ಸಾಪ್ತಾಹಿಕಪ್ರಭ

ಕಥನ ಪ್ರಕಾರದ ತ್ರಿವಿಕ್ರಮ ರೂಪ

Published On :

ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ 'ಝೀರೋ ಮತ್ತು ಒಂದು' ಕಥಾಸಂಕಲನದ ಒಂದು ಕತೆಯಲ್ಲಿ 'ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ'.
ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.
ಬದುಕಿನ ಸಾರ್ಥಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹತ್ವಾರ ಇಲ್ಲಿಯ ಕಥೆಗಳಲ್ಲಿ ಎತ್ತುತ್ತಾರೆ. ಬದುಕೆಂದರೆ ನಾವು ಅನುಭವಿಸಿದ್ದೋ ಇಲ್ಲ ಅನುಭಾವವೋ? ಇಂಥದ್ದೊಂದು ಪ್ರಶ್ನೆ 'ಪೇಣಿ' ಕಥೆಯಲ್ಲಿ ಮೂಡುತ್ತದೆ. ಸಾವಿತ್ರಮ್ಮಗೆ ತಿನ್ನುವುದಕ್ಕೆಂದು ಪೇಣಿಯನ್ನು ಕೊಟ್ಟರೆ ಅವರು, '....ತಮ್ಮ ಅಂಗೈಯನ್ನು ಮುಖದ ಹತ್ತಿರ ಒಯ್ದು, ಪೇಣಿಯ ಪುಡಿಯನ್ನು ನಯವಾಗಿ ಪರೀಕ್ಷಿಸುವವರಂತೆ ಒಮ್ಮೆ ಮೂಸಿ ಕೆಳ ಚೆಲ್ಲಿದರು! ಇಲ್ಲಿಗೆ ಬದುಕಿನ ಮತ್ತೊಂದು ತವಕ ತೀರಿತು ಎಂಬಂತೆ ಕೈಗಂಟಿದ್ದ ಪೇಣಿಯ ಪುಡಿಯನ್ನು ಎರಡೂ ಕೈಗಳಿಂದ ಒರೆಸಿಕೊಂಡುಬಿಟ್ಟರು...' ಹೇಗೆ ಪೇಣಿಯ ರುಚಿಯನ್ನು ಅರಿಯಲು ಅದನ್ನು ತಿನ್ನಲೇಬೇಕಿಲ್ಲವೋ ಹಾಗೆಯೇ ಬದುಕಿನ ಎಷ್ಟೋ ರಹಸ್ಯಗಳನ್ನು ಸ್ವತಃ ಅನುಭವಿಸಲೇಬೇಕಿಲ್ಲ. ಅನುಭವವಿಲ್ಲದೆಯೂ ಅರಿಯುವುದೇ ಅನುಭಾವ.
ಇನ್ನೊಂದು ಕಥೆ 'ಕಥಾಸ್ತು'. ಈ ಕಥೆಯು ಒಟ್ಟಾರೆಯಾಗಿ ಇಡೀ ಸಾಹಿತ್ಯದ ವ್ಯಾಖ್ಯಾನದಂತೆ ಭಾಸವಾಗತ್ತದೆ. ಇದು ಒಂದು ರೀತಿಯಲ್ಲಿ ಅಬ್ಸರ್ಡ್ ಅಂತನ್ನಿಸಿದರೂ ಅದು ಎತ್ತಿರುವ ಪ್ರಶ್ನೆಗಳಲ್ಲಿ ಸ್ಪಷ್ಟತೆ ಇದೆ. ಕಥೆಯಲ್ಲಿ ಬರೆಯುತ್ತ ಹೋಗುವ ಘಟನೆಗಳೆಲ್ಲ ವಾಸ್ತವದಲ್ಲೂ ಸಂಭವಿಸುತ್ತ ಹೋಗುವ ಅಸಂಗತ ಘಟನೆಗಳು ಇಲ್ಲಿ ನಡೆಯುತ್ತವೆ. ಸಾಹಿತ್ಯ ಜೀವನದ ಪ್ರತಿಬಿಂಬ ಎಂಬ ಹಳೆಯ ಸಿದ್ಧಾಂತವೊಂದರ ಪುನರುಕ್ತಿಯಾಗಿ ಇದು ತೋರುತ್ತದೆ. 'ಕಾದಂಬರಿಯಲ್ಲಿ ಬರುವ ಪಾತ್ರಗಳನ್ನು ಅದಲುಬದಲು ಮಾಡಿ ಇವನು ಅವಳನ್ನು ಮದುವೆಯಾಗಿದ್ದರೆ ಹೇಗಿರುತ್ತಿತ್ತು, ಅವಳು ಇವನ ಮಗಳಾಗಿದ್ದರೆ ಕಥೆ ಹೇಗೆ ಮುಂದುವರಿಯುತ್ತಿತ್ತು, ಈ ಕಥೆಯ ಕೊನೆ ಹೀಗಿರುವ ಬದಲು ಹೀಗಿರುತ್ತಿದ್ದರೆ ಇನ್ನೂ ರೋಚಕವಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದೆ...' ಒಳ್ಳೆಯ ಕಥೆಯೆಂದರೆ ಹೇಗಿರಬೇಕೆಂಬ ಮೀಮಾಂಸೆಯನ್ನು ಇಲ್ಲಿ ಬರೆದಂತೆ ಕಾಣುತ್ತದೆ. 'ಇದನ್ನು ನೀವು ಕಥೆ ಎಂದು ವಾದಿಸಿದರೆ ನಾನು ನಿಜವೆಂದು ಸಾಧಿಸುತ್ತೇನೆ. ನೀವಿದನ್ನು ನಿಜವೆಂದು ನಂಬುವುದಾದರೆ ನಾನು ಕೇವಲ ಕಥೆಯೆಂದು ಹೇಳಿ ನಿಮ್ಮ ನಂಬಕೆಯನ್ನು ಕೆಡವುತ್ತೇನೆ. ಇದೊಂದು ಪ್ರಚ್ಛನ್ನ ವಾಸ್ತವ...' ಎನ್ನುವ ಲೇಖಕರು ಕಥೆಯ ವ್ಯಾಖ್ಯೆ ನೀಡಿದ್ದಾರೇನೋ ಎನ್ನಿಸದಿರದು.
'ಸೀಮೋಲ್ಲಂಘನ'ದಲ್ಲಿ ಈ ದೇಶದ ಪ್ರತಿಭಾ ಪಲಾಯನದ ದೀನ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ. 'ಅಗೋ ಆ ಹಳದಿ ರೇಖೆಯ ಅಂತರದಲ್ಲಿ ಇಡೀ ದೇಶವೇ ಬೇಡುವ ಜಾತಿ ಅನ್ನಿಸಿಬಿಟ್ಟಿತು' ಎಂಬ ಸಾಲು ತುಂಬಾ ತೀವ್ರತೆಯಿಂದ ಕೂಡಿದೆ.
ಆರಂಭದ 'ವಿಮುಖ' ಕಥೆಯಲ್ಲಿ ಕಥೆ ಏನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದು ಅಸ್ಪಷ್ಟವಾಗಿದೆ. ಆದರೆ ಫೇಸ್‌ಬುಕ್, ಇಂಟರ್‌ನೆಟ್ ಇತ್ಯಾದಿ ಆಧುನಿಕ ಬದುಕಿನ ಸಂವಹನ ಸಾಧನಗಳು ಗುಡಿಪೂಜಾರಿಗಳ ನಡುವಿನ ಜಗಳಕ್ಕೂ ಮಾಧ್ಯಮವಾಗುವ ಪರಿ ಮಾತ್ರ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.
ಸಂಕಲನದ ಶೀರ್ಷಿಕೆಯ 'ಝೀರೋ ಮತ್ತು ಒಂದು' ಕಥೆಯಲ್ಲಿ ಹಿಂದೂ ತತ್ವಜ್ಞಾನದ ಶೂನ್ಯ, ಬಯಲು ಎಂಬ ಪರಿಕಲ್ಪನೆಯನ್ನು ಅತ್ಯಂತ ಸರಳವಾಗಿ ವಿವರಿಸಲು ಯತ್ನಿಸುತ್ತಾರೆ ಕತೆಗಾರ. ಇಲ್ಲಿಯ ಪಾತ್ರವೊಂದರ ಹೆಸರು ಭಗವಾನ. 'ಕೊನೆಗೆ ಎಲ್ಲಾ ಝೀರೋ ಮತ್ತು ಒಂದು' ಎಂದು ಆಫೀಸಿನಲ್ಲಿ ಟೀ ಕೊಡುವ ಪಾಂಡು ಹೇಳಿದ ಮಾತಿನಲ್ಲಿ ಪೋಲಿ ಅರ್ಥ ಹೊರಟರೂ ಜಗತ್ತಿನ ಮೂಲ ಸತ್ಯವೊಂದರ ಅತ್ಯಂತ ಸರಳ ವ್ಯಾಖ್ಯಾನದಂತೆ ಭಾಸವಾದಾಗ ಭಗವಾನನ ಕೆಲಸದ ಭಾರ ಒಮ್ಮೆಲೇ ಕಡಿಮೆಯಾಗಿಬಿಡುತ್ತದೆ. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಭಗವಾನ ಪ್ರೋಸೆಸ್ ಒಂದನ್ನು ಸರಳಗೊಳಿಸುವ ಹೊಣೆಹೊತ್ತವನು. ಕಂಪ್ಯೂಟರ್ ಭಾಷೆಯಾದ ಝೀರೋ ಮತ್ತು ಒಂದರ ಪುಂಖಾನುಪುಂಖ ವ್ಯವಸ್ಥಿತ ಜೋಡಣೆಯಲ್ಲಿ ಹೊಸ ಕೋಡ್ ಸೃಷ್ಟಿಸಿ ಸಮಸ್ಯೆಯನ್ನು ಬಿಡಿಸುತ್ತಾನೆ. ಕಥೆಯ ಇನ್ನೊಂದು ಪಾತ್ರ ಭಗವಾನನ ಗೆಳೆಯನ ಹೆಸರು ದಾಸ. ಸಮಸ್ಯೆಯನ್ನು ಬಿಡಿಸಿದ ಭಗವಾನ ದಾಸನಿಗೆ ಅದೃಶ್ಯನಾಗಿಬಿಡುತ್ತಾನೆ. ಭಗವಾನ ಬಿಡಿಸಿದ ಪ್ರೋಸೆಸ್ ಕಾರ್ಯನಿರ್ವಹಿಸುತ್ತಿತ್ತಾದರೂ ಅದು ಹೇಗೆ ಎಂಬ ರಹಸ್ಯ ಯಾರಿಗೂ ಗೊತ್ತಾಗಲೇ ಇಲ್ಲ. ಇದೇ ಸೃಷ್ಟಿಯ ರಹಸ್ಯ. ಈ ಭಗವಾನ ಕಂಪ್ಯೂಟರ್ ಪ್ರೋಗ್ರಾಂ ರಚಿಸಿದ ಹಾಗೆಯೇ ಆ ಭಗವಾನನು ವಿಶ್ವವನ್ನು ಸೃಷ್ಟಿಸಿದ್ದಾನೆ. ಜೊತೆಯಲ್ಲಿದ್ದೂ ದಾಸನಿಗೆ ಅದು ಅರ್ಥವಾಗುವುದೇ ಇಲ್ಲ. ಭಾರತೀಯ ಅಧ್ಯಾತ್ಮವನ್ನು ಸಿಲಿಕಾನ್ ಕಣಿವೆಯ ಸಮಸ್ಯೆಯೊಂದಿಗೆ ಸಮೀಕರಿಸುವ ವಿಕ್ರಮ ಹತ್ವಾರ ಕಥನ ಪ್ರಕಾರದ ತ್ರಿವಿಕ್ರಮ ರೂಪವನ್ನು ಪ್ರಕಟಿಸಿದ್ದಾರೆ.
ಋಗ್ವೇದದ ಪುರುಷಸೂಕ್ತದಲ್ಲಿ ಒಂದು ಮಾತಿದೆ, ಅತ್ಯತಿಷ್ಠಾತ್ ದಶಾಂಗುಲಮ್. ವೇದಗಳು, ಉಪನಿಷತ್ತುಗಳೆಲ್ಲ ಪರಮಾತ್ಮನ ಸ್ವರೂಪ ಹೀಗೇ ಎಂದು ವರ್ಣಿಸಲು ಹೋಗಿ ಅದು ಸಾಧ್ಯವಾಗದೆ ನೇತಿ ನೇತಿ ಎಂದವು. ಯಾವ ಮಾನದಿಂದ ಅಳೆದರೂ ಅದಕ್ಕೂ ಹತ್ತು ಅಂಗುಲ ಬೆಳೆಯುತ್ತ ಹೋಗುವ ಅದ್ಭುತ ಭಗವಂತ. ನಿಗಮಗೋಚರನೆಂದು ದಾಸರು ಹೇಳಿದರೂ ನಿಗಮಗಳೂ ಸೋಲುವ ಪರಿಯನ್ನು ಋಗ್ವೇದದಲ್ಲಿ ಹೇಳಲಾಗಿದೆ. ಈ ಸಂಕಲನದಲ್ಲಿ ಒಟ್ಟೂ ಹದಿನಾರು ಕಥೆಗಳಿವೆ. ಮಹತ್ತರವಾದುದಕ್ಕೆ ಕೈ ಚಾಚಿ ಅದು ನಿಲುಕದೆ ನಿರಾಸೆಗೊಳಗಾಗುವ ಸ್ಥಿತಿ ಇಲ್ಲಿಯ ಬಹುತೇಕ ಕತೆಗಳಲ್ಲಿ ಕಾಣುತ್ತೇವೆ.
ಕೃತಿ: ಝೀರೋ ಮತ್ತು ಒಂದು, ಪ್ರಕಾರ: ಕಥೆಗಳು
ಏಕೆ ಓದಬೇಕು?: ಹೊಸ ನಮೂನೆಯ ಕಥೆಗಳ ರಸಾಸ್ವಾದಕ್ಕೆ.
ಪ್ರ: ಸಾಗರ್ ಪ್ರಕಾಶನ, ಬೆಂಗಳೂರು, ಪುಟಗಳು 176, ಬೆಲೆ ರು. 90.

ಮಹಿಳಾ ಕಾವ್ಯ
ವಿಮರ್ಶೆಯನ್ನು ಮಾಡುವುದಕ್ಕೆ ಲಿಂಗಭೇದವಿಲ್ಲ. ಪುರುಷರೂ ಮಾಡಬಹುದು ಸ್ತ್ರೀಯರೂ ಮಾಡಬಹುದು. ಪುರುಷ ವಿಮರ್ಶಕರು ಸ್ತ್ರೀಯರ ಕೃತಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಆರೋಪವೂ ಇದೆ. ವಿಮರ್ಶಕಿಯರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಬಿ. ಇಂದಿರಾ ಅವರು 'ಕವನ ತಪ್ಪು ಒಪ್ಪು' ವಿಮರ್ಶೆಯ ಸಂಕಲನವನ್ನು ಹೊರತಂದಿದ್ದಾರೆ. ಇದರಲ್ಲಿ ಹಾ.ವೀ. ಮಂಜುಳಾಶಿವಾನಂದ, ಭಾಗ್ಯ ಜಯಸುದರ್ಶನ, ಕೆ.ಎಸ್. ಪ್ರಮೀಳಾ ಫಾಲನೇತ್ರ, ಸುಶೀಲಾ ಸೋಮಶೇಖರ, ಪದ್ಮಾ ಕೃಷ್ಣಮೂರ್ತಿ, ಲಕ್ಷ್ಮೀ ಮಲ್ಲಯ್ಯ, ಅನಸೂಯ ಹೆಸರಘಟ್ಟ, ರತ್ನಾ ನಾಗರಾಜ ಅವರ ಕವಿತೆಗಳನ್ನು ವಿಮರ್ಶಿಸಿದ್ದಾರೆ. ಇಂದಿರಾ ಅವರ ಬಹುಕಾಲದ ಅಧ್ಯಯನದ ಪರಿಶ್ರಮವನ್ನು ನಾವು ಇಲ್ಲಿ ಕಾಣಬಹುದು. ಮಹಿಳಾ ಕಾವ್ಯಕ್ಕೆ ಮಹಿಳಾ ವಿಮರ್ಶೆಯ ಒಂದು ಝಲಕ್ ಇಲ್ಲಿದೆ.
ಕೃತಿ: ಕವನ ತಪ್ಪು ಒಪ್ಪು, ಪ್ರಕಾರ: ವಿಮರ್ಶೆ, ಏಕೆ ಓದಬೇಕು?: ಮಹಿಳಾ ಕಾವ್ಯದ ಅರಿವಿಗೆ, ಪ್ರ: ಸುವರ್ಣೇಶ್ವರಿ ಪ್ರಕಾಶನ, ಬೆಂಗಳೂರು, ಪುಟಗಳು 128, ಬೆಲೆ ರು. 140

ಜೀವವಿಕಾಸ
ಮನುಕುಲದ ಉಗಮ ಮತ್ತು ವಿಕಾಸದ ಬಗ್ಗೆ ಚಾರ್ಲ್ಸ್ ಡಾರ್ವಿನ್ ಬರೆದಿರುವ ಪುಸ್ತಕ ಪ್ರಖ್ಯಾತವಾದದ್ದು. 'ದಿ ಒರಿಜಿನ್ ಆಫ್ ಸ್ಪೆಶಿಸ್‌' ಎಂಬ ಮೂಲ ಕೃತಿಯನ್ನು 'ಪ್ರಬೇಧಗಳ ಉಗಮ ಅಥವಾ ಜೀವ ವಿಕಾಸ' ಎಂದು ಅನುವಾದಿಸಲಾಗಿದೆ. ಕೃತಿಯ ಹೆಸರಿನಲ್ಲಿಯೇ 'ಪ್ರಭೇದ'ವು 'ಪ್ರಬೇಧ' ಆಗಿರುವುದು ಅದ್ಧೂರಿ ಮುದ್ರಣಕ್ಕೆ ಕಪ್ಪುಚುಕ್ಕೆಯಾಗಿದೆ. ಜೆ.ಎಸ್. ಶಶಿಧರ ಶರ್ಮಾ ಅವರ ಕನ್ನಡ ಅನುವಾದದ ಒಂದು ಸ್ಯಾಂಪಲ್ ಇಲ್ಲಿದೆ:- ಉಷ್ಣತೆಯು ಹಿಂದಿರುಗಿದಂತೆಲ್ಲಾ, ಧ್ರುವ ಪ್ರದೇಶದ ಪ್ರಾಕಾರಗಳು ಪ್ರಾಯಶ ಉತ್ತರದ ಕಡೆಗೆ, ಸನಿಹದಿಂದ ಗಮನಸಿದಲ್ಲಿ ಅವುಗಳ ಉತ್ಪಾದನೆಯು ಹೆಚ್ಚು ಸಮಶೀತೋಷ್ಣ ಪ್ರದೇಶಕ್ಕೆ ಮರಳಿ ಬಂದಿರುತ್ತದೆ. ಹಾಗೂ ಮಂಜು ಕರಗಿದಂತೆಲ್ಲಾ ಪರ್ವತದ ಬುಡದಿಂದ, ಧ್ರುವ ಪ್ರದೇಶದ ಪ್ರಕಾರಗಳು ಬಹುಶಃ ತಕ್ಕುದಾದ ಅಳತೆಯಲ್ಲಿ ಬಯಲಿನಲ್ಲಿ, ಶಾಖ ಮತ್ತು ತಂಪಿನಿಂದ ಪಕ್ವಗೊಂಡ ಭೂಮಿಯು ಕರಗಿ, ಯಾವಾಗಲೂ ಏರುಮುಖವಾಗಿ ದೊಡ್ಡದು ಮತ್ತು ದೊಡ್ಡದಾಗಿದ್ದು, ಉಷ್ಣತೆಯು ಹೆಚ್ಚಿದಂತೆಲ್ಲಾ, ಅಷ್ಟಾದರೂ ಅವುಗಳ ಸಹೋದರರು ಉತ್ತರದ ಕಡೆಗೆ ಪ್ರಯಾಣವನ್ನು ಮುಂದುವರಿಸುತ್ತಿರುತ್ತವೆ... (ಪುಟ 378)
ಕೃತಿ: ಪ್ರಬೇಧಗಳ ಉಗಮ ಅಥವಾ ಜೀವ ವಿಕಾಸ, ಪ್ರಕಾರ: ಅನುವಾದ,  ಏಕೆ ಓದಬೇಕು?: ಅನುವಾದದ ಅಚ್ಚರಿಗೆ, ಪ್ರ: ಸಪ್ನ ಬುಕ್‌ಹೌಸ್, ಬೆಂಗಳೂರು, ಪುಟ ಗಳು 544, ಬೆಲೆ ರು. 325


ಸ್ತ್ರೀವಾದಿ ಶೇಕ್ಸ್‌ಪಿಯರ್

ಜಾಗತಿಕ ಸಾಹಿತ್ಯದ ದೊಡ್ಡ ಹೆಸರು ವಿಲಿಯಂ ಶೇಕ್ಸ್‌ಪಿಯರ್. ಕಳೆದ ನಾಲ್ಕು ಶತಮಾನಗಳಲ್ಲಿ ಆತನ ಮೇಲೆ ವೈವಿಧ್ಯಮಯ ವಿಮರ್ಶೆಗಳು ಬಂದಿವೆ. ಶೇಕ್ಸ್‌ಪಿಯರ್ ರಂಗಭೂಮಿಯ ಒಂದು ಅಚ್ಚರಿ. ಸುಧಾ ಚಿದಾನಂದಗೌಡ ಅವರು ಸ್ತ್ರೀವಾದಿ ನೆಲೆಯಲ್ಲಿ ಶೇಕ್ಸ್‌ಪಿಯರ್‌ನನ್ನು ತಮ್ಮ 'ಪರಿಷ್ಕೃತೆ' ಕೃತಿಯಲ್ಲಿ ಅನುಸಂಧಾನ ಮಾಡಿದ್ದಾರೆ. ಸುಧಾ ದೃಷ್ಟಿಯಲ್ಲಿ ಸ್ತ್ರೀವಾದವೆಂದರೆ ಪುರುಷರನ್ನು ದ್ವೇಷಿಸುವುದಲ್ಲ; ಆದರೆ ಸ್ತ್ರೀಯರನ್ನು ಮನುಷ್ಯರನ್ನಾಗಿ ಸಹಜವಾಗಿ ಟ್ರೀಟ್‌ಮಾಡಿ ಎಂದು ಒತ್ತಾಯಿಸುವುದು ಎಂದು ಭಾವಿಸಬಹುದಾಗಿದೆ. ಶೇಕ್ಸ್‌ಪಿಯರ್ ತನ್ನ ಸ್ತ್ರೀ ಪಾತ್ರಗಳನ್ನು ಅತ್ಯಂತ ಮಾನವೀಯ ನೆಲೆಯಲ್ಲಿ ಗೌರವಯುತವಾಗಿ ನಡೆಸಿಕೊಂಡಿದ್ದಾನೆ ಎಂಬುದು ಈ ಅಧ್ಯಯನದಿಂದ ಗುರುತಿಸಬಹುದಾಗಿದೆ. ದೈಹಿಕ ಸಾಮರ್ಥ್ಯವೇ ಶ್ರೇಷ್ಠವೆಂಬ ಚಿಂತನೆಯ ವಿರುದ್ಧ ಕವಲಾಗಿರುವ ಸ್ತ್ರೀವಾದಿ ಚಿಂತನೆಯಲ್ಲಿ ಶೇಕ್ಸ್‌ಪಿಯರ್ ಪಾಸಾಗಿದ್ದಾನೆ. ಎಂ.ಫಿಲ್.ಗಾಗಿ ಸಿದ್ಧಪಡಿಸಿದ ಈ ಪ್ರಬಂಧದಲ್ಲಿ ಶೇಕ್ಸಪಿಯರ್‌ನ ವೈಯಕ್ತಿಕ ಬದುಕಿನ ಪರಿಚಯವೂ ಇದೆ.
ಕೃತಿ: ಪರಿಷ್ಕೃತೆ, ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ಶೇಕ್ಸ್‌ಪಿಯರ್‌ನ ಇನ್ನೊಂದು ಮುಖ ಅರಿಯಲು
ಪ್ರ: ಸುಯೋಧನ ಪ್ರಕಾಶನ, ಹಗರಿಬೊಮ್ಮನಹಳ್ಳಿ. ಪುಟಗಳು 128, ಬೆಲೆ ರು. 125

ನೆಲಕ್ಕಿಳಿದ ಬೇರು  
ದೊಡ್ಡರಂಗೇಗೌಡರ ಕವನ ಸಂಕಲನ 'ನೆಲವಿಲ್ಲದೆ ಬೇರಿಲ್ಲ' ಸುಮಾರು ನಲ್ವತ್ತು ವರ್ಷಗಳ ಬಳಿಕ ಪರಿಷ್ಕೃತ ರೂಪದಲ್ಲಿ ಹೊರಬಂದಿದೆ. ಮೂಲ ಸಂಕಲನಕ್ಕೆ ಇನ್ನು ಕೆಲವು ಹೊಸ ಕವಿತೆಗಳನ್ನು ಇದರಲ್ಲಿ ಸೇರಿಸಲಾಗಿದೆ. 'ನೇಸರಿಗೆ ಬೇಕಿಲ್ಲ ಶಿಫಾರಸು ಪತ್ರ/ ಒಳ್ಳೆಯ ಕವಿತೆಗೂ ಅಷ್ಟೇ' ಎಂಬ ನಂಬುಗೆಯ ದೊಡ್ಡರಂಗೇಗೌಡರು ಸತತ ಕಾವ್ಯೋದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಮಾಜದ ಆಗುಹೋಗುಗಳ ಬಗ್ಗೆ ತಮ್ಮ ತೀಕ್ಷ್ಣ ದೃಷ್ಟಿಯನ್ನು ನೆಟ್ಟಿರುವ ಗೌಡರು ಇರುವ ಗುಡಿಗಳಿಗೇ ಪೂಜೆ ಇಲ್ಲದಿರುವಾಗ ಹೊಸದಾಗಿ ಗುಡಿಗಳನ್ನು ನಿರ್ಮಿಸುವ ನಿರರ್ಥಕತೆಯ ಬಗ್ಗೆ ಹೇಳುತ್ತಾರೆ. ಕನ್ನಡ ನಾಡು ನುಡಿಯ ಕುರಿತ ಕೆಲವು ಕವಿತೆಗಳೂ ಇದರಲ್ಲಿವೆ. 'ಸೂರ್ಯ ಚಂದ್ರ ಇರುವ ತನಕ, ಬೆಳಗುತ್ತಿರಲಿ ಕನ್ನಡ/ ಭೂಮಿ ಬಾನು ಇರುವ ತನಕ ನಲಿಯುತ್ತಿರಲಿ ಕನ್ನಡ/- ಎಂದು ಹಾರೈಸುತ್ತಾರೆ. ಗೌಡರ ಕಾವ್ಯದ ದೊಡ್ಡ ಬಲ ಇರುವುದು ಅದರ ಗೇಯತೆಯಲ್ಲಿ. ಈ ಕೃತಿಯ ನಡುವೆ ಎಂಟು ಖಾಲಿ ಪುಟಗಳು ನುಸುಳಿವೆ.
ಕೃತಿ: ನೆಲವಿಲ್ಲದೆ ಬೇರಿಲ್ಲ, ಪ್ರಕಾರ: ಕಾವ್ಯ, ಏಕೆ ಓದಬೇಕು?: ಗೌಡರ ಕಾವ್ಯದ ಬೇರು ಅರಿಯಲು, ಪ್ರ: ಶಿಶಿರ ಪ್ರಕಾಶನ, ಬೆಂಗಳೂರು. ಪುಟಗಳು 208, ಬೆಲೆ ರು. 100

ಆ ನಂತರದ ದಿನಗಳು...
ಸತ್ತಮೇಲೆ ಏನಾಗುತ್ತೇವೆ ಎಂಬ ಬಗ್ಗೆ ಟಿಬೇಟ್ ಜನರ ನಂಬಿಕೆಗಳ ಬಗ್ಗೆ ಟಿಬೇಟ್ ಭಾಷೆಯಲ್ಲಿ ಆರನೇ ಶತಮಾನದಲ್ಲಿ ಪದ್ಮಸಾಂಬ ಎಂಬವನು ರಚಿಸಿದ ಕೃತಿಯನ್ನು 1927ರಲ್ಲಿ ಬ್ರಿಟನ್ನಿನಲ್ಲಿ ನೆಲೆಸಿದ್ದ ಆಸ್ಟ್ರಿಯನ್ ಡಬ್ಲೂ.ವೈ. ಈವಾನ್ಸ್-ವೆಂಟ್ಜ್ ಎಂಬಾತ ಇಂಗ್ಲಿಷಿಗೆ “The ಖ್ಝಿಛಿಜಡಿಛಟಿ ಇ್ಟ್ಟ್ಞ ್ಟಜಿ ಝಿಜ Dead’ ಹೆಸರಿನಲ್ಲಿ ಅನುವಾದಿಸಿದ. ಇದಕ್ಕೆ ಕಾರ್ಲ್ ಯೂಂಗ್ ಪಾಂಡಿತ್ಯಪೂರ್ಣವಾದ ಮುನ್ನುಡಿಯನ್ನು ಬರೆದುದರಿಂದ ಇದೊಂದು ಕುತೂಹಲಕಾರಿ ಮನೋವಿಜ್ಞಾನದ ಕೃತಿಯೆನ್ನಿಸಿಕೊಂಡಿತು. ಅಧ್ಯಾತ್ಮ ಜೀವಿಗಳು ಮಾತ್ರವಲ್ಲದೆ ಅತಿವಾಸ್ತವವಾದಿ ಕಲಾವಿದರು, ಖಗೋಳ ವಿಜ್ಞಾನಿಗಳು, ಸೂಫಿಗಳು ಇದರ ಆರಾಧಕರಾದರು. ಟಿಬೇಟಿನಲ್ಲಿ ಮಕ್ಕಳು ಎಂಟು ವರ್ಷ ತುಂಬುವ ಹೊತ್ತಿಗೆ ಇದನ್ನು ಬಾಯಿಪಾಠ ಮಾಡಿರುತ್ತಾರೆ. ಬೌದ್ಧ ಭಿಕ್ಷುಗಳು ಸತ್ತವರ ಮನೆಗೆ ಹೋಗಿ ಶವದ ಮುಂದೆ ಹಾಗೂ ಶವವನ್ನು ಚಿತೆಗೇರಿಸಿದ 48 ದಿನಗಳ ವರೆಗೂ ಇದರ ಪಠಣ ಮಾಡುತ್ತಾರೆ. ವಿಭಿನ್ನ ಧರ್ಮಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಪೂರಕ. ಇದನ್ನು ಕನ್ನಡಕ್ಕೆ ತಂದವರು ಅಗ್ನಿಶ್ರೀಧರ್.
ಕೃತಿ: ಟಿಬೇಟಿಯನ್ನರ ಸತ್ತವರ ಪುಸ್ತಕ, ಪ್ರಕಾರ: ಬೌದ್ಧ ಧರ್ಮ ಕೃತಿ, ಏಕೆ ಓದಬೇಕು?: ಸತ್ತ ನಂತರ ಏನು ಎಂಬ ಪ್ರಶ್ನೆಗೆ ಉತ್ತರ ಪಡೆಯಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 72, ಬೆಲೆ ರು. 50

ರೆಕ್ಕೆ ಪಡೆದ ಹಕ್ಕಿ
ಕವಿತೆ ಎಂದರೆ ಧ್ಯಾನ ಎಂದು ಮನಗಂಡಿರುವ ಡಾ.ಎಂ. ವೆಂಕಟಸ್ವಾಮಿಯವರು, ನಮ್ಮ ಸಮಾಜದಲ್ಲಿನ ಭ್ರಷ್ಟಾಚಾರದ ವಿಶ್ವರೂಪ ಕಂಡು ಕಂಗಾಲಾದವರು. ಯಾವ ರೀತಿಯಲ್ಲಾದರೂ ಸರಿ ಹಣವನ್ನು ಗುಡ್ಡೆಹಾಕಿಕೊಳ್ಳಬೇಕೆಂಬ ಮನೋಧರ್ಮದವರ ನಡುವೆ ಬದುಕುತ್ತಿರುವಾಗ ಧ್ಯಾನವಿಲ್ಲದೆ ಕವಿತೆ ಹೊರಬರದು ಎನ್ನುತ್ತಾರೆ. ಕಾವ್ಯ ಕೊನರಿ ಬಯಲು ಬೆಟ್ಟಗಳೆಲ್ಲ ಹರಡಬೇಕು ಎಂಬ ಆಶಯ ಅವರದು. ಸಂಕಲನದ ಮೊದಲ ಕವಿತೆ 'ಪರ್ವತಗಳು' ನಿಸರ್ಗದ ಅದ್ಭುತಗಳ ಬಗೆಗೆ ಕವಿಯಲ್ಲಿ ಆಶ್ಚರ್ಯವನ್ನು ಮೂಡಿಸುತ್ತದೆ. 'ಪರ್ವತಗಳನ್ನು ಯಾರು ಎತ್ತಿ ನಿಲ್ಲಿಸಿದರು ಅಷ್ಟು ಎತ್ತರಕ್ಕೆ.... ಆಕಾಶದಲ್ಲಿ ಸಾಲುಸಾಲು ಶಿಖರ ಶ್ರೇಣಿಗಳ ಚುಚ್ಚಿಟ್ಟು ಸುತ್ತಲೂ ಗಿಡಮರಗಳ ಹಚ್ಚಿಟ್ಟು ನೆಲದ ಸುತ್ತಲೂ ಸಮುದ್ರಗಳ ಸೃಷ್ಟಿಸಿರುವ ಪರ್ವತಗಳನ್ನು ಯಾರು ಎತ್ತಿ ನಿಲ್ಲಿಸಿದರು ಅಷ್ಟು ಎತ್ತರಕ್ಕೆ..' ಎಂಬ ಅಚ್ಚರಿ ಕವಿಯಲ್ಲಿ. ಇದರಲ್ಲಿ ಒಟ್ಟೂ 56 ಕವಿತೆಗಳಿವೆ. ಹಲವು ಕವಿತೆಗಳ ಕೊನೆಯಲ್ಲಿ ಥೀಮ್‌ಥಾಟ್ ಎನ್ನುವಂತೆ ಗಣ್ಯರ ನುಡಿಯಿದೆ.
ಕೃತಿ: ಹಕ್ಕಿಗಳಿಗೆ ವೀಸಾ ಕೊಟ್ಟವರ್ಯಾರು, ಪ್ರಕಾರ: ಕಾವ್ಯ,
ಏಕೆ ಓದಬೇಕು?: ಹಕ್ಕಿಯಂತೆ ಹಗುರಾಗಲು, ಪ್ರ: ಸಾಹಿತ್ಯ ಸುಗ್ಗಿ, ಬೆಂಗಳೂರು. ಪುಟಗಳು 128, ಬೆಲೆ ರು. 100

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.