ಸಾಪ್ತಾಹಿಕಪ್ರಭ

ಎದೆಗೆ ಬಿದ್ದ ಪ್ರಚಾರ!

ಎದೆಗೆ ಬಿದ್ದ ಪ್ರಚಾರ!
Published On :

ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' (ಅಭಿನವ ಪ್ರಕಾಶನ, ಬೆಂಗಳೂರು) ಎಂಬ ಬರಹಗಳ ಸಂಗ್ರಹವು ಕಳೆದ ನಾಲ್ಕು ದಶಕಗಳಲ್ಲಿ ಲೇಖಕರು ಬರೆದ, ಆಡಿದ ಮಾತುಗಳನ್ನು ಒಟ್ಟಿಗೆ ಸೇರಿಸಿ ಓದುಗರಿಗೆ ಒಪ್ಪಿಸುವ ಒಂದು ಸ್ತುತ್ಯರ್ಹ ಪ್ರಯತ್ನ.  
ನಾಲ್ಕು ದಶಕಗಳ ಸಾಹಿತ್ಯಿಕ- ಸಾಂಸ್ಕೃತಿಕ ಕರ್ನಾಟಕದ ಜೀವನದಲ್ಲಿ ದೇವನೂರು ತಮ್ಮ ಬರವಣಿಗೆ, ವ್ಯಕ್ತಿತ್ವ ಮತ್ತು ಮನಸ್ಸಾಕ್ಷಿಗೆ ಹತ್ತಿರವಾದ ನಿಲುವು, ವಿಚಾರ, ಧೀಮಂತಿಕೆ ಇವುಗಳ ಮೂಲಕ ಕನ್ನಡ ಓದುಗರ ಮನಸ್ಸಾಕ್ಷಿಯ ಮುಂದೆ ಕಾಲಕಾಲಕ್ಕೆ ಸಂಸ್ಕೃತಿಯ ನೆಮ್ಮದಿ ಮತ್ತು ಆರೋಗ್ಯಕ್ಕೆ ಪ್ರಸ್ತುತವಾದ ಪ್ರಶ್ನೆಗಳನ್ನು ಎತ್ತುತ್ತಲೇ, ಕೆದಕುತ್ತಲೇ ಬಂದಿದ್ದಾರೆ. ಹೀಗಾಗಿ ಇಲ್ಲಿಯ ಬರಹಗಳು ಸಂಗ್ರಹ ರೂಪದಲ್ಲಿ ಬಂದಿರುವುದರಿಂದ ಹೊಸತಾಗಿ ಕಂಡರೂ, ಈ ಬರಹಗಳ ಹಿಂದಿರುವ ನಿಲುವು- ಧೋರಣೆಗಳೆಲ್ಲ ಈಗಾಗಲೇ ಕನ್ನಡಿಗರ ಪ್ರಜ್ಞಾವಂತಿಕೆಯ ಭಾಗ. ಇಲ್ಲಿಯ ಕೆಲವು ಬರಹಗಳಿಗೆ ದೇವನೂರರ ಮಕ್ಕಳಿಗಿಂತ ಹೆಚ್ಚು ವಯಸ್ಸಾಗಿರುವುದರಿಂದ ಹೊಸ ತಲೆಮಾರಿನ ಓದುಗರಿಗೆ ಸಂಗ್ರಹವು ಬೇರೊಂದು ರೂಪದಲ್ಲಿ ಕಾಣುವ ಸಾಧ್ಯತೆಯೂ ಇದೆ.
ಈ ಬರಹಗಳ ಹಿಂದಿರುವ ಮನೋಧರ್ಮ ಬರಹಗಾರನೊಬ್ಬ ತನ್ನ ಮನಸ್ಸಾಕ್ಷಿಯ ಮೂಲಕ ಸಮಾಜವೆಂಬ ಕನ್ನಡಿಯನ್ನು ದಿನವೂ ಒರೆಸಿ ಶುಭ್ರವಾಗಿಡುತ್ತಾ, ಕನ್ನಡಿಯಲ್ಲಿ ಕಾಣುತ್ತಿರುವುದು ಬಿಂಬವೂ ಹೌದು, ಪ್ರತಿಬಿಂಬವೂ ಹೌದು. ಇಲ್ಲಿ ನೋಡಿ, ಹೀಗೆ ನೋಡಿ ಎಂದು ಆರ್ತವಾಗಿ, ವಿನಮ್ರವಾಗಿ ಒತ್ತಾಯಿಸುವ, ಒಮ್ಮೊಮ್ಮೆ ಕಿಚಾಯಿಸುವ ರೀತಿಯದು. ಈ ಸಂಗ್ರಹವನ್ನು ಮಹಾದೇವರ ಬರವಣಿಗೆಯ ಹಿಂದಿರುವಷ್ಟೇ ಧ್ಯಾನಶೀಲತೆಯಿಂದ ಓದುಗರು ಕೂಡ ಗಮನಿಸುವುದಾದರೆ ನಮ್ಮ ಕರ್ನಾಟಕವು ನಾಲ್ಕು ದಶಕಗಳಿಂದ ಹೀಗಿತ್ತು ಮಾತ್ರವಲ್ಲ, ಕೆಲವು ಸಂಗತಿಗಳಲ್ಲಿ ಇನ್ನು ಹೀಗೆಯೇ ಉಳಿದುಬಿಟ್ಟಿದೆಯಲ್ಲ ಎಂಬ ಖೇದವೂ ಮೂಡುತ್ತದೆ. ಈ ಖೇದ ಭಾರತದ ಸಾಮಾಜಿಕ ಸ್ಥಿತಿಗೂ ವಿಸ್ತರಿಸುತ್ತದೆ.
ಈ ಸಂಗ್ರಹವನ್ನು ಓದುಗರ ದೃಷ್ಟಿಯಿಂದ ಎರಡು ನೆಲೆಗಳಲ್ಲಿ ಸಮೀಕ್ಷಿಸಬಹುದು. ಬರವಣಿಗೆ ಮತ್ತು ಚಿಂತನ ಶೀಲತೆಯ ಸ್ವರೂಪ ಮೊದಲನೆಯದು. ಈ ನೆಲೆಯಲ್ಲಿ ಬರಹಗಾರರ ವಿಶಿಷ್ಟತೆ, ಪ್ರತಿಭೆ, ಪ್ರಯೋಗಶೀಲತೆ ಮುಖ್ಯವಾದದ್ದು. ಎರಡನೇ ನೆಲೆ ಇನ್ನೂ ಮುಖ್ಯವಾದದ್ದು. ಈ ಸಂಗ್ರಹ ಸೂಚಿಸುವ ವಿಚಾರಗಳು, ಕಾಳಜಿಗಳು ನಾಲ್ಕು ದಶಕಗಳ ಕಾಲಾಂತರದಲ್ಲಿ ಹೇಗೆ ಕಾಣುತ್ತದೆ. ಸಮಾಜವು ಇವುಗಳಿಗೆ ಕಂಡುಕೊಂಡಿರುವ ಕಂಡುಕೊಳ್ಳುತ್ತಿರುವ ಉತ್ತರ- ಪರಿಹಾರಗಳ ಹಿನ್ನೆಲೆಯಲ್ಲಿ ದೇವನೂರರ ವೈಚಾರಿಕತೆಯು ಹೇಗೆ ಕಾಣುತ್ತದೆ ಮತ್ತು ದೇವನೂರರಿಗೆ ಸದಾ ಮುಖ್ಯವೆನಿಸುವ ಪ್ರಶ್ನೆಗಳು, ಉತ್ತರಗಳು ಮಾರ್ಗಗಳು ಇದೇ ಸಮಸ್ಯೆಗಳ ಬಗ್ಗೆ ದೇವನೂರರಿಗಿಂತ ಮುಂಚೆ ಮತ್ತು ದೇವನೂರರ ಕಾಲದಲ್ಲೇ ನಡೆಸಿದ ಚಿಂತನೆಯ ಎದುರಿಗೆ ಹೇಗೆ ಕಾಣುತ್ತವೆ ಎಂಬುದು ಓದುಗರ ಚಿಂತನಶೀಲತೆಯ ದೃಷ್ಟಿಯಿಂದಲೂ ಮುಖ್ಯವಾದದ್ದು.
ದೇವನೂರರ ಒಟ್ಟು ಬರವಣಿಗೆಗೆ ಸಲ್ಲಬಹುದಾದ ಮಾತುಗಳು ಇಲ್ಲಿಯ ಬರಹಗಳಿಗೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಲ್ಲುತ್ತವೆ. ಬರವಣಿಗೆಯನ್ನು ಎಂದು ಫೆಟಿಷ್ ಮಾಡಿಕೊಳ್ಳದ ಪ್ರತಿಭಾವಂತ ಬರಹಗಾರನೊಬ್ಬ ಕನ್ನಡದಲ್ಲಿದ್ದರೆ, ಯಾರೆಂಬುದಕ್ಕೆ ದೇವನೂರರ ಹೆಸರೇ ಮೊದಲನೇ ಸ್ಥಾನದಲ್ಲಿ ಬರುತ್ತದೆ. ಕಳೆದೆರಡು ದಶಕಗಳಲ್ಲಿ ಮುಂಚೂಣಿಗೆ ಬಂದ ಮಾರುಕಟ್ಟೆ ಸಂಸ್ಕೃತಿಯು ಬರಹವನ್ನು, ಪ್ರಕಾಶನವನ್ನು, ಪ್ರಸಿದ್ಧಿಯನ್ನು ಒಂದು ರೀತಿಯ ನಿರಂತರ ಗೀಳು ಮತ್ತು ಬಹು ಉತ್ಪನ್ನದ ವಿಷವರ್ತುಲಕ್ಕೆ ನಮ್ಮೆಲ್ಲರನ್ನೂ ಸಿಕ್ಕಿ ಹಾಕಿಸಿರುವಾಗ ದೇವನೂರು ಪ್ರತಿ ಬರವಣಿಗೆಯ ಸಂದರ್ಭದಲ್ಲೂ ಎದು ರಿಸುವ ಕಷ್ಟ, ಹಿಂಜರಿಕೆ ಮತ್ತು ಬರೆಯಲೇಬೇಕೆಂಬ ಒಳಗಿನ ಒತ್ತಾಯಕ್ಕೆ ಕಾಯುತ್ತಾ ಹೋಗುವ ರೀತಿ ಒಂದು ರೀತಿಯ ಮಾದರಿಯಾಗಿದೆ. ಹೀಗಾಗಿ ದೇವನೂರರ ಧೋರಣೆ, ನಿಲುವುಗಳಲ್ಲಿ ಸ್ಪಷ್ಟತೆ, ಖಚಿತತೆ ಇದೆಯೆನಿಸಿದಾಗಲೂ ಇವರು ಬರೆಯುತ್ತಿರುವಾಗಲೂ ಇನ್ನೂ ಯೋಚಿಸುತ್ತಿರುವಂತೆಯೇ ಕಾಣುತ್ತದೆ. ವಿಚಾರ, ನಿಲುವುಗಳಿಗಿಂತ ಹೆಚ್ಚಾಗಿ ಓದುಗರಿಗೆ ತಲುಪುವುದು ಇನ್ನೂ ತಡಕಾಡುತ್ತಿರುವಾಗಿನ ಹಿಂದಿರುವ ತಳಮಳ ಮತ್ತು ವಿಷಾದವೇ.
ವಿವರಣೆ, ವಿಶ್ಲೇಷಣೆ, ಸಂಯೋಜನೆಗಳಿಗಿಂತ ಹೆಚ್ಚಾಗಿ ದೇವನೂರು ವಿಷಯದ ಮೂಲ ತಿರುಳಿಗೆ, ಸಾರಕ್ಕೆ ತಲುಪಲು, ಹೀಗೆ ತಲುಪಿದ್ದನ್ನು ಕೇಂದ್ರದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಾರೆ. ಮೇಲುನೋಟಕ್ಕೆ ಇದು ಬರಹದ ಸಂಗ್ರಹಶೀಲ ಗುಣ, ರೂಪಕ ಸ್ವಭಾವವನ್ನು ಹೆಚ್ಚಿಸುವ ಪ್ರಯತ್ನದಂತೆ ಕಂಡುಬಂದರೂ, ಈ ಪ್ರಯತ್ನದ ಹಿಂದಿರುವ ಧ್ಯಾನಶೀಲತೆ ಮತ್ತು ಏಕಾಗ್ರತೆ ಮುಖ್ಯವಾದದ್ದು. ನಾಲ್ಕಾರು ಚಿಂತಕರು, ಹತ್ತಾರು ಪುಸ್ತಕಗಳಲ್ಲಿ ಹೇಳಬಹುದಾದ್ದನ್ನು ಕೆಲವೇ ಲೇಖನಗಳಲ್ಲಿ ಹೇಳಲು ಸಾಧ್ಯವಿರುವುದು ಈ ಕಾರಣಕ್ಕಾಗಿ. ತಿರುಳು, ಸಾರವನ್ನು ಹಿಡಿದು ಹೇಳುವ ಬರವಣಿಗೆ ಒಮ್ಮೊಮ್ಮೆ ಸೂಕ್ತಿಯ ರೀತಿಯ ಮಾತುಗಳಿಗೆ, ಉಪದೇಶಾತ್ಮಕತೆಯ ಕಡೆಗೂ ಹೊರಳಿಬಿಡುತ್ತದೆ. ಮಾತಿನಲ್ಲಿ ಕರೆ ಕೊಡುವ ಧಾಟಿ ಬಂದು ಬಿಡುತ್ತದೆ. 'ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ' ಎಂಬ ಬರಹದಲ್ಲಿ 'ಬೇಕಾಗಿದೆ' ಪದವು ಎಷ್ಟು ಸಲ ಯಾಂತ್ರಿಕವಾಗಿ ಬಂದಿದೆಯೆಂಬುದನ್ನು ಉದಾಹರಣೆಗೆ ಗಮನಿಸಬಹುದು.
ಮಹಾದೇವರ ಬರವಣಿಗೆಯ ಇನ್ನೊಂದು ಮುಖ್ಯ ಸ್ವಭಾವವೆಂದರೆ ಬರವಣಿಗೆಯನ್ನು ಕ್ರಿಯಾಶೀಲತೆಯ ಮಟ್ಟಕ್ಕೆ ಏರಿಸಿಬಿಡುವುದು. ಒಂದು ಕ್ರಿಯೆ, ಒಂದು ಘಟನೆ, ಒಂದು ಪಲ್ಲಟ ಮಾಡುವಷ್ಟೇ ಪ್ರಭಾವವನ್ನೂ ಇವರ ಬರವಣಿಗೆಯೂ ಮಾಡಬಲ್ಲದು. ಮತ್ತಷ್ಟು ಕ್ರಿಯಾಶೀಲತೆಯನ್ನು, ಚಿಂತನಶೀಲತೆಯನ್ನು ಪ್ರೇರೇಪಿಸಬಲ್ಲದು. ಇಲ್ಲಿ ಬರವಣಿಗೆ ಬೇರೆಯಲ್ಲ, Activism ಬೇರೆಯಲ್ಲ. ತಮ್ಮ ಬರಹಗಾರನ ವ್ಯಕ್ತಿತ್ವ, ಹೋರಾಟಗಾರನ ವ್ಯಕ್ತಿತ್ವ ಎರಡನ್ನೂ ಒಂದೇ ಎಂದು ತಿಳಿದವರು ಮಾಡುವ ಬರವಣಿಗೆಯ ಧಾಟಿಯಿದು. ಇದನ್ನು ಗೌರವಿಸುತ್ತಲೇ ಒಂದು ಪ್ರಶ್ನೆಯನ್ನು ಎತ್ತಬಹುದು. ಈ ಸಂಗ್ರಹದಲ್ಲಿ ಲೋಕ ವಿಮರ್ಶೆಯ ಗುಣ ಮುಂದೆ ಬಂದಷ್ಟು ಆತ್ಮವಿಮರ್ಶೆಯ ಗುಣ ಮುನ್ನಡೆಗೆ ಬರುವುದಿಲ್ಲ. ದೇವನೂರು ತಮ್ಮನ್ನು ಒಂದು ಮನೋಧರ್ಮದ, ಒಂದು ಸಾಮಾಜಿಕ ಸ್ಥಿತಿಯ ಪ್ರತೀಕವಾಗಿಯೇ ನೋಡಿಕೊಂಡು ಬರೆಯುವುದು ಹೆಚ್ಚು. ದೇವನೂರರೇ ಮನುಷ್ಯರಾಗಿ, ವ್ಯಕ್ತಿಯಾಗಿ ಹೇಗೆ ಕಾಣುತ್ತಾರೆಂಬುದು- ಪ್ರತೀಕತೆ ಮತ್ತು ವಕ್ತಾರತನದಾಚೆಗೆ ಕುತೂಹಲವಾಗಿಯೇ ಉಳಿಯುತ್ತದೆ. ಮಾನವೀಯತೆ ಬಗ್ಗೆ, ಗಾಂಧಿ ಚಿತ್ರದ ಬಗ್ಗೆ ಇರುವ ಬರಹಗಳಲ್ಲಿ ಲೋಕವಿಮರ್ಶೆ ಮತ್ತು ಆತ್ಮವಿಮರ್ಶೆ ಎರಡೂ ಬೆರೆತಿವೆ ಮಾತ್ರವಲ್ಲ, ಇವರೆಡೂ ಬೇರೆ ಬೇರೆಯಲ್ಲ ಎಂಬ ಧಾಟಿಯೂ ಇದೆ. 'ಕುಸುಮಬಾಲೆ'ಯ ಪ್ರೇರಣೆ ಕುರಿತ ಬರವಣಿಗೆಯೂ ಇದೇ ರೀತಿಯದು. ಬುದ್ಧನ ಕುರಿತ ಬರಹಗಳಲ್ಲಿ ಲೋಕ ವಿಮರ್ಶೆಯಿಂದ ಪ್ರೇರಿತವಾದ ಸದಾಶಯ ಮತ್ತು ಕಳಕಳಿಯ ಮಾತುಗಳೇ ಮುಂದೆ ಬರುತ್ತವೆ. ಬರವಣಿಗೆಯ ಸಾಂದ್ರತೆ ಮತ್ತು ಕಲಕುವ ಗುಣವನ್ನು ಮಾನದಂಡವಾಗಿ ಇಟ್ಟುಕೊಂಡು ಓದುಗರು ಗುರ್ತಿಸುವುದಾದರೆ ಗಾಂಧಿ, ಬಾಬಾ ಸಾಹೇಬರಷ್ಟು ಬುದ್ಧ ಇನ್ನೂ ಮಹಾದೇವರ ಒಳಜಗತ್ತಿನ ಭಾಗವಾಗಿಲ್ಲವೆನಿಸುತ್ತದೆ. ಗಾಂಧಿ ಲೇಖನದಲ್ಲಿರುವ ಪಿಸುಮಾತಿನ ಧಾಟಿಗೂ, ಬುದ್ಧನಡಿಗೆ ಬರಹದಲ್ಲಿರುವ ಸಾರ್ವಜನಿಕ ಬಾಪೂರ ಶೈಲಿಯ ಕರೆ ನೀಡುವ ಧಾಟಿಗೂ ಇರುವ ವ್ಯತ್ಯಾಸ ಎದ್ದು ಕಾಣುತ್ತದೆ.

ಒಬ್ಬ ಸಂವೇದನಾಶೀಲ ಬರಹಗಾರರಾಗಿ ದೇವನೂರರಿಗೆ, ಸಕಾರಣವಾಗಿಯೇ ಜಾತಿ ಪದ್ಧತಿಯಿಂದ ನಮ್ಮ ಸಮಾಜದಲ್ಲಿ ಬಹುಕಾಲದಿಂದ ಉಳಿದೇಬಿಟ್ಟಿರುವ ಜಡತೆ, ಮಾನಸಿಕ ಹಿಂಸೆ, ಶೋಷಣೆ, ಖಿನ್ನತೆ- ಇವುಗಳನ್ನು ನಿರಂತರವಾಗಿ ಕಾಡಿವೆ. ಈ ಹಿನ್ನೆಲೆಯಲ್ಲಿ ದೇವನೂರು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಇತರ ಬರಹಗಾರರು, ಚಿಂತಕರೊಡನೆ ಹೋಲಿಸಿದಾಗ ಹೇಗೆ ಗ್ರಹಿಸುತ್ತಾರೆ ಎಂಬ ಪ್ರಶ್ನೆಯನ್ನು ಎದುರಿಸಲೇಬೇಕಾಗುತ್ತದೆ. ಕುವೆಂಪು, ಗಾಂಧಿ, ರಾಮಮನೋಹರ ಲೋಹಿಯಾರ ಪ್ರಭಾವವನ್ನು ದೇವನೂರು ಒಪ್ಪುತ್ತಾರೆ. ದೇವನೂರು ಧರ್ಮ, ಸಂಸ್ಕೃತಿಯನ್ನು ಸಾಮಾಜಿಕವಾಗಿಯೇ ಹೆಚ್ಚು ಗ್ರಹಿಸುತ್ತಾರೆನಿಸುತ್ತದೆ. ದೇವನೂರು ಒಪ್ಪದ, ಪ್ರತಿಭಟಿಸುವ ಎಷ್ಟೋ ಸಂಗತಿಗಳ ಬಗ್ಗೆ ಕುವೆಂಪು, ಗಾಂಧಿ, ಲೋಹಿಯಾರಿಗೂ ಇಷ್ಟೇ ಸಿಟ್ಟು, ವಿಷಾದವಿದೆ. ವ್ಯತ್ಯಾಸವೆಂದರೆ ಈ ಚಿಂತಕರು ಧರ್ಮ, ಸಂಸ್ಕೃತಿಯಲ್ಲಿರುವ ಸಾಂಸ್ಕೃತಿಕ, ಅಧ್ಯಾತ್ಮಿಕ, ಸಾಂಕೇತಿಕ, ಸೌಂದರ್ಯಾತ್ಮಕ ಸಂಗತಿಗಳ ಬಗ್ಗೆಯೂ ಗಮನ ಕೊಡುತ್ತಾರೆ. ಹಾಗೆ ನೋಡಿದರೆ ಈ ಚಿಂತಕರ್ಯಾರಿಗೂ, ಧರ್ಮದ ಸಂಸ್ಥಾನಿಕ, ಸಾಂಘಿಕ ರೂಪಗಳ ಬಗ್ಗೆ ಹೇಳಿಕೊಳ್ಳುವಂಥ ಬಲವೇನಿಲ್ಲ. ಬದಲಾವಣೆಯನ್ನು ಬಯಸುವಾಗಲೂ ನಮ್ಮ ಜೀವನದಲ್ಲಿ ಸಂಸ್ಕೃತಿಯಲ್ಲಿ ಸಾತತ್ಯವಾದದ್ದು ಏನಿರಬಹುದೆಂಬುದರ ಬಗ್ಗೆ ಈ ಚಿಂತಕರು ಸಮಾನ ಗಮನವನ್ನು ನೀಡುತ್ತಾರೆ. ಬುದ್ಧ, ವ್ಯಾಸ, ಪರಮಹಂಸ, ಪಂಪ, ಬೇಂದ್ರೆ, ಕುವೆಂಪು, ಗಾಂಧಿ, ವಿನೋಭಾ, ವಚನಕಾರರೆಲ್ಲ ತನ್ನ ಹಿನ್ನೆಲೆಯಲ್ಲಿ ಪ್ರೇರಣೆಗಿದ್ದಾರೆ ಎಂದು ಮತ್ತೆ ಮತ್ತೆ ನೆನಪಿಸುವ ದೇವನೂರರಿಗೆ ಇತರ ಚಿಂತಕರು ಗುರುತಿಸುವ ಧರ್ಮ- ಸಂಸ್ಕೃತಿಯ ಆಯಾಮಗಳು ಸಾಹಿತ್ಯದ ಸ್ವರೂಪ ಗೊತ್ತಿಲ್ಲವೆಂದಲ್ಲ. ಬರವಣಿಗೆಯಲ್ಲಿ, ಚಿಂತನೆಯಲ್ಲಿ ಮುನ್ನಡೆಗೆ ಬರುವುದಿಲ್ಲ. ಸಂವೇದನಾಶೀಲ ಓದುಗರು ದೇವನೂರರನ್ನು ಇತರ ಚಿಂತಕರು ಲೇಖಕರೊಡನೆಯೇ ಒಟ್ಟಾಗಿ ಇಟ್ಟುಕೊಂಡು ಓದುವುದರಿಂದ ಈ ಪ್ರಶ್ನೆ ಮುಖ್ಯವಾಗುತ್ತದೆ. ಸಂಸ್ಕೃತಿ, ಜನಜೀವನದ ಯಾವ ನರಗಳು ಬರವಣಿಗೆಯಲ್ಲ, ಚಿಂತನೆಯಲ್ಲಿ ಎಷ್ಟು ಮುನ್ನಡೆಗೆ ಬರಬೇಕೆಂಬುದು ಪ್ರತಿ ಬರಹಗಾರನ ವೈಯಕ್ತಿಕ ಆಯ್ಕೆ ಎಂಬುದು ನಿಜವಾದರೂ ಓದುಗನು ಯಾವೊಬ್ಬ ಲೇಖಕನನ್ನು ಪ್ರತ್ಯೇಕ ಶೂನ್ಯದಲ್ಲಿ ಓದುವುದಿಲ್ಲವಾದ್ದರಿಂದ ಇಲ್ಲಿ ಎತ್ತಿರುವ ಪ್ರಶ್ನೆಯು ಮುಖ್ಯವಾಗಿಯೇ ಉಳಿಯುತ್ತದೆ.
ದಮನಿತರ ವಿಶೇಷವಾಗಿ ದಲಿತರ ಬದುಕಿನಲ್ಲಾಗುತ್ತಿರುವ ಪಲ್ಲಟಗಳನ್ನು ಓದುಗರಾಗಿ, ನಾಗರಿಕರಾಗಿ ನಾವೆಲ್ಲ ಗ್ರಹಿಸಲು ದೇವನೂರರ ಚಿಂತನೆಯ ಮಾದರಿ ಎಷ್ಟು ಸಹಕಾರಿಯಾಗಬಲ್ಲದು ಎಂಬುದು ಇನ್ನೊಂದು ಮುಖ್ಯ ಪ್ರಶ್ನೆ. ನವ್ಯದ ರೂಪಕ ಮನೋಧರ್ಮದ ಹಿನ್ನೆಲೆಯಿಂದ ಬಂದದ್ದರಿಂದಲೋ ಇಲ್ಲ ತಮ್ಮನ್ನು ದಲಿತರ ಪ್ರತಿನಿಧಿ ಮಾತ್ರವೆಂದು ತಾವೇ ಗ್ರಹಿಸಿರುವುದರಿಂದಲೋ ದೇವನೂರರು ದಲಿತರ ಒಂದು ಸ್ಥಿತಿಯನ್ನೂ ಮತ್ತು ದಲಿತರ ಬದಲಾವಣೆ, ಪ್ರಗತಿಗಿರುವ ಒಂದು ಮಾರ್ಗವನ್ನು ಮಾತ್ರ ಗುರುತಿಸುತ್ತಾರೆನ್ನಿಸುತ್ತದೆ. ಇದು ದಲಿತರನ್ನು ವ್ಯಕ್ತಿಗಳನ್ನಾಗಿಯೂ, ಸಮೂಹವಾಗಿಯೂ ಒಂದೇ ಒಂದು ಎರಕದಲ್ಲಿ ಮಾತ್ರ ಗ್ರಹಿಸುವ ಕ್ರಮ. ಕಳೆದ ಮೂರು ನಾಲ್ಕು ದಶಕಗಳಲ್ಲಿ ಸಮಾಜದಲ್ಲೂ, ದಲಿತರಲ್ಲೂ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ದಲಿತರು, ವ್ಯಕ್ತಿಗಳಾಗಿಯೂ, ಸಮೂಹವಾಗಿಯೂ ಬದಲಾವಣೆಯ ಎಲ್ಲ ನೆಲೆಗಳಿಗೆ, ಕೊರಳುಗಳಿಗೆ ತೆರೆದುಕೊಂಡಿದ್ದಾರೆನಿಸುತ್ತದೆ. ದಲಿತರಿಗೆ ತಮ್ಮ ವಿಶಿಷ್ಟತೆಯ ತಿಳಿವು ಇರುವಷ್ಟೇ, ಬೇರೆ ಬೇರೆ ಸ್ತರಗಳಲ್ಲಿ, ಆಧುನೀಕರಣಕ್ಕೆ, ಪಾಶ್ಚ್ಯಾತೀಕರಣಕ್ಕೆ, ಸಂಸ್ಕೃತೀಕರಣಕ್ಕೆ, ಜಾಗತೀಕರಣಕ್ಕೆ ಮಧ್ಯಮವರ್ಗದ ಜೀವನ ಶೈಲಿಗೆ- ತಮ್ಮನ್ನು ಪ್ರಜ್ಞಾಪೂರ್ವಕವಾಗಿಯೂ, ಅಪ್ರಜ್ಞಾಪೂರ್ವಕವಾಗಿಯೂ ತೆರೆದುಕೊಂಡಿರುವ, ತೆರೆದುಕೊಳ್ಳಬೇಕಾದ ಒತ್ತಡಗಳು ಮೂಡಿಬಂದಿವೆ, ಇಲ್ಲ ಒಮ್ಮೊಮ್ಮೆ ದಲಿತರೇ ಇಂಥ ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ರೀತಿಯ ಒತ್ತಡಗಳು ದಲಿತರನ್ನ ಸಮಾಜದ ಇತರ ಸ್ತರಗಳಿಗೆ ಆಂತರಿಕವಾಗಿ ಸಮೀಪಕ್ಕೆ ತರುತ್ತವೆ. ದಲಿತರ ಆಯ್ಕೆ ಮತ್ತು ಜವಾಬ್ದಾರಿ ಹಿಂದೆಂದಿಗಿಂತಲೂ, ಸವರ್ಣೀಯರಿಗೆ ಇರುವುದಕ್ಕಿಂತಲೂ ಹೆಚ್ಚಾಗಿ ಸಂಕೀರ್ಣವಾಗಿದೆ. ಈ ಸಂಕೀರ್ಣತೆಯನ್ನು ಎದುರಿಸಲು ದಲಿತರು ಕಂಡುಕೊಳ್ಳುತ್ತಿರುವ ಮಾರ್ಗಗಳು, ನಮ್ಮ ರಾಜಕೀಯ- ಸಾಮಾಜಿಕ ಸಂಘಟನೆಗಳು ಗ್ರಹಿಸಿದಷ್ಟು ಸೂಕ್ಷ್ಮವಾಗಿವೆ. ದಲಿತ ಸಮಾಜದ ತಳದಲ್ಲಿ ಸಿಕ್ಕಿ ಹಾಕಿಕೊಂಡಿರುವವರ ನೋವು- ನಲಿವುಗಳ ನೆಲೆಗಳನ್ನು ಗ್ರಹಿಸುವ ದೇವನೂರರ ಬರವಣಿಗೆ, ಚಿಂತನಾ ಕ್ರಮ ಸಮಕಾಲೀನ ದಲಿತ ಮತ್ತು ಭಾರತೀಯ ಸಮಾಜದ ವೈವಿಧ್ಯಮಯ ಪಲ್ಲಟಗಳನ್ನು ಸೂಕ್ಷ್ಮಗಳನ್ನು ಗ್ರಹಿಸುವ ಪ್ರಯತ್ನ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ದೇವನೂರರ ಚಿಂತನೆಯ ಮಾದರಿ ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ರೂಪುಗೊಂಡ ಚಿಂತನ ಮಾದರಿ, ಚೌಕಟ್ಟುಗಳಲ್ಲೇ ಸ್ಥಗಿತಗೊಂಡಿದೆಯೆನಿಸುತ್ತದೆ.
ಪುಸ್ತಕದ ಒಟ್ಟು ಸ್ವರೂಪವನ್ನು ವಿಶ್ಲೇಷಿಸುವ ಭರದಲ್ಲಿ ಸಂಗ್ರಹದ ಇನ್ನೆರಡು ಮುಖ್ಯ ಗುಣಗಳನ್ನು ಮರೆಯಬಾರದು. ಬರಹಗಳ ವ್ಯಾಪ್ತಿ ಮತ್ತು ದೇವನೂರರ ತುಂಟ ಹಾಸ್ಯಪ್ರಜ್ಞೆ ಸಂಗ್ರಹದ ಒಟ್ಟು ಧ್ವನಿಯಲ್ಲಿ ಬೆರೆತಿದೆ. ದೇವರು, ಉಸ್ತಾದರು, ಎಲ್. ಬಸವರಾಜು, ಲಂಕೇಶ್, ಬೇಸಾಯ, ಭಾಷೆಯ ಲಯ, ಸಣ್ಣಕತೆ, ಕಡಿದಾಳ್ ಶಾಮಣ್ಣ, ಸಂವಿಧಾನ- ಪಂಪ, ಕಾರುಣ್ಣ- ದೇವನೂರರ ಆಸಕ್ತಿ, ಕುತೂಹಲದ ಹರಮ- ಸಮಕಾಲೀನ ಬರಹಗಾರರಲ್ಲಿ ಇಲ್ಲವೆನ್ನುವಷ್ಟು ವಿಶಿಷ್ಟ. ಇಷ್ಟೊಂದು ವಿಷಯ ವೈವಿಧ್ಯವನ್ನು ದೇವನೂರು ಮಾಹಿತಿಯ, ವಿಶ್ಲೇಷಣೆಯ ಸ್ತರದಲ್ಲಿ ಗ್ರಹಿಸುವುದಿಲ್ಲ. ಸಂವೇದನೆಯ ಸ್ತರದಲ್ಲಿ ಗ್ರಹಿಸುತ್ತಾರೆಂಬುದು ಮುಖ್ಯ. ನಂಜುಂಡಸ್ವಾಮಿ, ಕೃಷ್ಣ ಆಲನಹಳ್ಳಿ, ಲಂಕೇಶ್, ರಾಮದಾಸ್- ಇಂಥ ಆಪ್ತರ ಬಗ್ಗೆ ಬರೆಯುವಾಗಲೂ ದೇವನೂರು ತಮ್ಮ ವಸ್ತುನಿಷ್ಠತೆಯನ್ನು, ಹಾಸ್ಯಪ್ರಜ್ಞೆಯನ್ನು ಒಟ್ಟಿಗೇ ಓದುಗರಿಗೆ ದಾಟಿಸುತ್ತಾರೆ. ಸರ್ವೋದಯ ಕರ್ನಾಟಕದ ರಾಜಕೀಯ ಆಕಾಂಕ್ಷಿಯನ್ನು ಕುರಿತ ಬರಹದಲ್ಲಿ ಆದರ್ಶದ ಹಂಬಲ, ಸಮಕಾಲೀನ ಬಗ್ಗೆ ವಿಷಾದ, ತನ್ನಂಥವರು ಮಾಡುವ ಪ್ರಯತ್ನ- ಪ್ರಯೋಗಗಳ ಸೀಮಿತ ಪ್ರಭಾವ- ಎಲ್ಲವನ್ನೂ ದಶಕದಿಂದಲೂ, ಹಾಸ್ಯದಿಂದಲೂ, ವಿಷಾದದಿಂದಲೂ ಹೇಳಿಕೊಳ್ಳುತ್ತಾ ಹೋಗುವ ಪರಿ ನಮ್ಮೆಲ್ಲರ... ಅಸಹಾಯಕತೆ, ಗೊಂದಲಗಳನ್ನು ಸೂಚಿಸುತ್ತಲೂ ನಮ್ಮ ಬಗ್ಗೆಯೇ ನಮಗೆ ಸಿಟ್ಟು ಮೂಡಿಸುತ್ತದೆ, ನಗು ಬರಿಸುತ್ತದೆ. 'ರಾಜಕೀಯ ಆಟದ ಮೈದಾನದಲ್ಲಿ ಒಳನುಗ್ಗಿ ಆಡಲು ಧೈರ್ಯವಿಲ್ಲದೆ, ಹೊರಹೋಗಲೂ ಮನಸ್ಸಿಲ್ಲದೆ ಆಡುವ ಆಟಗಾರರಿಗೆ ಚೆಂಡು ಎತ್ತಿಕೊಡುವ ಹುಡುಗನಂತೆ ನಮ್ಮ ಸ್ಥಿತಿಯಾಗಿತ್ತು'.
'ಎದೆಗೆ ಬಿದ್ದ ಅಕ್ಷರ'ದ ಸಂಗ್ರಹದಲ್ಲಿ ಕಾಣುವ ಬರವಣಿಗೆಯ ಸ್ವಭಾವ ವೈಚಾರಿಕತೆ- ಆದರ್ಶದ ಹಂಬಲ, ಕನ್ನಡ ಸಂಸ್ಕೃತಿಯ ಮುಖ್ಯ ಘಟ್ಟಗಳಲ್ಲಿ ಓದುಗರ ತಲೆಮಾರುಗಳನ್ನೇ ಪ್ರಭಾವಿಸಿದ ಕುವೆಂಪುರವರ 'ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ', ಕಾರಂತರ 'ಬಾಳ್ವೆಯೇ ಬೆಳಕು', ಅನಂತಮೂರ್ತಿಯವರ 'ಪ್ರಜ್ಞೆ ಮತ್ತು ಪರಿಸರ'ದಂಥ ಮುಖ್ಯ ಕೃತಿಗಳನ್ನು ನೆನಪಿಗೆ ತರುತ್ತವೆ. ಇಂಥ ಮತ್ತು ಇಂಥ ಸಮಾನ ಮನಸ್ಕರ ಕೃತಿಗಳನ್ನು ಕನ್ನಡಿಗರು ಓದುವ ತನಕವೂ ಮಹಾದೇವರ ಅಕ್ಷರಗಳನ್ನು ತಮ್ಮೊಳಗೆ ಕಸಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ದಶಕಗಳ ಕಾಲಾಂತರದಲ್ಲಿ ಬರೆದಿದ್ದರೂ ಹಲವು ದಶಕಗಳಿಗೊಮ್ಮೆ ಮಾತ್ರ ಒಂದು ಸಂಸ್ಕೃತಿಯಲ್ಲಿ ಇಂಥ ಕೃತಿಗಳು ಹೊರಬರುತ್ತವೆ. ಇದು ಮಹಾದೇವರ ಕೃತಿಯೆನ್ನುವುದಕ್ಕಿಂತಲೂ ಕನ್ನಡ ಸಂಸ್ಕೃತಿ ಈ ಕೃತಿ ಬರೆಯಲು ಮಹಾದೇವರನ್ನೇ ಒಮ್ಮೆ ಮತ್ತು ಈಗ ಆಯ್ಕೆ ಮಾಡಿಕೊಂಡಿದೆ ಎನ್ನುವುದೇ ಹೆಚ್ಚು ಸೂಕ್ತ.
ಪ್ರಸಿದ್ಧ, ಸ್ಥಾಪಿತ ಲೇಖಕರ ಕೃತಿಗಳು ಪ್ರಕಟವಾದಾಗಲೆಲ್ಲ ಸ್ಥಾನೀಯ ವಿಮರ್ಶಕರು ಮತ್ತು ವಿಶ್ವವಿದ್ಯಾಲಯಗಳ ನಾಯಕರು ಕೃತಿಕಾರನನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಂಪ್ರೀತ ಧಾಟಿಯ ವಿಮರ್ಶೆಗಳನ್ನು ಬರೆದು ಕೃತಿಯ ಪ್ರಚಾರೋದ್ಯಮ ಭಾಗವಾಗುವುದು ಲಾಗಾಯ್ತಿನಿಂದ ಬಂದ ಒಂದು ಕ್ರಮ. ಬದಲಿಗೆ ಈ ಸಮೀಕ್ಷೆಯಲ್ಲಿ ಕೃತಿಯು ಓದುಗನಿಗೆ ಕಾಣಿಸುವ ರೀತಿಯನ್ನು, ಕೃತಿಯ ಸಾಂಸ್ಕೃತಿಕ ಸಂದರ್ಭವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗಿದೆ. ಈ ಸಮೀಕ್ಷೆಗೆ ಬೇಕಾದ ಸ್ಪಷ್ಟತೆ ಮತ್ತು ನೈತಿಕ ಧೈರ್ಯವನ್ನು ನನ್ನಲ್ಲಿ ತಮ್ಮಗಳ ಒತ್ತಾಯದಿಂದ ತುಂಬಿದವರು ಆತ್ಮೀಯರಾದ ಗಿರೀಶ್ ವಾಘ್ ಮತ್ತು ಡಿ.ಎಸ್. ನಾಗಭೂಷಣ, ಸಮೀಕ್ಷೆಯ ಚೌಕಟ್ಟು ಮತ್ತು ವಿಚಾರಗಳ ಜವಾಬುದಾರಿ ಮಾತ್ರ ನನ್ನದೇ.

- ಕೆ. ಸತ್ಯನಾರಾಯಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.