ಆಸರೆ ಆಗ್ತೇವೆ. ಚಿಂತೆ ಬೇಡ' ಎಂದು ನನ್ನನ್ನು, ನಮ್ಮ ಕುಟುಂಬದ ಎಲ್ಲರನ್ನೂ ಸಂತೈಸಿದರು. ಸಿರಾಜನಿಗೆ ಚಿಕ್ಕಬಳ್ಳಾಪುರದಲ್ಲಿ ಒಂದು ಆಟೋಮೊಬೈಲ್ ಸ್ಪೇರ್‌ಪಾರ್ಟ್ಸ್ ಅಂಗಡಿ ಹಾಕಿಕೊಟ್ಟರು. ನವದಂಪತಿ ನೆಮ್ಮದಿಯಿಂದ ಸಂಸಾರ ಸಾಗಿಸತೊಡಗಿದರು.
ನಮ್ಮ ತಂದೆಗೆ ಮನೆತನದ ಘನತೆ ಗೌರವಗಳಷ್ಟೇ ಮುಖ್ಯವಾಗಿದ್ದವು. ಆದರೆ ತಾಯಿಗೆ ಹಾಗಿರಲಿಲ್ಲ. ಆಕೆಗೆ ಜಾತಿ, ಧರ್ಮ ಮೀರಿ, ತನ್ನ ಮಗಳು, ತನ್ನ ಕರುಳಬಳ್ಳಿ ಸಂಬಂಧ ಮುಖ್ಯವಾಗಿದ್ದವು. ಆದ್ದರಿಂದ ಆಕೆ ತನ್ನ ಮಗಳನ್ನು ಎಂದೂ ಬಿಟ್ಟುಕೊಡಲಿಲ್ಲ. ನಮ್ಮ ತಂದೆ ಊರಲ್ಲಿಲ್ಲದಿದ್ದಾಗ ತಾನು ಗುಟ್ಟಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ, ಮಗಳೊಂದಿಗೆ ಸಂಜೆ ತನಕ ಇದ್ದು, ಅವಳ ಮನೆಯಲ್ಲೇ ಊಟ ಮಾಡಿ ಬರುತ್ತಿದ್ದಳು ಅಥವಾ ಅವಳನ್ನೇ ನಮ್ಮ ಮನೆಗೆ ಬರಲು ಹೇಳಿಕಳಿಸುತ್ತಿದ್ದಳು. ಅವಳನ್ನು ಭೇಟಿಯಾದಾಗಲೆಲ್ಲ ಅವಳಿಗೆ, ಅವಳ ಮಕ್ಕಳಿಗೆ ಏನಾದರೂ ಉಡುಗೊರೆ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ. ನನ್ನ ತಾಯಿಯ ಕೊನೆಯುಸಿರಿರುವ ತನಕ ಈ ಪರಿಪಾಠ ತಪ್ಪಲಿಲ್ಲ. ಆಕೆಯ ಈ ಹೃದಯ ಶ್ರೀಮಂತಿಕೆ ನಮ್ಮ ಮನೆಮಂದಿಗೆಲ್ಲ ಮೇಲ್ಪಂಕ್ತಿಯಾಯಿತು. ಉಷಾಳ ಕುಟುಂಬದೊಂದಿಗೆ ನಮ್ಮ ಸೌಹಾರ್ದಯುತ ಸಂಬಂಧ ನಿರಂತರವಾಗಿ ಮುಂದುವರಿಯಿತು. 1992ರಲ್ಲಿ ಸಂಭವಿಸಿದ ಎರಡು ದಾರುಣ ಘಟನೆಗಳು ನನ್ನ ನೆನಪಿನಿಂದ ಎಂದೂ ಮರೆಯಾಗುವಂಥವಲ್ಲ. ನನ್ನ ಕವಿತೆಯೊಂದರ ಹುಟ್ಟಿಗೂ ಅವು ಕಾರಣವಾದವು.
ಆ ವರ್ಷದ ಗೌರಿ-ಗಣೇಶ ಹಬ್ಬಗಳ ಸಂದರ್ಭ. ಆಗ್ಗೆ ನಮ್ಮದು ಅವಿಭಕ್ತ ಕುಟುಂಬ. ನಾವು ನಾಲ್ಕು ಮಂದಿ ಸೋದರರು ನಮ್ಮ ನಮ್ಮ ಹೆಂಡಿರು ಮಕ್ಕಳೊಂದಿಗೆ, ತಂದೆ ತಾಯಿ ಜೊತೆಗೂಡಿ ದೊಡ್ಡಮನೆಯಲ್ಲಿ ವಾಸವಾಗಿದ್ದೆವು. ಹಬ್ಬಕ್ಕೆಂದು ನಮ್ಮ ಐವರು ಸೋದರಿಯರೂ ತಮ್ಮ ಮಕ್ಕಳೊಂದಿಗೆ ನಮ್ಮಲ್ಲಿಗೆ ಬಂದಿದ್ದರು. ಮನೆ ಗಿಜಿಗುಡುತ್ತಿತ್ತು.
ವಾತ್ಸಲ್ಯಮಯಿಯಾದ ನಮ್ಮ ತಾಯಿಯ ಸಂಭ್ರಮ, ಸಡಗರ ಹೇಳತೀರದು. ಆಕೆಗೆ ಆಗ್ಗೆ ಅರವತ್ತರ ಇಳಿವಯಸ್ಸು. ಜೊತೆಗೆ ಅತಿರಕ್ತದೊತ್ತಡ, ಮಧುಮೇಹಗಳ ಕಾಟ. ಔಷಧೋಪಚಾರದ ಬಗ್ಗೆಯಂತೂ ನಾವು ಎಷ್ಟು ಎಚ್ಚರಿಸಿದರೂ ಆಕೆಗೆ ಮೊದಲಿನಿಂದಲೂ ಉಪೇಕ್ಷೆ. ಹೀಗಾಗಿ ತೀರಾ ನಿತ್ರಾಣಳಾಗಿದ್ದಳು. ಆದರೂ ತುಂಬಿದ ಮನೆಯ ಆ ಹಬ್ಬದ ವಾತಾವರಣ ಆಕೆಯ ದೈಹಿಕ ಬಳಲಿಕೆಯನ್ನು ಮರೆಸಿ, ಅವಳಲ್ಲಿ ಹೊಸ ಚೈತನ್ಯ, ಲವಲವಿಕೆ ತುಂಬಿತ್ತು.
ಅಂದು ಬೆಳಗ್ಗೆ ತನ್ನ ಹೆಣ್ಣುಮಕ್ಕಳು ಹಾಗೂ ಸೊಸೆಯರೊಂದಿಗೆ ಕೂಡಿಕೊಂಡು ನನ್ನ ತಾಯಿ ಅಡುಗೆಮನೆಯಲ್ಲಿ ಹಬ್ಬದೂಟದ ತಯಾರಿಯಲ್ಲಿ ತೊಡಗಿದ್ದವಳು ಹಠಾತ್ತನೆ ಬವಳಿ ಬಂದಂತಾಗಿ ತೂರಾಡಿ ಕುಸಿದುಬಿದ್ದಳಂತೆ. ಗಾಬರಿಗೊಂಡ ಹೆಂಗಸರು ಕೂಗಿಕೊಂಡರು. ಮನೆಯಲ್ಲೇ ಇದ್ದ ನನ್ನ ತಂದೆ ಮತ್ತು ನಾನು ಅಡುಗೆಮನೆಗೆ ಓಡಿದೆವು. ಶೈತ್ಯೋಪಚಾರವಾಯಿತು. ಆಕೆ ಕಣ್ಣುಬಿಟ್ಟಳು. ನಾವು ಸಮಾಧಾನದ ನಿಟ್ಟುಸಿರುಬಿಟ್ಟೆವು. ಆದರೆ ಆಕೆಯ ಮುಖ ವಿಕಾರವಾಗಿ ಎಡಗಡೆಗೆ ತಿರುಚಿಕೊಂಡಿತ್ತು. ದೇಹದ ಎಡಭಾಗ ಪೂರ್ತಿ ನಿಶ್ಚೇಷ್ಟಿತವಾಗಿತ್ತು. ಹೊತ್ತುತಂದು ಹಜಾರದಲ್ಲಿ ಫ್ಯಾನಿನ ಕೆಳಗೆ ಮಲಗಿಸಿದೆವು. ಅಷ್ಟರಲ್ಲಿ ಮಿಕ್ಕ ತಮ್ಮಂದಿರೂ ಧಾವಿಸಿ ಬಂದರು. ವೈದ್ಯರಿಗೆ ಕರೆ ಹೋಯಿತು. ಆತ ಪರೀಕ್ಷಿಸಿ, 'ಪಾರ್ಶ್ವವಾಯು ಆಗಿದೆ, ಕೂಡಲೇ ಬೆಂಗಳೂರಿಗೆ ಕರೆದೊಯ್ದರೆ ಒಳ್ಳೆಯದು' ಎಂದರು. ತಮ್ಮನ ಕಾರಿನ ಹಿಂಬದಿಯ ಸೀಟಿನಲ್ಲಿ ಆಕೆಯನ್ನು ಮಲಗಿಸಿಕೊಂಡು ಬೆಂಗಳೂರಿನ ಒಂದು ಖಾಸಗಿ ಆಸ್ಪತ್ರೆಗೆ ಒಯ್ದೆವು. ಸಿಟಿ ಸ್ಕ್ಯಾನ್ ಆಯಿತು. ಮೆದುಳಲ್ಲಿ ರಕ್ತಸ್ರಾವ ಆಗಿಲ್ಲ, ಜೀವಕ್ಕೆ ಭಯವಿಲ್ಲವೆಂದು ತಿಳಿದು ನೆಮ್ಮದಿಯಾಯಿತು. ಒಂದು ವಾರದಲ್ಲಿ ರಕ್ತದೊತ್ತಡ, ಮಧುಮೇಹ ತಹಬಂದಿಗೆ ಬಂದವು. ಇನ್ನು ತನ್ನ ದೇಹದ ಮೇಲೆ ಸ್ವಾಧೀನ ಗಳಿಸಲು ಆಕೆಗೆ ದೈಹಿಕ ವ್ಯಾಯಾಮವೊಂದೇ ಮದ್ದು ಎಂದು ವೈದ್ಯರು ತಿಳಿಸಿದರು. ಆಕೆಯನ್ನು ಮತ್ತೆ ಮನೆಗೆ ಕರೆತಂದೆವು.
ಅಲ್ಲಿಂದ ಪ್ರತಿದಿನ ನಾನು ಅಮ್ಮನಿಗೆ ಬೆಳಗ್ಗೆ ಮತ್ತು ಸಂಜೆ ಕಸರತ್ತು ಮಾಡಿಸಲು ಶುರುಮಾಡಿದೆ. ಈಗ ಅವರು ಮತ್ತೆ ಮಗುವಿನ ಅಸಹಾಯಕ ಸ್ಥಿತಿಗೆ ಹಿಂತಿರುಗಿದ್ದರು. ಪ್ರತಿಯೊಂದನ್ನೂ ಅವರು ಮೊದಲಿನಿಂದ ಕಲಿಯಬೇಕಾಗಿತ್ತು. ಹೀಗೆ ಸುಮಾರು ಆರು ತಿಂಗಳ ನನ್ನ ನಿರಂತರ ಪ್ರಯತ್ನದ ಫಲವಾಗಿ ಅಮ್ಮ ತಾನೇ ಸ್ವತಂತ್ರವಾಗಿ ಕೋಲೂರಿಕೊಂಡು ಮನೆಯಲ್ಲಿ ನಡೆದಾಡುವಂತಾದಳು. ತಾನೂ ಗೆಲುವಾಗಿ, ನಮಗೂ ನಲಿವು ತಂದಳು. ನನ್ನಲ್ಲಿ ಧನ್ಯತಾಭಾವ ಮೂಡಿಸಿದಳು.
ಅದೇ ವರ್ಷ ಡಿಸೆಂಬರ್ 6ರಂದು ಸಂಭವಿಸಿದ, ಇಡೀ ರಾಷ್ಟ್ರಕ್ಕೇ ಆಘಾತವುಂಟು ಮಾಡಿದ ದುರ್ಘಟನೆ ಸರ್ವವಿದಿತ. ಅಂದು ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಮತಾಂಧ ಮಂದಿಯಿಂದ ನೆಲಸಮವಾಯಿತು. ಅನಂತರ ಭುಗಿಲೆದ್ದ ಕೋಮು ದಳ್ಳುರಿಗೆ ಸಹಸ್ರಾರು ಅಮಾಯಕ, ಅಸಹಾಯಕ ಜನ ಬಲಿಯಾದರು. ವಿಶ್ವದ ಕಣ್ಣಲ್ಲಿ ಭಾರತ ಕಳಂಕಿತವಾಯಿತು. ಇದು ಭಾರತಮಾತೆಗೇ ಬಡಿದ ಪಾರ್ಶ್ವವಾಯುವೆಂದು ನನಗನ್ನಿಸಿತು. ಭಾರತಮಾತೆ ಕುಸಿದು ಬಿದ್ದಿದ್ದಳು. ಮತ್ತೆ ಅವಳಲ್ಲಿ ಪುನಃಚೇತನ ಮೂಡಿಸಿ, ಕ್ರಮೇಣ ಅವಳು ಎದ್ದು ನಿಲ್ಲುವಂತೆ, ಕಡೇಪಕ್ಷ ಕೋಲೂರಿಕೊಂಡಾದರೂ ನಡೆಯುವಂತೆ ಮಾಡಲು, ಆಕೆಯ ವಿವೇಕವಂತ ಮಕ್ಕಳು ಆಕೆಯ ಆರೈಕೆಗೆ ದೃಢ ಸಂಕಲ್ಪ ಮಾಡಬೇಕು, ಅವಳಲ್ಲಿ ಭರವಸೆ, ಆಶಾವಾದ ತುಂಬಬೇಕು ಎಂದು ನನಗನ್ನಿಸಿತು. ಆಗ ನಾನು ನನ್ನ ಸ್ವಂತ ತಾಯಿ ಮತ್ತು ಭಾರತಮಾತೆ- ಈ ಇಬ್ಬರನ್ನೂ ಒಟ್ಟಿಗೆ ಉದ್ದೇಶಿಸಿ 'ಅಮ್ಮನಿಗೆ' ಎಂಬ ಕವಿತೆ ಬರೆದೆ.
ತಾಯಿಯ ಆರೋಗ್ಯದಲ್ಲಾದ ಈ ಸುಧಾರಣೆ ಹೆಚ್ಚು ಕಾಲ ಉಳಿಯಲಿಲ್ಲ. ಅದು ಕುಂದುತ್ತಾ ಹೋಗಿ, ಕೊನೆಗೆ ಆಕೆ ಸಂಪೂರ್ಣ ಹಾಸಿಗೆ ಹಿಡಿದಳು. ಆಗ ನಮ್ಮ ತಂದೆ ಆಕೆಯ ಪೂರ್ಣಾವಧಿ ಆರೈಕೆಗೆ ನಿಂತರು. ತಮ್ಮ ಅಪರಾಧೀಭಾವದಿಂದ ಬಿಡುಗಡೆಗಾಗಿಯೋ ಎಂಬಂತೆ ಆಕೆಯ ಮಲಮೂತ್ರಾದಿಗಳನ್ನು ತಾವೇ ತೊಳೆದರು. ಒಂದು ರಾತ್ರಿ ಮಲಗಿದ ನಮ್ಮ ತಂದೆ ಮರುದಿನ ಬೆಳಗ್ಗೆ ಏಳಲಿಲ್ಲ. ಯಾವುದೇ ನರಳಾಟವಿಲ್ಲದೆ, ನಿದ್ದೆಯಲ್ಲೇ ಕೊನೆಯುಸಿರೆಳೆದು ಅನಾಯಾಸ ಮರಣ ಪಡೆದರು. ನಂತರದಲ್ಲಿ ಮನೆಯ ಸೊಸೆಯರು ಸರದಿಯಲ್ಲಿ ತಮ್ಮ 'ಅಮ್ಮ'ನನ್ನು ಶ್ರದ್ಧೆಯಿಂದ ನೋಡಿಕೊಂಡರು. ಆದರೆ ಆಕೆಯ ಕೊನೆಗಾಲ ಅತ್ಯಂತ ಯಾತನಾಮಯವಾಗಿತ್ತು. ಮಲಗೀ ಮಲಗೀ ಬೆನ್ನೆಲ್ಲ ಹುಣ್ಣಾದವು. 'ಹಾಳಾದ ಸಾವು ತಾನಾಗಿ ನನಗೆ ಬರುವುದು ಇನ್ನೂ ಯಾವಾಗಲೋ ಏನೋ! ಈ ನೋವನ್ನು ನಾನಿನ್ನು ತಾಳಲಾರೆ... ನಿನಗೆ ಕೈ ಮುಗೀತೀನಿ... ಒಂದಿಷ್ಟು ವಿಷವನ್ನಾದರೂ ಕೊಟ್ಟು ನನ್ನನ್ನು ಪಾರುಮಾಡು' ಎಂದು ಒಂದು ದಿನ ನನ್ನನ್ನು ಹತಾಶಳಾಗಿ, ದೀನಳಾಗಿ ಆಕೆ ಬೇಡಿಕೊಂಡಳು. ನಾನು ತಲ್ಲಣಿಸಿಹೋದೆ. ಆಗ ನಾನು ಬರೆದ ಕವಿತೆ, 'ದಾರುಣ'. ಕೊನೆಗೊಮ್ಮೆ ಆಕೆ ಕೊನೆಯುಸಿರೆಳೆದಾಗ ಮನೆಮಂದಿಯೆಲ್ಲ ನೆಮ್ಮದಿಯ ನಿಟ್ಟುಸಿರಿಟ್ಟದ್ದು ನಿಜ. ಹಾಗೆಯೇ ನಾನು ದೊಡ್ಡವನಾದ ಮೇಲೆ ಮೊದಲ ಬಾರಿಗೆ ಅಂದು ಬಹಿರಂಗವಾಗಿ ಬಿಕ್ಕಿಬಿಕ್ಕಿ ಅತ್ತಿದ್ದೂ ನಿಜ.
ಇನ್ನು ಹೆಚ್ಚಿಗೆ ಏನು ಹೇಳಿದರೂ
ಆದೀತು ಆಕೆಗೆ ಮುಜುಗರ:
'ಅಮ್ಮ, ನಿನಗೆ ನಮ್ಮೆಲ್ಲರ
ನಿತ್ಯ ನಮಸ್ಕಾರ'


******************

ಅಮ್ಮ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು;
ಮಿಡುಕಾಡುತಿರುವೆ ನಾನು.
ಕಡಿಯಲೊಲ್ಲೆ ನೀ ಕರುಳಬಳ್ಳಿ,
ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ.

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ?
ದೂಡು ಹೊರಗೆ ನನ್ನ;
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ,
ಬ್ರಹ್ಮಾಂಡವನ್ನೇ ಬೆದಕಿ,
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತಪ್ರೇಮದೆಡೆಗೆ.





ಅಮ್ಮನಿಗೆ
ಅಮ್ಮ, ಹತಾಶಳಾಗಬೇಡ
ಕಣ್ಣೀರಿಡಬೇಡ ಹೀಗೆ ಸುಮ್ಮನೆ
ಒಂದೇ ಸಮನೆ.
ನಂಬು,
ಇನ್ನೆಂದಿಗೂ ಸರಿಹೋಗದ
ಊನವೇನಲ್ಲ
ಈ ಪಾರ್ಶ್ವವಾಯು.
 
ಹೇಳಿದರೆ ಕೇಳಿದೆಯ?
ಉಪೇಕ್ಷೆ ಮಾಡಿದೆ
ವಂಶಪಾರಂಪರ್ಯದಿಂದ
ನಿನಗೆ ಉಡುಗೊರೆಯಾಗಿ ಬಂದ
ಅತಿರಕ್ತದೊತ್ತಡ, ಮಧುಮೇಹವನ್ನ.
 
ಹೇಗೆ ಬಡಿಯಿತು ನೋಡು
ಹಠಾತ್ತನೆ
ಈ ಬನ್ನ!
ಹಿಡಿಸಿ ಹಾಸಿಗೆ ಹೀಗೆ
ದೇಹದ ಎಡಭಾಗವಿಡೀ
ಕುಸಿದುಹೋಗಿ,
ಮುಖ ಸೊಟ್ಟಗಾಗಿ.
 
ತಜ್ಞ ವೈದ್ಯರ ಪ್ರಕಾರ
ಇದಕ್ಕೆ ಪರಿಹಾರ
ದೃಢ ಸಂಕಲ್ಪ, ಸಮಚಿತ್ತ ಮತ್ತು
ಕಸರತ್ತು.

ಆದ್ದರಿಂದ, ಅಮ್ಮ, ಮತ್ತೊಮ್ಮೆ
ನೀ ಮಗುವಾಗಿ
ಎಲ್ಲ ಮೊದಲಿಂದ ಕಲಿಯಬೇಕು
ಹೊಸದಾಗಿ.
 
ಎಲ್ಲಿ, ಹೀಗೆ ಮೆಲ್ಲಗೆ
ಎದ್ದು ಕೂರು,
ಎಡಗೈ ಮೇಲೆತ್ತಲು ಯತ್ನಿಸು,
ಆದಷ್ಟು ಮಡಿಸು, ಕೆಳಕ್ಕಿಳಿಸು,
ಮುಷ್ಟಿ ಬಿಗಿ ಹಿಡಿ, ಸಡಿಲಿಸು,
ನನ್ನ ಕೈ ಕುಲುಕು.
 
ನಿಧಾನ
ಎದ್ದುನಿಲ್ಲು, ಹಾ... ಸಾವರಿಸಿಕೊ,
ಬಲಗೈಯಿಂದ ನನ್ನ
ಹೆಗಲ ಬಳಸು.
 
ಈಗ
ಎಡಗಾಲೂರಿ
ಒಂದೊಂದೇ ಹೆಜ್ಜೆಯಿಡು
ಮುಂದೆ.
 
ನೋಡಿದೆಯಾ ಮತ್ತೆ!
ಹೀಗೇ ಎಲ್ಲ
ಸರಿಹೋಗುತ್ತೆ
ಕ್ರಮೇಣ
ಎಲ್ಲಿ, ಒಮ್ಮೆ ಎಂದಿನಂತೆ
ನಕ್ಕುಬಿಡು
ನೋಡೋಣ.

******************

ದಾರುಣ

ಹಠಾತ್ತಾಗಿ
ಬರಸಿಡಿಲಿನಂತೆರಗಿದ
ಪಾರ್ಶ್ವವಾಯುವಿಗೆ
ತುತ್ತಾಗಿ
ಮುರಿದು ನೆಲಕ್ಕುರುಳಿದ
ತೆಂಗಿನಮರ
ನನ್ನಮ್ಮ.
 
ಬಿದ್ದಲ್ಲೇ ವರ್ಷಾನುಗಟ್ಟಲೆ
ಹಾಸಿಗೆ ಹಿಡಿದು
ಬಿದ್ದಿರುವ
ಜೀವಂತ ಕೊರಡು
ನನ್ನಮ್ಮ.
 
ಮೈಯೆಲ್ಲ ಬಿರಿದು ಹುಣ್ಣಾದರೂ
ವಿಲವಿಲ ನರಳಿ ಸಣ್ಣಾದರೂ
ತೊಟ್ಟು ಕಳಚಿ
ಮಣ್ಣಿಗುರುಳಲಾರದ
ಒಣಗಿ ಮುರುಟಿದ ಹಣ್ಣು
ನನ್ನಮ್ಮ.
 
ಕಾದು ಕಾದು ಸೋತು
ಕೊನೆಗೆ
ಪಿಸುಗುಟ್ಟಿದಳು
ಅಸಹಾಯಕ
ನನ್ನ ಕಿವಿಯಲ್ಲಿ;
'ಮಗೂ, ಬರಲಾರದು ನನಗೆ
ಸಹಜ ಸಾವು
ಬಹುಶಃ;
ದಮ್ಮಯ್ಯ, ನೀನಾದರೂ
ಪಾರುಗಾಣಿಸು
ಕೊಟ್ಟು
ತೊಟ್ಟು ವಿಷ.
 
ಶಿವ ಶಿವಾ..!

- ಬಿ ಆರ್. ಲಕ್ಷ್ಮಣ್ ರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.