ಕಾಡಿನ ರಾಜ
ಈತ ಚಿರತೆಯೊಂದಿಗೆ ಹೆಜ್ಜೆ ಹಾಕಿದ್ದಾನೆ. ಕರಡಿಯೊಂದಿಗೆ ನಡೆದಾಡಿದ್ದಾನೆ. ಕಾಡುಕೋಣದ ಎದುರೇ ಹಾದುಹೋಗುತ್ತಾನೆ. ಜಿಂಕೆಗಳೊಂದಿಗೆ ಆಟವಾಡುತ್ತಾನೆ.

ಈತ ಚಿರತೆಯೊಂದಿಗೆ ಹೆಜ್ಜೆ ಹಾಕಿದ್ದಾನೆ. ಕರಡಿಯೊಂದಿಗೆ ನಡೆದಾಡಿದ್ದಾನೆ. ಕಾಡುಕೋಣದ ಎದುರೇ ಹಾದುಹೋಗುತ್ತಾನೆ. ಜಿಂಕೆಗಳೊಂದಿಗೆ ಆಟವಾಡುತ್ತಾನೆ. 35 ವರ್ಷಗಳಿಂದ ನಾಗರಿಕ ಪ್ರಪಂಚದಿಂದ ದೂರವಿದ್ದು ಪುಟ್ಟ ಜೋಪಡಿಯಲ್ಲಿ ಕಾಡು ಮಾನವನಾಗಿ ಬದುಕುತ್ತಿದ್ದಾನೆ. ಈತ ವಾಸಿಸುವ ಪ್ರದೇಶಕ್ಕೆ ಹೇಳಲಿಕ್ಕೊಂದು ಹೆಸರೂ ಇಲ್ಲ.
50 ಅಡಿ ಎತ್ತರದ ಧೂಳೆಲೆ ಮರದ ಮೇಲೆ ರೆಂಬೆಯೊಂದನ್ನು ಒಂದು ಕೈಯಿಂದ ಬಿಗಿದಪ್ಪಿಕೊಂಡು ಇನ್ನೊಂದು ಕೈಯಿಂದ ಜೇನು ಹುಟ್ಟನ್ನು ಕತ್ತರಿಸುತ್ತಿರುವಾಗ ಕೆಳಗೇನೋ ಸದ್ದು. ನೋಡಿದರೆ ಕರಡಿಯೊಂದು ಅದೇ ಮರವನ್ನು ಏರುತ್ತಿತ್ತು. ಇತ್ತ ಹೆಜ್ಜೇನು ಕಡಿಯತೊಡಗಿತು. ಕೈಬಿಟ್ಟರೆ ಪ್ರಪಾತ. ಅಲ್ಲೇ ಇದ್ದರೆ ಜೇನ್ನೊಣ, ಕರಡಿ ದಾಳಿ. ಆದರೆ, ಈತನ ಗುಂಡಿಗೆ ಭಾರಿ ಗಟ್ಟಿ! ಹುಲಿಯ ಕೂಗಿನಂತೆ ಅಬ್ಬರಿಸಿ, ಕತ್ತಿ ಬೀಸುತ್ತ ಕರಡಿಯತ್ತತೆವಳತೊಡಗಿದ.
ಕರಡಿ ಪಟಪಟನೆ ಕೆಳಕ್ಕಿಳಿದು ಮರೆಯಾಯಿತು. ಇಂಥ ಸ್ವಾನುಭವಗಳನ್ನು ಹೇಳುವಾಗ ಸೀತಾರಾಮ ಸಿದ್ದಿಯದು ನಿರ್ವಿಕಾರ ಭಾವ. ಆದರೆ ಕೇಳುವವರ ಹೃದಯ ಗಟ್ಟಿ ಇರಬೇಕಷ್ಟೆ.
ಸೀತಾರಾಮ ಸಿದ್ದಿ ಕಾಡಿನ ಜೀವಿ. ಚಿರತೆಯೊಂದಿಗೆ ಹೆಜ್ಜೆ ಹಾಕಿದ್ದಾನೆ. ಕರಡಿಯೊಂದಿಗೆ ನಡೆದಾಡಿದ್ದಾನೆ. ಕಾಡುಕೋಣದ ಎದುರೇ ಹಾದುಹೋಗುತ್ತಾನೆ. ಜಿಂಕೆಗಳೊಂದಿಗೆ ಆಟವಾಡುತ್ತಾನೆ. 35 ವರ್ಷಗಳಿಂದ ನಾಗರಿಕ ಪ್ರಪಂಚದಿಂದ ದೂರವಿದ್ದು ಕಾಡು ಮಾನವನಾಗಿ ಬದುಕುತ್ತಿದ್ದಾನೆ. ಈತ ವಾಸಿಸುವ ಪ್ರದೇಶಕ್ಕೆ ಹೇಳಲಿಕ್ಕೊಂದು ಹೆಸರೂ ಇಲ್ಲ.
ಬೇಡ್ತಿ ಕಣಿವೆಯ ದಟ್ಟ ಕಾಡಿನ ಪುಟ್ಟ ಜೋಪಡಿಯ ನಿವಾಸಿ. ಯಲ್ಲಾಪುರ ಹಾಗೂ ಶಿರಸಿ ನಡುವಣ ಬೇಡ್ತಿ ಸೇತುವೆ ಬಳಿಯ ದಟ್ಟ ಅಡವಿಯೇ ಈತನ ವಾಸಸ್ಥಾನ.
ಇನ್ನು ಈತ ನಮ್ಮ ದೇಶದ ಪ್ರಜೆ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಆಧಾರ್, ವೋಟರ್ ಐಡಿ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ...... ಊಹೂಂ ಏನೇನೂ ಇಲ್ಲ. ಅದರ ಅಗತ್ಯವೂ ಇವನಿಗಿಲ್ಲ. ಏಕೆಂದರೆ ಈತ ನಾಗರಿಕ ಪ್ರಪಂಚವನ್ನು ಅವಲಂಬಿಸಿಯೇ ಇಲ್ಲ!
'ಬೇಡ್ತಿ ಕಣಿವೆಯ ಕಾಡು ನನ್ನದೆ, ನಾನೇ ಅದರ ಕಾವಲುಗಾರ' ಎಂದು ಹೇಳುವಾಗ ಸೀತಾರಾಮ ಸಿದ್ದಿ ಮುಖದಲ್ಲಿ ಅಮಾಯಕ ನಗು. ಅದೇನೋ ಖುಷಿ. ಯಾರೇ ಹೋದರೂ ಗುಡಿಸಲಿನಿಂದ ಹೊರಬರುವುದೇ ಇಲ್ಲ. ಅದೂ ಇದು ಮಾತಾಡಿ ಸ್ವಲ್ಪ ಸಮಯದ ಬಳಿಕ ಅರಣ್ಯ ರಕ್ಷಕರು ಬಿಸಾಕಿದ ಖಾಕಿ ಶರ್ಟ್ ಹಾಕಿ, ಪಂಚೆಯನ್ನು ಸುತ್ತಿಕೊಂಡು ಮೆಲ್ಲಗೆ ಬಂದು ಪಾದ ಊರಿ ಕುಳಿತನೆಂದರೆ ಕಾಡಿನ ಕತೆಗಳ ರೋಚಕ ವಿದ್ಯಮಾನಗಳು ಹೊರಬರುತ್ತವೆ.
ಪ್ರೀತಿಸಿ ಮದುವೆಯಾಗಿದ್ದ!
ಈತನಿಗೀಗ ಸುಮಾರು 60ರ ಹರೆಯ. ಗಟ್ಟಿಮುಟ್ಟಾಗಿದ್ದಾನೆ. ಚಿಕ್ಕವನಿರುವಾಗ ಅಡವಿಯಲ್ಲೇ ಇದ್ದರೂ ನಾಗರಿಕ ಪ್ರಪಂಚದೊಂದಿಗೆ ಹೆಜ್ಜೆ ಹಾಕಿದ್ದ. ಅಡಕೆ ತೋಟದಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದ. ಯುವತಿಯನ್ನು ಪ್ರೀತಿಸಿ ವಿವಾಹವೂ ಆದ. ಎರಡು ಮಕ್ಕಳೂ ಹುಟ್ಟಿದರು. ಆದರೆ ಪತ್ನಿ ಅನೈತಿಕ ದಾರಿಗಿಳಿದಳು. ಆಗ ನಾಗರಿಕ ಪ್ರಪಂಚದ ಮೇಲೆಯೇ ಜಿಗುಪ್ಸೆ ಉಂಟಾಗಿ ಪತ್ನಿ, ಮಕ್ಕಳು ಹಾಗೂ ನಾಗರಿಕ ಬದುಕಿಗೆ ತಿಲಾಂಜಲಿ ಇತ್ತು ಕಾಡು ಸೇರಿದ.
ಇದು ತನ್ನ 'ನಾಗರಿಕ ಬದುಕು' ಕುರಿತ ಆತ ಹೇಳಿಕೊಳ್ಳುವ ಕಥೆ.
'ನಾಡಿನ ಜನರಿಗಿಂತ ಕಾಡಿನ ಪ್ರಾಣಿಗಳೇ ಮೇಲು' ಎಂದು ಹೇಳುವ ಸಿದ್ದಿ, 'ನಗರದ ಜನತೆ ಹಣದ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಎಲ್ಲವನ್ನೂ ಹಣದಿಂದ ಅಳೆಯುತ್ತಾರೆ. ಅವರಿಗೆ ಮಾನವೀಯ ಸಂಬಂಧಗಳೇ ಇಲ್ಲ. ಆದರೆ ಕಾಡಿನಲ್ಲಿ ಯಾವುದೇ ಮೋಸ, ವಂಚನೆ ಇಲ್ಲ' ಎನ್ನುತ್ತಾನೆ.
ದಟ್ಟಡವಿಯಲ್ಲಿ ಸಿಗುವ ಜೇನು, ರಾಮಪತ್ರೆ, ಉಪ್ಪಾಗೆ, ಶೀಗೆಕಾಯಿ, ವಾಟೆಹುಳಿ ಮತ್ತಿತರ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಾನೆ. ಅದೇ ಈತನ ಬದುಕಿನ ದಾರಿ. ತಿಂಗಳಿಗೊಮ್ಮೆ ಈತ ಸಂಗ್ರಹಿಸಿದ ಅರಣ್ಯ ಉತ್ಪನ್ನಗಳನ್ನು ಪಡೆಯಲು ವ್ಯಕ್ತಿಯೊಬ್ಬ ಬರುತ್ತಾನೆ. ಅಷ್ಟೋ ಇಷ್ಟೋ ಹಣ ಕೊಟ್ಟು ಒಯ್ಯುತ್ತಾನೆ. ಆ ಹಣದಿಂದ ಮಂಚಿಕೇರಿ ಅಥವಾ ಸಮೀಪದ ಯಾರದ್ದಾದರೂ ಮನೆಗೆ ಹೋಗಿ ಹಣ ಕೊಟ್ಟು ಅಕ್ಕಿಯನ್ನು ಮಾತ್ರ ತರುತ್ತಾನೆ. ಅದಕ್ಕೆ ಕಾಡಿನ ಎಲೆ, ಹುಲ್ಲು, ವಾಟೆಹುಳಿ ಬಳಸಿ ಸಾಂಬಾರು ಮಾಡುತ್ತಾನೆ. ಕಾಡಿನ ಉತ್ಪನ್ನ ಇಲ್ಲವಾದಾಗ ಅಂದರೆ ವರ್ಷದಲ್ಲಿ ನಾಲ್ಕು ತಿಂಗಳು ಈತ ಒಂದೇ ಊಟ ಮಾಡುತ್ತಾನೆ. ಮಧ್ಯಾಹ್ನ ಹಾಗೂ ಸಂಜೆಯದ್ದು ಸೇರಿ ಸಂಜೆ 5 ಗಂಟೆಗೆ ಊಟ. ಅಕ್ಕಿಯೇ ಇಲ್ಲವಾದರೂ ಈತನಿಗೆ ಚಿಂತೆ ಇಲ್ಲ. ಹತ್ತಾರು ಬಾಳೆ ಗಿಡಗಳನ್ನು ನೆಟ್ಟಿದ್ದಾನೆ. ಅಲ್ಲೇ, ಕಾಡು ಬಾಳೆಯೂ ಇದೆ. ಬಾಳೆಕಾಯಿ, ಕಾಡಿನ ಗಡ್ಡೆ, ಗೆಣಸುಗಳನ್ನು ಬೇಯಿಸಿ ತಿನ್ನುತ್ತಾನೆ. ಒಮ್ಮೊಮ್ಮೆ 2-3 ದಿನಕ್ಕೊಮ್ಮೆ ಆಹಾರ ಸೇವಿಸುತ್ತಾನೆ. ಯಾವುದೇ ಕಾಯಿಲೆ ಬರಲಿ, ವನಸ್ಪತಿಗಳೇ ಈತನ ಔಷಧ.
ಈತನ ಜೋಪಡಿ ಬಳಿ ಬಾವಿಯೂ ಇಲ್ಲ. ಸಮೀಪದಲ್ಲಿ ಝರಿಯೊಂದಿದೆ. ಇದು ಬತ್ತಿ ಹೋದಾಗ ಬೇಡ್ತಿ ನದಿ ನೀರೇ ಆಧಾರ. ಜೋಪಡಿಯಲ್ಲಿ ಪಳೆಯುಳಿಕೆಗಳಂತೆ ಕಾಣುವ 2-3 ಪಾತ್ರೆಗಳು, ಒಂದೆರಡು ಲೋಟ ಬಿಟ್ಟರೆ ಮತ್ತೇನೂ ಇಲ್ಲ. ಬೆಂಕಿ ಮಾತ್ರ ಸದಾ ಉರಿಯುತ್ತಲೇ ಇರುತ್ತದೆ. ಮೊಬೈಲ್, ವಾಚ್, ಗಡಿಯಾರ ಮೊದಲಾದ ಆಧುನಿಕ ಜಗತ್ತಿನ ಯಾವುದೇ ವಸ್ತುಗಳಿಂದ ಮಾರುದೂರ.
ನನ್ನೊಂದಿಗೆ ಗಾಂಜಾ ಸೇದಿದೋರು ದುಬೈನಲ್ಲೂ ಇದ್ದಾರೆ. ಮುಂಬೈನಲ್ಲೂ ಇದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಗೋವಾ ಎಲ್ಲ ಕಡೆ ಇದ್ದಾರೆ ಎಂದು ಹಿಂದಿನ ಕತೆಗಳನ್ನು ಹೇಳುವಾಗ ಗಾಂಜಾ ಸೇದುವುದು ಅಪರಾಧ ಎನ್ನುವ ಭಾವನೆಯೂ ಈತನ ಮುಖದಲ್ಲಿಲ್ಲ. ಏಕೆಂದರೆ ಇವನಿಗದು ಗೊತ್ತೇ ಇಲ್ಲ. ಈಗಲೂ ಅಪರೂಪಕ್ಕೊಮ್ಮೆ ಗಾಂಜಾ ಎಳೆಯುತ್ತಾನೆ. 'ಜೋಪಡಿಯ ಸಮೀಪದ ಮರವೊಂದರಲ್ಲಿ ದೆವ್ವ ಇದೆ. ತನ್ನ ಎದುರು ಆಗಾಗ ನಡೆದಾಡುತ್ತದೆ' ಎನ್ನುತ್ತ ತನ್ನ ಮೂಢನಂಬಿಕೆಯನ್ನೂ ತೋರ್ಪಡಿಸುತ್ತಾನೆ. ಹಾಗಂತ ಕಾಡುಪ್ರಾಣಿಗಳಾಗಲಿ, ದೆವ್ವವಾಗಲಿ ಅವರನ್ನು ಪೀಡಿಸಿದರೆ ಮಾತ್ರ ದಾಳಿ ನಡೆಸುತ್ತವೆ ಎಂದು ಖಚಿತವಾಗಿ ಹೇಳುತ್ತಾನೆ. ಈತನಿಗೆ ಭವಿಷ್ಯದ ಚಿಂತೆ ಇಲ್ಲ. ಯಾವುದರ ಗೊಡವೆಯೂ ಇಲ್ಲ. 'ಅರಣ್ಯಕ್ಕೆ ನಾನೇ ಅರಸ' ಎನ್ನುತ್ತ ಬದುಕುತ್ತಿದ್ದಾನೆ.ಟಿ
ಮುಖ ನೋಡಿಕೊಂಡಿಲ್ಲ!
ಹತ್ತಾರು ವರ್ಷಗಳಿಂದ ಸೀತಾರಾಮ ಸಿದ್ದಿ ತನ್ನ ಮುಖವನ್ನು ಒಮ್ಮೆಯೂ ಸರಿಯಾಗಿ ನೋಡಿಕೊಂಡಿಲ್ಲ. ಏಕೆಂದರೆ ಕನ್ನಡಿಯೂ ಇಲ್ಲ. ಹರಿಯುವ ನೀರಿನಲ್ಲಿ ಮುಖದ ನೆರಳು ನೋಡುತ್ತಾನಂತೆ. ಆದರೆ ಸೂರ್ಯನ ಕಿರಣಗಳನ್ನೇ ನೋಡಿ ಗಂಟೆಯನ್ನು ಕರಾರುವಕ್ಕಾಗಿ ಹೇಳುತ್ತಾನೆ.
ಮಾಹಿತಿ ಕೊಟ್ಟವನ ಮೇಲೇ ಪ್ರಕರಣ!
ಮರ ಕಡಿಯುವುದು ತಪ್ಪು ಎನ್ನುವುದು ಈತನಿಗೆ ಗೊತ್ತು. ಮರಗಳ್ಳರು ಅರಣ್ಯಕ್ಕೆ ದಾಳಿ ಇಟ್ಟರೆ ನೆಟ್ಟನೆ ಹೋಗಿ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸುತ್ತಾನೆ. ಆದರೆ, ತಿಳಿದೋ ತಿಳಿಯದೆಯೋ ಈತನ ಮೇಲೆ ಅರಣ್ಯ ಇಲಾಖೆ ಎರಡು ಸಣ್ಣಪುಟ್ಟ ಪ್ರಕರಣಗಳನ್ನು ದಾಖಲಿಸಿದೆ.
- ವಸಂತಕುಮಾರ್ ಕತಗಾಲ
vasant800@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


