ರವಿಗೋಷ್ಠಿ!

ಡಾರ್ಜಿಲಿಂಗ್ನ ಸೊಬಗು ಹಲವು ಫಿಲ್ಮುಗಳ ರೀಲುಗಳಲ್ಲಿ ಸುತ್ತಿಕೊಂಡಿದೆ. ಕಾಂಚನಜುಂಗ ಪರ್ವತಶ್ರೇಣಿಯ ಹಿನ್ನೆಲೆಯಲ್ಲಿ ಬೆಟ್ಟದ ಇಳಿಜಾರಿನಲ್ಲಿ ಹರಡಿ ನಿಂತ ಈ ಊರು ಒಂದು ಪರಿಪೂರ್ಣ ಭಾವಚಿತ್ರ. ಡಾರ್ಜಿಲಿಂಗ್ ಎಂದರೆ ನ್ಯಾರೋಗೇಜ್ ರೈಲು, ರೋಪ್ ವೇ, 'ಆರಾಧನಾ' ಚಲನಚಿತ್ರ ಚಿತ್ರೀಕರಣಗೊಂಡ ಸ್ಥಳ... ಎಂಬ ಪಟ್ಟಿ ಸಿದ್ಧಗೊಳ್ಳುತ್ತದೆ. ಆದರೆ ಅವೆಲ್ಲಕ್ಕಿಂತ ಸೊಗಸಾದ ನಿಸರ್ಗ ಸಿರಿಯೊಂದು ಇಲ್ಲಿದೆ. ಅದು ಇಲ್ಲಿನ ಸೂರ್ಯೋದಯ. ನಮ್ಮ ಡಾರ್ಜಿಲಿಂಗ್ ಪ್ರವಾಸದಲ್ಲಿ ಟೈಗರ್ಹಿಲ್ನ ಸೂರ್ಯೋದಯಕ್ಕೆ ಮೊದಲ ಆದ್ಯತೆ ನೀಡಿದ್ದೆವು.
ಅಂದು ನಾವು ಡಾರ್ಜಿಲಿಂಗ್ ತಲುಪಿದಾಗ ರಾತ್ರಿ 8 ಗಂಟೆ. ಸೂರ್ಯೋದಯ ನೋಡಲಿಕ್ಕೆ ಬೆಳಗಿನ ಜಾವ 4 ಗಂಟೆಗೇ ರೆಡಿಯಾಗಿರಲು ಹೇಳಿ ಡ್ರೈವರ್ ಹೊರಟು ಹೋದ. ಉತ್ತರ ಸಿಕ್ಕಿಂನಿಂದ ಹಿಮಾಲಯ ಪರ್ವತದ ಕಡಿದಾದ ದಾರಿಯಲ್ಲಿ ಸಾಗಿಬಂದ ನಮಗೆ ನಿದ್ದೆ ಅವಶ್ಯವಾಗಿತ್ತು. ಆದರೆ, ಹಿಮಾಲಯದ ಆಕರ್ಷಣೆಯೇ ಬೆಳಗ್ಗೆ ನಮ್ಮ ನಿದ್ದೆಯನ್ನು ಹೊಡೆದೋಡಿಸಿತ್ತು. ಎರಡೆರಡು ಸುತ್ತು ಜಾಕೆಟ್ಟು, ಸ್ಕಾರ್ಫು, ಗ್ಲೌಸು, ಟೊಪ್ಪಿ ಹಾಕ್ಕೊಂಡು ಪೂರ್ತಿ ಪ್ಯಾಕಾದೆವು. ಕೊರೆಯುವ 2 ಡಿಗ್ರಿ ಚಳಿಯಲ್ಲಿ, ನಡಗುತ್ತಾ ಕಾರು ಹತ್ತಿ ಟೈಗರ್ಹಿಲ್ ಕಡೆಗೆ ಹೊರಟಾಗ ಊರು ಹೊದ್ದು ಮಲಗಿತ್ತು. ಚಳಿಗಾಲದ ಈ ದಿನಗಳಲ್ಲಿ ಡಾರ್ಜಿಲಿಂಗ್ ಅಷ್ಟಾಗಿ ಪ್ರವಾಸಿಗರನ್ನು ಆಕರ್ಷಿಸುವುದಿಲ್ಲ. ಆದರೂ ಪ್ರವಾಸಿಗರ ಕಾರುಗಳ ಸಾಲು ನಮ್ಮ ಹಿಂದೆ ಮುಂದೆ ಸಾಗುತ್ತಲೇ ಇದ್ದವು. ಸೀಸನ್ನಲ್ಲಿ ಬಂದರೆ ಈ ಹೊತ್ತಿಗಾಗಲೇ ಬಹಳಷ್ಟು ಕಾರುಗಳು ಬೆಟ್ಟದ ತುದಿ ತಲುಪಿ, ನಾವು ಕಿ.ಮೀ. ದೂರ ನಡೆದು ಹೋಗಬೇಕಾಗುತ್ತಿತ್ತು ಎಂದು ಡ್ರೈವರ್ ಹೇಳಿದ.
12 ಕಿ.ಮೀ. ಕ್ರಮಿಸಿ, ಸಮುದ್ರ ಮಟ್ಟದಿಂದ 2600 ಮೀ. (8482 ಅಡಿ) ಎತ್ತರದ ತುದಿ ತಲುಪಿದಾಗ ಇನ್ನೂ ಗಂಟೆ 5. ಸೂರ್ಯೋದಯ ವೀಕ್ಷಿಸಲು ಒಳಗೆ ಹೊರಗೆ ಎರಡೂ ಕಡೆ ನಿಂತು ನೋಡುವ ಅವಕಾಶ ಇರುವ ಜಾಗದ ಟಿಕೆಟ್ ತೆಗೆದುಕೊಂಡು ಅಬ್ಸರ್ವೇಟರಿ ಪ್ರವೇಶಿಸಿದೆವು. ಇನ್ನೂ ಒಂದೂವರೆ ಗಂಟೆಯ ಕಾಲಾವಕಾಶವಿತ್ತು. ಪೂರ್ವ- ಪಶ್ಚಿಮ ದಿಕ್ಕನ್ನು ಕೇಳಿ ತಿಳಿದುಕೊಂದು ಪೂರ್ವ ದಿಕ್ಕಿಗೆ ಮುಖ ಮಾಡಿನಿಂತೆವು.
ಟೈಗರ್ಹಿಲ್ನ ಸೂರ್ಯೋದಯ ಬಹಳ ಹೆಸರುವಾಸಿ. ಆ ಬೆಟ್ಟದ ತುದಿಯಿಂದ ಪಶ್ಚಿಮ ಹಿಮಾಲಯದ ಪರ್ವತಶ್ರೇಣಿ, ಭೂತಾನ್, ನೇಪಾಳ, ಸಿಕ್ಕಿಂನ ಬೆಟ್ಟಗಳ ಸಾಲುಗಳು ಗೋಚರಿಸಿದರೂ, ಕಾಂಚನಜುಂಗ ಪರ್ವತಶ್ರೇಣಿ ಮಾತ್ರ ವೇದಿಕೆಯ ಮೇಲೆ ನಿಂತಂತೆ ಕಣ್ಣೆದುರು ಎದ್ದುಕಾಣುತ್ತದೆ. ಡಾರ್ಜಿಲಿಂಗ್ ಮತ್ತು ಸಿಕ್ಕಿಂನಲ್ಲಿ ಕಾಂಚನಜುಂಗಾವೇ ಆಕರ್ಷಣೆಯ ಕೇಂದ್ರಬಿಂದು. ಪ್ರತಿ ವೀಕ್ಷಣಾ ಸ್ಥಳದಿಂದ ಕಾಂಚನಜುಂಗಾ ತೋರಿಸುತ್ತಾರೆ. ಆದರೆ, ಹವಾಮಾನದ ವಿಚಾರದಲ್ಲಿ ಮಾತ್ರ ನೀವು ಅದೃಷ್ಟಶಾಲಿಗಳಾಗಿರಬೇಕು. ಏಕೆಂದರೆ ಅಲ್ಲಿ ಯಾವಾಗಲೂ ಮಂಜು ಮುಸುಕಿದ, ಮೋಡ ಕವಿದ ವಾತಾವರಣ. ಮಧ್ಯಾಹ್ನ 2ರ ನಂತರವಂತೂ ಮಂಜು ಮುಸುಕಲು ಆರಂಭ.
ನಮ್ಮ ಅದೃಷ್ಟ ಚೆನ್ನಾಗಿತ್ತು. ಆಕಾಶ ಶುಭ್ರವಾಗಿತ್ತು. ಪ್ರವಾಸಿಗರ ಸೀಸನ್ ಅಲ್ಲದ ಕಾರಣ ಅಷ್ಟೊಂದು ಜನರೂ ಇರಲಿಲ್ಲ. ಸೂರ್ಯೋದಯಕ್ಕೆ ಇನ್ನೂ ಸಮಯ ಇದ್ದಿದ್ದರಿಂದ ಬೆಚ್ಚಗೆ ಅಬ್ಸರ್ವೇಟರಿಯ ಒಳಗೆ ನಿಂತುಕೊಂಡೆವು. ಟೊಪ್ಪಿ ಮಾರುವವರು, ಪೋಸ್ಟಕಾರ್ಡ್ ಮಾರುವವರು ಅಲ್ಲದೆ ಕಾಫೀ- ಟೀ ಮಾರುವವರೂ ವ್ಯಾಪಾರ ನಡೆಸಿದ್ದರು. ಡಾರ್ಜಿಲಿಂಗ್ನಂಥ ಚಹಾದ ನಾಡಿನಲ್ಲಿ ಕಾಫಿ ಮಾರಾಟ ನೋಡಿ ಆಶ್ಚರ್ಯವಾಯಿತು. ಬಹುಶಃ ಚಳಿಗೆ ನಮ್ಮೂರ ಕಾಫಿಯೇ ಸರಿ ಎನಿಸಿತು.
ಜನಜಂಗುಳಿ ಜಾಸ್ತಿಯಾಗತೊಡಗಿದಂತೆ ಅನಿಸಿದ್ದರಿಂದ ಅಬ್ಸರ್ವೇಟರಿಯಿಂದ ಹೊರಬಂದು ಪೂರ್ವ- ಪಶ್ಚಿಮ ದಿಗಂತಗಳೆರಡೂ ಕಾಣುವ ಎತ್ತರದ ಜಾಗದಲ್ಲಿ ನಿಂತು, ಅರುಣೋದಯಕ್ಕಾಗಿ ಕಾಯತೊಡಗಿದೆವು. ಇನ್ನೂ ಕತ್ತಲಿದ್ದುದರಿಂದ ಪಶ್ಚಿಮ ದಿಗಂತದಲ್ಲಿ ಕಾಂಚನಜುಂಗ ಪರ್ವತಶ್ರೇಣಿ ಅಸ್ಪಷ್ಟವಾಗಿ ಗೋಚರವಾಗುತಿತ್ತು. ಉಳಿದಂತೆ ಮಂಜಿನ ಪದರ ಸುತ್ತಲಿನ ಪರಿಸರವನ್ನು ಆವರಿಸಿತ್ತು. ಪೂರ್ವ ದಿಗಂತ ತಿಳಿ ಕೇಸರಿ ಬಣ್ಣದಿಂದ ಕ್ರಮೇಣ ರಾಗರಂಜಿತವಾಗತೊಡಗಿತು. ಆಗಸದಲ್ಲಿ ಬೆಳಕು ಮೂಡತೊಡಗಿದಂತೆ ಉತ್ತರದಲ್ಲಿ ಪರ್ವತ ಶ್ರೇಣಿಗಳು ಕ್ರಮೇಣ ಗೋಚರಿಸತೊಡಗಿದವು. ಹಿಮದ ಪದರ ಕರಗುತ್ತಾ ಸುತ್ತಲಿನ ಪರಿಸರ ಅನಾವರಣಗೊಳ್ಳುತ್ತಾ ಹೋಯಿತು. ಪೂರ್ವದಲ್ಲಿ ಸೂರ್ಯ ಉದಯಿಸಿದಾಗ ಕಿರಣಗಳು, ಕಾಂಚನಜುಂಗ ಪರ್ವತಶ್ರೇಣಿಯ ಮೇಲೆ ಬೀಳತೊಡಗಿತು. ಪ್ರಕೃತಿಗೆ ಮಿದಾಸನ ಸ್ಪರ್ಷವಾದಂತೆ... ಬೆಳಕು ಬಿದ್ದ ಪರ್ವತಗಳು ಚಿನ್ನದ ಬಣ್ಣದಿಂದ ಹೊಳೆಯತೊಡಗಿದವು. ಸೂರ್ಯನಿಗೆ ಎದುರಾಗಿ ನಿಂತಿದ್ದ ಕಾಂಚನಜುಂಗ ಐದು ನಿಮಿಷದಲ್ಲಿ ಚಿನ್ನದ ಬಣ್ಣದಲ್ಲಿ ಹೊಳೆಯತೊಡಗಿತ್ತು. ಆ ಕ್ಷಣದ ಅನುಭೂತಿಯಲ್ಲಿ ಸಾರ್ಥಕತೆಯಿತ್ತು. ಕಾಂಚನಜುಂಗದಲ್ಲಿನ ಕಾಂಚನ ಶಬ್ದ ಈ ಸೂರ್ಯೋದಯ ದಿಂದಲೇ ಬಂದಿದೆಯೇನೋ ಅನಿಸಿತು. ನೋಡ ನೋಡುತ್ತಿದ್ದಂತೆ ಚಿನ್ನದ ಬಣ್ಣ ತಿಳಿ ಹಳದಿಗೆ ತಿರುಗಿ, ನಂತರ ಕಾಂಚನಜುಂಗ ಬೆಳ್ಳಗೆ ತನ್ನ ಎಂದಿನ ಗತ್ತಿನಲ್ಲಿ ಕಣ್ಣಮುಂದೆ ನಿಂತಿತ್ತು. 10-15 ನಿಮಿಷಗಳಲ್ಲಿ ಸೂರ್ಯ ಬಣ್ಣದಾಟವನ್ನಾಡಿಬಿಟ್ಟಿದ್ದ. ಅದೊಂದು ಮರೆಯದ ಅನುಭವ. ಬೆಳಕು ಹರಿದಂತೆ ಬೆಟ್ಟ ಕಣಿವೆಗಳು ನಮ್ಮ ಮುಂದೆ ಹರಡತೊಡಗಿದವು. ಹಿಂಬದಿಯಲ್ಲಿ ಹಿಮಾವೃತಗೊಂಡ ಎವರೆಸ್ಟ್ ಕಂಡಾಗಲಂತೂ ನಮ್ಮ ಉತ್ಸಾಹ ಹೇಳತೀರದು.
-ಚಿತ್ರ,ಲೇಖನ: ವಸಂತಲಕ್ಷ್ಮಿ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


