ಸಾಪ್ತಾಹಿಕಪ್ರಭ

ಮಲ್ಲಾಡಿಹಳ್ಳಿ ಸ್ವಾಮೀಜಿ

ಮಲ್ಲಾಡಿಹಳ್ಳಿ ಸ್ವಾಮೀಜಿ
Published On :

1ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಹೋಗುವ ನಡುವೆ
ಇಲ್ಲಿ ಮಡುಗಟ್ಟಿದಿರಿ. ಮೋಟು ಚಡ್ಡಿ, ಬೆಳ್ಳನೆ ಬನೀನಲ್ಲಿ
ಎಲ್ಲೆಲ್ಲೆಲ್ಲೋ ಪರಿಭ್ರಮಿಸಿ ಇಲ್ಲೇ ಕಟ್ಟಿದಿರಿ ಜೇನಹುಟ್ಟ.
ದೇವರು ಕೊಟ್ಟಿದ್ದ ಮಣ್ಣಿನ ದೇಹವನ್ನೇ ಮಾಡಿದಿರಿ ಮಹಾ-

ಮನೆ. ನೆನೆದರೆ ಕಣ್ಣು ತುಂಬುತ್ತದೆ. 'ನಾನು ಹೋದಮೇಲೆ
ಇದೇ ನನ್ನ ದೇಹ. ಸ್ಮಾರಕಭವನವೇ ಶಿರ. ಯೋಗವುಂದಿರ
ವಕ್ಷ ಸ್ಥಲ. ಅನ್ನಶಾಲೆ ಜಠರ. ಶಾಲೆ, ಮಕ್ಕಳನೆತ್ತಿ ಕೊಳ್ಳುವ
ಕರಸ್ಥಲ. ಇಡೀ ಆಶ್ರಮ ಅಷ್ಟಾಂಗ ಭಂಗಿಯಲ್ಲಿ ಧ್ಯಾನಮಗ್ನ-

ವಾದ ಯೋಗಶರೀರ. ಸ್ಮಾರಕದ ನೆಲಮನೆಯೇ ಲೋಭಾನ
ಕಂಪು ಗಿಡಿದ ನಸುಕಿನೋಂಕಾರವಟಗುಡುವ ಡುಗುಡುಗು
ಹೃದಯ'. ನಿಮ್ಮ ಪಾದ ಯಾವುದು ಗುರುವೆ? ದಯಮಾಡಿ
ನೀಡಿ. ಹಾಯಿಸುವೆ ನನ್ನ ವಿನೀತ ವಿನಿಯವ ನಡೆಯ ಮೂಲಕ

ಪದವಿಟ್ಟೇ ಕಟ್ಟಿದ ಮಹಾಕಾವ್ಯದ ಗರ್ಭ ಗುಡಿಗೆ.

2ಮನೆಯೆಂದಮೇಲೆ ಶುದ್ಧೀಕರಣಕ್ಕಿರಲೇ ಬೇಕು ವಿಸರ್ಜನವ್ಯವಸ್ಥೆ.
ನಿತ್ಯನಿರ್ಮಾಲ್ಯ. ತಾವೇ ಒಗೆದೊಗೆದು ಮಾಡಿದಿರಿ ಸ್ವಚ್ಛ. ಆಗಾಗ
ಮೌನ. ಅನ್ನಾಹಾರತ್ಯಾಗದುಪವಾಸ. ಪದ್ಮಾಸನಸ್ಥ ಪ್ರಾಣಾಯಾಮ.
ಒಳಗಿನ ಬೆಂಕಿ ಹಾಯಿಸಿದಿರಿ ಸಿಡಿಮಿಡಿ ಮಾಡಿ. ಕುದಿಸಿದಿರಿ ಅನ್ನ

ತುಂಬಲಿಕ್ಕಾಗಿ ಸಾವಿರಾರು ಮಕ್ಕಳ ಹಸಿದ ಹೊಟ್ಟೆಯನ್ನ- ಮನಸ್ಸನ್ನ.
ದೇಹವನ್ನ ದೃಢಾಂಗ ಮಾಡಲಿಕ್ಕೆ ಮಟ್ಟಿಯಲ್ಲಿ ಮಾಡಿಯೇ ಮಾ
ಡಿದಿರಿ ನಿತ್ಯಕಸರತ್ತು. ಕಲ್ಪಿತ ಜಟ್ಟಿಗಳೊಂದಿಗೆ ಸದಾ ಕುಸ್ತಿಯ ಮಸ್ತಿ.
ನಡೆಸಿದಿರಿ ಕೊನೆವರೆಗು ಮಣ್ಣ ಪ್ರಣತಿಯಲ್ಲೇ ಸಣ್ಣದೊಂದು ಬೆಳಕಿನ

ಇಷ್ಟಲಿಂಗ ಸ್ಥಾಪಿಸುವ ಹರಸಾಹಸ. ಅಲ್ಲೋಲಕಲ್ಲೋಲದಲ್ಲೂ ಇನ್ನೂ
ತೇಲುತ್ತುಂಟು ಒಡೆಯದ ಹಡಗು. ಈ ಕಲಿಗಾಲದ ಒಡೆಯದ ಬೆಡಗು.  
ಹುಟ್ಟುಹಾಕುತ್ತಿರುವ ಕೈ ಹಲವು. ಹಡಗಿನ ಎದೆಯಲ್ಲಿ ನಿಮ್ಮ ನಿತ್ಯನೆನಪಿನ
ನಂದಾಬತ್ತಿ. ನಿತ್ಯಾರಾಧನೆಯ ವಿಗ್ರಹ ಕಡೆದದ್ದು ನಮ್ಮಂಥವರ ಕೈಯಲ್ಲ;

ಕಿವಿಗೊಟ್ಟಾಗ ಮಾತ್ರ ಕೇಳುವ ನಿಮ್ಮ ಸಮಾಧಿಸ್ಥಲದಂತರ್ಧ್ಯಾನ.

-ಎಚ್ಚೆಸ್ವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.