ಸೌಂದರ್ಯ ಸಮರ

ಹೆರಿಗೆಯ ದಿನ ಹುಟ್ಟಿದ ಮಗುವನ್ನು ಮುದ್ದಿಸುವ ಭರದಲ್ಲಿ ಹೆತ್ತ ಅಮ್ಮನನ್ನು ಮರೆಯಲಾದೀತೇ? ಕಳೆದ ಕಷ್ಟ, ನೋವು, ಸಂಕಟಗಳ ಸಾತತ್ಯವನ್ನು ಬಯಸದಿದ್ದರೂ ಮಗು ಭ್ರೂಣವಾಗಿ ಮೈ ಸೇರಿದ ದಿನದಿಂದ ಹೊರ ಜಗತ್ತಿಗೆ ಅದು ಕಣ್ಬಿಡುವ ಕ್ಷಣದವರೆಗೆ ಅನುಭವಿಸಿದ ಆನಂದ, ನಿರೀಕ್ಷೆ, ಪುಳಕ, ಸಂಭ್ರಮಗಳಿಗೆ ಕೊರತೆಯುಂಟೇ? ಅಂಥವೆಲ್ಲ ಅನುಭವಗಳ ಮೂಟೆಯೊಂದಿಗೆ ಕನಸುಗಳ ಕೌದಿ ಹೊದ್ದುಕೊಂಡೇ ಮಗುವನ್ನು ನೋಡಿ ಸಂಭ್ರಮಕ್ಕೆ ಅಡಿಯಿಟ್ಟಿರುತ್ತೇವೆ. ಕನಸುಗಳಿಗೆ ಅದು ಕೊನೆಯಲ್ಲ, ಆರಂಭ.
ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತೇನೆ. ಬಹುಶಃ ಅವಕಾಶವಾದಿಗಳೇ ತುಂಬಿರುವ ಈ ಜಗದಲ್ಲಿ ನನ್ನಂಥ ಮುಗುದೆಯರನ್ನು ಹುರಿದು ಮುಕ್ಕುವ ಹದ್ದುಗಳಿಗೇನೂ ಕೊರತೆಯಿಲ್ಲ. ಅದ್ಯಾರೋ ಆಶಾವಾದಿಯ ಮಾತು ನೆನಪಾಗುತ್ತಿದೆ- ಅನಿವಾರ್ಯವೆಂಬಂಥ ಸ್ಥಿತಿಯಲ್ಲಿ ಅತ್ಯಾಚಾರವನ್ನೂ ಅನುಭವಿಸಿಬಿಡು. ಭಾರತೀಯ ನೆಲೆಯಲ್ಲಿ ಹೀಗೆ ಯೋಚಿಸುವುದು ತುಸು ಕಷ್ಟವಾಗಬಹುದು. ಆದರೆ ಬೆಳಗೆದ್ದು ದಿನಪತ್ರಿಕೆಯ ತುಂಬೆಲ್ಲ ಹತಭಾಗಿನಿಯರ ಸುದ್ದಿಯೇ ರಾರಾಜಿಸುತ್ತಿದೆ. ಹೇಸಿಗೆ ಹುಟ್ಟುತ್ತದೆ ನಿಜ. ಆಕ್ರೋಶ ಇರುವುದು ನಮ್ಮನ್ನು ಇಂಥ ಕ್ರೂರ ವ್ಯವಸ್ಥೆಯಲ್ಲಿ ಕಟ್ಟಿ ಹಾಕಿರುವ ಕಟ್ಟುಪಾಡುಗಳ ಬಗೆಗೆ. ನಮಗೆ ಅನ್ವಯಿಸುವ ಯಾವುದೂ 'ಗಂಡು' ಎನಿಸಿಕೊಳ್ಳುವವರಿಗೆ ಇಲ್ಲವೇ ಇಲ್ಲ. ಹೀಗಾಗಿಯೇ ಹೆಣ್ಣಿನ ಕಣ್ಣೀರಿಗೆ ಕೊನೆಯಿಲ್ಲ. ಇದು ದೇಶ ಕಾಲಗಳನ್ನೂ ಮೀರಿದ್ದುದು. ಅದನ್ನೂ ಮೀರಿ ನಾವು ನಿಲಲಾಗದೇ?
ಜೀವನವೆಂದರೆ ಹಾಗೆಯೇ ಕನಸುಗಳು ಹುಟ್ಟುತ್ತಲೇ ಇರಬೇಕು, ಪರಿಶ್ರಮದ ನೋವಿನ ಬಸಿರಿನಲ್ಲಿ. ಪ್ರತಿ ದಿನದ ಆರಂಭವೆಂದರೆ ಅದು ಕನಸಿನ ಹೆರಿಗೆ ಕ್ಷಣ. ಕಳೆದ ದಿನದ ಅಮ್ಮ ಹೊಸ ದಿನವನ್ನು ಹೆತ್ತಿರುತ್ತಾಳೆ. ಅಲ್ಲಿ ಸಂಭ್ರಮ ಮೇಲಾಗುವುದು ಸಹಜ. ಬದಲಾಗಿ ಆ ವರೆಗೆ ಅಮ್ಮ ಅನುಭವಿಸಿದ ಸಂಕಟ, ನೋವು, ಹಳಹಳಿಯನ್ನು ನೆನಪಿಸಿಕೊಳ್ಳುವುದಿಲ್ಲ. ಆ ಎಲ್ಲವೂ ಮನದ ತೀರಕ್ಕೆ ಬಂದೆರಗುವ ಸಂತಸದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುತ್ತದೆ. ಉಳಿಯುವುದು ಸಂತಸದ ಸ್ವಚ್ಛ ಪಸೆಯನ್ನೊಳಗೊಂಡ ಹೊಳೆಯುವ ಹೊಯ್ಗೆ ಮಾತ್ರವೇ. ಅಲ್ಲಿನ್ನು ನಮ್ಮ ಗುಬ್ಬಚ್ಚಿ ಗೂಡುಕಟ್ಟುವ, ಚೆಲುವ ಚಿತ್ತಾರ ಬರೆಯುವ, ಮರಳ ರಾಶಿಯಲ್ಲಿ ಮೈಯ್ಯೊಡ್ಡಿ ಮಲಗಿ ಚಿತ್ತಾಗುವ ಪರಿಪರಿಯ ಆಟಗಳು ಮುಂದುವರಿಯುತ್ತವೆ. ನಮಗೆ ಗೊತ್ತು, ಮತ್ತೊಂದು ಸಂಕಷ್ಟದ ಅಲೆ ಬಂದೇ ಬರುತ್ತದೆ, ನಮ್ಮೆಲ್ಲ ತಂಟೆಯ ಗುರುತನ್ನು ಮತ್ತೆ ಹೀಗೆಯೇ ಕೊಚ್ಚಿ ಹೋಗುತ್ತದೆ ಎಂದು. ಹಾಗೆಂದು ಆಡದೇ ಉಳಿದು ಬಿಟ್ಟರೆ, ತೀರದಲ್ಲೇ ನಿಂತು ನಿರಕಿಸುತ್ತ ಕಳೆದರೆ ಒಂದಷ್ಟು ಹೊತ್ತಿನಲ್ಲಿ ಕತ್ತಲೆ ಕವಿದು, ತೀರದ ಆಸೆಗಳೊಂದಿಗೆ ತೀರಕ್ಕೆ ವಿದಾಯ ಹೇಳಿ ಹೋಗಬೇಕಾದೀತು. ಎರಡು ಅಲೆಗಳ ನಡುವಿನ ಅವಧಿಯಲ್ಲಿ ಅಲ್ಲಿ ಏನೆಲ್ಲ ಮೂಡಬೇಕು, ಕೊನೆ ಪಕ್ಷ ನಾವು ತೀರದಗುಂಟ ಓಡುತ್ತಾ, ಹೆಜ್ಜೆ ಗುರುತುಗಳಾದರೂ ಅಚ್ಚೊತ್ತಿರಬೇಕು. ಅವನ್ನು ಆ ಅಲೆಗಳು ಹಾಗೆ ಬಂದು ಹೀಗೆ ತೊಳೆದುಕೊಂಡು ಮತ್ತೆ ಸಪಾಟು ತೀರವನ್ನು ಸೃಷ್ಟಿಸಿ ಹೋಗಬೇಕು. ಮುಂದಿನ ಬದುಕಿನ ಚಿತ್ರಣಕ್ಕೆ ಅದೇ ಕ್ಯಾನ್ವಾಸ್. ಅದಿಲ್ಲದಿದ್ದರೆ ಒಂದೇ ಚಿತ್ರ ಜೀವನದುದ್ದಕ್ಕೂ ಬೇಸರ ಹುಟ್ಟಿಸಬಹುದು. ಹೊಸತೊಂದಕ್ಕೆ, ಬದಲಾವಣೆಗೆ ಅವಕಾಶವೇ ಇಲ್ಲದಾಗಬಹುದು. ಅಂಥ ಅವಕಾಶವನ್ನೊದಗಿಸುವ ಕಾರಣಕ್ಕೇ ಹೊಸ ದಿನದ ಆರಂಭಕ್ಕೆ ಸಂಭ್ರಮ. ಅಲ್ಲಿ ಕಳೆದ ವೈಫಲ್ಯದ ಅನುಭವದೊಂದಿಗೆ, ಗೀಚು-ಕಾಟುಗಳ ಅರಿವಿನೊಂದಿಗೆ, ಮತ್ತೆ ಮುಗ್ಗರಿಸದ ಎಚ್ಚರಿಕೆಯೊಂದಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಬರುವ ಅಲೆಗಳಿಗೇ ಸವಾಲೊಡ್ಡುವ ತಾಳ್ಮೆಯೊಂದಿಗೆ ಗುಬ್ಬಚ್ಚಿ ಗೂಡು ಕಟ್ಟಲು ಆರಂಭಿಸಬೇಕು.
ಎಲೆಯ ತುದಿಯ ಹನಿ ಕೆಳ ಧುಮುಕುವುದೇ ಇನ್ನೊಂದು ಸುಂದರ ಹನಿ ಅಲ್ಲಿ ಬಂದು ಕುಳಿತುಕೊಳ್ಳಲಿ ಎಂಬ ಕಾರಣಕ್ಕೆ. ಒಲ್ಲದ ಒಡ್ಡೋಲಗವೆಲ್ಲಾ ಅರ್ಥಹೀನ. ನಾಳೆಗಳ ಕನಸಿನ ನವೀಕರಣಕ್ಕೆ ಬೇಕಿರುವುದು ನಿನ್ನೆಯ ನೆನಪು, ಇಂದಿನ ದೃಢ ಹೆಜ್ಜೆಯಷ್ಟೇ. ಅಲ್ಲಿ ಸಿಹಿ- ಕಹಿಗಳೆಂಬ ಭೇದವಿಲ್ಲ. ಮರೆವು- ನೆನಪುಗಳ ಸಂಘರ್ಷವಿಲ್ಲ. ಒಳಿತು- ಕೆಡಕುಗಳ ವಿಂಗಡಣೆಯಿಲ್ಲ. ಹಿರಿದು- ಕಿರಿದೆಂಬ ಅಂತರವಿಲ್ಲ. ಎಲ್ಲವೂ ಸಮುಚಿತ. ಆ ಭವ್ಯ ಭಾವದೊಂದಿಗೆ ನಮ್ಮ ಬದುಕಿನ ಆಟೋಗ್ರಾಫ್ ಅನ್ನು ಹಿಡಿದಿಟ್ಟುಕೊಡಲು ಮುಂದಾಗಬೇಕಿದೆ. ಮನಸ್ಸು ಮಾಡಿದರೆ ಅದೇನೂ ದೊಡ್ಡದಲ್ಲ.
ಸ್ವತಂತ್ರ ನೆಲೆಯ ಆಲೋಚನೆಯನ್ನು ನಾವಿಂದು ಕಳೆದುಕೊಂಡು ಬಿಟ್ಟಿದ್ದೇವೆ. ನಿರ್ದಿಷ್ಟ ವಿನ್ಯಾಸಗಳಿಗಷ್ಟೇ ಸೀಮಿತವಾಗಿರುವ ನಮ್ಮ ಮನಸ್ಸುಗಳಿಂದ ಸಂಬಂಧದ ಸೃಜನಶೀಲತೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ವೈಯಕ್ತಿಕ ಬದುಕಿನಂತೆ ಸಾಮಾಜಿಕ ವ್ಯವಸ್ಥೆಯಲ್ಲೂ ಮೌಲ್ಯಗಳು ಕಳೆದುಹೋಗಿವೆ. ವ್ಯಕ್ತಿಯ ಆಂತರ್ಯದಲ್ಲಿ ಮನೆ ಮಾಡಿರಬಹುದಾದ ಅಸ್ಥಿರತೆ ಒಟ್ಟಾರೆ ಜನಜೀವನದ ವಿಶಾಲ ತಳಹದಿಯನ್ನೇ ಕಿರುದಾಗಿಸಿದೆ. ಪ್ರೀತಿಯಿಂದ ಪ್ರೇರಿತವಾದ ಸಂಬಂಧಗಳ ಮಾತು ಬೇರೆ. ಅದು ಮಹತ್ವಾಕಾಂಕ್ಷಿ ಬದುಕಿನ ಮಾದರಿ. ಜೀವನದ ಸಮಗ್ರ ತಿಳಿವಳಿಕೆಗೆ ಕಾರಣವಾಗುವ ಪ್ರೀತಿಯ ಅನುಪಸ್ಥಿತಿಯಲ್ಲಿ ಮನಸ್ಸು ನಿರ್ದಯವಾಗಿದೆ. ಇದು ಹಿಂಸೆಗೆ ಪ್ರೇರಣೆಯೊದಗಿಸಿದೆ. ಅತ್ಯಾಚಾರಗಳಂಥವು ಅದರ ಫಲ. ಅಂತರಂಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರ ಪ್ರತಿಫಲವಾಗಿ ಆರೋಗ್ಯಕರ ಪ್ರೇಮವೆನ್ನುವುದು ಕಥೆಯಾಗಿ ತೋರುತ್ತಿದೆ. ಸುತ್ತಣ ಸಮಾಜದಲ್ಲಿ ಸಮುದಾಯದಲ್ಲಿ ಮನುಷ್ಯ ಸಂಬಂಧಗಳು ನಾಶವಾಗಿ, ಬದುಕಿನಲ್ಲಿ ಅಸ್ಥಿರತೆ ಇಣುಕುತ್ತಿದೆ.
ಇಂಥವೆಲ್ಲವನ್ನೂ ಮೀರಿ ನಿಲ್ಲೋಣ ಗೆಳತಿ. ಜೀವನವೆಂದರೆ ಅದು ನೋವು, ನಲಿವು, ಸೌಂದರ್ಯ, ಕುರೂಪ, ಪ್ರೀತಿ- ಪ್ರೇಮಗಳ ಸಂಗಮ. ಎಲ್ಲವನ್ನೂ ಮರೆತು ಮತ್ತೆ ಹೊಸ ಬದುಕಿನ ಬಗೆಗಿನ ಆಲೋಚನೆಗಳನ್ನು ಚಿಗುರಿಸಿಕೊಳ್ಳೋಣ. ಯಾವುದೋ ಒಂದು ಕಹಿ ಬದುಕನ್ನೇ ನುಂಗಿಹಾಕುವ ಮಟ್ಟಕ್ಕೆ ಬೆಳೆಯಲು ಕೊಡದಿರೋಣ. ಪೈಶಾಚಿಕ ಮನಸ್ಸುಗಳನ್ನು ಎದುರಿಸಲು ಸಮರ್ಥ ಅಸ್ತ್ರ ನಮ್ಮಲ್ಲಿನ ಆತ್ಮಸ್ಥೈರ್ಯ. ಅದನ್ನು ಒಗ್ಗೂಡಿಸಿಕೊಳ್ಳೋಣ. ಸುಮನಸುಗಳು ಇನ್ನೂ ನಮ್ಮ ನಡುವೆ ಜೀವಂತವಿವೆ. ಬೆಚ್ಚದಿರು ಬಾಲೇ, ಎಲ್ಲದನ್ನೂ ಮೀರಿಯೂ ನಮಗೆ ಬದುಕಿದೆ. ಬಾಳಿ ಬೆಳಗೋಣ.
ಕಳಕೊಂಡಿದ್ದು ಒಂದು ಕ್ಷಣವಷ್ಟೇ. ಬದುಕು ನಮ್ಮೊಟ್ಟಿಗೆ ಇದೆಯಲ್ಲ!
-ರಾಧಾ ಸೋಚನಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


