ಸಾಪ್ತಾಹಿಕಪ್ರಭ

ಹುಚ್ಚು ಪ್ರೀತಿ

ಹುಚ್ಚು ಪ್ರೀತಿ
Published On :

ತಡಸ ಸೇತುವೆ ನೀರು ಬಿಟ್ಟಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆಯೇ ಜನರೆಲ್ಲ ಅಲ್ಲಿ ಜಮಾಯಿಸಿದ್ದರು. ಭದ್ರಾ ನದಿಗೆ ಆಣೆಕಟ್ಟು ಕಟ್ಟಿದಾಗ ತಡಸ ಸೇರಿದಂತೆ ಸುತ್ತಮುತ್ತಲಿನ ನೂರಾರು ಹಳ್ಳಿಗಳು ಮುಳುಗಡೆಯಾಗಿದ್ದವು. ಮಲೆನಾಡಿನಲ್ಲಿ ಈ ಹಿಂದೆ ಬಿದ್ದ ಸತತ ಬರಗಾಲದಿಂದ ಭದ್ರಾ ಹಿನ್ನೀರೂ ಒಣಗಿ ಮುಳುಗಡೆಯಾಗಿದ್ದ ಈ ಊರು ತೆರೆದುಕೊಂಡಿತ್ತು.

ನಲ್ವತ್ತು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಇಂಥ ಹಲವು ಹಳ್ಳಿಗಳು ಬರಗಾಲದಿಂದ ಹಿನ್ನೀರು ಒಣಗಿ ಹಳ್ಳಿಗಳು ಕಾಣಿಸಿಕೊಂಡಿದ್ದವು. ಒಂದಷ್ಟು ಹಳೇ ಪೈಕದ ಹಿರಿಯರಿಗೆ ಮುಳುಗಡೆಯಾಗಿದ್ದ ತಮ್ಮೂರು ನೋಡುವ ತವಕ. ನಾವು ಹುಟ್ಟಿದ ಮನೆ, ಕೇರಿ, ಓದಿದ ಶಾಲೆ, ದೇವಸ್ಥಾನ, ಪೂರ್ವಿಕರನ್ನು ಹೂಳಿದ ಸ್ಥಳ, ಜಮೀನು, ಓಡಾಡಿದ ಬೀದಿಗಳನ್ನು ನೋಡುವ ತವಕದಲ್ಲಿ ಅಲ್ಲಿ ಸೇರಿದ್ದರು. ಆ ಊರು, ಆಜುಬಾಜಿನ ಊರಿನವರು, ದೂರದೂರಿಂದ ಬಂದವರೂ ಕೌತುಕದಿಂದ ಎಲ್ಲವನ್ನು ತುಂಬಿಕೊಳ್ಳುತ್ತಿದ್ದರು. ಒಂದೆಡೆ ಹಿನ್ನೀರು, ಮತ್ತೊಂದೆಡೆ ಮುಗಿಲನ್ನು ಮುಟ್ಟುವ ಆತುರದಲ್ಲಿದ್ದ ಸಹ್ಯಾದ್ರಿ ಪರ್ವತ ಶ್ರೇಣಿಯ ಬುಡದಲ್ಲಿ ಈ ಮುಳುಗಡೆಯಾದ ಊರಿತ್ತು.
ಊರ ಹಿರಿಕರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಾವು ಹುಟ್ಟಿದ ಮನೆ, ತೋಟ, ಗದ್ದೆ ಸಾಲನ್ನು ತೋರಿಸುವ ತವಕದಲ್ಲಿದ್ದಾಗ ತಡಸ ಸೇತುವೆ ಮೇಲೆ ಇಳಿ ವಯಸ್ಸಿನ ವ್ಯಕ್ತಿಯೊಬ್ಬ ಬಿಕ್ಕುತ್ತಿದ್ದ! ಅಲ್ಲಿದ್ದ ಕೆಲವರಿಗೆ ಈ ಮುದುಕನನ್ನು ನೋಡಿ ಅಚ್ಚರಿ. ತಡಸ ಸೇತುವೆ ಮೇಲೇ ಮುರಿದು ಬಿದ್ದ ರೇಲ್ವೆ ಹಳಿಗಳ ಮೇಲೆ ಕುಳಿತ ಆ ಇಳಿಸಂಜೆಯ ವೃದ್ಧನ ಕಣ್ಣಲ್ಲಿ ನೀರಾಡುತ್ತಿತ್ತು. ಊರ ಜನ ಸಂಭ್ರಮದಲ್ಲಿದ್ದರೆ ಈ ವೃದ್ಧನ ಹೇಳತೀರದ ನೋವು ಕ್ಷಣಕಾಲ ದಂಗು ಬಡಿಸಿತ್ತು.
ಎಲ್ಲರೂ ಅವನತ್ತ ದೃಷ್ಟಿ ನೆಟ್ಟರು. ಅವನ ಅಳುವಿನ ನರ್ತನ ಮುಂದುವರಿದೇ ಇತ್ತು. ತೀರಾ ಭಾವುಕನಾಗಿ ಕಣ್ಣೀರೊರೆಸುತ್ತಾ ಆತ ಹೇಳಿದ್ದು 40 ವರ್ಷಗಳ ಹಿಂದಿನ ಪ್ರೇಮಕಥೆಯನ್ನು.
ಆತನ ಹೆಸರು ಈಗ ಅಪ್ರಸ್ತುತ. ತಡಸ ಎಂಬ ಊರಿನ ಪಕ್ಕದ ಗ್ರಾಮದವನು ಆತ. ಹಿಂದೆ ಭದ್ರಾವತಿ ಕಾಗದ ಕಾರ್ಖಾನೆಗೆ ತಡಸ ಸುತ್ತಮುತ್ತಲಿನ ಕಾಡಿನ ಉತ್ಪನ್ನಗಳನ್ನೇ ಕಾಗದ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು. ಅಲ್ಲದೇ ಪೇಪರ್ ಮಿಲ್‌ಗೆ ಈ ಸಾಮಗ್ರಿಗಳನ್ನು ಸಾಗಿಸಲು ಅನುಕೂಲವಾಗಲೆಂದೇ ರೈಲಿನ ಸಂಪರ್ಕವನ್ನೂ ಮಾಡಲಾಗಿತ್ತು. ಇದೊಂದು ಕೇವಲ ಸರಕು, ಸರಂಜಾಮಿಗಷ್ಟೆ ಸೀಮಿತವಾಗಿದ್ದ ರೈಲು. ಕಾಡಿನ ಉತ್ಪನ್ನಗಳನ್ನು ಸಾಗಿಸುವ ಕೆಲಸವನ್ನು ಆತ ಮಾಡುತ್ತಿದ್ದ.

ರಟ್ಟೆ ಗಟ್ಟಿಯಾಗಿತ್ತು. ಚೆನ್ನಾಗಿಯೇ ದುಡಿಯುತ್ತಿದ್ದ. ಮೂಲತಃ ಧರ್ಮಸ್ಥಳದ ಮಂಜುನಾಥನ ಒಕ್ಕಲಾಗಿದ್ದ ಈತ ವರ್ಷಕ್ಕೊಮ್ಮೆ ಧರ್ಮಸ್ಥಳಕ್ಕೂ, ಕೊಲ್ಲೂರಿಗೂ, ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಬರುತ್ತಿದ್ದ. ವಾರಕ್ಕೊಮ್ಮೆ ಸಿಗುವ ರಜೆಯ ಮಜಾವನ್ನು ಅನುಭವಿಸುತ್ತಿದ್ದ. ಪೂರ್ವಿಕರಿಂದ ಸಿಕ್ಕ ಪುಡಿಗಾತ್ರದ ಜಮೀನನನ್ನು ಹಸನು ಮಾಡಿಕೊಂಡಿದ್ದ. ಇಂಥ ಹೊತ್ತಲ್ಲೇ ತೋಟದ ಸಾಲಿನ ಪಕ್ಕದಲ್ಲೇ ಇದ್ದ ಒಂಟಿ ಮನೆಯಲ್ಲಿದ್ದ ಹುಡುಗಿಯ  ಪರಿಚಯವಾಯಿತು. ನಿತ್ಯ ಅದೇ ಮಾರ್ಗದಲ್ಲಿ ಓಡಾಡುತ್ತಿದ್ದ ಈತ ಮತ್ತು ಆಕೆಯ ನಡುವೆ ಸದ್ದಿಲ್ಲದೆ ಪ್ರೇಮ ಅರಳಿತು. ಕಣ್ಣ ತುದಿಯಲ್ಲೇ ಮುಗಿಲು ಮುಟ್ಟಲು ಹಾತೊರೆಯುವ ಸಹ್ಯಾದ್ರಿ ನೆತ್ತಿ ಇದ್ದರೂ ಕಾಡ ಬುಡದ ಈ ಹಳ್ಳಿಗಳಲ್ಲಿ ಸಣ್ಣ ವಿಷಯವೂ ಜಗಜಾಹಿರಾಗುತ್ತಿತ್ತು.
ಕಣ್ಣ ನೋಟಕ್ಕೆ ಸೀಮಿತವಾಗಿದ್ದ ಪ್ರೇಮ ಸಣ್ಣದಾಗಿ ಮಾತಿಗೆ ಶುರುವಾಯ್ತು. ನಂತರ ಊರ ಹೊರಗೆ ಭೇಟಿಯಾಗುವಷ್ಟರ ಮಟ್ಟಿಗೆ ಬೆಳೆಯಿತು. ಮೂಲತಃ ಜಮೀನುದಾರ ಕುಟುಂಬದ ಹಿನ್ನೆಲೆ ಹೊಂದಿದ್ದ ಈತನ ಪ್ರೇಯಸಿಗೆ ಕೊಂಚ ಅಳುಕಿತ್ತು.

ಇವಿಷ್ಟೇ ಅಲ್ಲದೇ ಇವರಿಬ್ಬರ ಜಾತಿಯೂ ಬೇರೆ ಬೇರೆ. ಅವನೋ... ಸ್ಥಿತಿವಂತನಲ್ಲ. ಆದರೂ ಚಿಗುರಿದ ಪ್ರೇಮವನ್ನು ಉಳಿಸಿಕೊಳ್ಳುವ ಹಂಬಲ ಇವರಿಬ್ಬರ ನಡುವೆ. ಕಡೆಗೇ ಇಬ್ಬರ ಪ್ರೇಮ ಪ್ರಕರಣ ಜನರಿಂದ ಜನರಿಗೆ ಹಬ್ಬಿ, ಆಕೆಯ ಮನೆಯವರಿಗೂ ಸುದ್ದಿ ಮುಟ್ಟಿತು. ತುಂಡು ಜಮೀನು ಹೊಂದಿ ರೇಲ್ವೆ ಕೆಲಸ ಮಾಡುತ್ತಿದ್ದ ಈತನಿಗೆ ಮಲೆನಾಡಿನ ಆ ಜಮೀನ್ದಾರ ಕುಟುಂಬವನ್ನು ಎದುರಿಸುವುದು ಹೇಗೆಂಬುದೇ ಚಿಂತೆಯಾಯಿತು. ಅವಳನ್ನು ಹೊತ್ತೊಯ್ದು ಊರು ಬಿಡುವ ಯೋಚನೆ ಯಾಕೋ ಇಬ್ಬರಿಗೂ ಭೀತಿ ಹುಟ್ಟಿಸಿತ್ತು. ಅವಳಿಗೋ ಇವನ ಪ್ರೇಮವನ್ನು ಬಿಟ್ಟು ಬದುಕಲಾರೆನು ಎಂಬ ಭಾವ ಕಾಡುತ್ತಿತ್ತು.

ಕಡೆ ಕಡೆಗೆ ಆತನಿಗೆ ರೇಲ್ವೆ ಕೆಲಸಕ್ಕೆ ಹೋಗುವಾಗ ಎಂಥದ್ದೋ ಅವ್ಯಕ್ತ ಭಯ ಕಾಡಲು ಶುರುವಾಯಿತು. ತನ್ನ ಹಿಂದೆ ಅವಳ ಅಪ್ಪನ ಕಡೆಯವರು ನೆರಳಾಗಿ ಬರುತ್ತಿದ್ದಾರೆ ಎಂಬ ಭೀತಿ ಆವರಿಸಿತು. ಅದಕ್ಕೆ ಪೂರಕವೆಂಬಂತೆ ಮನೆ ಮುಂದೆ ಆಕೆ ನಿಲ್ಲದಂತೆ ಜಮೀನುದಾರ ತಂದೆ ತಾಕೀತು ಮಾಡಿದ್ದ. ಮೊದಲೇ ಭೀತಿಯಿಂದ ಅವುಡುಗಚ್ಚಿಕೊಂಡಿದ್ದ ಆತನಿಗೆ ಈಕೆ ಕಣ್ಣ ನೋಟಕ್ಕೂ ಸಿಗುತ್ತಿಲ್ಲವೆಂಬ ವ್ಯಥೆಯಿಂದ ರೇಲ್ವೆ ಕೆಲಸವನ್ನು ಬಿಟ್ಟು ತುಂಡು ಭೂಮಿಯಲ್ಲೇ ಕಾಲ ಕಳೆಯಲು ಶುರುವಿಟ್ಟ.

ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ, ಭೇಟಿಯಿಲ್ಲ. ಮೌನದಲ್ಲೇ ಇಬ್ಬರೂ ಹುದುಗಿ ಹೋದರು. ಜಮೀನುದಾರ ಅಪ್ಪ ಆಕೆಯ ಸಂಬಂಧ ಹುಡುಕಲು ಶುರುವಿಟ್ಟ. ತುಂಡು ಭೂಮಿಯಲ್ಲಿ ಹುದುಗಿ ಹೋಗಿದ್ದ ಈತನಿಗೆ ಅವಳ ಬಗ್ಗೆ ಮನೆವಾರ್ತೆ ಬಂದರೂ ಏನೂ ಮಾಡದಂಥ ಅಸಹಾಯಕತೆ. ಈತನನ್ನು ಮರೆಯಲಾಗದ ಆಕೆ, ಇವನ ಜಮೀನಿನ ಅನತಿ ದೂರದಲ್ಲೇ ಮರಕ್ಕೆ ನೇಣು ಬಿಗಿದು ಸಾವಾದಳು.

ಈಕೆಯ ಸಾವಿನ ಸುದ್ದಿ ಕೇಳಿ ಈತ ಅರೆ ಹುಚ್ಚನಾದ. ಮಗಳ ಸಾವಿಗೆ ಆತನೇ ಕಾರಣವೆಂಬ ಆಕ್ರೋಶ ಜಮೀನುದಾರನಿಗೆ ಇದ್ದರೂ ಅರೆಹುಚ್ಚನ ವಿರುದ್ಧ ಸೇಡು ತೀರಿಸಿಕೊಳ್ಳುವ ಅಗತ್ಯವಿಲ್ಲವೆಂದು ಸುಮ್ಮನಾದರು. ಆಕೆ ನೇಣು ಹಾಕಿಕೊಂಡಿದ್ದ ಜಾಗಕ್ಕೆ ಬಂದು ಇಂವ ನಿತ್ಯ ಅಳುತ್ತಾ ಕೂರುತ್ತಿದ್ದ. ಈ ಮಧ್ಯ ಭದ್ರಾ ನದಿಗೆ ಅಣೆಕಟ್ಟು ಕಟ್ಟಿ ತಡಸ ಸೇರಿದಂತೆ ಅಕ್ಕಪಕ್ಕದ ಊರು, ಈತನ ತುಂಡು ಭೂಮಿ, ಆಕೆ ಸತ್ತ ಜಾಗ ಎಲ್ಲವೂ ಮುಳುಗಡೆಯಾಗಿ ಈತನ ಪ್ರೇಮವೂ ಮುಳುಗಿ ಇತಿಹಾಸ ಪುಟ ಸೇರಿತು.

ಆದರೆ, ಸುಮಾರು 40 ವರ್ಷಗಳ ಬಳಿಕ ಮಲೆನಾಡೆಂಬ ಮಲೆನಾಡಿನಲ್ಲಿ ಬರಗಾಲ ಬಿದ್ದು ಹಿನ್ನೀರೂ ಒಣಗಿ ಮುಳುಗಡೆಯಾಗಿದ್ದ ಆ ಊರು ತೆರೆದುಕೊಂಡಿತ್ತು. ಅರೆ ಹುಚ್ಚನಾಗಿದ್ದ ಆತ ಇನ್ನಷ್ಟು ಹುಚ್ಚನಾಗಿ ಕಾಡು ಮೇಡು ಎಲ್ಲೆಂದರಲ್ಲಿ ಅಲೆಯುತ್ತಿದ್ದ. ಆದರೆ, ತಡ ಸೇತುವೆ ನೀರು ಬಿಟ್ಟದೆ ಎಂಬ ಸುದ್ದಿ ಹುಚ್ಚನಾಗಿದ್ದ ಈತನಿಗೆ ತಿಳಿದಿದ್ದಾರೋ ಹೇಗೆ ಎಂಬುದು ಈಗಲೂ ಯಕ್ಷಪ್ರಶ್ನೆ. ಸತ್ತ ಪ್ರೇಯಸಿಯ ಜಾಗದ ಪಕ್ಕದಲ್ಲೇ ಈತ ಕಣ್ಣೀರಿಡುತ್ತಲೇ ಕೂತುಬಿಟ್ಟ.
ಎಲ್ಲರೂ ಅವರವರ ಮನೆ ಹಾದಿ ಹಿಡಿದರು. ಮಲೆನಾಡಿನಲ್ಲಿ ಮತ್ತೆ ಮಳೆಗಾಲ ಆರಂಭವಾಯ್ತು. ಒಣಗಿ ಹೋಗಿದ್ದ ಜಾಗದಲ್ಲಿ ನೀರು ಮೈ ತುಂಬಿಕೊಂಡಿತ್ತು. ಹೀಗಾಗಿ ತೆರೆದುಕೊಂಡಿದ್ದ ಊರು ಮಳೆ ನೀರಿಗೆ ಮುಳುಗಲು ಶುರುವಾಯ್ತು. ಊರು, ಪೇಟೆಬೀದಿ, ಗುಡಿ, ಸಮಾಧಿ, ರೇಲ್ವೆ ಹಳಿ, ಈತನ ಪ್ರೇಯಸಿ ಸತ್ತ ಜಾಗ ಎಲ್ಲವೂ ಮತ್ತೆ ಮುಳುಗಿ ಹೋಯಿತು. ಈತ ಮಾತ್ರ ಹುಚ್ಚನಾಗಿ, ವಿರಹಿ ಪ್ರೇಮಿಯಾಗಿ ಸಹ್ಯಾದ್ರಿ ಪರ್ವತ ಶ್ರೇಣಿಯ ಸುತ್ತಮುತ್ತ ಅಡ್ಡಾಡುತ್ತಿದ್ದಾನೆ.

- ಉಗಮ ಶ್ರೀನಿವಾಸ್
ugamasrinivas@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.