ಹೊರನಾಡು ಕನ್ನಡತಿ
ಪಾಪ, ಅದೆಷ್ಟೇ ಸಲ 'ನಾನು ಸಂಯುಕ್ತಾ ಬೆಳವಾಡಿ ಅಲ್ಲ, ಸಂಯುಕ್ತಾ ಹೊರನಾಡು' ಎಂದು ಹೇಳಿದರೂ ತಾಯಿ ಸುಧಾ ಬೆಳವಾಡಿಯ ನೆರಳು ಸಂಯುಕ್ತಾ ಅವರನ್ನು ಬಿಡುತ್ತಿಲ್ಲ.

ಕೆಲವು ನಟಿಯರು ತಮ್ಮ ಹೆಸರು ಬದಲಾಯಿಸಿಕೊಂಡ ಮೇಲೂ ಅವರ ಹಳೆಯ ಹೆಸರೇ ಚಾಲ್ತಿಯಲ್ಲಿರುವುದು ಚಿತ್ರರಂಗದಲ್ಲಿ ಕಾಮನ್. 'ಅವ್ವ' ಚಿತ್ರದ ಸ್ಮಿತಾ, ನಿವೇದಿತಾ ಎಂದು ಬದಲಾದ ಮೇಲೂ ಜನ 'ಸ್ಮಿತಾ' ಎಂದು ಕರೆಯುವುದು ಮಾತ್ರ ಬದಲಾಗಿಲ್ಲ. ಆದರೆ ಇನ್ನು ಕೆಲವರದ್ದು ಮೂಲ ಹೆಸರಿನದೇ ಸಮಸ್ಯೆ. ಯಾವುದೋ ಕಾರಣಕ್ಕೆ 'ಈಕೆಯ ಹೆಸರು ಇದೇ' ಎಂದು ಮಾಧ್ಯಮಗಳು ಮತ್ತು ಪ್ರೇಕ್ಷಕರು ನಿರ್ಧಾರ ಮಾಡಿಬಿಡುತ್ತಾರೆ. ಆಮೇಲೆ ಅದು ಬದಲಾಗುವುದು ಕಷ್ಟ. ಅಂಥ 'ಹೆಸರಾಂತ' ನಟಿಯರ ಸಾಲಿನಲ್ಲಿರುವವರು ಸಂಯುಕ್ತಾ ಹೊರನಾಡು. ಪಾಪ, ಅದೆಷ್ಟೇ ಸಲ 'ನಾನು ಸಂಯುಕ್ತಾ ಬೆಳವಾಡಿ ಅಲ್ಲ, ಸಂಯುಕ್ತಾ ಹೊರನಾಡು' ಎಂದು ಹೇಳಿದರೂ ತಾಯಿ ಸುಧಾ ಬೆಳವಾಡಿಯ ನೆರಳು ಸಂಯುಕ್ತಾ ಅವರನ್ನು ಬಿಡುತ್ತಿಲ್ಲ. ಹಾಗಾಗಿ ಈಕೆಯನ್ನು ಚಿತ್ರರಂಗ 'ಹೊರನಾಡು ಕನ್ನಡತಿ' ಎಂದು ಜನ ಗುರುತಿಸುತ್ತಿಲ್ಲ. ಈ ಹೆಸರಿನ ಸಮಸ್ಯೆ ನಟಿ ರಮ್ಯಾ ಬಾರ್ನಾ ಅವರನ್ನೂ ಕಾಡಿದ್ದುಂಟು. 'ನಾನು ಬಾರ್ನೆ ಅಲ್ಲ, ಬಾರ್ನಾ' ಎಂದು ಹಲವಾರು ಬಾರಿ ಹೇಳಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು ಕೂಡ.
ಇನ್ನೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿಲ್ಲದಿದ್ದರೂ ಸದ್ಯಕ್ಕೆ ತಮ್ಮ ಹೆಸರಿನ ಮೂಲಕ ಸುದ್ದಿಯಲ್ಲಿರುವ ಸಂಯುಕ್ತಾ ಮೊದಲು ಅಭಿನಯಿಸಿದ್ದು ದಿಗಂತ್ ಅಭಿನಯದ 'ಲೈಫು ಇಷ್ಟೇನೆ' ಚಿತ್ರದಲ್ಲಿ. ತಮ್ಮ ಹೋಮ್ಲಿ ಲುಕ್ನಿಂದ ಪ್ರೇಕ್ಷಕರನ್ನು ಸೆಳೆದ ಈ ಕನ್ನಡತಿ ಅದಾದ ನಂತರ ತೆರೆಯ ಮರೆಯಲ್ಲೇ ಇದ್ದರು. ಈಗ ದಿಗಂತ್ ಅಭಿನಯದ ಇನ್ನೊಂದು ಚಿತ್ರದಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. 'ಬರ್ಫಿ' ಚಿತ್ರಕ್ಕೆ ಭಾಮಾ ನಾಯಕಿಯಾದರೂ ಸಂಯುಕ್ತಾ ಅವರನ್ನು ಈ ಚಿತ್ರದ ಸಂಯುಕ್ತ ನಾಯಕಿ ಎನ್ನಬಹುದು. ಈ ಸಿನಿಮಾ ಆರಂಭವಾದಾಗ ಸಂಯುಕ್ತಾ ಹೆಸರು ಕೇಳಿಬಂದಿರಲಿಲ್ಲವಾದರೂ ಈಗ ಚಿತ್ರ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಹಂತದಲ್ಲಿ ಸಂಯುಕ್ತಾ ಹೆಸರು ಪ್ರಸ್ತಾಪ ಆಗಿರುವುದರಿಂದ ಇಲ್ಲಿ ಸಂಯುಕ್ತಾ ಅವರದ್ದು ಕೇವಲ ಗೆಸ್ಟ್ ರೋಲ್ ಇರಬಹುದೇನೋ. ಸಾಮಾನ್ಯವಾಗಿ ಮೊದಲ ಚಿತ್ರದ ನಂತರ ವಿದ್ಯಾಭ್ಯಾಸದ ಕಾರಣಗಳನ್ನು ನೀಡಿ ಹೊಸನಟಿಯರು ಒಂದಷ್ಟು ದಿನ, ಸಿನಿಮಾಗಳಿಂದ ದೂರ ಇರುತ್ತಾರೆ. ಸಂಯುಕ್ತಾ ವಿಷಯದಲ್ಲೂ ಹಾಗೆಯೇ ಇದ್ದರೂ ಈಕೆ ಕೇವಲ ಗೆಸ್ಟ್ ರೋಲ್ಗಳಿಗೆ ಮಾತ್ರ ಸೀಮಿತವಾಗದೆ ಬೆಸ್ಟ್ ರೋಲ್ಗಳನ್ನು ಹುಡುಕಿಕೊಳ್ಳಲಿ ಎಂಬುದು 'ಲೈಪು ಇಷ್ಟೇನೆ' ಚಿತ್ರದಲ್ಲಿ ಈಕೆಯನ್ನು ಇಷ್ಟಪಟ್ಟವರ ಮಾತು.
-ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


