ಸಾಪ್ತಾಹಿಕಪ್ರಭ

'ಲಂಕೇಶ್ ಮೇಷ್ಟ್ರು' ಜತೆಗೆ 'ಆಗಂತುಕ'ನ ಪ್ರಶ್ನೆ

Published On :

ಸಣ್ಣ ಕಥೆ, ಕವಿತೆಗಳ ಕೃಷಿಯಲ್ಲಿ ತಮ್ಮದೇ ಧಾಟಿಯಲ್ಲಿ ಗುರುತಿಸಿಕೊಂಡಿರುವ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಓದುಗರಿಗೆ ಮತ್ತೊಂದು ಸಣ್ಣ ಕಥಾ ಸಂಕಲನ 'ಆಗಂತುಕ' ಹಾಗೂ 'ಕನ್ನಡಪ್ರಭ'ದ ಸಾಪ್ತಾಹಿಕಪ್ರಭದಲ್ಲಿ ಮೂಡಿಬಂದ ಅಂಕಣ ಬರಹ 'ಲಂಕೇಶ್... ಅಲ್ಲ ಮೇಷ್ಟ್ರು!' ಕೃತಿಗಳನ್ನು ನೀಡಿದ್ದಾರೆ.
ಇವರೆಡೂ ಕೃತಿಗಳಲ್ಲಿ ಹೊಸತನವನ್ನು ಕಾಣಬಹುದು. ಕಥಾ ಸಂಕಲನದಲ್ಲಿ ಅಂತಃಕರಣ ಜಿನುಗುವ ಕಥೆಗಳಿದ್ದರೆ, ಲಂಕೇಶ್ ಅವರನ್ನು ತುಂಬಾ ಭಿನ್ನದೃಷ್ಟಿಯಲ್ಲಿ ನೋಡುವ ಪ್ರಯತ್ನವನ್ನು 'ಲಂಕೇಶ್... ಅಲ್ಲ ಮೇಷ್ಟ್ರು!' ಕೃತಿಯಲ್ಲಿ ಮಾಡಲಾಗಿದೆ.
ಲಂಕೇಶ್ ಅವರನ್ನು ಅನೇಕರು ತಮ್ಮ ಕೃತಿಯಲ್ಲಿ, ತಮ್ಮದೇ ಆದ ದೃಷ್ಟಿಕೋನದಲ್ಲಿ ಹಿಡಿದಿಟ್ಟಿದ್ದಾರೆ. ಆದರೆ, ಮಹಾಬಲಮೂರ್ತಿ ಅವರು ಲಂಕೇಶ್ ಅವರನ್ನು ನೋಡಿದ್ದಕ್ಕೂ ಮತ್ತು ಅನುಭವಿಸಿದ್ದಕ್ಕೂ ವ್ಯತ್ಯಾಸವಿದೆ. ಇಲ್ಲಿ ಅವರ ಬರಹಕ್ಕೆ ನೈಜತೆ ಮತ್ತು ವಾಸ್ತವಿಕತೆ ಲೇಪನವಿದೆ. ಯಾಕೆಂದರೆ, ಲಂಕೇಶ್ ಅವರನ್ನು ಲಂಕೇಶ್ ಆಗಿ ನೋಡದೆ ಅವರನ್ನು ಮೇಷ್ಟ್ರರನ್ನಾಗಿ ನೋಡುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆಂಬುದು ಲೇಖನಗಳಲ್ಲಿ ಎದ್ದು ಕಾಣುವ ಅಂಶ. ಅವರ ಬರಹಗಳಿಗೆ ನೈಜತೆ ಯಾಕಿದೆ ಎಂದರೆ, ಲಂಕೇಶ್ ತಮ್ಮ ಸಮಕಾಲೀನ ಖ್ಯಾತನಾಮರೊಂದಿಗೆ ನಡೆಸಿದ ಜಂಜಾಟ, ಜಗಳಾಟ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ತುಣುಕುಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಮಹಾಬಲಮೂರ್ತಿ ಅವರು ಲಂಕೇಶ್ ಬಗ್ಗೆ ಹೀಗೊಂದು ಕಮೆಂಟ್ ಮಾಡಿದ್ದಾರೆ- 'ಲಂಕೇಶ್ ಒರಟರಂತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಆದರೆ, ವಾಸ್ತವದಲ್ಲಿ ಅವರು ಒರಟರಾಗಿರಲಿಲ್ಲ'. ಇದು ಹೌದೆನಿಸುತ್ತದೆ. ಕೃತಿಯಲ್ಲಿರುವ 30 ಅಧ್ಯಾಯಗಳನ್ನು ಓದುತ್ತಾ ಹೋದಂತೆ ಈ ಮಾತು ಅನುಭವಕ್ಕೆ ಬರುತ್ತದೆ.
'ಲಂಕೇಶ್.. ಅಲ್ಲ ಮೇಷ್ಟ್ರು' ಎಂದು ಸಾಬೀತು ಮಾಡುವಾಗ ವೈಯನ್ಕೆ, ಅನಂತಮೂರ್ತಿ, ಗಿರಡ್ಡಿ ಗೋವಿಂದರಾಜು, ಮಾಜಿ ಪ್ರಧಾನಿ ಚಂದ್ರಶೇಖರ್, ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕ ಖ್ಯಾತನಾಮರು ಬಂದು ಹೋಗುತ್ತಾರೆ. ಮೇಷ್ಟ್ರು ಅವರನ್ನು ಅರ್ಥೈಸಿಕೊಳ್ಳುತ್ತಾ ಹೋದಂತೆ ಇವರೆಲ್ಲರೂ ಪರಿಚಿತರಾಗುತ್ತಾ ಹೋಗುತ್ತಾರೆ. ಜೊತೆಗೆ ಲೇಖಕ ಮಹಾಬಲಮೂರ್ತಿ ಅವರೂ. ಯಾಕೆಂದರೆ, ಈ ಕೃತಿಯಲ್ಲಿ ದಾಖಲಾಗಿರುವ ಎಲ್ಲ ಘಟನೆಗಳಿಗೆ ಲೇಖಕರು ಸಾಕ್ಷಿಯಾಗಿದ್ದಾರೆ. ಇಲ್ಲವೇ ಅವರ ಪ್ರಜ್ಞಾ ಪರಿಧಿಯೊಳಗೆ ನಡೆದಿರುವಂಥದ್ದು. ಲಂಕೇಶ್ ಮೇಷ್ಟ್ರರನ್ನು ತಿಳಿದುಕೊಳ್ಳುವಲ್ಲಿ ಈ ಅಂಕಣಗಳ ಬರಹಗಳ ಕೃತಿ ಹೆಚ್ಚು ಉಪಯುಕ್ತವಾಗಲಿದೆ.
'ಗಂಡು ಹೆಣ್ಣಿನ ಮಿಲನವಾಗುವ ಬದಲು, ಗಂಡು ಮತ್ತು ಹೆಣ್ಣು ಜೋಡಿಯೊಂದು ನನ್ನ ಅವಳ ರೂಪದಲ್ಲಿ ಪ್ರಯೋಗಾಲಯವಾಗುವ ಹಂತಕ್ಕೆ ಪರ್ಯಾವಸಾನಗೊಂಡಿತು' ಇಂಥದೊಂದು ಮಾತನ್ನು 'ಆಗಂತುಕ' ಕಥಾ ಸಂಕಲನದ 'ಜೀವ ಜೀವಗಳ ನಡುವೆ' ಕಥೆಯ ನಾಯಕ ಹೇಳತ್ತಾನೆ. ಹೊಸ ಹೊಳಹುಗಳನ್ನು ಕಟ್ಟಿಕೊಡಬಲ್ಲ ಅನೇಕ ತಾರ್ಕಿಕ ವಿಚಾರಗಳು ಮಹಾಬಲಮೂರ್ತಿ ಕೊಡ್ಲೆಕೆರೆ ಅವರ 'ಆಗಂತುಕ' ಕಥಾಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಭಾಷಾ ಪ್ರೌಡಿಮೆ, ಪಾಂಡಿತ್ಯವನ್ನು ಕಾಣದಿರಬಹುದು. ಆದರೆ, ಮಾನವೀಯ ಅಂತಃಕರಣ, ಅಗೋಚರ ಶೋಧವನ್ನು ಶೋಧಿಸಬಹುದು. ಸರಳವಾಗಿಯೇ ಕಥೆಗಳನ್ನು ಹೇಳುತ್ತಾ, ಎಲ್ಲಿಯೂ ಭಾಷೆಯ ಹಂಗಿಗೆ ಬೀಳದೆ 'ಆಗಂತುಕ'ದಲ್ಲಿ 13 ಕಥೆಗಳನ್ನು ಒಂದೇ ಗುಕ್ಕಿಗೆ ನಿಮ್ಮೊಳಗಿಳಿಸಿ ಬಿಡುತ್ತಾರೆ ಲೇಖಕರು. ಅಲ್ಲದೆ, ನಮ್ಮ ಅಂತಃಕರಣವನ್ನು ಒಂದು ಸಾರಿ ಮುಟ್ಟಿ, ಮಾಯವಾಗುತ್ತವೆ. ಅದು ಅವರ ಹೆಗ್ಗಳಿಕೆಯಾದರೂ, ಹೀಗೆ ಸಾಗುವ ಭರದಲ್ಲಿ ಕೆಲವು ಕಥೆಗಳಲ್ಲಿ ಪ್ರಶ್ನೆಗಳನ್ನು ಓದುಗರಿಗೆ ಬಿಟ್ಟು ಬಿಟ್ಟಿದ್ದಾರೆ.
'ಆಗಂತುಕ' ಕಥೆಯಲ್ಲಿ ಮಾನವೀಯತೆ ಅನಾವರಣ ಮಾಡಿಸುವ ಲೇಖಕರು ಜೀವನದ ಶೋಧನೆಯನ್ನು ಒರೆಗಲ್ಲಿಗೆ ಹಚ್ಚಿದ್ದಾರೆ. ಇನ್ನು 'ಜೀವ ಜೀವಗಳ ನಡುವೆ' ಕಥೆಯಲ್ಲಿ ವಸ್ತು ತುಂಬಾ ಸಾಮಾನ್ಯ ಮತ್ತು ಇಂದಿಗೂ ಅಲ್ಲಲ್ಲಿ ಕಾಣುವಂಥದ್ದು. ಬಂಜೆತನವನ್ನು ಪ್ರಧಾನವಾಗಿಟ್ಟುಕೊಂಡರೂ ಯಾವುದೋ ಸನ್ನಿವೇಶ, ಸಂದರ್ಭದಲ್ಲಿ ಅನೈಕತೆಯಲ್ಲಿ ಜಾರುವ ಜಾಣತವನ್ನು ಬಿಚ್ಚಿಟ್ಟಿದ್ದಾರೆ.
ಕೊಡ್ಲೆಕೆರೆ ಅವರ ಕಥನ ಶೈಲಿಯೂ ತುಂಬಾ ಸರಳ. ಬೋರ್ ಆಗುವುದಿಲ್ಲ. ಆದರೆ, ಅಲ್ಲಲ್ಲಿ ಕೆಲವು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅದು ಅವರ ಜಾಣತನವಾಗಿರಲೂಬಹುದು! ಯಾಕೆಂದರೆ, 'ನಿಧಿ' ಕಥೆಯಲ್ಲಿ ಇಂಥದೊಂದು ಭಾವ ಕಾಡುತ್ತದೆ. ಆದರೆ, ಇದನ್ನು ಬದಿಗಿಟ್ಟು ನೋಡುವುದಾದರೆ, ಅಗೋಚರ ನಿಧಿ (ಇಲ್ಲಿ ಉದ್ಯೋಗ)ಗಾಗಿ ಪುಣೆಗೆ ಹೊರಡುವ ಸುಬ್ಬು, ಅಲ್ಲಿನ ಆತ ಯಾರನ್ನು ಹುಡುಕುತ್ತಾನೋ ಅವರು ಸಿಗುವುದಿಲ್ಲ. ಅವರ ಮಗ ಸಿಗುತ್ತಾನೆ. ಒತ್ತಾಯಪೂರ್ವಕವಾಗಿ ಊರಿಗೆ ಮರಳಿದರೆ ಬಯಸದ ನಿಧಿ ಆತನೊಂದಿಗೆ ಬಂದಿರುತ್ತದೆ. ಆದರೆ, ನಿಧಿಯಂತಿರುವ ತಂದೆ- ತಾಯಿಗಳನ್ನು ಕಳೆದುಕೊಳ್ಳುತ್ತಾನೆ. ಇಂಥ ಎಷ್ಟೋ ಕಥನಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆದೇ ಇರುತ್ತವೆ.
ಸಂಕಲನದಲ್ಲಿರುವ ಹದಿಮೂರು ಕಥೆಗಳೂ ಇಂಥದ್ದೇ ದನಿಯನ್ನು ಹೊಂದಿವೆ. ಆದರೆ, ಮೊದಲೇ ಹೇಳಿದಂತೆಅಲ್ಲಲ್ಲಿ ಕೆಲವು ಗೊಂದಲಗಳು, ಪ್ರಶ್ನೆಗಳನ್ನು ಓದುಗರಿಗೆ ಬಿಟ್ಟಿದ್ದಾರೆ ಲೇಖಕರು.
ಕೃತಿ: 1) ಲಂಕೇಶ್ ಅಲ್ಲ ಮೇಷ್ಟ್ರು!
2) ಆಗಂತುಕ
ಲೇ: ಮಹಾಬಲಮೂರ್ತಿ ಕೊಡ್ಲೆಕೆರೆ
ಪುಟ: 158 (115 ರು.), 130 (95 ರು.).
ಪ್ರ: ಐಬಿಎಚ್ ಪ್ರಕಾಶನ

-ಮಲ್ಲಿಕಾರ್ಜುನ ತಿಪ್ಪಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.