ವ್ಯಾಯಾಮ ಮೇಷ್ಟ್ರು!

ಚೆನ್ನಾಗಿ ನೆನಪಿದೆ. ನಾನು ಮಲ್ಲಾಡಿಹಳ್ಳಿಯ ಸ್ವಾಮೀಜಿಯನ್ನು ನೋಡಿದ್ದು 1954ರ ಸುಮಾರಿನಲ್ಲಿ. ಆಗ ಅವರನ್ನು ಯಾರೂ ಸ್ವಾಮೀಜಿ ಎಂದು ಕರೆಯುತ್ತಿರಲಿಲ್ಲ. ನಾವೆಲ್ಲಾ ಅವರನ್ನು ಕರೆಯುತ್ತಿದ್ದುದು 'ವ್ಯಾಯಾಮ ಮೇಷ್ಟ್ರು' ಅಂತ. ಹಳ್ಳಿಯ ಮಕ್ಕಳಿಗೆ ವ್ಯಾಯಾಮ ಹೇಳಿಕೊಡುತ್ತಾ ಅವರು ಮಲ್ಲಾಡಿಹಳ್ಳಿಯಲ್ಲಿ ತಮ್ಮ ಕಾಯಕ ಪ್ರಾರಂಭಿಸಿದ್ದರಿಂದ ಅವರಿಗೆ ವ್ಯಾಯಾಮ ಮೇಷ್ಟ್ರೆಂಬ ಹೆಸರೇ ನಿಂತು ಹೋಗಿತ್ತು. ನಮ್ಮ ಅಜ್ಜಿಗೆ ಆರೋಗ್ಯದ ಸಮಸ್ಯೆಯಿತ್ತು. ಯಾರೋ ಹೇಳಿದರು. ಮಲ್ಲಾಡಿಹಳ್ಳಿಗೆ ಹೋಗಿ, ಅಲ್ಲಿ, ವ್ಯಾಯಾಮಮೇಷ್ಟ್ರು ದಿವಿನಾದ ನಾಟಿ ಔಷಧ ಕೊಡುತ್ತಾರೆ ಎಂದು. ನಾವು (ಅಜ್ಜಿ, ಅಜ್ಜ, ಮತ್ತು ನಾನು) ಎತ್ತಿನ ಗಾಡಿಮಾಡಿಕೊಂಡು ಇಳಿಸಂಜೆ ಮಲ್ಲಾಡಿಹಳ್ಳಿ ತಲುಪಿದೆವು. ಮಾರನೇ ದಿನ ನಸುಕಿನಲ್ಲೇ ವ್ಯಾಯಾಮಮೇಷ್ಟ್ರು ರೋಗಿಗಳನ್ನು ಪರೀಕ್ಷಿಸಿ ಔಷಧ ಕೊಡುತ್ತಾರೆ ಎಂದು ನಮ್ಮನ್ನು ಮಲ್ಲಾಡಿಹಳ್ಳಿಗೆ ಕಳಿಸಿದವರು ಹೇಳಿದ್ದರು. ನಾವು ಆಶ್ರಮದ ಹೊರಗೇ ನಮ್ಮ ಗಾಡಿಯ ಕೊಳ್ಳು ಹರಿದು ಆಶ್ರಮದ ಕಚೇರಿಗೆ ಹೋದೆವು. ರೋಗಿಗಳಿಗೆ ವಸತಿ ಒದಗಿಸುವ ವ್ಯವಸ್ಥೆಯಿತ್ತು. ನಮಗೊಂದು ಕೋಣೆ ನೀಡಿದರು. ನಾವು ಇರುಳಾದ ಮೇಲೆ ಇನ್ನೇನು ಬುತ್ತಿ ಬಿಚ್ಚಬೇಕು, ಅಷ್ಟರಲ್ಲಿ ಯಾರೋ ಕೋಣೆಯ ಬಾಗಿಲು ಟಪಟಪ ಬಡಿಯ ತೊಡಗಿದರು. ಅಜ್ಜ ಹೋಗಿ ಬಾಗಿಲು ತೆರೆದಾಗ, ಅಲ್ಲಿ ನಿಂತಿದ್ದವರು ಸ್ವತ- ವ್ಯಾಯಾಮ ಮೇಷ್ಟ್ರು! 'ನಿಮ್ಮದು ಭೋಜನವಾಯಿತೆ? ಇಲ್ಲವಾಗಿದ್ದರೆ ಬನ್ನಿ. ಆಶ್ರಮದಲ್ಲಿ ಊಟ ಮಾಡಿ... ಬೇಗ...' ಎಂದು ಅವರು ಅವಸರಪಡಿಸಿದರು. ನಾವು ಊರಿಂದ ಬುತ್ತಿ ತಂದಿದ್ದೇವೆ ಎಂದು ಹೇಳುವ ಧೈರ್ಯ ಅಜ್ಜನಿಗಿರಲಿಲ್ಲ. ವ್ಯಾಯಾಮ ಮೇಷ್ಟ್ರು ಶೀಘ್ರ ಕೋಪಿ ಎಂದು ಆಗಾಗಲೇ ಜನಜನಿತವಾಗಿತ್ತು. ನಾವು ಊಟಕ್ಕೆಂದು ಭೋಜನಶಾಲೆಗೆ ಧಾವಿಸಿದೆವು!
ವ್ಯಾಯಾಮಮೇಷ್ಟ್ರಿಗೆ ಆಗ ಮಧ್ಯ ವಯಸ್ಸು. ಗಟ್ಟಿಮುಟ್ಟಾಗಿದ್ದರು. ವ್ಯಾಯಾಮದಿಂದ ಖಂಡ ಖಂಡ ಕಟ್ಟಿದ ಮೈಕಟ್ಟು. ಮೊಣಕಾಲ ತನಕ ಕಾವಿ ಬಣ್ಣದ ಚಡ್ಡಿ. ಮೇಲೊಂಡು ಬಿಳಿಯ ಜಂಪರು. ಇಷ್ಟೇ ಅವರ ಉಡುಪು. ಕೆಂಪು ಉಕ್ಕುವ ತೇಜಸ್ವಿ ಮುಖ. ಥಳಗುಟ್ಟುವ ಕಣ್ಣುಗಳು. ಮೊದಲ ನೋಟಕ್ಕೇ ನನ್ನನ್ನು ವ್ಯಾಯಾಮ ಮೇಷ್ಟ್ರ ರೂಪು ಚುಂಬಕದಂತೆ ಸೆರೆಹಿಡಿದುಬಿಟ್ಟಿತು!
ಬೆಳಗ್ಗೆ ನಾವಿನ್ನೂ ಮಲಗೇ ಇದ್ದೇವೆ. ಗಂಭೀರವಾದ ಒಕ್ಕೊರಳ ಸ್ವರದಲ್ಲಿ ಮಕ್ಕಳು ಸೂರ್ಯನಮಸ್ಕಾರ ಮಾಡುತ್ತಾ ಮೈದಾನದಲ್ಲಿ ಹಾಡತೊಡಗಿದ್ದಾರೆ. ನಾನು ಹಾಸಿಗೆಯಿಂದ ಎದ್ದು ಕಿಟಕಿಯ ಬಳಿ ಓಡಿದೆ. ಆ ನಸುಕಿನ ಚಳಿಯಲ್ಲಿ ಹುಡುಗರೆಲ್ಲಾ ಸಾಲುಗಳಲ್ಲಿ ನಿಂತು ಸೂರ್ಯನಮಸ್ಕಾರ ಮಾಡುತ್ತಿದ್ದ ದೃಶ್ಯ ಎದೆ ಝಲ್ಲೆನಿಸಿತ್ತು. ವ್ಯಾಯಾಮಮೇಷ್ಟ್ರ ವ್ಯಕ್ತಿತ್ವ ನನ್ನಲ್ಲಿ ಭಯ ಮಿಶ್ರಿತ ಗೌರವವನ್ನು ಹುಟ್ಟಿಸಿತ್ತು!
ನಾನು ಹೈಸ್ಕೂಲಿನಲ್ಲಿ ಓದಲು ಹೊಳಲ್ಕೆರೆಗೆ ಹೋದೆ. ಮಲ್ಲಾಡಿಹಳ್ಳಿಯಲ್ಲಿ ಗಣೇಶಸಪ್ತಾಹವನ್ನು ವೈಭವದಿಂದ ಆಚರಿಸಲಾಗುತ್ತಿತ್ತು. ಒಂದು ದಿನ ಅನಕೃ ಅವರ ಭಾಷಣವಿತ್ತು. ಆ ವೇಳೆಗಾಗಲೇ ಪುಸ್ತಕದ ಹುಚ್ಚು ಹಚ್ಚಿಕೊಂಡಿದ್ದ ನಮಗೆ ಅನಕೃರನ್ನು ನೋಡಬೇಕೆಂಬ ಆಸೆ. ಸರಿ. ಶಾಲೆ ಬಿಟ್ಟನಂತರ ನಾವು ಕೆಲವರು ನಡೆದುಕೊಂಡೇ ಮಲ್ಲಾಡಿಹಳ್ಳಿಗೆ ಹೊರಟುಬಿಟ್ಟೆವು! ಆಶ್ರಮದಿಂದ ವಿದ್ಯಾರ್ಥಿಗಳ ಡ್ರಮ್ಮಿನ ಸದ್ದು ಕೇಳುತ್ತಾ ಇತ್ತು. ನಾವು ಓಡೋಡುತ್ತಲೇ ಆಶ್ರಮದ ಅಂಗಳಕ್ಕೆ ಬಂದೆವು. ಹುಡುಗರ ಪೆರೇಡು ಮುಗಿದ ಮೇಲೆ, ಯಾರೋ ಒಂದು ಮೇಜನ್ನು ತಂದು ಅಂಗಳದ ಮಧ್ಯೆ ಇರಿಸಿದರು. ವ್ಯಾಯಾಮಮೇಷ್ಟ್ರು ದುಡು ದುಡು ಓಡಿಬಂದು ಚಂಗನೆ ಮೇಜಿನ ಮೇಲೆ ಹಾರಿ ನಿಂತರು. ಅವರ ಆಗಿನ ಕಾಸ್ಟೂಮ್ಸ್ ನೋಡುವಂತಿತ್ತು. ವೆಲ್ವೆಟ್ಟಿನ ಕೆಂಪು ಎದೆ ಪಟ್ಟಿ. ಬಿಗಿಯಾದ ಹನುಮಾನ್ ಚಡ್ಡಿ. ಕಾಲಿಗೆ ಶೂ. ಕೈಗೆ ಕೆಂಪು ವೆಲ್ವೆಟ್ಟಿನ ಕಟ್ಟು. ಎದೆಯಲ್ಲೊಂದು ಮಣಿಹಾರ. ನಾನಾ ಬಗೆಯಲ್ಲಿ ವ್ಯಾಯಾಮ ಮೇಷ್ಟ್ರು ತಮ್ಮ ಅಂಗ ಸೌಷ್ಠವವನ್ನು ಪ್ರದರ್ಶಿಸಲು ಶುರುಮಾಡಿದರು. ಅವರ ಮೈಕಟ್ಟು ನೋಡಿ ನಾನು ರೋಮಾಂಚಿತನಾಗಿ ಬಿಟ್ಟೆ. ಇವರು ಆಧುನಿಕ ಭೀಮ ಎನ್ನಿಸಿಬಿಟ್ಟಿತು. ಆವತ್ತು ವ್ಯಾಯಾಮ ಮೇಷ್ಟ್ರ ವ್ಯಾಯಾಮದ ನಂತರ ಅನಕೃ ಭಾಷಣ ಎಂದು ಪ್ರಕಟಿಸಲಾಗಿತ್ತು. ಬಹಳ ಹೊತ್ತು ಕಾದರೂ ಅನಕೃ ಸುದ್ದಿಯ ಸುಳಿವಿಲ್ಲ. ಕತ್ತಲು ದಟ್ಟವಾಗುತ್ತಿತ್ತು. ನಾವು ನಡೆದೇ ಹೊಳಲ್ಕೆರೆಗೆ ಹೋಗಬೇಕಾಗಿತ್ತಲ್ಲ! ನಿರಾಶೆಯಿಂದ ನಾವು ಹೊಳಲ್ಕೆರೆಗೆ ಹಿಂದಿರುಗಿದೆವು. ಆದರೆ ವ್ಯಾಯಾಮಮೇಷ್ಟರ ಭವ್ಯ ಮೈಕಟ್ಟು, ನಾನಾ ಬಗೆಯ ಕಸರತ್ತುಗಳನ್ನು ನೋಡಿದ ತೃಪ್ತಿಯಾದರೂ ನಮಗಿತ್ತು! ಅಷ್ಟೇ ಸಮಾಧಾನ.
ನಾನು ಓದುತ್ತಿದ್ದ ಎಂ.ಎಂ. ಪ್ರೌಢಶಾಲೆಯ ಲೈಬ್ರರಿಯಲ್ಲಿ ವ್ಯಾಯಾಮ ಮೇಷ್ಟ್ರು ಬರೆದ ಅನೇಕ ಪುಸ್ತಕಗಳಿದ್ದವು. ಅವರ ವ್ಯಕ್ತಿತ್ವದಿಂದ ಆಕರ್ಷಿತನಾಗಿದ್ದ ನಾನು ಅವೆಲ್ಲವನ್ನೂ ಓದಿದೆ. ಮುಂದೆ ಹೈಸ್ಕೂಲ್ ಮುಗಿಸಿ, ನಾನು ಚಿತ್ರದುರ್ಗಕ್ಕೆ ಕಾಲೇಜು ವ್ಯಾಸಂಗಕ್ಕೆ ಹೋದೆ. ವ್ಯಾಯಾಮ ಮೇಷ್ಟ್ರು ಈಗ ಸ್ವಾಮೀಜಿ ಎಂದು ಕರೆಸಿಕೊಳ್ಳುತ್ತಾ ಇದ್ದರು. ಅವರ ವಿಷಯ ಆಗಾಗ ಪತ್ರಿಕೆಗಳಲ್ಲಿ ಬರುತ್ತಾ ಇತ್ತು. ಅವರು ಸರ್ಕಾರ ಕೊಡಮಾಡಲಿಕ್ಕೆ ಮುಂದಾದ ಅನೇಕ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದು ಪತ್ರಿಕೆಗಳಲ್ಲಿ ದೊಡ್ಡಕ್ಷರಗಳಲ್ಲಿ ಅಚ್ಚಾಗುತ್ತಿತ್ತು. ನನಗೆ ಪ್ರಶಸ್ತಿ ಬೇಡ; ಆಶ್ರಮ ಕಟ್ಟಲಿಕ್ಕೆ ಧನದ ಭಿಕ್ಷೆ ನೀಡಿ ಎನ್ನುತ್ತಿದ್ದ ಸ್ವಾಮೀಜಿ ನನ್ನ ಕುತೂಹಲ ಗೌರವಗಳಿಗೆ ಸಹಜವಾಗಿಯೇ ಪಾತ್ರರಾಗಿದ್ದರು! ಆಗಾಗಲೇ ಸ್ವಾಮೀಜಿ ಜೀವಂತ ಪುರಾಣವಾಗಿಬಿಟ್ಟಿದ್ದರು.
ನಾನು ಡಿಪ್ಲೊಮ ಮುಗಿಸಿ, ಚಿತ್ರದುರ್ಗದಲ್ಲಿ ಮಾಡೆಲ್ ಸ್ಥಿತಿ ಮತ್ತು ಕಾರ್ಪೆಂಟರಿ ಸೆಂಟರ್ನಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದೆ! ದಿನಕ್ಕೆ 3 ರು. ದಿನಗೂಲಿ. ಆ ವೇಳೆಗೆ ರಾಜಲಕ್ಷ್ಮಿ ಎಂಬ ಹುಡುಗಿ ನನ್ನ ಬಾಳಿನಲ್ಲಿ ಪ್ರವೇಶಿಸಿದ್ದಳು. ನನಗೆ ಒಳ್ಳೆಯ ಕೆಲಸ ಆಗಬೇಕು. ಅವಳ ಓದು ಮುಗಿಯಬೇಕು. ಆಮೇಲೆ ನಮ್ಮ ಮದುವೆ ಎಂದು ಹಿರಿಯರು ನಿಶ್ಚಯಿಸಿದ್ದರು. ಮದುವೆಯ ನಿಶ್ಚಿತಾರ್ಥವಾಗಿತ್ತಷ್ಟೆ! ನನ್ನನ್ನು ಮಸಿಮೆತ್ತಿದ ಸಮವಸ್ತ್ರದಲ್ಲಿ ನನ್ನ ಭಾವೀ ವಧು ನೋಡಿದ್ದರೆ? ಅದರ ಪರಿಣಾಮ ನಾನೀಗ ಊಹಿಸಲಾರೆ ಆ ಆತಂಕದ ದಿನಗಳಲ್ಲಿ ಮಲ್ಲಾಡಿಹಳ್ಳಿಯ ಸ್ವಾಮೀಜಿ ಮತ್ತೆ ನನ್ನ ಬಾಳಲ್ಲಿ ಪ್ರವೇಶಿಸಿದರು. ಮಲ್ಲಾಡಿಹಳ್ಳಿಯ ಹೈಸ್ಕೂಲಿನಲ್ಲಿ ಕ್ರಾಫ್ಟ್ ಶಿಕ್ಷಕ ಹುದ್ದೆ ಖಾಲಿ ಆಗಿದೆಯೆಂದೂ, ನಾನು ಅಲ್ಲಿ ಪ್ರಯತ್ನಿಸಿದರೆ ಕೆಲಸ ಸಿಕ್ಕರೂ ಸಿಗಬಹುದೆಂದು ನಮ್ಮ ತಾಯಿಗೆ ಯಾರೋ ಹೇಳಿದರಂತೆ. ನನ್ನ ಅಮ್ಮ ಚಿತ್ರದುರ್ಗಕ್ಕೆ ಓಡಿ ಬಂದರು! ನಾನು ಆ ದಿನವೇ ಮಲ್ಲಾಡಿಹಳ್ಳಿಗೆ ಹೋಗಿ ಸ್ವಾಮೀಜಿ ಅವರನ್ನು ಭೆಟ್ಟಿ ಮಾಡಿದೆ. ಗಾಂಧಿ ಸ್ಮಾರಕ ಮಂದಿರದಲ್ಲಿ ಸ್ವಾಮೀಜಿ ಅವರ ವಾಸ್ತವ್ಯ. ನಾನು ಅಲ್ಲಿಗೆ ಹೋದಾಗ ನೀನೇ ಎನ್ನುವವರಿರಲಿಲ್ಲ. ಮುಚ್ಚಿದ ಬಾಗಿಲನ್ನು ಮಿದುವಾಗಿ ಬಡಿದು... ಸ್ವಾಮೀಜಿ ಸ್ವಾಮೀಜಿ ಎಂದು ಮೆಲ್ಲುಸಿರಿನಲ್ಲಿ ಕೂಗಿದಾಗ, ಐದು ನಿಮಿಷಗಳ ನಂತರ ಬಾಗಿಲು ತೆರೆದುಕೊಂಡಿತು. 'ಏನಪ್ಪಾ... ಏನು ವಿಷಯ?' ಎಂದು ಸ್ವಾಮೀಜಿ ಕೇಳಿದರು. ನಾನು ಅವರಿಗೆ ನಮಸ್ಕರಿಸಿ ನನ್ನ ಪರಿಚಯ ಮಾಡಿಕೊಂಡೆ. ಹಾಗೇ ಮಾತಾಡುವಾಗ ನನಗೆ ಸಾಹಿತ್ಯದಲ್ಲಿ ತುಂಬ ಆಸಕ್ತಿ ಇದೆಯೆಂದೂ, ಸ್ವತಃ ಬರೆಯುವ ಅಭ್ಯಾಸವಿದೆಯೆಂದು ಹೇಳಿದೆ. ಸ್ವಾಮೀಜಿ, "ಭೇಷ್! 'ತಿರುಕ' ಕಾವ್ಯನಾಮದ ಲೇಖಕ ಬರೆದ ಪುಸ್ತಕ ನೀನು ನೋಡಿದ್ದೀಯ?" ಎಂದರು! ನನಗೆ ನಗೆ ಬಂತು. 'ಸ್ವಾಮೀಜಿ... ನೀವೇ ಆ ತಿರುಕ ಎಂದು ಬಲ್ಲೆ... ನಿಮ್ಮ ಎಲ್ಲ ಕಾದಂಬರಿಗಳನ್ನೂ ಓದಿದ್ದೇನೆ' ಎಂದೆ. ಅವರ ಕೃತಿಗಳ ಹೆಸರುಗಳನ್ನೂ, ಅವು ನನ್ನ ಮೆಲೆ ಮಾಡಿದ ಪರಿಣಾಮವನ್ನು ವಿವರಿಸಿದಾಗ ಸ್ವಾಮೀಜಿ ಪ್ರಸನ್ನರಾಗಿ, 'ನಾಳೆ ಇಂಟರ್ವ್ಯೂಗೆ ಬಾ... ನೋಡೋಣಂತೆ' ಎಂದರು. ಅವರು ನನ್ನ ತಲೆಯ ಮೇಲೆ ಕೈಯಿಟ್ಟು ಹರಸಿದ ರೀತಿ, ನನಗೆ ಎಂಥದೋ ಭರವಸೆ ನೀಡಿತು. ಕೆಲಸ ಸಿಕ್ಕರೂ ಸಿಗಬಹುದು ಎಂದು ಕನಸಿನ ಗೋಪುರ ಕಟ್ಟಿದೆ!
ಕೆಲವು ಬೆಳಗ್ಗೆ ನಸುಕಿಗೇ ಮನೆಯ ಮುಂದೆ ನಿಂತು ಸ್ವಾಮೀಜಿ, ಮೂರ್ತಿಗಳೇ ಎದ್ದಿದ್ದೀರಾ? ಎಂದು ಕೂಗುತ್ತಿದ್ದರು. ಸ್ವಾಮೀಜಿ ಎಂದು ಉದ್ಗರಿಸಿ ನಾನು ಲಗುಬಗೆಯಿಂದ ಕೈಗೆ ಸಿಕ್ಕ ಬಟ್ಟೆ ಧರಿಸಿ ಹೊರಕ್ಕೆ ಓಡುತ್ತಿದ್ದೆ! ಏನು? ಸವಾರಿ ಈಗಷ್ಟೇ ಎದ್ದ ಹಾಗಿದೆ? ನಿಮ್ಮಂಥವರು ಬೆಳಗ್ಗೆ ಬೇಗ ಎದ್ದು ಪ್ರಾತಃರ್ವಿಧಿ ಮುಗಿಸಿ ಅಧ್ಯಯನದಲ್ಲಿ ತೊಡಗಬೇಕಲ್ಲವಾ? ಎಂದು ನಗುತ್ತಿದ್ದರು. ಆ ನಗುವಿನಲ್ಲಿ ಸ್ವಲ್ಪ ವ್ಯಂಗ್ಯವೂ ಇರುತ್ತಿತ್ತು. ಇಲ್ಲ ಸ್ವಾಮೀಜಿ, ರಾತ್ರಿ ತುಂಬ ಹೊತ್ತು ಓದುತ್ತಾ ಇದ್ದೆ! ಎಂದು ನಾನು ಸುಳ್ಳು ಹೇಳುತ್ತಿದ್ದೆ ಇರಲಿ... ಈಗ ನನ್ನ ಜೊತೆಯಲ್ಲಿ ಬನ್ನಿ... ತೋಟಕ್ಕೆ ಹೋಗಿಬರೋಣ ಎನ್ನುತ್ತಿದ್ದರು ಸ್ವಾಮೀಜಿ. ಈಗ ಅವರು ತಮ್ಮ ಜಂಪರಿನ ಮೇಲೆ ತಮ್ಮ ಯಾವತ್ತಿನ ತುಂಬು ತೋಳಿನ ಖಾವಿ ಬಣ್ಣದ ಸ್ವೆಟರ್ ಧರಿಸಿರುತ್ತಿದ್ದರು. ಅವರು ಎಷ್ಟು ವೇಗವಾಗಿ ನಡೆಯುತ್ತಿದ್ದರೆಂದರೆ, ಅವರು ನಡೆಯುವಾಗ ನಾನು ಓಡಬೇಕಾಗುತ್ತಿತ್ತು. ಒಮ್ಮೆ ಸ್ವಾಮೀಜಿ ಇಂಥ ಬೆಳಗಿನ ವಾಕಿಂಗ್ನಲ್ಲಿ ನನಗೆ ಹೇಳಿದ್ದು, 'ಮೂರ್ತಿಗಳೇ... ನನ್ನ ಆಸೆ ಏನು ಗೊತ್ತೇನಪ್ಪಾ...? ಬೆಳಗ್ಗೆ ನಾನು ಆಶ್ರಮದ ಅಧ್ಯಾಪಕರ ಮನೆಗಳ ಮುಂದೆ ನಡೆಯುತ್ತಿರುವಾಗ ಒಂದು ಮನೆಯಿಂದ ಸುಪ್ರಭಾತದ ಹಾಡು ಕೇಳಬೇಕು. ಒಂದು ಮನೆಯಿಂದ ವೇದ ಪಾರಾಯಣದ ಧ್ವನಿ ಕೆಳಬೇಕು. ಇನ್ನೊಂದು ಮನೆಯಿಂದ ಮಧುರವಾದ ಸಂಗೀತದ ಮಟ್ಟು... ಆದರೆ ನೋಡಿ... ಬೆಳಗ್ಗೆ ನಾನು ರಸ್ತೆಯಲ್ಲಿ ನಡೆಯುವಾಗ ವಗ್ಗರಣೆಯ ಚಿಟಿಪಿಟಿ ಬಿಟ್ಟರೆ ಬೇರೇನು ಸದ್ದೂ ನನಗೆ ಕೇಳುವುದಿಲ್ಲ'!
ವರ್ಷದ ಒಂದು ತಿಂಗಳು ಸ್ವಾಮೀಜಿ ತಮ್ಮ ನೆಲಮಾಳಿಗೆಯಲ್ಲಿ ಅಂತರ್ಧಾನರಾಗುತ್ತಿದ್ದರು. ಆಗ ಅವರ ಮುಖ ದರ್ಶನವೇ ಆಗುತ್ತಿರಲಿಲ್ಲ. ಆ ದಿನಗಳಲ್ಲಿ ಅವರು ಯಾವುದಾದರೂ ಪುಸ್ತಕದ ರಚನೆಯಲ್ಲಿ ಸಾಮಾನ್ಯವಾಗಿ ತೊಡಗುತ್ತಿದ್ದರು. ಅದು ಮೌನ ಮತ್ತು ಅಜ್ಞಾತಪರ್ವ. ಹೊರಗೆ ಬಂದಮೇಲೆ ಒಂದು ಹೊಸಾ ಹಸ್ತಪ್ರತಿ ನನ್ನ ಕೈಗಿಟ್ಟು, ಓದಿ ನಿಮ್ಮ ಅಭಿಪ್ರಾಯ ಹೇಳಿ ಎನ್ನುತ್ತಿದ್ದರು! ಹೀಗೆ ಸ್ವಾಮೀಜಿಯವರ ಕೃತಿಗಳೆಷ್ಟಕ್ಕೋ ನಾನು ಮೊದಲ ಓದುಗ!
ಆ ದಿನಗಳಲ್ಲಿ ನನ್ನ ಆರೋಗ್ಯ ಅಷ್ಟೊಂದು ದೃಢವಾಗಿರಲಿಲ್ಲ. ನೆಗಡಿ, ಕೆಮ್ಮು ಯಾವಾಗಲೂ ಕಾಡುತ್ತಿದ್ದವು. ಸ್ವಾಮೀಜಿ ನನ್ನನ್ನು ಒಮ್ಮೆ ಗಾಂಧಿಸ್ಮಾರಕ ಮಂದಿರಕ್ಕೆ ಕರೆಸಿಕೊಂಡು, ದಿನವೂ ಈ ಹೊತ್ತಿಗೆ ಇಲ್ಲಿಗೆ ಬನ್ನಿರಿ! ನಿಮಗೆ ಪ್ರಾಣಾಯಾಮ ಆಸನಗಳನ್ನು ಹೇಳಿಕೊಡುತ್ತೇನೆ! ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂದರು. ಆಮೇಲೆ ಕೆಲವು ತಿಂಗಳು ನಿತ್ಯವೂ ಅವರ ಬಳಿಗೆ ಹೋಗಿ ಅವರ ಮಾರ್ಗದರ್ಶನದಲ್ಲಿ ಪ್ರಾಣಾಯಾಮ ಕಲಿತೆ. ನನ್ನ ಆರೋಗ್ಯವೂ ಸುಧಾರಿಸಿತು.
ಮಲ್ಲಾಡಿಹಳ್ಳಿಯಲ್ಲಿ ಏಳು ವರ್ಷ ನಾನು ಕೆಲಸ ಮಾಡಿದೆ. ಎಂ.ಎ. ಮುಗಿಸಿ ಬೆಂಗಳೂರಿನ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕನಾಗಿ ಹೊರಟು ನಿಂತಾಗ ಸ್ವಾಮೀಜಿಗೆ ನನ್ನ ಬಗ್ಗೆ ಅಸಮಾಧಾನವಾಯಿತು. ನಿಮಗೆ ನಿಮ್ಮ ಹಿತ ಮುಖ್ಯವಾಯಿತೇ ವಿನಾ, ಆಶ್ರಮದ ಹಿತ ಮುಖ್ಯವಾಗಲಿಲ್ಲ ಎಂದು ವ್ಯಗ್ರರಾದರು. ಆಶ್ರಮವನ್ನು ಅಷ್ಟು ಹಚ್ಚಿಕೊಂಡಿದ್ದರು ಅವರು. ಒಮ್ಮೆ ನನಗೆ ಹೇಳಿದ್ದರು. ನಾನು ಮತ್ತು ಆಶ್ರಮ ಬೇರೆಬೇರೆಯಲ್ಲ. ಆಶ್ರಮವೇ ನಾನು. ನನ್ನ ಅಸ್ತಿತ್ವ ಅದರಲ್ಲಿ ಬೆರೆತುಹೋಗಿದೆ. ಅದೇ ನನ್ನ ದೇಹ... ಅದೇ ನನ್ನ ಆತ್ಮ... ಅದೇ ನನ್ನ ಉಸಿರಾಟ...
ಕೇವಲ ಭಿಕ್ಷೆಯಿಂದ, ಶ್ರೀ ಸೂರುದಾಸಜೀ ಅವರೊಂದಿಗೆ ಸ್ವಾಮೀಜಿ ಇಂಥಾ ಬೃಹದ್ ಸಂಸ್ಥೆಯನ್ನು ಕಟ್ಟಿದರೆಂದರೆ ಆಶ್ಚರ್ಯವಾಗುತ್ತದೆ. ಶಾಲೆಗಳು, ಆಸ್ಪತ್ರೆ, ಯೋಗವುಂದಿರ, ಮುದ್ರಣಾಲಯ, ಮಕ್ಕಳ ವಸತಿ ಶಾಲೆ, ಗೋಶಾಲೆ, ತಪೋವನ, ಧ್ಯಾನಮಂದಿರಗಳು, ಅನ್ನಪೂರ್ಣಭವನ, ಗಾಂಧಿಸ್ಮಾರಕ ಮಂದಿರ! ಒಂದೇ ಎರಡೇ? ನಮ್ಮ ಶಾಲೆಗಳಲ್ಲಿ ಓದಿದ ಮಕ್ಕಳು ಈಗ ದೇಶಾದ್ಯಂತ ಪಸರಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಅಧ್ಯಾಪಕರಿದ್ದರೆ ಅದಕ್ಕೆ ಅನಾಥಸೇವಾಶ್ರಮದ ಶಾಲೆ, ಅಧ್ಯಾಪಕ ತರಬೇತಿ ಸಂಸ್ಥೆಯೇ ಕಾರಣ (ಅಲ್ಲಿ ಮುಖ್ಯಸ್ಥರಾಗಿದ್ದ ಸಿಂಗಪೆರುಮಾಳರದ್ದು ಎಂಥ ನಿಷ್ಠಾವಂತ ಜೀವನ) ಸಾಕ್ಷರತೆಯ ಪ್ರಸಾರ, ಗಾಂಧೀಜಿಯ ಸೇವಾ ಮಾರ್ಗ, ಸಾಹಿತ್ಯ ಸಂಗೀತ ನಾಟಕಗಳ ಸಂಪರ್ಕ ಇವಕ್ಕೆಲ್ಲಾ ಆಶ್ರಮದ ಚಟುವಟಿಕೆಗಳೇ ಕಾರಣ. ಸ್ವಾಮೀಜಿ ಅವರದ್ದು ಒಂದು ಮೌನ ಚಳುವಳಿ. ಇಡೀ ಹಳ್ಳಿ ತಮ್ಮನ್ನು ಹಿಂಬಾಲಿಸಬೇಕೆಂದು ಅವರು ಬಯಸುತ್ತಿದ್ದರು. ವಿದ್ಯಾವಂತರು ಹಳ್ಳಿಯಲ್ಲಿ ನೆಲಸಬೇಕೆಂದು ಬಯಸುತ್ತಿದ್ದರು. ಜನರ ಬದುಕು ಸುಧಾರಿಸಬೇಕು, ಅವರ ಬಡತನ ನಿವಾರಣೆಯಾಗಬೇಕು, ಮನಸ್ಸಿನ ಕಾರ್ಪಣ್ಯ ಹರಿಯಬೇಕು, ಅವರು ಶುಚಿಯಾಗಿ ರುಚಿಯಾಗಿ ಆರೋಗ್ಯವಂತರಾಗಿ ಬದುಕಬೇಕು ಎಂದು ಸ್ವಾಮೀಜಿ ಕನಸು ಕಾಣುತ್ತಿದ್ದರು. ಅವರು ಕೋಪಿಸಬಲ್ಲವರಾಗಿದ್ದರು! ನಗಬಲ್ಲವರಾಗಿದ್ದರು. ದೊಡ್ಡ ದೊಡ್ಡ ಕನಸುಕಾಣಬಲ್ಲವರಾಗಿದ್ದರು! ಗುಂಪಾಗಿಯಲ್ಲ; ಪ್ರತಿ ವ್ಯಕ್ತಿಯನ್ನೂ ವ್ಯಕ್ತಿಯಾಗಿ ನೋಡಬೇಕೆನ್ನುವುದು ಅವರ ಸಿದ್ಧಾಂತ. ಯಾರ ಆಸಕ್ತಿ ಏನು ಅದನ್ನು ಹೇಗೆ ಬೆಳೆಸಬೇಕು ಎಂಬುದು ಅವರ ಚಿಂತನಾಕ್ರಮವಾಗಿತ್ತು. ನಾನು ಚಿತ್ರಕಲೆಯಲ್ಲಿ ಆಸಕ್ತನೆಂಬುದು ತಿಳಿದಾಗ ಅವರು ನನ್ನನ್ನು ಕಲಾಶಿಕ್ಷಣಕ್ಕಾಗಿ ಆಶ್ರಮದ ಖರ್ಚಿನಲ್ಲಿ ಬೆಂಗಳೂರಿನ ಅ.ನ. ಸುಬ್ಬರಾಯರ ಕಲಾಮಂದಿರಕ್ಕೆ ಕಳಿಸಿಕೊಟ್ಟಿದ್ದರು! ಆಶ್ರಮದಲ್ಲಿರುವ ಎಲ್ಲರೂ ಬೆಳೆಯಬೇಕು. ಆ ಬೆಳವಣಿಗೆ ಯಾತಕ್ಕೆಂದರೆ ಆಶ್ರಮದ ಬೆಳವಣಿಗೆಗೆ ಇದು ಅವರ ಮುಖ್ಯವಾದ ಸಿದ್ಧಾಂತವಾಗಿತ್ತು. ನಾವಿರುವುದು ಇನ್ನೊಬ್ಬರ ಸೇವೆಗಾಗಿ ಎನ್ನುತ್ತಾ ತಮ್ಮ ದೀರ್ಘಾಯುವನ್ನು ಆ ತತ್ತ್ವವನ್ನು ನಂಬಿಯೇ ಬದುಕಿ ಕೊನೆಗೊಂದು ದಿನ ತಮ್ಮ ಆಶ್ರಮದಲ್ಲೇ ವಿಶ್ರಮಿಸಿಬಿಟ್ಟರು! ಈಗಲೂ ಮಲ್ಲಾಡಿಹಳ್ಳಿಗೆ ಹೋದಾಗ ಆಶ್ರಮದ ವಾತಾವರಣದಲ್ಲಿ ಸ್ವಾಮೀಜಿಯವರ ಸಾನ್ನಿಧ್ಯದ ಬೋಧೆ ನನಗೆ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಉಂಟಾಗುತ್ತದೆ. ಅದಕ್ಕಾಗಿಯೇ ನನ್ನ ಜೀವನಯಾನದಲ್ಲಿ ನಾನು ಮತ್ತೆ ಮತ್ತೆ ಸಂದರ್ಶಿಸಲು ಇಷ್ಟಪಡುವ ಕ್ಷೇತ್ರಗಳಲ್ಲಿ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ನಿಸ್ಸಂದೇಹವಾಗಿ ಒಂದು.
- ಎಚ್.ಎಸ್. ವೆಂಕಟೇಶಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


