ಸಾಪ್ತಾಹಿಕಪ್ರಭ

ಕನ್ನಡ ಕಾಳಜಿ

Published On :

ಸಮ್ಮೇಳನ ಸುಮ್ಮನೆ!?
ವಿನಾಯಕ ಭಟ್ಟರ 'ಸಮ್ಮೇಳನ ಸುಮ್ಮನೆ!?' ಲೇಖನಕ್ಕೆ ಪೂರಕ ಮತ್ತು ಪ್ರತಿಯಾಗಿ ಹಲವರು ಅಭಿಪ್ರಾಯ ಮಂಡಿಸಿದ್ದಾರೆ. ಅಷ್ಟೂ ಬರಹಗಳಲ್ಲಿ ಕಂಡಿದ್ದು ಕೇವಲ ಕನ್ನಡದ ಬಗೆಗಿನ ಕಾಳಜಿ. ಹೊಸತನ್ನು ಅಳವಡಿಸಿಕೊಳ್ಳದಿದ್ದರೆ, ಹೊಸ ಹೊಸ ಮುಖಗಳು ಯಾವ ಪ್ರವಾಹದೊಟ್ಟಿಗೂ ಸೇರಿಬರುವುದಿಲ್ಲ. ಹೀಗಾಗಿ, ಈ ಎಲ್ಲ ಅಭಿಪ್ರಾಯಗಳನ್ನು ಕಸಾಪ ಸ್ವೀಕರಿಸಿ, ಸಮ್ಮೇಳನಕ್ಕೆ ಇನ್ನಷ್ಟು ಜೀವ ತುಂಬಬೇಕೆಂಬುದು 'ಸಾಪ್ತಾಹಿಕಪ್ರಭ'ದ ಕಾಳಜಿ. ಈ ಚರ್ಚೆಯ ಕೊನೆಯ ಸರಣಿ ಇಲ್ಲಿದೆ...

ನಾವ್ಯಾರು, ಬೇಡ ಎನ್ನಲು...?
ನಿಕೃಷ್ಟ ಸ್ಥಿತಿಯಲ್ಲಿ ಈಗ ಕನ್ನಡವಿದೆ. ಕನ್ನಡ ಜನ ಒಂದಾಗಲಿಕ್ಕೆ ಆಗುವ ಕಾರ್ಯಕ್ರಮ ಏಕೆ ಬೇಡ ಅನ್ನಬೇಕು?
ಸಾಹಿತ್ಯ ಸಮ್ಮೇಳನ ಅನ್ನೋದು ಕನ್ನಡ ಮನಸ್ಸುಗಳ ಪ್ರತಿಫಲನ. ಅದು ಕನ್ನಡ ಮನಸ್ಸುಗಳ ಜಾತ್ರೆ. ಆದರಿಂದ ಪ್ರತಿಫಲದ ನಿರೀಕ್ಷೆ ಏಕೆ? ಈಗ ಜಾತ್ರೆಗಳಿಂದ ಫಲ ಏನು? ಆ ದೇವರನ್ನು ತಲೆ ಮೇಲೆ ಒತ್ತುಕೊಂಡು ಸಂಭ್ರಮಿಸುವ ಉದ್ದೇಶವೇನು ಎಂದು ಕೇಳಲಾಗುತ್ತದೆಯೋ, ಆದ್ದರಿಂದ ಜಾತ್ರೆ ಬೇಡ ಅನ್ನಲಾಗುವುದಿಲ್ಲ ಅಲ್ಲವೇ? ನೋಡಿ, ಇಲ್ಲೊಬ್ಬರು 82 ವರ್ಷದ ಮೇಷ್ಟ್ರು ಇದ್ದಾರೆ. ಅವರು ಬಿಜಾಪುರಕ್ಕೆ ಹೋಗಿ ಬಂದರು. ಅವರಿಗೆ ಅದೊಂದು ಸಂಭ್ರಮ. ಹೀಗಾಗಿ, ಸಮ್ಮೇಳನ ಬೇಡ ಎನ್ನಲು ನಾವ್ಯಾರು? ಅವ್ಯವಸ್ಥೆಗಳಿರಬಹುದು. ವ್ಯವಸ್ಥೆ ಅವ್ಯವಸ್ಥೆಯ ಒಂದು ಭಾಗವೇ ಅಲ್ಲವೇ? ಅಂಥ ಸಂದರ್ಭದಲ್ಲಿ ಸುಧಾರಿಸುವ ಪ್ರಯತ್ನಗಳಾಗಬೇಕೆ ವಿನಾ ನಿಲ್ಲಿಸುವ ಉದ್ದೇಶವೇಕೆ? ಊಟದ ವ್ಯವಸ್ಥೆ ಹಿಂದೆ ಎಷ್ಟು ಜನಗಳ ಶ್ರಮ ಇರುತ್ತೆ. ಇರಲಿ ಬಿಡಿ. ಅಲ್ಲಿಯಾದರೂ ಸಹಪಂಕ್ತಿ ಭೋಜನವಾಗಲಿ. ಸಾಹಿತಿಗಳಲ್ಲದವರು ಸಮ್ಮೇಳನಗಳಿಗೆ ಬರಬಾರದು ಅಂದ್ರೆ ಹೇಗೆ?
- ನಾ. ಮೊಗಸಾಲೆ

ಸಣ್ಣ ರಾಜಕಾರಣ
ನೂಕುನುಗ್ಗಲು ಆಗ್ತಾ ಇದೆ. ಚುನಾವಣೆ ಅವಲಂಬಿತ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ರಾಜಕೀಯ ಆರಂಭವಾಗಿದೆ. ಮತ ಹಾಕಿದವರಿಗೆ ಮಾತ್ರ ಮನ್ನಣೆ. ಅಲ್ಲಿ ಸಾಹಿತಿಗಳಿಗಿಂತ ಅಸಾಹಿತಿಗಳೇ ಹೆಚ್ಚಾಗುತ್ತಿದ್ದಾರೆ. ಕಸಾಪದಲ್ಲಿ ಓದು, ಬರವಣಿಗೆ, ಚಿಂತನೆಗಳಿಗೆ ಪ್ರೇರಣೆಯಾಗಬೇಕಿತ್ತು. ಕಸಾಪದ ಚುನಾಯಿತರು ಸಣ್ಣ ರಾಜಕಾರಣಿಗಳಂತೆ ಅಮಲಿನಲ್ಲಿದ್ದಾರೆ. ಇಂಥ ಸಂದರ್ಭದಲ್ಲೂ ಸಾಹಿತ್ಯ ಸಮ್ಮೇಳನ ನಡೀಬೇಕು, ಕನ್ನಡ ಪ್ರೀತಿಸುವರಿಗಾಗಿ ಆಗಲೇಬೇಕು. ಚಪ್ಪಲಿ, ಅಂಗಿ ಮಾರಾಟವಾಗುವುದು. ನೂರು ರುಪಾಯಿಗೆ ಮೂರು ಅಂಗಿ ಮಾರಾಟ ಬೇಡ. ಪುಸ್ತಕಗಳ ಪ್ರೀತಿ ಹೆಚ್ಚಲಿ. ಹೇಗೆ ನಡೆಯಬೇಕು ಎಂದು ಸಂಘಟನೆಗಳು, ಸಾಹಿತಿಗಳು ಕುಳಿತು ಚರ್ಚಿಸಲಿ. ಹತ್ತರ ಸಂಗಡ ಹನ್ನೊಂದು ಆಗದಿರಲಿ. ಸಮ್ಮೇಳನಗಳು ನಡೆಯಲಿ.
- ಶ್ರೀಪಾದ ಶೆಟ್ಟಿ

ಸುಮ್ಮನೆ ವಿವಾದ ಬೇಡ
ಇಲ್ಲ, ಬೇಡ. ಸಾಹಿತ್ಯ ಸಮ್ಮೇಳನದ ಬಗ್ಗೆ ಮಾತನಾಡುವುದು ಬೇಡ. ಈಗಾಗಲೇ ಅದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಸುಮ್ಮನೆ ವಿವಾದ ಬೇಡ. ನಾಡು- ನುಡಿ ಬಗ್ಗೆ, ಸಂಸ್ಕೃತಿ- ಸಾಹಿತ್ಯದ ಬಗ್ಗೆ ಮಾತನಾಡೋಣ. ಅನ್ಯಥಾ ಭಾವಿಸಬೇಡಿ.
- ಡಾ. ಕೆ.ಎಸ್. ನಿಸಾರ್ ಅಹಮದ್

ಹಬ್ಬವನ್ನು ಬೇಡ ಎನ್ನುತ್ತೇವೆಯೇ?
ಸಾಹಿತ್ಯ ಸಮ್ಮೇಳನ ಕನ್ನಡದ ಶ್ರೇಷ್ಠ ಶೃಂಗಪ್ರಾಯ. ಯುಗಾದಿ, ದೀಪಾವಳಿ ಹಬ್ಬಗಳು ಪ್ರತಿವರ್ಷ ಬರುತ್ತವೆ. ಆದರೆ ಮುಂದಿನ ವರ್ಷದ ಹಬ್ಬವನ್ನು ಬೇಡ ಎನ್ನುತ್ತೇವೆಯೇ? ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರ ಪಂಚಾಗದಲ್ಲಿ ವಿಶಿಷ್ಟ ಸ್ಥಾನವಿದೆ. ಸಾಹಿತ್ಯಾಸಕ್ತರು ಸಾಹಿತಿಗಳನ್ನು ಕಾಣಲು, ಕನ್ನಡ ಹಬ್ಬದ ಸಂಭ್ರಮದಲ್ಲಿ ಮೀಯಲು ತುದಿಗಾಲ ಮೇಲೆ ನಿಂತಿರುತ್ತಾರೆ. ಸಾಹಿತ್ಯ ಪ್ರೇಮಿಗಳ ಅಂಥ ಮನಸ್ಸುಗಳನ್ನು ತಣಿಸುವ ಸಂದರ್ಭ ಸಮ್ಮೇಳನಗಳಲ್ಲಿ ನಡೆಯಬೇಕು. ಸಮ್ಮೇಳನಕ್ಕೆ ಬಂದ ಜನರಿಗೆ ಕೇವಲ ಊಟದ ನಿರೀಕ್ಷೆ ಮಾತ್ರ ಇರುವುದಿಲ್ಲ. ಸಮ್ಮೇಳನವೇ ಭೋಜನ, ಊಟ. ಹಾಗೆಂದು ವ್ಯವಸ್ಥೆ ತಪ್ಪಿಸುವುದು ಸರಿಯಲ್ಲ. ಜೊತೆಗೆ ಶೌಚಾಲಯದೆಡೆಗೆ ಗಮನ ಹರಿಸಲಿ.
- ಹಂಪನಾ

ವೇದಿಕೆ ಮೇಲೆ ಅಷ್ಟು ಜನ ಬೇಕಾ?
ಸಮ್ಮೇಳನ ಬೇಕು. ಅದರಲ್ಲಿ ಎರಡು ಮಾತಿಲ್ಲ. ಇದರಿಂದ ಸಾಹಿತ್ಯ ಮಾರ್ಗ ಸೃಷ್ಟಿಯಾಗಬೇಕು. ಆದರೆ ಅದರ ರೂಪುರೇಷೆ ಬಗ್ಗೆ ಚರ್ಚೆಯಾಗಲಿ. ಸಮ್ಮೇಳನ ಹೇಗಿರಬೇಕು ಎನ್ನುವದರ ಬಗ್ಗೆ ತೀರ್ಮಾನವಾಗಿರಲಿ. ವಿಶಾಲವಾದ ವೇದಿಕೆ ತುಂಬಿರುತ್ತೆ. ಅಷ್ಟು ಜನ ವೇದಿಕೆಯಲ್ಲಿ ಬೇಕಾ? ಸಾಹಿತಿಗಳಲ್ಲದವರು ವೇದಿಕೆಗೆ ಅವಶ್ಯವಾ? ಸಮ್ಮೇಳನಗಳಿಂದ ಒಳ್ಳೆಯದನ್ನ ಪಡೆಯೋಣ. ಅಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಗಮನ ಹರಿಸೋಣ. ಜಾತ್ರೆ ಅನ್ನಿಸಿಕೊಂಡರೂ ಬೇಕು. ಅದರ ಸದುಪಯೋಗವಾಗಲಿ. ಕಾರ್ಪೊರೇಟ್ ಕಾರ್ಯಕ್ರಮಗಳಿಗಿಂತ ಜನಸಾಮಾನ್ಯನ ಈ ಸಮ್ಮೇಳಗಳೇ ಅರ್ಥಪೂರ್ಣ.
- ಭುವನೇಶ್ವರಿ ಹೆಗಡೆ

ನಮ್ಮದೇ ಉತ್ತಮ
ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನ ಸಾವಿರ ಪಟ್ಟು ಉತ್ತಮ. ನಾನು ಜೈಪುರ ಸಮ್ಮೇಳನ ನೋಡಿದ್ದೇನೆ. ಅಲ್ಲಿನ ಗೊಂದಲ ವಿಪರೀತ. 2 ಲಕ್ಷಕ್ಕೂ ಹೆಚ್ಚು ಜನ ಸೇರ್ತಾರೆ. ದಿನಕ್ಕೆ 5 ವಿಚಾರ ಸಂಕಿರಣಗಳು. ಸಂಜೆ ತನಕ ಓಡಾಡಿದರೂ ಪುಸ್ತಕಗಳು ಲಭ್ಯವಿಲ್ಲ. ಆದರೆ ನಮ್ಮಲ್ಲಿ ನೋಡಿ # 8ರಿಂದ 10 ಕೋಟಿ ಪುಸ್ತಕ ವ್ಯಾಪಾರ ಆಗುತ್ತೆ. ಜಾತ್ರೆ ಅಂತಾದರೂ ಅನ್ನಿ, ಏನಾದರೂ ಅನ್ನಿ ನಡೀಲಿ ಬಿಡ್ರಿ. ವ್ಯವಸ್ಥಿತವಾಗಿ ಊಟನೂ ಆಗಲಿ.
-ಡಾ. ಚಂದ್ರಶೇಖರ ಕಂಬಾರ

ಅನ್ನ- ಸಾಂಬಾರ್ ಸಾಕಲ್ಲ!
ಕನ್ನಡ ಸಾಹಿತ್ಯ ಸಮ್ಮೇಳನ ಪ್ರಜ್ಞೆಯಾಗಿ ಅಭಿವೃದ್ಧಿಯಾಗಲಿ. ಪಾಲ್ಗೊಳ್ಳುವವರಿಗೆ ವೈಚಾರಿಕ ಪ್ರಜ್ಞೆ ಅವಶ್ಯಕ. ಅಂಥವರಿಗಾಗಿಯೇ ಸಮ್ಮೇಳನ ನಡೆಯಲಿ. ಇನ್ನು ಊಟದ ವಿಷಯವೂ ಮುಖ್ಯವಾಗಿಬಿಡುತ್ತದೆ. ಊಟದ ಮೆನುಗಳಿಗಿಂತ ಸಾಹಿತ್ಯಕ ಸಂವೇದನೆಗಳ ಪರಿಚಯವಾಗಲಿ. ಸ್ಟಾರ್ ಇಮೇಜ್ ಇರುವ ಸಾಹಿತಿ ಅವರ ಭಾಷಣವೇ ಮುಖ್ಯಾಂಶವಾಗುತ್ತದೆಯೇ ಹೊರತು, ಸಾಹಿತ್ಯಕ್ಕೆ  ಸಂಬಂಧಿಸಿದ್ದು ಮುಖ್ಯವಾಗುವುದಿಲ್ಲ. ವ್ಯಕ್ತಿಯ ವರ್ಚಸ್ಸಿಗಿಂತ ಸಾಹಿತ್ಯದ ವರ್ಚಸ್ಸು ಹೆಚ್ಚಾಗಲಿ. ಅದರಿಂದ ಸಂವೇದನೆ ಸೃಷ್ಟಿಯಾಗಬೇಕು. ತಾತ್ವಿಕ ಪ್ರಜ್ಞೆ ಅಭಿವೃದ್ಧಿಗೆ ಚರ್ಚೆ ಆರಂಭವಾಗಲಿ. ಊಟ ಸರಳವಿರಲಿ. ಅನ್ನ ಸಾಂಬಾರ ಸಾಕು. ಸಮ್ಮೇಳನಗಳಲ್ಲಿ ರುಚಿ ಮುಖ್ಯವಲ್ಲ. ಆದರೆ, ಬದುಕಲು ಅನ್ನಸಾಂಬಾರ್ ಸಾಕಲ್ಲ.
- ಅರವಿಂದ ಚೊಕ್ಕಾಡಿ

ಸ್ಫೂರ್ತಿಯ ತಾಣ
ಸಮ್ಮೇಳನಗಳು ನಾಡಿನ ಸಾಂಸ್ಕೃತಿಕ ವೇದಿಕೆಗಳು. ಅಲ್ಲಿ ಕಲೆಯುವ ಲಕ್ಷಾಂತರ ಜನರ ಮನಸ್ಸಿಗೆ ಸಂತೋಷ, ಸಂಭ್ರಮಗಳನ್ನುಂಟು ಮಾಡುವ ದೊಡ್ಡ ಹಬ್ಬ. ಓದುವ ಕೇಳುವ ಯುವ ಬರಹಗಾರರಿಗೆ ಒಂದು ಸ್ಫೂರ್ತಿ ತಾಣ. ನಾನೂ ಪ್ರೌಢಶಾಲೆ, ಕಾಲೇಜುಗಳಲ್ಲಿ ಓದುವಾಗ ಸಾಹಿತಿಗಳನ್ನು ನೋಡಿ, ಅವರ ಮಾತನ್ನು ಕೇಳಿ ಸ್ಫೂರ್ತಿ ಪಡೆದು ಈಗ ತಕ್ಕಮಟ್ಟಿಗೆ ಕೆಲಸ ಮಾಡಿದ್ದೇನೆ. ಸಮ್ಮೇಳನಗಳು ವರ್ಷ ವರ್ಷವೂ ನಡೆಯಬೇಕು. ಅದು ಔಚಿತ್ಯ ಪೂರ್ಣವಾಗಿರಬೇಕು. ಊಟದ ವ್ಯವಸ್ಥೆ ತುಂಬಾ ವ್ಯವಸ್ಥಿತವಾಗಿ ಮಾಡುವುದು ಸಮ್ಮೇಳನದ ಸಾಹಿತ್ಯಿಕ ವಿಚಾರಗಳಷ್ಟೇ ಮುಖ್ಯವಾದದ್ದು. ಅವ್ಯವಸ್ಥೆಯನ್ನು ನಿವಾರಿಸುವುದು. ಆ ದಿಸೆಯಲ್ಲಿ ಪರಿಷತ್, ಸ್ವಾಗತ ಸಮಿತಿ ಹೆಚ್ಚಿನ ಮುತುವರ್ಜಿವಹಿಸುವುದು ಅಗತ್ಯ.
- ಕಮಲಾ ಹಂಪನಾ

3 ವರ್ಷಕ್ಕೊಂದು ಸಾಕು!
ನಮ್ಮ ಸಾಹಿತ್ಯ ಸಮ್ಮೇಳನದ ಸಂಪ್ರದಾಯ ಚೆನ್ನಾಗಿದೆ. ಮತ್ತೆ ಇದು ಜಾತ್ರೆ ತರವೇ ಇರಬೇಕು. 3 ವರ್ಷಗಳಿಗೊಂದು ಬಾರಿ ಸಾಕು ಅನ್ನಿಸುತ್ತೆ. ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಜನ ಬರೋದೆ ಕಷ್ಟ. ಅಂಥದ್ದರಲ್ಲಿ ಲಕ್ಷಾಂತರ ಜನ ಬರುವ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನ. ಬರುವ ಲಕ್ಷಾಂತರ ಜನಕ್ಕೆ ವಸತಿ, ಊಟದ ವ್ಯವಸ್ಥೆ ಮಾಡಲು ಯಾವ ಹೊಟೇಲ್‌ಗಳಿಂದಲೂ ಸಾಧ್ಯವಿಲ್ಲ. ವಿವಿಧ ಮೂಲಗಳಿಂದ ಕೋಟಿಗಟ್ಟಲೆ ಹರಿದು ದುಡ್ಡು ಬರುತ್ತದೆ. ಸಮ್ಮೇಳನಗಳಲ್ಲಿ ಊಟದ ವ್ಯವಸ್ಥೆ ಮಾಡುವುದು ಕರ್ತವ್ಯ. ಜ್ಞಾನದ ಜೊತೆಗೆ ಅನ್ನ ದಾಸೋಹವೂ ಆಗಲಿ. ಇಂದು ಯೋಗ್ಯತೆ ಇಲ್ಲದವರ ಮೆರವಣಿಗೆಯನ್ನು ಕಾಣುತ್ತೇವೆ. ಅಧ್ಯಕ್ಷರಾಗಿ ಆಯ್ಕೆಯಾದವರ ಮೆರವಣಿಗೆ ಆಗಲಿ. ನಿರ್ಣಯಗಳ ಅನುಷ್ಠಾನದ ಬಗ್ಗೆ ಗಮನಹರಿಸುವಂತಾಗಬೇಕೆ ವಿನಾ ನಿರ್ಣಯ ಮಂಡಿಸುವುದೇ ಪರಿಪಾಠವಾಗಬಾರದು.
- ಬಿ.ಎಲ್. ವೇಣು

ಜಾತ್ರೆಯಾದರೂ ತಪ್ಪಲ್ಲ  
ಸಮ್ಮೇಳನಗಳು ಖಂಡಿತಾ ಬೇಕು. ಜಾತ್ರೆ ಎಂದಾಗಲಿ, ಉತ್ಸವ ಎಂದಾದರೂ ತಪ್ಪಲ್ಲ. ಆದರೆ ಮೂರು ವರ್ಷಕ್ಕೊಮ್ಮೆ ಆಗಲಿ. ಆಗ ಮಾತ್ರ ಅಲ್ಲಿ ಹೊಸತನ ಇರುತ್ತೆ. ಇದಕ್ಕೊಂದು ಅರ್ಥ ಬರುತ್ತೆ. ಜನರಲ್ಲಿ ಉತ್ಸಾಹವೂ ಇರುತ್ತೆ. ಮತ್ತೆ ಯಾಂತ್ರಿಕವಾಗುವುದಿಲ್ಲ. ಊಟದ ವ್ಯವಸ್ಥೆ ಬೇಕೇ ಬೇಕು. ತಾಲೂಕು ಮಟ್ಟದವು ವರ್ಷಕ್ಕೊಮ್ಮೆ, ಜಿಲ್ಲಾಮಟ್ಟದವು ಎರಡು ವರ್ಷಕ್ಕೊಮ್ಮೆ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂರು ವರ್ಷಕ್ಕೆ ಒಮ್ಮೆಯಾದರೆ ಸಾಕು.
- ಸಿಎನ್‌ಆರ್

ವಸತಿ, ಊಟದ್ದೇ ಗೊಂದಲ
ಈವರೆಗೆ 20 ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ. ನಮ್ಮಲ್ಲಿ ಮುಂಚೆಯಿಂದ ಉತ್ಸಾಹ ಇತ್ತು. ಸಮ್ಮೇಳನಗಳಲ್ಲಿ ಸಾಹಿತಿಗಳು ಸಿಗ್ತಾರೆ ಅಂತ. ಈಗಲೂ ಅಲ್ಲಿ ನೆರೆದರೆ ಚರ್ಚೆಗಳು, ಸ್ನೇಹ ಸಂಬಂಧ, ಒಡನಾಟ, ಖಾಸಗಿ ಮಿತ್ರರು, ಸಾಹಿತ್ಯಾಸಕ್ತರು ಎಲ್ಲರೂ ಸಿಗ್ತಾರೆ. ಎಷ್ಟೋ ಜನ ಸ್ನೇಹಿತರು ಸಮ್ಮೇಳನದಲ್ಲೇ ದೊರೆತದ್ದು. ಇನ್ನು ಸಮ್ಮೇಳನದಲ್ಲಿ ನಡೆಯುವ ಗಂಭೀರ ಚರ್ಚೆ ಬಗ್ಗೆ ನಂಬಿಕೆ ಇಲ್ಲ. ಮತ್ತು ಅಂಥ ಚರ್ಚೆಗಳು ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸುತ್ತವೆ ಅಂತನೂ ಅನ್ನಿಸಲ್ಲ. ಅದು ಸಾಧ್ಯವಿಲ್ಲ. ಸಾಮಾನ್ಯವಾಗಿ ವಸತಿ, ಊಟದ್ದೇ ಗೊಂದಲ. ಊಟದ ವ್ಯವಸ್ಥೆನೇ ಬೇಡ. ಅದಿಲ್ಲದಿದ್ದರೆ ಖಂಡಿತ ಅಚ್ಚುಕಟ್ಟಾಗಿ ನಡೆಯುತ್ತದೆ. ಗೋಷ್ಠಿಗಳ ನೋಡಿದ ಜನ ಮನೆಗೆ ಹೋಗಿ ಊಟ ಮಾಡಲಿ.
- ಬಿ.ಆರ್. ಲಕ್ಷ್ಮಣರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.