ಶತಮಾನದ ಕಲಾ ಪುಷ್ಪ
ಅದು ನಿಜಕ್ಕೂ ದೇವ ಗಾಯನ. ಭಗವಂತನಿಗಾಗಿ ಹಾಡುತ್ತಿದ್ದ ಅವರ ಗಾಯನದ ವೈಭವವನ್ನು ಅದೃಷ್ಟವಿದ್ದವರು ಕೇಳಲು ಸಾಧ್ಯವಿತ್ತಷ್ಟೇ. ಜೈಪುರ್-ಅತ್ರೋಲಿ ಘರಾಣೆಯ ಅತ್ಯಂತ ಪ್ರಭಾವೀ ಗಾಯಕಿ ಸುರಶ್ರೀ ಕೇಸರಬಾಯಿ ಕೇರಕರ್. ಬಹುಶಃ ಶತಶತಮಾನಗಳಿಗೆ ಒಮ್ಮೆ ಅರಳುವ ಕಲಾ ಪುಷ್ಪ ಅವರು.
ಶಾಸ್ತ್ರೀಯ ಸಂಗೀತದ ಶ್ರೇಷ್ಠತೆಯನ್ನು ಅತ್ಯಂತ ಮಡಿವಂತಿಕೆಯಿಂದ, ಅಪಾರ ಶ್ರದ್ಧೆಯಿಂದ ಕಾಪಾಡಿಕೊಂಡು, ಅದು 'ದೈವೀಕ ಸಂಗೀತ', 'ಪವಿತ್ರವಾದದ್ದು', 'ಜ್ಞಾನರೂಪವಾದದ್ದು' ಎಂಬ ಅದರ ಘನತೆಯನ್ನು, ಭವ್ಯತೆಯನ್ನು ಎತ್ತಿಹಿಡಿದು ತಮ್ಮ ಕೊನೆಯ ಉಸಿರಿನ ತನಕ ಒಂದಿನಿತೂ ಅದಕ್ಕೆ ಕುಂದು ಬರದಂತೆ ಬದುಕಿದವರು ಶ್ರೀಮತಿ ಕೇಸರಬಾಯಿ. ಸಾಮಾನ್ಯವಾಗಿ ಸಂಗೀತ ಕೇಳುಗರು 'ಇವರು ಚೆನ್ನಾಗಿ ಹಾಡುತ್ತಾರೆ, ಇವರು ಅದ್ಭುತ , ಅವರು ಪರವಾಗಿಲ್ಲ...' ಹೀಗೆ ಕಲಾವಿದರನ್ನು ಗುರುತಿಸುವುದು, ಅಳೆಯುವುದು ರೂಢಿ. ಆದರೆ ಶ್ರೀಮತಿ ಕೇಸರಬಾಯಿಯವರ ವಿಷಯದಲ್ಲಿ ಹಾಗಲ್ಲ, ಜನ ಅವರ ಗಾಯನ ಕೇಳಲು ಹಾತೊರೆಯುತ್ತಿದ್ದರೆ ಇವರು ಸಂಗೀತ ಕೇಳಲು ಯೋಗ್ಯರು, ಇವರು ಅಲ್ಲ ಎಂದು ಕೇಳುಗರನ್ನೇ ಆಯ್ಕೆ ಮಾಡಿ ಹಾಡುತ್ತಿದ್ದ ಧೀಮಂತ ಕಲಾವಿದೆ ಅವರು. ಕಲೆಯ ಇತಿಹಾಸದಲ್ಲಿ ಹೀಗೆ ಕೇಳುಗರ ಯೋಗ್ಯತೆಯನ್ನು ಪರೀಕ್ಷೆ ಮಾಡುವಂಥ ಕಲಾವಿದರೆಂದರೆ ಅದು ಸುರಶ್ರೀ ಕೇಸರಬಾಯಿಯವರು ಮಾತ್ರವೇ.
'ಏನೋ ಆಗೀಗ ಸ್ವಲ್ಪ ಸಂಗೀತ ಕೇಳುತ್ತೇನೆ, ಬಹಳ ಗಡಿಬಿಡಿ ಇದೆ. ಒಂದು ರಾಗ ಕೇಳಿ ಹೊರಡುತ್ತೇನೆ, ಇಷ್ಟು ಹೊತ್ತೂ ಶಾಸ್ತ್ರೀಯವಾಗಿ ಹಾಡಿದಿರಿ ನಿಜ, ಆದರೆ ನೀವು ಭಜನ್ ಹಾಡುವುದಿಲ್ಲವೇ? ನನಗೆ ಶಾಸ್ತ್ರೀಯ ಸಂಗೀತ ಎಂದರೆ ಪಂಚಪ್ರಾಣ -ಅಂದಹಾಗೆ ನೀವು ಮೊದಲು ಹಾಡಿದ ರಾಗ ಯಾವುದು?' ಇಂತಹ ಕೇಳುಗರಿರುವಲ್ಲಿ ಅವರು ಬರುತ್ತಲೂ ಇರಲಿಲ್ಲ- ಇಷ್ಟೇ ಅಲ್ಲ ಇಂಥವರು ಅವರನ್ನು ಹಾಡಿರಿ ಎಂದು ಕೇಳುವ ಧೈರ್ಯವೇ ಬರದಂತಹ ವಿಶಿಷ್ಟ ವ್ಯಕ್ತಿತ್ವ ಅವರದ್ದಾಗಿತ್ತು. ಸಂಗೀತ ಎಂದೆಂದಿಗೂ ಕೇವಲ ರಂಜನೆಗೆ, ಆಟಕ್ಕೆ, ತಮಾಷೆಗಲ್ಲ ಎಂಬ ನಿಲುವು ಅವರದು. ಯಾರಾದರೂ ಅವರನ್ನು ಹಾಡಲು ಆಹ್ವಾನಿಸಿದರೆ - ಅದು ಎಂತಹ ಸಂಸ್ಥೆ, ಸರಿಯಾಗಿ ತಿಳಿದ ಕೇಳುಗರಿದ್ದಾರೆಯೇ, ತಮ್ಮ ಸಂಗೀತದ ಘನತೆಗೆ ತಕ್ಕವರೇ, ಸಂಗೀತದ ಬಗ್ಗೆ ಅವರ ಆಸ್ಥೆ ಎಂಥದು, ಎಷ್ಟು - ಇದನ್ನೆಲ್ಲ ಕೂಲಂಕಷವಾಗಿ ತಿಳಿದ ಮೇಲೆಯೇ, ಅದೂ ಕಾರ್ಯಕ್ರಮಕ್ಕೆ ಕನಿಷ್ಟ ಇಪ್ಪತ್ತು ದಿನ ಮುಂಚಿತವಾಗಿ ತಿಳಿಸಿದರೆ ಮಾತ್ರ ಅವರು ಹಾಡಲು ಒಪ್ಪುತ್ತಿದ್ದರು. ಪ್ರತಿದಿನದ ರಿಯಾಝ್ನ ಜೊತೆಗೆ ಪ್ರತಿ ಕಾರ್ಯಕ್ರಮಕ್ಕೆಂದು ವಿಶೇಷವಾಗಿ ಕನಿಷ್ಠ ಹದಿನೈದು ದಿನ ರಿಯಾಝ್ ಮಾಡುತ್ತಿದ್ದರು. ಅದು ಅವರ ಕೊನೆಯ ಕಾರ್ಯಕ್ರಮದ ತನಕವೂ ಹಾಗೆಯೇ. ಇಂಥದೇ ರಾಗ, ಇಂಥದೇ ರೀತಿ, ಇಂಥದೇ ಪರಿಪೂರ್ಣತೆ, ಹೀಗೆ ಬರಬೇಕೆಂದರೆ ಬರಬೇಕು ಅಷ್ಟೇ. ತಮ್ಮ ಗಾಯನವನ್ನು ರೆಕಾರ್ಡ್ ಮಾಡುವುದನ್ನೂ ಅವರು ತಿರಸ್ಕರಿಸಿ ಬಿಡುತ್ತಿದ್ದರು. ಯಾಕೆಂದರೆ ಅದು ಎಲ್ಲಿ ಬೇಕಾದರೂ, ಯಾರು ಬೇಕಾದರೂ ಕೇಳುವ ಸ್ಥಿತಿಗೆ ಬರುವುದನ್ನು ಅವರು ಒಪ್ಪುತ್ತಿರಲಿಲ್ಲ. ಹಾಗೆ ಗಾಯನದ ಘನತೆಯನ್ನು ಜತನವಾಗಿ ಕಾಪಾಡಿದರು ಅವರು.
ಮನೋಹರವಾದ ರೂಪ, ಕಚ್ಚೆ ಹಾಕಿ ತಲೆಯ ಮೇಲೆ ಸೆರಗೆಳೆದು ಸಾಂಪ್ರದಾಯಿಕ ಮಹಾರಾಷ್ಟ್ರದ ಪದ್ಧತಿಯಲ್ಲಿ ಉಟ್ಟ ಸೀರೆ, ಹಣೆಯ ಮಧ್ಯ ಭಾಗದಲ್ಲಿ ಕಾಸಗಲದ ಕುಂಕುಮ, ಮೂಗಿನಲ್ಲಿ ಮಿಂಚುವ ದೊಡ್ದ ನತ್ತು, ಕೈಗಳಲ್ಲಿ ವಜ್ರ ಖಚಿತ ಬಳೆಗಳನ್ನು ಹಾಕಿ ವೇದಿಕೆಯೇರಿ ಕುಳಿತು 'ರಭಸ, ಲಾಲಿತ್ಯ, ಭಾವ, ಲಯ, ಸ್ವರ' ಎಲ್ಲವೂ ಉತ್ತುಂಗದಲ್ಲಿರುವಂಥ ಆ ಗಂಧರ್ವ ಗಾಯನವನ್ನು ಅವರು ಹಾಡುತ್ತಿದ್ದರೆ ಸಾಕ್ಷಾತ್ ಸರಸ್ವತಿ ಆವಿರ್ಭೂತಳಾದಳೇನೋ ಎನ್ನಿಸುತ್ತಿತ್ತಂತೆ! ಅವರು ಆಕಾಶವಾಣಿಯಲ್ಲಿ ಹಾಡಲು ಬರುವುದಿದ್ದರೆ ಅಲ್ಲಿ ಹೊಸ ಹೂಗುಚ್ಛವನ್ನಿಟ್ಟು, ಪರಿಮಳ ದ್ರವ್ಯಗಳಿಂದ ಸಿಂಗರಿಸಿ ಅವರಿಗಾಗಿ ಕಾಯ್ದು ಕುಳಿತಿರುತ್ತಿದ್ದರಂತೆ. ಅವರು ಈ ಮಟ್ಟದ ಸಾಧನೆಯ ಶಿಖರವೇರಲು ಒಟ್ಟೂ ಸವೆಸಿದ ವರ್ಷಗಳೆಷ್ಟು ಗೊತ್ತೆ? ಒಂದೆರಡಲ್ಲ, ಹತ್ತಿಪ್ಪತ್ತಲ್ಲ, ಒಟ್ಟೂ ನಲ್ವತ್ತಾರು ವರ್ಷಗಳು! ಅವರದೇನೂ ಹೂವಿನ ಹಾದಿಯಾಗಿರಲಿಲ್ಲ. ತಮ್ಮ ಎಂಟನೇ ವಯಸ್ಸಿಗೇ ಅವರು ಉಸ್ತಾದ್ ಅಬ್ದುಲ್ ಕರೀಂ ಖಾನರ ಬಳಿ ಕಲಿಯಲು ಪ್ರಾರಂಭಿಸಿದರೂ ಅದು ಬಹಳ ದಿನ ಸಾಧ್ಯವಾಗಲಿಲ್ಲ. ಮುಂದೆ ಪಂ.ಭಾಸ್ಕರ್ ಹುವಾ ಬಖಲೇ, ಪಂ.ರಾಮಕೃಷ್ಣ ಬುವಾ ವಝೆ ಹೀಗೆ ದಿಗ್ಗಜರ ಬಳಿ ಅವರು ಶಿಷ್ಯತ್ವ ವಹಿಸಿದರೂ ಏನಾದರೊಂದು ಕಾರಣದಿಂದ ಅದು ದೀರ್ಘ ಕಾಲ ಉಳಿಯಲೇ ಇಲ್ಲ. ಹೀಗೆ ಗುರುವನ್ನು ಅರಸಿ ಅರಸಿ ಕೊನೆಗೆ ಉಸ್ತಾದ್ ಅಲ್ಲಾದಿಯಾ ಖಾನರ ಬಳಿ ಅವರು ಬಂದಾಗ ಅವರಿಗೆ ಮೂವತ್ತು ವರ್ಷಗಳು. ಅದರಲ್ಲೂ ಉಸ್ತಾದರ ಪರೀಕ್ಷೆಗಳನ್ನೆಲ್ಲ ಎದುರಿಸಿ ಅವರ ದೃಷ್ಟಿಯಲ್ಲಿ ಯೋಗ್ಯರೆನ್ನಿಸಿಕೊಳ್ಳಲು ಅವರು ಎಷ್ಟೋ ಕಷ್ಟ ಪಡಬೇಕಾಯಿತು. ಆದರೆ ಒಮ್ಮೆ ಅವರು ಕೇಸರಬಾಯಿಯವರನ್ನು ಶಿಷ್ಯೆ ಎಂದು ಸ್ವೀಕರಿಸಿದ ಮೇಲೆ - ಸತತ ಇಪ್ಪತ್ತು ವರ್ಷ ದಿನಕ್ಕೆ ಹತ್ತು ಹನ್ನೊಂದು ಗಂಟೆಗಳ ಕಾಲ ಅವರೆದುರು ಕುಳಿತು ಅವರನ್ನು ರಿಯಾಝ್ ಮಾಡಿಸುತ್ತಿದ್ದರು, ಇವರೂ ಅದನ್ನು ತಪಸ್ಸಿನಂತೆ ಮಾಡುತ್ತಿದ್ದರು.
ಬದುಕನ್ನು ತಪಸ್ಸನ್ನಾಗಿಸಿಕೊಂಡ ಈ ಗಾನತಪಸ್ವಿನಿಯ ಗಾಯನಕ್ಕೆ ಮನಸೋತ ಕವಿ ರವೀಂದ್ರರು ಇವರಿಗೆ 'ಸುರಶ್ರೀ' ಎಂಬ ಬಿರುದನ್ನಿತ್ತರು. ಭಾರತ ಸರಕಾರ 'ಪದ್ಮ ಭೂಷಣ' ಪ್ರಶಸ್ತಿಯನ್ನಿತ್ತು ಗೌರವಿಸಿತು. ಮಹಾರಾಷ್ಟ್ರ ಸರಕಾರ 'ರಾಜ್ಯ ಗಾಯಿಕಾ' ಎಂಬ ಬಿರುದನ್ನಿತ್ತಿತು. ಹೀಗೆ ಉಸ್ತಾದ್ ಅಲ್ಲಾದಿಯಾ ಖಾನರ ಜೈಪುರ್ ಅತ್ರೊಲಿ ಘರಾಣೆಯನ್ನು ಉತ್ತುಂಗಕ್ಕೇರಿಸಿದ ಸಂಗೀತ ಸಾಮ್ರಾಜ್ಞೆ ಶ್ರೀಮತಿ ಕೇಸರ್ಬಾಯಿ.
-ಶ್ರುತಿ ಭಟ್
shrutikbhat @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

