ಸಿಪಾಯಿ ಗಂಗೆ
ಅವರು ಮನಸ್ಸು ಮಾಡಿದ್ದಿದ್ದರೆ ಅಲಹಾಬಾದ್‌ನ ಸಂಗಮದ ತಟದಲ್ಲಿ ಭಾರೀ ಪ್ರಚಾರ ಪಡಕೊಂಡು ಬಿಡಬಹುದಿತ್ತು. ರಾಷ್ಟ್ರೀಯ...

ಅವರು ಮನಸ್ಸು ಮಾಡಿದ್ದಿದ್ದರೆ ಅಲಹಾಬಾದ್‌ನ ಸಂಗಮದ ತಟದಲ್ಲಿ ಭಾರೀ ಪ್ರಚಾರ ಪಡಕೊಂಡು ಬಿಡಬಹುದಿತ್ತು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹೀರೋ ಆಗಬಹುದಿತ್ತು. ಅಷ್ಟಕ್ಕೂ ಅವರಿಗಿರುವ ಪದವಿಗಳು, ವಿದ್ವತ್ತು, ಜನಬೆಂಬಲ, ಅಧಿಕಾರಗಳನ್ನು ಬಳಸಿಕೊಂಡು ಇನ್ನಿಲ್ಲದಂತೆ ಐಷಾರಾಮಿ ಬದುಕು ನಡೆಸಬಹುದಿತ್ತು. ಅದೂ ಬೇಡ ನೆಮ್ಮದಿಯಾಗಿ ಒಡಾಡಿಕೊಂಡು, ಕುಟುಂಬ- ಬಂಧುಗಳ ಜತೆ ಹಾಯಾಗಿರಬಹುದಿತ್ತು. ಒಂದೊಮ್ಮೆ ಸಂನ್ಯಾಸದ ಇಚ್ಛೆಯೇ ಇದ್ದರೂ ಅಧ್ಯಾತ್ಮದ ಬದುಕಲ್ಲಿ ವಿಹರಿಸಬಹುದಾಗಿತ್ತು.
ಎಲ್ಲವನ್ನೂ ನಿರಾಕರಿಸಿ 80ರ ಈ ಇಳಿವಯಸ್ಸಲ್ಲಿ ಗಂಗೆಗಾಗಿ ಜೀವ ಸಮರ್ಪಣೆಗೆ ಅಣಿಯಾಗಿದ್ದಾರೆ. ದೇವನದಿಯ ಸಂರಕ್ಷಣೆಗಾಗಿ ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕಿಳಿದಿದ್ದಾರೆ. ನಮ್ಮ ಸರ್ಕಾರಗಳು ಈಗ ಗಂಗೆಯ ಪಾವಿತ್ರ್ಯ ಮರಳಿ ತರಲು ಏನು ಮಾಡುತ್ತವೋ ಇಲ್ಲವೋ, ಜನ ಎಚ್ಚೆತ್ತುಕೊಂಡು ನದಿಯ ಮಾಲಿನ್ಯವನ್ನು ತಡೆಯುತ್ತಾರೋ ಇಲ್ಲವೋ... ಆದರೆ ಈ ಗಂಗಾಪುತ್ರ ಮಾತ್ರ ಯಾರು ಏನೇ ಮಾಡಲಿ ಬಿಡಲಿ, ತಾವು ಮಾತ್ರ ಗಂಗೆಯ ತಟ ಮತ್ತು ಗಂಗಾ ಆಂದೋಲನ, ಹೋರಾಟಗಾರರು, ಸರಕಾರ, ಮಾಧ್ಯಮ ಎಲ್ಲದರಿಂದ ದೂರವಿದ್ದು, ನರ್ಮದೆಯ ಉಗಮಸ್ಥಾನದಲ್ಲಿ 35 ದಿನಗಳಿಂದ ನಿರಶನ ಕುಳಿತುಬಿಟ್ಟಿದ್ದಾರೆ.
ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ (ಪ್ರೊ.ಜಿ.ಡಿ. ಅಗರ್‌ವಾಲ್) ಗಂಗೆಗಾಗಿ ಜ.26ರಿಂದ ಉಪವಾಸ ಕೂತಿದ್ದಾರೆ. ಅವರ ಉಪವಾಸ ತೋರಿಕೆಯದ್ದಲ್ಲ. ಅಸಲಿಗೆ ಅದು ಹೋರಾಟವೇ ಅಲ್ಲ. ಗಂಗೆಗಾಗಿನ ತಪಸ್ಸು. ಗಂಗಾ ಮಡಿಲಲ್ಲಿ ಜನಿಸಿದ ಆ ಮಾತೆಯ ಪ್ರತಿ ಮಕ್ಕಳ ಕರ್ತವ್ಯ. ಬಹುಶಃ ಇದಕ್ಕಾಗಿಯೇ ಸ್ವಾಮಿ ಸ್ವಾನಂದರು ಯಾರಿಗೂ ಕಷ್ಟ ಕೊಡದೆ ತಾವೇ ಅದನ್ನು ಅನುಭವಿಸುವಲ್ಲಿ ಮಗ್ನರಾಗಿದ್ದಾರೆ.
ಇದೇ ಸತ್ಯಾಗ್ರಹದ ನಿಜವಾದ ಪರಿಭಾಷೆ. ನಮ್ಮ ಸಂಸ್ಕೃತಿಯ ಮಾರ್ಗವೂ ಹೌದು, ಗಾಂಧೀ ಮಾರ್ಗವೂ ಹೌದು. ಏನಾಗುತ್ತದೋ, ಇಲ್ಲವೋ; ಗಂಗೆ ಮತ್ತೆ ಶುದ್ಧಗೊಳ್ಳುತ್ತಾಳೋ ಇಲ್ಲವೋ; ಆಕೆಯ ಮೇಲಿನ ದೌರ್ಜನ್ಯ ನಿಲ್ಲುತ್ತದೋ ಇಲ್ಲವೋ... ಆದರೆ ಸ್ವಾಮೀಜಿಯವರ ಈ ತಪಸ್ಸನ್ನು ಭವಿಷ್ಯ ಎಂದೆಂದಿಗೂ ಗೌರವದೊಂದಿಗೆ ನೆನಪಿಸಿಕೊಳ್ಳುತ್ತದೆ.
ಹಾಗೆಂದು ಸ್ವಾಮಿ ಸ್ವಾನಂದರ ಗಂಗೆಗಾಗಿನ ಇಂಥ ನಿರಶನ ಇದೇ ಮೊದಲೇನೂ ಅಲ್ಲ. ಇದಕ್ಕೆ ಮುಂಚೆಯೂ ಅವರು ಅನೇಕ ಬಾರಿ ಹೀಗೆ ಉಪವಾಸ ಕುಳಿತು ಸಾವಿನ ದವಡೆಗೆ ಸಿಲುಕಿ ವಾಪಸಾಗಿದ್ದರು. 2012ರಲ್ಲೇ ಅವರು ಎರಡೂವರೆ ತಿಂಗಳು ಉಪವಾಸ ಮಾಡಿದ್ದರು. ಅವರ ಯಾವ ಪ್ರಯತ್ನಗಳನ್ನೂ ಕೇವಲವಾಗಿ ನೋಡುವುದು ಯಾರಿಗೂ ಸಾಧ್ಯವಾಗುವುದೇ ಇಲ್ಲ. ಸ್ವತಃ ಸರಕಾರಕ್ಕೂ. ಉತ್ತರಕಾಶಿಯ ಮೇಲೆ ಮೂರು ಅಣೆಕಟ್ಟುಗಳನ್ನು ಕಟ್ಟುವ ಯೋಜನೆ ರದ್ದುಗೊಳಿಸುವಲ್ಲಿ ಅವರು ತೋರಿದ ಬದ್ಧತೆಯನ್ನಂತೂ ಯಾರೂ ಕಡೆಗಣಿಸುವಂತಿಲ್ಲ. ಅವರು ಪ್ರತಿಬಾರಿ ನಿರಶನಕ್ಕೆ ಕೂತಾಗಲೂ ಇಡೀ ಸಮಾಜ ಮತ್ತು ಸರ್ಕಾರ ಖುದ್ದಾಗಿ ಬಂದು ಮಂಡಿಯೂರಿ ಕುಳಿತು ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ನೀಡಿವೆ.
ಆದರೆ, ಸ್ವಾಮಿ ಸ್ವಾನಂದರು ಉಪವಾಸ ಶುರುಮಾಡಿ ತಿಂಗಳು ಕಳೆದಿದ್ದರೂ, ಅವರ ಆರೋಗ್ಯ ಹದಗೆಡುತ್ತಿದ್ದರೂ, ಯಾವ ಪ್ರತಿಕ್ರಿಯೆಯೂ ಬಂದಿಲ್ಲದಿರುವುದು ಇದೇ ಮೊದಲೇನೋ?ಅಧಿಕಾರಸ್ಥರ ಕಡೆಯಿಂದಲಾಗಲೀ, ಸಮಾಜದಿಂದಾಗಲೀ, ಗಂಗೆಯ ಹೆಸರಿನಲ್ಲಿ ತಾವು ಹೆಸರು ಮಾಡಿಕೊಳ್ಳುತ್ತಿರುವ ಹಲವು ಸಂಘಟನೆಗಳಾಗಲೀ, ರಾಜಕೀಯ ಪಕ್ಷಗಳಾಗಲೀ ಇನ್ನೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಸುದ್ದಿಯ ಹಸಿವಿರುವ ಯಾವ ಮಾಧ್ಯಮಗಳೂ ಈ ವಿಷಯದಲ್ಲಿ ತಿರುಗಿ ನೋಡಿಲ್ಲ. ಇದು ಅಚ್ಚರಿ ಅಲ್ಲವೇ?
ಒಬ್ಬ ಅಣ್ಣಾ ಹಜಾರೆ ಉಪವಾಸ ಕುಳಿತರೆ ಇಡೀ ದೇಶಕ್ಕೆ ಕೇಳಿಸುವಂತೆ ಕೂಗೆಬ್ಬಿಸುವವರಿಗೂ ಇದು ಇಶ್ಯೂ ಅಲ್ಲ. ಫೇಸ್‌ಬುಕ್‌ನಲ್ಲಿ ನಿರಂತರ ಲೈಕ್ ಒತ್ತುವ ಯುವ ಜನತೆಗೂ ಇದು ತಮ್ಮ ವಾಲ್‌ಗೆ ಪೇಸ್ಟ್ ಆಗುವ ಸಂಗತಿ ಎನಿಸಿಲ್ಲ. ಸ್ವಾಮಿ ಸಾನಂದರು ಖುದ್ದು ರಾಷ್ಟ್ರೀಯ ಗಂಗಾ ಸೇವಾ ಅಭಿಯಾನದ ಪ್ರಮುಖರಾಗಿದ್ದರೂ ಅದು ನಿರಶನವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಸ್ವಾಮಿ ಸಾನಂದರ ಈ ತಪಸ್ಯೆ ವೈಯಕ್ತಿಕವಾದುದೇ ಆಗಿರಬಹುದು. ಎಲ್ಲದರ ಹೊರತಾಗಿಯೂ ಗಂಗೆಯ ಚಿಂತೆ ಇರುವವರಿಗೆ ಗಂಗಾಪುತ್ರನ ಬಗ್ಗೆ ಚಿಂತೆ ಇಲ್ಲವೇ? ಗಂಗೆಗಾಗಿ ಪ್ರಾಣ ಕೊಡುವಂಥ ಕಾರ್ಯಕರ್ತರ ಬಗ್ಗೆ ಕಾಳಜಿ ವಹಿಸದೆ ಗಂಗಾ ಹೋರಾಟ ಪುಷ್ಟಿ ನೀಡಲು ಸಾಧ್ಯವೇ? ಕೇವಲ ಸಮಸ್ಯೆಯೊಂದಕ್ಕೆ ಸಹಾನುಭೂತಿ ವ್ಯಕ್ತಪಡಿಸುವುದರೊಂದಿಗೆ ನಮ್ಮ ಜವಾಬ್ದಾರಿಗಳು ಮುಗಿದು ಹೋಗುತ್ತವೆಯೇ? ಇಂಥ ಮನಸ್ಥಿತಿಯಿಂದಾಗಿಯೇ ವರ್ಷದ ಹಿಂದೆ ಸ್ವಾಮಿ ನಿಗಮಾನಂದರಂಥ ಯುವ ಗಂಗಾಪುತ್ರನನ್ನು ಕಳೆದುಕೊಂಡಿದ್ದು.
ನಿಮಗೆ ನೆನಪಿರಬಹುದು, ಗಂಗಾ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನದಿಯ ಶುದ್ಧೀಕರಣಕ್ಕೆ ಆಗ್ರಹಿಸಿ 115 ದಿನ ಉಪವಾಸ ಕುಳಿತ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರು ಇಂಥದ್ದೇ ನಿರ್ಲಕ್ಷ್ಯದಿಂದ ಕಳೆದ ಜೂನ್ 14ರಂದು ದೇಹಾಂತರಾದರು. ಮತ್ತೆ ಅದೇ ತಪ್ಪು ಯಾಕೆ? ಸಂತರೊಬ್ಬರ ಬಗೆಗಿನ, ಅವರ ಉದ್ದೇಶದ ಬಗೆಗಿನ ಈ ನಿರ್ಲಕ್ಷ್ಯ ನಮ್ಮ ನಿಷ್ಠೆಯನ್ನೇ ಪ್ರಶ್ನಿಸುವಂಥದ್ದು.
ಪವಿತ್ರ ದೇವನದಿಯ ಸಂರಕ್ಷಣೆಗಾಗಿಯೇ 80ರ ಇಳಿವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದವರು ಪ್ರೊ. ಜಿ.ಡಿ. ಅಗರವಾಲರು. ಅವರ ಈ ನಿರಶನ ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯಿಂದ ಶುರುವಾಗಿ ನರ್ಮದಾ ತಟ ದಾಟಿ ವಾರಾಣಸಿಗೆ ತಲುಪಿದೆ. ತೀರಾ ಇತ್ತೀಚೆಗೆ ಸಿಕ್ಕ ಮಾಹಿತಿಯ ಅನುಸಾರ ಸ್ವಾಮೀಜಿಯವರ ಆರೋಗ್ಯ ಹದಗೆಡುತ್ತಿದೆ. ದೇಹದ ಮೇಲೆ ಹುಣ್ಣುಗಳಾಗಿವೆ. ಇದರ ನಡುವೆಯೂ ಸಭೆಯೊಂದರಲ್ಲಿ ಪಾಲ್ಗೊಳ್ಳಬೇಕೆಂದು ಅವರಿಗೆ ಸಂನ್ಯಾಸ ದೀಕ್ಷೆ ನೀಡಿದ ಸ್ವಾಮಿ ಅವಿಮುಕ್ತೇಶ್ವರಾನಂದರು ಆದೇಶ ನೀಡಿದ್ದರಿಂದ ಅದರ ಪಾಲನೆಗಾಗಿ ಸಾನಂದರು ವಾರಾಣಸಿಗೆ ಪಾದ ಬೆಳೆಸಿದ್ದಾರೆ.
ಈ ನಿರಶನದ ಹಿಂದೆ ಸ್ವಾಮಿ ಸಾನಂದರ ನೋವಿದೆ. ಅವರ ನಿರಶನವನ್ನು ಸ್ಥಗಿತಗೊಳಿಸುವಂತೆ ಕೋರಿದ್ದ ಸರ್ಕಾರ ಕಳೆದ ವರ್ಷ ಮಾರ್ಚ್ 23ರಂದು ಕ್ರಮದ ಭರವಸೆ ನೀಡಿತ್ತು. ಆದರೆ ಸರ್ಕಾರ ಅದನ್ನು ಈಡೇರಿಸಿರಲಿಲ್ಲ. ಕಳೆದ ಜೂನ್ 18ರಂದು ಜಂತರ್ ಮಂತರ್‌ನಲ್ಲಿ ಸರ್ಕಾರಕ್ಕೆ ನಾಲ್ಕು ತಿಂಗಳ ಗಡುವು ನೀಡಿ ಗಂಗಾ ಮುಕ್ತಿ ಮಹಾಸಂಗ್ರಾಮದ ಘೋಷಣೆ ಮಾಡಿದ್ದ ಗಂಗಾ ಸಮಾಜ ಮತ್ತು ಅನೇಕ ಸಂತರೂ ನಂತರ ಏನನ್ನೂ ಮಾಡಿಲಿಲ್ಲ. 4 ತಿಂಗಳ ನಂತರ, 25 ನವೆಂಬರ್ 2012ರಿಂದ ಗಂಗಾ ಮುಕ್ತಿ ಸಂಗ್ರಾಮಕ್ಕೆ ಚಾಲನೆ ಸಿಗಬೇಕಿತ್ತು. ಈ ಬಗ್ಗೆಯೂ ಸ್ವಾನಂದರಿಗೆ ನೋವಿದೆ.
ಗಂಗೆ, ಭಾಗೀರಥಿ, ಅಲಕಾನಂದ, ಮಂದಾಕಿನಿ ಮುಂತಾದ ನದಿ ತೀರಗಳಲ್ಲಿ ನಡೆಯುತ್ತಿರುವ ಹಲವು ಪರಿಯೋಜನೆಗಳನ್ನು ನಿಲ್ಲಿಸಬೇಕೆಂಬುದು ಸ್ವಾನಂದರ ಬೇಡಿಕೆ. ಗಂಗಾ ಮತ್ತು ಅದನ್ನು ಕೂಡುವ ಇತರ ನದಿಗಳ ನೀರನ್ನು ಕಲುಷಿತಗೊಳಿಸುವ ಚರ್ಮ ಮತ್ತು ಪೇಪರ್ ಕೈಗಾರಿಕೆಗಳನ್ನು ನದಿ ತೀರದಿಂದ 50 ಕಿ.ಮೀ. ದೂರದಲ್ಲಿಡಬೇಕೆಂಬುದು ಈ ಬೇಡಿಕೆಯ ಸ್ಪಷ್ಟ ರೂಪ. ನದಿ ತೀರದಲ್ಲಿ ಸ್ನಾನ ಮಾಡುವ ಬಗ್ಗೆಯೂ ಈ ಬೇಡಿಕೆಯಲ್ಲಿ ನಿಯಮಾವಳಿಗಳಿದ್ದವು. ಆದರೆ ಅದೆಲ್ಲವೂ ಇಲ್ಲಿಯವರೆಗಂತೂ ಈಡೇರಿಲ್ಲ. ಅದಕ್ಕಾಗಿಯೇ ಈ ಹೋರಾಟ.
ಕೇಂದ್ರ ಮಂತ್ರಿ ಶ್ರೀಪ್ರಕಾಶ್ ಜೈಸ್ವಾಲ್ 'ಗಂಗೆಯ ಬಗ್ಗೆ ನಮಗೂ ಕಾಳಜಿ ಇದೆ. ಗಂಗಾ ನಮ್ಮ ಅವಶ್ಯಕತೆ. ಅದರ ಜೊತೆಗೆ ಗಂಗೆಯ ಉಳಿವಿಗಾಗಿ ಸ್ವಾಮಿ ಜ್ಞಾನಸ್ವರೂಪರೂ ನಮ್ಮ ಅವಶ್ಯಕತೆ. ಹಾಗಾಗಿ ಅವರ ಪ್ರಾಣ ಉಳಿಸುವುದು ಮೊದಲ ಆದ್ಯತೆ' ಎಂದು ಆಗ ಹೇಳಿದ್ದರು. ಆದರೆ, ಈಗ ಸ್ವಾಮೀಜಿಯನ್ನು ಉಳಿಸುವುದು ಅವರ ಆದ್ಯತೆ ಅಲ್ಲವೇ?
ಸ್ವಾನಂದರು ಹೇಳಿದ್ದರು, 'ನಾನೊಬ್ಬ ಎಂಜಿನಿಯರ್. ಸಮಯಪಾಲನೆಗೆ ನಾನು ಪ್ರಾಶಸ್ತ್ಯ ಕೊಡುತ್ತೇನೆ. ನನ್ನ ಬಳಿ ಬಹಳ ಕಡಿಮೆ ಸಮಯವಿದೆ. ಪ್ರಯಾಗದಲ್ಲಿ ನಡೆಯುತ್ತಿರುವ ಕುಂಭಮೇಳ ಸಮಾಪ್ತಿಯ ಹೊತ್ತಿಗೆ ನಿರ್ಮಲ ಗಂಗೆಯ ಕೆಲಸ ನೆರವೇರುತ್ತದೆ ಎಂದು ನಂಬಿದ್ದೇನೆ. ಇನ್ನಾದರೂ ಕೋಟಿಗಟ್ಟಲೆ ಭಕ್ತಾದಿಗಳು ಮಲಿನ ನೀರಿನಲ್ಲಿ ಸ್ನಾನ ಮಾಡುವುದು ತಪ್ಪುತ್ತದೆ ಎಂದುಕೊಂಡಿದ್ದೇನೆ'. ದುರಂತವೆಂದರೆ ಕುಂಭ ಸಮಾಪ್ತಿಯಾಗಿದೆ. ನಮ್ಮ ಭಂಡತನ ಮುಂದುವರಿದಿದೆ.
ಇಂದಿಗೂ ಸ್ವಾಮಿ ಜ್ಞಾನಸ್ವರೂಪ ಸ್ವಾನಂದರದು ಇದೇ ನಿಲುವು. ಆದರೆ ಅವರ ಪರವಾಗಿ ನಾವು ತಳೆದಿರುವ ನಿಲುವೇನು? ಗಂಗೆಯನ್ನು ಉಳಿಸುವ ಕೆಲಸ ಆಗಲಿ. ಆ ಮೂಲಕ ಗಂಗಾಪುತ್ರನ ಪ್ರಾಣವನ್ನೂ. ಇದು ಕೇವಲ ಒಬ್ಬ ಪುತ್ರನ ಪ್ರಶ್ನೆ ಅಲ್ಲ. ಪ್ರಶ್ನೆ, ನಮ್ಮ ನೈತಿಕತೆಯದ್ದು ಎಂಬುದು ಅರಿವಾದರೊಳಿತು.
ಮೂಕ ಪ್ರಧಾನಿ
2012ರ ಮಾರ್ಚ್ 23ರಂದು ದೆಹಲಿಯ ಅಖಿಲ ಭಾರತೀಯ ಆರ್ಯುವಿಜ್ಞಾನ ಸಂಸ್ಥಾನ, ಜವಾಹರಲಾಲ್ ನೆಹರೂ ಸಭಾಂಗಣದಲ್ಲಿ ಜೇನುತುಪ್ಪ ಮಿಶ್ರಿತ ಗಂಗಾಜಲ ಕುಡಿಸಿ ಸ್ವಾಮಿ ಸಾನಂದರ ನಿರಶನವನ್ನು ಅಂತ್ಯಗೊಳಿಸಿತ್ತು. ಆಗ, ನಾಲ್ಕು ಹಸ್ತಾಕ್ಷರಗಳಿದ್ದ, ಪೂರ್ತಿ ಎರಡು ಪುಟಗಳ ಸಮ್ಮತಿ ಪತ್ರ ನೀಡಲಾಗಿತ್ತು. ಅದರಲ್ಲಿದ್ದ ಮುಖ್ಯ ಅಂಶವೆಂದರೆ, ಏಪ್ರಿಲ್ 17ರಂದು ರಾಷ್ಟ್ರೀಯ ಗಂಗಾ ನದಿ ಬೇಸಿನ್‌ನ ಮುಂದಿನ ಸಭೆ ಕರೆಯಲಾಗುತ್ತದೆ. ಸ್ವಾಮಿ ಸಾನಂದರು, ಸ್ವಾಮಿ ಅವಿಮುಕ್ತೇಶ್ವರಾನಂದರು ಮತ್ತು ಗಂಗಾ ಸೇವಾ ಅಭಿಯಾನದ ಏಳು ಜನರ ಸದಸ್ಯರನ್ನೊಳಗೊಂಡ ಸಮಿತಿಯನ್ನು ಈ ಸಭೆಗೆ ವಿಶೇಷ ಆಹ್ವಾನ ಕೊಟ್ಟು ಕರೆಯಿಸಿಕೊಳ್ಳಲಾಗುವುದು. ಅಲ್ಲಿ ನಿಮ್ಮ ಎಲ್ಲ ಪ್ರಸ್ತಾವನೆಗೂ ಮಾನ್ಯತೆ ಕೊಟ್ಟು ಚರ್ಚೆ ನಡೆಸಲಾಗುವುದು ಎಂದು ಸರಕಾರ ಹೇಳಿತ್ತು. ಗಂಗೆಗಾಗಿ ಪ್ರತ್ಯೇಕ ಗಂಗಾ ಸಂಸತ್ ರಚಿಸಿಕೊಂಡು ಹೋರಾಡುತ್ತಿರುವ ಆಧುನಿಕ ಭಗೀರಥ ರಾಜೇಂದ್ರ ಸಿಂಗ್ ಸಹ ಇದನ್ನು ಪುಷ್ಟೀಕರಿಸುತ್ತಾರೆ. ಒಂದು ವರ್ಷವಾದರೂ ಅದು ಹಾಗೇ ಉಳಿದಿದೆ. ಈ ಬಗ್ಗೆ ಸಲ್ಲಿಕೆಯಾದ ವರದಿಯ ಪರಿಶೀಲನೆಗೆ ಮುಂದಾಗದ ಪ್ರಧಾನಿ ಮಾರ್ಚ್ 31ರವರೆಗೆ ಅವಧಿ ಮುಂದುವರಿಸಿದ್ದಾರೆ.
ಲಕ್ಷ್ಮಿಗೆ ವಿಷ್ಣುವಿನ ಹೃದಯದಲ್ಲಿ ಜಾಗವಿದೆ. ಗಂಗೆಗೆ ವಿಷ್ಣುವಿನ ಪಾದದ ಬಳಿಯ ಸ್ಥಾನವಿದೆ. ಹಾಗಾಗಿಯೇ ಲಕ್ಷ್ಮಿ, ಗಂಗೆಯನ್ನು ತನಗಿಂತ ಕೀಳು ಎಂಬಂತೆಯೇ ನೋಡುತ್ತಾಳೆ. ಇದೇ ಗಂಗೆಯ ಸಮಸ್ಯೆ. ಈ ಸಮಯದಲ್ಲಿ ನನಗೂ ಗಂಗೆ ಲಕ್ಷ್ಮಿಯ ಕಪಿಮುಷ್ಟಿಯಲ್ಲಿದ್ದಾಳೆ ಎನಿಸುತ್ತಿದೆ.
- ಸ್ವಾಮಿ ಜ್ಞಾನಸ್ವರೂಪ ಸ್ವಾನಂದ
-ರಾಧಾಕೃಷ್ಣ ಭಡ್ತಿ
abhyagatha@yahoo.co.in
ಚಿತ್ರ:ಪೂರ್ಣ ಪ್ರಮತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


