ಅವನೂ ಬೆಳ್ಳಿಗಡ್ಡದ ಪೂರ್ಣಚಂದಿರ

ಇವಳ ಯಾವ ಆರ್ಭಟಕ್ಕೂ ಅವನು ಎದ್ದುಬರುತ್ತಿಲ್ಲ. ದಡದಡ ಬಡಿದಳು. ಬಾಗಿಲಷ್ಟೇ ನಡುಗಿತು. ಈಗ ಬಂದನಾ ಎಂದು ಕಾದಳು. ಕಾಯುತ್ತಾ ಗಂಟೆಗಳಾದವು. ತಾಳ್ಮೆಗೆಟ್ಟು ಕೆಂಚುಕೂದಲನ್ನು ಇನ್ನಷ್ಟು ಕೆದರಿಕೊಂಡಳು. ನಾಲ್ಕು ಸಿಗರೇಟು ಸುಟ್ಟು ಬಿಸಿಯುಸಿರು ಬಸಿದಳು. ಎದೆಯುಬ್ಬಿಸಿ ಅವನನ್ನು ಕೂಗುತ್ತಲೇ ಇದ್ದಳು. ಗಂಟಲೊಣಗಿತು. ಗುಬ್ಬಿಗಳಿಗೆಂದು ಬೌಲಿನಲ್ಲಿ ಇಟ್ಟಿದ್ದ ನೀರನ್ನು ಕುಡಿದು ಬಾಯೊರೆಸಿಕೊಂಡಳು. ಇನ್ನೂ ಬೇಸರ ತಲೆಗೇರಿ ಪೈನ್ ಮರದ ಕೆಳಗೆ ಚದುರಿದ ನೆರಳಲ್ಲಿ ಕೂತು ವಿರಮಿಸಿದಳು. ಮತ್ತೆ ಬಂದು ಕರೆದಳು, 'ಹೆಮಿಂಗ್ವೇ ಪ್ಲೀಸ್ ಕಮ್ ಔಟ್'. ಹಾಗೆ ಬರುವನಲ್ಲ ಅವನು. ಸಿಟ್ಟೇರಿ ಅಲ್ಲೇ ಇದ್ದ ಆಸ್ಟ್ರಿಚ್ನತ್ತ ಕಲ್ಲೊಗೆದು, 'ಯೂ ಚೀಟರ್' ಎಂದು ಅಬ್ಬರಿಸಿ ಹೊರಟೇಬಿಟ್ಟಳು.
ಆ ಪತ್ರಕರ್ತೆ ಪಾಡು ಅಷ್ಟಿಷ್ಟಾ? ಅವನ ಮನೆಯೆದುರು ಬಂದು ನೂರಾರು ಬಾರಿ 'ಹೆಮ್ಮಿಂಗ್ವೇ' ಅಂತ ಕೂಗಿದ್ದಾಳೆ. ತನ್ನದಲ್ಲ ಆ ಹೆಸರು ಎಂಬಂತೆ ಹೆಮಿಂಗ್ವೇ ಮಂಚದ ಮೇಲೆ ಬೆತ್ತಲೆಯಾಗಿ ಅಸಡ್ಡೆಯಾಗಿದ್ದ. ಕೈಯಲ್ಲೊಂದು ಪುಸ್ತಕ, ಎದೆಯ ಹಣ್ಣುಗೂದಲನ್ನು ಎಂದಿನಂತೆ ತಮ್ಮ ಮೀಸೆಯೊಂದಿಗೆ ಮಸೆಯುತ್ತಿದ್ದ ಎರಡು ಬೆಕ್ಕುಗಳು ಅವಳ ದನಿ ಕೇಳದಂತೆ ಅವನನ್ನು ಯಾವುದೋ ಲೋಕದಲ್ಲಿ ಮುಚ್ಚಿಹಾಕಿರಲಿಲ್ಲ. ಅವಳ ಎಲ್ಲ ಆಕ್ರೋಶಗಳೂ ಅವನ ಕಿವಿಗೆ ಬೀಳುತ್ತಿದ್ದವು. ಆದರೆ, ಬಾಗಿಲು ತೆರೆದು ಹೊರಬರುವಷ್ಟು ಧೈರ್ಯ ಮಾಡಲಿಲ್ಲ ಅಂವ.
'ಕೋಮಲ ದನಿಯ ಹುಡುಗಿ ಯಾವತ್ತೂ ಸ್ಫುರದ್ರೂಪಿ ಆಗಿರಲಾರಳು' ಎಂದು ಟೇಬಲ್ ಮೇಲಿನ ವ್ಹಿಸ್ಕಿಯನ್ನು ಬಗ್ಗಿಸಿ ಕುಡಿದು ಮತ್ತೆ ಮಲಗಿದ ಬಿಟ್ಟರೆ, ಹೆಮಿಂಗ್ವೇ ಆ ದಿನ ಸಂದರ್ಶನ ಕೊಡಲೇ ಇಲ್ಲ. ಬಿಳಿಚು ಮೈಯ್ಯ ಪತ್ರಕರ್ತೆ ಬಂದಿದ್ದರೂ ಅವನೇನು ಸಂದರ್ಶನ ಕೊಡುವವನಲ್ಲ. ಇಂಟರ್ವ್ಯೂಗೆ ಅನುಮತಿ ಕೋರಿ ನೂರಾರು ಪತ್ರಕರ್ತರು ಪತ್ರ ಬರೆದರೆ, ತಲೆಕೆಟ್ಟು ಯಾರಾದರೂ ಒಬ್ಬ ಗ್ರಹಚಾರ ನೆಟ್ಟಗಿಲ್ಲದವನಿಗೆ 'ಇಂಥ ದಿನ ಬನ್ನಿ' ಎಂದು ಡೇಟು ಕೊಡುತ್ತಿದ್ದ. ಆದರೆ, ಅದೇ ದಿನ ಆತ ಮನೆ ಬಿಟ್ಟು ನಡೆಯುತ್ತಿದ್ದ. ಪತ್ರಕರ್ತರನ್ನು ಹೀಗೆಲ್ಲ ವಂಚಿಸುವುದೂ ಆತನಿಗೊಂದು ಚಟ.
ಆದರೆ, ಈ ವಂಚನೆಯ ಹಿಂದೆಯೂ ಆತನಿಗೊಂದು ಫೋಬಿಯಾ ಕಾಡುತ್ತಿತ್ತು. ಪತ್ರಕರ್ತರು, ಅಂಚೆಯವರನ್ನು ಕಂಡರೆ ಹೆಮ್ಮಿಂಗ್ವೇ ಹೆದರುಪುಕ್ಕಲ. ಆರಂಭದಲ್ಲಿ ಪತ್ರಿಕೆಗಳಿಗೆ ಲೇಖನ, ಕಥೆ ಕಳುಹಿಸಿದಾಗಲೆಲ್ಲ ಅವು ತಿರಸ್ಕೃತವಾಗುತ್ತಿದ್ದವು. 'ಸಾಹಿತಿಗಳಿಗಿಂತ ಮೇಲ್ವರ್ಗದವರು ಈ ಪತ್ರಕರ್ತರು' ಎಂಬ ಭಾವ ಆತನಾಳದ ಭ್ರಮೆ. ಹಾಗೆ ತಿರಸ್ಕೃತಗೊಂಡ ಕಥೆಗಳನ್ನು ಅಂಚೆಯವನು ಹೊತ್ತು ತರುತ್ತಿದ್ದರಿಂದ, ಪ್ರೇಯಸಿಯ ಪತ್ರ ಬಂದರೂ ಆತಂಕದಲ್ಲೇ ಒಡೆದು ನೋಡುತ್ತಿದ್ದ.
ನಮ್ಮ ಅಂಬರೀಷ್ಗೂ ಆತನಷ್ಟು ರೇಸ್ಕೋರ್ಸ್ ಹುಚ್ಚಿಲ್ಲ. 'ಬ್ಯಾಟಕ್ಲಾನ್ ಕುದುರೆ ನನ್ನ ಮತ್ತೊಂದು ಹೆಂಡತಿ' ಅಂತ ಕರೆದಿದ್ದಾನೆ ಹೆಮ್ಮಿಂಗ್ವೇ. 'ನನಗೆ ಬೀಳುವ ಕನಸುಗಳಲ್ಲಿ ಬಹುತೇಕವೂ ಕುದುರೆಗಳೇ ಆಗಿರುತ್ತವೆ. ಎಚ್ಚರವಿದ್ದಾಗಲೂ ಸಂಗಾತಿ ಜತೆ ಕುದುರೆಯಾಗಿರುವೆ. ನಿದ್ದೆ ನನ್ನನ್ನು ಹಿಂಡುತ್ತಿರುವಾಗಲೂ ನಾ ಕುದುರೆಯಾಗಿ ಪ್ಯಾರಿಸಿನ ರೇಸ್ಕೋರ್ಸಿನಲ್ಲಿ ಓಡಾಡುವೆ' ಎಂದು ತನ್ನ ರೇಸ್ ಚಟಕ್ಕೆ ಸರಸದ ಬಣ್ಣ ಕಟ್ಟಿ ಬೆಳ್ಳಿಗಡ್ಡದ ಮೇಲೆ ಕೈಯ್ಯಾಡಿಸಿ ರಸಿಕ ಕಳೆ ಬೀರುತ್ತಿದ್ದ.
ಸ್ನೇಹಿತ ಹ್ಯಾಚ್ನರ್ ಕೇಳಿದ, 'ನೀನು ಇಷ್ಟೆಲ್ಲ ಕುಡಿಯುತ್ತೀಯಲ್ಲ. ಕುಡಿದಾಗ ಒಬ್ಬಳು ಹುಡುಗಿ ಬೇಕು ಎಂದೂ ಹಂಬಲಿಸುತ್ತೀಯಲ್ಲ. ಆದರೆ, ನನ್ನಂತೆ ಸಿಗರೇಟು ಸೇದಬೇಕೆಂದು ಅನ್ನಿಸಲಿಲ್ಲವಾ?'. ಅದಕ್ಕೆ ಹೆಮ್ಮಿಂಗ್ವೇ ಹೇಳಿದ, 'ನಾನು ಸಿಗರೇಟು ಎಳೆದರೆ ರೇಸಿಗೆ ಹೋಗುವುದನ್ನೇ ನಿಲ್ಲಿಸಬೇಕಾಗುತ್ತದೆ. ಕುದುರೆಯ ಬೆವರನ್ನು ಮೂಸಿ ಅದರ ಸಾಮರ್ಥ್ಯವನ್ನು ಗ್ರಹಿಸಬಲ್ಲೆ. ಈ ಸಿಗರೇಟು ನನ್ನ ಗ್ರಹಣ ಶಕ್ತಿಯನ್ನು ಸುಡುತ್ತದೆ'.
ಮೆಡಿಟರೇನಿಯನ್ ತೀರದಲ್ಲಿ ವಾಸವಿದ್ದಾಗ ಅಲ್ಲೆಲ್ಲೂ ಕುದುರೆಯ ರೇಸ್ಗಳು ಕಾಣದಿದ್ದನ್ನು ನೋಡಿ, ಬುಲ್ ಫೈಟಿಂಗಿನ ಗೀಳಿಗೆ ಬಿದ್ದ. ಅದೂ ಬೇಜಾರೆನಿಸಿದಾಗ ಶಿಕಾರಿ ಮಾಡಲೆಂದೇ ಹೆಮಿಂಗ್ವೇ ಆಫ್ರಿಕ ಕಾಡಿಗೆ ನಡೆದ. ಹೀಗೆ ಕೀನ್ಯಾ ಕಾಡಿನಲ್ಲಿ ಸುತ್ತಾಡುವಾಗ ಎಲ್ಲೋ ಮಧ್ಯ ಸಿಲುಕಿ, ವಾರಗಟ್ಟಲೆ ನಾಪತ್ತೆಯಾದ. ಆಗ ಆಫ್ರಿಕ, ಪ್ಯಾರಿಸ್, ಇಂಗ್ಲೆಂಡಿನ ಪತ್ರಿಕೆಗಳು ಹೆಮ್ಮಿಂಗ್ವೇ ಸತ್ತೇ ಹೋದ ಅಂತಲೇ ಬರೆದವು. ಅವನ ಶವಕ್ಕಾಗಿ ಶೋಧ ನಡೆಯಿತು. ಸಾಯುವವನಾ ಅವನು? ಗಾಯಗೊಂಡಿದ್ದ. ಅವನನ್ನು ಅಲ್ಲಿಂದ ಹೊತ್ತು ತರಲು ಹೋದ ನ್ಯಾನೊ ವಿಮಾನಕ್ಕೂ ಬೆಂಕಿ ತಗುಲಿ ಮತ್ತೊಂದಿಷ್ಟು ಮೈ ಸುಟ್ಟುಕೊಂಡ ಹೆಮ್ಮಿಂಗ್ವೇ.
ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದ. ಯಾಕೋ ಅವನಿಗೆ ಹಾಸಿಗೆ ಮೇಲಿನ ಬದುಕು ಹೇಳತೀರದಂತೆ ಅಣಕಿಸಿತು. ಶಿಕಾರಿ ಇಲ್ಲ, ಮೀನು ಹಿಡಿಯಲೂ ಆಗುವುದಿಲ್ಲ, ರೇಸ್ಕೋರ್ಸಿನ ಪೆವಿಲಿಯನ್ನಲ್ಲಿ ಕೂತು ಬ್ಯಾಟಕ್ಲಾನ್ಗೆ ಬೆಂಬಲಿಸಲೂ ಚೈತನ್ಯವಿಲ್ಲ. 'ಗೂಳಿ ಕಾಳಗದಲ್ಲಿ ಸೋತ ಮುದಿ ಗೂಳಿಯಾದೆ ನೀನು' ಅಂತ ಒಳಗೊಳಗೆ ಯಾವನೋ ಕೇಡಿ ಕೂಗಿ ಕೆಣಕಿದಂತಾಯಿತು. ಜಗತ್ತು 'ಇನ್ನು ನಿನ್ನ ಕೈಯಲ್ಲಾಗಲ್ಲ' ಅಂತ ವ್ಯಂಗ್ಯವಾಡಿದಂತಾಯಿತು. ಆ ಗಾಯದ ನಡುವೆ, ಮೈಗೆಗರಿಬಂದ ಈ ಮುಪ್ಪಿನ ನಡುವೆ, ಹತ್ತು ಹಲವು ಮಾನಸಿಕ ಸೋಲುಗಳನ್ನು ಮೆಟ್ಟುತ್ತಲೇ ಆತ ಬರೆದಿದ್ದು 'ದಿ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ'.
ಇವನಂತೆ ಆ ಕೃತಿಯಲ್ಲಿ ಅಸಹಾಯಕನಾಗಿ ಪಾತ್ರಗೊಂಡವನು ಸ್ಯಾಂಟಿಯಾಗೋ ಎಂಬ ಇನ್ನೇನು ಉದುರಿ ಬೀಳಲಿದ್ದಾನೆ ಎಂಬಂಥ ಮುದುಕ. ನಡು ಸಾಗರದಲ್ಲಿ ಅಡ್ಡಗಟ್ಟಿದ ಎಷ್ಟೋ ಶಾರ್ಕುಗಳ ಬೆನ್ನು ಮುರಿದು, ಕ್ವಿಂಟಾಲು ತೂಗುವ ಮೀನುಗಳನ್ನು ನೆಗ್ಗಿ ಹಡಗಿಗೆ ಹಾಕಿದವ ಆಗ ಮುಪ್ಪಿಗೆ ಹೆದರಿ ಅಡಗಿ ಕೂತಿದ್ದ. ಜಗತ್ತು ಸ್ಯಾಂಟಿಯಾಗೋನನ್ನು ಅಣಕಿಸುತ್ತದೆ, 'ನೀನು ಕೈಲಾಗದವ'. ಆಗ ಸ್ಯಾಂಟಿಯಾಗೋ ಹಾಸಿಗೆಯಿಂದೆದ್ದು ಹೊರಡುತ್ತಾನೆ. ಒಬ್ಬನೇ ದೋಣಿಯೇರಿ ಟನ್ನು ಗಾತ್ರದ ಮರ್ಲಿನ್ ಮೀನನ್ನು ಎರಡು ರಾತ್ರಿ ಎರಡು ಹಗಲು ಬೇಟೆಯಾಡಿ ಕೊಂದು, ಅದರ ರಕ್ತಕ್ಕೆ ಮುತ್ತಿಕೊಳ್ಳುವ ಶಾರ್ಕುಗಳನ್ನು ಹಾರ್ಪೂನ್ನಿಂದ ಗುದ್ದಿ ಓಡಿಸುತ್ತಾನೆ. ಹತ್ತಾರು ಸವಾಲುಗಳ ನಡುವೆಯೂ ಆ ಬೃಹತ್ ಮರ್ಲಿನ್ ಮೀನನ್ನು ದಡಕ್ಕೆಳೆದು ತಂದು ತನ್ನ ಸಾಮರ್ಥ್ಯದ ಜೀವಂತಿಕೆಯನ್ನು ತೆರೆದಿಡುತ್ತಾನೆ ಸ್ಯಾಂಟಿಯಾಗೋ.
ತನ್ನ ಕೈಯಲ್ಲಾಗದಿದ್ದರೆ ಕೃತಿಯ ಪಾತ್ರಗಳ ಕೈಯಲ್ಲಾದರೂ ಬೇಟೆಯ ಚಟವನ್ನು ವರ್ಗಾಯಿಸಿ, ತಾನು ಕೈಲಾಗದವನಲ್ಲ ಎಂಬುದನ್ನು ತೋರಿಸಿಕೊಟ್ಟ ಹೆಮ್ಮಿಂಗ್ವೇ. ಇದೇ ಕೃತಿ ಅವನಿಗೆ 1954ರಲ್ಲಿ ನೋಬೆಲ್ ತಂದುಕೊಟ್ಟಿತು. ಈತ ಪ್ರಚಾರದಿಂದ ಎಷ್ಟು ದೂರವಿದ್ದನೆಂದರೆ, ನೋಬೆಲ್ ಗೌರವ ಸ್ವೀಕರಿಸಲೂ ಹೋಗಲಿಲ್ಲ. ಇನ್ನ್ಯಾರನ್ನೋ ಕಳುಹಿಸಿಕೊಟ್ಟ. ಅವರ ಕೈಗೆ ತನ್ನ ಭಾಷಣದ ಚೀಟಿ ಇಟ್ಟು, ವಿಮಾನಾಪಘಾತದ ನೆಪ ಹೇಳಿದ್ದ.
ಇಂದು ತೇಜಸ್ವಿ ಹುಟ್ಟಿದ ದಿನ. ಬದುಕನ್ನು ತಮ್ಮಿಷ್ಟದಂತೆ ಬರಮಾಡಿಕೊಂಡ ಇವರಿಬ್ಬರಲ್ಲಿ ಕೆಲವು ಸಾಮ್ಯತೆಗಳಂತೂ ಇದ್ದೇ ಇದೆ. ಇಬ್ಬರದ್ದೂ ಅಲೆಮಾರಿ ವ್ಯಕ್ತಿತ್ವವೇ. ಅನುಮಾನಗಳು ಕಾಡುತ್ತದೆ. ಹೆಮ್ಮಿಂಗ್ವೇ, ತೇಜಸ್ವಿ ಸೇರಿಕೊಂಡು ಆ ಪರಲೋಕದಲ್ಲೀಗ ಎಷ್ಟು ಗಾಳ ಎಸೆದಿರಬಹುದು? ಹೆಮ್ಮಿಂಗ್ವೇನ ಕುಡಿತ ಕಂಡು ತೇಜಸ್ವಿ 'ಆ ಕೊಳಕು ಬಾಯಿ ಇಟ್ಕೊಂಡ್ ನನ್ಹತ್ರ ಬರ್ಬೇಡ ಮಾರಾಯ' ಅಂತ ಎಷ್ಟು ಸಲ ಬಯ್ದಿರಬಹುದು? ಇಂದಿನ ಬರ್ತ್ಡೇ ಖುಷಿಗೆ ಅವರಿಬ್ಬರು ಎಲ್ಲಿಗೆ ಶಿಕಾರಿ ಹೊರಟಿರಬಹುದು? 'ಮೂರು ಮದ್ವೆ ಆಗಿದ್ದೀಯಲ್ಲ, ಮೂಡಿಗೆರೆಯಲ್ಲಿದ್ದಿದ್ರೆ ನಿನ್ನ ಹಲಸಿನ ಮರಕ್ಕೆ ನೇತ್ ಹಾಕ್ತಿದ್ರು' ಅಂತ ತೇಜಸ್ವಿ ಆತನ ಹೆಗಲ ಮೇಲೆ ಕೈಯಿಟ್ಟು ಹೇಳಿರಲೂ ಸಾಕು.
= ಕೀರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


