ಸಾಪ್ತಾಹಿಕಪ್ರಭ

ಸಾಹಿತ್ಯರಂಗದ ರಜನೀಕಾಂತ

ಸಾಹಿತ್ಯರಂಗದ ರಜನೀಕಾಂತ
Published On :

ಹಳ್ಳಿಗಳನ್ನೆಲ್ಲ ಒಂದೊಂದಾಗಿ ತಿಂದು ತೇಗಿ
ಕಾಡ್ಗಿಚ್ಚಿನಂತೆ ಬೆಳೆಯುತ್ತಿರುವ ಬೆಂಗಳೂರಲ್ಲಿ
ಇನ್ನೂ ಉಳಿದಿದ್ದರೆ ಒಂದು ಹಳ್ಳಿ
ಅದು ಗೆಳೆಯ ವಿಮರ್ಶಕ ನರಹಳ್ಳಿ
ಹೆಸರಿನಲ್ಲಿ ಮಾತ್ರವಲ್ಲ ಅವರ ನರನಾಡಿಗಳಲ್ಲಿ
ಹರಿಯುತ್ತಿರುವುದು ಹಳ್ಳಿಯ ಜನರ ಮುಗ್ಧತೆ
ನಿರ್ಮಲ ನಗು, ಹೃದಯ ವೈಶಾಲ್ಯ, ಸ್ನೇಹಪರತೆ

ಒಳ್ಳೆಯ ವಿಮರ್ಶಕ ಮಾತ್ರವಲ್ಲ
ವಿಮರ್ಶಕರಾದರೂ ಒಳ್ಳೆಯವರು ನಮ್ಮ ಬಾಲು
ಇವರ ವಿಮರ್ಶೆಯ ಬಾಲು ವೇಗವಾಗಿ ನುಗ್ಗಿ
ಅನಿರೀಕ್ಷಿತವಾಗಿ ಪುಟಿದು ಘಾಸಿಗೊಳಿಸುವುದಿಲ್ಲ
ತಬ್ಬಿಬ್ಬುಗೊಳಿಸುವ ಸ್ಪಿನ್ನಲ್ಲ, ಗೂಗ್ಲಿಯೂ ಅಲ್ಲ
ಬಾಲು ಎಂದರೆ ಹೂವಿನ ಚೆಂಡು
ಎದುರಿಸಲು ಬೇಡ ಹೆಲ್ಮೆಟ್ಟು ಪ್ಯಾಡು

ಅಪಾರ ಅಧ್ಯಯನ, ಧ್ಯಾನ, ಮನನಗಳಿಂದ
ಹದಗೊಂಡು, ಅಗೆದಷ್ಟೂ ಹೊಸ ಹೊಸ
ಒಳನೋಟ ಕಾಣ್ಕೆಗಳನ್ನು ನೀಡುವ ಖನಿ
ನರಹಳ್ಳಿಯವರ ಲೇಖನಿ
ವಿಮರ್ಶೆಯ ಜತೆ ಅನುವಾದ, ಕತೆ
ಲಲಿತ ಪ್ರಬಂಧಗಳನ್ನೂ ಬರೆದ ಈ ಸಾಹಿತಿ
ಉತ್ತಮ ಅಧ್ಯಾಪಕ ಮತ್ತು ದಕ್ಷ
ಪ್ರಾಂಶುಪಾಲರಾಗಿಯೂ ತೋರಿದ್ದಾರೆ ತಮ್ಮ ಛಾತಿ

ವಿಚಾರ ಸಂಕಿರಣಗಳಲ್ಲಿ ನಿಂತರೆ ಮೈಕಿನೆದುರು
ವಿಷಯ ಸಂಕೀರ್ಣವಾದರೂ ನಸು ನಗುತ್ತ ಪದರು
ಪದರಾಗಿ ಸರಳ ಮಾತುಗಳಲ್ಲಿ ಬಿಡಿಸಿ ಹೇಳುವ ಪರಿ
ಕೊಂಡೊಯ್ಯುವುದು ಕೇಳುಗರನ್ನು ಬೇರೆಯದೇ ಲೋಕಕ್ಕೆ
ಕಾವ್ಯರಚನೆಯಲ್ಲಿ ಕುಮಾರವ್ಯಾಸನ ಹಾಗೆ
ಉಪನ್ಯಾಸದಲ್ಲಿ ನರಹಳ್ಳಿಯವರದ್ದು
ಪದವಿಟ್ಟಳುಪದೊಂದಗ್ಗಳಿಕೆ

ಸಮಾನ ಅಭಿರುಚಿಯ ಗೃಹಿಣಿ ರಜನಿಯ ಕೈ ಹಿಡಿದು
ಹೆಮ್ಮೆ ಪಡುವಂಥ ಇಬ್ಬರು ಹೆಮ್ಮಕ್ಕಳನ್ನು ಪಡೆದು
ಸಂತೃಪ್ತ್ತ ಗೃಹಸ್ಥ ಜೀವನ ನಡೆಸುತ್ತಿರುವ ನರಹಳ್ಳಿ
ಬೆಳ್ಳಿ ಕೂದಲ ಕೋರೆ ಮುಂಡಾಸು ತಲೆಯಲ್ಲಿ
ಮಿರಿ ಮಿರಿ ಮಿಂಚುತ್ತಿದ್ದರೂ ಸದಾ ಬಾಲಸುಬ್ರಹ್ಮಣ್ಯ
ಅರುವತ್ತಾದರೂ ಜೀವನೋತ್ಸಾಹ ಅಪರಿಮಿತ
ಸಾಹಿತ್ಯರಂಗದ ರಜನೀಕಾಂತ

(ವಿಮರ್ಶಕ ನರಹಳ್ಳಿಯವರಿಗೆ ನ.23ರಂದು 60 ವರ್ಷ ತುಂಬುತ್ತಿರುವ ನಿಮಿತ್ತ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕವಿ ಡುಂಡಿರಾಜ್ ಬರೆದ ಕವಿತೆ.)

- ಎಚ್.ಡುಂಡಿರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.