ಟೆನಿಸ್ ಲೋಕದ ವಂಡರ್ ಪೇಸ್

ಹುಟ್ಟಿದ್ದು ಗೋವಾದಲ್ಲಿ. ಬೆಳೆದಿದ್ದು ಕೋಲ್ಕತಾದಲ್ಲಿ. ಸ್ವಂತ ಸಾಧನೆಯ ಛಲದಿಂದ ಖ್ಯಾತಿ ಗಳಿಸಿದ್ದು ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಇಂಗ್ಲೆಂಡಿನ ಟೆನಿಸ್ ಕೋರ್ಟ್ಗಳಲ್ಲಿ.
ಇದು ಭಾರತೀಯ ವಿಖ್ಯಾತ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರ ಜೀವನ ಪ್ರಗಾಥ. ಕತೆ ಚಿಕ್ಕದು. ಆದರೆ ಸಾಧನೆ ದೊಡ್ಡದು. ಟೆನಿಸ್ ಕ್ರೀಡೆ ದುರ್ಬಲರಿಗಲ್ಲ. ಕೋರ್ಟ್ನಲ್ಲಿ ನಿಂತಾಗ, ಪ್ರತಿ ಕ್ಷಣವೂ ಕಟ್ಟೆಚ್ಚರದಲ್ಲೇ ಇರಬೇಕು. ಕ್ಷಣಾರ್ಧದಲ್ಲಿ ಕೋರ್ಟಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಿಮ್ಮಬೇಕು. ಅಷ್ಟೇ ಸಾಲದು, ಎದುರಾಳಿ ಕಳಿಸಿದ ಚೆಂಡನ್ನು ಅವರಿಗೆ ಸಿಕ್ಕದ ರೀತಿಯಲ್ಲಿ ಹಿಂದಿರುಗಿಸಬೇಕು.
ಅದೇ ತಂತ್ರವನ್ನೇ ಎದುರಾಳಿ ಬಳಸುವುದೂ ಆಟದ ಒಂದು ಅಂಗ ಮಾತ್ರ. ಎದುರಾಳಿ ಯಾರು ಬೇಕಾದರೂ ಆಗಿರಬಹುದು. ಭಾಷೆ ಗೊತ್ತಿಲ್ಲ. ಯಾವ ದೇಶದವರು ಎನ್ನುವುದೂ ಅಸ್ಪಷ್ಟವೇ. ಜಾಗತಿಕ ಟೆನಿಸ್ ಪಂದ್ಯಾಟಗಳಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಕ್ರೀಡಾಪಟುಗಳು ಬಂದಿರುತ್ತಾರೆ. ಎಲ್ಲರ ಗುರಿಯೂ ಒಂದೇ: ಸಾಧ್ಯವಾದರೆ ಗೆಲ್ಲಬೇಕು. ಸೋತರೂ ಒಳ್ಳೆಯ ರೀತಿಯಲ್ಲೇ ಆಡಿದ ಸಮಾಧಾನವಿರಬೇಕು.
ಇಂಥ ಆಟ ಸಾಮಾನ್ಯರಿಗಲ್ಲ. ದೈಹಿಕ ಶಕ್ತಿ, ಅಸಾಮಾನ್ಯವಾದ ಚಾಕಚಕ್ಯತೆ, ಅಗತ್ಯ ಬಿದ್ದಾಗ 'ಎಗರಾಡುವ' ಚೈತನ್ಯ ಬೇಕು. ಈ ಎಲ್ಲ ಗುಣಗಳೂ ಏರು ಯೌವನ ಇರುವವರೆಗೆ ಮಾತ್ರ ಜಾಗೃತವಾಗಿರುವುದು ನಿಸರ್ಗಧರ್ಮ.
ನಲವತ್ತನೇ ವರ್ಷ ಎಂದರೆ ಕ್ರೀಡಾ ಪ್ರಪಂಚದಲ್ಲಿ ಏರು ಯೌವನವೇನೂ ಅಲ್ಲ. ದೈಹಿಕ ಶಕ್ತಿ ಇಳಿಮುಖ ಯಾತ್ರೆಯನ್ನು ಆರಂಭಿಸುವ ಪರ್ವಕಾಲ. ಆ ವಯಸ್ಸಿನಲ್ಲಿ ಅಮೆರಿಕದ ಯುಎಸ್ ಓಪನ್ ಕೂಟದಲ್ಲಿ (ಗ್ರ್ಯಾಂಡ್ಸ್ಲ್ಯಾಮ್) ಡಬಲ್ಸ್ ಪ್ರಶಸ್ತಿ ಪಡೆದ ಭಾರತೀಯ ಲಿಯಾಂಡರ್ ಪೇಸ್ ಒಂದು ಭಾರಿ ದಾಖಲೆಯನ್ನೇ ಸ್ಥಾಪಿಸಿದ್ದಾರೆ. ಟೆನಿಸ್ ಪ್ರಪಂಚದಲ್ಲಿ ಇದು ಸಾಮಾನ್ಯವಾದ ವಿಚಾರವಲ್ಲ.
ಟೆನಿಸ್ ಜಗತ್ತಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ (ಅತಿ ಭಾರಿ) ಟೂರ್ನಿಗಳೆಂದರೆ ಆಸ್ಟ್ರೇಲಿಯಾ, ಫ್ರಾನ್ಸ್, ಯುಎಸ್ (ಅಮೆರಿಕ) ಮತ್ತು ವಿಂಬಲ್ಡನ್ (ಇಂಗ್ಲೆಂಡ್) ಟೂರ್ನಿಗಳು.
ಕಳೆದೆರಡು ದಶಕಗಳಿಂದಲೂ ಲಿಯಾಂಡರ್ ಪೇಸ್, ಡೇವಿಸ್ ಕಪ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ, ಎಲ್ಲ ಗ್ರ್ಯಾಂಡ್ ಸ್ಲಾಮ್ಗಳಲ್ಲಿ ಹಾಗೂ ವೃತ್ತಿ ಆಟಗಾರರ ತಂಡಗಳಲ್ಲಿ ಚಿರಪರಿಚಿತ ಮುಖ.
1992ರಿಂದ 2012ರ ವರೆಗೆ ಅವರು ಪಾತ್ರ ವಹಿಸಿದ ಕ್ರೀಡಾಕೂಟಗಳಿಗೆ ಲೆಕ್ಕವೇ ಇಲ್ಲ. ಅದೇ ರೀತಿ ಪ್ರಶಸ್ತಿಗಳಿಗೂ. ನಿಜ. ಲಿಯಾಂಡರ್ ಫೇಸ್ ಯಾವ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲೂ ಸಿಂಗಲ್ಸ್ ಪ್ರಶಸ್ತಿ ಪಡೆದಿಲ್ಲ. ಒಮ್ಮೆ ಮಾತ್ರ ಸೆಮಿಫೈನಲ್ ಹಂತ ತಲುಪಿದ್ದರು. ಗ್ರ್ಯಾಂಡ್ ಸ್ಲ್ಯಾಮ್ಗಳ ಪ್ರಶಸ್ತಿಗಳ ಲೆಕ್ಕವನ್ನೇ ಹಿಡಿದರೆ, ಹದಿನಾಲ್ಕು ಬಾರಿ ಡಬಲ್ಸ್ನಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಅದರಲ್ಲಿ ಎಂಟು ಪುರುಷರದ್ದು. ಆರು ಮಿಕ್ಸೆಡ್ (ಸ್ತ್ರೀ-ಪುರುಷರ ಜೋಡಿ) ಡಬಲ್ಸ್ ಪ್ರಶಸ್ತಿಗಳು.
1990ರಲ್ಲೇ ಲಿಯಾಂಡರ್ ತಮ್ಮ ಹದಿನೆಂಟನೇ ವಯಸ್ಸಿನಲ್ಲೇ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದರು. 1991ರಲ್ಲಿ ಟೆನಿಸ್ ಅನ್ನು ವೃತ್ತಿಯನ್ನಾಗಿ ಸ್ವೀಕರಿಸಿದಾಗಲೇ ಅವರ ಕ್ರೀಡಾ ಪ್ರೌಢಿಮೆಯ ಅಸ್ತಿತ್ವದ ಪ್ರದರ್ಶನವಾಗಿದ್ದು. 1992-2002ರ ನಡುವೆ ಐದು ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಪಾಲ್ಗೊಂಡಿದ್ದಾರೆ. ಐದು ಬಾರಿ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಡೇವಿಸ್ ಕಪ್ನಲ್ಲಿ ಭಾರತೀಯ ತಂಡದ ಕ್ಯಾಪ್ಟನ್ ಆಗಿದ್ದರು.
ಭಾರತ ಸರ್ಕಾರವೂ ಲಿಯಾಂಡರ್ ಪೇಸ್ ಅವರನ್ನು ಗೌರವಿಸುವುದರಲ್ಲಿ ಹಿಂದೆ ಬಿದ್ದಿಲ್ಲ. 1990ರಲ್ಲೇ ಅತ್ಯುತ್ತಮ ಕ್ರೀಡಾಪಟುಗಳಿಗೆ ಮೀಸಲಾದ ಅರ್ಜುನ ಪ್ರಶಸ್ತಿ ಸಿಕ್ಕಿತ್ತು. 1996- 97ರಲ್ಲಿ ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2001ರಲ್ಲಿ ಪದ್ಮಶ್ರೀ.
ಲಿಯಾಂಡರ್ ಪೇಸ್ ಅಂದಾಕ್ಷಣ ಅವರೊಂದಿಗೆ ಡಬಲ್ಸ್ನಲ್ಲಿ ಜತೆಯಾಗುವ ಮಹೇಶ್ ಭೂಪತಿ ನೆನಪಾಗದೇ ಇರುವುದಿಲ್ಲ. ಈ ಇಬ್ಬರ ಜೋಡಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಈಚೆಗೆ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ ಅವರು ದೂರವಾಗಿದ್ದಾರೆ. ಆದರೆ ರಾಷ್ಟ್ರೀಯ ತಂಡದಲ್ಲಿ ಇಬ್ಬರೂ ಇದ್ದಾರೆ.
ಲಿಯಾಂಡರ್ ಪೇಸ್ ತಂದೆ ಖ್ಯಾತ ಹಾಕಿ ಆಟಗಾರ. ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತೀಯ ತಂಡದಲ್ಲಿದ್ದವರು. ತಾಯಿ ರಾಷ್ಟ್ರೀಯ ಮಹಿಳಾ ಬಾಸ್ಕೆಟ್ಬಾಲ್ ತಂಡದ ಕ್ಯಾಪ್ಟನ್.
ಯಾವ ದೃಷ್ಟಿಯಿಂದ ನೋಡಿದರೂ ಈಗ ಲಿಯಾಂಡರ್ ಪೇಸ್ ಟೆನಿಸ್ಗೆ ನಿವೃತ್ತಿ ಹೇಳುವಂಥ ಸಮಯ ಬಂದಿದೆ. ಆದರೆ ಅವರು ಇನ್ನೂ ಆ ನಿರ್ಧಾರ ಪ್ರಕಟಿಸಿಲ್ಲ. ಪ್ರಸ್ತುತ ಅವರ ವಾಸ್ತವ್ಯ ಹೆಂಡತಿ, ಮಗಳೊಂದಿಗೆ ಮುಂಬೈ ಮಹಾನಗರದಲ್ಲಿ. ಅವರನ್ನು ಈಗ ಚಲನಚಿತ್ರ ರಂಗ ಕೈ ಬೀಸಿ ಕರೆಯುತ್ತಿರುವಂತಿದೆ. ಒಂದು ಬಾಲಿವುಡ್ ಚಿತ್ರದಲ್ಲಿ ನಕ್ಸಲೀಯ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ.
ಒಂದು ಪ್ರಕಟಿತ ಅಂದಾಜಿನ ಪ್ರಕಾರ ಲಿಯಾಂಡರ್ ಪೇಸ್ ಟೆನಿಸ್ನಲ್ಲಿ ಗಳಿಸಿರುವ ಪ್ರಶಸ್ತಿಗಳ ಹಣದ ರೂಪದ ಮೌಲ್ಯ 759,7534 ಡಾಲರ್ಗಳು.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


