ಸಾಪ್ತಾಹಿಕಪ್ರಭ

ನೂರರ ಪುಟಾಣಿ

ಬಂಗಾಳಿ ಬಾಬುಗಳ ಬಳಿ ಹೋಗಿ ಸಂದೇಶ್ ಅಂದರೆ ಅವರ ಬಾಯಿ ನೀರೂರುತ್ತದೆ. ನಮಗೆ ಮೈಸೂರ್‌ಪಾಕ್, ಕುಂದಾ, ಪೇಡಾ ಇದ್ದಂತೆ ಬಂಗಾಳದಲ್ಲಿ ಸಂದೇಶ್ ಮನೆಮಾತಾದ ...

ನೂರರ ಪುಟಾಣಿ
Published On :

ಬಂಗಾಳಿ ಬಾಬುಗಳ ಬಳಿ ಹೋಗಿ ಸಂದೇಶ್ ಅಂದರೆ ಅವರ ಬಾಯಿ ನೀರೂರುತ್ತದೆ. ನಮಗೆ ಮೈಸೂರ್‌ಪಾಕ್, ಕುಂದಾ, ಪೇಡಾ ಇದ್ದಂತೆ ಬಂಗಾಳದಲ್ಲಿ ಸಂದೇಶ್ ಮನೆಮಾತಾದ ಎಲ್ಲರ ಫೇವರಿಟ್ ಸಿಹಿಭಕ್ಷ್ಯ (ಎರಡು ದಿನದ ಹಿಂದಷ್ಟೇ ತಮ್ಮ ಪ್ರೀತಿಯ ಕ್ರಿಕೆಟ್ ದೇವರು ಸಚಿನ್‌ಗೆ ವಿದಾಯ ಹೇಳಲು ಬಂಗಾಳಿಗಳು ಈಡನ್‌ಗಾರ್ಡನ್ನಲ್ಲಿ ಐದು ಕೇಜಿ ಸಂದೇಶ್ ತಂದು ಸಚಿನ್ ಮುಂದೆ ಇಟ್ಟರಂತೆ). ಬಂಗಾಳಿಗಳು ಮೊದಲೇ ಭಕ್ಷ್ಯಪ್ರಿಯರು. ಬಾಯಲ್ಲಿ ಸಕ್ಕರೆಯ ತುಂಡಿನಂತೆ ಕರಗುವ ಈ 'ಶೊಂದೇಶ್‌' ಅನ್ನು ಚಪ್ಪರಿಸಿಕೊಂಡು ತಿನ್ನುತ್ತ ರಸಗ್ರಹಣ ಮಾಡುತ್ತಾರೆ.
ಬಹುಶಃ ಉಪೇಂದ್ರ ಕಿಶೋರ್ ರಾಯ್ ಚೌಧರಿ ತಮ್ಮ ಪತ್ರಿಕೆ ಶುರುಮಾಡುವಾಗ ಇದೆಲ್ಲವನ್ನು ಒಮ್ಮೆ ಮನಸ್ಸಿಗೆ ತಂದುಕೊಂಡರು ಎಂದು ಕಾಣುತ್ತದೆ. ಹೆಸರಿಗೆ ತಕ್ಕಂತೆ ಅದು ಆತ್ಮೀಯವಾಗಿರಬೇಕು. ಜೊತೆಗೆ, ಓದುಗನನ್ನು ಒತ್ತಾಯಪಡಿಸಿ ಪೀಡಿಸದೆ ಹೆದರಿಸಿ ದಂಡಿಸದೆ, ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವ ಗೆಳೆಯನ ಕೆಲಸವನ್ನೂ ಮಾಡಬೇಕು. ಪುಟಪುಟವೂ ಸಿಹಿಖಾದ್ಯದಂತೆ ರುಚಿಕಟ್ಟಾಗಿರಬೇಕು. ಇಷ್ಟೆಲ್ಲ ಇರಬೇಕು ಅಂದ ಮೇಲೆ ಅದು ಮಕ್ಕಳ ಪತ್ರಿಕೆ ಆಗಿರಬೇಕೆಂದು ಬೇರೆ ಹೇಳಬೇಕಿಲ್ಲ ತಾನೆ?
ಉಪೇಂದ್ರ ಬಂಗಾಳದಲ್ಲಿ ಮುದ್ರಣಾಲಯ ತೆರೆದ ಕೆಲವೇ ಗಟ್ಟಿಗರಲ್ಲಿ ಒಬ್ಬರು. ಪ್ರೆಸ್ಸೆಂದರೇ ನಷ್ಟದ ಬಾಬ್ತು ಎಂಬಂತಿದ್ದ ಕಾಲ ಅದು. ಯಾವ ಸಮಯದಲ್ಲಿ ಬ್ರಿಟಿಷರು ಬಂದು ಮುಟ್ಟುಗೋಲು ಹಾಕುತ್ತಾರೋ ಗೊತ್ತಾಗದ ಅನಿಶ್ಚಿತತೆಯಲ್ಲಿ ದುಬಾರಿ ಪೇಪರು-ಶಾಯಿ ಖರೀದಿಸಿ ಅಚ್ಚುಮೊಳೆ ಜೋಡಿಸಿ ಕೆಲಸ ಮಾಡಬೇಕಿದ್ದ ಕಾಲ. ಅಂತಹ ಒಂದಾನೊಂದು ಕಾಲದಲ್ಲಿ ಉಪೇಂದ್ರ, ಪ್ರಕಾಶನವನ್ನು ಸೀರಿಯಸ್ ಆಗಿ ತೆಗೆದುಕೊಂಡು ಜಟ್ಟಿಯಂತೆ ಎದೆಗಟ್ಟಿ ಮಾಡಿಕೊಂಡು ಕುಸ್ತಿಕಣಕ್ಕೆ ಇಳಿದರು. ಸಂದೇಶದ ಮೊದಲ ಪ್ರತಿ ಪ್ರಿಂಟಾಗಿ ಹೊಬಂದಾಗ ಅವರಿಗೆ ಐವತ್ತರ ಹುಟ್ಟುಹಬ್ಬ.
ಇದೆಲ್ಲ 1913ರ ಕತೆ. ಉಪೇಂದ್ರ ತನ್ನ ಮಗ ಸುಕುಮಾರನನ್ನು ಪ್ರಿಂಟಿಂಗ್ ತಂತ್ರಜ್ಞಾನದ ಎಲ್ಲ ಹೊಸ ಸಾಧ್ಯತೆಗಳನ್ನು ಕಲಿತುಕೊಂಡು ಬರಲು ಸಾಲಸೋಲ ಮಾಡಿ ಇಂಗ್ಲೆಂಡಿಗೆ ಕಳಿಸಿದರು. ಅಲ್ಲಿ ಎರಡು ವರ್ಷ ಇದ್ದ ಸುಕುಮಾರ್, ಆಗಿನ ಕಾಲಕ್ಕೆ ಆಧುನಿಕವೆನ್ನಬಹುದಾದ ಎಲ್ಲ ಹೊಸ ತಂತ್ರಜ್ಞಾನವನ್ನೂ ಬ್ರಿಟಿಶ್ ಮುದ್ರಣಶಾಲೆಯಲ್ಲಿ ಕಲಿತು, ಅವನ್ನು ತನ್ನ ಪ್ರೆಸ್‌ನಲ್ಲಿ ಅಳವಡಿಸುವ ಯೋಜನೆ ಹಾಕಿಕೊಂಡು 1915ರಲ್ಲಿ ತಾಯ್ನಾಡಿಗೆ ಮರಳಿದರು.
ಪತ್ರಿಕೆ ಶುರುವಾದ ಎರಡು ವರ್ಷದಲ್ಲೇ ಉಪೇಂದ್ರ ಅವರ ಜೀವನಯಾತ್ರೆ ಮುಗಿಯಿತು. ಪ್ರೆಸ್ಸು-ಪತ್ರಿಕೆಗಳೆರಡರ ಹೊಣೆಯೂ ಸುಕುಮಾರನ ತಲೆಮೇಲೆ ಬಿತ್ತು. ಹೆಸರು ಸುಕುಮಾರವಾದರೂ ಈ ಹುಡುಗನದು ದೈತ್ಯಶಕ್ತಿ. ಈ ಹುಡುಗ ಕವಿ ರವೀಂದ್ರನಾಥ ಟಾಗೋರರ ಸಹವರ್ತಿ, ಗೆಳೆಯ ಅಂದರಷ್ಟೇ ಸಾಕು, ಅವನ ಪ್ರತಿಭೆಯ ಬೀಸು ಹೇಗಿದ್ದೀತು ಅಂದಾಜಿಸಬಹುದು. ಸುಕುಮಾರ್ ರೇ ಬಂಗಾಳಿ ಅಸಂಗತ ಸಾಹಿತ್ಯ ಪ್ರವರ್ತಕ. ಬಂಗಾಳಿಯನ್ನು ಮೇಲುಮೇಲಿಂದ ಬಲ್ಲವರಲ್ಲೂ ಅಬೊಲ್‌ತಬೊಲ್ ಗೊತ್ತೋ ಎಂದು ಕೇಳಿದರೆ, ಖುಷಿಯಿಂದ ಪಟಪಟ ತಲೆ ಅಲ್ಲಾಡಿಸಿಯಾರು. ಕುವೆಂಪು ಅವರ ಕಿಂದರಜೋಗಿ, ರಾಜರತ್ನಂ ಅವರ ರತ್ನನ ಪದಗಳು, ಲಂಕೇಶರ ನೀಲು ಪದ್ಯಗಳು- ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಐದಾರು ಬಗೆ ಸಾಹಿತ್ಯವನ್ನು ಒಂದೇ ಬಟ್ಟಲೊಳಗೆ ತಿರುವಿ ತೆಗೆದರೆ ಹುಟ್ಟುವ ಚುರಮುರಿಯಂತೆ ಕಾಣುವ ಅಬೊಲ್‌ತಬೊಲ್ ಅಸಂಗತ ಸಾಹಿತ್ಯದ ಮೇರುಕೃತಿ. ಹಾಗೆಂದರೆ ಬಂಗಾಳಿಯಲ್ಲಿ ಶುದ್ಧ ತಲೆಹರಟೆ ಅಂತ ಅರ್ಥ!
ಇಷ್ಟೆಲ್ಲ ವಿಚಿತ್ರ-ವಿಕ್ಷಿಪ್ತ ಪ್ರತಿಭೆ ಇದ್ದ ಸುಕುಮಾರ್, 1915ರಲ್ಲಿ ಅಪ್ಪ ತೀರಿಕೊಂಡ ವರ್ಷವೇ ಸಂದೇಶದ ಸಂಪಾದಕರಾದರು. ಅಲ್ಲಿಂದ ಮುಂದೆ ಅದರ ದೆಸೆ ಖುಲಾಯಿಸಿತೆನ್ನಬೇಕು. ಹತ್ತುಹಲವು ದಿಕ್ಕಲ್ಲಿ ಹರಿಯುವ ತನ್ನ ತೇಜೋಪ್ರವಾಹಕ್ಕೆ ಒಂದು ಕಾಲುವೆಯಂತೆ ಸಂದೇಶವನ್ನು ಬಳಸಿಕೊಂಡ ರೇ ಅವರ ಅಸಂಖ್ಯ ಕತೆ-ಕವನ-ಚಿತ್ರಗಳು ಪತ್ರಿಕೆಯಲ್ಲಿ ಬಂದವು. ನೋಡನೋಡುತ್ತಿದ್ದಂತೆ ಅದು ಬಂಗಾಳಿಗರ ಅಚ್ಚುಮೆಚ್ಚಿನ ಪತ್ರಿಕೆಯಾಯಿತು. ಇನ್ನೊಂದು ವಿಚಾರ ಏನು ಗೊತ್ತೆ? ಈ ರೇ, ಬಂಗಾಳದ ಇನ್ನೊಂದು ಉಜ್ವಲ ಕಿರಣ ಸತ್ಯಜಿತ್ ರೇಯ ತಂದೆ!
ಇನ್ನೂ ಮೂವತ್ತೈದು ಕಂಡಿರದ ಆ ಕನಸುಗಣ್ಣಿನ ಹುಡುಗ, ಮಗ ಸತ್ಯಜಿತ್ ಇನ್ನೂ ಎಳೆಯ ಹುಡುಗನಾಗಿದ್ದಾಗಲೇ 1923ರಲ್ಲಿ ವಿಧಿವಶರಾದರು. ನಗುನಗುತ್ತ ಸಂದೇಶ ಚಪ್ಪರಿಸುತ್ತಿದ್ದ ಮಕ್ಕಳ ಕಣ್ಣಲ್ಲಿ ನೀರು ಹನಿಗಟ್ಟುವಂತೆ ಮಾಡಿದರು. ರೇ ಇಲ್ಲದ ಪತ್ರಿಕೆ ಮುನ್ನಡೆಸುವುದು ಯಾರು, ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಯಿತು. ಸಂದೇಶದಲ್ಲಿ ಕತೆ ಕವಿತೆ ಬರೆದು ಪ್ರಕಟಿಸುತ್ತಿದ್ದ ಟಾಗೋರರಿಗೂ ಗೆಳೆಯನ ಅಕಾಲಿಕ ಮರಣ ಎದೆ ನಡುಗಿಸಿದರೂ ಪತ್ರಿಕೆ ನಡೆಸುವ ಗುಂಡಿಗೆ ಬರಲಿಲ್ಲ. ಕೊನೆಗೆ ಸುಕುಮಾರರ ಕೊನೇ ತಮ್ಮ ಸುಬಿನೋಯ್ ಅದರ ಸಂಪಾದಕರಾದರು.
ಪತ್ರಿಕೆ ಆಗ ನಿಜವಾಗಿಯೂ ಒಂದು ನಿರ್ವಾತವನ್ನು ಅನುಭವಿಸುತ್ತಿತ್ತು. ಪ್ರತಿ ತಿಂಗಳು ತಪ್ಪದೆ ಮಾರ್ಕೆಟ್ಟಿಗೆ ಬಂದರೂ, ಅಲ್ಲಿ ಮಕ್ಕಳು ಸುಕುಮಾರ ರೇ ಅನ್ನು ಪುಟಪುಟ ತಿರುಗಿಸಿ ಹುಡುಕುತ್ತಿದ್ದದ್ದು ಮಾತ್ರ ಸತ್ಯ. ಎರಡು ವರ್ಷ ಹಾಗೋ ಹೀಗೋ ಕುಂಟುತ್ತ ನಡೆದ ಪತ್ರಿಕೆಗೆ 1925ರಲ್ಲಿ ಏದುಸಿರು ಬಂತು. ಅಲ್ಲಿಂದ ನಾಲ್ಕು ವರ್ಷ ಅಜ್ಞಾತವಾಸ. 1929ರಲ್ಲಿ ಉಪೇಂದ್ರರ ಇಡೀ ಪ್ರೆಸ್ಸನ್ನೇ ಇನ್ನೊಬ್ಬ ಪ್ರಕಾಶಕ ಖರೀದಿಸಿ, ಸಂದೇಶದ ಮುದ್ರಣ ಹಕ್ಕುಗಳನ್ನೂ ಪಡೆದುಕೊಂಡ. ಸುಬಿನೋಯ್ ಸಂಪಾದಕರಾಗಿ ಮುಂದುವರಿದರೂ ಮತ್ತೆ 1934ರಲ್ಲಿ ಅದಕ್ಕೆ ಗ್ರಹಣ ಬಡಿಯಿತು.
ಸತ್ಯಜಿತ್ ರೇ, ಸಿನಿಮಾ ರಂಗಕ್ಕೆ ಸಮನಾಗಿ ನಿಲ್ಲುವಂಥ ಸಾಹಿತ್ಯದ ಕೆಲಸವನ್ನೂ ಮಾಡಿದ್ದಾರೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಅವರ ಅದ್ಭುತ ಪತ್ತೇದಾರಿ ಕತೆಗಳನ್ನೂ ವೈಜ್ಞಾನಿಕ ಕತೆಗಳನ್ನೂ ಓದಿ ಮೆಚ್ಚಿದವರಿಗೂ ಅವೆಲ್ಲ ಸಂದೇಶದಲ್ಲೇ ಮೊದಲ ಬಾರಿ ಬೆಳಕು ಕಂಡದ್ದು ಎಂಬ ವಿಚಾರ ಗೊತ್ತುಂಟೋ ಇಲ್ಲವೋ. ರೇ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೂ ತನ್ನ ತಂದೆ ನಡೆಸಿದ ಪತ್ರಿಕೆಯ ಮಧುರ ನೆನಪುಗಳು ಮರುಕಳಿಸುತ್ತಲೇ ಇತ್ತೆಂದು ಕಾಣುತ್ತದೆ. ಕೊನೆಗೂ ಒಂದು ದಿನ ಅವರಿಗೆ, ಅದನ್ನು ಮತ್ತೆ ಚಾಲೂ ಮಾಡಿ ಅಪ್ಪನ ಕನಸನ್ನು ಪೂರ್ತಿ ಮಾಡುವ ಹುಕಿ ಬಂದಿರಬೇಕು. ದೀರ್ಘಕಾಲ ತೆರೆಮರೆಗೆ ಸರಿದುಹೋಗಿದ್ದ ಸಂದೇಶ ಮತ್ತೆ ರೇ ಕೈಯಿಂದ 1961ರಲ್ಲಿ ಶುರುವಾಯಿತು. ರೇ ತನ್ನ ಮಾವನ ಮಗ ಸುಭಾಸ್ ಮುಖ್ಯೋಪಾಧ್ಯಾಯರ ಜೊತೆ ಸೇರಿ ಸಂಪಾದಕತ್ವದ ಹೊಣೆ ಹೊತ್ತರು. ಅಪ್ಪನಂತೆಯೇ ಮಗ ರೇ ಕೂಡ ಒಳ್ಳೆಯ ಚಿತ್ರಕಲಾವಿದನಾದ್ದರಿಂದ ಸಂದೇಶಕ್ಕೆ ಚಿತ್ರಗಳ ಕೊರತೆ ಕಾಡಲೇ ಇಲ್ಲ.
ಚೆನ್ನಾಗಿಯೇ ನಡೆಯುತ್ತಿದ್ದ ಸಂದೇಶಕ್ಕೆ ಮತ್ತೊಂದು ಹೊಡೆತ ಬಿದ್ದದ್ದು 1992-93ರಲ್ಲಿ. ಸಂಪಾದಕ ವರ್ಗದಲ್ಲಿದ್ದ ಮೂವರು (ರೇ ಅವರೂ ಸೇರಿ), ಈ ಎರಡು ವರ್ಷಗಳ ಅವಧಿಯಲ್ಲಿ ಕಣ್ಮುಚ್ಚಿದ್ದರಿಂದ, ಪತ್ರಿಕೆಯ ಭವಿಷ್ಯ ಡೋಲಾಯಮಾನವಾಯಿತು. ರೇ ಮಗ ಸಂದೀಪ್ ಕೊನೆಗೆ ಸಂಪಾದಕನ ಪಾತ್ರ ವಹಿಸಲು ಮುಂದೆ ಬಂದರು.
ಅಲ್ಲಿಂದೀಚೆಗೆ, ಸಂದೇಶದ್ದು ಕಣ್ಣಾಮುಚ್ಚಾಲೆಯ ಕತೆ. ಬಂತೆಂದರೆ ಬಂತು, ಇಲ್ಲವಾದರೆ ಇಲ್ಲ. ಪ್ರತಿ ತಿಂಗಳು ತಪ್ಪದೆ ಮಕ್ಕಳಿಗೆ ಚಪ್ಪರಿಸಲು ಸಿಗುತ್ತಿದ್ದ ಪತ್ರಿಕೆ ಅಕಾಲಿಕವಾಯಿತು. 2003ರಲ್ಲಿ ಸಂಪಾದಕ ವರ್ಗ ಫೋರ್ಡ್ ಪ್ರತಿಷ್ಠಾನಕ್ಕೆ ಸಹಾಯಕ್ಕಾಗಿ ಬೇಡಿಕೊಂಡಿತು. ಅಲ್ಲಿಂದ ಬಂದ 38 ಲಕ್ಷ ರುಪಾಯಿ ಕೂಡ ಸಂದೇಶವನ್ನು ಎತ್ತಲು ಸಾಕಾಗಲಿಲ್ಲ. ಪತ್ರಿಕೆಗೆ ಬೇಕಿದ್ದುದು ದುಡ್ಡಲ್ಲ, ಬದಲಾದ ಯುಗಕ್ಕೆ ತಕ್ಕಂತೆ ಬದಲಾಗುತ್ತ ನಡೆದಿರುವ ಮಕ್ಕಳೆಂಬ ಓದುಗವರ್ಗವನ್ನು ಹಿಡಿದಿಡಬಲ್ಲ ಆಸಕ್ತಿ ಹುಟ್ಟಿಸುವ ಹೂರಣ. ಒಂದೇ ಒಂದು ಖುಷಿಯ ಮಾತೆಂದರೆ, ಸಂದೇಶ ಇನ್ನೂ ಬದುಕಿದೆ. 2013ರಲ್ಲಿ ಅದು ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ. ಹೊಸ ಜನರೇಶನ್ನಿನ ಹೊಸ ಓದುಗರಿಗೆ ಆಪ್ತವಾಗುವ ಪ್ರಯತ್ನ ನಡೆಸಿದೆ. ಈ ನೂರು ವರ್ಷದ ಪುಟಾಣಿಗೆ ಶುಭ ಹಾರೈಸೋಣವೆ?

- ರೋಹಿತ್ ಚಕ್ರತೀರ್ಥ
rohithmath@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.