ಸಾಪ್ತಾಹಿಕಪ್ರಭ

ಒಳ್ಳೇ ರಸ್ತೆ, ಆದರೆ...

ಭಾರತೀಯ ಸಿನಿಮಾ ಮತ್ತೆ ಆಸ್ಕರ್‌ನಲ್ಲಿ ಸದ್ದುಮಾಡಿದೆ. ಹಾಗೆ ನೋಡಿದರೆ ಮೊದಲಿನಿಂದಲೂ ಒಂದಿಷ್ಟು ಚಿತ್ರಗಳು ಆಸ್ಕರ್ ಅಂಗಳದಲ್ಲಿ ತಮ್ಮ ತನವನ್ನು ...

ಒಳ್ಳೇ ರಸ್ತೆ, ಆದರೆ...
Published On :

ಚಿತ್ರ: ದಿ ಗುಡ್ ರೋಡ್ (2013)
ಭಾಷೆ: ಗುಜರಾತಿ
ನಿರ್ದೇಶನ: ಜ್ಞಾನ್ ಕೊರಿಯಾ
ಅವಧಿ: 92 ನಿಮಿಷ
ತಾರಾಗಣ: ಅಜಯ್, ಸೋನಾಲಿ ಕುಲಕರ್ಣಿ, ಶ್ಯಾಮ್‌ಜಿ ಭಾಯ್ ಕೆರ್ಸಾಯಿ, ಪೂನಂ ಕೇಸರ್ ಸಿಂಗ್.


ಭಾರತೀಯ ಸಿನಿಮಾ ಮತ್ತೆ ಆಸ್ಕರ್‌ನಲ್ಲಿ ಸದ್ದುಮಾಡಿದೆ. ಹಾಗೆ ನೋಡಿದರೆ ಮೊದಲಿನಿಂದಲೂ ಒಂದಿಷ್ಟು ಚಿತ್ರಗಳು ಆಸ್ಕರ್ ಅಂಗಳದಲ್ಲಿ ತಮ್ಮ ತನವನ್ನು ತೋರಿಸುತ್ತಲೇ ಬಂದಿವೆ. ಆದರೆ, ಹಾಲಿವುಡ್ ನಿಯಂತ್ರಣದಲ್ಲಿರುವ ಆಸ್ಕರ್‌ನಲ್ಲಿ ನಮ್ಮವರು ಗೆದ್ದಿದ್ದು ಕಡಿಮೆ. ಈ ಬಾರಿ ಬಾಲಿವುಡ್ ಚಿತ್ರದ ಜೊತೆಗೆ ಗುಜರಾತ್‌ನಂಥ ಪ್ರಾದೇಶಿಕ ಭಾಷೆಯ ಚಿತ್ರವೊಂದು ಚರ್ಚೆ ಹುಟ್ಟುಹಾಕಿದೆ. ವಿದೇಶಿ ಚಿತ್ರಗಳ ವಿಭಾಗದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಲು ಹೊರಟ ಚಿತ್ರಗಳ ಪೈಕಿ ಹಿಂದಿಯ 'ಲಂಚ್ ಬಾಕ್ಸ್‌' ಹಾಗೂ ಗುಜರಾತಿನ 'ದಿ ಗುಡ್ ರೋಡ್‌' ಹೆಚ್ಚು ಗಮನ ಸೆಳೆಯಿತು. ಕೊನೆಗೆ ಗೌತಮ್ ಘೋಷ್ ಸಾರಥ್ಯದ ಆಯ್ಕೆ ಸಮಿತಿ 'ದಿ ಗುಡ್ ರೋಡ್‌' ಚಿತ್ರವನ್ನು ಅಂತಿಮಗೊಳಿಸಿದೆ.
ಜ್ಞಾನ್ ಕೊರಿಯಾ ನಿರ್ದೇಶನದ 'ದಿ ಗುಡ್ ರೋಡ್‌' ಚಿತ್ರಕ್ಕೆ ಆಸ್ಕರ್ ಲೇಡಿ ಒಲಿಯುತ್ತಾಳೋ ಇಲ್ಲವೋ ಅದು ಬೇರೆ ಮಾತು. ಆದರೆ, ಭಾರತೀಯ ಸಿನಿಮಾ ಎಂದಾಕ್ಷಣ ಬಾಲಿವುಡ್ ಎನ್ನುವವರ ನಡುವೆ ಒಂದು ಪ್ರಾದೇಶಿಕ ಚಿತ್ರ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ ಎನ್ನುವುದು ಮುಖ್ಯ. ಇರಾನಿನ ಮಜೀದ್ ಮಜೀದಿ ನಿರ್ದೇಶನದ ಸಿನಿಮಾಗಳನ್ನೇ ತೆಗೆದುಕೊಳ್ಳಿ. ಆತನ ಚಿತ್ರಗಳಲ್ಲಿ ಅಬ್ಬರವಿರಲ್ಲ, ವೈಭವವಂತೂ ದೂರ, ಪಾಳು ಬಿದ್ದ ರಸ್ತೆಗಳು, ಜೀವವಿಲ್ಲದ ಪಳೆಯುಳಿಕೆಗಳಂತಿರುವ ಊರುಗಳು, ಛಿದ್ರವಾದ ಸಂಬಂಧಗಳು, ಬದುಕಿನ ಭರವಸೆಗಳನ್ನೇ ಮರೆತ ಜನ, ದಟ್ಟದಾರಿದ್ರ್ಯದ ಭೂತದ ನೆರಳಿನಲ್ಲಿ ರೋಧಿಸುತ್ತಿರುವ ಜನರ ಚಿತ್ತಾರಗಳನ್ನು ಅದ್ಭುತವಾಗಿ ತೆರೆ ಮೇಲಿಟ್ಟವರು. ಹೀಗಾಗಿ ಜಾಫರ್ ಪನಾಯಿ, ಅಬ್ಬಾ ಕಿರೋಸ್ತಾಮಿ, ಮಕ್ಬಲ್ ಬಫ್, ಮಜೀದಿಯಂಥ ನಿರ್ದೇಶಕರಿಂದಲೇ ಇರಾನ್ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡುತ್ತಿದೆ. ಗುಜರಾತಿನ ಚಿತ್ರಕ್ಕೂ ಇರಾನಿ ಚಿತ್ರಗಳಿಗೂ ಏನು ಸಂಬಂಧ? ಒಮ್ಮೆ 'ದಿ ಗುಡ್ ರೋಡ್‌' ಅನ್ನು ಸೂಕ್ಷ್ಮವಾಗಿ ಗಮನಿಸಿ. ವಾಸ್ತವದ ರಸ್ತೆಯಲ್ಲಿ ತಣ್ಣಗೆ ಸಾಗುವ ಗುಜರಾತಿನ ಈ ಸಿನಿಮಾ ಇರಾನಿ ಚಿತ್ರಗಳನ್ನು ನೆನಪಿಸದಿದ್ದರೆ ಕೇಳಿ! ಒಂದು ರಸ್ತೆ, ಅದರ ಉದ್ದಕ್ಕೂ ಸಾಗುವ ಪಯಣದಲ್ಲಿ ಘಟಿಸುವ ಸನ್ನಿವೇಶಗಳು, ಆ ಸನ್ನಿವೇಶಗಳಲ್ಲಿ ಎದುರಾಗುವ ಪಾತ್ರಧಾರಿಗಳು, ಒಂದೊಂದರದ್ದು ಒಂದೊಂದು ಕಥೆ. ಒಂದು ಸಾಮಾನ್ಯ ರಸ್ತೆ ಇಷ್ಟೆಲ್ಲ ಕಥೆಗಳನ್ನು ಹೇಳಬಹುದೇ?  ಎನ್ನುವ ಅಚ್ಚರಿ  ಹುಟ್ಟಿಸುವಷ್ಟರ ಮಟ್ಟಿಗೆ 'ದಿ ಗುಡ್ ರೋಡ್‌' ಮೂಡಿಬಂದಿದೆ. ಯಾವುದೇ ಹೆದ್ದಾರಿಯಲ್ಲಿ ಸಾಗುವ ಪ್ರಯಾಣದಷ್ಟು ಈ ಚಿತ್ರದ ಕಥೆ ರೋಚಕವಲ್ಲದಿದ್ದರೂ, ಪ್ರತಿ ದೃಶ್ಯ, ಪ್ರತಿ ಪಾತ್ರವೂ ನಮ್ಮೊಳಗೆ ತಣ್ಣಗೆ ಕೂರುತ್ತದೆ. ಎಲ್ಲಿಂದಲೋ ಮತ್ತೆಲ್ಲಿಗೋ ಪಯಣ ಬೆಳೆಸಿರುವ ಗಂಡ, ಹೆಂಡತಿ, ಅವರ ಪುಟ್ಟ ಮಗು, ಹರೆಯಕ್ಕೆ ಕಾಲಿಡುವ ಮುನ್ನವೇ ಅನಾಥವಾಗಿ ರಸ್ತೆಯಲ್ಲಿ ಕಾಣುವ ಪುಟ್ಟ ಹುಡುಗಿ, ತನ್ನ ಸಾವಿನಿಂದ ಕುಟುಂಬಕ್ಕೆ ಸಿಗುವ ಆರ್ಥಿಕ ನೆರವಿನ ಕನಸು ಕಾಣುವ ಲಾರಿ ಡ್ರೈವರ್, ಕತ್ತಲ ಕೂಪದಲ್ಲಿ ತಮ್ಮ ದೇಹಗಳನ್ನು ಮಾರಾಟಕ್ಕಿಟ್ಟ ಹುಡುಗಿಯರು, ಇವರೊಂದಿಗೆ 'ನಾನಿದ್ದೇನೆ' ಎಂದು ಉದ್ದಕ್ಕೆ ಚಾಚಿಕೊಂಡಿರುವ ಹೈವೇ... ಇವು 'ದಿ ಗುಡ್ ರೋಡ್‌'ನ ಪಾತ್ರಧಾರಿಗಳು. ನಿರ್ದೇಶಕ ಜ್ಞಾನ್ ಕೊರಿಯಾಗೆ ಇದು ಮೊದಲ ನಿರ್ದೇಶನ ಎನ್ನಲಾಗದು. ಅಷ್ಟರಮಟ್ಟಿಗೆ ಅವರ ನಿರೂಪಣೆ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ.
ಒಂದು ಸಾಧಾರಣ ಕಥೆ ಮೂಲಕ ಮನುಷ್ಯನ ಈ ಹುಡುಕಾಟದ ಮನಸ್ಥಿತಿಯನ್ನು ನಿರ್ದೇಶಕರು ಇಲ್ಲಿ ತೆರೆದಿಡುತ್ತಾರೆ. ಒಂದು ಹಂತದಲ್ಲಿ ಹುಡುಕಾಟದ ಹೊಸ ಆಯಾಮ ಪಡೆದುಕೊಳ್ಳುವ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬೆನ್ನೆಲುಬಾಗಿ ನಿಲ್ಲುವುದು ಛಾಯಾಗ್ರಹಣ. ಅಮಿತಾಭ್ ಸಿಂಗ್‌ರ ಕ್ಯಾಮೆರಾ ಗುಜರಾತ್‌ನ ಬಟಾಬಯಲನ್ನು ಕಾವ್ಯವಾಗಿಸುತ್ತದೆ. ತೆರೆಯನ್ನು ಮಲ್ಲಿಗೆ ಗಿಡದಂತೆ ಅಲಂಕರಿಸುವ ರಣ್ ಆಫ್ ಕಚ್ ಬಯಲು ಪ್ರದೇಶವೇ ಇದಕ್ಕೆ ಸಾಕ್ಷಿ. ಅಜ್ಜಿಯನ್ನು ಸೇರಿಕೊಳ್ಳುವ ತವಕದಲ್ಲಿ ದಾರಿ ಮಧ್ಯ ತಪ್ಪಿಸಿಕೊಳ್ಳುವ ಬಾಲಕಿ, ಆಗಲೇ ತಮ್ಮ ಬದುಕಿನ ದಾರಿಗಳಿಂದ ಬೇರ್ಪಟ್ಟ ಬಾಲ ವೇಶ್ಯೆಯರು, ಅಪ್ಪ- ಅಮ್ಮನಿಂದ ಆಕಸ್ಮಿಕವಾಗಿ ತಪ್ಪಿಸಿಕೊಳ್ಳುವ ಬಾಲಕ ಮತ್ತು ಅವರ ಹುಡುಕಾಟ, ಇದರ ನಡುವೆ ತಣ್ಣಗೆ ಹರಡುವ ಬಡತನದ ನೆರಳು ಸೇರಿದಂತೆ ಸಾಮಾಜಿಕ ಸಮಸ್ಯೆಗಳನ್ನು ಯಾವುದೇ ಅಬ್ಬರವಿಲ್ಲದೆ ನಿರೂಪಿಸುತ್ತ ಸಾಗುವ ನಿರ್ದೇಶಕ ಜ್ಞಾನ್, ಮುಖ್ಯ ರಸ್ತೆಯಿಂದ ಕಾಲು ದಾರಿಗೆ ಪ್ರೇಕ್ಷಕನನ್ನು ಕರೆದೊಯ್ಯುತ್ತಾನೆ. ಆ ಮೂಲಕ ನೆಲದ ಸಂಸ್ಕೃತಿಯಲ್ಲಿ ಅಡಗಿರುವ ತಾಪತ್ರಯಗಳತ್ತ ನಮ್ಮ ಗಮನ ಸೆಳೆಯುತ್ತಾನೆ. ಇರಾನ್‌ನ ಬಹುತೇಕ ಚಿತ್ರಗಳಲ್ಲಿ ಕಾಣುವುದು ಇದನ್ನೇ.
ಇನ್ನು ಚಿತ್ರದ ಪಾತ್ರಗಳ ಅಭಿನಯದ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಎಲ್ಲರದ್ದು ಕಥೆಯಲ್ಲಿ ಒಂದು ಭಾಗ. ಆದರೆ ಇವರ ನಡುವೆ ತೀರಾ ಆಪ್ತವಾಗಿ ಕಾಡುವ ಪಾತ್ರ ಲಾರಿ ಚಾಲಕ ಪಪ್ಪು. ಒರಟು ಮುಖ, ಯಾವುದಕ್ಕೂ ಹೆಚ್ಚಿಗೆ ಪ್ರತಿಕ್ರಿಯಿಸದ ಆತನ ಸಣ್ಣ ನಗು ನೋಡುಗನನ್ನು ಆಕರ್ಷಿಸದೆ ಇರದು. ವಿಶೇಷವೆಂದರೆ, ಇಲ್ಲಿ ಲಾರಿ  ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ಯಾಮ್‌ಜಿ ನಿಜ ಜೀವನದಲ್ಲಿ ಲಾರಿ ಚಾಲಕನೇ. ಸುಮರ್‌ಸರ್ ಹಳ್ಳಿಯಿಂದ ಗುಜರಾತಿಗೆ ಸರಕು ಮತ್ತು ಕಸೂತಿ ಕಲೆಗಳ ಸಾಗಣೆ ಮಾಡುವ ಕೆಲಸ ಈತನದ್ದು. ಹಲವು ವರ್ಷಗಳಿಂದ ಲಾರಿ ಚಾಲಕನಾಗಿರುವ ಶ್ಯಾಮ್‌ಜಿ ಚಿತ್ರತಂಡಕ್ಕೆ ಆಕಸ್ಮಿಕವಾಗಿ ಕಂಡವನು. ಡೈಲಾಗ್ ಹೇಳುವುದನ್ನು ಮಾತ್ರ ಅಭ್ಯಾಸ ಮಾಡಿಕೊಂಡು ಅಭಿನಯಿಸಲು ಬಂದ ಶ್ಯಾಮ್‌ಜಿ, ಚಿತ್ರದಲ್ಲಿನ ಅವರ ಪಾತ್ರ ನಿಜ ಜೀವನಕ್ಕೆ ಹತ್ತಿರವಾಗಿತ್ತಂತೆ. ಆದರೆ, ಕೆಲವರಿಗೆ ಈ ಚಿತ್ರ ಕೆಟ್ಟದಾಗಿ ಕಂಡಿದೆ. ಆದರೆ, ಅಭಿವೃದ್ಧಿಯ ಸಂಕೇತದಂತೆ ಕಾಣುವ ಹೈವೆಯ ಅಕ್ಕಪಕ್ಕದ ಕಾಲು ದಾರಿಯ ಬದುಕು 'ದಿ ಗುಡ್ ರೋಡ್‌' ಚಿತ್ರಕ್ಕಿಂತ ಭಿನ್ನವಾಗಿಲ್ಲ. ಅದು ಗುಜರಾತ್ ಆದರೂ ಸರಿ, ಕರ್ನಾಟಕವಾದರೂ ಸರಿ. ಇಲ್ಲಿ ಗುಜರಾತಿನ ಹೈವೆ ಒಂದು ಸಂಕೇತವಷ್ಟೆ. ಈ ಕಥೆಯಲ್ಲಿ ಬದುಕಿನ ಯಾವುದೇ ರಸ್ತೆಯನ್ನೂ ನಿಲ್ಲಿಸಬಹುದು.

- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.