ಅವರ ಒಂದೊಂದು ಉಸಿರೂ ಸ್ವರವೇ!

ಹೀಗೆ ಶತಶತಮಾನಗಳಿಂದ ವಿವಿಧ ಕಲಾವಿದರಿಂದ ಬೆಳೆಸಲ್ಪಡುತ್ತ, ಕಲಾವಿದರನ್ನು ಸ್ವತಃ ಬೆಳೆಸುತ್ತ ಈ 'ಘರಾಣೆ'ಗಳು - ಒಂದೊಂದು ಸಂಪ್ರದಾಯಗಳು - ಮಹಾವೃಕ್ಷಗಳಂತೆ ಧೀಮಂತವಾಗಿ ಬೆಳೆದು ನಿಂತಿವೆ. ಗ್ವಾಲಿಯರ್, ಆಗ್ರಾ, ಕಿರಾಣಾ, ಜೈಪುರ್ ಈ ನಾಲ್ಕು ಗಾಯಕರ ಪ್ರಮುಖವಾದ ಘರಾಣೆಗಳ ಜೊತೆ ಪ್ರಸಿದ್ಧವಾದ ಕಲಾವಿದರನ್ನು ಹೊರತಂದ ಇನ್ನೂ ಕೆಲವು ಘರಾಣೆಗಳು ಸಂಗೀತಕ್ಕೆ ಅಪೂರ್ವವಾದ ಕೊಡುಗೆ ನೀಡಿವೆ. ಇಂಥ ಮಹತ್ವದ ಘರಾಣೆಗಳಲ್ಲಿ ಖ್ಯಾತವಾದದ್ದು ಪಟಿಯಾಲಾ ಅಥವಾ ಪಂಜಾಬ್ ಘರಾಣೆ.
ಮೊಘಲ್-ಏ-ಆಜಿಂ ಸಿನೆಮಾದಲ್ಲಿ ಸಲೀಂ - ಅನಾರ್ಕಲಿ ಮೊದಲ ಬಾರಿ ಕದ್ದು ಭೇಟಿಯಾಗುವ ಪ್ರೇಮ-ರಸ ಘಳಿಗೆ...ಸಲೀಂ ಅರಮನೆಯಲ್ಲಿ ಅವಳಿಗಾಗಿ ಕಾಯುತ್ತ ವಿರಹದಲ್ಲಿ ಬೇಯುತ್ತಿರುತ್ತಾನೆ. ಇತ್ತ ಅನಾರ್ಕಲಿ ಎಲ್ಲರ ಕಣ್ಣು ತಪ್ಪಿಸಿ ಕದ್ದು ಸಲೀಮನ ಬಳಿ ಬರುತ್ತಾಳೆ. ಆ ಹೊತ್ತಿನಲ್ಲಿ ಅರಮನೆಯಲ್ಲಿ ದರ್ಬಾರಿನ ಗಾಯಕ ರಿಯಾಜ್ ಮಾಡುತ್ತಿರುತ್ತಾನೆ.
'ಪ್ರೇಮ ಜೋಗನ ಬನ ಕೆ...' ಎಂಬ ಠುಮರಿ...ರಾತ್ರಿಯ ರಾಣಿ ರಾಗ್ ಸೊಹಿನಿಯಲ್ಲಿ ಬಡೆ ಗುಲಾಂ ಅಲಿ ಖಾನರು ಹಾಡಿರುವ ಆ ಹಾಡು, ಅವರ ಕಂಠದಲ್ಲಿನ ಆ ವಿರಹ-ಶೃಂಗಾರ ರಸ, ಸಲೀಂ-ಅನಾರ್ಕಲಿಯ ಆ ಮಿಲನದ ಕ್ಷಣಕ್ಕೆ ಎಂಥ ಪ್ರೇಮರಸವನ್ನು ತುಂಬಿದೆ ಎಂಬುದು ಅದನ್ನು ನೋಡಿದ-ಕೇಳಿದ ಕಲಾರಸಿಕರೇ ಬಲ್ಲರು. ಅದೆಂಥ ಸವಿ! ಅದರಲ್ಲಿ ವಿರಹವೆಂಬ ಆ ವಿಚಿತ್ರ ತುಡಿತ, ಜೊತೆಜೊತೆಗೇ ಪ್ರೇಮರಸ ಧಾರೆಯ ಮಿಳಿತ, ಮಿಲನದ ಆನಂದ, ಮೈಮರೆವ ಆ ಮೋಹಕ ಕ್ಷಣ - ಎಲ್ಲ ಇದೆ ಆ ಗಾಯನದಲ್ಲಿ. ಅವರ ಧ್ವನಿಯೇ ಅಷ್ಟು ಮಧುರ, ಸವಿ. ಸ್ಥೂಲಕಾಯ ಅವರದ್ದು. ಅವರ ಒಂದೊಂದು ಉಸಿರೂ ಸ್ವರವೇ ಎಂಬಷ್ಟು ಸಹಜ ಅವರ ಗಾಯನ. ಈ ಉಸ್ತಾದ್ ಬಡೇ ಗುಲಾಂ ಅಲಿ ಖಾನರ ಘರಾಣೆಯೇ ಪಟಿಯಾಲ ಘರಾಣೆ. ಅವರ ರಾಗ ಬಿಹಾಗ್, ತೋಡಿ. ಆಯೆನಾ ಬಾಲಮ ಕಾ ಕರೂ ಸಜನಿ..ಠುಮರಿ ಸಿ.ಡಿಗಳು ಜೀವಮಾನವಿಡೀ ಕೇಳಿದರೂ ಇನ್ನೂ ಕೇಳುತ್ತಲೇ ಇರಬೇಕೆನ್ನಿಸುವಂತಿವೆ.
ಉಸ್ತಾದ್ ಬಡೇ ಗುಲಾಂ ಅಲೀ ಖಾನರು ಉತ್ತಮ ಸಾರಂಗಿ ವಾದಕರಾಗಿದ್ದರು. ಸಾರಂಗಿ ನುಡಿಸುತ್ತ ನುಡಿಸುತ್ತ ಗಾಯಕರಾಗಿ ಬೆಳೆದವರು. ಇಂದು ವಿಶೇಷವಾಗಿ ಕೋಲ್ಕತ್ತಾ ಹಾಗೂ ಉತ್ತರ ಹಿಂದುಸ್ತಾನದಲ್ಲಿ ಗಾಯಕರು ಹಾಡುವಾಗ ಬಳಸುವ 'ಸ್ವರಮಂಡಲ' ಎಂಬ ವಾದ್ಯವನ್ನು ಬೆಳೆಸಿ, ಅದನ್ನು ಬಳಕೆಗೆ ತಂದು ಜನಪ್ರಿಯತೆ ಗಳಿಸಿಕೊಟ್ಟವರು ಉಸ್ತಾದ ಬಡೇ ಗುಲಾಮರೇ. ಮೂರು ಸಪ್ತಕದಲ್ಲಿ ಆಯಾ ರಾಗಕ್ಕೆ ತಕ್ಕ ಹಾಗೆ ಶ್ರುತಿಗೊಳಿಸಲಾಗುವ ಈ ವಾದ್ಯ, ಮೂರು ಸಪ್ತಕಗಳಲ್ಲಿ ಕಾರಂಜಿಯಂತೆ, ತೈಲ ಧಾರೆಯಂತೆ ಲೀಲಾಜಾಲವಾಗಿ ಹರಿಯುತ್ತಿದ್ದ ಅವರ ಧ್ವನಿಯ ಜೊತೆ ಸೇರಿ ಉಂಟಾಗುತ್ತಿದ್ದ ಆ ವಿಶಿಷ್ಟ 'ಸಿಂಫೊನಿ'ಯ ಆನಂದ ನಿಜಕ್ಕೂ ಅಲೌಕಿಕ.
ಪಟಿಯಾಲಾ ಘರಾಣೆ ಹುಟ್ತಿದ್ದು ತಾನರಸ್ ಖಾನ್ರಿಂದ ಎನ್ನುತ್ತಾರೆ. ಇವರ ಶಿಷ್ಯ ಪರಂಪರೆಯಲ್ಲಿ ಅಲೀ ಬಕ್ಷ ಹಾಗೂ ಫತೇ ಅಲಿ ಎಂಬ ಇಬ್ಬರು ಗಾಯಕರ 'ಯುಗಳ ಗಾಯನ' - 'ಅಲಿಯಾ-ಫತ್ತೂ' ಎಂದೇ ಇಂದಿಗೂ ಪ್ರಸಿದ್ಧ. 'ಪಟಿಯಾಲಾ - ಅಲಿಯಾ ಫತ್ತೂ' ಎಂದೇ ಈ ಘರಾಣೆಯನ್ನು ಪುಸ್ತಕಗಳಲ್ಲೆಲ್ಲ ಉಲ್ಲೇಖಿಸುತ್ತಾರೆ. ಈ ಉಸ್ತಾದ್ ಅಲೀ ಬಕ್ಷರ ಮಗನೇ ಉಸ್ತಾದ್ ಬಡೇ ಗುಲಾಂ ಅಲೀ ಖಾನ್. ಇವರಿಂದ ಪಂಜಾಬ್ ಘರಾಣೆ ಜಗತ್ಪಸಿದ್ಧವಾಯಿತು ಎನ್ನಬಹುದು. ಗಾಯಕರ ಜೊತೆಗೆ ಅನೇಕ ವಾದ್ಯ ಕಲಾವಿದರು ಪಟಿಯಾಲ- ಪಂಜಾಬಬ್ ಘರಾಣೆಗೆ ಸೇರಿದವರಾಗಿದ್ದಾರೆ. ಸಿತಾರ್ ಮಾಂತ್ರಿಕ ಪಂ.ರವಿಶಂಕರ್, ಕೊಳಲಿನ ಗಾರುಡಿಗ ಪಂ.ಹರಿಪ್ರಸಾದ್ ಚೌರಸಿಯಾ, ಸಂತೂರ್ ಮೋಡಿಗಾರ ಪಂ.ಶಿವಕುಮಾರ್ ಶರ್ಮ ಮುಂತಾದ ಅನೇಕ ಖ್ಯಾತನಾಮರ ಹೆಸರು ಈ ಘರಾಣೆಗೆ ಸೇರಿದೆ.
- ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


