ಸ್ವರ ಸಂಚಾರ
ಸಂಗೀತವು ರಾಗ ಎಂಬ ಭವನ, ಸ್ವರಗಳೆಂಬ ಇಟ್ಟಿಗೆಗಳನ್ನು ಬಳಸಿಕೊಂಡು ಭವ್ಯವಾಗಿ ಬೆಳೆಯುತ್ತದೆ. ಈ ಅಂಶಗಳಿಂದಲೇ ರಾಗಗಳಲ್ಲಿ ಆಲಾಪನೆಗಳ ವಿನ್ಯಾಸಗಳು ನೂರಾರು ವರ್ಷಗಳಿಂದ ಬೆಳೆದಿವೆ. ಇನ್ನೂ ಬೆಳೆಯುತ್ತಲೇ ಇವೆ.
'ಛಾಯಾನಟ್' ಎಂಬ ರಾಗದಲ್ಲಿ, ಅವರೋಹಣದಲ್ಲಿ ಪ - ಪಂಚಮದಿಂದ ರೆ- ರಿಷಭಕ್ಕೆ ಬರುವ ಒಂದು ವಿಶಿಷ್ಟ ಶೈಲಿ ಇದೆ. ಆ ಪ-ರೆ ಸಂಗತಿಯಲ್ಲಿ 'ರೆ' ಎಲ್ಲಿ ಹುಟ್ಟುತ್ತದೆ ಎಂಬುದೇ ಒಂದು ವಿಸ್ಮಯ. ಯಾಕೆಂದರೆ ಆ 'ರೆ' - 'ಪ' ಒಳಗಡೆಯೇ ಹುಟ್ಟಿಬಿಟ್ಟಿರುತ್ತದೆ. 'ಪ'ದ ಒಳಗಡೆ ಹುಟ್ಟಿ, ಜಾರಿಕೊಂಡು ತನ್ನ ಸ್ಥಾನಕ್ಕೆ ಬಂದು ನಿಲ್ಲುವ ಅದರ ಅಂದವೇ ಅಂದ. ನೂರಾರು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವಷ್ಟು ಮೋಹಕ.
ಒಬ್ಬ ಗಾಯಕರು ಅದಕ್ಕೆ ಕೊಟ್ಟ ಉದಾಹರಣೆ ಹೀಗಿದೆ- 'ಛಾಯಾನಟ್‌ನ 'ಪ-ರೆ' ಎಂದರೆ 'ಪ' ದಿಂದ 'ರೆ' ಗೆ ರೋಪ್‌ವೇನಲ್ಲಿ ಹೋದ ಹಾಗೆ. ಆಗ ಕೆಳಗಡೆ ಇರುವ ಗಿಡಮರಗಳು, ಮನೆಗಳು, ಬಿಲ್ಡಿಂಗ್‌ಗಳು ಎಲ್ಲ ಕಾಣುತ್ತವೆ. ಇದೇ ಥರಹ 'ಗೌಡ ಸಾರಂಗ್' ಎಂಬ ರಾಗದಲ್ಲೂ ಅವರೋಹಣದಲ್ಲಿ 'ಪ-ರೆ' ಎಂಬ ಅಂಶವೇ ಇದೆ. ಆದರೆ ಇದು ಅಲ್ಲಿಂದ ಹಾರಿ ಬಂದ ಹಾಗೆ, ಬೇಗ ತಲುಪುತ್ತೇವೆ. ಹ್ಝಾಡಿ ತಲುಪುವ ಸ್ಥಳದ ಕಡೆ ಮಾತ್ರ ಲಕ್ಷ್ಯವಿರುತ್ತದೆ. ಆದರೆ ದಾರಿಯ ಅಂಶಗಳಾವವೂ ಗಮನಕ್ಕೆ ಬಂದಿರುವುದಿಲ್ಲ.
ಒಬ್ಬ ಕಲಾವಿದರು ಹೇಳುವಂತೆ, ಒಂದು ರಾಗದ ಎರಡೇ ಸ್ವರಗಳನ್ನು ಉದಾಹರಣೆಗೆ 'ಸಾ-ರೆ'ಯನ್ನು ಮಾತ್ರ ಬಳಸಿಕೊಂಡು ಎಷ್ಟು ವಿಧದ ವಿನ್ಯಾಸ ಮಾಡಬಹುದು ಎಂಬುದನ್ನು ಚಿಂತಿಸಿ. ಅದೇ ಕೊನೆಯಿಲ್ಲದಂತೆ ಬೆಳೆಯತೊಡಗುತ್ತದೆ. ಸಹಜವಾಗಿ 'ಸಾ-ರೆ' ಎನ್ನಬಹುದು. 'ಸಾ' ದಿಂದ 'ರೆ'ಗೆ ನಿಧಾನವಾಗಿ ಜಾರಿಕೊಂಡು ಹೋಗಬಹುದು. 'ಸಾ'ದಿಂದ 'ರೆ'ಗೆ ಎಗರಿಹೋಗಬಹುದು. 'ಸಾ' ಅನ್ನು ನಿಂತಲ್ಲೇ ಅಲ್ಲಾಡಿಸಿ 'ರೆ' ಗೆ ಹೋಗಬಹುದು. 'ರೆ'ಗೆ ಹೋಗಬೇಕೆಂಬುದನ್ನೇ ಮರೆತು 'ಸಾ'ದಲ್ಲಿ ತಲ್ಲೀನವಾಗಿ , ಇನ್ನೇನು ಉಸಿರುಮುಗಿಯುತ್ತಿದೆ ಎಂದಾಗ 'ರೆ'ಗೆ ಹೋಗಬಹುದು. 'ಸಾ' ದಲ್ಲಿ 'ರೆ' ಹುಟ್ಟಿ 'ರೆ'ವರೆಗೆ ಹೋಗಿತಲುಪಬಹುದು. 'ಸಾ'ದಲ್ಲಿ ನಿಲ್ಲದೇ 'ಸಾ' ಎಂದು ಉಚ್ಚರಿಸದೇ 'ಸಾ'ದಿಂದ 'ರೆ'ಗೆ ಸಾಗಬಹುದು. 'ಸಾ' ಅನ್ನು ಒದ್ದು 'ರೆ'ಗೆ ಹೋಗಬಹುದು. ಆಂದೋಲನದಲ್ಲಿ 'ಸಾ-ರೆ' ಹಾಡಬಹುದು. ಗಮಕ ಅಂಶವನ್ನು ಬಳಸಿ ಹಾಡಬಹುದು. ಇನ್ನೂ ಎಷ್ಟೋ...ಅದಕ್ಕೆ ಕೊನೆಯೇ ಇಲ್ಲ.
ಇದೇ ಸೃಜನಶೀಲತೆಯ ಮೂಲ. ಒಬ್ಬ ಕಲಾವಿದನ ವಿಚಾರದ ಸಿರಿವಂತಿಕೆ, ಅವನ ವಿಭಿನ್ನತೆ ಎಲ್ಲಕ್ಕೂ ಮೂಲ. ಇಂತಹ ಅಂಶಗಳೇ ಶಾಸ್ತ್ರೀಯ ಸಂಗೀತದಲ್ಲಿ ಭಾವನೆಯ ಜತೆಜತೆಗೇ ಬುದ್ಧಿಯನ್ನೂ ಬೆಳೆಸುವ ಮಹತ್ವದ ಪಾತ್ರ ವಹಿಸುತ್ತವೆ.
-ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

