ಸಾಪ್ತಾಹಿಕಪ್ರಭ

ಓದಿನ ಹಂತಗಳು

ಓದಿನ ಹಂತಗಳು
Published On :

ನಾವು ಯಾಕೆ ಓದುತ್ತೇವೆ? ನಮ್ಮ ಓದುವ ಹವ್ಯಾಸ ವಯಸ್ಸಾದಂತೆ ಹೇಗೆ ಬದಲಾಗುತ್ತದೆ? ಈ ಪ್ರಶ್ನೆಗೆ ಘನವಾದ ಉತ್ತರಗಳನ್ನು ನೀಡಿದವರಿರಬಹುದು. ಆದರೆ ಲಿಂಡಾ ಬ್ಯಾರಿ ಎಂಬ ಹೆಸರಿನ ಕಾರ್ಟೂನಿಸ್ಟ್ ಒಬ್ಬಾಕೆ, ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪುಟ್ಟ ಸರಣಿ ವ್ಯಂಗ್ಯಚಿತ್ರದ ಮೂಲಕ ಇದನ್ನು ಚಿತ್ರಿಸಿದ್ದಾಳೆ. ಆಕೆಯ ಪ್ರಕಾರ ಓದುವಿಕೆಯಲ್ಲಿ 20 ಹಂತಗಳು. ಇವನ್ನು ಚಿತ್ರಗಳ ಮೂಲಕ ನೋಡುವುದೇ ಸೊಗಸು. ಹೀಗೆ ಓದಿಕೊಳ್ಳಲೂಬಹುದು.
1.    ಬಾಲ್ಯದಲ್ಲಿ, ನೋಡುವ ಬಣ್ಣದ ಚಿತ್ರಪುಸ್ತಕ.
2.    ಅಪ್ಪನದೋ ಅಮ್ಮನದೋ ತಲೆ ತಿಂದು ನೂರಾರು ಬಾರಿ ಓದಿ ಹೇಳಿಸಿಕೊಂಡ ಕತೆಪುಸ್ತಕ.
3.    ಗೀಚು ಹಾಕಿ ಬಯ್ಯಿಸಿಕೊಂಡ ಪುಸ್ತಕ.
4.    ಲೈಬ್ರರಿಯಿಂದ ಮೊದಲ ಬಾರಿಗೆ ತಂದ ಪುಸ್ತಕ.
5.    ಲೈಬ್ರರಿಗೆ ಮರಳಿಸಲು ಮನಸ್ಸೇ ಬಾರದ ಪುಸ್ತಕ.
6.    ಇಷ್ಟಪಟ್ಟು ಹುಚ್ಚುಚ್ಚಾಗಿ ಓದಿಸಿಕೊಂಡ ಲೇಖಕನ ಪುಸ್ತಕಗಳು.
7.    ಮುಗಿಸಿದ ಮೊದಲ ಪುಸ್ತಕ ಸರಣಿ.
8.    ಪತ್ತೇದಾರಿ ಪುಸ್ತಕಗಳ ಗೀಳು.
9.    ಪತ್ತೇದಾರಿಗಳು ಎರಡನೇ ದರ್ಜೆ ಎಂಬ ಅಭಿಪ್ರಾಯಕ್ಕೆ ಮನ್ನಣೆ.
10.    'ವಯಸ್ಕರ' ಪುಸ್ತಕಗಳು.
11.    ಅವು ಮೂರನೇ ದರ್ಜೆ ಎಂಬ ಅಭಿಪ್ರಾಯಕ್ಕೆ ಮನ್ನಣೆ.
12.    ಮೊದಲ 'ಪ್ರೌಢ', 'ಕ್ಲಾಸಿಕ್‌' ಗ್ರಂಥ.
13.    ನೀವು ಓದಲೇಬೇಕೆಂದು ಹುಡುಕಿ, ಸಿಗದ ಕೃತಿ.
14.    ತಾನು ಪ್ರೌಢ ಓದುಗ ಎಂದು ತೋರಿಸಿಕೊಳ್ಳಲು ಚೆನ್ನಾಗಿದೆ ಎಂದು ಸುಳ್ಳು ಹೇಳಿದ ಗ್ರಂಥ.
15.    ಓದಿದ ಅನುಭವದ ಸೊಗಸನ್ನು ಕಳೆದುಕೊಳ್ಳಲು ಇಚ್ಛಿಸದೆ, ತಾನು ಓದಿಯೇ ಇಲ್ಲ ಎಂದ ಕೃತಿ.
16.    ಪ್ರಕಾರಗಳಿಗೆ ಮನ್ನಣೆ ಕೊಡದೆ, ಶ್ರೇಷ್ಠ ಕೃತಿಗಳನ್ನು ಮಾತ್ರ ಓದಬೇಕೆಂಬ ಹಠ.
17.    ದಶಕಗಟ್ಟಲೆ ಮುಂದುವರಿದ ಶ್ರೇಷ್ಠತೆಯ ವ್ಯಸನ.
18.    ಯಾರ ಕೈಯಿಂದಲೋ ಹೇಗೋ ಬಂದು ನಿಮ್ಮ ಬಳಿ ಸೇರಿದ ಪತ್ತೇದಾರಿ ಪುಸ್ತಕದ ಅಚಾನಕ್ ಓದು.
19. ಪತ್ತೇದಾರಿಯಲ್ಲಿರುವ ರುಚಿ, ತಾರುಣ್ಯದಲ್ಲಿ ಅದನ್ನು ಓದುವಾಗ ಕೊಡುತ್ತಿದ್ದ ರೋಮಾಂಚನದ ಮರುಕಳಿಕೆ.
20.    ಓದುವಿಕೆಯ ಬಗ್ಗೆ ಯಾವುದೇ ಲಜ್ಜೆ, ಪೂರ್ವಗ್ರಹಗಳಿಲ್ಲದೆ, ತನಗೆ ಸಂತೋಷ ನೀಡುವುದನ್ನು ಆರಿಸಿಕೊಂಡು ಓದುವ ಕೊನೆಯ ಹಂತ.

ಬೆರ್ರಿಗೆ ಪುರಸ್ಕಾರ
'ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಶತಮಾನದಲ್ಲಿ ಹೂಡಿಕೆ ಮಾಡಿ. ಬೀಜ ಬಿತ್ತಿ. ನಿಮ್ಮ ಮುಖ್ಯ ಬೆಳೆ ಅರಣ್ಯವೆಂದು ಹೇಳಿ. ನೀವು ಬಿತ್ತಿ ಬೆಳೆದಿದ್ದಲ್ಲದ, ಕೊಯ್ಯುವ ಕಾಲಕ್ಕೆ ನೀವು ಉಳಿದಿರದ ಅರಣ್ಯ'

'ಜಗತ್ತಿನೆಡೆಗೆ ಹತಾಶೆ ಬೆಳೆದಾಗ, ನನ್ನ ಬದುಕು ಅಥವಾ ನನ್ನ ಮಕ್ಕಳ ಜೀವನ ಏನಾದೀತೆಂಬ ಪ್ರಶ್ನೆ ಎದುರಾದಾಗೆಲ್ಲ ನಾನು ಕಾಡಿನ ನಡುವಿನ ಝರಿಯ ಬಳಿಗೆ ಹೋಗಿ ಅಂಗಾತ ಮಲಗುತ್ತೇನೆ. ವಿಷಾದದ ಆತಂಕಕ್ಕೆ ಜೀವನದ ಕಂದಾಯ ಕಟ್ಟಬೇಕಿಲ್ಲದ ವನ್ಯದ ಶಾಂತತೆ ಅರಿವಿಗೆ ಬರುತ್ತದೆ. ಜಗತ್ತಿನ ಔದಾರ್ಯದಿಂದ ಧನ್ಯನಾಗಿ, ಮುಕ್ತನಾಗುತ್ತೇನೆ.'
ಎಂದೆಲ್ಲ ಬರೆದುಕೊಂಡ ವೆಂಡೆಲ್ ಬೆರ್ರಿ, ಅಮೆರಿಕನ್ ಮೂಲದ ಲೇಖಕ. ಪರಿಸರ, ಶಾಂತಿ, ಯುದ್ಧವಿರೋಧ ಕಾಳಜಿಗಳನ್ನಿಟ್ಟುಕೊಂಡು ಬರೆದ ಈತನಿಗೆ ಈ ವರ್ಷದ 'ಡೇಟನ್ ಶಾಂತಿ ಸಾಹಿತ್ಯ ಜೀವಮಾನದ ಸಾಧನೆ' ಪುರಸ್ಕಾರ ಸಂದಿದೆ.

- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.