ಸಾಪ್ತಾಹಿಕಪ್ರಭ

ಮೌನದ ಮೆಲುಕುಗಳು

Published On :

'ಮೌನ ಬಂಗಾರ..' ಎಂಬ ಹೋಲಿಕೆಯ
ಮಾತಿಗೆ ನನ್ನ ಪ್ರತಿಕ್ರಿಯೆ;
'ಅದು ಗಣಿಯಲ್ಲಿ ಅದಿರಾಗಿಯೇ ಇರಬೇಕಿತ್ತು..!'
-
ನಿನ್ನ ಮೌನದ ಗತ್ತಿಗೆ ಮಸೆದ ನನ್ನ ಹಲ್ಲುಗಳ ನೋಡಿ
ಮಸೆಗಲ್ಲು ಕೂಡ ನಾಚಿತು..!
-
ನಿನ್ನ ಮೌನದಿಂದ ನೀರಿಗೆ ಬಾಯಾರಿಕೆ, ತಂಪಿಗೆ ಸೆಖೆ;
ಬರಗಾಲದ ಪರ್ಯಾಯವೇ ನಿನ್ನ ಮೌನ..!
-
ನಿನ್ನ ಮೌನದ ಹಿಂದಣ ಗೊತ್ತಾದಾಗ ಮೌನವಾಗಿರಲು
ನನಗೂ ಹಿಂಜರಿಕೆಯಾಯಿತು..!
-
ನಿನ್ನ ಮೌನದ ಮತ್ತಿಗೆ ಬಲಿಯಾದವರ ರಾಶಿಯಲ್ಲಿ
ಬರೀ ನನ್ನ ಥರದ್ದೇ ಮುಖಗಳು..!
-
ನಿನ್ನ ಮೌನದಿಂದ ಹಗರಣಗಳೆಲ್ಲ ಮುಚ್ಚಿಹೋದವು
ಎಂಬುದು ನಿನ್ನ ತಾತ್ಕಾಲಿಕ ನಂಬಿಕೆಯಷ್ಟೇ..!
-
ನಿನ್ನ ಮೌನ, ಉಸಿರ ಹಾದಿಯ ಮೇಲೆ ನಡೆದ ಹಲ್ಲೆ;
ಹಸಿರ ಕೊರಳಿಗೆ ಒಡ್ಡಿದ ಉರುಳು..!
-
'ಮೌನಕ್ಕೆ ನೂರಾರು ಅರ್ಥ..' ಎನ್ನುವುದಕ್ಕೆ
ನಿನ್ನ ಮೌನ ವ್ಯತಿರಿಕ್ತ..!
-
'ಮೌನವೇ ಮಾತಾಡು..!' ಅಂದೆ.
ಮಾತೋ ಮಾತು;
ಹಗಲಿರುಳು ಸಾಲಾದವು...
ಗುಡ್ಡ ಬೆಟ್ಟ ಗದ್ದೆ ತೋಟ ಹೊಳೆದಂಡೆ ಸಾಗರತೀರ
ಕಾಡು ಮೇಡು ಗೂಡುಗಳ
ಕಿವಿ ತುಳುಕಿದವು...

ಕೊನೆಗೆ ನಾನೇ ಮೌನವಾಗಿಬಿಟ್ಟೆ!
-
ನಿನ್ನ ಮೌನದಲ್ಲಿ
ಕರುಣೆ ಅಕ್ಕರೆ ಒಲವುಗಳೆಲ್ಲವೂ ತುಂಬಿಕೊಂಡಿವೆ
ಎಂದೇ ಭಾವಿಸಿದ್ದೇನೆ ಈ ಕ್ಷಣದವರೆಗೂ..
ಅದು ನಿಜವಾಗಲು ಇನ್ನು ಇನ್ನೂ ನಿನ್ನ ಮೌನವನ್ನೇ
ಬಯಸುತ್ತೇನೆ...
ಮೌನವೇ, ನೀನು ಸಾವಿಗಿಂತಲೂ ಆಪ್ತ;
ಸಾವೇ,
ನೀನು ಮೌನಕ್ಕಿರುವ ಅಂತರಾತ್ಮ ಹೊಂದು,
ನಾನಾಗ ಆಳ ನಿರಾಳ..!
-
ಮೌನ ನೂರು ಚೂರಾಗಿ ಸಿಡಿದಾಗ
ಬಾಂಬುಗಳು ಸಹ ಹಾನಿಗೊಳಗಾದವರ ಪಟ್ಟಿಯಲ್ಲಿದ್ದವು..!
-
ಮಾತು ಸತ್ತ ಮರುದಿನವೇ
ನಿನ್ನ ನಂಟು ಪ್ರಾಪ್ತವಾಯಿತಾದರೂ
ಜೀವ ತೃಪ್ತವಾಗಲಿಲ್ಲ;
ಆಗಲೇ ನಾ ಬಿಳಿಹಾಳೆಗಳ ಮೇಲೆಅಲೆದಾಡುವುದ ರೂಢಿಸಿಕೊಂಡೆ..!
-
ಕಲ್ಲಾಗಿ ಬಿಟ್ಟೆ ಎಂದುಕೊಂಡು ಕಟೆಯ ಹತ್ತಿದೆ;
ಜೀವ ಧರಿಸಿ ನಿಂತೊಡನೆ ಮೌನ ಮೆಟ್ಟಿದೆ!
= ವಿಜಯಕಾಂತ ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.