ಸನಾತನ ಸನಿದಪ

ಭಾರತ ಮಹತ್ವಪೂರ್ಣವಾದ ಅದ್ಭುತ ಇತಿಹಾಸವನ್ನು ಹೊಂದಿರುವ ರಾಷ್ಟ್ರ. ಅಷ್ಟೇ ಅಲ್ಲ, ವಿಶ್ವದಲ್ಲೇ ಅತ್ಯಂತ ಸನಾತನವಾದ ಸಂಸ್ಕೃತಿಯನ್ನು ಹಾಗೂ ಅದರ ಜ್ಞಾನದ ಹರವನ್ನು ಇಂದಿಗೂ ಜೀವಂತ ವಾಗಿ ಇಟ್ಟುಕೊಂಡಿರುವ ಏಕೈಕ ರಾಷ್ಟ್ರ ಎಂದರೆ ತಪ್ಪಲ್ಲ. ಕಾಲಕಾಲಕ್ಕೆ ಬದಲಾವಣೆಗಳು, ಆಂತರಿಕ ಕೋಲಾಹಲಗಳು, ಬಾಹ್ಯ ಸಂಸ್ಕೃತಿಗಳಿಂದಾಗುವ ಪರಿಣಾಮಗಳು- ಇವೆಲ್ಲವೂ ಯಾವ ಜನಾಂಗಕ್ಕೂ ತಪ್ಪಿದ್ದಲ್ಲ. ಆದರೆ ನಾವು, ಭಾರತೀಯರು ಹೊಂದಿರುವ ಒಂದು ವಿಶಿಷ್ಟ ಗುಣವನ್ನು ಮಾತ್ರ ಯಾರಾದರೂ ಮೆಚ್ಚಲೇ ಬೇಕು. ಅದೆಂದರೆ - ನಾವು ಏನನ್ನೂ ತಿರಸ್ಕರಿಸುವುದಿಲ್ಲ. ನಮ್ಮದಲ್ಲ ಎಂದು ಅವಮಾನಿಸಿ ಹಿಂಸಿಸುವುದಿಲ್ಲ. ಎಲ್ಲವನ್ನೂ ಗೌರವಿಸುತ್ತ ಬಂದಿದ್ದೇವೆ, ಸ್ವೀಕರಿಸುತ್ತ ನಡೆದಿದ್ದೇವೆ. ಆದರೆ ಪ್ರತಿಯೊಂದರಲ್ಲೂ ಭಾರತೀಯತೆಯ ಸೊಗಡು ಮಾಸದಂತೆ ಅದನ್ನು ನಮ್ಮದಾಗಿಸಿಕೊಂಡಿದ್ದೇವೆ.
ಚಿಕ್ಕ ಚಿಕ್ಕ ವಿಷಯಗಳಲ್ಲೂ ಭಾರತೀಯರ ಈ ಗುಣ-ಸ್ವಭಾವ ಎದ್ದು ಕಾಣುತ್ತದೆ. ಉದಾಹರಣೆಗೆ, ನೂಡಲ್ಸ್- ಇದು ಚೀನೀಯರ ಆಹಾರ. ಅದನ್ನೂ ನಾವು ಆದರದಿಂದ ಬರಮಾಡಿಕೊಂಡೆವು. ಆದರೆ ಅದನ್ನು ನಮ್ಮದಾಗಿಸಿಕೊಂಡೆವು. ಹೇಗೆಂದರೆ ಅದಕ್ಕೆ ನಮ್ಮ ಮಸಾಲೆ, ಒಗ್ಗರಣೆ, ರುಚಿ ಸೇರಿಸಿಕೊಂಡೆವು. ಇಲ್ಲಿಯ ಘಮಘಮಿಸುವ ನೂಡಲ್ಸ್ ತಿಂದು ನೀವು ಬಹಳ ಆಸೆಯಿಂದ 'ಇನ್ನು ಚೈನಾದಲ್ಲಿ ಈ ನೂಡಲ್ಸ್ ಇನ್ನೆಷ್ಟು ಅದ್ಭುತವಾಗಿರಬಹುದೆಂದು' ಆಸೆಯಿಂದ ಹೋದರೆ- ಕೆಟ್ಟಿರಿ. ಏಕೆಂದರೆ ಅಲ್ಲಿಯ ನೂಡಲ್ಸ್‌ನಲ್ಲಿ ಉಪ್ಪೂ ಕೂಡ ಇರುವುದಿಲ್ಲ. ಅದು ನಮ್ಮ ಜಾಣತನ. ಈಗಿನ ಯುವತಿಯರೆಲ್ಲರೂ ಜೀನ್ಸ್ ಹಾಕಿಯೇ ಹಾಕುತ್ತಾರೆ. ಅದರ ಜೊತೆ ಜೊತೆಯೇ ಮದುವೆ ಆಗುತ್ತಲೂ ಎರಡೂ ಕೈತುಂಬ ಎರಡೆರಡು ಡಜನ್ ಬಳೆ ಹಾಕಿಕೊಂಡು, ಬೈತಲೆಗೆ ಕುಂಕುಮ ಇಟ್ಟು, ಕಾಲುಂಗುರ ಹಾಕಿಕೊಂಡು ನಮ್ಮತನವನ್ನೂ ಬಿಂಬಿಸುತ್ತಾರೆ. ತೇಪೆ ಹಚ್ಚಿದ ಬರ್ಮುಡ ಹಾಕಿಕೊಂಡು ಅಮೆರಿಕದಿಂದ ಇಳಿದವರಂತೆ ಬಂದರೂ ಚಪ್ಪಲಿ ತೆಗೆದೇ ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮ ಸಂಸ್ಕೃತಿಯ ಬಲ ಅಂಥದ್ದು.
ಅದೇ ರೀತಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಸಂಗೀತವೂ ಕೂಡ ಸಹಸ್ರಾರು ವರ್ಷಗಳ ಮೊದಲೇ ಹುಟ್ಟಿ, ಸದಾ ಬೆಳೆಯುತ್ತ, ಬಲವಾಗುತ್ತ ಬಂದು, ಕ್ರಮೇಣ ನೂರಾರು ಸಾಂಸ್ಕೃತಿಕ ಬದಲಾವಣೆಗಳನ್ನು ಕಂಡು ಅವುಗಳನ್ನು ಮೈಗೂಡಿಸಿಕೊಂಡು, ಜೊತೆಗೆ ಆಗಾಗ್ಗೆ ಉಂಟಾಗುವ ಹೊರಗಿನ ಆಕ್ರಮಣ- ಒತ್ತಡಗಳನ್ನೂ ತಡೆದುಕೊಂಡು, ಎಲ್ಲವನ್ನೂ ಹೀರಿಕೊಂಡು ಅಗಾಧವಾಗಿ ಬೆಳೆದು ಇಂದಿಗೂ ಹಚ್ಚ ಹಸಿರಾಗಿ ನಳನಳಿಸುತ್ತಿದೆ. ಭಾರತೀಯ ಸಂಗೀತ ಬೆಳೆದು ಬಂದ ದಾರಿಯನ್ನು ಅವಲೋಕಿಸಿದರೆ ನಮ್ಮ ಸಂಗೀತದ ಈ ಆಂತರಿಕ ಶಕ್ತಿ ಹಾಗೂ ನಮ್ಮ 'ಒಳಗೊಳ್ಳುವ' ಸ್ವಭಾವ ಎರಡರ ಸಮ್ಮಿಲನ ಸ್ಪಷ್ಟವಾಗಿ ಗೋಚರಿಸುತ್ತದೆ.
ಭಾರತೀಯ ಸಂಗೀತ ಹುಟ್ಟಿದ್ದು ಕನಿಷ್ಟ ಹತ್ತು ಸಾವಿರ ವರ್ಷಗಳ ಹಿಂದೆ. ಒಬ್ಬ ಇತಿಹಾಸಕಾರು ನಮ್ಮ ಸಂಗೀತದ ಬಗ್ಗೆ ಹೀಗೆ ನುಡಿದಿದ್ದಾರೆ- 'ಇಂದು ಭಾರತೀಯ ಸಂಗೀತ ಬೆಳೆದು ನಿಂತ ವ್ಯಾಪ್ತಿಯನ್ನು ಹಾಗೂ ಅದರ ಆಳವನ್ನು ನೋಡಿದರೆ ಇದು ಕನಿಷ್ಟ ಒಂಭತ್ತರಿಂದ ಹತ್ತು ಸಾವಿರ ವರ್ಷಗಳಷ್ಟಾದರೂ ಮೊದಲು ಜನ್ಮ ತಾಳಿದ್ದು ಎಂಬುದರಲ್ಲಿ ಸಂಶಯವಿಲ್ಲ'. ಕೆಲವು ಪಾಶ್ಚಿಮಾತ್ಯ ವಿದ್ವಾಂಸರಂತೂ ಭಾರತೀಯ ಸಂಗೀತ ಇಪ್ಪತ್ತು ಸಾವಿರ ವರ್ಷಗಳಷ್ಟು ಹಿಂದಿನದೆಂಬ ಅಭಿಪ್ರಾಯ ನೀಡಿದ್ದಾರೆ. ಏನಾದರೂ ಇರಲಿ, ಹತ್ತು ಸಾವಿರವಿರಲಿ, ಇಪ್ಪತ್ತಿರಲಿ, ಒಂದು ಕಲಾ ಪ್ರಕಾರ ಸಾವಿರಾರು ವರ್ಷಗಳ ಕಾಲ ಎಂತೆಂತಹ ಸಾಮಾಜಿಕ, ರಾಜಕೀಯ, ವ್ಯಾವಹಾರಿಕ, ವೈಚಾರಿಕ, ಸಾಂಸ್ಕೃತಿಕ- ಈ ಎಲ್ಲ ಬದಲಾವಣೆಗಳನ್ನೂ ಎದುರಿಸಿ, ಜೀವಂತವಾಗಿ ಉಳಿದು ಜೊತೆಜೊತೆಗೇ ವಿಶಾಲವಾಗಿ ಬೆಳೆದು ಬಂದಿದೆ ಎಂಬುದೇ ಒಂದು ಅದ್ಭುತ. ಅದು ಸವೆಸಿ ಬಂದ ಆ ಹಾದಿಯೂ ಅಷ್ಟೇ ಹೃದಯಂಗಮ. ಅಲ್ಲಿ ಆನಂದವಿದೆ, ಸ್ವಾತಂತ್ರ್ಯವಿದೆ, ಸುಖವಿದೆ, ಸ್ಥಾನಮಾನವಿದೆ, ನಿರಂತರ ಸೃಜನಶೀಲತೆಯಿದೆ. ಜೊತೆಜೊತೆಗೇ ನೋವೂ ಇದೆ, ಅವಮಾನವಿದೆ, ವಂಚನೆಯ ಸುಳಿಯಿದೆ, ಬದಲಾವಣೆಯ ತರಂಗಗಳಿವೆ. ಜೊತೆಗೇ ಅದನ್ನೆಲ್ಲ ಮೆಟ್ಟಿ ನಿಲ್ಲುವ ಧೈರ್ಯವಿದೆ, ಎಲ್ಲವನ್ನೂ ಇಂಬುಗೊಂಡು ಬೆಳೆಯುವ ಭವ್ಯತೆಯಿದೆ.
(ಮುಂದುವರಿಯುವುದು)
- ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


