ಮನ್ನಾ ಮೌನ
ಹಳೆಯ ಹಿಂದಿ ಹಾಡುಗಳು ಎಂದಾಕ್ಷಣ ಒಂದಷ್ಟು ಗಾಯಕರ ಹೆಸರುಗಳು ನೆನಪಿಗೆ ಬರುತ್ತವೆ. ರಫಿ, ಮುಖೇಶ್, ಕಿಶೋರ್‌ತ್ರಯರ ಹೊರತಾಗಿ ಬಿಡಿ ಬಿಡಿಯಾಗಿ ಹೆಸರು...

ಹಳೆಯ ಹಿಂದಿ ಹಾಡುಗಳು ಎಂದಾಕ್ಷಣ ಒಂದಷ್ಟು ಗಾಯಕರ ಹೆಸರುಗಳು ನೆನಪಿಗೆ ಬರುತ್ತವೆ. ರಫಿ, ಮುಖೇಶ್, ಕಿಶೋರ್‌ತ್ರಯರ ಹೊರತಾಗಿ ಬಿಡಿ ಬಿಡಿಯಾಗಿ ಹೆಸರು ಮಾಡಿದ ಹೇಮಂತ್‌ಕುಮಾರ್, ಜೇಸುದಾಸ್‌ರಂಥವರೂ ಇದ್ದಾರೆ. ಈ ಎಲ್ಲರಿಗಿಂತ ಮುನ್ನ ಹೆಸರು ಮಾಡಿದ ಇನ್ನೊಬ್ಬ ಮಹಾನ್ ಗಾಯಕ ಮನ್ನಾ ಡೇ.
ಬಂಗಾಲಿ ಗಾಯಕ ಮುಂಬೈಗೆ ಹೋಗಿ ಭಾರತೀಯ ಗಾಯಕರಾದದ್ದು, ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ ಹಾಡಿದ್ದು, ಹಾಡುತ್ತಲೇ ಸ್ವರಸಾಮ್ರಾಟರಾದದ್ದು ಸಾಮಾನ್ಯ ಸಂಗತಿಯಲ್ಲ. ಶಿಸ್ತು, ಶ್ರದ್ಧೆಯಿಂದ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ, ಸ್ವರ ಮಾಂತ್ರಿಕ, ಗಾನ ಗಾರುಡಿಗ ಎನಿಸಿಕೊಂಡಿದ್ದು, ಸ್ವರಶುದ್ಧಿಯ ಆರಾಧಕರಾಗಿ, ದಿಗ್ಗಜರಿಂದ ಸೈ ಎನಿಸಿಕೊಂಡು ಸಂಗೀತದಲ್ಲಿ ಸಿದ್ಧಿ ಸಾಧಿಸಿದ ಸಂಗೀತ ಸಾಧಕರಿವರು.
ಮನ್ನಾ ಡೇ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ. ಇವರ ಮೂಲ ಹೆಸರು ಪ್ರಬೋಧ್ ಚಂದ್ರ ಡೇ. ಕೊಲ್ಕತ್ತಾದಲ್ಲಿ ಬಂಗಾಲಿ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಉಸ್ತಾದ್ ಅಮಾನ್ ಅಲಿಖಾನ್ ಹಾಗೂ ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದಾರೆ. 1943ರಲ್ಲಿ 'ತಮನ್ನಾ' ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಹೊರಹೊಮ್ಮಿದರು.
ಅತಿ ಜನಪ್ರಿಯ ಎನಿಸಿಕೊಂಡಿದ್ದ ಪಡೋಸನ್ ಚಿತ್ರದಲ್ಲಿ ಕಿಶೋರ್ ಕುಮಾರ್ ಅವರೊಂದಿಗೆ ಎಕ್ ಚತುರ್ ನಾರ್ ಕರ್‌ಕೇ ಸಿಂಗಾರ್ ಎಂದು ಡ್ಯುಯೆಟ್ ಹಾಡಿದ್ದ ಮನ್ನಾಡೇ ಹಿಂದಿ ಹಾಡುಗಳ ಜೊತೆಗೆ ಬೆಂಗಾಲಿಯ 1262 ಹಾಡುಗಳಷ್ಟೇ ಅಲ್ಲದೆ, ಭೋಜ್‌ಪುರಿ, ಮರಾಠಿ, ಪಂಜಾಬಿ, ಅಸ್ಸಾಮಿ, ಒರಿಯಾ, ಗುಜರಾತಿ, ಕನ್ನಡ, ಮಲಯಾಳಂ ಭಾಷೆಗಳಲ್ಲೂ ತಮ್ಮ ಗಾಯನ ಚಾತುರ್ಯ ತೋರಿಸಿದ್ದಾರೆ.
ಹಿಂದಿಯ 'ಏ ಮೇರೆ ಜೊಹರ ಜಬೀನ್..., ಜಿಂದಗೀ..ಕೈಸಿ ಹೈ ಪಹೇಲಿ ಹಾಯ್..., ಪೂಛೋ ನ ಕೈಸೆ.., ಲಾಗಾ ಚುನರೀ ಮೆ ದಾಗ್.., ಏ ಭಾಯ್ ಜರಾ ದೇಖ್ ಕೆ ಚಲೊ, ಯೇ ದೋಸತೀ.. ಹಮ್ ನಹೀ ಛೋಡೆಂಗೇ' ಮುಂತಾದ ಜನಪ್ರಿಯ ಗೀತೆಗಳಿಂದ ಜನಮನ ಸೂರೆಗೊಂಡಿದ್ದಾರೆ. ಎಲ್ಲ ಖ್ಯಾತ ಸಂಗೀತ ನಿರ್ದೇಶಕರ ರಾಗಸಂಯೋಜನೆಗಳಿಗೆ ತಮ್ಮ ಕಂಠ ಒದಗಿಸಿದ ಮನ್ನಾ ಡೇ, 3500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಯುಗಳ ಗೀತೆ, ಪ್ರೇಮ ಗೀತೆಗಳ ಮೂಲಕ ಯುವ ಹೃದಯಗಳಲ್ಲಿ ನೆಲೆಸಿದ ಮನ್ನಾ ಡೇ, ಹೆಚ್ಚಾಗಿ ಹಿಂದಿ ಮತ್ತು ಬಂಗಾಳಿ ಚಿತ್ರಗಳಿಗೆ ಕಂಠದಾನ ಮಾಡಿದ್ದಾರೆ.
1990ರವರೆಗೆ, ಅಂದರೆ ಐದು ದಶಕ ಹಿಂದಿ ಚಿತ್ರರಂಗವನ್ನು ಆಳಿದ ಮನ್ನಾ ಡೇ, ಮೊಹಮದ್ ರಫಿ, ಮುಖೇಶ್, ಕಿಶೋರ್‌ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ತಲತ್, ಗೀತಾದತ್‌ರಂತಹ ಹಿರಿಯ ಹಾಡುಗಾರರಿಗೇ ಹಿರಿಯಣ್ಣನಾಗಿ ಮೆರೆದವರು. ಮನ್ನಾ ಡೇ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದು. 1945ರ ಸಮಯ. ಮುಖೇಶ್ ಎಂಬ ಗಾಯಕ ಆಗ ತಾನೇ ಉದಯವಾಗುತ್ತಿದ್ದ ಕಾಲ. ಪೆಹ್ಲಿ ನಜರ್ ಚಿತ್ರ ದಿಲ್ ಜಲ್‌ತಾ ಹೈ ತೊ ಜಲ್‌ನೇ ದೇ ಎಂಬ ಹಾಡು ಕೇಳಿದ ಸಿನಿ ರಸಿಕರು ಮೊದಮೊದಲು ಅದನ್ನು ಮನ್ನಾ ಡೇ ಹಾಡಿದ ಹಾಡು ಎಂದುಕೊಂಡೇ ಕೇಳುತ್ತಿದ್ದರಂತೆ. ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮುಖೇಶ್ ಆಗ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದ್ದ ಮನ್ನಾ ಡೇ ಅವರ ಕಂಠವನ್ನು ಅನುಕರಿಸಿದರೆ ನಾನೂ ಅವರಂತೆಯೇ ಹೆಸರು ಮಾಡಬಹುದು ಎಂಬ ಯೋಚನೆಯಿಂದ ಥೇಟ್ ಅವರಂತೆಯೇ ಹಾಡಿದ್ದರು. ನಂತರ ಮುಖೇಶ್ ತಮ್ಮ ಮೂಲಕಂಠದಲ್ಲಿ ಹಾಡಲು ಶುರುಮಾಡಿದ್ದು. ಮನ್ನಾ ಡೇ ಸಲೀಲ್ ಚೌಧರಿ ಅವರ ಜೊತೆಗೂಡಿ ಅನೇಕ್ ಹಿಟ್ ಹಾಡುಗಳನ್ನು ಕೊಟ್ಟವರು. ಶಂಕರ್ ಜೈಕಿಶನ್ ಮತ್ತು ರಾಜ್‌ಕಪೂರ್ ಅವರೊಂದಿಗಿನ ಮನ್ನಾ ಸಿನಿಪಯಣ ಆರಂಭವಾಗಿದ್ದು ಆವಾರಾ ಚಿತ್ರದಿಂದ. ಅದಾದ ನಂತರ ಅದು ಶ್ರೀ 420, ಚೋರಿ ಚೋರಿ, ಮೇರಾ ನಾಮ್ ಜೋಕರ್ ಚಿತ್ರಗಳ ಮೂಲಕ ಮುಂದುವರಿಯಿತು. ಅದರ ಬಳಿಕ ಆಗಿನ ಹೊಸ ಪೀಳಿಗೆಯ ಸಂಗೀತ ನಿರ್ದೇಶಕರು ಎನಿಸಿಕೊಂಡಿದ್ದ ಕಲ್ಯಾಣ್‌ಜೀ ಆನಂದ್‌ಜೀ ಮತ್ತು ಲಕ್ಷ್ಮೀಕಾಂತ್ ಪ್ಯಾರೆಲಾಲ್ ಜೋಡಿ ಕೂಡ ಮನ್ನಾ ಡೇ ಅವರನ್ನು ಅಪ್ಪಿಕೊಂಡಿತು. ಆರ್.ಡಿ.ಬರ್ಮನ್ ಅವರ ಸಂಗೀತದ ಆವೋ ಟ್ವಿಸ್ಟ್ ಕರೇ, ಪ್ಯಾರ್ ಕರ್‌ತಾ ಜಾ ಹಾಡುಗಳು 1965ರ ಸೂಪರ್ ಹಿಟ್ ಎನಿಸಿಕೊಂಡವು. ಲಪಕ್ ಚಪಕ್ ತೂ ಆರೇ, ಲಗಾ ಚುನರೀ ಮೇ ದಾಗ್, ಝವಕ್ ಝವಕ್ ತೊರೆ ಬಾಜೇ ಪಾಯಲಿಯಾ, ದಿಲ್ ಕೀ ಗಿರಹ್ ಛೋಡ್ ದೋ ಮುಂತಾದ ಹಾಡುಗಳು ಮನ್ನಾ ಡೇ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದಂಥವು.
ಆಶಾ ಭೋಂಸ್ಲೆ ಅವರೊಂದಿಗೆ 130 ಹಾಡುಗಳನ್ನು ಹಾಡಿರುವ ಮನ್ನಾ ಡೇ, ಲತಾ ಮಂಗೇಶ್ಕರ್ ಅವರ ಜೊತೆ 106 ಹಾಡುಗಳನ್ನು ಹಾಡಿದ್ದಾರೆ. ಹಮ್‌ದರ್ದ್ ಚಿತ್ರದಲ್ಲಿನ 'ರುತ್ ಆಯೇ ರುತ್ ಜಾಯೇ...' ಹಾಡಿನಲ್ಲಿ ಲತಾ ಜತೆ ಹಾಡಿರುವ ಹಾಡು ಇವರ ಪ್ರತಿಭೆಗೊಂದು ಸಾಕ್ಷಿ. ನಾಲ್ಕು ರಾಗಗಳಲ್ಲಿ ವಿಭಿನ್ನ ಧಾಟಿಯಲ್ಲಿ ಹಾಡಿರುವ ಈ ಹಾಡು ಮನಸೂರೆಗೊಳ್ಳುವ ಹಾಡುಗಳಲ್ಲೊಂದು. ಕಿಶೋರ್ ಜೊತೆ ಡೇ ಹಾಡಿರುವ 6 ಹಾಡುಗಳೂ ಸೂಪರ್ ಹಿಟ್. 80ರ ದಶಕದಲ್ಲಿ ಜಂಜೀರ್ ಚಿತ್ರಕ್ಕಾಗಿ ಹಾಡಿದ ಯಾರಿ ಹೈ ಇಮಾನ್ ಮೇರಿ ಹಾಡು ಮನ್ನಾ ಡೇ ಅವರ ಜನಪ್ರಿಯ ಹಾಡುಗಳಲ್ಲೊಂದು.
2005ರಲ್ಲಿ ಬೆಂಗಾಲಿ ಭಾಷೆಯಲ್ಲಿ ಜಿಬೊನಿರ್ ಜಲ್ಸಾಗೋರೆ ಎಂಬ ಅವರ ಆತ್ಮಕಥೆ ಪ್ರಕಟವಾಗಿತ್ತು. ಅದು ನಂತರ ಇಂಗ್ಲಿಷ್‌ನಲ್ಲಿ ಮೆಮೊರೀಸ್ ಕಮ್ ಅಲೈವ್, ಹಿಂದಿಯಲ್ಲಿ ಯಾದೇ ಜೀ ಉಠೀ ಎಂದು ಅನುವಾದಿತಗೊಂಡಿತ್ತು. ಪದ್ಮಶ್ರೀ, ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ ರಾಗ, ಸ್ವರ, ಲಯಗಳ ಲೋಕದಲ್ಲಿ ವಿಹರಿಸುತ್ತಲೇ, ಸಂಗೀತವನ್ನು ಸಂಪೂರ್ಣವಾಗಿ ಆಸ್ವಾದಿಸಿ, ಅನುಭವಿಸಿದ್ದಾರೆ. ಸಂಗೀತ ಗಾರುಡಿಗನಿಗೆ ಕರ್ನಾಟಕವೆಂದರೆ ಅದೆಂಥ ಸೆಳೆತ! ವೃತ್ತಿ ಜೀವನದ 50 ವರ್ಷಗಳನ್ನು ಕಳೆದದ್ದು ಮುಂಬೈನಲ್ಲಾದರೂ ತಮ್ಮ ಕೊನೆಯ ದಿನ ಕಳೆಯಲು ಆರಿಸಿಕೊಂಡಿರುವುದು ಮಾತ್ರ ಬೆಂಗಳೂರನ್ನು. ಕಳೆದ ವರ್ಷ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ ಮನ್ನಾ ಡೇ ಬೆಂಗಳೂರಿನ ಕಲ್ಯಾಣನಗರದಲ್ಲಿ ವಾಸವಿದ್ದರು.
ಕರ್ನಾಟಕದ ನಂಟು
60ರ ದಶಕದಲ್ಲಿ ಬಿಡುಗಡೆಯಾದ ಉದಯಕುಮಾರ್-ಜಯಂತಿ ನಟಿಸಿದ 'ಕಲಾವತಿ' ಚಿತ್ರದ 'ಕುಹೂ ಕುಹೂ.. ಕುಹೂ ಕುಹೂ.. ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ...' ಹಾಗೂ 'ಜಯತೆ ಜಯತೆ ಸತ್ಯಮೇವ ಜಯತೆ...' ಹಾಡುಗಳು ಅವರ ಕಂಠಸಿರಿಯಿಂದ ಹೊಮ್ಮಿವೆ. ಕನ್ನಡದಲ್ಲಿ ಒಟ್ಟು ಏಳು ಹಾಡುಗಳನ್ನು ಹಾಡಿದ ಮನ್ನಾ ಡೇ ಆ ಏಳು ಹಾಡುಗಳಲ್ಲಿಯೇ ತಮ್ಮ ಅದ್ಭುತ ಛಾಪನ್ನು ಮೂಡಿಸಿದ್ದಾರೆ. ಈಗಲೂ ಇವು ಬಹಳ ಜನಪ್ರಿಯ ಹಾಡುಗಳೇ. ಈ ಹಾಡುಗಳ ಮೂಲಕ ಮನ್ನಾ ಡೇ ಕನ್ನಡದವರಾದದ್ದು ಕನ್ನಡಿಗರಿಗೆಲ್ಲ ಹೆಮ್ಮೆಯ, ಅಭಿಮಾನದ ಸಂಗತಿ.
ಮನ್ನಾ ಡೇ ಸಂಗೀತ ಲೋಕದ ದಿಗ್ಗಜ. ಅವರ ಹಾಡುಗಳ ನೆನಪು ಸಮುದ್ರದಷ್ಟು ವಿಶಾಲ. ವಿಶೇಷವಾಗಿ ಅವರ ಮಧುಶಾಲಾ ಹಾಡು ಅದ್ಭುತ.
-ಅಮಿತಾಭ್ ಬಚ್ಚನ್
ದಂತಕಥೆಯಾಗಿದ್ದ ಗಾಯಕನನ್ನು ಕಳೆದುಕೊಂಡಿದ್ದೇವೆ. ಆದರೆ ಅಮರವಾಗಿರುವ ಅವರ ಕಂಠ ನಮ್ಮೊಂದಿಗೆ ಎಂದೆಂದೂ ಇರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ
-ನರೇಂದ್ರ ಮೋದಿ
ಮನ್ನಾ ಡೇ ಸಾಬ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ತಮ್ಮ ಹಾಡುಗಳ ಮೂಲಕ ಇನ್ನೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿ ಉಳಿಯುತ್ತಾರೆ.
-ಶ್ರೇಯಾ ಘೋಷಾಲ್
ಕಿಶೋರ್, ರಫಿ, ಮುಖೇಶ್ ಅವರೊಂದಿಗೆ ಮನ್ನಾ ಡೇ ಎಂದೆಂದಿಗೂ ನೆನಪಿನಲ್ಲಿರುತ್ತಾರೆ. ಏ ಮೇರೆ ಪ್ಯಾರೇ ವತನ್, ಎಕ್ ಚತುರ್ ನಾರ್, ವಾಹ್ ಎಂಥ ಹಾಡುಗಳು!
-ಕುನಾಲ್ ಕೊಹ್ಲಿ
- ಶಶಿರೇಖಾ ಹೆಗಡೆ
rekhatumbe@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


