ಓಶೋ ಬದುಕಿನ ದಾರಿ
ಕಡಲು ಅನೇಕ ಒಂಟಿ ಬಿಡಿಬಿಡಿ ಹನಿಗಳಿಂದಾಗಿದೆ. ಹಾಗೇ ಜೀವನ ಅನೇಕ ಪ್ರತ್ಯೇಕ ಕ್ಷಣಗಳನ್ನು ಒಳಗೊಂಡಿದೆ. ಒಂದು ಹನಿಯ ಬಗ್ಗೆ ಅರಿವು ಮೂಡಿದವರಿಗೆ ಕಡಲಿನ ಅರಿವು ಇರುತ್ತದೆ. ಒಂದೇ ಒಂದು ಬಿಡಿ ಕ್ಷಣವನ್ನು ಯಾರು ಅನುಭವಿಸುತ್ತಾರೋ ಅವರಿಗೆ ಇಡೀ ಬದುಕಿನ ಅನುಭವ ಇರುತ್ತದೆ- ಇದು ಓಶೋ ಅವರ 'ಲೈಫ್ ಈಸ್ ಎ ಸೋಪ್ ಬಬಲ್' ಕೃತಿಯಲ್ಲಿಯ ವಿಚಾರದ ಒಂದು ಝಲಕ್. ತಮ್ಮ ಶಿಷ್ಯೆ ಸೊಹನ್ ಎಂಬಾಕೆಗೆ ಅವರು ಬರೆದ ನೂರು ಪತ್ರಗಳು ಈ ಕೃತಿಯಾಗಿದೆ. ಇದನ್ನು ಎಂ.ಎಸ್. ರುದ್ರೇಶ್ವರಸ್ವಾಮಿಯವರು 'ನೀರ ಮೇಲಣ ಗುಳ್ಳೆ' ಹೆಸರಿನಲ್ಲಿ ಕನ್ನಡಿಸಿರುವರು. ಓಶೋ ಅವರದು ಹೊಸ ರೀತಿಯ ಅಧ್ಯಾತ್ಮ. ಕ್ಷಣಿಕವಾದ ಬದುಕನ್ನು ಹೇಗೆ ಜೀವಂತವಾಗಿ ಅನುಭವಿಸಬೇಕು ಎಂಬ ಉಪದೇಶ ಇಲ್ಲಿದೆ. ಬದುಕು ಒಂದು ಲೋಟ ಚಹ ಕುಡಿಯುವುದರಲ್ಲಿದೆ, ಸಂಗಾತಿಯ ಜೊತೆ ಹರಟೆಹೊಡೆಯುವುದರಲ್ಲಿದೆ ಎಂದು ಬಹಳ ಸರಳವಾಗಿ ಜೀವನ ಮೀಮಾಂಸೆಯನ್ನು ಹೇಳುವರು. ಓಶೋ ಅವರಲ್ಲಿ ಪ್ರೀತಿ ಇಟ್ಟವರಿಗೆ ಇದು ಸಂಗ್ರಾಹ್ಯ ಕೃತಿ.
ಕೃತಿ: ನೀರ ಮೇಲಣ ಗುಳ್ಳೆ
ಪ್ರಕಾರ: ಚಿಂತನೆ
ಏಕೆ ಓದಬೇಕು?: ಓಶೋ ಅಧ್ಯಾತ್ಮ ಅರಿಯಲು
ಪ್ರ: ಸಪ್ನ ಬುಕ್ಹೌಸ್ ಬೆಂಗಳೂರು, ಪುಟಗಳು 216 ಬೆಲೆ ರು. 150
---
ಶಂಕರ ಸಾಹಿತ್ಯ
ಡಾ. ಶಂಕರ ಮೊಕಾಶಿ ಪುಣೇಕರ ಅವರು ಕನ್ನಡದ ಪ್ರಮುಖ ಸಾಹಿತಿಗಳೂ ವಿಮರ್ಶಕರೂ ಹೌದು. ಮಾಯಿಯ ಮೂರು ಮುಖಗಳು ಎಂಬ ಕಾವ್ಯ, ಗಂಗವ್ವ ಗಂಗಾಮಾಯಿ, ನಟ ನಾರಾಯಣಿ, ಅವಧೇಶ್ವರಿಯಂಥ ಕಾದಂಬರಿಗಳು, ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು ಅವರ ಸೃಜನಶೀಲ ಪ್ರತಿಭೆಗೆ ಸಾಕ್ಷಿ. ಸಾಹಿತ್ಯ ಮತ್ತು ಅಭಿರುಚಿ, ಅಪೂರ್ಣ ವರ್ತಮಾನಕಾಲ, ಬೇಂದ್ರೆ ಕಾವ್ಯಮೀಮಾಂಸೆ ಅವರ ವಿಮರ್ಶೆಯ ಪ್ರತಿಭೆಗೆ ಹಿಡಿದ ಕನ್ನಡಿ. ಪುಣೇಕರ ಅವರದು ವಿಮರ್ಶೆಯಲ್ಲೂ ದೇಸಿ ಚಿಂತನೆ. ಪಾಶ್ಚಾತ್ಯ ವಿಮರ್ಶೆಯ ಪ್ರಭಾವದಿಂದ ಮುಕ್ತವಾಗಿ ತಮ್ಮದೇ ಸ್ವಂತ ವಿಮರ್ಶೆಯ ಮಾರ್ಗವನ್ನು ಬೆಳೆಸಲು ಅವರು ಪ್ರಯತ್ನಿಸಿದರು. ಇತರ ವಿಮರ್ಶಕರು ಹೇಳದೆ ಇರುವ ಹೊಸ ಅಂಶವನ್ನು ಅವರು ತಮ್ಮ ವಿಮರ್ಶೆಯಲ್ಲಿ ಪ್ರಸ್ತಾಪಿಸಿದರು. ಬಹಳ ಹಿಂದೆಯೇ ಪ್ರಕಟವಾಗಿರುವ ಮಾಯಿಯ ಮೂರು ಮುಖಗಳು, ಸಾಹಿತ್ಯ ಮತ್ತು ಅಭಿರುಚಿ, ಅಪೂರ್ಣ ವರ್ತಮಾನಕಾಲ, ಬೇಂದ್ರೆ ಕಾವ್ಯಮೀಮಾಂಸೆ ಎಂಬ ನಾಲ್ಕು ಕೃತಿಗಳನ್ನು ವಸಂತ ಪ್ರಕಾಶನವು ಈಗ ಮರು ಮುದ್ರಿಸಿದೆ.
ಕೃತಿ: ಮಾಯಿಯ ಮೂರು ಮುಖಗಳು, ಪ್ರಕಾರ: ಕಾವ್ಯ
ಏಕೆ ಓದಬೇಕು?: ಮೊಕಾಶಿ ಅಧ್ಯಯನಕ್ಕೆ, ಪ್ರ: ವಸಂತ ಪ್ರಕಾಶನ
ಬೆಂಗಳೂರು, ಪುಟಗಳು 108 ಬೆಲೆ ರು. 60
---
ಅತಂತ್ರ ಕರ್ನಾಟಕ
ನಮ್ಮದು ಒಕ್ಕೂಟ ವ್ಯವಸ್ಥೆ. ಒಂದು ಕೇಂದ್ರ ಸರ್ಕಾರದ ಅಡಿಯಲ್ಲಿ ರಾಜ್ಯಗಳು ಸಂವಿಧಾನದ ನಿಯಮದ ಪ್ರಕಾರ ತಮ್ಮ ಆಡಳಿತವನ್ನು ನಡೆಸುತ್ತವೆ. ಕೇಂದ್ರದಲ್ಲಿರುವ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿಗಳು ಈಡೇರುತ್ತವೆಯೆ? ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲ ಆಶಯವು ಜನತೆಗೆ ಹೆಚ್ಚಿನ ಅಧಿಕಾರವನ್ನು ನೀಡುವುದು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇರುವ ತೊಡಕುಗಳು ಈ ಆಶಯವನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ. ಇಂದಿನ ರಾಜಕೀಯ ವ್ಯವಸ್ಥೆ ಒಟ್ಟಾರೆಯಾಗಿ ಪ್ರಜಾಪ್ರಭುತ್ವದ ಆಶಯಗಳಿಗೆ ಹೇಗೆ ವಿರೋಧಿಯಾಗಿವೆ, ಹೇಗೆ ಕನ್ನಡ ನಾಡಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು ವಿಫಲವಾಗುತ್ತಿವೆ, ಹೇಗೆ ನಮ್ಮ ಏಳಿಗೆಗೆ ಅಡ್ಡಗಾಲಾಗಿ ನಿಂತಿವೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ. ಪ್ರಾದೇಶಿಕ ಪಕ್ಷದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಕೃತಿ: ರಾಷ್ಟ್ರೀಯ ಪಕ್ಷಗಳ ಆಳ್ವಿಕೆ.. ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ
ಪ್ರಕಾರ: ವೈಚಾರಿಕ
ಏಕೆ ಓದಬೇಕು?: ರಾಜಕೀಯದ ಒಳಸುಳಿ ಅರಿಯಲು
ಪ್ರ: ಬನವಾಸಿ ಬಳಗ ಪ್ರಕಾಶನ, ಬೆಂಗಳೂರು, ಪುಟಗಳು
116 ಬೆಲೆ ರು. 100
---
ಚೌಗಲೆ ಸಾಹಿತ್ಯ
ಕಲಾವಿದರೂ ಸಾಹಿತಿಗಳೂ ಆಗಿರುವ ಡಿ.ಎಸ್. ಚೌಗಲೆಯವರ ಮೂರು ಕೃತಿಗಳು ಈಗ ಹೊರಬಂದಿವೆ. ಅದರಲ್ಲಿ ಎರಡು ಮರಾಠಿಯಿಂದ ಅನುವಾದಿಸಿದ ನಾಟಕಗಳು ಹಾಗೂ ಒಂದು 'ಕನ್ನಡ ದಲಿತ ಸಾಹಿತ್ಯ'ದ ಪುಟ್ಟದಾದ ಪರಿಚಯ ಕೃತಿ. 'ಚದುರಂಗ ಮತ್ತು ಕತ್ತೆ'ಯು ಚಂ.ಪ್ರ. ದೇಶಪಾಂಡೆಯವರ ನಾಟಕದ ಅನುವಾದ. ಹೆಣ್ಣು ಗಂಡುಗಳ ಮಧ್ಯೆ ಹುಟ್ಟುವ ವಿಶಿಷ್ಟ ಆಕರ್ಷಣೆಯ ಮಾನಸಿಕ ತುಮುಲಗಳನ್ನು ಈ ನಾಟಕ ಶೋಧಿಸುತ್ತ ಸಾಗುತ್ತದೆ. ಇದು 'ಬ್ಲ್ಯಾಕ್ ಕಾಮಿಡಿ'ಯಂಥ ಪ್ರಕಾರದಲ್ಲಿ ರೂಪುಗೊಂಡಿದೆ ಎಂದು ಚೌಗಲೆ ಹೇಳಿದ್ದಾರೆ. ಇನ್ನೊಂದು, ಪ್ರೇಮಾನಂದ ಗಜ್ಜಿಯವರ 'ಶುದ್ಧ ಬೀಜಾಪೋಟಿ'ಯನ್ನು 'ಶುದ್ಧವಂತ' ಎಂದು ಅನುವಾದಿಸಿದ್ದಾರೆ. ಜಾತಿಯ ಮೇಲು ಕೀಳು ಸಮಸ್ಯೆ ಇದರ ವಸ್ತು. ವಂಶದ ಶ್ರೇಷ್ಠತೆಯ ಬೆನ್ನುಹತ್ತಿದ ನಾಯಕ ಹೇಗೆ ಗೋಜಲುಗಳಲ್ಲಿ ಸಿಲುಕಿ ಪಡಿಪಾಟಲು ಅನುಭವಿಸುತ್ತಾನೆ ಎಂಬುದು ಇಲ್ಲಿದೆ. ಚೌಗಲೆಯವರ ಗಡಿನಾಡಿನ ಗಟ್ಟಿ ಭಾಷೆ ಈ ನಾಟಕಗಳ ಜೀವಾಳ. 'ಕನ್ನಡ ದಲಿತ ಸಾಹಿತ್ಯ' ಒಂದು ಪರಿಚಯಾತ್ಮಕ ಕಿರು ಕೃತಿ.
ಕೃತಿ: 1.ಚದುರಂಗ ಮತ್ತು ಕತ್ತೆ, 2.ಶುದ್ಧವಂತ, 3.ಕನ್ನಡ ದಲಿತ ಸಾಹಿತ್ಯ, ಪ್ರಕಾರ: ಎರಡು ನಾಟಕ ಒಂದು ಪರಿಚಯ, ಏಕೆ ಓದಬೇಕು?: ಮರಾಠಿ ನಾಟಕದ ಸವಿಗೆ, ಪ್ರ: ಸಿರಿವರ ಪ್ರಕಾಶನ, ಬೆಂಗಳೂರು
---
ಥಾಯ್ ನೆಲದಿಂದ
ಪತ್ರಕರ್ತರೂ ಸಾಹಿತಿಗಳೂ ಆಗಿರುವ ಎಲ್.ಎಸ್. ಶಾಸ್ತ್ರಿಯವರು ಥಾಯ್ಲೆಂಡ್ ದೇಶಕ್ಕೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ಅನುಭವಗಳನ್ನು ಅವರು 'ಓ ಸಿಯಾಂ! ನಿನಗೆ ಸಲಾಂ' ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಅವರು 'ಥಾಯ್ಲೆಂಡ್: ಒಂದು ಅಧ್ಯಯನ' ಎಂಬ ಉಪಶೀರ್ಷಿಕೆಯನ್ನೂ ನೀಡಿದ್ದಾರೆ. ಶಾಸ್ತ್ರಿಗಳ ದೃಷ್ಟಿಯಲ್ಲಿ ಪ್ರವಾಸ ಕಥನವೆಂದರೆ ಅದೊಂದು ಅಧ್ಯಯನ ಪ್ರಬಂಧ. ಥಾಯ್ಲೆಂಡ್ ದೇಶದ ಬಗ್ಗೆ, ಅಲ್ಲಿಯ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಅಲ್ಲಿಯ ಪ್ರವಾಸಿ ತಾಣಗಳು ಹೀಗೆ ಎಲ್ಲದರ ಬಗ್ಗೆ ಪುಟ್ಟ ಪುಟ್ಟ ವಿವರಗಳನ್ನೂ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯೇ ಅಲ್ಲಿಯೂ ಇದೆ ಎಂಬುದನ್ನು ಅವರು ಗುರುತಿಸುತ್ತಾರೆ. ಸಿಯಾಂ ಎಂಬುದು ಥಾಯ್ಲೆಂಡ್ನ ಪ್ರಾಚೀನ ಹೆಸರು. ಇದರ ಮೂಲ ಸಂಸ್ಕೃತದ ಶ್ಯಾಮ ಪದ. ಶ್ಯಾಮ ಎಂದರೆ ಕಪ್ಪು, ಕಂದು ಎಂಬ ಅರ್ಥ. ಕಂದು ಬಣ್ಣದ ಜನರಿರುವ ದೇಶ ಶ್ಯಾಮ ಎಂಬುದು ಪೋರ್ಚುಗೀಸರಿಂದಾಗಿ ಸಿಯಾಂ ಎಂದಾಗಿದೆ. ಸೆಕ್ಸ್ ಟೂರಿಸಂಗೆ ಹೆಸರಾದ ಥಾಯ್ಲೆಂಡ್ನ ಇನ್ನೂ ಹಲವು ಮುಖಗಳ ಅನಾವರಣ ಈ ಕೃತಿಯಲ್ಲಿದೆ.
ಕೃತಿ: ಓ ಸಿಯಾಂ! ನಿನಗೆ ಸಲಾಂ, ಪ್ರಕಾರ: ಪ್ರವಾಸ ಕಥನ
ಏಕೆ ಓದಬೇಕು?: ಥೈಲ್ಯಾಂಡ್ ಅರಿಯಲು, ಪ್ರ: ಆದಿತ್ಯ ಪ್ರಕಾಶನ, ಬೆಳಗಾವಿ, ಪುಟಗಳು 208, ಬೆಲೆ ರು. 175
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

