ಆತ್ಮಗೌರವ ಮುಖ್ಯ ಸಿದ್ದರಾಮಯ್ಯ
ತುಂಬಾ ಹಿಂದಿನ ಮಾತಿದು. ಒಂದು ರಾಜಕೀಯ ಪಕ್ಷವಾಗಿ ಜನತಾ ಪಕ್ಷ ಜನತಾದಳದಲ್ಲಿ ವಿಲೀನವಾಗುವ ಸಮಯ. ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಅವರೆಲ್ಲ ವಿಲೀನದ ಪರವಾಗಿದ್ದರು. ದೇವೇಗೌಡರು ಪಕ್ಷದ ಹೆಸರು, ಧ್ವಜ, ಚಿಹ್ನೆಯನ್ನು ಉಳಿಸಿಕೊಳ್ಳಲು ಪ್ರಾಣವಿರುವವರೆಗೂ ಹೋರಾಟ ನಡೆಸುವ ಪ್ರತಿಜ್ಞೆಯನ್ನೂ ಮಾಡಿದ್ದರು. ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿರಲಿಲ್ಲ.
ಆ ಸಂದರ್ಭದಲ್ಲಿ ಜನತಾ ಪಕ್ಷದ ಸರ್ಕಾರ ಇತ್ತು. ಬೊಮ್ಮಾಯಿ ಮುಖ್ಯಮಂತ್ರಿ. ಸಿದ್ದರಾಮಯ್ಯ ಅವರೂ ಮಂತ್ರಿಯಾಗಿದ್ದರು. ಜನತಾದಳ ನೂತನ ಪಕ್ಷವಾದ್ದರಿಂದ ಆ ಪಕ್ಷದ ಶಾಸಕರು ಆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರಮಾಣ ಪತ್ರವನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕಾಗಿತ್ತು. ಅದಕ್ಕಾಗಿ ಒಂದು ವಿಶೇಷ ವ್ಯವಸ್ಥೆ. ಒಬ್ಬ ಸಬ್‌ರಿಜಿಸ್ಟ್ರಾರ್ ಅವರನ್ನು ವಿಧಾನಸೌಧಕ್ಕೇ ಕರೆಸಲಾಗಿತ್ತು. ಜನತಾ ಪಕ್ಷದ ಶಾಸಕರು ಪ್ರಮಾಣಪತ್ರಕ್ಕೆ ಸಹಿ ಹಾಕಲು ಕ್ಯೂ ನಿಂತಿದ್ದರು. ಅಲ್ಲೇ ಇನ್ನೊಂದು ಕಡೆ ದೇವೇಗೌಡರೂ ಕೂತಿದ್ದರು. ಅವರು ಸಹಿ ಹಾಕಲು ಬಂದಿರಲಿಲ್ಲ. ಸುಮ್ಮನೆ ಬಂದಿದ್ದರು.
ಆಗ ಕೆಲವು ಪತ್ರಕರ್ತರು ಗೌಡರನ್ನು ಕೇಳಿದ ಪ್ರಶ್ನೆ: ಸಿದ್ದರಾಮಯ್ಯ ಅವರೂ ಅಫಿಡವಿಟ್‌ಗೆ ಸಹಿ ಹಾಕ್ತಾರಾ? ಅದಕ್ಕೆ ಸಿಕ್ಕ ಉತ್ತರ: ಅವರ ನಿಜವಾದ ಶಕ್ತಿಯ ಅರಿವಿದ್ದರೆ ಹಾಕಲ್ಲ. ಇಲ್ಲದಿದ್ದರೆ ಹಾಕ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ, ಸಿದ್ದರಾಮಯ್ಯ ಅವರು ಠೀಕಾಗಿ ಸೂಟು ಧರಿಸಿ (ಕ್ಲೋಸ್ ಕಾಲರ್ ಕೋಟ್) ಅಲ್ಲಿಗೆ ಬಂದು ವಿಧಿವತ್ತಾಗಿ ಪ್ರಮಾಣಪತ್ರಕ್ಕೆ ಸಹಿ ಹಾಕಿ ಯಾರ ಜತೆಯಲ್ಲೂ ಮಾತಾಡದೇ ಹೊರಟು ಹೋದರು. ಆ ಕಾಲಕ್ಕೇ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನು ದೇವೇಗೌಡರು ತಿಳಿದುಕೊಂಡಿದ್ದು, ಅದನ್ನು ಬಹಿರಂಗವಾಗಿ ಹೇಳಿದ್ದು ಸಾಮಾನ್ಯ ವಿಚಾರವಲ್ಲ.
ಮುಂದೆ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ದೇವೇಗೌಡರ ಜತೆಯಲ್ಲೇ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದು, ಅನಂತರ ಕಾರಣಾಂತರಗಳಿಂದ ಇಬ್ಬರೂ ರಾಜಕೀಯವಾಗಿ ಬೇರೆ ಬೇರೆಯಾದಾಗ, ಗೌಡರು ಸಿದ್ದರಾಮಯ್ಯ ಅವರನ್ನು 'ಮುಗಿಸುವ' ಪಣ ತೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಪ್ಪತ್ತು ದಿನಗಳ ಕ್ಯಾಂಪ್ ಮಾಡಿದ್ದು ಈಚಿನ ರಾಜಕೀಯ ಇತಿಹಾಸದ ಒಂದು ಭಾಗ ಮಾತ್ರ.
ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ, ಅದು ಅವರಿಗೆ ತಂದುಕೊಟ್ಟಿದ್ದ ಬೇರೆ ಶಕ್ತಿಯ ಪ್ರದರ್ಶನ ಹಲವಾರು ಬಾರಿ ಆಗಿದೆ. 2004ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಒಂದು ಕನಸಿನ ಬಜೆಟ್ ಮಂಡಿಸಿ, ಚುನಾವಣೆ ಮೈದಾನಕ್ಕೆ ಹೋದಾಗ, ಅವರ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಮೊದಲ ಬಾರಿಗೆ ಕರ್ನಾಟಕ ಅತಂತ್ರ ವಿಧಾನಸಭೆಯನ್ನು ಕಾಣಬೇಕಾಯಿತು. ಕೊನೆಗೆ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ರಚನೆಯಾದಾಗ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅದೇ ವರ್ಷಕ್ಕೆ ಮತ್ತೊಂದು ಹೊಸ ಬಜೆಟ್ ಮಂಡಿಸಬೇಕಾಯಿತು. ಒಂಬತ್ತು ವರ್ಷಗಳ ಅನಂತರ ಸಿದ್ದರಾಮಯ್ಯ ಈಗ ಅದೇ ಸ್ಥಿತಿಯಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿಯಾಗಿ, ಜಗದೀಶ್ ಶೆಟ್ಟರ್ ಬಡೆಟ್ ಮಂಡಿಸಿದ ನಂತರ, ಅವರ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತೆ ಎರಡನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ನಿಜಕ್ಕೂ ಇದೊಂದು ವಿಚಿತ್ರ ಘಟನೆ.
ಮೈಸೂರಿನ ಸಮೀಪದ ಸಿದ್ದರಾಮನ ಹುಂಡಿಯ ಸಿದ್ದರಾಮ, ಕಷ್ಟಪಟ್ಟು ಓದು ಮುಗಿಸಿ, ಮೈಸೂರಿನ ಯುವರಾಜ ಕಾಲೇಜಿನಿಂದ ಹೊರಬೀಳುವ ವೇಳೆಗೆ ಸಿದ್ದರಾಮಯ್ಯ ಆಗಿದ್ದು, ಅನಂತರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ, ಮಂತ್ರಿಯಾಗಿ, ನಿರೋಧ ಪಕ್ಷದ ನಾಯಕರಾಗಿ ಮತ್ತೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದಾಗ 'ಸನ್ಮಾನ್ಯ ಸಿದ್ದರಾಮಯ್ಯನವರು' ಎನಿಸಿಕೊಂಡು ಬಹುಪರಾಕ್ ಹೇಳಿಸಿಕೊಳ್ಳುವ ಸ್ಥಿತಿಯನ್ನು ಮುಟ್ಟಿದ್ದು ಜನತಾಂತ್ರಿಕ ವ್ಯವಸ್ಥೆಯ ವಿಜೃಂಭಣೆ. ಇದೆಲ್ಲವೂ ಸಾಧ್ಯವಾಗಿದ್ದು ಸಿದ್ದರಾಮಯ್ಯ ಯಾವ ಕಾಲದಲ್ಲೂ ಅಧಿಕಾರಕ್ಕಾಗಿ ತಮ್ಮ ಆತ್ಮಗೌರವವನ್ನು ಬಲಿಗೊಡಲು ಸಿದ್ಧರಾಗದೇ ಇದ್ದಿದ್ದರಿಂದಲೇ. ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಕಲಿತಿರುವ ಅತಿ ದೊಡ್ಡ ಪಾಠ ಎಂದರೆ ಮನಸ್ಸಿಗೆ ಬಂದಿದ್ದನ್ನು ಹಾಗೇ ದಿಢೀರನೆ ಹೇಳಿ ಬಿಡಬಾರದು ಎನ್ನುವುದನ್ನು. ಈಗಲೂ ಆ ಪಾಠದ ನೆನಪಿದೆ. ಆದರೆ ಅದು ಕೆಲವು ಸಂದರ್ಭಗಳಲ್ಲಿ ಮರೆತು ಹೋಗುತ್ತದೆ.
ಸಿದ್ದರಾಮಯ್ಯ ಜೆಡಿಎಸ್- ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯ ಸ್ಥಾನವನ್ನು ಬಿಟ್ಟು, ಪಕ್ಷಕ್ಕೂ ರಾಜೀನಾಮೆ ನೀಡಿ, ಮೈಸೂರಿಗೆ ಏಕಾಂಗಿಯಾಗಿ ಹಿಂತಿರುಗಿದಾಗ ಅವರ ಜತೆಯಲ್ಲಿ ಇದ್ದಿದ್ದು ಅಹಿಂದ (ಅಲ್ಪಸಂಖ್ಯಾತ ಹಿಂದುಳಿತ ದಲಿತ) ಆಂದೋಲನದ ಗುಂಗು ಮಾತ್ರ.
ಮುಂದೆ ಕಾಂಗ್ರೆಸ್ ಸೇರಿ ಐತಿಹಾಸಿಕ ಎನ್ನಬಹುದಾದ- ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಮರು ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ನಾಯಕರಾಗಿ ಅಹಿಂದ ಮೇಳ ನಡೆಸಲು ಹೊರಟಾಗ ಅವರ ಹೊಸ ಪಕ್ಷದಲ್ಲೇ ಅನೇಕರು ಇದೊಂದು ಸಮಾನಾಂತರ ಕಾಂಗ್ರೆಸ್ ಎಂದು ಲೇವಡಿ ಮಾಡಿದ್ದೂ ಉಂಟು. ಅದರಿಂದ ಅಹಿಂದ ಮೇಳಗಳು ನಿಂತು ಹೋದವು. ಆದರೆ ಸಿದ್ದರಾಮಯ್ಯ ಅವರ ಮನಸ್ಸಿನಿಂದ ಹೋಗಲಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಅವರು ನಡೆಸಿದ್ದ ಹೋರಾಟಗಳಲ್ಲಿ ಅಹಿಂದದ ಚಿಂತನೆಯ ದರ್ಶನ ಪ್ರಬಲವಾಗಿಯೇ ಆಗಿತ್ತು. ಈಗ ಸಿದ್ದರಾಮಯ್ಯ, ಕಳೆದ ಚುನಾವಣೆಯನ್ನೇ ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಘೋಷಿಸಿ, ಚುನಾವಣೆಯಲ್ಲಿ ಗೆದ್ದು, ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೂ ಆಗಿದೆ. ಆದರೆ ಅವರು ಕಾಂಗ್ರೆಸ್‌ನ ವಿಶಿಷ್ಟ ರಾಜಕೀಯ ಸಂಸ್ಕೃತಿ ಹಾಗೂ ಚಿತ್ರ ವಿಚಿತ್ರ ಸ್ವರೂಪದ ಹುನ್ನಾರ-ತಂತ್ರಗಳ ಬೀಡಿನ ಜೀವನಕ್ಕೆ ಸಜ್ಜಾಗಬೇಕಾಗಿದೆ.
ಕಳೆದ ಒಂಬತ್ತು ವರ್ಷಗಳ ಕಾಲ ವಿಧಾನಸಭೆಯಲ್ಲಿ ಸರ್ಕಾರವನ್ನು ಹಣಿದು, ಧರಣಿ, ಘೋಷಣೆಗಳ ಕೂಗಾಟಗಳಿಗೆ, ತಮ್ಮ ಪಕ್ಷದ ಶಾಸಕರಲ್ಲಿ ಹುಮ್ಮಸ್ಸನ್ನು ತುಂಬಿದಂತೆಯೇ ಇನ್ನು ಮುಂದೆ ಪ್ರತಿಪಕ್ಷದ ಶಾಸಕರು ಧರಣಿ ಸ್ಥಾನಕ್ಕೆ ಬಂದಾಗ, ತಮ್ಮ ಪಕ್ಷದ ಶಾಸಕರಿಗೆ ಸಂಯಮದ ಪಾಠವನ್ನು ಹೇಳಬೇಕಾಗಿದೆ. ಅವರಿಗೆ ಪಾಠ ಹೇಳುವುದೇನೂ ಹೊಸದಲ್ಲ. ವಿಧಾನಸಭೆ, ಬಹಿರಂಗ ಸಭೆ, ಪತ್ರಿಕಾಗೋಷ್ಠಿ ಅಥವಾ ಪತ್ರಿಕಾ ಸಂದರ್ಶನದಲ್ಲಿ, ಅವರ ಮಾತಿನ ಶೈಲಿ ಒಂದೇ. ಗಂಭೀರವಾಗಿ, ನಿಧಾನವಾಗಿ, ಪರಿಸ್ಥಿತಿಯ ವಿಶ್ಲೇಷಣೆಯನ್ನು ಮಾಡುವುದು. ಒಂದು ರೀತಿಯಲ್ಲಿ ಅವರದ್ದು ಪಾಠ ಹೇಳುವ ಶೈಲಿಯೇ.
ಜನಪರ ಹೋರಾಟಗಾರ, ಜನನಾಯಕ ಪಟ್ಟವನ್ನು ಏರಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಮಧ್ಯೆ ಕೂತು, ಅವರಿಗೆ ಹೇಳಬೇಕಾದ್ದನ್ನು ಹೇಳುವ ಅವಕಾಶದಿಂದ ವಂಚಿತರಾಗುತ್ತಾರೆ. ಈಗಿನ ಅಧಿಕಾರಸ್ಥ ವ್ಯವಸ್ಥೆ ನಿಧಾನವಾಗಿ ಹಾಗೂ ಖಚಿತವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೌತಿಕವಾಗಿ ಜನರಿಂದ ದೂರವಿಡಲು ಪ್ರಯತ್ನಿಸುತ್ತದೆ. ಆ ಪ್ರಯತ್ನಕ್ಕೆ ಬಹುತೇಕ ಮುಖ್ಯಮಂತ್ರಿಗಳು ಬಲಿಯಾಗಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುವುದಕ್ಕೆ ಈಗ ಸುವರ್ಣ ಅವಕಾಶವಿದೆ. ವಿಧಾನಸಭೆಯಲ್ಲಿ ಬಹುಮತದ ಪ್ರಶ್ನೆ ಇಲ್ಲ. ಪಕ್ಷದಲ್ಲಿ ವರಿಷ್ಠರ ಸಂಪೂರ್ಣ ಬೆಂಬಲವಿದೆ. ರಾಜ್ಯದಲ್ಲಿ ಹೊಸಹೊಸ ಕಾರ್ಯಕ್ರಮಗಳನ್ನು ಜನರಿಗಾಗಿಯೇ ಸಿದ್ಧಪಡಿಸಿ, ಅದನ್ನು ಜಾರಿಗೆ ತರಬಲ್ಲ ಶಕ್ತಿ ಇರುವ ಸಮರ್ಥ ಅಧಿಕಾರಿಗಳೂ ಇದ್ದಾರೆ. ಸ್ವಂತ ಅನುಭವವೂ ಇದ್ದಿದ್ದೇ. ಇದಕ್ಕಿಂತ ಉತ್ತಮವಾದ ಅವಕಾಶ ಸಿಗುವುದು ಕಷ್ಟ. ಅದನ್ನು ಸರಿಯಾಗಿ ಬಳಸಬೇಕು.
ಮೈಸೂರು, ಸಿದ್ದರಾಮಯ್ಯ ಅವರ ಊರು. ಅಲ್ಲೇ ಅವರು ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದು. ಪ್ರತಿ ಶನಿವಾರ- ಭಾನುವಾರ ಮೈಸೂರಿಗೆ ಹೋಗಲೇಬೇಕು. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಈಗ ಸಿದ್ದರಾಮಯ್ಯ ಅಖಿಲ ಕರ್ನಾಟಕಕ್ಕೆ ಹೊಣೆಗಾರ ವ್ಯಕ್ತಿ. ಔರಾದದಿಂದ ಕೊಳ್ಳೇಗಾಲದವರೆಗಿನ, ವಿಶಾಲವಾದ ಭೂ ಪ್ರದೇಶದಲ್ಲಿನ ಎಲ್ಲ ಜನವರ್ಗಗಳ ಹಿತೈಷಿಯಾಗಿಯೇ ಅಧಿಕಾರವನ್ನು ಚಲಾಯಿಸಬೇಕು. ಮುಂದಿನ ಚುನಾವಣೆಯ ಚಿಂತನೆಯೇ ಬೇಕಾಗಿಲ್ಲ ಅವರಿಗೆ.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

