ಸಾಪ್ತಾಹಿಕಪ್ರಭ

ಪೊಲೀಸರ ಸಾಹಿತ್ಯ ಬೇಟೆ!

ಖುಷಿ ಕೊಡುವ ಸಂಗತಿಗಳು ಠಾಣೆಯ ಮೆಟ್ಟಿಲೇರುವುದು ತೀರಾ ಅಪರೂಪ. ಆರಕ್ಷಣೆಯೆಂದರೆ ಬಿಡುವೇ ಇಲ್ಲದ ಬದುಕು...

ಪೊಲೀಸರ ಸಾಹಿತ್ಯ ಬೇಟೆ!
Published On :

ಖುಷಿ ಕೊಡುವ ಸಂಗತಿಗಳು ಠಾಣೆಯ ಮೆಟ್ಟಿಲೇರುವುದು ತೀರಾ ಅಪರೂಪ. ಆರಕ್ಷಣೆಯೆಂದರೆ ಬಿಡುವೇ ಇಲ್ಲದ ಬದುಕು. ಈ ಲೋಕದಲ್ಲಿ ಸ್ವಂತ ಭಾಷೆಯನ್ನೂ ನೆಟ್ಟಗಿಟ್ಟುಕೊಳ್ಳುವುದು ಅಸಾಧ್ಯ. ಇವತ್ತಿಗೂ ತೀರಾ ಕೆಟ್ಟಕೆಟ್ಟದಾಗಿ ಬಯ್ದರೆ, 'ಏನೋ ಪೊಲೀಸ್ ಭಾಷೆ ಬಳಸ್ತೀಯಾ?' ಎಂಬ ಪ್ರತಿಕ್ರಿಯೆ ಕೇಳಿಬರುತ್ತದೆ. ಅಂಥದ್ದರಲ್ಲಿ ಕನ್ನಡವನ್ನು ಸುಂದರ ಹೂಮಾಲೆಯಂತೆ ಕಟ್ಟಿ, ಸಾಹಿತ್ಯ ಸೃಷ್ಟಿಸುವುದಾದರೂ ಹೇಗೆ?
ಈ ಅನುಮಾನಕ್ಕೆ ಅಪವಾದವಾದರು ಬೀchi. ಅವರು ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಆಗಿದ್ದರು. ವ್ಯಂಗ್ಯಮಾಡುವ ಕಲೆ ಹುಟ್ಟಿನಿಂದಲೇ ಬಂದಿತ್ತು. ಜತೆಗೆ, ಕನ್ನಡ ಸಾಹಿತ್ಯದ ಮೇಲೆ ಅವರಿಗೆ ತಿರಸ್ಕಾರವಿತ್ತು. ಅವರ ಪತ್ನಿ ಅಪ್ರತಿಮ ಸಾಹಿತ್ಯಪ್ರೇಮಿ. ಒಮ್ಮೆ ಬೀchiಗೂ ಪುಸ್ತಕ ಓದುವ ಮನಸ್ಸಾಗುತ್ತದೆ. ಪುಸ್ತಕದಂಗಡಿಗೆ ಹೋದರು. ಅಂಗಡಿಯಾತನಿಗೆ ಹೇಳಿದರು, 'ಒಂದು ಪುಸ್ತಕ ಕೊಡಿ. ಯಾವುದಾದರೂ ಪರ್ವಾಗಿಲ್ಲ. ರೇಲ್ವೆ ವೇಳಾಪಟ್ಟಿಯಾದರೂ ಸೈ. ಒಟ್ಟಿನಲ್ಲಿ ಅದು ಕನ್ನಡದಲ್ಲಿರಬೇಕು'. ಅಂಗಡಿಯಾತ, ಅನಕೃ ಅವರ 'ಸಂಧ್ಯಾರಾಗ' ಕೊಟ್ಟ. ಆ ಕೃತಿಯಿಂದ ಬೀchiಸಾಹಿತ್ಯದ ತೊರೆಗೆ ಸಿಲುಕಿದರು.
ಖಾಕಿ ಸಾಹಿತ್ಯದ ನಂತರದ ಹೆಸರು, ಡಾ.ಪಿ.ಎಸ್. ರಾಮಾನುಜಂ. ಇವರ ತಂದೆಯೂ ಒಬ್ಬ ಒಳ್ಳೆಯ ಓದುಗ. ಬಿ. ವೆಂಕಟಾಚಾರ್ಯ, ಗಳಗನಾಥರ ಕೃತಿಗಳನ್ನು ಕೊಟ್ಟು ಮಗನಿಗೆ ಓದಿನ ಹುಚ್ಚು ಹಿಡಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕವನಗಳಿಗೆ ದಾಸರಾದರು. ರಾಮಾನುಜಂ ಅವರಿಗೆ ಹೆಚ್ಚು ಕೀರ್ತಿ ತಂದಿದ್ದು ಲಲಿತ ಪ್ರಬಂಧಗಳು. 'ಪ್ರೀತಿ ಪ್ರದರ್ಶನ', 'ಬೆಕ್ಕಿನ ಭಾಷೆ' ಕೃತಿಗಳು ಇವತ್ತಿಗೂ ಬೆರಗು ಸೃಷ್ಟಿಸುತ್ತವೆ. ಕವಿತೆ, ಅಂಕಣ ಬರಹ, ಅನುವಾದ ಸೇರಿದಂತೆ 30 ಕೃತಿಗಳು ಇವರ ಹೆಸರಲ್ಲಿವೆ.ಸುಭಾಷ್ ಭರಣಿಯವರ 'ಧರೆಗೆ ದೊಡ್ಡವರು', ಧರಣಿದೇವಿ ಮಾಲಗತ್ತಿಯವರ 'ಬೈಟು ಜಾಮ್‌', 'ಈ ಉರಿಯುವ ದಿವ', 'ಇಳೆಯ ಕಣ್ಣು' ಕೃತಿಗಳ ಆಶಯ ಬಹಳ ಹಿರಿದು. ಇತ್ತೀಚೆಗೆ ಬಿಡುಗಡೆಯಾದ ನಂಜುಂಡಸ್ವಾಮಿಯವರ 'ಕೊಸವೊ ಕಥೆಗಳು' ಒಂದು ವಿಶಿಷ್ಟ ಕೃತಿಯೇ. ಕೋದಂಡರಾಮಯ್ಯ, ಡಾ. ಡಿ.ವಿ. ಗುರುಪ್ರಸಾದ್ ಅವರ ಲೇಖನ ಕೊಡುಗೆಗಳೇನೂ ಕಮ್ಮಿಯಿಲ್ಲ. ಬಿ.ಕೆ. ಶಿವರಾಂ, ಶಂಕರ್ ಬಿದರಿ, ಅಶೋಕ್ ಕುಮಾರ್ ಕೂಡ ಇದೇ ಹಾದಿಯಲ್ಲೇ ಸಾಗುತ್ತಿದ್ದಾರೆ.
ಇನ್ನು ದೇಶದ ಮೊದಲ ಐಪಿಎಸ್ ಆಫೀಸರ್ ಕಿರಣ್ ಬೇಡಿಯೂ ಅಂಕಣಗಳಿಂದಲೇ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡವರು. ಅವರ ಪಾಕ್ಷಿಕ ಅಂಕಣ 'ವಾಟ್ ವೆಂಟ್ ರಾಂಗ್‌' ಅಪರಾಧ ಜಗತ್ತನ್ನು ತೀರಾ ಹಸಿಹಸಿಯಾಗಿ ಬಿಂಬಿಸಿತ್ತು. ಅಲ್ಲದೆ, 'ಆ್ಯಸ್ ಐ ಸೀ', 'ಹಿಮ್ಮತ್ ಹೈ' ಕೂಡ ಅಪರೂಪದ ಚಿತ್ರಣಗಳೇ ಆಗಿವೆ.
ಪೊಲೀಸ್ ಇರುವುದೇ ಸಮಾಜ ಪರಿವರ್ತನೆಗೆ. 'ಬರವಣಿಗೆ' ಎಂಬ ಅಸ್ತ್ರ ಹಿಡಿದು ಸಮಾಜ ಕಾಳಜಿಗೆ ಮುಂದಾಗುವುದು ಮತ್ತೊಂದು ಪರಿವರ್ತನೆಯ ಕಾರ್ಯ. ಕೆಲವು ಘಟನೆಗಳನ್ನು ನೋಡಿಯೇ ಮೈ ಮರಗಟ್ಟಿ ಹೋಗಿರುತ್ತದೆ, ಮತ್ತೆ ಅದನ್ನು ಸಾಹಿತ್ಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಸಾಹಸವೇ ಸರಿ. ಒಟ್ಟಿನಲ್ಲಿ ಖಾಕಿಸಾಹಿತ್ಯ ಇಂದಿಗೂ 'ಕೆಳದರ್ಜೆ' ಎಂಬ ಆಪಾದನೆಗೆ ಗುರಿಯಾಗಿಲ್ಲ. ಅಪರಾಧವನ್ನು ನೋಡುವುದು, ಸಹಿಸುವುದು ಕಷ್ಟ. ಹೀಗಾಗಿ, ಅಂಥ ಬರವಣಿಗೆಗಳು ಎಂಥವರಿಗೂ ಇಷ್ಟ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.