ಪ್ರೇಮಿಸಲಾರೆ...
'ಏಳೂವರೆ ಆಯ್ತು ಏಳೋ...' ಶುರುವಾಯ್ತು ತಂಗಿ ರತ್ನಳ ಸುಪ್ರಭಾತ ರಾಗ. ಹಾಳು ಗೋಳು ನಿನ್ನೆಯ ತನಕ ಬೆಂಗಳೂರಿನ ಹಾಸ್ಟೆಲಿನಲ್ಲಿ ಬೆಳಿಗ್ಗೆ ಎಷ್ಟು ...
'ಏಳೂವರೆ ಆಯ್ತು ಏಳೋ...'
ಶುರುವಾಯ್ತು ತಂಗಿ ರತ್ನಳ ಸುಪ್ರಭಾತ ರಾಗ. ಹಾಳು ಗೋಳು ನಿನ್ನೆಯ ತನಕ ಬೆಂಗಳೂರಿನ ಹಾಸ್ಟೆಲಿನಲ್ಲಿ ಬೆಳಿಗ್ಗೆ ಎಷ್ಟು ಹೊತ್ತಾದರೂ ಕೇಳುವವರಿಲ್ಲದೆ ಬಿದ್ದಿರುತ್ತಿದ್ದೆ. ಇಲ್ಲಿ ಯಾರೂ ಬೆಳಿಗ್ಗೆ ಎಬ್ಬಿಸಲೇ ಬೇಕಾಗಿಲ್ಲ. ಆರು ಗಂಟೆ ನಸುಕಿಗೇ ಲೌಡ್‌ಸ್ಪೀಕರ್ ದನಿಯಲ್ಲಿ ಅಪ್ಪ ದೇವರ ಪೂಜೆ ಶುರು ಮಾಡಿದನೆಂದರೆ ಆ ಗಂಟೆಯ ಗಣಗಣ, ಮಂತ್ರಗಳ ವಟವಟಕ್ಕೆ ಎಂಥ ಕುಂಭಕರ್ಣನಿಗೂ ಎಚ್ಚರವಾಗುತ್ತೆ. ಆದರೂ ಮುಸುಕೆಳೆದುಕೊಂಡು, ಕಣ್ಣು ಮುಚ್ಚಿ, ಬಾಳಿನ ಬಗ್ಗೆ ತಾತ್ವಿಕವಾಗಿ ಯೋಚಿಸುತ್ತಾ ಮಲಗಿದ್ದೆ. ಅಪ್ಪನ ನಿಜಜೀವನದಲ್ಲಿನ ಸುಳ್ಳು, ಕಪಟ, ವಂಚನೆ, ಅಪ್ರಾಮಾಣಿಕತೆ- ಇವೆಲ್ಲದರ ಪಾಪಭೀತಿಯಿಂದ ಪ್ರತಿದಿನ ನಸುಕಿಗೇ ಎದ್ದು ಮಾಡುವ ಪೂಜೆ ಪುನಸ್ಕಾರ, ಅರ್ಥವಿಲ್ಲದ ನೀತಿ ನಿಯಮ ಸಂಸ್ಕಾರ- ಇವೆಲ್ಲದರ ಸಾರ್ಥಕತೆ ಹುಡುಕುತ್ತಿದ್ದೆ. ಅಷ್ಟರಲ್ಲಿ ನನ್ನ ಭಾವಭಂಗ ಮಾಡಿದ ರತ್ನಳ ಕೂಗಾಟಕ್ಕೆ ರೇಗಿ ಗೊಣಗಿ ಹೊರಳಾಡಿ ಕೊನೆಗೂ ಎದ್ದೆ.
ಮುಖ ತೊಳೆದು ಕಾಫಿಗೆಂದು ಅಡಿಗೆಮನೆಗೆ ಹೊರಟೆ. ಹಿತ್ತಿಲಲ್ಲಿ ಹೋ ಅಂತ ಗಲಾಟೆ ನಡೆದಿತ್ತು. ಕಿಟಕಿಯಿಂದ ನೋಡಿದಾಗ, ನನ್ನ ಚಿಕ್ಕ ತಮ್ಮ ತಂಗಿ ಒಂದು ಮುದ್ದಾದ ಬಿಳಿಯ ಹಸುವಿನ ಕರು ಜೊತೆ ಕುಣಿದು ಕುಪ್ಪಳಿಸಿ ಕೂಗಾಡುತ್ತಿದ್ದರು. ಆ ಕರು ಚಂಗಚಂಗನೆ ನೆಗೆಯುತ್ತ ಹಿತ್ತಿಲ ತುಂಬ ಓಡಾಡುತ್ತಿತ್ತು. ಅದರ ಹಿಂದೆ ಅದಕ್ಕಿಂತ ಹೆಚ್ಚಾಗಿ ನೆಗೆದಾಡುತ್ತ ನನ್ನ ತಮ್ಮ ತಂಗಿ ಹೋ ಅಂತ ಕೂಗಾಡುತ್ತಿದ್ದರು. ಆ ಮುಗ್ಧರ ಜೀವನೋತ್ಸಾಹ ಕಂಡು ಹೊಟ್ಟೆಕಿಚ್ಚಾಯಿತು. ಹಾಗೆಯೇ ಆ ಹೊಸ ಕರು ಯಾವುದೆಂದು ಕುತೂಹಲ ಕೆರಳಿತು.
ಕೊಟ್ಟಿಗೆಗೆ ಹೋದೆ. ಅಲ್ಲಿ ಹಳೇ ಹಸು ಗೌರಿಯ ಜೊತೆ ಒಂದು ಹೊಸ ಹಸುವಿತ್ತು. ಭಾರಿ ಎತ್ತಿನ ಗಾತ್ರ, ದೊಡ್ಡ ದೊಡ್ಡ ಕೆಂಪು ಕಣ್ಣುಗಳು, ಉದ್ದವಾದ ಚೂಪು ಕೊಂಬುಗಳು. ನೋಡಿದರೇ ಭಯವಾಗುತ್ತಿತ್ತು. ನಂಜಿ ಹಾಲು ಕರೆಯುತ್ತಿದ್ದಳು. ರತ್ನ ಹಸುವಿನ ಹತ್ತಿರದಲ್ಲೇ ನಿಂತಿದ್ದಳು.
ಹುಲ್ಲಿನ ಮೆದೆಯಿಂದ ಮುಖವೆತ್ತಿ ಬುಸ್ಸೆಂದು ಉಸಿರು ಬಿಟ್ಟು ಲಕ್ಷ್ಮಿ ನನ್ನನ್ನೇ ಕೆಂಗಣ್ಣುಗಳಿಂದ ದುರುಗುಟ್ಟಿ ನೋಡಿತು. 'ಯಾವುದೇ ಹೊಸ ಹಸು?' ರತ್ನಳನ್ನು ಕೇಳಿದೆ. ಲಕ್ಷ್ಮಿ, 'ತಂದಾಗಲೇ ಐದು ತಿಂಗಳಾಯಿತು' ಎಂದಳು. ಅದರ ಹತ್ತಿರ ಹೋಗಲು ಮುಂದಾದೆ. ಲಕ್ಷ್ಮಿ ಹಿಂದೆ ಸರಿದು ತಲೆಯಾಡಿಸಿತು. 'ಹತ್ರ ಬರಬ್ಯಾಡಿ, ಸಾಮಿ. ಹೊಸಬರನ್ನ ಕಂಡ್ರೆ ಬೋ ಗಲಾಟೆ ಮಾಡತೈತೆ' ಅಂದಳು ನಂಜಿ. ಯಾರಿಗೆ ಬೇಕು ಇದರ ಉಸಾಬರಿ ಅಂದುಕೊಂಡು ವಾಪಸಾದೆ.
ಅಡುಗೆಮನೆಯಲ್ಲಿ ಅಮ್ಮ ಅಜ್ಜಿ ನಡುವೆ ಕುರುಕ್ಷೇತ್ರ ನಡೆದಿತ್ತು. ಇಬ್ಬರ ಧ್ವನಿಯೂ ಮಿತಿ ಮೀರಿದಾಗ ಅಪ್ಪ ದೇವರಮನೆಯಿಂದಲೇ ಅರಚಿದರು: 'ಏನೇ ಅದು ನಿಮ್ಮ ಗೋಳು, ಪೂಜೆ ಮುಗಿಯೋ ತನಕ ಆದ್ರೂ ಸುಮ್ಮನಿದ್ದು ಸಾಯಬಾರ್ದ' ಅಂತ. 'ಸಾಯೋದೊಂದೇ ಬಾಕಿ..' ಎಂದು ಅಮ್ಮ ಇನ್ನೂ ಜೋರಾಗಿ ಆರ್ಭಟಿಸಿದಳು. ನಾನು ಬಂದದ್ದು ನೋಡಿ, ಅಜ್ಜಿ ನನ್ನ ಹತ್ತಿರ ತಮ್ಮ ಗೋಳನ್ನು ತೋಡಿಕೊಳ್ಳತೊಡಗಿದರು: 'ಹೇಗೆ ಆಡ್ತಾಳೆ ನೋಡೋ ಇವಳು, ನಾನೇನೋ ನರಕ ಯಾತನೆ ಕೊಡ್ತಿದ್ದ ಹಾಗೆ ಇವಳಿಗೆ. ದೊಡ್ಡವರೆಂದರೆ ಕಿಂಚಿತ್ ಗೌರವವಿಲ್ಲ. ಇಂಥ ರಾಕ್ಷಸೀ ಜೊತೆ ನಾನಂತೂ ಬಾಳಲಾರೆನಪ್ಪ, ನಾಗೂ ಮನೇಗೇ ಹೊರಟುಹೋಗ್ತೀನಿ..' ಅಂತ. ಅದಕ್ಕೆ ಅಮ್ಮ, 'ಅಹಹ, ಇಲ್ಲಿ ಬಾಳಕ್ಕೆ ಅಷ್ಟು ಕಷ್ಟವಾದರೆ ಅಲ್ಲಿಗಾದರೂ ತೊಲಗಬಾರದೇ.. ಇಲ್ಲಿದ್ದು ನನ್ನನ್ನ್ಯಾಕೆ ಹೀಗೆ ಗೋಳು ಹೊಯ್ಕೋಬೇಕೋ ಕಾಣೆ..' ಎಂದಳು. 'ಅಲ್ಲಿಗೇ ತೊಲಗ್ತೀನಪ್ಪ, ಮಗಳ ಮನೇಲೇ ಎಷ್ಟು ದಿನಾಂತ ಇರೋದು ಹೇಳು. ಮರ್ಯಾದೇನಾ? ನನಗೇನು ನೂರು ಜನ ಗಂಡುಮಕ್ಕಳಿದಾರ? ಇರೋ ಒಬ್ಬ ಮಗನ ಮನೇಲಿ ರಾಮಾಕೃಷ್ಣಾಂತ ಕಣ್ಣು ಮುಚ್ಚೋಕ್ಕೂ ಬಿಡೋಲ್ವಲ್ಲ ಇವಳು ಹು.. ಏನ್ಮಾಡೋದು..ಎಲ್ಲಾ ನನ್ನ ಪೂರ್ವಾರ್ಜಿತ ಕರ್ಮಫಲ..' ಎಂದು ಅಜ್ಜಿ ಸೊರಸೊರ ಅಳತೊಡಗಿದಳು. ಥೂ ಗೋಳು ಎಂದು ನನಗೆ ಅಸಹ್ಯವಾಯಿತು. ಬಾಳೆಲ್ಲ ಮಗಳು ಮತ್ತು ಸೊಸೆಯ ಹೆರಿಗೆ, ಬಾಣಂತನದ ಸೇವೆಗೆ ತೇಯ್ದು, ಸಾಯೋ ವಯಸ್ಸಾದರೂ ಮಗ, ಮಗಳು ಅಂತ ಒದ್ದಾಡುತ್ತ, ಸೊಸೆ ಜೊತೆ ಕಚ್ಚಾಡುತ್ತ, ಅಡಿಗೆಮನೆಯೇ ಜಗತ್ತಾಗಿರುವ ನನ್ನ ಅಜ್ಜಿಯ ಬಾಳಿಗೆ ಅರ್ಥವಿದೆಯೇ ಅನ್ನಿಸಿತು. ತಾಯಿಯ ಬಗ್ಗೆ ನನಗೆ ಪ್ರೀತಿ ಇದ್ದರೂ, ಮಾತೃದೇವೋ ಭವ ಎಂದು ಅವಳು ಮಾಡಿದ್ದೆಲ್ಲ ಸರಿಯೆಂದು ಒಪ್ಪಲಾರೆ. ಹಾಗೆಂದು ಅವಳ ಮನ ನೋಯಿಸಲೂ ಆರೆ. ಸಂಸಾರ ಹೀಗೆ ಎಡವಟ್ಟಾಗಲು ಕಾರಣ ಅಪ್ಪನೇ ಅನ್ನಿಸುತ್ತೆ. ಅಪ್ಪನ ವ್ಯಾವಹಾರಿಕತೆ, ಧನಾರ್ಜನೆಯೇ ಬಾಳು, ಅದರಿಂದಲೇ ಮನುಷ್ಯನಿಗೆ ಬೆಲೆ, ಮರ್ಯಾದೆಯೆಂದು ಸುಳ್ಳಿನಲ್ಲೇ ನಡೆಸುತ್ತಿರುವ ಜೀವನ ಕಂಡರೆ ಅಸಹ್ಯವಾಗುತ್ತೆ. ನಾನಾದರೂ ಸ್ವಚ್ಛವಾಗಿ, ಪ್ರಾಮಾಣಿಕವಾಗಿ, ತೀವ್ರವಾಗಿ, ಅರ್ಥಪೂರ್ಣವಾಗಿ ಬಾಳಬೇಕೆಂದು ನಿಶ್ಚಯಿಸುತ್ತೇನೆ.
ಇನ್ನು ಇಲ್ಲೇ ಕುಳಿತರೆ ಇವರ ನಿಲ್ಲದ ಗೋಳುರಾಗ ಕೇಳುತ್ತಲೇ ಇರಬೇಕಾಗುತ್ತೆಂದು, ಎದ್ದುಹೋಗಿ ವೆರಾಂಡಾಲಿ ಒಂದು ಬೆತ್ತದ ಕುರ್ಚಿಯಲ್ಲಿ ಕುಳಿತೆ. ಇಲ್ಲೇ ನಾನು ಅವಳನ್ನು ಮೊದಲ ಬಾರಿಗೆ ಕಂಡದ್ದು; ಎದುರುಮನೆಯ ಮುಂಬಾಗಿಲಲ್ಲಿ ಎಡಗೈಯನ್ನು ಸೊಂಟದ ಮೇಲಿಟ್ಟುಕೊಂಡು, ಬಲಗೈಯಿಂದ ಬಾಗಿಲ ಮೇಲ್ಪಟ್ಟಿಯನ್ನು ಹಿಡಿದುಕೊಂಡು ವೈಯಾರವಾಗಿ ನಿಂತಿದ್ದಳು. ತುಂಬಿದ ಏರುತಿಟ್ಟಿನ ಅಂಗಾಂಗಗಳಿಂದ, ಹೊಳೆಯುವ ಕಣ್ಣುಗಳಿಂದ, ಉಕ್ಕುತ್ತಿದ್ದ ಯೌವನವನ್ನು ಹೊರಚಿಮ್ಮುತ್ತ, ಸರಳವಾದ ಉಡುಪಿನಲ್ಲಿದ್ದರೂ ಸಹ, ಸೂರ್ಯನ ಎಳೆಬಿಸಿಲಲ್ಲಿ ರಂಗಾಗಿ, ತುಂಬ ಅಂದವಾಗಿ ಕಂಡಳು. ರೊಮ್ಯಾಂಟಿಕ್ ಕವಿಯಾಗಿದ್ದರೆ ಅವಳ ಸೌಂದರ್ಯವನ್ನು ವರ್ಣಿಸಿ ಅಲ್ಲೇ ಒಂದು ಪದ್ಯವನ್ನು ಗೀಚುತ್ತಿದ್ದೆ. ಆದರೂ ಕುತೂಹಲದಿಂದ ಎದ್ದುಹೋಗಿ, ಬಾಗಿಲಲ್ಲಿ ನಿಂತು, ದಿಟ್ಟಿಸಿದೆ. ಇದನ್ನು ಗಮನಿಸಿದ ಅವಳೂ ಸಹ ನನ್ನ ಕಡೆ ಒಂದು ಕ್ಷಣ ದಿಟ್ಟಿಸಿ, ಮುಖ ತಿರುಗಿಸಿದಳು. ನಾನು ನೆಟ್ಟ ನೋಟದಿಂದ ನೋಡುತ್ತಿರುವುದನ್ನು ಗಮನಿಸಿಯೂ ಕೂಡ ಅಲ್ಲೇ ನಿಂತಳು. ಯಾರೋ ತಯಾರಿ ಹುಡುಗಿ, ಪ್ರೇಮಕ್ಕೆ ಯೋಗ್ಯಳಾದವಳು ಅಂದುಕೊಂಡೆ. ನಗು ಬಂತು. ಕಾಲೇಜಿನಲ್ಲಿ, ನಗರದಲ್ಲಿ ನೂರಾರು ಅಂದದ ಹುಡುಗಿಯರನ್ನು ನೋಡುವ, ಮನಸ್ಸಿನಲ್ಲಿ ಎಲ್ಲರನ್ನೂ ಕೂಡ ಬಯಸುವ ನನಗೆ ಶುದ್ಧಪ್ರೇಮ, ಪವಿತ್ರಪ್ರೇಮ, ಅಮರಪ್ರೇಮ- ಇವೆಲ್ಲ ಸಾಧ್ಯವಿಲ್ಲ, ಅನ್ನಿಸಿದೆ. ಸುಮಾರು ಮುವ್ವತ್ತು ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿಯೂ ಅಪರಿಚಿತರಂತೆ ಇರುವ, ಕಚ್ಚಾಡುವ ಅಮ್ಮ ಅಪ್ಪನನ್ನು, ಇಂಥ ಅನೇಕ ಸಂಸಾರಗಳನ್ನು ಕಂಡೂ ಕಂಡೂ ನನಗೆ ಮದುವೆ, ಸಂಸಾರದಲ್ಲಿ ಕುತೂಹಲ, ಆಸಕ್ತಿ, ನಂಬಿಕೆ ಸತ್ತಿವೆ. ಆದ್ದರಿಂದ ಆ ಹುಡುಗಿಯ ಬಗ್ಗೆ ನನಗೆ ಅಂತಹ ಪ್ರೇಮ ಸಾಧ್ಯವಿಲ್ಲದಿದ್ದರೂ ಬೇಸಿಗೆ ರಜದಲ್ಲಿ ಮಾಡಲೇನೂ ಬೇರೆ ಕೆಲಸವಿಲ್ಲದ್ದರಿಂದ ಹೊಸ ಅನುಭವಕ್ಕಾಗಿಯಾದರೂ ಪ್ರಯತ್ನ ಮಾಡುವುದರಲ್ಲಿ ನಷ್ಟವೇನೂ ಇಲ್ಲ, ಅನ್ನಿಸಿತು.
ಕಾಫಿ ಕುಡಿಯುತ್ತ, ರತ್ನಳಿಂದ ಆ ಹುಡುಗಿಯ ಬಗ್ಗೆ ಮಾಹಿತಿ ಸಂಪಾದಿಸಿದೆ. ಅವಳ ಹೆಸರು ವಾಸಂತಿ. ಅಪ್ಪ ಹೈಸ್ಕೂಲ್ ಹೆಡ್ಮಾಸ್ಟರು. ಸಾಲಾಗಿ ಆರು ಜನ ತಂಗಿಯರು. ಒಬ್ಬ ಅಣ್ಣ. ಪಿಯುಸಿ ಮೂರುಸಲ ಡುಮ್ಕೀ ಹೊಡೆದು ಮನೆಯಲ್ಲಿ ಕೂತಿದ್ದಾಳೆ, ಹಿಂದಿ ಕಲಿಯುತ್ತ...ಕೇಳಿ ಆಸಕ್ತಿಗೆ ಗ್ರಹಣ ಹಿಡಿಯಿತು.
ಸಂಜೆ ವಾಕಿಂಗ್ ಹೋಗಲೆಂದು ನೀಟಾಗಿ ಡ್ರೆಸ್ ಮಾಡಿಕೊಂಡು, ಬಾಗಿಲಲ್ಲಿ ನಿಂತು, ವಾಸಂತಿಯ ಮನೆಯ ಕಡೆ ನೋಡುತ್ತಿದ್ದಾಗ ನಾಣಿ ಬಂದ. 'ಏನೋ, ಹೊಸ ಹಕ್ಕಿಯ ಮೇಲೆ ನಿನ್ನ ಕಣ್ಣೂ ಬಿದ್ದ ಹಾಗಿದೆ' ಅಂದ. 'ಬರೀ ಕುತೂಹಲ' ಎಂದು, 'ಹುಡುಗಿ ಹೇಗೆ?' ಕೇಳಿದೆ. 'ಹೇಗೆ ಅಂದರೆ ಎಲ್ಲರ ಹಾಗೇ. ಒಳ್ಳೆ ಅನುಭವಸ್ಥೆ. ಹತ್ತಾರು ಊರುಗಳು, ನೂರಾರು ಬಕರಾಗಳನ್ನು ಕಂಡಿದ್ದಾಳೆ. ಅವಳ ದರ್ಶನ ಭಾಗ್ಯಕ್ಕಾಗಿ ಪಕ್ಕದ ಲೈಬ್ರರಿಯಲ್ಲಿ ಲಾಟುಗಟ್ಟಲೆ ಅಭಿಮಾನಿಗಳು ಬೆಳಗಿನಿಂದ ರಾತ್ರೀ ತನಕ ಸತ್ತಿರ್ತಾರೆ. ಆ ಸುಂದರಿಯಾದರೋ ಅವರನ್ನು ನಿರಾಶೆಗೊಳಿಸದೆ, ಸಾಲಂಕೃತಳಾಗಿ ಬಾಗಿಲಲ್ಲಿ ನಿಂತು, ಓರೆನೋಟಗಳಿಂದ ಅವರ ಕಣ್ಮನಗಳನ್ನು ತಣಿಸುತ್ತಿರುತ್ತಾಳೆ..' ಅಂತ ಒಂದೇ ಉಸಿರಿಗೆ ವ್ಯಾಖ್ಯಾನ ಒದರಿದ. ಛೇ, ಇಷ್ಟು ಚೀಪೇ ಇವಳು ಅನ್ನಿಸಿ ನಿರಾಶೆಯಾಯಿತು.
ಅಂದೇ ಅವಳ ಅಣ್ಣ ಅನ್ನಿಸಿಕೊಂಡ ಬಕರಾನ ಭೇಟಿಯೂ ಆಯಿತು. ನಾಣಿ ಪರಿಚಯ ಮಾಡಿಸಿದ. ಗಿಡ್ಡಗೆ, ದಪ್ಪಗೆ, ಮುಖದ ತುಂಬ ಮೊಡವೆಯ, ಹರಕುಗಡ್ಡದ, ಪಿಯುಸಿ ಎಷ್ಟು ಪ್ರಯತ್ನಕ್ಕೂ ಪಾಸಾಗದೆ ಪಾಲಿಟೆಕ್ನಿಕ್ ಮೊದಲ ವರ್ಷದಲ್ಲಿದ್ದ, ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಆ ಪ್ರಾಣಿಯನ್ನು ಕಂಡಾಗ, ಈ ಮೊರಾನ್ ಸಂಗಡ ಸ್ನೇಹ ಅಸಹ್ಯ, ಅಸಾಧ್ಯ ಅನ್ನಿಸಿ ಆ ಹಂಚಿಕೆ ಕೈಬಿಟ್ಟೆ.
ವಾಕಿಂಗ್ ಮುಗಿಸಿ ಮನೆಗೆ ಬಂದಾಗ, ರೇಡಿಯೊ ರೂಮಿನಲ್ಲಿ ವಾಸಂತಿ ರತ್ನಳೊಂದಿಗೆ ಮಾತಾಡುತ್ತಿದ್ದಳು. ನಾನು ಬಂದ ಸುಳಿವು ಹತ್ತಿ ಸರಸರನೆ ಹೊರಟುಹೋದಳು. ನನ್ನ ಪಕ್ಕದಲ್ಲೇ ಸರಿದು ಹೋದ ಅವಳನ್ನು ಹತ್ತಿರದಿಂದ ದಿಟ್ಟಿಸಲು ಅದೇಕೋ ಧೈರ್ಯವಾಗದೆ ಮುಖ ತಿರುಗಿಸಿದೆ. ರತ್ನ ಅಂದಳು, 'ನೋಡೋ, ನಿನ್ನ ಈ ಪುಸ್ತಕ ಓದಿ ಕೊಡ್ತೀನಿ, ಕೊಡು, ಅಂದಳು. ನನ್ನ ಅಣ್ಣನ್ನ ಕೇಳಿ ನೋಡ್ತೀನಿ, ಅಂದೆ' ಎಂದು. ವಾಸಂತಿ ಸಾಮರ್ ಸೆಟ್ ಮಾಮ್ ಬರೆದ ಆಫ್ ಹ್ಯೂಮನ್ ಬಾಂಡೇಜ್ ಕಾದಂಬರಿಯನ್ನು ಕೇಳಿದ್ದಳು. ಆ ಬೆಪ್ಪುತಕ್ಕಡಿಗೆ ಯಾವುದಾದರೂ ಕಂತ್ರಿ ಕನ್ನಡ ಕಾದಂಬರಿ ಸರಿ. ಇದೆಲ್ಲ ಇಷ್ಟವಾಗುತ್ತದೆಯೇ? ತಾನೂ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತೇನೆಂದು ತೋರಿಸಿಕೊಳ್ಳಲು ಇದೆಲ್ಲ ನಟನೆ, ಎಂದು ಅನ್ನಿಸಿದರೂ, ನಾನು ನನ್ನ ಮತ್ತು ವಾಸಂತಿಯ ಪ್ರಣಯಕ್ಕೆ ಇದು ಮೊದಲ ಮೆಟ್ಟಿಲು, ಎಂದುಕೊಂಡು, 'ನನ್ನ ಕೇಳೋದೇನು? ನೀನೇ ಕೊಟ್ಟಿದ್ದರೆ ಆಗಿತ್ತು' ಎಂದೆ. ಅದಕ್ಕೆ ರತ್ನ, 'ಹಾಗಲ್ಲ ಕಣೊ, ಅವಳ ಮನೆ ತುಂಬ ಚಿಕ್ಕ ಮಕ್ಕಳು. ಕಾದಂಬರಿ ಕ್ಷೇಮವಾಗಿ ವಾಪಸ್ಸಾಗಲ್ಲ, ಅದಕ್ಕೋಸ್ಕರ' ಎಂದಳು. 'ಪರವಾಗಿಲ್ಲ, ಕೊಡು' ಎಂದೆ. ಕನ್ನಡ ಪ್ರಣಯ ಕಾದಂಬರಿಗಳಲ್ಲಿನಂತೆ ಪುಸ್ತಕದಲ್ಲಿ ಪ್ರೇಮಪತ್ರವೇನಾದರೂ ಬಂದರೇ... ಅನ್ನಿಸಿ ನನ್ನ ಕಲ್ಪನೆಗೆ ನಾನೇ ನಕ್ಕೆ.
ರಾತ್ರಿ, ನಾನು ಮತ್ತು ವಾಸಂತಿ ಯಾವುದೋ ಸ್ವರ್ಗವೆಂಬಂಥ ಕಲ್ಪನಾಲೋಕದಲ್ಲಿ ಪ್ರೇಮವಿಹಾರ ಮಾಡುತ್ತಿದ್ದಂತೆ, ನೀನೇ ನನ್ನ ಪ್ರಾಣ.. ಎಂದು ಅವಳೂ, ನೀನೇ ನನ್ನ ಜೀವನ.. ಎಂದು ನಾನೂ ಹಾಡುತ್ತಿದ್ದಂತೆ ಕನಸಾಯಿತು. ಈ ಹುಡುಗಿ ನಿಜವಾಗಿಯೂ ನನ್ನ ಹೃದಯವನ್ನೇ ಹೊಕ್ಕಿದ್ದಾಳೆಯೇ ಅನ್ನಿಸಿ, ಭಯವಾಯಿತು.
ಬೆಳಿಗ್ಗೆ ಮತ್ತೆ ಕೊಟ್ಟಿಗೆಗೆ ಹೋದಾಗ, ಅಲ್ಲಿ ನನ್ನ ಚಿಕ್ಕ ತಮ್ಮ, ತಂಗಿ ಮಲಗಿದ್ದ ಲಕ್ಷ್ಮಿಯ ಬೆನ್ನ ಮೇಲೆ ಕೂತು, ಅದರ ಉದ್ದನೆಯ ಚೂಪಾದ ಕೊಂಬುಗಳನ್ನು ಹಿಡಿದು ಜಗ್ಗುತ್ತ, ಸವಾರಿ ಮಾಡುತ್ತ, ಸಂತೋಷದಿಂದ ಹೈ.. ಹೈ.. ಎಂದು ಕೂಗುತ್ತಿದ್ದರು. ಆದರೂ ಲಕ್ಷ್ಮಿ ತನ್ನ ಕಣ್ಣುಗಳನ್ನು ಅರೆ ಮುಚ್ಚಿ ಶಾಂತವಾಗಿ ಮೆಲುಕು ಹಾಕುತ್ತಿತ್ತು. ಇದನ್ನು ಕಂಡು ನಾನು ಅರೆ, ಈ ಛೋಟಾಗಳು ಇಷ್ಟು ಧೈರ್ಯವಾಗಿ ಇದರ ಮೇಲೆ ಕೂತು ಸವಾರಿ ಮಾಡುತ್ತಿದ್ದಾರಲ್ಲ, ನಾನೂ ಇದನ್ನು ಮುಟ್ಟಿ ನೋಡಿಯೇಬಿಡುತ್ತೇನೆ ಎಂದು ಹೊಟ್ಟೆಕಿಚ್ಚಿನಿಂದ ಲಕ್ಷ್ಮಿಯ ಬಳಿ ಹೋದೆ. ಅದು ತನ್ನ ಕೆಂಗಣ್ಣುಗಳಿಂದ ನನ್ನನ್ನೇ ದುರುಗುಟ್ಟಿ ನೋಡಿ ತಟ್ಟನೆ ಎದ್ದು ನಿಂತಿತು. ಅದರ ಮೇಲೆ ಕೂತಿದ್ದ ತಮ್ಮ, ತಂಗಿ ಜಾರಿಬಿದ್ದು, ಹೋ ಅಂತ ಅಳಹತ್ತಿ, ನಂಜಿ ಅಮ್ಮ ಅಜ್ಜಿ ಎಲ್ಲ ಓಡಿಬಂದು ರಂಪ ರಾಮಾಯಣವಾಯಿತು. ನನಗೆ ಲಕ್ಷ್ಮಿಯ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ಏನೂ ಮಾಡಲಾಗದೆ ಸುಮ್ಮನಾದೆ. ಅದಕ್ಕೆ ನಿನ್ನ ರೂಢಿಯಾಗುವ ತನಕ ಅದರ ಹತ್ತಿರ ಹೋಗಬೇಡ ಎಂದು ಅಮ್ಮ ಬುದ್ಧಿ ಹೇಳಿದಳು.
ಬೆಳಗಿನ ತಿಂಡಿಗಾಗಿ ದೋಸೆ ಹುಯ್ಯುತ್ತಿದ್ದರು. ನಾನು ಅಡಿಗೆಮನೆಗೆ ಹೋಗಿ, ನನಗೆ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿ ಚೆನ್ನಾಗಿ ರೋಸ್ಟ್ ಮಾಡು ಎಂದೆ ಅಮ್ಮನಿಗೆ. ಚಟ್ನಿ ರುಬ್ಬುತ್ತಿದ್ದ ರತ್ನ, 'ಎಣ್ಣೆ ಜಾಸ್ತಿ ತಿನ್ನಬೇಡ ಕಣೊ, ಪಿತ್ತ ಆಗುತ್ತೆ' ಅಂದಳು. ಅದಕ್ಕೆ ನಾನು, 'ಓಹೋಹೋ, ಮಹಾ ದೊಡ್ಡ ಡಾಕ್ಟರ್ ಹೇಳ್ತಾ ಇದಾಳೆ. ನೂರಾರು ಹೋಟೆಲಿನ ಸಾವಿರಾರು ಮಸಾಲೆದೋಸೆ ತಿಂದೇ ಏನೂ ಆಗಿಲ್ಲ ನನಗೆ, ಗೊತ್ತ' ಎಂದೆ. 'ಅದಕ್ಕೇ ಹೀಗಿದ್ದೀಯ ಜಟ್ಟಿ' ಎಂದು ಹಾಸ್ಯ ಮಾಡಿದಳು ಅಮ್ಮ. 'ನೀನು ಡಾಕ್ಟರಾಗಿದ್ದರೆ ತುಂಬ ಚೆನ್ನಾಗಿತ್ತು' ಎಂದಳು ಅಜ್ಜಿ. 'ಎಮ್ಮೆ ಆಗ್ತಾನಲ್ಲ ಸಾಲದೆ?' ಎಂದು ಅಣಕಿಸಿದಳು ರತ್ನ. 'ನಾನು ಡಾಕ್ಟರಾಗದಿದ್ದರೆ ಏನಂತೆ? ರತ್ನಳನ್ನೇ ಡಾಕ್ಟರ್ ಮಾಡಿಬಿಡೋದು' ಎಂದೆ. 'ಸದ್ಯ, ಪೀಯೂಸಿ ಓದಿಸಿದರೆ ಸಾಕಾಗಿದೆ' ಎಂದಳು ರತ್ನ. 'ಯಾಕೆ ನೀನು ಮನೇಲಿ ಕೂತು ಏನು ಮಾಡ್ಬೇಕಂತೆ ಹೇಗೂ ಪೀಯೂಸಿ ಈ ಊರಲ್ಲೇ ಶುರುವಾಗಿದೆಯಲ್ಲ, ಯಾಕೆ ಸೇರಬಾರದು' ಎಂದು ಕೇಳಿದೆ. ಅದಕ್ಕೆ ಅಮ್ಮ, 'ಈಗಾಗಲೇ ನಿನ್ನ ಕಾಲೇಜಿಗೆ, ಹಾಸ್ಟೆಲಿಗೆ ಅಂತ ಎಷ್ಟೊಂದು ಖರ್ಚು ಅಂತ ಗೊಣಗ್ತಾ ಇದಾರೆ ನಿಮ್ಮಪ್ಪ, ಇನ್ನು ಇವಳನ್ನು ಬೇರೆ ಕಾಲೇಜಿಗೆ ಸೇರಿಸಲು ಎಲ್ಲಿಂದ ತಂದು ಹವಣಿಸೋದು' ಎಂದಳು. 'ಯಾಕೆ? ನಾನು ದೊಡ್ಡ ಬೆಪ್ಪನಾಗಿ, ಅಪ್ಪ ಹೇಳಿದ ಹಾಗೆ ಕೇಳಿಕೊಂಡು, ಅಂಗಡಿಯಲ್ಲಿ ಬಿದ್ದಿದ್ದು, ಸಂಪಾದನೆ ಹೆಚ್ಚು ಮಾಡಿದ್ದರೆ ಅಪ್ಪನಿಗೆ ತುಂಬ ಸಂತೋಷವಾಗುತ್ತಿತ್ತೇನೊ, ಅಲ್ವ? ರತ್ನ ಕಾಲೇಜಿಗೆ ಸೇರಲೇ ಬೇಕು' ಎಂದೆ. 'ಹುಡುಗಿಯರೆಲ್ಲ ಅಷ್ಟೊಂದು ಓದಿ ಏನು ಮಾಡಬೇಕಾಗಿದೆಯಪ್ಪ? ಎಷ್ಟು ಓದಿದರೂ ಕೊನೆಗೆ ಅಡಿಗೆಮನೆ ತಪ್ಪಿದ್ದಲ್ಲವಲ್ಲ..' ಎಂದು ಆಕ್ಷೇಪಣೆ ಎತ್ತಿದಳು ಅಜ್ಜಿ. 'ಅದೆಲ್ಲ ನಿಮ್ಮ ಕಾಲಕ್ಕಾಯ್ತು, ಅಜ್ಜಿ. ಈಗ ಹುಡುಗರಿಗಿಂತ ಹುಡುಗಿಯರೇ ಮುಂದು' ಎಂದೆ. 'ಅದಲ್ಲ ಕಣೊ, ಇವಳಿಗೆ ಅದೂ ಇದೂ ಮನೆಗೆಲಸವೇ ಸಾಕಾಗುತ್ತೆ. ಇನ್ನು ಓದೋದಕ್ಕೆ ಸಮಯ ಎಲ್ಲಿ?' ಎಂದಳು ಅಮ್ಮ. ಅದಕ್ಕೆ ನಾನು, 'ಇವಳು ಬೇಕಾದರೆ ಟ್ಯುಟೋರಿಯಲ್ ಸೇರಲಿ. ಅದಕ್ಕೆ ಆಗೋ ಖರ್ಚು ನಾನು ಕೊಡ್ತೀನಿ. ನನ್ನ ಈ ವರ್ಷದ ಸ್ಕಾಲರ್‌ಶಿಪ್ ಎಲ್ಲ ರತ್ನಾಗೇ ಕೊಟ್ಟುಬಿಡ್ತೀನಿ' ಎಂದೆ. ಅಮ್ಮ, ರತ್ನ ಸಂತೋಷದಿಂದ ಹಿಗ್ಗಿದರು. ನಾನೂ ಸಹ ಏನೋ ಮಹಾ ತ್ಯಾಗ ಮಾಡಿದಂತೆ ಉಬ್ಬಿದೆ. ಆದರೆ ಮನಸ್ಸು ಆದರ್ಶದ ಅಟ್ಟದಿಂದ ಮತ್ತೆ ನೆಲಕ್ಕಿಳಿದ ಮೇಲೆ ಯೋಚಿಸತೊಡಗಿದೆ. ರತ್ನ ಟ್ಯುಟೋರಿಯಲ್ಲಿಗೆ ಹೋಗಿಯೂ ಸಹ ಪಾಸಾಗಿ, ಒಳ್ಳೇ ಮಾರ್ಕ್ ತೆಗೆದುಕೊಳ್ಳುತ್ತಾಳೆಂದು ಯಾವ ಗ್ಯಾರೆಂಟಿ? ಫೇಲಾದರೆ? ನಾನು ಕೊಡುವ ಹಣವೆಲ್ಲ ವ್ಯರ್ಥ. ಇಲ್ಲದ ತರಲೆ ನನಗೇಕೆ? ಆ ದುಡ್ಡಿನಲ್ಲಿ ಬಟ್ಟೆ ಹೊಲಿಸಿಕೊಳ್ಳಬಹುದಾಗಿತ್ತು, ಪುಸ್ತಕಗಳನ್ನು ಕೊಳ್ಳಬಹುದಾಗಿತ್ತು, ಏನಾದರೂ ಮಾಡಬಹುದಾಗಿತ್ತು. ಹೀಗೇಕೆ ಹೇಳಿ ಸಿಕ್ಕಿಕೊಂಡೆ.. ಎಂದು.
ಮಧ್ಯಾಹ್ನ ಕಾರ್ಡ್ಸ್ ಆಡಲು ನಾಣಿಯೂ ಬರದೆ ತುಂಬ ಬೋರಾಯಿತು. ಪಕ್ಕದ ಲೈಬ್ರರಿಗೆ ಹೋಗಿ, ಪುಸ್ತಕಗಳ ಪಟ್ಟಿ ನೋಡುತ್ತ ಕುಳಿತೆ. ವಾಸಂತಿಯ ಮನೆಯ ಕಡೆ ದೃಷ್ಟಿ ಹರಿದಾಗ, ಅವಳು ಮುಂಬಾಗಿಲಿನ ಮೆಟ್ಟಿಲ ಮೇಲೆ ಕುಳಿತು ಪುಸ್ತಕ ಓದುತ್ತಿದ್ದಳು. ಅದು ನಾನು ಕೊಟ್ಟ ಪುಸ್ತಕವೇ ಇರಬಹುದೆಂದು ಉಬ್ಬಿದೆ. ಪುಸ್ತಕದ ಪಟ್ಟಿಯಿಂದ ತಲೆಯೆತ್ತಿ ಆಗಾಗ ಅವಳ ಕಡೆ ನೋಡುತ್ತ, ಮಹಾ ಹಾಸ್ಯಗಾರನಂತೆ ಹಾಸ್ಯಚಟಾಕಿಗಳನ್ನು ಹಾರಿಸುತ್ತಿದ್ದ ಲೈಬ್ರೇರಿಯನ್ನನ ಸಪ್ಪೆ ಜೋಕುಗಳಿಗೆ ಬಾರದ ನಗೆ ಬರಿಸಿಕೊಂಡು ನಗುತ್ತಿದ್ದೆ. ವಾಸಂತಿಯು ಆಗಾಗ ನನ್ನ ಕಡೆ ಕದ್ದು ಕದ್ದು ನೋಡಿ ನಸುನಗೆ ಬೀರುತ್ತಿದ್ದಳು. ಅಷ್ಟರಲ್ಲಿ ಆ ಮನೆಯಿಂದ ವಾಸಂತಿಯ ಅಣ್ಣ ಮೊರೋನ್ ಆಚೆ ಬಂದ. ಅವಳಿಗೆ ಏನೋ ಹೇಳಿದ. ಅವಳು ಮನೆಯೊಳಗೆ ಮಾಯವಾದಳು. ಲೈಬ್ರರಿಗೆ ಬಂದು ಪುಸ್ತಕ ಹಿಂತಿರುಗಿಸುತ್ತ ನನಗೆ 'ಹಲೋ' ಅಂದ. 'ಹಲೋ' ಎಂದೆ. 'ಏನು ಬಹಳ ಹಲ್ಕಿರಿದು ನಗುತ್ತಿದ್ದಿರಲ್ಲ?' ಅಂದ. ನಿನ್ನ ತಂಗೀನ ನೋಡಿ ಕಣೋ, ಬೆಪ್ಪೆ ಎಂದು ಮುಖದ ಮೇಲೆ ಉಗುಳಿದಂತೆ ಅನ್ನಬೇಕೆನಿಸಿದರೂ 'ನಿಮಗೇನು ಇದ್ದಕ್ಕಿದ್ದ ಹಾಗೇ ಅಷ್ಟು ಕುತೂಹಲ?' ಎಂದೆ ವ್ಯಂಗ್ಯವಾಗಿ. 'ಏನಿಲ್ಲ ಸುಮ್ಮನೆ ಕೇಳಿದೆ' ಅಂದ. 'ನಾನೂ ಆಷ್ಟೇ' ಅಂದೆ. ತೆಪ್ಪಗೆ ಬಾಯಿ ಮುಚ್ಚಿಕೊಂಡು ಹೋದ ಗುಗ್ಗು. ಹೋ ಅಂತ ನಕ್ಕು, ಅವನಿಗೆ ಅವಮಾನ ಮಾಡಬೇಕೆನಿಸಿತು. ನನ್ನ ತಂಗಿಯನ್ನು ಇಡೀ ಊರೇ ಹೀಗೆ ದಿಟ್ಟಿಸಿ ನೋಡಿ ನಕ್ಕಿದ್ದರೂ ನಾನು ಏಕೆಂದು ಕೇಳುತ್ತಿರಲಿಲ್ಲ. ಬೇರೆಯವರು ತಾನೇ ನೋಡಬೇಕು ನನ್ನ ತಂಗಿಯನ್ನು?
ಸಂಜೆಯ ಸುತ್ತಾಟಕ್ಕೆಂದು ನಾಣಿಗಾಗಿ ಕಾಯುತ್ತ ಗೇಟಿನ ಬಳಿ ನಿಂತಿದ್ದೆ. ಅವನು ಎಷ್ಟು ಹೊತ್ತಾದರೂ ಬಾರದೆ ಕೋಪ ಬಂದಿತ್ತು. ಬರಲಿ, ರೇಗುತ್ತೇನೆ ಎಂದು ಕಾದೆ. ಅಷ್ಟರಲ್ಲಿ ಎದುರುಮನೆಯಿಂದ ಒಂದು ಮುದ್ದಾದ ಪುಟ್ಟ ಹುಡುಗಿ ಕಷ್ಟ ಪಟ್ಟುಕೊಂಡು ಮೆಟ್ಟಿಲಿಳಿದು ತೂರಾಡುತ್ತ ಆ ಮನೆಯ ಗೇಟಿನ ಬಳಿ ಬಂದು ನಿಂತಳು. ವಾಸಂತಿಯ ತಂಗಿಯೆಂದು ಊಹಿಸಿ, ಕೈಚಾಚಿ ಬಾ.. ಬಾ.. ಎಂದೆ. ಅವಳು ದಡದಡನೆ ರಸ್ತೆ ದಾಟಿ, ತೂರಾಡುತ್ತ ನನ್ನ ಬಳಿ ಬಂದಳು. ಅವಳನ್ನು ಎತ್ತಿಕೊಂಡು, ಮುಖದ ತುಂಬ ಮುದ್ದಿಸಿ, ಪಕ್ಕದ ಅಂಗಡಿಯಲ್ಲಿ ಬಿಸ್ಕತ್ತು ಚಾಕೊಲೇಟು ಕೊಡಿಸಿ, ಮನೆಗೆ ಕರೆತಂದೆ. 'ನಿನ್ನ ಹೆಸರೇನು, ಮರಿ?' ಕೇಳಿದೆ. 'ಚಪ್ಪ..' ಎಂದಳು ಮುದ್ದಾಗಿ. ಅವಳೊಂದಿಗೆ ಮಾತಾಡುತ್ತ ಆಟವಾಡುತ್ತಿದ್ದಾಗ ವಾಸಂತಿ ಬಂದಳು. ವೆರಾಂಡಾಲಿ ನಾನೊಬ್ಬನೇ ಇರುವುದು ಕಂಡು, ಗಾಬರಿಗೊಂಡು, ಹಿಂತಿರುಗುವುದರಲ್ಲಿದ್ದಳು. 'ರತ್ನ ಬೇಕಿತ್ತ?' ಅಂದೆ. 'ಹಾ.. ಹೂ.. ಅಲ್ಲ, ಅಲ್ಲ, ಚಂಪ..' ಎಂದಳು ತೊದಲುತ್ತ. 'ಹೋಗ್ತೀಯಾ ಚಂಪ?' ಕೇಳಿದೆ. 'ನಾ ಬಲಲ್ಲ... ಮಾಮಾ ಅತ್ಲಾನೇ ಇಲ್ತೀನಿ' ಅಂದಳು ಕೈಯಾಡಿಸುತ್ತ. ವಾಸಂತಿ ಏನು ಮಾಡಲೂ ತೋಚದೆ ನಿಂತಳು. ಕೆನ್ನೆಗಳು ಕೆಂಗುಲಾಬಿಗಳಾಗಿದ್ದವು. ಅಷ್ಟರಲ್ಲಿ ರತ್ನ ಒಳಗಿಂದ ಬಂದು, 'ಅಲ್ಲೇಕೆ ನಿಂತಿದ್ದೀಯೇ ಬಾ ಒಳಗೆ' ಎಂದಳು ವಾಸಂತಿಗೆ. ವಾಸಂತಿ ಒಳಗೆ ಬಂದು, 'ಈ ಕತ್ತೆ ಚಂಪಿ ನೋಡೇ, ಮನೇಲಿ ಕೂಡಿಟ್ಟರೂ ಹೇಗೋ ತಪ್ಪಿಸಿಕೊಂಡು ರಸ್ತೆಗೆ ಓಡಿ ಬಂದುಬಿಡ್ತಾಳೆ. ರಸ್ತೆ ತುಂಬ ಕಾರು ಬಸ್ಸು ಓಡಾಡ್ತಾ ಇರ್ತವೆ. ಏನಾದರೂ ಆದರೆ ಏನು ಗತಿ' ಎಂದಳು. ಅಷ್ಟರಲ್ಲಿ ನಾಣಿ ಬಂದ. 'ಎಲ್ಲಿ ಹಾಳಾಗಿ ಹೋಗಿದ್ದೆಯೋ ಬೆಳಗಿನಿಂದ' ಎಂದೆ. 'ಹಳ್ಳಿಗೆ ಹೋಗಿದ್ದೆ ಕಣೊ' ಎಂದು, ಒಳಕ್ಕೆ ಹೋದ ವಾಸಂತಿಯನ್ನು ನೋಡತೊಡಗಿದ. ಚಂಪಾನ ಒಳಗೆ ಬಿಟ್ಟುಬಂದು, ನಾಣಿ ಜೊತೆ ಹೊರಗೆ ಹೊರಟೆ. ನಾಣಿ ನಗುತ್ತಿದ್ದ. 'ಯಾಕೋ, ಫೂಲ್' ಎಂದೆ. 'ಪರವಾಗಿಲ್ಲ ಕಣೊ, ಒಳಗೊಳಗೇ ಏನೋ ಕರಾಮತ್ತು ನಡೆಸುತ್ತಿದ್ದೀಯಲ್ಲ' ಎಂದ.
ಸುತ್ತಾಟ ಮುಗಿಸಿ ಹಿಂತಿರುಗಿದಾಗ, ಕತ್ತಲೆ ಕವಿಯುತ್ತಿತ್ತು. ವಾಸಂತಿ ಮನೆ ಗೇಟಿನ ಹತ್ತಿರ ರತ್ನ, ವಾಸಂತಿ ನಿಂತಿದ್ದರು. ರತ್ನ, ನನ್ನ ಹತ್ತಿರ ಬಂದು, ಗುಟ್ಟಾಗಿ ಹೇಳಿದಳು, 'ನೋಡೋ, ಆ ಲೈಬ್ರರೀಲಿ ಒಬ್ಬ ಹಲ್ಕಾ ಇದ್ದಾನೆ. ಅವನು ದಿನಾ ವಾಸಂತೀನ ಪೋಲಿ ಪೋಲಿಯಾಗೆಲ್ಲಾ ಚುಡಾಯಿಸ್ತಾನಂತೆ' ಎಂದು. ಅದಕ್ಕೆ ನಾನು, 'ಹೌದಾ? ಇರು ನೋಡ್ಕೋತೀನಿ ಅವನ್ನ' ಎಂದೆ. ರೋಷದಿಂದ ಮತ್ತನಾಗಿ, ತಮಿಳು ಹೀರೋ ಥರ, ವಾಸಂತಿಯ ಮಾನರಕ್ಷಣೆಗಾಗಿ, ಆ ಖಳನನ್ನು ಸದೆಬಡೆದು, ವಾಸಂತಿಗೆ ನನ್ನ ಪೌರುಷದ ಪರಿಚಯ ಮಾಡಿಕೊಡುವವನಂತೆ, ಲೈಬ್ರರಿಗೆ ಸರಸರನೆ ಹೋದೆ. ಅಲ್ಲಿ ಒಬ್ಬ ಹುರಿಮೀಸೆ ಬಿಟ್ಟ ಧಾಂಡಿಗ ಸಿಗರೇಟು ಸೇದುತ್ತ, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದ. ನೋಡಿದ ಕೂಡಲೇ ನನ್ನ ಭಾವಾವೇಶವೆಲ್ಲ ಕೈಕೊಟ್ಟು ಪಲಾಯನ ಮಾಡಿತು. ಅವನು ಒಂದು ನಿಮಿಷ ನನ್ನ ಕಡೆ ನೋಡಿ, ಸಿಗರೇಟನ್ನು ಜೋರಾಗಿ ದಂ ಎಳೆದು, ಹೊಗೆಯನ್ನು ವೃತ್ತಾಕಾರವಾಗಿ ನನ್ನ ಕಡೆ ಉಗುಳಿದ. ಹೊಗೆಯುಂಗುರ ನನ್ನ ಮುಖ ಹಾದುಹೋಯಿತು. ತಿರಸ್ಕಾರದ ನಗೆ ನಕ್ಕ. ಭಾರೀ ಅವಮಾನವಾಯಿತು. ಆದರೆ ಅವನೊಂದಿಗೆ ಸೆಣೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿ, ನನ್ನ ದೌರ್ಬಲ್ಯದ ಬಗ್ಗೆ ತುಂಬ ಕೀಳೆನಿಸಿತು. ಹೇಡಿಯಂತೆ ಸುಮ್ಮನೆ ಹಿಂತಿರುಗಿದರೆ ವಾಸಂತಿ ಏನೆಂದುಕೊಂಡಾಳು? ನನ್ನನ್ನು ಹೇಡಿ, ಕೈಲಾಗದವನು ಅಂದುಕೊಳ್ಳದೆ ಇರುತ್ತಾಳೆಯೆ? ಸೋಲು ನಿಶ್ಚಯವಾದರೂ ಈ ಧಾಂಡಿಗನೊಂದಿಗೆ ಸೆಣೆಸಿ, ವಾಸಂತಿಗಾಗಿ ಸಾವನ್ನಪ್ಪಿದರೂ ಚಿಂತೆಯಿಲ್ಲ, ಅನ್ನಿಸಿತು. ಆದರೆ ಮರುಕ್ಷಣ, ನನಗೇಕೆ ಎಲ್ಲೂ ಇಲ್ಲದ ಈ ಶಿವಲ್ರಿ.. ಸೆಂಟಿಮೆಂಟಾಲಿಟಿ.. ಅವಳ್ಯಾರೋ ನಾನ್ಯಾರೋ, ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆಂದು ಯಾವ ನಂಬಿಕೆ? ಒಂದು ವೇಳೆ ಪ್ರೀತಿಸಿದರೂ ನಾನೇನು ಅವಳನ್ನು ಮದುವೆಯಾಗುತ್ತೇನೆಯೆ? ಸುಖ ಪಡ್ತೇನೆಯೆ? ಇಲ್ಲದ ಉಸಾಬರಿ ನನಗೇಕೆ ಅನ್ನಿಸಿತು. ಯಾವ ನಿಶ್ಚಯಕ್ಕೂ ಬರಲಾಗದೆ, ಭಾವನೆಗಳ ತುಮುಲದಲ್ಲೇ ತಲೆ ತಗ್ಗಿಸಿಕೊಂಡು ಹಿಂತಿರುಗಿದೆ. ವಾಸಂತಿಯ ಕಡೆ ನೋಡುವ ಧೈರ್ಯವಾಗಲಿಲ್ಲ.
ಆದ ಅವಮಾನ ಬೆಂಬಿಡದ ಭೂತದ ಹಾಗೆ ರಾತ್ರಿಯೆಲ್ಲ ಕಾಡಿತು. ಆದದ್ದಾದರೂ ಏನು? ನಾನೇಕೆ ಇಷ್ಟು ಭಾವವಶನಾಗುತ್ತಿದ್ದೇನೆ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ, ಮೂರು ಹೊತ್ತೂ ಸಾಹಿತ್ಯ, ತತ್ವಶಾಸ್ತ್ರ ಓದಿಕೊಂಡು, ಬಾಳೆಲ್ಲ ಬರೀ ಭ್ರಾಂತಿ, ನಿರರ್ಥಕ ಎಂದು ಭಾಷಣ ಬಿಗಿಯುವ ನನಗಿಂತ, ಜುಮ್ಮಂತ ಸಿಗರೇಟು ಸೇದಿಕೊಂಡು, ಮೈ ಬೆಳೆಸಿಕೊಂಡು, ಹುಡುಗಿಯರನ್ನು ಚುಡಾಯಿಸುವ ಆ ಧಾಂಡಿಗನೇ ಉತ್ತಮ ಅನಿಸಿತು. ನೀನೂ ನಿನ್ನ ಪುಸ್ತಕಗಳನ್ನೆಲ್ಲ ಸುಟ್ಟು, ಹುರಿಮೀಸೆ ಬಿಟ್ಟು, ಕಸರತ್ತು ಮಾಡಿ, ಧಾಂಡಿಗನಾಗಿ, ವಾಸಂತಿಯನ್ನು ಪೋಲಿ ಪೋಲಿಯಾಗಿ ಚುಡಾಯಿಸಿ ಮಜಾ ನೋಡು ಎಂದು ನನ್ನ ಅಂತರಾತ್ಮದ ಒಂದು ಭಾಗ ಉಪದೇಶ ನೀಡತೊಡಗಿತು. ನನ್ನ ಹೇಡಿತನಕ್ಕೆ, ಪುಕ್ಕಲುತನಕ್ಕೆ, ದೌರ್ಬಲ್ಯಕ್ಕೆ ನನ್ನ ಬಗ್ಗೆ ನನಗೇ ತಿರಸ್ಕಾರವಾಯಿತು.
ರಾತ್ರಿ ಭಯಂಕರ ಕನಸು: ಗೇಟಿನ ಬಳಿ ನಿಂತು, ಬಾ..ಬಾ.. ಎಂದು ಕರೆದದ್ದಕ್ಕೆ ನನ್ನ ಕಡೆ ಓಡುತ್ತ, ತೂರಾಡುತ್ತ, ರಸ್ತೆ ದಾಟಿ ಬರುತ್ತಿದ್ದ ಚಂಪಾ ಮೇಲೆ ಬರ್ರೆಂದು ಬಂದ ಕಾರು ಹರಿಯಿತು. ಚಿಲ್ಲೆಂದು ಚಿಮ್ಮಿದ ರಕ್ತ ನನ್ನ ಮೈಮೇಲೆ ಸಿಡಿದು ರಸ್ತೆಯೆಲ್ಲ ಚೆಲ್ಲಾಡಿತು. ಚಂಪಾ... ಎಂದು ಚೀರಿ, ಆ ದೃಶ್ಯ ನೋಡಲಾಗದೆ ಎರಡೂ ಕೈಯಲ್ಲಿ ಮುಖ ಮುಚ್ಚಿಕೊಂಡೆ. ಅಷ್ಟರಲ್ಲಿ ವಾಸಂತಿ ಕಿಟಾರನೆ ಚೀರಿದ ಶಬ್ದ. ಕಣ್ಣು ಬಿಟ್ಟೆ. ಆ ಹುರಿಮೀಸೆಯ ಧಾಂಡಿಗ ವಾಸಂತಿಯನ್ನು ಬಲಾತ್ಕಾರವಾಗಿ ಕಾರಿನೊಳಕ್ಕೆ ಎಳೆದುಕೊಂಡು, ಕಾರನ್ನು ಬುರ್ರಂತ ಸ್ಟಾರ್ಟ್ ಮಾಡಿ, ಗಹಗಹಿಸಿ ನಗುತ್ತ ಹೊರಟ. ನಾನು ವಾಸಂತಿಯ ರಕ್ಷಣೆಗೆಂದು ಕಾರಿನ ಹಿಂದೆ ಓಡಿಯೇ ಓಡಿದೆ. ಧೂಳಿನ ಬೆಟ್ಟವನ್ನೇ ಹಿಂದಿಟ್ಟುಕೊಂಡು ಓಡುತ್ತಿದ್ದ ಕಾರು ಕೊನೆಗೆ ನಿಂತದ್ದು ಒಂದು ಮರಳುಗಾಡಿನಲ್ಲಿ. ಮೇಲೂ ಕೆಳಗೂ ಕೆಂಡದಂತೆ ಸುಡುವ ಸೂರ್ಯ ಮತ್ತು ಮರಳು. ಓಡಿ ಓಡಿ ದಣಿದಿದ್ದ ನನಗೆ ತಲೆ ಸುತ್ತಿಬಂದು, ಕಣ್ಣು ಮಂಜಾಗುತ್ತಿತ್ತು. ಅಷ್ಟರಲ್ಲಿ ಕಾರಿನ ಬಾಗಿಲು ತೆರೆದು ಹೊರಬಂದ ಧಾಂಡಿಗ ವಾಸಂತಿಯನ್ನು ಬಲಾತ್ಕಾರವಾಗಿ ಹೊರಗೆಳೆದು ಅವಳ ಮೇಲೆ ಅತ್ಯಾಚಾರಕ್ಕೆ ತೊಡಗಿದ. ಕೋಪೋದ್ರಿಕ್ತನಾದ ನಾನು ಅವನ ಮೇಲೆ ನುಗ್ಗಿದೆ. ಬಲವಾದ ಪೆಟ್ಟು ಬಿತ್ತು. ನಿಸ್ಸಹಾಯಕನಾಗಿ, ತೀರಾ ನಿಶ್ಶಕ್ತನಾಗಿ, ಸುತ್ತ ಕತ್ತಲೆ ಕವಿದು ಬಂದು, ಅದರಲ್ಲಿ ವಾಸಂತಿ, ಧಾಂಡಿಗ, ಮರಳುಗಾಡು, ಬಿಸಿಲು ಎಲ್ಲ ಮಂಜಿನಂತೆ ಕರಗಿ, ಕೊನೆಗೆ ಎಲ್ಲ ಶೂನ್ಯವಾಗಿ, ಜ್ಞಾನ ತಪ್ಪಿ ಕುಸಿದು ಬಿದ್ದೆ.
ತಟ್ಟನೆ ಎಚ್ಚರಾಗಿ ಕಣ್ಣು ಬಿಟ್ಟಾಗ ಸುತ್ತಲೂ ಬೆಳ್ಳಗೆ ಬೆಳಗಾಗಿತ್ತು. ಕನಸನ್ನು ನೆನೆಸಿಕೊಂಡು, ಕೊನೆಗೆ ಕನಸಿನಲ್ಲಾದರೂ ವಾಸಂತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲವಲ್ಲ.. ಎಂದು, ಮುಸುಕೆಳೆದುಕೊಂಡು ಚಡಪಡಿಸತೊಡಗಿದೆ. ಅಷ್ಟರಲ್ಲಿ ನನ್ನ ಪುಟ್ಟ ತಂಗಿ ಸುಧಾ ಹೊದಿಕೆಯೆಳೆದು, 'ಏಲು ಗಂತೆ ಆಯ್ತು, ಏಲೋ' ಎಂದು ಕಿವಿಯಲ್ಲೇ ಕೂಗತೊಡಗಿದಳು. ಅವಳ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ರೇಗಿ ಕೂಗಾಡಿದೆ. ಅವಳು ಮುಸಿಮುಸಿ ಅಳುತ್ತ ಒಳಕ್ಕೆ ಹೋದಳು. ಹಾಗೆ ಮಾಡಬಾರದಾಗಿತ್ತು ಅನಿಸಿತು. ಏಕೆ ಎಲ್ಲಾ ಹೀಗೆ ನನ್ನ ಕಾಡ್ತಾರೆ ಎಂದು ಸಿಡಿಮಿಡಿಗುಟ್ಟುತ್ತ, ಎದ್ದು ಹೊರಟೆ.
ಬಚ್ಚಲುಮನೆಯಲ್ಲಿ ಮುಖ ತೊಳೆದು ಬಂದಾಗ, ಮತ್ತೆ ಅದೇ ಗಲಭೆ ಹಿತ್ತಿಲಲ್ಲಿ. ಇಂದು ಏನಾದರೂ ಆಗಲಿ, ಲಕ್ಷ್ಮಿಯನ್ನು ಮುಟ್ಟಿಯೇ ತೀರುತ್ತೇನೆಂದು ಹಠ ತೊಟ್ಟು, ಕೊಟ್ಟಿಗೆ ಹೊಕ್ಕೆ. ನಂಜಿ ಹಸುಗಳಿಗೆ ಹುಲ್ಲು ಹಾಕುತ್ತಿದ್ದಳು. ಲಕ್ಷ್ಮಿ ಮತ್ತೆ ನನ್ನನ್ನು ದುರುಗುಟ್ಟಿಕೊಂಡೇ ನೋಡಿತು. ಮುಂದೆ ಹೋಗಲೋ ಬೇಡವೋ ಎಂದು ಯೋಚಿಸಿದೆ. ಲಕ್ಷ್ಮಿಯ ಕೆಂಗಣ್ಣು, ಚೂಪುಕೊಂಬು ನೋಡಿ ಅಂಜಿಕೆಯಾಯಿತು. ಛೇ, ಹೇಡಿಯಾಗಬಾರದು ಎಂದುಕೊಂಡು, ಮುಂದೆ ಹೋದೆ. ಲಕ್ಷ್ಮಿ ಹಿಂದೆ ಹಿಂದೆ ಸರಿದು, ಸರ್ರೆಂದು ಮುಂದೆ ಬಂದು ತನ್ನ ತಲೆಯಿಂದ ನನ್ನನ್ನು ಗುಮ್ಮಿತು. ನಾನು ನನ್ನ ಹಿಂದಿದ್ದ ಜೋಳದಕಡ್ಡಿಯ ರಾಶಿಯ ಮೇಲೆ ದೊಪ್ಪೆಂದು ಬಿದ್ದೆ. ನಂಜಿ ಗಾಬರಿಯಿಂದ ಓಡಿಬಂದು, ಲಕ್ಷ್ಮಿಯನ್ನು ಹಿಂದಕ್ಕೆಳೆದುಕೊಂಡಳು. ನಾನು ಎದ್ದುನಿಂತೆ. ನಂಜಿ 'ಹೋ' ಅಂತ ನಕ್ಕಳು. ನಾನು ಅವಮಾನದಿಂದ ಕೆಂಪಾಗಿ ಕುಗ್ಗಿಹೋದೆ. ನಂಜಿ, 'ಯಾಕ್ಸಾಮಿ, ಏನಾರಾ ಯೋಳಿದರೆ ನಿಮ್ಮ ಮನಸ್ಗೇ ಬರಾಕಿಲ್ವಲ್ಲ..' ಅಂದಳು. ನನಗೆ ಎಲ್ಲರನ್ನೂ ಒದ್ದು ಚಟ್ನಿ ಮಾಡುವಷ್ಟು ಕೋಪ ಬಂತು. ಆದರೆ ಏನೂ ಮಾಡಲಾಗದೆ ಹಿಂತಿರುಗಿದೆ.
ಮುಂಬಾಗಿಲಲ್ಲಿ ನಿಂತು ಕಾಫಿ ಹೀರುತ್ತಿದ್ದಾಗ, ಮನಸ್ಸಿನಲ್ಲಿ ಬರೀ ನಿರಾಶೆ, ಸೋಲು ತುಂಬಿದ್ದವು. ವಾಸಂತಿ ತುಳಸೀಕಟ್ಟೆಗೆ ನೀರೆರೆದು, ಕೈಜೋಡಿಸಿ, ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದಳು(ಒಳ್ಳೆಯ ಗಂಡ ಸಿಕ್ಕಲಿ ಎಂದಿರಬೇಕು. ಅದಕ್ಕೂ ಹೆಚ್ಚಿನ ಆಕಾಂಕ್ಷೆ ಇಂಥ ಹುಡುಗಿಯರಿಗೆ ಏನಿದ್ದೀತು?). ಅವಳು ಕಣ್ಣು ಬಿಟ್ಟಾಗ, ನಾನು ಅವಳನ್ನೇ ದಿಟ್ಟಿಸುತ್ತಿರುವುದು ಅವಳ ಗಮನಕ್ಕೆ ಬಂದು, ಸರಸರನೆ ಮನೆಯೊಳಕ್ಕೆ ಹೊರಟುಹೋದಳು. ನನ್ನತ್ತ ಒಂದು ನಸುನಗೆಯನ್ನೂ ಬೀರದೆ ಹೋದದ್ದು ಕಂಡು, ಅವಳ ಪ್ರೇಮಕ್ಕೆ ನಾನು ಅನರ್ಹನೆಂದು ತೀರ್ಮಾನಿಸಿರಬೇಕು, ಹಾಳಾಗಲಿ. ಅವಳಂಥ ಮೊದ್ದು ಹುಡುಗಿ, ವೈಯಾರಿಯನ್ನು ಪ್ರೀತಿಸಲು ನನಗಂತೂ ಸಾಧ್ಯವಿಲ್ಲ ಎಂದು ಯೋಚಿಸಿದೆ. ತಟ್ಟನೆ, ಎಟುಕಲಾರದ ದ್ರಾಕ್ಷಿ ಹುಳಿ ಅನ್ನಿಸಿ ವಿಷಾದದ ನಗೆ ನಕ್ಕೆ.
ಮಧ್ಯಾಹ್ನ ವಾಸಂತಿ ತನ್ನ ತಂಗಿಯರಲ್ಲಿ ಒಬ್ಬಳ ಕೈಲಿ ಆಫ್ ಹ್ಯೂಮನ್ ಬಾಂಡೇಜ್ ಕಾದಂಬರಿಯನ್ನು ಹಿಂತಿರುಗಿಸಿದಳು. ಅವಳು ಅದನ್ನು ಓದಿದಳೇ ಎನ್ನುವ ಸಂಶಯ ಮೂಡಿತು. ಬೋರಾಗಿ ಅರ್ಧಕ್ಕೇ ಬಿಟ್ಟಿರಬೇಕು ಅನ್ನಿಸಿತು. ಕತ್ತೆಬಾಲ ಅಂದುಕೊಂಡೆ. ಆದರೆ ತಂಗಿ ಹೇಳಿದ ಮಾತು ನಿಜವಾಯಿತು. ಪುಸ್ತಕದ ಸ್ಥಿತಿ ಚಿಂತಾಜನಕವಾಗಿತ್ತು. ಮುಖಪುಟ ಪತ್ತೆಯಿರಲಿಲ್ಲ. ಪುಟಗಳೆಲ್ಲ ಕಿತ್ತುಬಂದಿದ್ದವು. ರತ್ನ 'ನಾನು ಮೊದಲೇ ಹೇಳಿದೆ, ಕೇಳಿದೆಯ?' ಅಂದಳು. 'ಹಾಳಾಗಲಿ ಬಿಡು, ಗೊತ್ತಾಯ್ತಲ್ಲ' ಎಂದು ಆ ಪುಸ್ತಕವನ್ನು ಅಂಗಡಿಗೆ ತೆಗೆದುಕೊಂಡು ಹೋಗಿ, ಕ್ಯಾಲಿಕೊ ರೀಬೈಂಡ್ ಮಾಡಿಕೊಡಲು ಹೇಳಿಬಂದೆ. <
-ಬಿ.ಆರ್. ಲಕ್ಷ್ಮಣ್ ರಾವ್
lakshmanaraobr@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

