ಭಾಗ್ ಮಿಲ್ಖಾ ಭಾಗ್

'ಹಾರುವ ಸಿಖ್' ಎಂದೇ ಖ್ಯಾತರಾಗಿದ್ದ ಭಾರತೀಯ ಕ್ರೀಡಾರಂಗದ ದಂತಕತೆ, ಮಿಲ್ಖಾ ಸಿಂಗ್ ನಿಜಜೀವನ ಆಧಾರಿತ ಚಲನಚಿತ್ರ 'ಭಾಗ್ ಮಿಲ್ಖಾ ಭಾಗ್' ನಿಜಕ್ಕೂ ಸ್ಫೂರ್ತಿಯ ಸೆಲೆಯುಕ್ಕಿಸುವ, ಸೋಲೇ ಗೆಲುವಿನ ಸೋಪಾನ ಎಂದು ನಿರೂಪಿಸುವ ಅಪರೂಪದ ದೃಶ್ಯ ಕಾವ್ಯ.
ರಾಕೇಶ್ ಓಂಪ್ರಕಾಶ್ ಮೆಹೆತಾ ನಿರ್ದೇಶನದ ಈ ಅದ್ಭುತ ಚಿತ್ರ ಆರಂಭವಾಗುವುದೇ ಮಿಲ್ಖಾ ಸಿಂಗ್ನ ರೋಮ್ ಒಲಂಪಿಕ್ ಸೋಲಿನಿಂದ. 400 ಮೀಟರ್ ಓಟದಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದ ಮಿಲ್ಖಾ ಸಿಂಗ್, ಭಾರತಕ್ಕೆ ರೋಮ್ನಲ್ಲಿ ಚಿನ್ನದ ಪದಕ ತಂದು ಕೊಟ್ಟೇ ಕೊಡುತ್ತಾನೆಂದು ಪ್ರಧಾನಿ ಪಂಡಿತ್ ನೆಹರು ಆದಿಯಾಗಿ ಎಲ್ಲಾ ಭಾರತೀಯರೂ ನಿರೀಕ್ಷಿಸಿದ್ದರು. ಆದರೆ ಈ ಎಲ್ಲಾ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಮಿಲ್ಖಾ ಸಿಂಗ್ ಸೋಲುತ್ತಾನೆ.. ಆತ ಓಡುವಾಗ ಹಿಂತಿರುಗಿ ನೋಡಿದ್ದೇಕೆ? ಎಂಬ ಪ್ರಶ್ನೆಗಳು ಏಳುತ್ತವೆ. ಮಿಲ್ಖಾ ಸಿಂಗ್ನ ಬದುಕಿನ ಚಿತ್ರಣದ ಸಿಂಹಾವಲೋಕನ ಅಲ್ಲಿಂದ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಬಾಲ್ಯದಲ್ಲಿ ತಾನು ಕಂಡ ಕಠೋರ ಕ್ಷಣಗಳು ಮಿಲ್ಖಾನ ಕಣ್ಮುಂದೆ ಸುಳಿಯುತ್ತವೆ. ಈಗಿನ ಪಾಕಿಸ್ತಾನದಲ್ಲಿರುವ ಮುಲ್ತಾನ್ ಸಮೀಪದ ಗೋವಿಂದಪುರ ಮಿಲ್ಖಾನ ಹುಟ್ಟೂರು. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ದಂಗೆಯಲ್ಲಿ ಮಿಲ್ಖಾನ ಇಡೀ ಕುಟುಂಬ ದಾರುಣ ಹತ್ಯೆಗೀಡಾಗುತ್ತದೆ. ಆಗ ಅವನ ತಂದೆ ಚೀತ್ಕರಿಸಿದ ಭಾಗ್..ಮಿಲ್ಖಾ ಭಾಗ್... ಅಂದರೆ ಓಡು.. ಮಿಲ್ಖಾ ಓಡು.. ತಪ್ಪಿಸಿಕೋ ಎಂಬ ಕೂಗು ಅವನ ಜೀವನದ ಬಿರುಗಾಳಿಯ ಓಟಕ್ಕೆ ನಾಂದಿ ಹಾಡುತ್ತದೆ. ತಮ್ಮ ಮೂಲ ನಿವಾಸ ತ್ಯಜಿಸಿ ನಿರಾಶ್ರಿತರಾಗಿ ಭಾರತ ಸೇರಿದ ಲಕ್ಷಾಂತರ ಮಂದಿಯಲ್ಲಿ ಮಿಲ್ಖಾ ಸಿಂಗ್ ಕೂಡಾ ಒಬ್ಬ. ವಿಧಿ ಹೇಗೋ ಅವನನ್ನು ಅವನ ಅಕ್ಕನ ಜೊತೆಗೂಡಿಸುತ್ತದೆ. ಕಿತ್ತು ತಿನ್ನುವ ಬಡತನ, ಭಾವನ ಮನೆಯವರ ಕ್ರೌರ್ಯ ಇವು ಮಿಲ್ಖಾನನ್ನು ಕಲ್ಲಿದ್ದಲು, ಗೂಡ್ಸ್ರೈಲಿನಿಂದ ಆಹಾರ ಸಾಮಗ್ರಿಗಳನ್ನು ಕದಿಯಲು ಪ್ರೇರೇಪಿಸುತ್ತವೆ. ಆಗ ಪೋಲೀಸರಿಂದ ತಪ್ಪಿಸಿಕೊಂಡು ಓಡುತ್ತಾನೆ ಈ ಹುಟ್ಟು ಓಟಗಾರ. ಮುಂದೆ ಭಾರತೀಯ ಆರ್ಮಿಯಲ್ಲಿ ಜವಾನನಾಗಿ ಮಿಲ್ಖಾ ಸೇರುತ್ತಾನೆ. ಅಲ್ಲಿ ಹತ್ತು ಕಿ.ಮೀ ಓಟದಲ್ಲಿ ಮೊದಲು ಬರುವ ಹತ್ತು ಮಂದಿಗೆ ಒಂದು ಲೋಟ ಹಾಲು ಹೆಚ್ಚಾಗಿ ಸಿಗುತ್ತದೆ ಎಂಬುದಕ್ಕಾಗಿ ಎಲ್ಲರನ್ನೂ ಮೀರಿಸಿ ಓಡಿ ತರಬೇತುದಾರ ಗುರುದೇವ ಸಿಂಗ್ನ ಗಮನ ಸೆಳೆಯುತ್ತಾನೆ. ಗುರುದೇವ್ ಸಿಂಗ್ ಮಿಲ್ಖಾನಲ್ಲಿರುವ ಹುಟ್ಟು ಕ್ರೀಡಾಪಟುವನ್ನು ಗುರುತಿಸಿ ಉತ್ತೇಜನ ನೀಡುತ್ತಾನೆ, 'ದೇಶಕ್ಕಾಗಿ ಓಡುವ ಓಟಗಾರನಾಗಬೇಕು' ಎಂಬ ಛಲವನ್ನು ಅವನಲ್ಲಿ ತುಂಬುತ್ತಾನೆ. ಆಗಲೇ ಭಾರತವನ್ನು ಪ್ರತಿನಿಧಿಸಿದ್ದ ಓಟಗಾರನೊಬ್ಬನ ಇಂಡಿಯಾ ಬ್ಲೇಜರ್ ಅನ್ನು ಅಸೆಯಿಂದ ಧರಿಸಿ ಅವನಿಂದ ಅವಮಾನಿತನಾಗುವ ಮಿಲ್ಖಾನಲ್ಲಿ ತಾನು ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟು ಆಗಲೇಬೇಕೆಂಬ ಛಲ ಮೊಳಕೆಯೊಡೆಯುತ್ತದೆ. ಪ್ರತಿಸ್ಪರ್ಧಿಗಳು ಅಸೂಯೆಯಿಂದ ಕಾಲಿಗೆ ಗಾಯ ಮಾಡಿದರೂ ಬರಿಗಾಲಲ್ಲೇ ಓಡಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾನೆ.
ನಂತರ 1958ರ ಟೋಕಿಯೋ ಏಷ್ಯಾಡ್ನಲ್ಲಿ ಏಷ್ಯಾದ ಬಿರುಗಾಳಿ ಎಂದೇ ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಅಬ್ದುಲ್ ಖಾಲಿಕ್ನನ್ನು ಕೂದಲೆಳೆಯಿಂದ ಸೋಲಿಸಿ ಚಿನ್ನ ಗೆಲ್ಲುತ್ತಾನೆ. ಹಾಗೆಯೇ ಕಾರ್ಡಿಫ್ ಕಾಮನ್ವೆಲ್ತ್ಕ್ರೀಡಾಕೂಟದಲ್ಲೂ ದಿಗ್ವಿಜಯ ಸಾಧಿಸುತ್ತಾನೆ.
ಈ ಗೆಲುವುಗಳ ಹಿಂದಿದ್ದ ಕಠಿಣ ಪರಿಶ್ರಮ, ಅದಮ್ಯ ಇಚ್ಛಾಶಕ್ತಿ ಹಾಗೂ ಸಮರ್ಪಣಾ ಮನೋಭಾವವನ್ನು ಚಲನಚಿತ್ರ ಮನೋಜ್ಞವಾಗಿ ಕಟ್ಟಿಕೊಡುತ್ತದೆ. 1956ರ ಮೆಲ್ಬೋರ್ನ್ ಒಲಂಪಿಕ್ನಲ್ಲಿ ಸೋತ ಮಿಲ್ಖಾ, ರಾಷ್ಟ್ರೀಯ ತರಬೇತುದಾರ ರಣವೀರ್ ಸಿಂಗ್ ಅಡಿಯಲ್ಲಿ ಅತ್ಯಂತ ಕಠಿಣ ತರಬೇತಿ ಪಡೆಯುತ್ತಾನೆ. ತಾನು ತನ್ನ ಶ್ರಮಕ್ಕೆ ಸುರಿಸಿದ ಬೆವರನ್ನು ಸಂಗ್ರಹಿಸುವ ಮಿಲ್ಖಾ ದಿನವೂ ಒಂದು ಬಕೆಟ್ ಬೆವರು ಹರಿಸುವಷ್ಟು ಪರಿಶ್ರಮ ಪಡುತ್ತಾನೆ. ಈ ನಿರಂತರ ಪರಿಶ್ರಮವೇ ಮಿಲ್ಖಾ ಸೋಲನ್ನು ಮೆಟ್ಟಿ ನಿಲ್ಲುವಂತೆ ಮಾಡುತ್ತದೆ. ತಾನು ಓಡಿದ 80 ಅಂತಾರಾಷ್ಟ್ರೀಯ ಓಟಗಳಲ್ಲಿ 77ರಲ್ಲಿ ಗೆಲುವು ಸಾಧಿಸುವ ಮಿಲ್ಖಾ, ಕಾಮನ್ವೆಲ್ತ್, ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತ ಹೆಮ್ಮೆಯಿಂದ ತಲೆಎತ್ತುವಂತೆ ಮಾಡುತ್ತಾನೆ. ಮಿನುಗತಾರೆಯಾದ ನಿರಾಶ್ರಿತ ಎಂಬ ಕೀರ್ತಿಗೆ ಪಾತ್ರನಾಗಿ ಏಷ್ಯಾದ ಸರ್ವ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿ ಪಡೆಯುತ್ತಾನೆ.
ಈ ಎಲ್ಲಾ ಸಾಧನೆಗಳೊಂದಿಗೆ ಕೋಟ್ಯಂತರ ಭಾರತೀಯರ ಕನಸುಗಳನ್ನು ಹೊತ್ತು 1960ರ ರೋಮ್ ಒಲಂಪಿಕ್ಗೆ ಹೋದ ಮಿಲ್ಖಾಗೆ ಸೋಲು ಮತ್ತೆ ಎದುರಾಗುತ್ತದೆ. ಮಿಲ್ಖಾ ಅಂತರ್ಮುಖಿಯಾಗುತ್ತಾನೆ. ಆಗ ಪ್ರಧಾನಿ ನೆಹರು, ಪಾಕಿಸ್ತಾನದ ಅಧ್ಯಕ್ಷ ಜನರಲ್ ಅಯೂಬ್ ಖಾನನ್ನೀಡಿದ ಆಹ್ವಾನದ ಅನ್ವಯ ಮಿಲ್ಖಾನನ್ನು ಪಾಕಿಸ್ತಾನಕ್ಕೆ ಸ್ನೇಹಯುತ ಸ್ಪರ್ಧೆಗಾಗಿ ಕಳಿಸಲು ಇಚ್ಛಿಸುತ್ತಾರೆ. ಪಾಕಿಸ್ತಾನದಲ್ಲಾದ ತನ್ನ ಕುಟುಂಬದ ಹತ್ಯಾಕಾಂಡ ಕಣ್ಮುಂದೆ ಸುಳಿದಂತಾಗುವುದರಿಂದ 'ನಾನು ಅಲ್ಲಿಗೆ ಹೋಗಲಾರೆ' ಎನ್ನುತ್ತಾನೆ ಮಿಲ್ಖಾ. 'ನೀನೊಬ್ಬ ಸೈನಿಕ, ಹಿಂದೆ ಆಗಿರುವುದನ್ನು ಮರೆತು ಹೋರಾಡಬೇಕು' ಎಂಬ ನೆಹರೂಜಿ ನುಡಿಗೆ ಓಗೊಟ್ಟು ಪಾಕಿಸ್ತಾನಕ್ಕೆ ಸ್ಪರ್ಧೆಗಾಗಿ ತೆರಳುತ್ತಾನೆ. ಅಲ್ಲಿ ಪತ್ರಿಕಾಪ್ರತಿನಿಧಿಗಳು ಸ್ಪರ್ಧೆ ಕುರಿತು ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದರೆ, ಮಿಲ್ಖಾ ತನ್ನ ಬದುಕಿನ ಓಟ ಅರಂಭವಾದ ಸ್ಥಳವನ್ನು ಅರಸಿ ಹೊರಟಿರುತ್ತಾನೆ. ತನ್ನ ಬಾಲ್ಯ ಸ್ನೇಹಿತನನ್ನು ಕಂಡು ಕಣ್ಣೀರ್ಗರೆಯುತ್ತಾನೆ. ಇದು ತನ್ನ ಬದುಕಿನ ಕೊನೆಯ ಓಟವೆಂದು ಭಾವಿಸಿ ಪಾಕಿಸ್ತಾನದಲ್ಲಿ ಅಬ್ದುಲ್ ಖಾಲಿಕ್ನೆದುರು ಜಯಭೇರಿ ಬಾರಿಸುವ ಮಿಲ್ಖಾ, ಅಯೂಬ್ ಖಾನ್ರಿಂದ 'ಹಾರುವ ಸಿಖ್' ಎಂಬ ಬಿರುದು ಗಳಿಸುತ್ತಾನೆ; ತಾನು ನಿರಾಶ್ರಿತನಾದ ಜಾಗದಲ್ಲಿಯೇ ಗೆಲುವಿನ ಪತಾಕೆ ಹಾರಿಸುತ್ತಾನೆ.
ಬದುಕಿನಲ್ಲಿ ಯಶಸ್ಸಿಗೆ ಪರಿಶ್ರಮ, ಇಚ್ಛಾಶಕ್ತಿ ಹಾಗೂ ಸಮರ್ಪಣಾ ಮನೋಭಾವಗಳೇ ಬೀಜ ಮಂತ್ರಗಳೆಂಬ ಮಿಲ್ಖಾ ಸಿಂಗ್ನ ಹೇಳಿಕೆಯ ಸಹಿಯೊಂದಿಗೆ ಮುಕ್ತಾಯಗೊಳ್ಳುವ ಚಿತ್ರ ಭರವಸೆಯ ಬೆಳಕನ್ನು ಎಲ್ಲರ ಎದೆಯಲ್ಲೂ ಹೊತ್ತಿಸುತ್ತದೆ. ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬ ಸಂದೇಶ ಸಾರುತ್ತದೆ. ಛಲ, ದೃಢತೆ, ಆತ್ಮವಿಶ್ವಾಸದ ಪ್ರತೀಕವಾದ ಮಿಲ್ಖಾ ಸಿಂಗ್ನ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ ಫರ್ಹಾನ್ ಅಖ್ತರ್.
ಅದ್ಭುತ ನಿರ್ದೇಶನ, ಅಭಿನಯ, ಸಂಗೀತ ಎಲ್ಲದರ ಒಟ್ಟು ಮೊತ್ತವಾಗಿ ಭಾರತೀಯ ಸಿನಿಮಾದ ದೃಶ್ಯ ಕಾವ್ಯವಾಗಿ, ಜನತೆಗೆ ಜೀವನ ಸ್ಫೂರ್ತಿಯ ಅಮರ ಸಂದೇಶವಾಗಿ ಮೂಡಿಬಂದಿದೆ 189 ನಿಮಿಷಗಳ ಈ ಚಲನಚಿತ್ರ. ತನ್ನ ಬದುಕಿನ ಏರಿಳಿತಗಳನ್ನೆಲ್ಲಾ 'ದಿ ರೇಸ್ ಆಫ್ ಮೈ ಲೈಫ್' ಎಂಬ ಜೀವನ ಚರಿತ್ರೆಯಲ್ಲಿ ದಾಖಲಿಸಿರುವ ಮಿಲ್ಖಾ, ಅದನ್ನು ಸಿನಿಮಾವಾಗಿಸಲು ತೆಗೆದುಕೊಂಡ ಗೌರವಧನ ಎಷ್ಟು ಗೊತ್ತೇ? ಕೇವಲ ಒಂದು ರುಪಾಯಿ! 'ನನಗೆ ಹಣ ಮುಖ್ಯವಲ್ಲ, ಪ್ರಪಂಚ ನನ್ನ ಕಥೆಯನ್ನು ನೋಡುತ್ತಿದೆಯಲ್ಲಾ ಅಷ್ಟೇ ಸಾಕು. ಇದು ತೀವ್ರ ಸಂಕಷ್ಟದಲ್ಲಿರುವವರಿಗೂ ಸಾಧನೆ ಮಾಡುವ ಸ್ಫೂರ್ತಿ ನೀಡುವಂತಾಗಲಿ ಎಂಬುದೇ ನನ್ನ ಉದ್ದೇಶ' ಎನ್ನುವ ಮಿಲ್ಖಾನ ಆಶಯವನ್ನು ಸಾಕಾರಗೊಳಿಸುವಂತಿದೆ ಈ ಚಿತ್ರ.
- ಎಚ್.ಎಸ್. ನವೀನ್ಕುಮಾರ್ ಹೊಸದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


