ಜಲ ನಯನ
1974ರ ಬಳಿಕ ನಾಗರಹೊಳೆ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ಹುಲಿ ಮತ್ತು ಇತರ ಸಸ್ತನಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ...

-ಕೃತಕ ವ್ಯವಸ್ಥೆ ಏಕೆ?
1974ರ ಬಳಿಕ ನಾಗರಹೊಳೆ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ಹುಲಿ ಮತ್ತು ಇತರ ಸಸ್ತನಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಕರ್ನಾಟಕ ಅರಣ್ಯ ಇಲಾಖೆ ಕಳೆದ ಹಲವು ದಶಕಗಳಲ್ಲಿ ಕೈಗೊಂಡ ಕಟ್ಟುನಿಟ್ಟಾದ ವನ್ಯಜೀವಿ ಸಂರಕ್ಷಣಾ ಕ್ರಮಗಳು ಅದಕ್ಕೆ ಕಾರಣ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳ ಒಟ್ಟಾರೆ ಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 40ರಿಂದ 50 ಇರುವುದನ್ನು ಈಗ ಕಾಣಬಹುದು. ಭಾರತದಲ್ಲಿ ದೊಡ್ಡ ಸಸ್ತನಿಗಳ ಸಾಂದ್ರತೆ ಇಷ್ಟು ಪ್ರಮಾಣದಲ್ಲಿ ಬೇರೆಲ್ಲೂ ಇಲ್ಲ ಎನ್ನುವುದು ಗಮನಾರ್ಹ.
ಈ ಭಾರಿ ಪ್ರಮಾಣದ ಸಾಂದ್ರತೆ ನಾಗರಹೊಳೆ- ಬಂಡಿಪುರದ 1500 ಚದರ ಕಿ.ಮೀ. ವಿಸ್ತೀರ್ಣದ ವಾಸಸ್ಥಾನದಲ್ಲಿದೆ. ಪ್ರಾಣಿಗಳ ಸಾಂದ್ರತೆ ಒಣ ಅರಣ್ಯ ಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂದರೆ ಪ್ರತಿ ಚದರ ಕಿ.ಮೀ.ಗೆ ಐದು ಇದೆ.
ಅದು ಹಸಿರಿನಿಂದ ಕೂಡಿದ ಪ್ರದೇಶಗಳಲ್ಲಿ ನೂರಕ್ಕೂ ಅಧಿಕ. ಮೇವು ಮತ್ತು ಆಹಾರದ ಕೊರತೆಯಿಂದಾಗಿ ಕಡುಬೇಸಿಗೆಯಲ್ಲಿ ಒಣ ಪ್ರದೇಶದಲ್ಲಿ ಪ್ರಾಣಿ ಸಾಂದ್ರತೆ ಕಡಿಮೆ ಇರುವುದು ಸ್ವಾಭಾವಿಕ. ವೈಲ್ಡ್ ಲೈಫ್ ಸೊಸೈಟಿ 20 ವರ್ಷಕ್ಕಿಂತ ಹೆಚ್ಚು ಕಾಲದಿಂದ ನಿರ್ವಹಿಸಿರುವ (ಹಲವು ವರ್ಷಗಳ ಬರಗಾಲ ಸೇರಿದಂತೆ) ಅಂಕಿಅಂಶಗಳ ಪ್ರಕಾರ, ಅಂತರ್ ವಾರ್ಷಿಕ ಏರಿಳಿತಗಳ ಮಧ್ಯೆಯೂ ಇಲ್ಲಿ ಪ್ರಾಣಿಗಳ ಸಂಖ್ಯೆಯಲ್ಲಿನ ಹೆಚ್ಚಳ ಪ್ರಮಾಣ ಸ್ಥಿರವಾಗಿದೆ.
ವನ್ಯಜೀವಿ ರಕ್ಷಣೆಯ ಮಹತ್ವದ ತತ್ವಗಳಲ್ಲಿ ಒಂದು ಎಂದರೆ ಮಾನವನ ಹಸ್ತಕ್ಷೇಪ ಇರಕೂಡದು ಎನ್ನುವುದು. ವನ್ಯಜೀವಿಗಳು ಸಾಕು ಪ್ರಾಣಿಗಳಿಂದ ಸಂಪೂರ್ಣ ಭಿನ್ನ. ಸಾಕು ಪ್ರಾಣಿಗಳಿಗಾಗಿ ನೀರು, ಆಹಾರ, ನಿರ್ವಹಣೆ ಸೇರಿದಂತೆ ಮಾನವ ಮಾಡುವ ವೆಚ್ಚ ಆರ್ಥಿಕವಾಗಿ ತುಟ್ಟಿ ಅನ್ನಿಸಿಕೊಳ್ಳುವುದಿಲ್ಲ. ಏಕೆಂದರೆ ಅಲ್ಲಿ ಬಹುತೇಕ ಪ್ರಾಣಿಗಳನ್ನು ಮಾನವ ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಾನೆ. ಅದಕ್ಕೆ ವಿರುದ್ಧವಾಗಿ ಬರ, ರೋಗ ಮೊದಲಾದವು ವನ್ಯಜೀವಿಗಳು ಎದುರಿಸಬೇಕಾದ ಸಹಜ ನೈಸರ್ಗಿಕ ಒತ್ತಡಗಳು. ಹಾಗೆಯೇ ಉಳಿವಿನ ಪ್ರಮಾಣದ ಏರಿಳಿತಗಳ ಪರಿಣಾಮವೂ. ಇವು ಅವುಗಳ ಜೀವನಕ್ರಮದಲ್ಲೇ ಬೆರೆತಿರುವಂಥದ್ದು.
ನಾಗರಹೊಳೆ- ಬಂಡಿಪುರದಲ್ಲಿ ಮೂರು ದಶಕಗಳಲ್ಲಿ ನಿರಂತರವಾಗಿ ಕೃತಕ ವ್ಯವಸ್ಥೆ ಮೂಲಕ ನೀರು ಪೂರೈಸುವ ಮೂಲಕ ಮಾನವನ ಅಸಹಜ ಹಸ್ತಕ್ಷೇಪ ಅತಿಯಾಗಿದೆ. ಇದರಿಂದ ಏನಾಗಿದೆ ಎಂದರೆ ಕೆಲವು ಪ್ರಾಣಿಗಳ ಸಂತತಿ ವಿಪರೀತವಾಗಿ ಏರಿದ್ದರೆ, ಮತ್ತೆ ಕೆಲವು ಪ್ರಾಣಿಗಳ ಸಂತತಿಯಲ್ಲಿ ಗಣನೀಯ ಕುಸಿದಿದೆ.
ಪ್ರಸ್ತುತ ಎದುರಾಗಿರುವ ಬರ, ಬಿದಿರು ಹೂ ಬಿಡುವುದು ಇತ್ಯಾದಿಗಳನ್ನೆಲ್ಲ ಅಲ್ಲಿನ ವನ್ಯಜೀವಿಗಳು ಸ್ವಾಭಾವಿಕ ರೀತಿಯಲ್ಲೇ ಎದುರಿಸುವುದು ಅವುಗಳ ವಿಕಸನದ ದೃಷ್ಟಿಯಿಂದ ಅಗತ್ಯ ಕೂಡ. ಇದು ಈ ಪ್ರದೇಶದಲ್ಲಿನ ವನ್ಯಜೀವಿಗಳ ವಿಕಸನವನ್ನು ಸಮಸ್ಥಿತಿಗೆ ತರುವುದರ ಜತೆಗೆ ಪರಿಸರ ಸಮತೋಲನ ಕಾಪಾಡಲು ನೆರವಾಗುತ್ತದೆ. ಈ ಹಿನ್ನೆಲೆಯಿಂದಲೂ ಪ್ರಾಣಿಗಳ ಅಳಿವು-ಉಳಿವಿನ ನೈಸರ್ಗಿಕ ಪ್ರಕ್ರಿಯೆಯಲ್ಲಿ ಮಾನವನ ಹಸ್ತಕ್ಷೇಪ ಅನಗತ್ಯ. ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವಂತೆ ಕೃತಕವಾಗಿ ಕೊಳಗಳನ್ನು ನಿರ್ಮಿಸಿ ಟ್ಯಾಂಕರ್‌ಗಳ ಮೂಲಕ ನೀರು ತುಂಬುವುದೂ ಅನವಶ್ಯಕ. ಮೇವು ಮತ್ತಿತರ ಆಹಾರಗಳನ್ನು ಹೊರಡಗೆಯಿಂದ ಪೂರೈಸುವುದೂ ಬೇಕಿಲ್ಲ.
'ವನ್ಯಜೀವಿಗಳಿಗೆ ನೀರು ಪೂರೈಸುವ' ವಿಚಾರದಲ್ಲಿ ಅನೇಕ ಹವ್ಯಾಸಿ ಪರಿಸರವಾದಿಗಳು ಗೆದ್ದೆತ್ತಿನ ಬಾಲ ಹಿಡಿಯುವವರ ರೀತಿ ವರ್ತಿಸುತ್ತಿರುವಂತೆ ಕಾಣುತ್ತಿದೆ. ವನ್ಯಜೀವಿಗಳನ್ನು ಕುರಿತಂತೆ ಮೂಲಭೂತವಾದ ಕೆಲ ವಿಚಾರಗಳಲ್ಲಿ ತಿಳಿವಳಿಕೆ ಅಭಾವ ಅದಕ್ಕೆ ಕಾರಣವಾಗಿರಬಹುದು. ವಾಸ್ತವ ಏನೆಂದರೆ,
ಈ ಅರಣ್ಯ ಪ್ರದೇಶಗಳು ತೊರೆ, ಕೊಳ, ಕೊಲಾಚಿ, ವೊತ್ಕೆರೆ ಮೊದಲಾದ ಶಾಶ್ವತ ನೈಸರ್ಗಿಕ ಜಲಮೂಲಗಳನ್ನು ಶತಮಾನಗಳಿಂದಲೂ ಹೊಂದಿವೆ. ಅಲ್ಲಲ್ಲಿ ವಿರಳವಾಗಿ ಹರಡಿಕೊಂಡಿದ್ದ ಮಾನವ ಜನಾಂಗಗಳು ಕೃಷಿ ನೀರಾವರಿ ಉದ್ದೇಶಕ್ಕೆ ನಿರ್ಮಿಸಿಕೊಂಡಿದ್ದ ಕೆರೆಗಳನ್ನು ನವೀಕರಿಸಿ ನೀರಿನ ಹರಿವು ಹೆಚ್ಚಿಸುವ ಪ್ರಕ್ರಿಯೆ ಶುರುವಾದದ್ದು 1970ರ ದಶಕದಲ್ಲಿ. ಕಬಿನಿ, ತಾರಕ, ನುಗು ಅಣೆಕಟ್ಟುಗಳೂ 40 ವರ್ಷಗಳಿಂದ ಈಚೆಗೆ ನಿರ್ಮಾಣವಾಗಿವೆ. ಇತ್ತೀಚಿಗಂತೂ ಬುಲ್ಡೋಜರ್‌ಗಳನ್ನು ಬಳಸಿ ನೂರಾರು ಕೆರೆ, ಜಲಮೂಲಗಳನ್ನು ಕೃತಕವಾಗಿ ಸೃಷ್ಟಿಸುವ ಕೆಲಸ ಆಗುತ್ತಿದೆ. ಈ ಮಟ್ಟದಲ್ಲಿ ಅರಣ್ಯದೊಳಕ್ಕೆ ಯಂತ್ರಗಳನ್ನು ಬಳಸಿದ ಕಾಮಗಾರಿ ಹಿಂದೆಂದೂ ಆಗಿರಲಿಲ್ಲ. ಇದು ಇವುಗಳ ಅಗತ್ಯದ ಬಗ್ಗೆ ಯಾವುದೇ ಅಧ್ಯಯನ ನಡೆಸದೆ, ಅವೈಜ್ಞಾನಿಕವಾಗಿ ವನ್ಯಜೀವಿಗಳ ಜೀವನದಲ್ಲಿ ನಡೆಯುತ್ತಿರುವ ಹಸ್ತಕ್ಷೇಪ. ಇಲ್ಲಿ ಸಹಸ್ರಾರು ವರ್ಷಗಳಿಂದಲೂ ಪ್ರಾಣಿಗಳು ವಾಸವಿದ್ದವು, ಸಿವಿಲ್ ಎಂಜಿನಿಯರಿಂಗ್ ಕಾಮಗಾರಿಗಳ ನೆರವಿಲ್ಲದೆ ಮುಂದೆಯೂ ಇರುತ್ತವೆ. ಕೆಲವರು ಭಯಪಡುತ್ತಿರುವಂತೆ ಕೃತಕವಾಗಿ ನೀರು ಪೂರೈಸದಿದ್ದರೆ ಅವೇನೂ ನಶಿಸಿ ಹೋಗುವುದಿಲ್ಲ. ಏನಾಗುತ್ತದೆ ಅಂದರೆ, ಪ್ರಾಣಿಗಳ ಸಾಂದ್ರತೆ ಕಡಿಮೆಯಾಗಿ ನೈಸರ್ಗಿಕವಾಗಿ ಯಾವ ಮಟ್ಟದಲ್ಲಿರಬೇಕೋ ಆ ಮಟ್ಟ ತಲುಪುತ್ತದೆ ಅಷ್ಟೆ.
ಸಸ್ಯಾಹಾರಿ ಪ್ರಾಣಿಗಳು ತಮ್ಮ ಆಹಾರದಲ್ಲೇ ಅಂದರೆ ತಾವು ತಿನ್ನುವ ಸಸ್ಯಗಳಿಂದಲೇ ಅಗತ್ಯ ಪ್ರಮಾಣದ ನೀರು ಪಡೆದುಕೊಳ್ಳುತ್ತವೆ. ಹಾಗೆಯೇ ಮಾಂಸಾಹಾರಿ ಪ್ರಾಣಿಗಳು ತಮಗೆ ಬೇಕಿರುವಷ್ಟು ನೀರನ್ನು ತಮ್ಮ ಬೇಟೆಪ್ರಾಣಿಯ ಮಾಂಸದಿಂದ ಪಡೆಯುತ್ತವೆ. ಬಹಳಷ್ಟು ಪ್ರಾಣಿಗಳು ದೀರ್ಘಕಾಲ ನೀರು ಸೇವಿಸದೇ ಬದುಕಬಲ್ಲವು. ಅದು ಆಯಾ ಪ್ರಾಣಿ ತಳಿ ಮತ್ತು ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚುವರಿ ನೀರು ಕೆಲವು ತಳಿಯ ಪ್ರಾಣಿಗಳಿಗೆ ಅನುಕೂಲಕರವಾದರೆ, ಉಳಿದ ಪ್ರಾಣಿ ಮತ್ತು ಸಸ್ಯ ಸಂಕುಲಗಳು ಪ್ರತಿಕೂಲ ಪರಿಣಾಮಕ್ಕೆ ತುತ್ತಾಗುತ್ತವೆ.
ಎಚ್ಚರಿಕೆಯಿಂದ ಕೂಡಿದ ವೈಜ್ಞಾನಿಕ ಅಧ್ಯಯನ ಹೇಳುವವರೆಗೆ ವನ್ಯಜೀವಿಗಳ ವಾಸಸ್ಥಾನದಲ್ಲಿ ಮಾನವ ಹಸ್ತಕ್ಷೇಪ ಮಾಡುವುದು, ಅದರಲ್ಲೂ ಭಾರಿ ಮೊತ್ತದ ಹಣ ವ್ಯಯಿಸಿ, ಪರಿಸರ ಅಸಮತೋಲನಕ್ಕೆ ಕಾರಣವಾಗುವ ಹಸ್ತಕ್ಷೇಪ ಸರ್ವಥಾ ಸಲ್ಲದು.
- ಡಾ.ಕೆ. ಉಲ್ಲಾಸ ಕಾರಂತ್ ಮತ್ತು
-ಡಾ.ಎನ್. ಸಾಂಬಾ ಕುಮಾರ್
ಚಿತ್ರಗಳು: ಸಚಿನ್ ರೈ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


