ಅಂಬಾರಿ ಸವಾರಿ

ವಿಜಯದಶಮಿ ದಿನ ನಾಡದೇವಿಯನ್ನು ಅಂಬಾರಿಯಲ್ಲಿ ಹೊತ್ತು ಮೆರೆಯುವ ಆನೆಗಳ ಮೆರವಣಿಗೆ ಇಲ್ಲವಾದರೆ ದಸರೆಯೇ ಅಪೂರ್ಣ. ಅದನ್ನು ನೋಡಲೆಂದೇ ಮೈಸೂರಿಗೆ ಜನಸಾಗರ ಹರಿದುಬರುತ್ತದೆ. 750 ಕಿಲೋ ಭಾರದ ಅಂಬಾರಿಯನ್ನು ಹಲವಾರು ಆನೆಗಳು ಮೈಲುಗಟ್ಟಲೆ, ವರ್ಷಗಟ್ಟಲೆ ಹೊತ್ತು ಇತಿಹಾಸ ಬರೆದಿವೆ ಎನ್ನಬಹುದು. ಐರಾವತ, ಬಿಳಿಗಿರಿರಂಗ, ದ್ರೋಣ, ಬಲರಾಮ, ಅರ್ಜುನ...ಮುಂತಾದ ಕೆಲವನ್ನು ಇಲ್ಲಿ ನೆನೆಯಬಹುದು.
ಹಿಂದೆ ಜಯಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಐರಾವತ, ಬಿಳಿಗಿರಿರಂಗ ಹೆಸರಿನ ಆನೆಗಳು ಅಂಬಾರಿ ಹೊತ್ತು ಸಾಗಿದ್ದವು. ಗಜರಾಜ ದ್ರೋಣ ಮಾತ್ರ ತನ್ನ ಸೌಮ್ಯ ಸ್ವಭಾವದಿಂದ ಮೋಡಿ ಮಾಡಿತ್ತು. ಸತತ 18 ಬಾರಿ ಅಂಬಾರಿ ಹೊತ್ತ ಹೆಗ್ಗಳಿಕೆ ಈ ಆನೆಯದ್ದು. ಇದರ ಮಾವುತ ದೊಡ್ಡಪ್ಪಾಜಿ. 1997ರಲ್ಲಿ ದಸರೆ ಮುಗಿಸಿ, ದ್ರೋಣ ವಾಪಸ್ ಬಳ್ಳೆ ಶಿಬಿರಕ್ಕೆ ಹೋದ. ಕಾಡಿನಲ್ಲಿ ಸೊಪ್ಪು ತಿನ್ನಲು ಹೋದಾಗ ಸೊಂಡಿಲಿಗೆ ಹೈಟೆನ್ಷನ್ ತಂತಿ ತಗುಲಿ ಅಕಾಲಿಕ ಮರಣಕ್ಕೀಡಾದ.
ಆತನ ಉತ್ತರಾಧಿಕಾರಿಯಾಗಿ ಬಲರಾಮ ಆನೆ 1998ರಿಂದ 2012ರವರೆಗೆ ಸಮರ್ಥವಾಗಿ ಕಾರ್ಯನಿರ್ವಹಿಸಿತು. ಸತತ 14 ಬಾರಿ ಅಂಬಾರಿ ಹೊತ್ತ ಕೀರ್ತಿ ಈತನಿಗಿದೆ. ಆತ 15ನೇ ಬಾರಿ ಅಂಬಾರಿ ಹೊರಬೇಕಿತ್ತು. ಆದರೆ ಆತನಿಗೆ ವಯಸ್ಸಾಗಿದೆ. ಬಲಹೀನನಾಗಿದ್ದಾನೆ. ಒಂದು ಕಣ್ಣಿನ ದೃಷ್ಟಿ ಮಂದವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಿಂದ ಅರ್ಜುನನಿಗೆ ಅಂಬಾರಿ ಹೊರುವ ಕೆಲಸ ವಹಿಸಲಾಗಿದೆ.
ಒಮ್ಮೆ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತ ಅನುಭವವಿದ್ದ ಅರ್ಜುನ ತನ್ನ ತುಂಟಾಟ ಹಾಗೂ ಮಾವುತನನ್ನು ಕೊಂದ ಕಾರಣದಿಂದ ದಸರೆಯಿಂದ ಕೆಲ ವರ್ಷ ಡಿಬಾರ್ ಆಗಿದ್ದ. ಕ್ರಮೇಣ ಮತ್ತೆ ದಸರಾ ಗಜಪಡೆ ಸೇರಿಕೊಂಡು, ನಿಶಾನೆ ಆನೆಯ ಪಾತ್ರ ನಿರ್ವಹಿಸುತ್ತಿದ್ದ. ಕಳೆದ ಬಾರಿ ಆತಂಕದ ನಡುವೆಯೂ ತನ್ನ ನಡವಳಿಕೆ ಸರಿಪಡಿಸಿಕೊಂಡು ಗಾಂಭೀರ್ಯದಿಂದ ಹೆಜ್ಜೆಹಾಕಿ ಎಲ್ಲರಿಂದ ಶಹಬ್ಬಾಸ್‌ಗಿರಿ ಪಡೆದ. ಈ ಬಾರಿಯೂ ಆತನೇ ಕ್ಯಾಪ್ಟನ್. ಕಳೆದ ವರ್ಷದವರೆಗೆ ಅಂಬಾರಿ ಹೊರುತ್ತಿದ್ದ ಬಲರಾಮ ಮೆರವಣಿಗೆಯ ಕೊನೆಯಲ್ಲಿ ಸಾಗುತ್ತಿದ್ದರೆ ನಿಶಾನೆ ಆನೆಯ ಪಾತ್ರ ನಿರ್ವಹಿಸುತ್ತಿದ್ದ ಅರ್ಜುನ ಮೊದಲು ಸಾಗುತ್ತಿದ್ದ. ಕಳೆದ ವರ್ಷದಿಂದ ಬಲರಾಮ- ಅರ್ಜುನರ ಪಾತ್ರಗಳು ಬದಲಾಗಿವೆ.
ಅರ್ಜುನನಿಗೆ ಈಗ 3 ವರ್ಷ. ಬಳ್ಳೆ ಆನೆ ಶಿಬಿರ, ಎತ್ತರ 2.80 ಮೀಟರ್, ಉದ್ದ 3.75 ಮೀಟರ್, ಅಂದಾಜು ತೂಕ 5,100 ಕೆ.ಜಿ. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಗಿತ್ತು. ಹಿಂದೆ ಒಮ್ಮೆ ವಾಪಸ್ ಮೆರವಣಿಗೆಯಲ್ಲಿ, ಕಳೆದ ವರ್ಷ 2ನೇ ಬಾರಿ ಅಂಬಾರಿ ಹೊತ್ತಿತ್ತು.
ಬಲರಾಮನಿಗೆ ಈಗ 55 ವರ್ಷ. ತಿತಿಮತಿ ಆನೆ ಶಿಬಿರ. ಎತ್ತರ 2.7 ಮೀಟರ್, ಉದ್ದ 3.77 ಮೀಟರ್, ಅಂದಾಜು ತೂಕ 4,950 ಕೆ.ಜಿ. ತುಂಬಾ ಸೌಮ್ಯ ಸ್ವಭಾವ. 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ತುಂಬಾ ಬಲಶಾಲಿ, ಸುಮಾರು 17 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ದ್ರೋಣನ ನಂತರ 14 ಬಾರಿ ಅಂಬಾರಿ ಹೊತ್ತಿದೆ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


