ಸಾಪ್ತಾಹಿಕಪ್ರಭ

ಜೀವನ ಜೈಲಲ್ಲ, ಪಲಾಯನ!

ಜೀವನ ಜೈಲಲ್ಲ, ಪಲಾಯನ!
Published On :

ಅಕ್ಷರ ಮತ್ತು ದೃಶ್ಯ ಮಾಧ್ಯಮಗಳೆರಡಕ್ಕೂ ಪಲಾಯನ ಕಥೆ ಮತ್ತು ಚಿತ್ರಗಳು ಅಪರಿಚಿತವಲ್ಲ. ನಾವೂ ಈ 'ಎಸ್ಕೇಪ್‌' ರೋಚಕತೆಗಳಿಂದ ಪಾರಾಗಿಲ್ಲ. 'ಪ್ಯಾಪಿಲಾನ್‌' ಮತ್ತು 'ಮಹಾ ಪಲಾಯನ' ಕೃತಿಗಳು ಬಂದೀಖಾನೆಗಳ ಕ್ರೌರ್ಯ ಹಾಗೂ ಬಂಧಮುಕ್ತ ಬದುಕಿನ ಕನಸು ಬಿತ್ತುತ್ತವೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕಡಲಾಚೆಗಿನ ಸರಳುಗಳ ಹಿಂದಿನ ವ್ಯಕ್ತಿಗಳ ರೋಚಕತೆಯನ್ನು ಪರಿಚಯಿಸಿದ್ದಾರೆ. ಸ್ಟೀಫನ್ ಕಿಂಗ್‌ರ 'ರೀಟಾ ಹೆವರ್ಥ್ ಆ್ಯಂಡ್ ಶಾಶಂಕ್ ರಿಡೆಂಪ್ಷನ್‌' ಕಾದಂಬರಿ ಕೂಡ ಬಂದೀಖಾನೆಯ ಬದುಕನ್ನು ಚಿತ್ರಿಸುತ್ತದೆ. ಈ ಕಾದಂಬರಿ ಎಷ್ಟು ಮಂದಿಗೆ ಗೊತ್ತೋ ಇಲ್ಲವೋ? ಆದರೆ, ಇದೇ ಕಾದಂಬರಿಯನ್ನು ಆಧರಿಸಿದ 'ದಿ ಶಾಶಂಕ್ ರಿಡೆಂಪ್ಷನ್‌' ಚಿತ್ರ ನೋಡದವರು ವಿರಳ.
ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ಹುಡುಕುವವರಿಂದ ಈ ಚಿತ್ರ ತಪ್ಪಿಸಿಕೊಳ್ಳದು. ಈ ಚಿತ್ರದ್ದು, ಬಂದೀಖಾನೆಯ ವ್ಯಥೆಯಾದರೂ, 'ಪ್ಯಾಪಿಲಾನ್‌' ಅಥವಾ 'ಮಹಾ ಪಲಾಯನ'ದ ರೋಚಕತೆ ನೆರಳು ಇಲ್ಲ. ಇದು ಅಕ್ಷರ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮದ ನಡುವಿನ ವ್ಯತ್ಯಾಸ ಮತ್ತು ಅಂತರ. 'ದಿ ಶಾಶಂಕ್ ರಿಡೆಂಪ್ಷನ್‌' ಚಿತ್ರ, ತುಸು ದೀರ್ಘವಾದರೂ ನೋಡುತ್ತ ಹೋದಂತೆ ಇಷ್ಟವಾಗುತ್ತದೆ. ನಾಗರಿಕತೆ, ಸಾಮಾಜಿಕ ಜೀವನ, ಭದ್ರತೆ, ನ್ಯಾಯಾ ರಕ್ಷಣೆ, ಕಾನೂನಿನ ನೆಪದಲ್ಲಿ ಮಾಡದ ತಪ್ಪಿಗೆ ಅಥವಾ ಆಕಸ್ಮಿಕವಾಗಿ ನಡೆದ ಅಪರಾಧಗಳಿಂದ ಸಂಕೋಲೆಗಳ ನರಕಕ್ಕೆ ಬಲಿಯಾಗುವವರ ಕಥನಗಳು ಪ್ರಜಾಪ್ರಭುತ್ವದ ತಣ್ಣನೆಯ ಕ್ರೌರ್ಯದಂತೆ ಕಾಣುತ್ತವೆ. ಈ ಬಂಧನಗಳಿಂದ ಮುಕ್ತಿ ಪಡೆಯುವ ಪ್ರಯತ್ನದಲ್ಲಿ ಮನುಷ್ಯನ ಅಸಾಧ್ಯ ಸಾಹಸಗಳಿಗೆ ಕನ್ನಡಿ ಹಿಡಿಯುವ ಸಾಕಷ್ಟು ಚಿತ್ರಗಳಿವೆ. 'ದಿ ಶಾಶಂಕ್ ರಿಡೆಂಪ್ಷನ್‌' ಚಿತ್ರ, ಹಲವು ವರ್ಷಗಳ ಕಾಲ ಜೈಲಿನಲ್ಲಿ ಜೀವನ ಸಾಗಿಸಿದವನ ಕತೆ ತೆರೆದಿಟ್ಟರೂ ಅದು ಇಡೀ ಒಂದು ವ್ಯವಸ್ಥೆಯ ಭಾಗವಾಗುತ್ತ ಹೋಗುವುದು ಇದರ ಅಂತರಾತ್ಮ. ಇಲ್ಲಿ ರೆಡ್ ಮತ್ತು ಆ್ಯಂಡಿ ಡುಫ್ರೆನ್ಸ್ ಎರಡು ಮುಖ್ಯ ಪಾತ್ರಗಳು. ಈಗಾಗಲೇ ರೆಡ್ ಕಾರಾಗೃಹದಲ್ಲಿದ್ದಾನೆ. ಆಂಡಿ, ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ ಕೊಲೆ ಅರೋಪದಲ್ಲಿ ಶಾಶಂಕ್ ಜೈಲಿಗೆ ಬರುತ್ತಾನೆ. ಶಾಶಂಕ್ ಎನ್ನುವುದು ಅತ್ಯಂತ ಕಠಿನ ಜೈಲು. ಖೈದಿಗಳನ್ನು ಕ್ರಿಮಿಗಳಂತೆ ನೋಡುವ ಗಾರ್ಡ್‌ಗಳು, ಮುಂಗೋಪಿ ವಾರ್ಡನ್, ಕೊಲೆಪಾತಕರು, ಸಲಿಂಗಕಾಮಿಗಳ ಸ್ಮಶಾನವಿದು. ನರಕಕ್ಕೆ ಮೂರೇ ಗೇಣಲ್ಲ, ಇದೇ ನರಕ ಎನ್ನುವ ಈ ಕಾರಾಗೃಹ, ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪೋಷಿಸಿಕೊಂಡು ಬಂದಿದೆ.
ಜೈಲಿಗೆ ಬರುವ ಬ್ಯಾಂಕ್ ಉದ್ಯೋಗಿ ಆ್ಯಂಡಿಗೆ 20 ವರ್ಷಗಳಿಂದ ಸೆರೆಮನೆಯೇ ತನ್ನ ಬದುಕಿನ ಅರಮನೆ ಎಂದುಕೊಂಡಿರುವ ರೆಡ್ ಪರಿಚಯವಾಗುತ್ತಾನೆ. 'ನೀವು ಸರಳುಗಳ ಹಿಂದೆ ಬಂದಾಕ್ಷಣ ನಿಮ್ಮ ಪಾಲಿಗೆ ಹೊರಗಿನ ಪ್ರಪಂಚ ಮುಚ್ಚಿಕೊಳ್ಳುತ್ತದೆ' ಎನ್ನುವ ರೆಡ್‌ನ ಮಾತುಗಳಿಗೆ ತದ್ವಿರುದ್ಧವಾಗಿರುವ ಆ್ಯಂಡಿ, 'ಮನುಷ್ಯನನ್ನು ಬಂಧಿಸಬಹುದು. ಆತನ ಪ್ರಜ್ಞೆಯನ್ನು ಬಂಧಿಸಲಾಗದು' ಎಂಬ ಮಾತಿನ ಮೂರ್ತರೂಪ ತೋರಿಸುತ್ತಾನೆ. ಮುಂದೆ ಜೈಲಿನಿಂದ ತಪ್ಪಿಸಿಕೊಳ್ಳುವ ಆ್ಯಂಡಿ, ಇತರೆ ಖೈದಿಗಳ ಕಣ್ಣಲ್ಲಿ ಸ್ವತಂತ್ರ ಹಕ್ಕಿಯಾಗಿ ಕಂಗೊಳಿಸುತ್ತಾನೆ. ಈ ನಡುವೆ ಗ್ರಂಥಾಲಯದ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುವ ಆ್ಯಂಡಿ, ಸರ್ಕಾರಕ್ಕೆ ಪದೇ ಪದೇ ಪತ್ರ ಬರೆದು ಹಳೇ ಗ್ರಂಥಾಲಯವನ್ನು ನವೀಕರಣಗೊಳಿಸುತ್ತಾನೆ. ಖೈದಿಗಳಲ್ಲಿ ವಿದ್ಯೆಯ ಅಭಿರುಚಿ ಮೂಡಿಸುತ್ತಾನೆ. ವಾರ್ಡನ್ ಹಾಗೂ ಜೈಲು ಅಧಿಕಾರಿಗಳ ತೆರಿಗೆ ಹಣ ಉಳಿಸುವ ಮೂಲಕ ಅವರ ಸ್ನೇಹ ಸಂಪಾದಿಸಿಕೊಂಡು ಸಲೀಸಾಗಿ ಜೈಲಿನಿಂದ ತಪ್ಪಿಸಿಕೊಂಡರೂ ಆ್ಯಂಡಿಯನ್ನು ಎಲ್ಲ್ಲೂ ಅತಿಮಾನವನಾಗಿ ಚಿತ್ರಿಸಿಲ್ಲ. ರೋಚಕತೆಯ ನೆರಳೂ ಸೋಕದಂತೆ ಈ 'ಎಸ್ಕೇಪ್‌' ಪಾತ್ರಧಾರಿಯನ್ನು ಕಟ್ಟಿಕೊಡಲಾಗಿದೆ.
ಕಥೆಯ ಹೆಚ್ಚಿನ ಭಾಗ ರೆಡ್‌ನ ಹಿನ್ನೆಲೆ ಧ್ವನಿಯಲ್ಲಿ ನಿರೂಪಣೆಯಾಗುತ್ತದೆ. ಈತನ ಅಭಿನಯದಷ್ಟೆ ಧ್ವನಿ ಕೂಡ ನಮ್ಮನ್ನು ಆವರಿಸುತ್ತದೆ. ಚಿತ್ರದಲ್ಲಿ ಹಿಂಸೆ, ರಕ್ತಪಾತ ಎಲ್ಲವೂ ಇದೆ. ಆದರೆ ಎಲ್ಲೂ ಅದರ ಘಾಟು ಪ್ರೇಕ್ಷಕನಿಗೆ ತಟ್ಟುವುದಿಲ್ಲ. ಯಾಕೆಂದರೆ ಜೈಲು ಹೊರಗಿನ ಪ್ರಪಂಚಕ್ಕೆ ನಿಷಿದ್ಧ! ಆ್ಯಂಡಿ ಜೈಲಿನಿಂದ ತಪ್ಪಿಸಿಕೊಂಡ ನಂತರ ಅಲ್ಲಿನ ಅವ್ಯವಹಾರಗಳು ಬಯಲಾಗುತ್ತವೆ. ಜೈಲಿನ ಕ್ಯಾಪ್ಟನ್‌ನ ಬಂಧನವಾಗುತ್ತದೆ. ವಾರ್ಡನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜೈಲು ಸೇರಿದವರು ಮತ್ತೆ ಬದಲಾಗಲ್ಲ, ಅವರು ಮತ್ತಷ್ಟು ಕ್ರೂರಿಗಳಾಗುತ್ತಾರೆ. ಹೀಗಾಗಿ ಇಲ್ಲಿ ಬದುಕಲು ಅನೈತಿಕ ಮಾರ್ಗ ಹಿಡಿಯುವುದು ಅನಿವಾರ್ಯ. ಆದರೆ ಆ್ಯಂಡಿ ಮಾತ್ರ ಎಲ್ಲದರಲ್ಲೂ ಚಾಣಾಕ್ಷ. ತಪ್ಪಿಸಿಕೊಳ್ಳಲು ತನಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳಬಲ್ಲ ಬುದ್ಧಿವಂತ. ಆ್ಯಂಡಿಯ ಶ್ರಮದ ಫಲವಾಗಿ ಖೈದಿಗಳ ಆಶಾಕಿರಣವಾಗುವ ಗ್ರಂಥಾಲಯ, 50 ವರ್ಷ ಜೈಲಿನಲ್ಲೇ ಜೀವನ ಸವೆದು ಆಚೆ ಬಂದು ಹೊರಜಗತ್ತಿನ ಬದುಕಿಗೆ ಹೊಂದಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಬ್ರೂಕ್, 40 ವರ್ಷಗಳ ನಂತರ ಬಿಡುಗಡೆಯಾದ ಮೇಲೂ ರೆಡ್, ಜೈಲಿನಂತೆ ಪ್ರತಿಯೊಂದನ್ನು ಕೇಳುವಾಗ ಮೂತ್ರವಿಸರ್ಜನೆಗೂ ಅನುಮತಿ ಪಡೆಯುವುದು ಬಂದೀಖಾನೆಯ ಹಿಂದಿನ ಕ್ರೌರ್ಯಕ್ಕೆ ಸಾಕ್ಷಿ. ಸ್ವತಂತ್ರ ಎನ್ನುವುದಕ್ಕೆ ಹೊಸ ಅರ್ಥ ನೀಡಿರುವ ಈ ಚಿತ್ರ, ಬದುಕು ಬಂದೀಖಾನೆ ಅಲ್ಲ ಎನ್ನುತ್ತದೆ.
ಫ್ರಾಂಕ್ ಡ್ಯಾರಬೌಂಟ್, ಹಂಗೇರಿಯನ್ ಮತ್ತು ಅಮೆರಿಕನ್ ಸಿನಿಮಾ ನಿರ್ದೇಶಕ. ವಿಶೇಷ ಎಂದರೆ, 'ದಿ ಮಿಸ್ಟ್‌', 'ದಿ ಗ್ರೀನ್ ಮೈಲ್‌' ಹಾಗೂ 'ದಿ ಶಾಶಂಕ್ ರಿಡೆಂಪ್ಷನ್‌' ಈ ಮೂರು ಚಿತ್ರಗಳೂ ಸ್ಟೀಫನ್ ಕಿಂಗ್‌ರ ಕಾದಂಬರಿ ಆಧರಿಸಿವೆ. ಕೇವಲ 1 ಡಾಲರ್‌ಗೆ ತನ್ನ ಕಥೆಗಳನ್ನು ಕೊಟ್ಟು ಹೊಸ ನಿರ್ದೇಶಕರಿಗೆ ಬೆಂಬಲಿಸಲು ಮುಂದೆ ಬಂದ ಸ್ಟೀಫನ್‌ರಿಂದ ಫ್ರಾಂಕ್, 'ದಿ ಶಾಶಂಕ್ ರಿಡೆಂಪ್ಷನ್‌' ಚಿತ್ರದ ಕಥೆಯ ಹಕ್ಕುಗಳನ್ನು ಪಡೆದುಕೊಂಡನಂತೆ. ಏಳು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 'ದಿ ಶಾಶಂಕ್ ರಿಡೆಂಪ್ಷನ್‌', ಸಿನಿಮಾಸಕ್ತರ ನೆಚ್ಚಿನ ದೃಶ್ಯಪಾಠ.

- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.