ರಂಭಾಪುರಿ ಪಲ್ಲಕ್ಕಿ

ಪಂಚ ಪೀಠಗಳಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀ ರಂಭಾಪುರೀ ಮಹಾಸಂಸ್ಥಾನ ಪೀಠವು ಆದಿ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿಸಲ್ಪಟ್ಟು ಇಲ್ಲಿಯವರೆಗೆ 120 ಜನ ಪರಮಾಚಾರ್ಯರನ್ನು ಕಂಡಿದೆ. ಇಂದಿನ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪೀಠದ 121ನೇ ಆಚಾರ್ಯರಾಗಿ ಅಧಿಕಾರ ವಹಿಸಿಕೊಂಡ ನಂತರ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಆಚರಿಸುತ್ತಾ, ಈ ಹಬ್ಬ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಕಳೆಗಟ್ಟುವಂತೆ ಮಾಡಿದ್ದಾರೆ.
ದರ್ಬಾರ್ ಇತಿಹಾಸ
ರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ಶಿವಾನಂದ ಶಿವಾಚಾರ್ಯರು ಪೀಠದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ದಸರಾ ದರ್ಬಾರನ್ನು ಧಾರ್ಮಿಕ ಸಾಮಾಜಿಕ ಚಿಂತನೆಗಳ ಕಾರ್ಯಕ್ರಮದೊಂದಿಗೆ ಪರಿವರ್ತಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಶ್ರೀ ಪೀಠಕ್ಕೆ ಸೀಮಿತವಾಗಿದ್ದ ಈ ದಸರಾ ಹಬ್ಬವನ್ನು ಶ್ರೀ ಶಿವಾನಂದ ಶಿವಾಚಾರ್ಯರು 1925ನೇ ಸಾಲಿನಿಂದ ನಾಡಿನ ಎಲ್ಲೆಡೆ ಆಚರಣೆ ಮಾಡಲು ಅನುವು ಮಾಡಿಕೊಟ್ಟರು. 1934ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರ್ ಆಹ್ವಾನದ ಮೇರೆಗೆ ಮೈಸೂರು ಅರಮನೆಗೆ ಆಗಮಿಸಿ ದಸರಾ ದರ್ಬಾರ್ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ನಂತರ ಪೀಠಾರೋಹಣ ಮಾಡಿದ ಶ್ರೀ ವೀರಗಂಗಾಧರ ಶಿವಾಚಾರ್ಯರು, ಶ್ರೀ ವೀರರುದ್ರಾಮುನಿ ಶಿವಾಚಾರ್ಯರು ಹಾಗೂ ಇಂದಿನ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರು ದಸರಾ ಹಬ್ಬವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸುತ್ತಾ ಬಂದಿದ್ದಾರೆ. ಈ ಉತ್ಸವದಲ್ಲಿ ನಡೆಯುವ ಧರ್ಮ ಸಮ್ಮೇಳನ ಕಾರ್ಯಕ್ರಮಗಳು ಜನರನ್ನು ಸಂಕುಚಿತ ಭಾವನೆಯಿಂದ ದೂರ ಮಾಡಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಂಚಿಕೊಳ್ಳುವ ಕೆಲಸ ಮಾಡುತ್ತಾ ಬಂದಿದೆ.
ಶ್ರೀಗಳು ಒಂದೊಂದು ದಿನದ ಸಭಾ ಕಾರ್ಯಕ್ರಮದಲ್ಲಿ ಒಂದೊಂದು ಬಗೆಯ ಪೋಷಾಕು ಧರಿಸುತ್ತಾರೆ. ಪ್ರತಿದಿನದ ಕೊನೆಯಲ್ಲಿ ನಡೆಯುವ ನಜರ್ ಸಮರ್ಪಣೆ ಆಕರ್ಷಣೀಯ. ಭಕ್ತಾದಿಗಳು ಶ್ರೀಗಳಿಗೆ ಗೌರವ ಸಮರ್ಪಿಸಿ ಮರಳುವಾಗ ವೇದಿಕೆಗೆ ಬೆನ್ನು ತೋರಿಸದೆ ಹಿಮ್ಮಗ್ಗಲಾಗಿ ನಡೆದು ಹೋಗುವುದು ಸಂಪ್ರದಾಯ. ಈ ಸಂಪ್ರದಾಯ ಇತ್ತೀಚೆಗೆ ಕೈಬಿಡಲಾಗಿದೆ. 10 ದಿನಗಳ ಕಾಲವೂ ಜಗದ್ಗುರುಗಳು ವಿಶ್ವಶಾಂತಿಗಾಗಿ ನಿತ್ಯ ಬೆಳಿಗ್ಗೆ ಭಕ್ತ ಸಮೂಹದ ಸಮ್ಮುಖದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. ಉತ್ಸವದ ಕೊನೆಯ ದಿನ ರಂಭಾಪುರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಲಿದ್ದು, ಅಂದು ಗುರುಗಳು ಶಮೀ ಸೀಮೋಲ್ಲಂಘನ ಮಾಡಿ ಶಮೀ ಪೂಜೆ ಸಲ್ಲಿಸಿ ನಂತರ ವೀರಸಿಂಹಾಸನಾರೋಹಣ ಮಾಡಿ ಧಾರ್ಮಿಕ ಸಂದೇಶ ಉಣಬಡಿಸುವರು.
- ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


