ಸಾಪ್ತಾಹಿಕಪ್ರಭ

ಟಿಪ್ಪು ಟ್ರಿಕ್ಕು

ಟಿಪ್ಪು ಟ್ರಿಕ್ಕು
Published On :

ಒಬ್ಬ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೇ ಎಂದು ತಿಳಿಯಲು ಇತಿಹಾಸದ ಟೈಮ್‌ಲೈನ್ ನೋಡಬೇಕಾಗುತ್ತದೆ. ಹಾಗೆ ನೋಡಿದಾಗ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನ ಯಾವ ಹೋರಾಟವನ್ನೂ ಸ್ವಾತಂತ್ರ್ಯ ಹೋರಾಟ ಎನ್ನಲಿಕ್ಕಾಗದು. ಎಲ್ಲರೂ ತಮ್ಮ ತಮ್ಮ ರಾಜ್ಯ, ಗಡಿ, ಆಡಳಿತ ಉಳಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಡುತ್ತಿದ್ದರು. ಟಿಪ್ಪು ಮರಾಠರು, ಕೊಡವರ ವಿರುದ್ಧ ಹೋರಾಡಿದ್ದೂ ಇದೇ ರೀತಿ. ಟಿಪ್ಪುಗೆ ಬ್ರಿಟಿಷರ ವಿರುದ್ಧ ಎಷ್ಟು ದ್ವೇಷವಿತ್ತೋ, ಮರಾಠರಿಗೆ ಹೈದರ್- ಟಿಪ್ಪು ಮೇಲೂ ಅಷ್ಟೇ ಕೋಪವಿತ್ತು. ಮರಾಠರು ಟಿಪ್ಪುವಿಗಿಂತ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗುತ್ತಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾಪ, ಆ ಸಂಬಂಧದ ಚರ್ಚೆ  ಬಲಗೊಂಡಿರುವ ಹೊತ್ತಿಗೆ ಖ್ಯಾತ ಅಂಕಣಕಾರ ಪ್ರತಾಪ ಸಿಂಹ ಅವರ 'ಟಿಪ್ಪು ಸುಲ್ತಾನ; ಸ್ವಾತಂತ್ರ್ಯ ವೀರನಾ?'  ಹೊತ್ತಗೆ ಹೊರಬಂದಿದೆ. ಕುತುಹಲಕಾರಿ ಕೃತಿಯ ಆಯ್ದ ಭಾಗ ಇಲ್ಲಿದೆ...

ಇತಿಹಾಸವನ್ನು ಸ್ವಲ್ಪ ಕೆದಕಿ ನೋಡಿ... ಹದಿನೆಂಟನೇ ಶತಮಾನದ ಆದಿಯಲ್ಲಿ ದಿಲ್ಲಿಯ ಗದ್ದುಗೆಯ ಮೇಲೆ ಕುಳಿತ ಮೊಘಲ್ ಮಹಾರಾಜ ಔರಂಗಜೇಬ್ ಭಾರತ ಕಂಡ ಅತ್ಯಂತ ಕ್ರೂರಿ. ಆದರೆ ಅದೇ ಶತಮಾನದ ಅಂತ್ಯದಲ್ಲಿ ದಕ್ಷಿಣ ಭಾರತದಲ್ಲಿ ಔರಂಗಜೇಬ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲ ದೊರೆಯೆಂದರೆ ಮೈಸೂರಿನ ಟಿಪ್ಪು ಸುಲ್ತಾನ್!

ಔರಂಗಜೇಬನಾದರೋ 50 ವರ್ಷಗಳ ದೀರ್ಘ ಆಡಳಿತಾವಧಿಯಲ್ಲಿ ಮಾಡಿದ ಎಗ್ಗಿಲ್ಲದ ದೌರ್ಜನ್ಯಗಳಿಗೆ ಸರಿಸಮಾನವಾಗಿ ಟಿಪ್ಪುಸುಲ್ತಾನನು ಕೇವಲ 17 ವರ್ಷಗಳ ಅವಧಿಯಲ್ಲಿ ಮಾಡಿದನೆಂದರೆ ಅವನ ದೌರ್ಜನ್ಯದ ಆಳ ಅಗಲ ಹಾಗೂ ವ್ಯಾಪ್ತಿ ಯಾವ ಮಟ್ಟದ್ದು ಎಂದು ಗ್ರಹಿಸಲು ಸಾಧ್ಯವಾಗುತ್ತದೆ. ಔರಂಗಜೇಬನಿಗಾದರೋ ಸರಿಸುಮಾರು ಇಡೀ ಭಾರತವೇ ದೊರೆತಿತ್ತು. ದೆಹಲಿ, ಆಗ್ರಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಾಸ್ಥಾನ, ಗುಜರಾತ್, ಕಾಶ್ಮೀರ, ಪಂಜಾಬ್, ಹರಿಯಾಣ... ಈ ವಿಶಾಲ ವಿಸ್ತರಣದಲ್ಲಿ    ತನ್ನ ದೌರ್ಜನ್ಯ ಎಸಗಿದ.
ಆದರೆ ಟಿಪ್ಪುವಿನ ವ್ಯಾಪ್ತಿ ಇದ್ದದ್ದು ಕರ್ನಾಟಕ, ತಮಿಳುನಾಡಿನ ಸ್ವಲ್ಪ ಭಾಗ, ಆಂಧ್ರದ ಸ್ವಲ್ಪ ಭಾಗ ಹಾಗೂ ಕೇರಳದ ಮಲಬಾರ್ ಪ್ರದೇಶಗಳಷ್ಟೇ. ಆದರೂ ಇಷ್ಟು ಚಿಕ್ಕ ಪ್ರದೇಶದಲ್ಲಿ ಟಿಪ್ಪುವಿನ ದೌರ್ಜನ್ಯಗಳು ಅತ್ಯಂತ ಅಲ್ಪಾವಧಿಯಲ್ಲಿ ಅತ್ಯಂತ ಬರ್ಬರ ರೀತಿಯಲ್ಲಿ ನಡೆಯಿತು.ಈ ದೌರ್ಜನ್ಯಗಳು ಕೇವಲ ಹಿಂದುಗಳ ಮೇಲಷ್ಟೇ ಸೀಮಿತಗೊಳ್ಳದೆ ಸಮಾಜದ,ಶ್ರದ್ಧಾಕೇಂದ್ರಗಳ, ನಂಬಿಕೆಗಳ, ಆಚಾರ ವ್ಯವಹಾರಗಳ ಮೇಲೂ ಹಬ್ಬಿತು.ಲೂಯಿಸ್ ರೈಸ್ ಎಂಬ ಬ್ರಿಟಿಷ್ ಇತಿಹಾಸಕಾರನು ತನ್ನ 'ಏ್ಝಡಡ್ಟ್ಠಿಣ ್ಟಜಿ ಂಣಡ್ಟ್ಠಜ ಛಟಿಜ ಈ್ಟ್ಟ್ಠ್ಜ'ನಲ್ಲಿ ಬರೆಯುತ್ತಾನೆ, 'ಟಿಪ್ಪುವಿನ ಸಾವಿನ ಕಾಲದಲ್ಲಿ ಅವನ ವಿಶಾಲ ಸಾಮ್ರಾಜ್ಯದಲ್ಲಿ ಶ್ರೀರಂಗಪಟ್ಟಣದಲ್ಲಿ ಕೇವಲ ಎರಡೇ ಎರಡು ದೇವಸ್ಥಾನಗಳಲ್ಲಿ ನಿತ್ಯಪೂಜೆಗಳು ನಡೆಯುತ್ತಿದ್ದವು. ಅದೂ ಈ ಎರಡು ದೇವಸ್ಥಾನಗಳನ್ನು ಅವನು ತನ್ನ ಜಾತಕವನ್ನು ನೋಡುತ್ತಿದ್ದ ಬ್ರಾಹ್ಮಣ ಜ್ಯೋತಿಷ್ಯರ ಅಣತಿಯ ಮೇರೆಗೆ ಉಳಿಸಿಕೊಟ್ಟಿದ್ದ. ರಾಜ್ಯದಲ್ಲಿರುವ ಎಲ್ಲ ದೇವಸ್ಥಾನಗಳ ಸಂಪತ್ತನ್ನು 1790ರ ಮೊದಲೇ ಟಿಪ್ಪು ಸುಲಿಗೆ ಮಾಡಿದ್ದ.'

ಇನ್ನು ಮೈಸೂರಿನ ಎಂ.ಎ. ಗೋಪಾಲ್ ರಾಯರು ಟಿಪ್ಪುಸುಲ್ತಾನನ ಮಗನಾದ ಗುಲಾಂ ಮೊಹಮ್ಮದ್ ಹಾಗೂ ಮುಸ್ಲಿಂ ಇತಿಹಾಸಕಾರನಾದ ಕಿರ್ಮಾನಿ ಅವರ ಬರಹಗಳ ಆಧಾರದ ಮೇಲೆ ರಚಿಸಿದ ಮೈಸೂರಿನ ಇತಿಹಾಸದಲ್ಲಿ ಹೀಗೆ ಉಲ್ಲೇಖಿಸುತ್ತಾರೆ, 'ಟಿಪ್ಪುವಿನ ತೆರಿಗೆ ಕಾನೂನಿನಡಿ ಮುಸ್ಲಿಮರಿಗೆ ಎಲ್ಲ ರೀತಿಯ ತೆರಿಗೆ ವಿನಾಯಿತಿ ಇತ್ತು. ಮುಸ್ಲಿಮರು ಭೂಕಂದಾಯ, ಆಸ್ತಿಕಂದಾಯ, ನಿತ್ಯೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಇತ್ಯಾದಿ ಕಟ್ಟುವುದರಿಂದ ಮುಕ್ತರಾಗಿದ್ದರು.

ಟಿಪ್ಪು ತನ್ನ ಆಡಳಿತದ ಎಲ್ಲ ವಿಭಾಗಗಳಲಿ ಮುಸ್ಲಿಮರನ್ನೇ ತಂದನು. ಒಬ್ಬ ದಿವಾನ್ ಪೂರ್ಣಯ್ಯ ಮಾತ್ರ ಇದಕ್ಕೆ ಹೊರತಾಗಿದ್ದರು. ಹಿಂದೆ ಇದ್ದ ಪದ್ಧತಿಯಂತೆ ಆಡಳಿತದ ಕಡತಗಳನ್ನು ಕನ್ನಡ ಅಥವಾ ಮರಾಠಿಯಲ್ಲಿ ಬರೆಯುವುದನ್ನು ನಿಷೇಧಿಸಿ ಕೇವಲ ಫಾರ್ಸಿಯಲ್ಲೇ ಬರೆಯಬೇಕೆನ್ನುವ ಆಜ್ಞೆಯನ್ನು ಹೊರಡಿಸಿದ.' ಇದಷ್ಟೇ ಅಲ್ಲದೆ ಟಿಪ್ಪು ತನ್ನ ರಾಜ್ಯದ ವ್ಯಾಪ್ತಿಯಲ್ಲಿ ಬಂದಿದ್ದ ನಗರಗಳ ಮೂಲ ಹೆಸರುಗಳನ್ನೂ ಬದಲಿಸಿದ. ಟಿಪ್ಪುವಿಗೆ ಹಿಂದು ಧರ್ಮವೊಂದೇ ಅಲ್ಲ ದೇವಸ್ಥಾನಗಳಷ್ಟೇ ಅಲ್ಲ ಹಿಂದುಗಳಷ್ಟೇ ಅಲ್ಲ ಹಿಂದು ಮೂಲದ ಹೆಸರಿರುವ ಊರುಗಳ ಕಂಡರೂ ಸಹಿಸುತ್ತಿರಲಿಲ್ಲ.

ಟಿಪ್ಪುಸುಲ್ತಾನನ ಕರಾಳ ಹಾಗೂ ಸಂಪೂರ್ಣ ಸ್ವರೂಪ ನಮಗೆ ದೊರೆಯುವುದು ಮೂರು ಮುಖ್ಯ ಐತಿಹಾಸಿಕ ಮೂಲಗಳಿಂದ; ಒಂದು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕರ್ನಲ್ ವಿಲಿಯಮ್ ಕರ್ಕಾಟ್ರಿಕ್ ಸಂಪಾದಿಸಿದ 2000ಕ್ಕೂ ಹೆಚ್ಚು ಪತ್ರಗಳು ಟಿಪ್ಪು ತನ್ನ ಸ್ವಹಸ್ತದಲ್ಲಿ ಫಾರ್ಸಿ ಭಾಷೆಯಲ್ಲಿ ಬರೆದ ಪತ್ರಗಳು. ಎರಡು, ಅವನು ಕೊಡಗು ಹಾಗೂ ಕೇರಳದ ಮೇಲೆ ನಡೆಸಿದ ಅಮಾನವೀಯ ದಾಳಿ ಹಾಗೂ ಮೂರು, ಕೇರಳದ ಮಲಬಾರಿನ ಕಲೆಕ್ಟರ್ ಆಗಿ ದುಡಿದ ವಿಲಿಯಂ ಲೋಗಾನ್ ಬರೆದ ಮಲಬಾರ್ ಮ್ಯಾನುವಲ್ ಎಂಬ ಬೃಹತ್ ಗ್ರಂಥ.
ಇನ್ನು ಟಿಪ್ಪುಸುಲ್ತಾನನ ಕೇರಳದ ದಾಳಿಯ ಕರಾಳ ಇತಿಹಾಸಕ್ಕೆ ಒಂದು ಪ್ರತ್ಯೇಕ ಪುಸ್ತಕವೇ ಮೀಸಲಿಡಬೇಕು. ಟಿಪ್ಪು ಅಲ್ಲಿ ಮಾಡದ ಅತ್ಯಾಚಾರವಿಲ್ಲ, ಹರಿಸಿದ ರಕ್ತಕ್ಕೆ ಲೆಕ್ಕವೇ ಇಲ್ಲ, ತೋರಿಸಿದ ಕ್ರೌರ್ಯಕ್ಕೆ ಮಿತಿಯೇ ಇಲ್ಲ. ವಿಲಿಯಂ ಲೋಗಾನನು ಚಿರಚ್ಕಲ್ ತಾಲೂಕಿನಲ್ಲಿ ಇದ್ದ ತ್ರಿಚಂಬರಂ ಹಾಗೂ ತಳಿಪ್ಪರಂಬ, ತೆಲಿಚೆರಿಯಲ್ಲಿರುವ ತಿರುವಂಕಟು ಹಾಗೂ ಬಡಗರದ ಸಮೀಪದಲ್ಲಿರುವ ಪೋನ್ ಮೇರಿ ದೇವಸ್ಥಾನಗಳನ್ನು ಟಿಪ್ಪುಸುಲ್ತಾನನು ನಾಶಮಾಡಿದನೆಂದು ಬರೆಯುತ್ತಾನೆ.

ಕೇರಳದಲ್ಲಿ ಟಿಪ್ಪು ಧ್ವಂಸ ಮಾಡಿದ ದೇವಸ್ಥಾನಗಳ ಅಪೂರ್ಣ ಪಟ್ಟಿ ಇಲ್ಲಿದೆ; ಥಳಿ, ತಿರುವಣ್ಣೂರ್, ವರಕ್ಕಳ್, ಪುತೂರ್, ಗೋವಿಂದಪುರಮ್, ಥಳಿಕ್ಕುನ್ನು, ಕೇರಳಾಧೀಶ್ವರಂ, ತ್ರಿಕ್ಕಂಡಿಯೂರ್, ತ್ರಿಪ್ರಂಗತು, ತಿರುನವಾಯ, ಕೋಟಿಕ್ಕುನ್ನು, ತ್ರಿತಾಳ, ಪಣ್ಯೂರ್, ಶುಕಪುರಂ, ಪೆರುಂಪರಂಪು, ಮರಣೆಲಿರ, ವೆಂಗಾರಿ, ತ್ರಿಕ್ಕುಲಂ, ಅಳಿನ್ಜಿಲ್ಲಂ, ಇಂದ್ಯಾನ್ನೂರ್, ಮಣ್ಣೂರ್, ಮಮ್ಮಿಯೂರ್, ಪರಂಪಾತಳಿ, ಪಣ್ಮಯನಾಡು, ವೆಂಗಿಡಗು ಹಾಗೂ ಸುಪ್ರಸಿದ್ಧವಾದ ಗುರುವಾಯೂರು ಕೃಷ್ಣನ ದೇವಸ್ಥಾನ!

ಒಟ್ಟಾರೆ ಕೇರಳದ ಈ ಅತ್ಯಂತ ಮೃಗೀಯ ದಾಳಿಯು ಟಿಪ್ಪುವಿಗೆ ಯಾವ ಪರಿ ಸಂತೋಷವನ್ನುಂಟು ಮಾಡಿತ್ತೆನ್ನುವುದರ ಸತ್ಯ ಜನವರಿ 19, 1790ರಲ್ಲಿ ಅವನು ತನ್ನ ಬಂಟನಾದ ಬುದ್ರುಜ್ ಜುಮಾನ್‌ಗೆ ಬರೆದ ಪತ್ರದಿಂದ ಗೋಚರವಾಗುತ್ತದೆ- 'ಇತ್ತೀಚೆಗೆ ನಾನು ಮಲಬಾರಿನಲ್ಲಿ ಮಹತ್ತರ ವಿಜಯ ಸಾಧಿಸಿದರ ಬಗ್ಗೆ ನಿನಗೆ ಗೊತ್ತೇ? ಅಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಇಸ್ಲಾಂಗೆ ಮತಾಂತರಗೊಳಿಸಿದೆ. ಈಗ ನಾನು ಆ ಶಾಪಗ್ರಸ್ತನಾದ ರಾಮನ್ ನಾಯರ್ ವಿರುದ್ಧ ಹೋರಾಡಬೇಕೆಂಬ ಸಂಕಲ್ಪ ಮಾಡಿದ್ದೇನೆ. ಅವನನ್ನೂ ಅವನ ಅಷ್ಟೂ ಪ್ರಜೆಗಳನ್ನೂ ಇಸ್ಲಾಂಗೆ ಮತಾಂತರ ಮಾಡುವುದು ನನಗೆ ಖಾತ್ರಿಯಾಗಿದೆ'.


ಆದರೆ ಅದೇ ಸಂಕಲ್ಪವು ಟಿಪ್ಪುವಿಗೆ ಮುಳುವಾಯಿತು!
ರಾಜಾ ರಾಮನ್ ನಾಯರ್ ಅಥವಾ ತಿರುವಾಂಕೂರಿನ ಧರ್ಮರಾಜನು ಟಿಪ್ಪುವಿನ ಮೊದಲ ಸುತ್ತಿನ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ. ಜೊತೆಯಲ್ಲೇ ಸಹಾಯ ಕೋರಿ ಬ್ರಿಟಿಷರಿಗೆ ಪತ್ರ ಬರೆದ. ಅಲ್ಲಿಗೆ 3ನೇ ಮೈಸೂರು ಯುದ್ಧದ ಘೋಷಣೆಯಾಯಿತು. ತಕ್ಷಣವೇ ಲಾರ್ಡ್ ಕಾರ್ನ್‌ವಾಲಿಸ್ ಒಂದು ದೊಡ್ಡ ದಂಡನ್ನು ನಡೆಸಿಕೊಂಡು ಬಂದು ತಾನೇ ಮುಂದೆ ನಿಂತು ಧರ್ಮರಾಜನಿಗೆ ನೆರವಾದ. ಇದರೊಟ್ಟಿಗೆ ಮರಾಠರ ಹಾಗೂ ಹೈದರಾಬಾದಿನ ನಿಜಾಮನ ಜೊತೆ ಸಂಧಾನ ಮಾಡಿಕೊಂಡ ಕಾರ್ನ್‌ವಾಲಿಸ್, ಟಿಪ್ಪುವಿನ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳ ಮೇಲೆ ದಾಳಿ ಮಾಡಿದ. ಕಾರ್ನ್‌ವಾಲಿಸ್‌ನ ತಂತ್ರ ಎಷ್ಟು ಯಶಸ್ವಿಯಾಯಿತೆಂದರೆ ಟಿಪ್ಪುವಿನಿಂದ ಬೆಂಗಳೂರನ್ನೂ ಕಸಿದುಕೊಂಡು ಕಡೆಗೆ ಅವನನ್ನು ಶ್ರೀರಂಗಪಟ್ಟಣದ ಕೋಟೆಯೊಳಗೆ ಅವಿತುಕೊಳ್ಳುವಂತೆ ಮಾಡಿದ. ಗತಿಯಿಲ್ಲದೆ 1792ರಲ್ಲಿ 'ಮೈಸೂರಿನ ಹುಲಿ' ಟಿಪ್ಪು ಶರಣಾಗತಿ ಕೋರಿದ.

ಈ ಘಟನೆಯ ನಂತರ ಟಿಪ್ಪು ಮೇಲ್ನೋಟಕ್ಕೆ ಮೆತ್ತಗಾದ!
ಕಳೆದುಕೊಂಡಿದ್ದ ಅರ್ಧರಾಜ್ಯವನ್ನು ಮರಳಿ ಗಳಿಸಬೇಕಾದರೆ, ತನ್ನ ಹಿಡಿತದಲ್ಲಿದ್ದ ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿದ್ದ ಹಿಂದುಗಳನ್ನು ಎದುರುಹಾಕಿಕೊಳ್ಳುವ ಹಾಗಿರಲಿಲ್ಲ. ಈ ಸಂದರ್ಭದಲ್ಲೇ ಅವನು ಶೃಂಗೇರಿಯ ಮಠಕ್ಕೆ ಕಾಣಿಕೆಯನ್ನು ಕೊಟ್ಟಿದ್ದು. ಇದೊಂದನ್ನು ಮಾತ್ರ ಹಿಡಿದು ನಮ್ಮ ಸ್ವಯಂಘೋಷಿತ ಬುದ್ಧಿಜೀವಿಗಳು, ಇತಿಹಾಸಾಭಾಷಿಗಳು ಟಿಪ್ಪುಸುಲ್ತಾನನನ್ನು ಪರಧರ್ಮಸಹಿಷ್ಣುತೆಯ ಪ್ರತೀಕ ಇತ್ಯಾದಿ ಸುಳ್ಳುಗಳನ್ನು ನುಡಿಯುತ್ತಾರೆ. ಟಿಪ್ಪು ಶೃಂಗೇರಿಯ ಮಠಕ್ಕೆ ಕೊಟ್ಟ ಹಣ, ಆ ಮಠದ ಸ್ವಾಮಿಗಳಿಗೆ ಬರೆದ ಜೇನು ಜಿನುಗುವ ಪತ್ರಗಳ ಸಂದರ್ಭವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಬೇರೆಯದೇ ಚಿತ್ರ ಮೂಡುತ್ತದೆ. ಲೀಲಾ ಪ್ರಸಾದ್ ಎಂಬವರು ಶೃಂಗೇರಿಯನ್ನು ಕುರಿತ ತಮ್ಮ "Poetics of conduct: Oral Narrative and Moral Being in South Indian Town' ಪುಸ್ತಕದಲ್ಲಿ ಸುರೇಂದ್ರನಾಥ್ ಸೇನ್ ಎಂಬ ವಿದ್ವಾಂಸರ ಮಾತನ್ನು ಉದ್ಧರಿಸುತ್ತಾರೆ- 'ಈ ಸಮಯದಲ್ಲಿ (ಅಂದರೆ 1793ರಲ್ಲಿ) ಟಿಪ್ಪುಸುಲ್ತಾನನಿಗೆ ಎಲ್ಲ ಕಡೆಯಿಂದಲೂ ಶತ್ರುಗಳ ಭಯವಿತ್ತು. ಹೀಗಾಗಿ ಅವನು ತನ್ನ ಹಿಂದು ಪ್ರಜೆಗಳನ್ನು ತಾತ್ಕಾಲಿಕವಾಗಿ ಸಮಾಧಾನಪಡಿಸುವ ತುರ್ತಿತ್ತು. ಮತ್ತೊಂದೆಡೆ ಅವನು ಸ್ವಾಮಿಗಳಿಂದಲೇ ಪೂಜೆ ಹೋಮ ಇತ್ಯಾದಿಗಳನ್ನು ಮಾಡಿಸಿ ಮರಾಠರ ಎದೆಯಲ್ಲಿ ಮೂಢನಂಬಿಕೆ ಜನಿತವಾದ ಭಯ ಮೂಡಿಸುವ ತಂತ್ರವೂ ಅಡಗಿತ್ತು.' ಇಲ್ಲಿ ಟಿಪ್ಪು ಸುಲ್ತಾನನ ವ್ಯಕ್ತಿತ್ವದ ಮತ್ತೊಂದು ಮುಖ ತೆರೆದುಕೊಳ್ಳುತ್ತದೆ.
ಟಿಪ್ಪುಗೆ ಜ್ಯೋತಿಷ್ಯದಲ್ಲಿ ಅಚಲ ನಂಬಿಕೆಯಿತ್ತು. ತನ್ನ ಆಸ್ಥಾನದಲ್ಲಿ ಅನೇಕ ಜ್ಯೋತಿಷ್ಯರನ್ನು ಇಟ್ಟುಕೊಂಡಿದ್ದು, ಅವರಿಂದ ತನ್ನ ಯುದ್ಧಗಳಿಗೆ ದಾಳಿಗಳಿಗೆ ಪ್ರಶಸ್ತ ಮುಹೂರ್ತ ಹಾಕಿಕೊಡಲು ಆಜ್ಞೆ ಮಾಡುತ್ತಿದ್ದುದು ನಿರ್ವಿವಾದವಾಗಿ ತಿಳಿದುಬರುತ್ತದೆ. ವಿ.ಆರ್. ಪರಮೇಶ್ವರನ್ ಪಿಳ್ಳೈ ಅವರ ರಾಜಾ ಕೇಶವದಾಸ್ ಅವರ ಜೀವನಚರಿತ್ರೆಯಲ್ಲಿ ಟಿಪ್ಪುವಿನ ಈ ಅಂಧಶ್ರದ್ಧೆಯನ್ನು ಈ ರೀತಿ ವರ್ಣಿಸಲಾಗಿದೆ- 'ಜ್ಯೋತಿಷ್ಯವು ಹೇಳುವ ಭವಿಷ್ಯವಾಣಿಯಲ್ಲಿ ಟಿಪ್ಪುವಿಗೆ ಅಪಾರ ನಂಬಿಕೆಯಿತ್ತು. 1792ರ ಅತ್ಯಂತ ಅವಮಾನಕರ ಸೋಲಿನ ನಂತರ ಟಿಪ್ಪುನ ಆಸ್ಥಾನ ಜ್ಯೋತಿಷ್ಯರು ನೀನು ಬ್ರಿಟಿಷರನ್ನು ಸದೆಬಡಿದರೆ ದಕ್ಷಿಣ ಭಾರತದ ಬಾದಶಹನಾಗುವೆ ಎಂಬ ಭವಿಷ್ಯವನ್ನು ನುಡಿದರು. ಅವರ ಸಲಹೆಯಂತೆ ಟಿಪ್ಪು ಶೃಂಗೇರಿ ಮಠಕ್ಕೆ ಹಾಗೂ ಇನ್ನಿತರ ದೇವಸ್ಥಾನಗಳಿಗೆ ದಾನ ಹಣ ಕೊಡುವುದಕ್ಕೆ ಶುರುಮಾಡಿದನು. ಈ ದಾನಗಳು ಹಿಂದುಗಳ ಮೇಲಿನ ಪ್ರೀತಿ ಗೌರವಗಳಿಂದ ಬಂದದ್ದಲ್ಲ. ತಾನು ಬಾದಶಹ ಆಗುತ್ತೇನೆ ಎನ್ನುವ ನಂಬಿಕೆಯಿಂದ ಅಷ್ಟೇ.'
ಅದರ ಬಗ್ಗೆ ವಿಲಿಯಂ ಕರ್ಕ್ಪಾಟ್ರಿಕ್ ಹೀಗೆ ಹೇಳಿದ್ದಾರೆ- 'ಟಿಪ್ಪು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನ ಹೆಸರುಗಳನ್ನು ಮೂಲದಲ್ಲೇ ಏಕೆ ಉಳಿಸಿಕೊಂಡ? ಅದರಲ್ಲೂ ಶ್ರೀರಂಗಪಟ್ಟಣದ ಹೆಸರು ವಿಗ್ರಹದಿಂದಲೇ ಉತ್ಪತ್ತಿಯಾಗಿದ್ದರೂ ಈ ಮತಾಂಧ ಮುಸಲ್ಮಾನ ಆ ಹೆಸರನ್ನು ಏಕೆ ಬದಲಿಸಲಿಲ್ಲವೆಂದರೆ ಅದರಿಂದ ತನಗೆ ಕುತ್ತುಂಟಾಗಬಹುದೆಂಬ ಭಯ. ಅಂತಹ ಭಯವನ್ನು, ಮೂಢನಂಬಿಕೆಯನ್ನು ಅವನ ಸುತ್ತ ಇದ್ದ ಜ್ಯೋತಿಷಿಗಳು ತುಂಬಿದ್ದರು'.
ಒಂದರ ಹಿಂದೆ ಒಂದರಂತೆ ಎದುರಾದ ಹಿನ್ನಡೆಗಳು ಟಿಪ್ಪುವಿನಲ್ಲಿ ಅಧೀರತೆಯನ್ನು ತುಂಬಿದ್ದವು. ಅದರಲ್ಲೂ ಮೂರನೇ ಅಂಗ್ಲೋ- ಮೈಸೂರು ಯುದ್ಧದಲ್ಲಿ ಬ್ರಿಟಿಷರಿಗೆ ಶರಣಾಗಿ, ಅರ್ಧರಾಜ್ಯ ಕಳೆದುಕೊಂಡು, ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ ನಂತರ ಅವನ ಜಂಘಾಬಲ ಉಡುಗಿತ್ತು. 1782ರಿಂದ 1792ರವರೆಗೂ ಇದ್ದ ಮತಾಂಧ ಟಿಪ್ಪು ರಾಜ್ಯ ಉಳಿಸಿಕೊಳ್ಳಲು, ಕಳೆದುಕೊಳ್ಳಲು ಮರಳಿ ಪಡೆದುಕೊಳ್ಳಲು ಹೆಣಗಬೇಕಾಗಿ ಬಂದಿತ್ತು. ಅಂಥ ಸಂದಿಗ್ಧ ಹಾಗೂ ದುರ್ಬಲ ಸನ್ನಿವೇಶದಲ್ಲಿ, ಬ್ರಿಟಿಷರೆಂಬ ಬಲಿಷ್ಠ ಎದುರಾಳಿಗಳು ಮುಂದಿರುವಾಗ ಟಿಪ್ಪುಗೆ ತನ್ನ ರಾಜ್ಯದಲ್ಲಿರುವ ಹಿಂದುಗಳ ವಿಶ್ವಾಸವನ್ನೂ ಕಳೆದುಕೊಂಡರೆ ಅಥವಾ ವಿಶ್ವಾಸಗಳಿಸಿಕೊಳ್ಳದಿದ್ದರೆ ತನಗೇ ಕುತ್ತು ಎಂಬುದು ಅರಿವಾಗಿತ್ತು. ಅಂತಹ ಸಂದರ್ಭದಲ್ಲಿ ಶೃಂಗೇರಿ ಮಠಕ್ಕೆ ದಾನ ನೀಡುವ ಸೋಗುಹಾಕಿದನೇ ಹೊರತು ಧರ್ಮಸಹಿಷ್ಣುತೆಯಿಂದಲ್ಲ!

- ಪ್ರತಾಪ ಸಿಂಹ
mepratap@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.