'ಅವ'ನತಿಯ ಹಾದಿ
ಬಿಳಿಯ ಕೊಲೆಗಾರರ ಗುಂಡಿಗೆ ತುತ್ತಾಗಿಯೂ ಉಳಿದು ಹತ್ತು ವರ್ಷ ಕಾಡು ಮೇಡು ಅಲೆದು ಬದುಕಿ ಬಂದು ನರಮೇಧದ ಕತೆ ಹೇಳಿದ ಬುಡಕಟ್ಟು ವ್ಯಕ್ತಿಯೊಬ್ಬನ ರೋಮಾಂಚಕಾರಿ ಕತೆ ಇದು.

ಬಿಳಿಯ ಕೊಲೆಗಾರರ ಗುಂಡಿಗೆ ತುತ್ತಾಗಿಯೂ ಉಳಿದು ಹತ್ತು ವರ್ಷ ಕಾಡು ಮೇಡು ಅಲೆದು ಬದುಕಿ ಬಂದು ನರಮೇಧದ ಕತೆ ಹೇಳಿದ ಬುಡಕಟ್ಟು ವ್ಯಕ್ತಿಯೊಬ್ಬನ ರೋಮಾಂಚಕಾರಿ ಕತೆ ಇದು.
ಹೌದು, ಕಾರಪೀರು ಮಾತ್ರ ಬದುಕಿ ಉಳಿದಿದ್ದ. ಹೆಂಡತಿ, ಮಗ, ಮಗಳು, ತಾಯಿ, ಸಹೋದರರು, ಸಹೋದರಿಯರು ಕಣ್ಣ ಮುಂದೆಯೇ ದುಷ್ಟರಿಂದ ಕೊಲ್ಲಲ್ಪಟ್ಟರು. ಮತ್ತೊಬ್ಬ ಮಗನನ್ನು ಗಾಯಗೊಳಿಸಿ, ಸೆರೆಯಾಳಾಗಿಸಿಕೊಂಡರು. ತನ್ನವರನ್ನು ಕಳೆದುಕೊಂಡ ದುಃಖದಲ್ಲಿ ಕಾರಪೀರು ಕಾಡಿನೊಳಗೆ ಓಡುತ್ತಿದ್ದಾಗ ಗುಂಡು ತಗುಲಿತು. ಬದುಕುಳಿದ, ಸಾವರಿಸಿಕೊಂಡು ಓಡಿದ.
ನಂತರ 10 ವರ್ಷ ದುಷ್ಟರ ಕಣ್ಣು ತಪ್ಪಿಸಿ 400 ಮೈಲು ಓಡಿ ಬಂದು ಮರಾನ್ಹೊ ಕಾಡಿನಲ್ಲಿ ಆಶ್ರಯ ಪಡೆದುಕೊಂಡಿದ್ದ. ಬೆನ್ನತ್ತಿದ ಹಸಿವು, ಏಕಾಂಗಿತನ ಕಾರಪೀರುವಿನ ಜೀವವನ್ನು ಹಿಂಡುತ್ತಿತ್ತು.
ಕಾರಪೀರು, ಜನಸಂಪರ್ಕವಿಲ್ಲದ 'ಅವ' ಬುಡಕಟ್ಟಿನ ಸದಸ್ಯ. ಗಣಿಕೋರರ ದಾಳಿಯಿಂದ ಪಾರಾದ ಕೆಲವೇ ಅದೃಷ್ಟವಂತರಲ್ಲಿ ಕಾರಪೀರು ಒಬ್ಬ. ಈಶಾನ್ಯ ಬ್ರೆಜಿಲ್ನ ಕಾಡಿನಲ್ಲಿ ಸ್ವಚ್ಛಂದದಿಂದಿದ್ದ ಕುಟುಂಬವದು. 'ಕಾರಪೀರು' ಎಂದರೆ ಅವರ ಭಾಷೆಯಲ್ಲಿ ಗಿಡುಗ ಎಂದರ್ಥ!
ಬ್ರೆಜಿಲ್ನಲ್ಲಿ ಉಳಿದುಕೊಂಡಿರುವ ಅಲೆಮಾರಿ ಬುಡಕಟ್ಟು ಜನಾಂಗ ಅವ. ಸುಮಾರು 450 ಸದಸ್ಯರನ್ನು ಹೊಂದಿದ್ದ ಅವ ಪಂಗಡದ ಜನಸಂಖ್ಯೆ ಈಗ ಶತಕದ ಆಸುಪಾಸಿಗೆ ಇಳಿದಿದೆ. ಸೂರ್ಯ ಮತ್ತು ವರುಣ ಹೆಸರಿನಲ್ಲಿ ವರ್ಷವನ್ನು ವಿಂಗಡಿಸಿಕೊಂಡಿರುವ ಅಪರೂಪದ ಅವ ಕಾಡು ಜನಾಂಗ ಕಾಡು ಹಂದಿ, ಮಂಗ ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಸೇವಿಸುತ್ತ ಜೀವನ ಸಾಗಿಸುತ್ತಾರೆ. ಬಬಕು ಬೀಜಗಳು, ಅಕಾಯಿ ಹಣ್ಣುಗಳು ಹಾಗೂ ಜೇನು 'ಅವ'ರ ಪ್ರಮುಖ ಆಹಾರ.
ಅವರು ಅವನತಿಗೆ ತುತ್ತಾದದ್ದಾದರೂ ಹೇಗೆ?
ಶತಮಾನಗಳ ಹಿಂದೆ ಅವರು ಶಾಂತಿಯುತ ಬದುಕು ಕಟ್ಟಿಕೊಂಡಿದ್ದ ಮಳೆಕಾಡಿಗೆ ಬಿಳಿಯರು ಪ್ರವೇಶಿಸಿದರು. ಕಾರಾಯ್ಸ್ ಅಥವಾ ನಾನ್ ಇಂಡಿಯನ್ಸ್ ಅಲ್ಲಿಗೆ ಬಂದು ದನಗಾವಲುಗಳನ್ನು ಕಟ್ಟಿಕೊಂಡರು. ಇದರಿಂದ 'ಅವ'ರ ಪ್ರಾಂತ್ಯದ ಶೇಕಡಾ 30 ಭಾಗ ಬಿಳಿಯರ ಪಾಲಾಯಿತು. ಇದಾಗಿ ಸ್ವಲ್ಪ ಸಮಯದಲ್ಲೇ, ಅಮೆರಿಕದ ಭೂವಿಜ್ಞಾನಿಗಳು ಕಾರಜಾಸ್ ಪರ್ವತದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅದಿರನ್ನು ಶೋಧಿಸಿದರು. ಇದು 'ಅವ'ರ ಅವನತಿಗೆ ಮುನ್ನುಡಿಯಾಯ್ತು.
ಅಮೆರಿಕ, ಜಪಾನ್ ಮತ್ತಿತರ ದೇಶಗಳು ಕಾರಜಾಸ್ ಪರ್ವತದ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟವು. 1967ರ ನಂತರ ಕಬ್ಬಿಣ ಅದಿರನ್ನು ತೆಗೆಯುವ ಗ್ರೇಟ್ ಕಾರಜಾವ ಯೋಜನೆಗಳು ಪ್ರರಂಭವಾದವು. ಅಣೆಕಟ್ಟು, ಗಣಿಗಾರಿಕೆ, ದನಗಾವಲುಗಳ ನಿರ್ಮಾಣ ಎಗ್ಗಿಲ್ಲದೆ ಸಾಗಿತು. ಖನಿಜ ಸಂಪತ್ತಿನ ಸಾಗಾಟಕ್ಕಾಗಿ ಟರ್ಮಾಕಡ್ ರಸ್ತೆ ಹಾಗೂ ರೈಲು ಹಳಿಗಳ ನಿರ್ಮಾಣವಾಗತೊಡಗಿತು. ಅದಕ್ಕಾಗಿ ಅವ ಬುಡಕಟ್ಟು ವಾಸವಿದ್ದ ಕಾಡನ್ನು ನಾಶಗೊಳಿಸಲಾಯಿತು.
ಜಗತ್ತಿನ ದೊಡ್ಡ ಹೊರಮೈ ಗಣಿ ರೂಪುಗೊಂಡಿತು. ದಿ ಗ್ರೇಟ್ ಕಾರಜಾಸ್ ಯೋಜನೆಯಿಂದಾಗುವ ಹಾನಿ ಬಗ್ಗೆ ಬ್ರೆಜಿಲ್ ಸರ್ಕಾರ ನಿಗಾ ವಹಿಸಲಿಲ್ಲ. ಗಣಿಗಾರರು, ವಸಾಹತುಗಾರರು ಹರಕ್ವ ಅರಣ್ಯದ ಮೇಲೆ ಮುಗಿಬಿದ್ದರು. ದೊಡ್ಡ ದೊಡ್ಡ ಬುಲ್ಡೋಜರ್ ಮೂಲಕ ಭೂಮಿಯನ್ನು ಬಗೆಯತೊಡಗಿದರು. ಕಲ್ಲು ಬಂಡೆಗಳನ್ನು ಸಿಡಿಸಿದರು. ಅದಿರು, ಮ್ಯಾಂಗನಿಸ್ ಮತ್ತು ಬಾಕ್ಸೈಟ್ಗಳನ್ನು ಹುಡುಕಿ ದೋಚತೊಡಗಿದರು. ಮರಗಳನ್ನು ಕಡಿದು ಹಾಕಿದರು. ಹಚ್ಚ ಹಸಿರಿನ ಕಾಡು, ಕಪ್ಪು ಇದ್ದಿಲು ಬೂದಿಯ ಬೀಡಾಯಿತು. ಹರಾಕ್ವಾ ಮಾಲಿನ್ಯದ ಗೂಡಾಯಿತು. ಭೂ ಕಗ್ಗೊಲೆಗೆ ಅಡ್ಡಿ ಎಂಬಂತಿದ್ದ 'ಅವ'ರನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲತೊಡಗಿದರು. ಕೆಲವರನ್ನು ವಿಷವುಣಿಸಿ, ಕೆಲವರನ್ನು ಅವರ ಕುಟುಂಬಸ್ತರ ಮುಂದೆಯೇ ಗುಂಡು ಹೊಡೆದು ಸಾಯಿಸಿದರು.
ಕೊಲೆಗಾರರಿಂದ ತಪ್ಪಿಸಿಕೊಂಡು ದಟ್ಟಾರಣ್ಯದಲ್ಲಿ ಒಂಟಿಯಾಗಿ ಅಲೆಯುತ್ತಿದ್ದ ಕಾರಪೀರುವನ್ನು ರೈತನೊಬ್ಬ ಭೇಟಿಯಾದ. ದಶಕಗಳಿಂದ ಮಾನವ ಸಂಪರ್ಕ ಇಲ್ಲದೆ ಗೆಡ್ಡೆ ಗೆಣಸು, ಚಿಕ್ಕಪುಟ್ಟ ಕಾಡು ಪ್ರಾಣಿಗಳನ್ನು ತಿಂದು ದಿನ ದೂಡುತ್ತಿದ್ದ ಕಾರಪೀರುವಿಗೆ ರೈತನ ಭೇಟಿ ಕೊಂಚ ನಿರಾಳತೆ ಒದಗಿಸಿತ್ತು.
ಇತ್ತ ಮಾಧ್ಯಮಗಳಲ್ಲಿ ಮೂಲನಿವಾಸಿಯೊಬ್ಬನ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿತು. ಮಾನವಶಾಸ್ತ್ರಜ್ಞ ಕಾರಪೀರುವನ್ನು ಮಾತಾಡಿಸಿದ್ದೂ ಆಯಿತು. ಆದರೆ ಕಾರಪೀರುವಿನ ಭಾಷೆ ಅವನಿಗೆಲ್ಲಿ ಅರ್ಥವಾಗಬೇಕು? ತೂಪಿ ಭಾಷೆಯ ಒಂದು ಉಪಭಾಷೆ ಆಗಿರಬಹುದು ಎಂದು ಅಂದಾಜಿಸಲಾಯಿತು. ಕಾರಪೀರು, ಅವಾ ಕನಾರಿಯೋ ಬುಡಕಟ್ಟು ಜನಾಂಗದವನಿರಬೇಕು ಎಂದು ಗ್ರಹಿಸಿ ಬ್ರೆಜಿಲ್ಗೆ ಕಳುಹಿಸಲಾಯಿತು. ಅವರಿಂದಲೂ ಕಾರಪೀರುವನ್ನು ಮಾತನಾಡಿಸಲಾಗಲಿಲ್ಲ.
ಕಾರಪೀರು ಯಾರು? ಆತನ ಗೋಳು ಏನು? ಎಂಬುದು ತಿಳಿಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಕೊನೆಯ ಪ್ರಯತ್ನ ಎಂಬಂತೆ 'ಅವ' ಬುಡಕಟ್ಟು ಜನಾಂಗದ ಯುವ ಸದಸ್ಯ ಕ್ಷಿರಮುಕು ಎಂಬವನನ್ನು ಕಾರಪೀರು ಬಳಿ ಕಳುಹಿಸಲಾಯಿತು. ಆಶ್ಚರ್ಯವೊಂದು ಘಟಿಸಿತು. ಕ್ಷಿರಮುಕುವಿನ ಒಂದು ಉಚ್ಚಾರ ಕಾರಪೀರುವಿನ ಏಕಾಂತವನ್ನು ತೊಡೆದು ಹಾಕಿತ್ತು. 'ಅಪ್ಪ' ಎಂದ ಕ್ಷಿರಮುಕು. ಮಾತೃಭಾಷೆಯಲ್ಲಿ ಸಂವಹಿಸಿದ ಇಬ್ಬರಿಗೂ ತಾವು ಸ್ವಂತ ತಂದೆ ಮಕ್ಕಳು ಎಂದು ಅರಿವಾಗಿತ್ತು.
ಕ್ಷಿರಮುಕು ತನ್ನ ತಂದೆಯನ್ನು ಜತೆಯಲ್ಲೇ ನೆಲೆಸುವಂತೆ ಮನವೊಲಿಸಿದ. ಎಷ್ಟೋ ವರ್ಷಗಳ ಬಳಿಕ ಮತ್ತೆ ಕಾರಪೀರು ತನ್ನ ಹಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಮಳೆಕಾಡಲ್ಲಿ ಸ್ವಚ್ಚಂದದಿಂದ ಬೇಟೆಯಾಡಲು, ಆರಾಮವಾಗಿ ಕಣ್ತುಂಬ ನಿದ್ರಿಸಲು ಸಾಧ್ಯವಾಯಿತು. ನಂತರದ ದಿನಗಳಲ್ಲಿ ಮರು ಮದುವೆಯಾಗಿ ಸಂಸಾರವನ್ನು ಹೂಡಿ ಸುಖಿ ಜೀವನ ಕಂಡುಕೊಂಡ.
ಆತನ ಜನಾಂಗ ಈಗಲೂ ಬಿಳಿಯರ ಭಯದ ಕರಿನೆರಳಲ್ಲಿದೆ. 'ಅವ'ರು ವಾಸವಿದ್ದ ಬ್ರೆಜಿಲ್ನ ಅಮೆಜಾನ್ ಕಾಡು ಈಗಾಗಲೇ ಅರೆವಾಸಿ ನಾಶವಾಗಿದೆ. ಬುಡಕಟ್ಟುಗಳ ಶೇಕಡಾ 50 ಮಂದಿ ಬಿಳಿಯರ ಸಂಪರ್ಕ ಹೆಚ್ಚಿದಂತೆ ಸಾವಿಗೀಡಾಗುತ್ತಿದ್ದಾರೆ. ಬಿಳಿಯರ ಸಂಪರ್ಕದಿಂದ ಬಂದ ಸಾಂಕ್ರಾಮಿಕ ರೋಗಗಳು, ಚಟಗಳು ಇದಕ್ಕೆ ಕಾರಣ.
'ಮಗಳ ಬದುಕು ತನ್ನಂತೆ ನರಕ ಸದೃಶವಾಗಬಾರದು. ಕ್ರೀಡಾ ಚೈತನ್ಯದಿಂದ ಕಾಡಿನಲ್ಲಿ ಬೇಟೆಯಾಡಬೇಕು. ಮೀನು ಮಾಂಸ ತಿಂದು ಆರೋಗ್ಯವಂತಳಾಗಿ ಬದುಕಬೇಕು' ಎಂಬ ಆಸೆ ಕಾರಪೀರುವಿನದ್ದು.
- ಮಂಜುನಾಥ್ ಎಲ್.ಕೆ.
mhk963@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


