ಸಾಪ್ತಾಹಿಕಪ್ರಭ

ನೆನಪುಗಳ ಚಿತೆಯಲ್ಲಿ

ನೆನಪುಗಳ ಚಿತೆಯಲ್ಲಿ
Published On :

ಇಪ್ಪತ್ತೆರಡು ವರ್ಷಗಳ ನಂತರ ಪೋರ್ಟ್‌ಬ್ಲೇರ್ ಪಟ್ಟಣದಲ್ಲಿ ಕಾಲೂರಿದ. ನೆನಪುಗಳ ಚಿತೆ ಹೊತ್ತಿ ಉರಿಯಿತಷ್ಟೆ.
ಹಿಂದೆಲ್ಲ ಐದು ದಿನಗಳ ಹಡಗು ಪ್ರಯಾಣದ ಬಳಿಕ ತಲೆಯೊಳಗಿನ ಭಾರ ಮತ್ತು ಶರೀರದ ಬಸವಳಿಕೆ ಕಡಿಮೆಯಾಗಲು ಎರಡು ದಿನ ವಿಶ್ರಾಂತಿ ಅತ್ಯಗತ್ಯವಾಗಿತ್ತು. ಅದನ್ನು ನೆನೆದೇ ಇರಬೇಕು ರೆಸ್ಟ್‌ಹೌಸ್‌ನ ಕೃಷ್ಣಪ್ಪ ಹಾಸಿಗೆಯನ್ನು ಮೊದಲೇ ಸಿದ್ಧಪಡಿಸಿಟ್ಟಿದ್ದ. ಆದರೆ ಇಂದು ಸಂಜೆ ಇಲ್ಲಿ ಹಡಗಿನಿಂದಿಳಿದ ಬಳಿಕ ಆತನ ಉತ್ಸಾಹ ವರ್ಧಿಸಿತಷ್ಟೆ. ಈಗ ಈ ಅವೇಳೆಯಲ್ಲಿ ಇಲ್ಲೆಲ್ಲಾ ಓಡಿ ಕುಣಿದಾಡಬೇಕೆನಿಸಿತು. ಈ ದ್ವೀಪಸಮೂಹದ ದೃಶ್ಯ ಒಂದು ನೀಲಿರೇಖೆಯಂತೆ ಕಾಣಲು ತೊಡಗಿದಾಗಲೇ ಇಲ್ಲೆಲ್ಲಾ ಕುಣಿದಾಡಬೇಕೆಂದು ಮೋಹ ಉಂಟಾಯಿತು.
ಈ ದ್ವೀಪ ಇಂದು ನಿರ್ಜನವಲ್ಲ. ಅಭಿಶಪ್ತವೂ ಅಲ್ಲ. ಅಂದೆಲ್ಲ ಇಲ್ಲಿ ಕಂಡುಬರುತ್ತಿದ್ದುದು ಎಂದೋ ಮಂಕಾಗಿ ಹೋದ ಮುಖಗಳು. ಬರ್ಬರ ಕ್ರೂರಕೃತ್ಯಗಳಿಗೆ ಶಿಕ್ಷೆಯೆಂದು ದೇಶಭ್ರಷ್ಟಗೊಳಿಸಲ್ಪಟ್ಟವರ ಮುಖಗಳು. ಮೊದಲ ತೀರ್ಪು ಮರಣದಂಡನೆಯಾಗಿರುತ್ತಿತ್ತು. ಬಳಿಕ ಯಾವುದಾದರೂ ದಯಾಅರ್ಜಿಯಿಂದಾಗಿ ರಿಯಾಯಿತಿ ದೊರೆತು ದೇಶಭ್ರಷ್ಟರನ್ನಾಗಿಸಿದ ಕಾರಣದಿಂದ ಮರುಜನ್ಮ ಪಡೆದವರೇ ಹೆಚ್ಚು ಮಂದಿ.
ಆತ ನೆನೆದ- ಇಂದು ಹಳೆಯ ಜೈಲುಹಕ್ಕಿಗಳು ಯಾರೆಲ್ಲ ಬದುಕಿರಬಹುದು? ಇದ್ದರೂ ಸಹ ವಾರ್ಧಕ್ಯದಿಂದ ಬುದ್ಧಿ ಮಂದವಾಗಿರಬಹುದು. ಅವರ ನೆನಪಿನ ಶಕ್ತಿ ನಾಶವಾಗಿದ್ದರೆ ಅವರು ಅದೃಷ್ಟವಂತರು. ಬೀಭತ್ಸವಾದ ಭೂತಕಾಲದ ನೆನಪುಗಳು ಇನ್ನು ಅವರನ್ನು ಕಾಡುವುದಿಲ್ಲವಲ್ಲ. ಎಷ್ಟೋ ಹಳೆಯ ಮುಖಗಳು ಇಂದೂ ನೆನಪಿನಲ್ಲಿವೆ. ಹಾಲು ಹಾಕುವ ನಲ್ಲಪ್ಪನ್, ಪೇದೆ ಮುಲ್ಲ...ಅಪ್ಪು...ಧಡಿಯ ಹಂಸ...
ಇಂದು ಈ ದ್ವೀಪಸಮೂಹಕ್ಕೆ ಬರುವವರು ಅದೃಷ್ಟಾನ್ವೇಷಕರು, ಉದ್ಯೋಗ ಭಡ್ತಿಯನ್ನಾಶಿಸಿ ಬರುವವರು. ದ್ವೀಪಭತ್ಯೆ ಎಂಬ ನಲವತ್ತು ಪ್ರತಿಶತ ಹೆಚ್ಚಿನ ಮೊತ್ತವನ್ನು ಪಡೆಯಲು ಕೈಚಾಚಿ ಬರುವವರು.
ಅಂದಿನ ದುರಂತಗಳ ಕತೆಗಳನ್ನು ಕೇಳಿದಾಗೆಲ್ಲ ಆಶ್ಚರ್ಯದಿಂದ ಆಲೋಚಿಸುತ್ತಿದ್ದ. ಆ ಜೈಲುವಾಸಿಗಳ ಕಣ್ಣೀರಲ್ಲಿ ಒದ್ದೆಯಾಗಿ ಈ ದ್ವೀಪ ಕರಗಿಹೋಗಲಿಲ್ಲವೇಕೆ? ಇಂದೂ ನಲ್ಲಪ್ಪನ್‌ನ ಮಾತುಗಳು ನೆನಪಿವೆ. ಹೈಕೋರ್ಟ್‌ನಿಂದ ಅಂತಿಮ ಆಜ್ಞೆ ಬಂತು. ನಲ್ಲಪ್ಪನ್‌ಗೆ ಮರಣದಂಡನೆಯಿಲ್ಲ. ಕಡಿಮೆಪ್ರಾಯದವನಾದುದರಿಂದ ತೀರ್ಪಿನಲ್ಲಿಷ್ಟು ರಿಯಾಯಿತಿ. ದೇಶಭ್ರಷ್ಟಗೊಳಿಸಲು ತೀರ್ಪು. ನಲ್ಲಪ್ಪನ್‌ನ ಇಬ್ಬರು ಅಣ್ಣಂದಿರಿಗೆ ಮರಣದಂಡನೆ ಶಿಕ್ಷೆ. ಆ ರಾತ್ರಿ ಮರಣದಂಡನೆ ಶಿಕ್ಷೆಗೆ ಕಾದ ಆ ಇಬ್ಬರು ಸೋದರರು ರೋದಿಸುತ್ತಾ ಹೇಳಿದರು, 'ನಾವು ಅದೃಷ್ಟವಂತರು. ನಮ್ಮ ಕಷ್ಟಗಳು ಇನ್ನು ಒಂದು ವಾರದೊಳಗೆ ಮುಗಿಯುತ್ತವೆ. ಆದರೆ ನಿನ್ನ ಸ್ಥಿತಿ...ಪೋರ್ಟ್‌ಬ್ಲೇರ್‌ನ ಸೆಲ್ಯುಲಾರ್ ಜೈಲಿನಲ್ಲಿ ಎಷ್ಟು ವರ್ಷಗಳ ನರಕವಾಸ ಉಳಿದಿದೆಯೋ...?
ಪೋರ್ಟ್‌ಬ್ಲೇರ್ ಪಟ್ಟಣ ಸೆಲ್ಯುಲಾರ್ ಜೈಲಿನಿಂದಾಗಿ ಬೆಳೆಯಿತು. ಇಂದು ದೇಶಾಂತರಗೊಳಿಸುವ ಶಿಕ್ಷೆಯಿಲ್ಲ. ಆದರೆ ಇಲ್ಲಿನ ನಡೆವ ಹಾದಿಗಳೂ ನೆರಳ ಸಾಲುಮರಗಳೂ ದೇಶಭ್ರಷ್ಟಗೊಳಿಸುವ ಶಿಕ್ಷೆಯ ಜೀವಂತ ಪ್ರತೀಕಗಳಾಗಿ ಇಂದೂ ನೆಲೆನಿಂತಿವೆ.
ಆತ ರೆಸ್ಟ್‌ಹೌಸ್‌ನ ಹೊರಗೆ ಬಂದ. ಒಳ್ಳೆಯ ಬೆಳದಿಂಗಳು ಚೆಲ್ಲಿತ್ತು. ಅಂಡಮಾನ್ ದ್ವೀಪಸಮೂಹದ ಬೆಳದಿಂಗಳು ಸದಾ ರೇಷಿಮೆಯಂತೆ ಪರಿಶುದ್ಧ. ಬೆಳದಿಂಗಳು ನಡೆಯಲಾರದೆ ದಣಿಯುತ್ತದೆ. ಅಂಡಮಾನ್ ದ್ವೀಪದ ಭೂಪಟ ಬಲು ವಿಚಿತ್ರ. ಅದರಲ್ಲೂ ವಿಶೇಷವಾಗಿ ಪೋರ್ಟ್‌ಬ್ಲೇರ್ ಪಟ್ಟಣವಿರುವ ದ್ವೀಪಗಳ ಸಾಲು. ಚೆಲ್ಲಾಪಿಲ್ಲಿಯಾಗಿರುವ ಬೋಳುಗುಡ್ಡಗಳು. ಕೆಳಗೆ ಎಲ್ಲೆಲ್ಲೂ ಕಡಲು. ದೃಷ್ಟಿಯನ್ನು ಯಾವ ದಿಕ್ಕಿಗೆ ಹಾಯಿಸಿದರೂ ಕಡಲು ಅದನ್ನು ತನ್ನ ಒಡಲೊಳಕ್ಕೆ ಸ್ವೀಕರಿಸುತ್ತದೆ.
ಕಾಂತಿಬೀರುವ ಬೆಳದಿಂಗಳಿನೊಂದಿಗೆ ಕಡಲು ಸಹ ಚಿಂತೆಯಿಂದೆಚ್ಚೆತ್ತಿತ್ತು. ಅದುವರೆಗೂ ಬೇರೇನನ್ನೋ ನೆನೆದು ನಿದ್ರಿಸುತ್ತಿದ್ದಂತಿದ್ದು ಎಚ್ಚೆತ್ತ ಕಡಲಿನಲ್ಲಿ ಅಲೆಗಳು ಟಗರುಗಳ ಗುಂಪಿನಂತೆ ಅಲೆದಾಡುತ್ತಿವೆ. ನಿಚ್ಚಳವಾಗುತ್ತಿದ್ದ ಬೆಳದಿಂಗಳಿನಲ್ಲಿ ಚಾತ್ತಂ ದ್ವೀಪ ಮತ್ತು ಮರದ ಮಿಲ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚಾತ್ತಂ ದ್ವೀಪಕ್ಕೆ ಹೋಗಲು ಇದ್ದ ಹಳೆಯ ಮರದ ಕಾಸ್‌ವೇ...ಅದರ ಬದಿಯಲ್ಲಿ ಹೊಸ ಕಾಂಕ್ರೀಟ್ ಸೇತುವೆ...ಅವು ಎರಡು ಯುಗಗಳನ್ನು ಪ್ರದರ್ಶಿಸುತ್ತವೆ. ಹೊಸ ಸೇತುವೆಯ ಮೇಲೆ ತೋರಣದಂತೆ ಸಾಲುದೀಪಗಳು. ಚಾತ್ತಂ ಮಿಲ್ ಚರಿತ್ರೆಯ ಕೂಸು. ಇಂಗ್ಲೆಂಡಿನ ಚಾತ್ತಂ ರಾಜನ ನಾಮಧೇಯದಲ್ಲಿ ಆರಂಭಿಸಿದುದು. ದೊಡ್ಡದಾಗಿ ನಡೆಸಿಕೊಂಡು ಬಂದುದು. ಅದು ನಿರ್ಮಾಣವಾದುದು ದೇಶಭ್ರಷ್ಟರಾದ ಖೈದಿಗಳ ಸಂಕೋಲೆಯುತ ಕೈಗಳಿಂದ ಮತ್ತು ಕೆಲಸಗಳ ಮೇಲ್ವಿಚಾರಣೆ ವಹಿಸಿದ್ದು ಕೋವಿಯ ಮೊನೆಗಳು ಮತ್ತು ಬೆತ್ತದ ಕೋಲುಗಳು.
ಅಂದಿನ ಹಲವರಂತೆಯೇ, ಆತನೂ ತನ್ನ ಔದ್ಯೋಗಿಕ ಜೀವನ ಆರಂಭಿಸಿದ್ದು ಚಾತ್ತಂ ಮಿಲ್‌ನಲ್ಲೇ. ವಾಸ ಅಬರ್ಡೀನ್ ಬಜಾರ್‌ನಲ್ಲಿ. ಎರಡು ಹೊತ್ತೂ ಮೂರು ಮೈಲುಗಳ ದೂರವನ್ನು ನಡೆದು ಕ್ರಮಿಸುತ್ತಿದ್ದ. ಅಂದು ಇಲ್ಲಿ ಬಸ್ ಸಂಚಾರ ಆರಂಭವಾಗಿರಲಿಲ್ಲ. ಹಾಗೂ ಒಂದು ಯುಗ...
ಈಗಲೂ ಈ ರೋಡಿನ ಏರಿಳಿತಗಳು ಹಳೆಯ ರೀತಿಯೇ ಇವೆ. ರೋಡಿನ ಅಗಲವನ್ನು ಹೆಚ್ಚಿಸಿದ್ದಾರೆಯೇ? ತಿರುವುಗಳು ಹಳೆಯ ರೀತಿ ಕ್ರೂರವಲ್ಲ.
ಆತ ನಿಂತ. ಇಲ್ಲಿ ರಾವ್ ಬಹದ್ದೂರ್ ಮುಖರ್ಜಿಯ ಹಾಲ್ ಇತ್ತು. ಒಂದೆರಡು ಬಾರಿ ಇಲ್ಲಿ ಓಣಂ ಹಬ್ಬದ ಆಚರಣೆ ನಡೆದಿತ್ತು. ಆತ ಆಗ ರಾವ್ ಬಹದ್ದೂರ್ ಮುಖರ್ಜಿಯನ್ನು ಕುರಿತು ಆಲೋಚಿಸಿದ. ಇಂದು ಮುಖರ್ಜಿ ಬದುಕಿರುವರೇ? ಅಂದೇ ಅರುವತ್ತು ವರುಷ ವಯಸ್ಸಿತ್ತು. ಬಂಗಾಳವು ಕಂಡಂಥ ಅತಿ ದೊಡ್ದ ಹಿರಣ್ಯಕಶಿಪು. ಸ್ವಾತಂತ್ರ್ಯ ಚಳುವಳಿಗಾರರ ಇಡೀ ಗ್ರಾಮವೊಂದನ್ನು ಸುಟ್ಟು ಬೂದಿ ಮಾಡಿದುದಕ್ಕೆ ಬ್ರಿಟಿಷ್ ಆಧಿಪತ್ಯವು ಅವರಿಗೆ ನೇರವಾಗಿ ನೀಡಿದ ಪ್ರೌಢ ಪದವಿ- ರಾವ್ ಬಹದ್ದೂರ್. ಆತ ಮುಖರ್ಜಿಯನ್ನು ಕಾಣಲಾರಂಭಿಸಿದ ವೇಳೆಗಾಗಲೇ ಮುಖರ್ಜಿಯ ಅಸ್ತಮಯ ಆರಂಭವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದುದರಿಂದ ಭಗ್ನಾವಶೇಷರಾದವರು ಮುಖರ್ಜಿ. ಬಂಗಾಳಕ್ಕೆ ಹೋಗಿ ಬಾಳುವ ಧೈರ್ಯ ತಳೆಯಲಿಲ್ಲ. ವಿಚಿತ್ರವೆಂದೇ ಹೇಳಬಹುದು. ಮುಖರ್ಜಿ ಸಾಹೇಬರು ಹಿಡಿದು ಕೇಸ್ ಹಾಕಿ ದೇಶಭ್ರಷ್ಟಗೊಳಿಸಿದ್ದ ಹಲವರು ಬಂದು ಬಿದ್ದಿದ್ದಂಥ ಈ ಅಭಿಶಪ್ತ ಮಣ್ಣಿಗೆ ಕೊನೆಗೆ ಅವರೇ ನೆಲೆಸಿ ಬಾಳಲು ಸ್ವ ಇಚ್ಛೆಯಿಂದ ಬಂದರು. ಇಲ್ಲಿ ಜಾಗಗಳನ್ನು ಕೊಂಡರು. ಬಾಡಿಗೆಗೆ ಕೊಡಲು ಒಂದು ಹಾಲನ್ನೂ ನಿರ್ಮಿಸಿಟ್ಟರು.
ಆತ ಗಮನವಿಟ್ಟು ನೋಡಿದ. ಇಂದು ಆ ಹಾಲ್ ಹಾಳು ಬಿದ್ದಿದೆ. ಆತ ಕೆಳಕ್ಕೆ ನೋಡಿದ. ಗುಡ್ಡದ ಇಳಿಜಾರಿನಲ್ಲಿ ಒಂದು ಬಿಳಿ ಹಲಗೆ ಕಾಣಿಸುತ್ತಿತ್ತು. ಯಾವುದೋ ಒಂದರ ಶಿಲಾಸ್ಥಾಪನೆ ನಡೆಸಿದುದರ ಬರಹವುಳ್ಳ ಫಲಕ. ಚೆಲ್ಲಿದ ಬೆಳದಿಂಗಳಿನಲ್ಲಿ ನಿಶ್ಚೇತನವಾಗಿದ್ದ ಆ ದೃಶ್ಯವು ಅದೆಷ್ಟು ಭಯ ಹುಟ್ಟಿಸಲು ಕಾರಣವಾಗುತ್ತದೆ. ಇರುಳು ಮತ್ತು ಕಪ್ಪು ಹುಟ್ಟಿಸಲಾರದಷ್ಟು ಭೀತಿಯನ್ನು ಹುಟ್ಟಿಸಲು ಬಿಳುಪಿನಿಂದ ಸಾಧ್ಯವೇ? ಆತ ಸ್ತಂಭಿಸಿ ನಿಂತ. ಬಳಿಕ ತಿರುಗಿ ನಡೆದ. ರೆಸ್ಟ್‌ಹೌಸ್‌ಗೆ ಹೋದಾಗ ಕೃಷ್ಣಪ್ಪ ಕೇಳಿದ:
'ಯಾಕೆ ಸಾರ್. ಬೇಗ ವಾಪಸ್ ಬಂದಿರಿ...?'
'ಏಕೋ ನನಗೆ ತಿರುಗಾಡಲು ಭಯವೆನಿಸುತ್ತಿದೆ'
'ಮೊದಲೆಲ್ಲ ಈ ಹೊತ್ತಿನಲ್ಲಿ ಇಲ್ಲಿ ಒಂಟಿಯಾಗಿ ಯಾರೂ ನಡೆದಾಡುತ್ತಿರಲಿಲ್ಲ. ಈಗ ಎಲ್ಲಾ ಬಟಾಬಯಲಾಗಿದೆಯಲ್ಲ. ಹಗಲೂ ರಾತ್ರಿ ಒಂದೇ ರೀತಿ'
ಆತನೂ ಚಿಂತಿಸಿದ. ಹಿಂದೆಲ್ಲಾ ಬೀದಿಯ ಕಳ್ಳಕಾಕರೂ ಸಹ ಕತ್ತಲಾಗುವ ಮೊದಲೇ ಕೆಲಸ ನಿಲ್ಲಿಸಿ ಹಿಂದಿರುಗುತ್ತಿದ್ದರು. ಸ್ವಲ್ಪ ಕತ್ತಲಾದ ಬಳಿಕ ಪ್ರೇತಗಳು ನಡೆದಾಡುತ್ತವೆ ಎಂದು ಎಲ್ಲರೂ ನಂಬಿದ್ದರು. ಯುದ್ಧಕಾಲದಲ್ಲಿ ಜಪಾನೀಯರು ಕೊಂದುಹಾಕಿದ ಮನುಷ್ಯರ ಆತ್ಮಗಳು ರಾತ್ರಿಯಲ್ಲಿ ಬೀದಿಕಾಳಗಕ್ಕಿಳಿಯುತ್ತವೆ ಎಂದೆಲ್ಲ ಅಂಡಮಾನ್ ಜನತೆ ನಂಬಿತ್ತು.
ಆತ ಏನನ್ನೂ ನುಡಿಯಲಿಲ್ಲ. ಕೋಣೆಯೊಳಹೊಕ್ಕು ಬಾಗಿಲು ಮುಚ್ಚಿದ.
ಚಾತ್ತಂ ಮಿಲ್‌ನ ಯಂತ್ರಗಳು ಅವಿಶ್ರಾಂತವಾಗಿ ಮರದ ದಿಮ್ಮಿಗಳೊಡನೆ ಸೆಣಸಾಡಿ ಅರಚುತ್ತಿದ್ದವು. ಸೈರನ್ ದೀರ್ಘವಾಗಿ ಮೊಳಗಿತು. ಎರಡನೆಯ ಷಿಫ್ಟ್‌ನ ಅಂತ್ಯವನ್ನು ಸಾರಿದ್ದಿರಬೇಕು. ಮಿಲ್‌ನಿಂದ ಕೆಲಸಗಾರರು ಬೆವರು ಮತ್ತು ಮರದ ಹುಡಿ ಬೆರೆತ ದಿರುಸುಗಳೊಂದಿಗೆ ಮರಳುವುದನ್ನು ಕಾಣಲು ಅತ ಹೊರಗೆ ಬಂದು ನಿಂತ. ಶುಭ್ರಜ್ಯೋತ್ಸ್ನೆಯಲ್ಲಿ ಗುಡ್ಡದ ಇಳಿಜಾರನ್ನು ನೋಡುತ್ತ ನಿಂತಾಗ ಆತ, ದುಃಖದಿಂದ, ಅದಕ್ಕಿಂತ  ಹೆಚ್ಚು ಭೀತಿಯಿಂದ, ಜ್ಞಾಪಿಸಿಕೊಂಡ...
ನಿರಂಜನ್ ಲಾಲ್ ನಾಗ್‌ನ ರೂಪ...ಮುಖ...ಸ್ವರ...
ನಿರಂಜನ್ ಲಾಲ್ ನಾಗ್ ದೇಶಭ್ರಷ್ಟರಾದವರ ವಂಶಜ. ಆದರೂ ಆ ಸಂತತಿ ಎಂದು ನಂಬಲು ಸಾಧ್ಯವಿಲ್ಲ, ಅಷ್ಟು ಶುದ್ಧನಾಗಿದ್ದ. ಚಾತ್ತಂ ಮಿಲ್‌ನ ಗಣ್ಯ ಯಾರ್ಡ್ ಸೂಪರ್‌ವೈಸರ್ ಆಗಿದ್ದ. ಒಂದು ವಿಷಯದಲ್ಲಿ ಬಲು ನಿಷ್ಠುರನಾಗಿದ್ದ. ಕೆಲಸದ ವೇಳೆಯಲ್ಲಿ ಯಾರ್ಡ್‌ನಲ್ಲಿ ಸಂಪೂರ್ಣ ಡಿಸಿಪ್ಲಿನ್ ಇರಬೇಕು. ಅದು ಕಡಿಮೆಯಾಗುತ್ತ ಬರುತ್ತಿದೆ ಎಂದು ದೂರುತ್ತಿದ್ದ. ಕೊನೆಗೆ ಸ್ವಗತವೆಂಬಂತೆ ಹೇಳುತ್ತಿದ್ದ.
'ಎಲ್ಲಾ ನಾಶವಾಯಿತು...ಆ ಬ್ರಿಟಿಷ್‌ನವರು ಹೋದೊಡನೆ ಎಲ್ಲಾ ನಾಶವಾಯಿತು'
ಒಮ್ಮೆ ನಿರಂಜನ್ ಬಹಳ ಕುಪಿತನಾಗಿ ಆತನ ಬಳಿ ಓಡಿ ಬಂದು ಹೇಳಿದ. 'ತಮ್ಮಾ, ಡಿಸಿಪ್ಲಿನ್ ಸಂಪೂರ್ಣ ಹಾಳಾಯಿತು. ಎಲ್ಲಾ ನಾಶವಾಯಿತು. ಇವತ್ತು ಮಿಲ್ಲಿನ ಯಾರ್ಡಿನಲ್ಲಿ ಇಬ್ಬರು ತಮಿಳರು ಡ್ಯೂಟಿ ವೇಳೆಯಲ್ಲಿ ಹೊಡೆದಾಡಿದರು. ಅದೂ ಯಾರೆದುರಿಗೆ ಗೊತ್ತೇ? ಅತಿ ಸೀನಿಯರ್ ಯಾರ್ಡ್ ಸೂಪರ್‌ವೈಸರ್ ಆದ ನನ್ನೆದುರಿಗೆ. ಇದನ್ನೆಲ್ಲ ನೆನೆಸಿಕೊಳ್ಳಲೂ ನನ್ನಿಂದಾಗದು ತಮ್ಮಾ. ನೀನು ನನಗೊಂದು ಬಹಳ ಸ್ಟ್ರಾಂಗ್ ಆದ ರಿಪೋರ್ಟ್ ಬರೆದು ಕೊಡಬೇಕು ತಮ್ಮಾ, ಈಗಲೇ ಆಗಬೇಕು...'
ನಿರಂಜನ್‌ಗೆ ಇಂಗ್ಲಿಷ್‌ನಲ್ಲಿ ಬರೆಯಲು ಬಾರದು. ಹಿಂದಿ ಗೊತ್ತಿತ್ತು. ಆದರೆ ಸ್ಟ್ರಾಂಗ್ ರಿಪೋರ್ಟ್‌ಗಳನ್ನು ಇಂಗ್ಲಿಷ್‌ನಲ್ಲೇ ಬರೆಯಬೇಕು ಎಂಬ ಒಂದು ಅಲಿಖಿತ ನಿಯಮ ಚಾತ್ತಂ ಮಿಲ್‌ನಲ್ಲಿ ಪ್ರಚಲಿತವಿತ್ತು.
ಇಂದೂ ನೆನೆಯುತ್ತಾನೆ. ಆತ ಬಹಳ ಸ್ಟ್ರಾಂಗ್ ಆಗಿ ಹಲವಾರು ಸಾಲುಗಳನ್ನು ಬರೆದು ಕೊಟ್ಟ. ಸ್ಟ್ರಾಂಗ್ ಆಗಿಸಲೋಸುಗ ವಿಷಯಗಳನ್ನು ಬಹಳಷ್ಟು ದೊಡ್ದದಾಗಿಸಿ ತೋರಿಸಿದ್ದ.
ಆ ರಿಪೋರ್ಟನ್ನು ತೆಗೆದುಕೊಂಡು ನಿರಂಜನ್ ಮಿಲ್ ಮ್ಯಾನೇಜರ್ ಬಳಿಗೆ ಓಡಿದ. ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿ ಬಂದು ಹೇಳಿದ.
'ತಮ್ಮಾ, ನೀನು ಬರೆದ ರಿಪೋರ್ಟ್ ಫಸ್ಟ್‌ಕ್ಲಾಸಾಗಿದೆ. ನಿನ್ನನ್ನೂ ಕರೆದುಕೊಂಡು ತಕ್ಷಣ ಬರುವಂತೆ ಮ್ಯಾನೇಜರ್ ಸಾಹೇಬರು ಹೇಳಿದ್ದಾರೆ' ಆತ ಜೊತೆಗೆ ಹೋದನು. ಮಿಲ್ ಮ್ಯಾನೇಜರ್ ತನ್ನ ರಿಪೋರ್ಟನ್ನು ಬಹಳ ಹೊಗಳುವರು ಎಂದೆಲ್ಲ ಭಾವಿಸಿದ. ಮ್ಯಾನೇಜರ್ ಸಾಹೇಬರು ಚಿಕ್ಕಂದಿನಿಂದಲೇ ಓದಿದ್ದೆಲ್ಲಾ ಇಂಗ್ಲೆಂಡ್‌ನಲ್ಲಿ. ಅವರು ಪಾಶ್ಚಾತ್ಯ ರೀತಿಯಲ್ಲಿ ಒಮ್ಮೆ ನಕ್ಕರು. ಕಂಗಳನ್ನು ಕಿರಿದುಗೊಳಿಸಿ, ಒಮ್ಮೆ ತಲೆಯಲುಗಿಸಿ, ಅಭಿನಂದನೆಗಳ ಆ ಸಂಜ್ಞಾಮಾತಿನ ಬಳಿಕ ಗಂಟೆ ಬಾರಿಸಿ ಪೇದೆಯನ್ನು ಕಳಿಸಿ ಹೆಡ್‌ಕ್ಲರ್ಕನ್ನು ಕರೆಸಿ ಬಳಿಕ ಹೇಳಿದರು,
'ಈ ಬಾಬುವನ್ನು ಮಸ್ಟರ್‌ರೋಲ್ ಸೆಕ್ಷನ್‌ನಿಂದ ಪ್ಲಾನಿಂಗ್ ಸೆಕ್ಷನ್‌ಗೆ ವರ್ಗಾಯಿಸಿ ನಮ್ಮ ಹೊಸ ಪ್ರೊಪೋಸಲ್‌ಗಳೆಲ್ಲವನ್ನೂ ಈ ಬಾಬುವಿಗೇ ಡ್ರಾಫ್ಟ್ ಮಾಡಲು ಕೊಡಿ'. ನಿಮಿಷಗಳಲ್ಲಿ ಆತನಿಗೆ ಸಿಕ್ಕಿದ ಈ ಭಡ್ತಿಯಿಂದ ಹೆಡ್‌ಕ್ಲರ್ಕ್ ಕುಪಿತನಾದ. ಒಮ್ಮೆ ದುರುದುರು ನೋಡಿ ತನ್ನ ಕೋಪವನ್ನು ವ್ಯಕ್ತಗೊಳಿಸಿ ತೃಪ್ತನಾದ.
ಸ್ವಲ್ಪ ಹೊತ್ತಿನ ಬಳಿಕ ನಿರಂಜನ್ ಲಾಲ್ ಓಡಿ ಬಂದು ಹೇಳಿದ. 'ಭಲೇ ಭೇಷ್... ಯಾರ್ಡ್‌ನಲ್ಲಿ ಡ್ಯೂಟಿ ಹೊತ್ತಿನಲ್ಲಿ ಹೊಡೆದಾಡಿದ ಇಬ್ಬರನ್ನೂ ಡಿಸ್‌ಮಿಸ್ ಮಾಡಲಾಯಿತು'
ವಾಸ್ತವವಾಗಿ ಅಂದು ಆತನಿಗೆ ದುಃಖವೆನಿಸಿತು. ಅಷ್ಟಾಗುವುದೆಂದು ನಿರೀಕ್ಷಿಸಿರಲಿಲ್ಲ. ಅಂದೆಲ್ಲ ಪೋರ್ಟ್‌ಬ್ಲೇರ್‌ನಲ್ಲಿ ಕಾರ್ಮಿಕ ಸಂಘಗಳು ಇರಲಿಲ್ಲ. ಉದ್ಯೋಗ ವ್ಯಾಜ್ಯಗಳನ್ನು ಪರಿಹರಿಸುವ ನ್ಯಾಯಾಲಯಗಳೂ ಇರಲಿಲ್ಲ.
ಆತನ ಮುಖ ಬಾಡಿದುದನ್ನು ಕಂಡು ನಿರಂಜನ್ ಹೇಳಿದ, 'ಹಾಗೇ ಆಗಬೇಕು ತಮ್ಮಾ, ಡಿಸಿಪ್ಲಿನ್ ಇಲ್ಲದಿದ್ದಲ್ಲಿ ಈ ಮಿಲ್‌ನಲ್ಲಿ ಬದುಕಲಿಕ್ಕಾಗದು'
ಅಂದು ಸೈರನ್ ಊದಿದಾಗ ನಿರಂಜನ್‌ಲಾಲ್ ಓಡಿಬಂದ. 'ನನ್ನ ಷಿಫ್ಟ್ ಮುಗಿಯಿತು. ನಿನ್ನ ಕೆಲಸ ಮುಗಿದೊಡನೆ ಅಬರ್ಡೀನ್ ಬಜಾರ್‌ಗೆ ಬಾ ತಮ್ಮಾ. ನಾನು ಘಂಟಾಘರ್‌ನ ಎದುರು ನಿಂತಿರುತ್ತೇನೆ. ನಿನಗೆ ಇಂದು ರಾತ್ರಿಯೂಟ ನನ್ನೊಂದಿಗೆ, ನನ್ನ ಕುಟುಂಬದೊಂದಿಗೆ'
ಇಬ್ಬರು ಕೆಲಸಗಾರರನ್ನು ತೆಗೆಸಿಹಾಕಿ ಡಿಸಿಪ್ಲಿನ್ ಸ್ಥಾಪಿಸುವುದರಲ್ಲಿ ಯಶಸ್ವಿಯಾದ ಸಂತಸದಲ್ಲಿ ನಿರಂಜನ್ ಸಣ್ಣ ಹುಡುಗನಂತೆ ಕುಣಿದಾಡಿದ. ಅದಕ್ಕೆ ಸಹಾಯಕವಾದದ್ದು 'ಆತನ' ಸ್ಟ್ರಾಂಗ್ ರಿಪೋರ್ಟ್ ಎಂದೂ ನಿರಂಜನ್ ಲಾಲ್ ನಾಗ್‌ಗೆ ಅರಿವಿತ್ತು. ಕೊನೆಗೆ ಅಂದು ಆತನಿಗೆ ಹೀಗೆ ಪ್ರಲೋಭನೆಯೊಡ್ಡಿದ, 'ನಾನು ಸ್ವತಃ ಹೋಗಿ ಕೊಟ್ಟದ್ದರಿಂದಲೇ ಅಲ್ಲವೇ ತಮ್ಮಾ ನಿನ್ನನ್ನು ಅಲ್ಲಿಗೆ ಕರೆಸಿದ್ದು ಮತ್ತು ನಿನಗೆ ಕೆಲಸದಲ್ಲಿ ಇಂತಹ ಒಂದು ಲಿಫ್ಟ್ ಸಿಕ್ಕಿದ್ದು. ಆದುದರಿಂದ ಕೆಲಸ ಆದೊಡನೆ ಅಲ್ಲಿಗೆ ಬರಬೇಕು. ಬರುತ್ತೀನೆಂದು ಭಾಷೆ ಹಾಕು' ಎಂದು ಕೈಚಾಚಿದ. ಆತ ಕೈಮೇಲೆ ಕೈ ಇಟ್ಟ ಬಳಿಕವೇ ನಿರಂಜನ್‌ಲಾಲ್‌ನಾಗ್ ಕೈಯನ್ನು ಹಿಂತೆಗೆದದ್ದು. ಸೈಕಲ್ಲನ್ನೇರುವ ಮುಂಚೆ ಮತ್ತೊಮ್ಮೆ ಜ್ಞಾಪಿಸಿದ... 'ಘಂಟಾಘರ್‌ನ ಎದುರು...'
ಹತ್ತೋ ಹದಿನೈದೋ ನಿಮಿಷಗಳು ಕಳೆವಷ್ಟರಲ್ಲಿ ಇಡೀ ಚಾತ್ತಂ ಮಿಲ್ ಮತ್ತು ಪೋರ್ಟ್ ಬ್ಲೇರ್ ಪಟ್ಟಣವನ್ನು ನಡುಗಿಸುತ್ತಾ ಆ ವಾರ್ತೆ ಹರಡಿತು.
ನಿರಂಜನ್ ಲಾಲ್ ನಾಗ್ ಕೊಲ್ಲಲ್ಪಟ್ಟ.
ಅವಿಶ್ವಸನೀಯ ರೀತಿಯಲ್ಲಿ, ವಿಚಿತ್ರವೆಂದು ಹೇಳಬಹುದು, ನಿರಂಜನ್ ಲಾಲ್ ನಾಗ್ ಸೈಕಲ್‌ನಲ್ಲಿ ಬರುತ್ತಿರಲು ಸ್ವಲ್ಪ ಮುಂಚೆಯಷ್ಟೇ ಕೆಲಸದಿಂದ ತೆಗೆಯಲ್ಪಟ್ಟ ಆ ಇಬ್ಬರು ಯುವ ತಮಿಳರು ಸೇರಿ ನಿರಂಜನ್ ಲಾಲ್ ನಾಗ್‌ರನ್ನು ಅಡ್ಡಗಟ್ಟಿ ಮೊದಲು ಕೋಲುಗಳಿಂದ ಹೊಡೆದರು. ಸೈಕಲ್ ಬಿಟ್ಟು ಓಡಲೆತ್ನಿಸಿದಾಗ ಅವನ ಬೆನ್ನಟ್ಟಿ ಇರಿದು ಕೊಂದರು.
ಇಂದೂ ನೆನಪಾಗುತ್ತದೆ. ಸ್ವಲ್ಪ ಹೊತ್ತಿನ ಮೊದಲು ಬೆಳದಿಂಗಳಿನಲ್ಲಿ ಕಂಡ ಆ ಬಿಳಿಯ ಫಲಕದ ಹಳೇ ಜಾಗದಲ್ಲೇ ಅಂದು ನಿರಂಜನ್ ಲಾಲ್ ನಾಗ್ ಬಿದ್ದು ಸತ್ತದ್ದು.
ಇಂದು ಇಪ್ಪತ್ತೆರಡು ವರ್ಷಗಳ ಬಳಿಕ ಈ ದ್ವೀಪಸಂಕುಲಕ್ಕೆ ಕೇವಲ ಒಬ್ಬ ಸಂದರ್ಶಕನಾಗಿ ಆತ ಪುನಃ ಬಂದು ತಲುಪಿದ್ದಾನೆ.
ಕಳೆದ ಕಾಲದ ಚಿತೆ ಭುಗಿಲೆನ್ನಲು...
ಆಗ ಕಾಣುತ್ತಾನೆ ನೆನಪುಗಳಲ್ಲಿ...
ನಿರಂಜನ್ ಲಾಲ್ ನಾಗ್‌ನ ಒಂದು ಮುಷ್ಟಿ ಬೂದಿಯನ್ನು.


-ಮಲಯಾಳಂ ಮೂಲ: ಸಿ.ವಿ.ಶ್ರೀರಾಮನ್
- ಅನುವಾದ: ಡಾ. ಅಶೋಕ್ ಕುಮಾರ್
ashokdrblore@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.