ಸಾಪ್ತಾಹಿಕಪ್ರಭ

ಕವಿರಾಜಮಾರ್ಗ

ಸಾವು ನೋಟಿಸು ಕೊಟ್ಟು ಸುಳಿಯುವುದಿಲ್ಲ. ಒಂದುವೇಳೆ ಕೊಟ್ಟಿರುತ್ತಿದ್ದರೂ ಅವರೊಳಗೆ ಓದಬಲ್ಲವರಾರು? ಜೇಬೊಳಗೆ ನೂರರ ನೋಟಿದ್ದರೆ ಅಜ್ಜಿಪುಣ್ಯ.

ಕವಿರಾಜಮಾರ್ಗ
Published On :

ಸಾವು ನೋಟಿಸು ಕೊಟ್ಟು ಸುಳಿಯುವುದಿಲ್ಲ. ಒಂದುವೇಳೆ ಕೊಟ್ಟಿರುತ್ತಿದ್ದರೂ ಅವರೊಳಗೆ ಓದಬಲ್ಲವರಾರು? ಜೇಬೊಳಗೆ ನೂರರ ನೋಟಿದ್ದರೆ ಅಜ್ಜಿಪುಣ್ಯ. ಹಾಗೆ ಇರುತ್ತಿದ್ದರೆ, ಗುಲ್ಬರ್ಗದಿಂದ ಹೊರಡುವ ಟ್ರೈನುಗಳು ಹನ್ನೆರಡು ತಾಸಿನಲ್ಲಿ ಅವರನ್ನೆಲ್ಲ ಬಾಂಬೆಯ ಬಾಗಿಲಿಗೆ ಬಿಸಾಕುತ್ತಿದ್ದವು. ಆದರೆ, ಅವರು ಕನಿಷ್ಠ ಶತಾಧಿಪತಿಗಳ ಸಾಲಿಗೂ ಸೇರುವ ಶಕ್ತರಲ್ಲ. ಕಲ್ಲಿನ ಲಾರಿಯೇ ಅವರ ಕಷ್ಟಕ್ಕೆ ದಾರಿ. ಆ ಡ್ರೈವರ್‌ನ ಅಂಗೈಗೆ ತಲಾ ಅರವತ್ತು ರುಪಾಯಿ ಇಟ್ಟು, ಎರಡು ಟೀ- ನಾಲ್ಕು ಜರ್ದಾ ಕೊಡಿಸಿಬಿಟ್ಟರೆ ಮೆಲ್ಲುತ್ತಾ, ಪಿಚ್ಚೆನ್ನುತ್ತಾ ಮುಂಬೈ ಮುಟ್ಟಿಸುತ್ತಾನೆ. ನಲ್ವತ್ತು ರುಪಾಯಿ ಉಳಿಸುವ ಅವಸರದಲ್ಲಿ, ಬಿಸಿಯೇರಿದ ಕಲ್ಲುಗಳ ಮೇಲೆ ತಣ್ಣನೆ ಕುಂಡೆ ಚೆಲ್ಲಿದ್ದ ಆ ಹದಿನಾಲ್ಕು ಮಂದಿ ಮುಂಬೈ ತಲುಪಲೇ ಇಲ್ಲ. ಲಾರಿ ಪಲ್ಟಿಯಾಯಿತು. ಅವರು ಹೆಣವಾದರು. ಇವರ ಮೇಲೆ ಕಲ್ಲುಗಳು ಕುಳಿತು ಸೇಡು ತೀರಿಸಿಕೊಂಡವು.
ಅದರಲ್ಲೊಬ್ಬಳು ತಾಯಿ. ಕಲ್ಲು ಬಿದ್ದ ರಭಸಕ್ಕೆ ಅವಳ ಒಂದು ಕಣ್ಣು ಮುಖದ ಹುಂಡಿಯಿಂದ ಚಿಲ್ಲನೆ ಚಿಮ್ಮಿ, ಬಿಸಿ ಡಾಂಬಾರು ರಸ್ತೆಯ ಮೇಲೆ ಹೊರಳಾಡಿ, ಆಮ್ಲೇಟಾ ಎನ್ನಿಸುವಷ್ಟು ಅನುಮಾನ ಹುಟ್ಟಿಸಿತು. ಎಡಬದಿಯ ಮೊಲೆಯ ತೊಟ್ಟಿಗೆ ಮುಖ ಹೂತು, ಹಾಲು ಹೀರುತ್ತಿದ್ದ ಮಗುವೂ ಅವಳೊಟ್ಟಿಗೆ ಅಸ್ತಂಗತ. ಆ ಜೋಡಿ ಹೆಣವನ್ನು ಬೇರ್ಪಡಿಸಬೇಕು. ಎಸ್ಪಿಯಾಗಿದ್ದ ಡಾ. ಡಿ.ಸಿ. ರಾಜಪ್ಪ ಹೈರಾಣಾದರು. ಹಾಗೂ ಬಿಡಿಸಿದಾಗ ಮಗುವಿನ ಬಾಯಿ ತುಂಬಾ ಹಾಲಿತ್ತು. ತಾಯಿ ಮೊಲೆಯ ತೊಟ್ಟಿನಿಂದ ಹಾಲು ತೊಟ್ಟಿಕ್ಕುತ್ತಿತ್ತು. ಸತ್ತ ಮೇಲೂ ಆಕೆ ಹಾಲುಣಿಸುತ್ತಿದ್ದಳು. ಕಾಮಧೇನು!
ಕವಿತೆಯ ಸೆಳೆತ ಯಾರಿಗೂ ಬೇಡಿ ತೊಡಿಸುತ್ತದೆ. ಪೊಲೀಸರಿಗೂ. ಇದೇ ಘಟನೆ ಮೇಲೆ ಡಿ.ಸಿ. ರಾಜಪ್ಪ ಕವನ ಬರೆದರು...
'ಸಾವೆ ಎಲ್ಲಿರುವೆ? ಹೇಗಿರುವೆ?
ಕಳೆದೆಷ್ಟೋ ವರ್ಷಗಳಿಂದ
ನಾ ನಿನ್ನ ಕಾಯುತ್ತಿರುವೆ
ಕೈಮುಗಿದು ಕರೆದರೂ
ನೀ ನನ್ನ ಬಳಿಗೆ ಬಾರದಿರುವೆ
ಕರೆಯದವರ ಬಳಿಗೆ
ನೀನೇಕೆ ಓಡೋಡಿ ಹೋಗುವೆ?'
ಇವತ್ತು ನಮ್ಮ ಕರ್ನಾಟಕದ ಖಾಕಿ, ಪೆನ್ನಿಟ್ಟುಕೊಂಡೂ ಫೈರ್ ಮಾಡತೊಡಗಿದೆ. ಹಿಂದಿನವರೂ ಮಾಡಿದ್ದರು. ಹಾಸ್ಯ ಸರೋವರದಲ್ಲಿ ನಮ್ಮನ್ನೆಲ್ಲ ಅದ್ದಿ ತೆಗೆದ ಝ್ಛ್ಝೀ, ಲಲಿತ ಪ್ರಬಂಧಗಳಲ್ಲಿ ಸುಲಲಿತ ಸೂತ್ರ ಸಿಡಿಸಿದ ನಿವೃತ್ತ ಅಡಿಷನಲ್ ಡಿಜಿಪಿ ಡಾ. ಪಿ.ಎಸ್. ರಾಮಾನುಜಂ ಅಲ್ಲದೆ ಈಗಿನ ಖ್ಯಾತನಾಮರೂ ಅಂಕಣಕ್ಕೆ ಜಿಗಿದಿದ್ದಾರೆ. ಬಿ.ಕೆ. ಶಿವರಾಮರ 'ಪೊಲೀಸ್ ಕಂಡ ಕಥೆಗಳು', ಟೈಗರ್ ಅಶೋಕ್ ಕುಮಾರರ 'ಬುಲೆಟ್ ಸವಾರಿ', ಶಂಕರ ಬಿದರಿ ಹೇಳಿದ 'ಪೊಲೀಸ್ ಕಥೆಗಳು' ಓದುಗರನ್ನು ರೋಚಕದ ರಹದಾರಿಯಲ್ಲಿ ಸೆಳೆದೊಯ್ಯುತ್ತಿವೆ. ಇವರದ್ದು ಗದ್ಯದ ಗದ್ದೆಯ ಕೃಷಿ. ಅನುಭವಗಳ ಮೂಟೆಯೊಡೆದು, ಅಕ್ಷರ ಬೀಜ ಬಿತ್ತನೆ. ಅಪರಾಧ ಜಗತ್ತು ಇಂದು ಬರವಣಿಗೆ ದಯಪಾಲಿಸುವಷ್ಟು ಉದಾರ. ಕಥನಗಳ ಅಗರ್ಭ ಶ್ರೀಮಂತ. ಹಾಗೆ ಹುಟ್ಟಿದ ಬರವಣಿಗೆಯು ಕಥೆ, ಲೇಖನಧಾರೆಗಳಾಗಿದ್ದೇ ಹೆಚ್ಚು. ಆದರೆ, ಬೆಂಗಳೂರಿನ ಡಿಸಿಪಿ ಡಾ. ಡಿ.ಸಿ. ರಾಜಪ್ಪನವರಿಗೆ ಇವ್ಯಾವ ಘಟನೆಗಳೂ ಕಥೆಯಾಗಿ ಕಾಡಿಸದು. ಅವರೊಳಗೆ ಕವಿತೆ ಕವಿದು, ಕವಿ ಕಾವೇರಿ ಕುಳಿತುಬಿಡುತ್ತಾನೆ.
ಶಿವರಾಮ ಕಾರಂತರಿಗೆ ಜ್ಞಾನಪೀಠ ಗೌರವ ಆಗತಾನೆ ಬಂದ ಹೊತ್ತು. ರಾಜಪ್ಪನವರಿಗೆ ಕಡಲತೀರಕ್ಕೆ ಹೋಗಿ ಆ ಭಾರ್ಗವನಿಗೊಂದು ಅಭಿನಂದನೆ ಸಲ್ಲಿಸಬೇಕೆನಿಸಿತು. ಹೋದರು, ಜೇಬಿನಲ್ಲೊಂದು ತಾವೇ ಬರೆದ ಕವನವಿಟ್ಟುಕೊಂಡು. ಕಾರಂತರಿಗೆ ಅದನ್ನು ಕೊಟ್ಟು, 'ಸರ್, ನಾನೊಂದು ಕವನ ಬರೆದೆ. ಹೇಗಿದೆ ಹೇಳಬಹುದೇ?'. ಕಾರಂತರು ನಗುತ್ತಾ, ಆ ಕವನವನ್ನು ಕೂಡಲೇ ವಾಪಸು ಕೈಗಿಟ್ಟು ಹೇಳಿದರಂತೆ, 'ಹೋಗಿ ಹೋಗಿ ನಮ್ಮಂಥ ದೊಡ್ಡ ಸಾಹಿತಿಗಳಿಗೆ ಕವನ ತೋರಿಸುತ್ತೀಯಲ್ಲಪ್ಪ. ನಾವು ಹೊಟ್ಟೆ ತುಂಬಿದವರು. ಅದೇನೋ ಜ್ಞಾನಪೀಠ ಅಂತ ಕೊಟ್ಟು, ಇನ್ನೂ ಮೇಲೇರಿಸಿಬಿಟ್ಟಿದ್ದಾರೆ. ನಿನ್ನ ಕವನವನ್ನು ಓದಿ, ಸರಿಯಿಲ್ಲ ಅಂದರೆ ನೀನು ಬರೆಯುವುದನ್ನೇ ಬಿಟ್ಟುಬಿಡುತ್ತೀ. ಯಾರಾದರೂ ನಿನ್ನ ಕೆಳಗಿನವರಿಗೆ ಕೊಡು. ಅದು ಅವರಿಗೆ ಅರ್ಥವಾಗದು. ಆದರೂ, ಚೆನ್ನಾಗಿದೆ ಅನ್ನುತ್ತಾರೆ. ಅವರ ಮಾತು ನಿನಗೆ ಸ್ಫೂರ್ತಿಯಾಗುತ್ತೆ. ನೀನು ಇನ್ನಷ್ಟು ಕವನ ಬರೆಯುತ್ತೀ'.

ಸಾಮಾನ್ಯವಾಗಿ ಕುವೆಂಪು ಸಾಹಿತ್ಯದ ಮೇಲೆ ಕೆಲವರು ಕೋಪ ತೆರೆದಿಡುವುದುಂಟು. ಮಲೆನಾಡು, ಕರಾವಳಿಗರನ್ನು ಬಿಟ್ಟರೆ ಅವರ ಗಟ್ಟಿಮುಟ್ಟಾದ ಭಾಷೆ, ಕಠೋರ ಪಂಡಿತರಿಗಷ್ಟೇ ಸಲೀಸು. ಅವರ ಕಾವ್ಯದ ಟಿಸಿಲು, ಬಿಸಿಲಸೀಮೆಯವರಿಗೆ ಅರಿವಾಗದು ಎಂಬ ವಾಗ್ವಾದಕ್ಕೆ ಹಳೇ ಕೋಟು ತೊಡಿಸಬಹುದು. ಮತ್ತೆ ಮತ್ತೆ ಸುಳ್ಳಾದ ಕಾರಣ, ಇದನ್ನು ಯಾರೂ ಗಂಭೀರ ಆರೋಪ ಅಂತಲೂ ಪರಿಗಣಿಸಿಲ್ಲ. 'ಕನ್ನಡಿಗರಿಗೇ ಕನ್ನಡ ಅರ್ಥವಾಗದಿರಲು ಅದೇನು ಇಂಗ್ಲಿಷೇ?' ಅಂದರು ಕುವೆಂಪುರನ್ನು ಬಲ್ಲವರು. ಚಿತ್ರದುರ್ಗದ ಹೊಳಲ್ಕೆರೆಯ ರಾಜಪ್ಪನವರು ಏಳನೇ ತರಗತಿಯಲ್ಲೇ 'ಮಲೆಗಳಲ್ಲಿ ಮದುಮಗಳು', 'ಕಾನೂರು ಸುಬ್ಬಮ್ಮ ಹೆಗ್ಗಡತಿ', ಕುವೆಂಪು ಅವರ ಹತ್ತಾರು ಕವನಸಂಕಲನಗಳನ್ನು ಓದಿಮುಗಿಸಿದ್ದರಂತೆ. ಕುವೆಂಪು ಇವರ ಕಾವ್ಯಕ್ಕೆ ಸ್ಫೂರ್ತಿ ಮತ್ತು ಶಕ್ತಿ.
'ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ, ಒಂಬತ್ತು ಮೈಲುಗಳ ದೂರದಲ್ಲಿ ನಮ್ಮೂರು ಕುಪ್ಪಳಿ' ಎಂದು ಕುವೆಂಪು ಹುಟ್ಟೂರಿನ ಬಗ್ಗೆ ಬರೆದು ಹಾಡಿದರೆ, ಇತ್ತ ರಾಜಪ್ಪ ಎಂಟನೇ ತರಗತಿಯಲ್ಲೇ ತಮ್ಮೂರು ಹಿರೇಎಮ್ಮಿಗನೂರಿನ ಬಗ್ಗೆ ಕವನ ಕಟ್ಟಿದರು. ರಾಜಪ್ಪ ತಮ್ಮ ಕವನದ ಚಡಪಡಿಕೆ ನೆನೆದು ಹೀಗೆ ಸಾಲುಗಳ ಹಾಸಿಗೆ ಹಾಕುತ್ತಾರೆ, 'ಕವನ ಬರೆಯಬೇಕೆಂಬ ಎನ್ನಂತರಾಳದ ಬಯಕೆ ಇಂದು ನಿನ್ನೆಯದಲ್ಲ, ಅದು ನನ್ನ ಹುಟ್ಟಿನಿಂದ ಬಂದಿರಬೇಕು. ನನ್ನೊಳಗೆ ಹುಟ್ಟಿ ನನ್ನೊಳಗೆ ಸತ್ತ ಕವನಗಳಿಗೆ ನಾನೆಂದೂ ಹುಟ್ಟುಹಬ್ಬ ಆಚರಿಸಿಲ್ಲ. ತಿಥಿ-ಕರ್ಮ ಮಾಡಿಲ್ಲ'.
ಗುಂಡು ಹಾರಿದ ಮೇಲಷ್ಟೇ, ಬಂದೂಕಿನ ನಳಿಕೆಯೊಳಗೆ ಕಾವ್ಯ ಗೂಡು ಕಟ್ಟುತ್ತದೆ. ಅನುಭವವು ಹೃದಯದ ಮಂಟಪ ತಲುಪಿದ ಕೂಡಲೇ ಕಾವ್ಯ ಮೂರ್ತಿವೆತ್ತುತ್ತದೆ. ಇವರ ಠಾಣೆಗೊಂದು ಕಂಪ್ಲೇಂಟು ಬರುತ್ತದೆ. 'ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ ಅವಳೀಗ ಗರ್ಭಿಣಿ'. ಆಗೊಂದು ಕವನದ ಪ್ರಶ್ನೆ, 'ನೀನೇ ಮಗುವೆ, ನಿನಗೊಂದು ಮಗುವೆ?'. ಎಲ್ಲ ಘಟನೆಗೂ ಒಂದು ಸಂವೇದನೆಯ ಸ್ಪರ್ಶ.
ಕೆಲವು ವರುಷಗಳ ಹಿಂದೆ ಸಾಗರದ ಜನ್ನತ್ ನಗರದಲ್ಲಿ ಕೋಮುಗಲಭೆಯ ಕಿಡಿ ಆವರಿಸಿತು. ಹಲವು ದಿನಗಳ ಮಟ್ಟಿಗೆ ಆ ಕಿಡಿ ತಾಲೂಕಿನ ಸಾವಿರಾರು ಮನೆಗಳ ಒಲೆಯಲ್ಲಿ ಬೆಂಕಿ ಹಚ್ಚಿಸಿತ್ತು. ಸಾಗರದಿಂದ ತಾಳಗುಪ್ಪಕ್ಕೆ ಹೋಗುವಾಗ ಒಂದು ಹಳ್ಳಿ. ಅಲ್ಲಿ ಒಂದು ಮುಸ್ಲಿಂ ಮನೆ. ಇನ್ನೊಂದು ಕೋಮಿನವರು ಆ ಮನೆಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ಗಂಡ- ಹೆಂಡತಿ ಮತ್ತು ಮಗುವಿಗೆ ಎಂಟು ದಿಕ್ಕುಗಳೂ ಬಾಣವಾದವು. ಆ ತಾಯಿ, ಮಗುವನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಗದ್ದೆಯಲ್ಲಿ ಓಡತೊಡಗಿದಳು. ಆಯತಪ್ಪಿ ಆ ಒಂದು ವರ್ಷದ ಮಗು ಕೆಳಬಿತ್ತು. ಹಿಂದೆ ಬರುತ್ತಿದ್ದ ಗಂಡ ಅರಿವಿಲ್ಲದೆ ಮಗುವನ್ನು ಮೆಟ್ಟಿದ. ಜೌಗು ಗದ್ದೆಯಲ್ಲಿ ಹೂತು ಹೋದ ಮಗುವನ್ನು ತಾಯಿ ಮತ್ತೆ ಮೇಲೆತ್ತಿಕೊಂಡು ಓಡತೊಡಗಿದಳು. ರಾಜಪ್ಪ ಬಂದು ರಕ್ಷಿಸಿದರು.
ಆ ಕ್ರೂರತೆಯನ್ನು ರಾಜಪ್ಪನವರ 'ಆಕ್ರಂದನ' ಕವನ ಹೀಗೆ ಬಿಚ್ಚಿಡುತ್ತದೆ; 'ಕರುಳಬಳ್ಳಿಯ ಕಂಕುಳಲಿ/ ಹೊತ್ತು ಮತಾಂಧ ಮೂಢರ/ ಗದ್ದಲಕೆ ಹೆದರಿ/ ಗದ್ದೆ ಮಧ್ಯದಲಿ ಬದು ಹಿಡಿದು/ ಜೀವ ಉಳಿಸಿಕೊಳ್ಳಲು/
ಓಡುತಿಹಳು ತಾಯಿ// ತಾಯಿಮಗಳ ರಕ್ಷಣೆಗೆ/ ಅವರ ಹಿಂದೆ ಹಿಂದೆ/ ಓಡುತಿಹನು ತಂದೆ/ ಬೆಳದಿಂಗಳ ಸಾಕ್ಷಿ ಇಟ್ಟು'. ಬೆಳದಿಂಗಳೆಂದರೆ ಇಲ್ಲಿ ಚಂದ್ರ. ದೇವರು.
ಎರಡು ಬಾರಿ ಪದ್ಯ ಓದಿಬಿಟ್ಟರೆ ಎಂಥ ಹಳೇಗನ್ನಡವೇ ಇರಲಿ, ಗಮಕಿಗಿಂತ ಸೊಗಸಾಗಿ ಹಾಡಬಲ್ಲರು ರಾಜಪ್ಪ. ಅವರು ಪೊಲೀಸ್ ಇಲಾಖೆಗೆ ಸೇರುವ ಮೊದಲು (1982), ಡಾ. ರಾಜ್‌ಕುಮಾರ್ ಬಗ್ಗೆ ಕವನ ಬರೆದರು. ಮೈಸೂರಿಗೆ ಬಂದ ಅಣ್ಣಾವ್ರಿಗೆ ಅದನ್ನು ತೋರಿಸಬೇಕೆನಿಸಿತು. ಪೊಲೀಸರು ಬಿಡಲಿಲ್ಲ. 'ಹೋಗ್ ಆ ಕಡೆ' ಅಂತ ಗದರಿಸಿದ ಒಬ್ಬ ಪೇದೆ, ಆ ಕವನದ ಚೀಟಿಯನ್ನೇ ಹರಿದು ಬಿಸಾಕಿಬಿಟ್ಟ. 'ಎಂಥ ಕೆಟ್ಟವ್ರಪ್ಪ ಪೊಲೀಸ್ನೋರು' ಎಂಬ ಸಿಟ್ಟಿನಲ್ಲೇ ರಾಜಪ್ಪ ವಾಪಸ್ಸಾಗಿದ್ದರು!
ಹತ್ತು ವರ್ಷದ ನಂತರ ಇವರೇ ಸಾಗರದಲ್ಲಿ ಪೊಲೀಸ್ ಅಧಿಕಾರಿ! 'ಜೀವನಚೈತ್ರ' ಶೂಟಿಂಗಿಗೆ ಬಂದಿದ್ದ ಅಣ್ಣಾವ್ರನ್ನು ತಾಳಗುಪ್ಪದ ಟ್ರೈನಿನಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿತು. ಮಧ್ಯಾಹ್ನ ಊಟದ ಬಿಡುವು. 'ಸಾರ್, ನಾನು ನಿಮ್ಮ ಮೇಲೊಂದು ಕವನ ಬರೆದಿದ್ದೀನಿ' ಎಂದು ಅಣ್ಣಾವ್ರ ಮುಂದೆ ಹೇಳಿದಾಗ, 'ತಾಳಿ ಸಾಹೇಬ್ರೆ' ಎನ್ನುತ್ತ ಪಾರ್ವತಮ್ಮ, ವಜ್ರಮುನಿ, ಗೀತಾ, ಸಹಕಲಾವಿದರಿಗೆಲ್ಲ 'ಸಾಹೇಬ್ರು ಕವನ ಬರ್ದಾವ್ರಂತೆ, ಬನ್ನಿ ಇಲ್ಲಿ' ಎಂದು ಕರೆದರು. ಎಲ್ಲರನ್ನೂ ಬಳಿ ಕೂರಿಸಿ, ಇವರ ಬಳಿಯೇ ಕವನ ಹಾಡಿಸಿದರು. ಹತ್ತು ವರ್ಷದ ಹಿಂದೆ ಹರಿದು ಹಾಕಿದ್ದ ಕವನ, ಆಗಲೂ ರಾಜಪ್ಪ ಅವರ ತಲೆಯಲ್ಲಿ ದಾಖಲಿತ್ತು.
'ಪಂಪ ಬರೆದದ್ದು ಮಹಾಭಾರತ, ನಾವು ಬರೆಯುತ್ತಿರುವುದು ಮನೆಮನೆ ಭಾರತ' ಎನ್ನುತ್ತಾ ತಮ್ಮ ರಕ್ಷಣೆಯ ಹುದ್ದೆಗೆ ಕಾವ್ಯದ ತಿಲಕವಿಡುತ್ತಾರೆ ರಾಜಪ್ಪ. ಬರಡು ಭೂಮಿಯ ಸತ್ಯ (2002), ಮಾರಿ (2003), ಹುಲ್ಲು ಮೇಯುವ ಕುದುರೆ (2013) ಇವು ಇವರ ಪ್ರಸಿದ್ಧ ಕವನ ಸಂಕಲನಗಳು. ಸಮವಸ್ತ್ರದೊಳಗೊಂದು ಸುತ್ತು- 3 ಸಂಪುಟಗಳಲ್ಲಿ ಇಲಾಖೆಯ ಕವಿಗಳನ್ನೆಲ್ಲ ಒಟ್ಟುಗೂಡಿಸಿದ್ದಾರೆ.
ಇಡೀ ಇಲಾಖೆಗೆ ಕವಿತೆಯ ಹುಚ್ಚು ಹಿಡಿಸುವ ಮೊದಲು ಇವರು ಇನ್ಸ್‌ಪೆಕ್ಟರೊಬ್ಬರನ್ನು ಕೇಳಿದರು, 'ಇಲ್ಲಿ ಯಾರಾದ್ರೂ ಕಥೆ- ಕವನ ಬರೀತಾರಾ?'. ಅದಕ್ಕೆ ಆತ, 'ಇಲ್ಲಿ ಕಥೆ ಕವನನಾ ಸಾರ್? ಈ ನನ್ಮಕ್ಳು ಮೂಕರ್ಜಿ ಬರೆಯೋರು. ಅವನ್ನೇ ನೀವು ಕಥೆ ಕವನ ಅಂತ ಭಾವಿಸೋದಾದ್ರೆ ಇಡೀ ಪಡೆಯ ತುಂಬಾ ಕವಿಗಳಿದ್ದಾರೆ' ಎಂದರು. ರಾಜಪ್ಪ ಈ ಸಂಭಾಷಣೆ ಮೇಲೂ ಕವಿತೆ ಬರೆದಿದ್ದಾರೆ. ಖಾಕಿ ಕವಿಗಳನ್ನು ಹುಡುಕಲು, ಎಲ್ಲ ಸ್ಟೇಶನ್ನುಗಳಿಗೆ ಮನವಿ ತಲುಪಿಸಿ, ಬಂದ ನೂರಿನ್ನೂರು ಕವನಗಳಲ್ಲಿ ಯೋಗ್ಯವಾದವುಗಳನ್ನಷ್ಟೇ ಆರಿಸಿ, ಸಂಪುಟ ಮಾಡಿದ್ದಾರೆ. 'ಸಮವಸ್ತ್ರದೊಳಗೊಂದು ಸುತ್ತು' ಸಂಪುಟಗಳಲ್ಲಿ ನೂರಾರು ಖಾಕಿ ಕವಿಗಳು ಕಾಣಿಸುತ್ತಾರೆ.
ಇಲಾಖೆಯಲ್ಲಿ ಯಾರೂ ವ್ಯವಸ್ಥೆ ಬಗ್ಗೆ ದೂರುವಂತಿಲ್ಲ, ಕಿಡಿಕಾರುವಂತಿಲ್ಲ. ಅಂಥ ಕಟು ಲೇಖನ ಬರೆದು ಪತ್ರಿಕೆ ಕಳುಹಿಸಿದರೆ, ಸಂಬಂಧಪಟ್ಟವರ ವಿಚಾರಣೆ ನಡೆಯುತ್ತದೆ. ಆದರೆ, ಕವನಗಳಿಗೆ ಅಂಥ ಭಯವೇ ಇಲ್ಲ. ಅವು ಇಲಾಖೆಯನ್ನೂ ಮೀರಿ ಬೆಳೆಯುವಂಥವು. ಅಲ್ಲಿ ನೀವು ಯಾವ ಭಾವಗಳನ್ನೂ ತುಂಬಿದರೂ ಅದು ವಿಭಿನ್ನ ಅರ್ಥಗಳನ್ನು ಧ್ವನಿಸುತ್ತದೆ. ಎಷ್ಟೋ ಕವನಗಳು ಇಲಾಖೆ ಅಧಿಕಾರಿಗಳ ಗ್ರಹಿಕೆಗೇ ನಿಲುಕವು. ಹೀಗಾಗಿ, ಖಾಕಿಯೊಳಗೆ ಸ್ವತಂತ್ರವಾಗಿರುವುದು ಕವಿತೆಗಳೊಂದೇ!
ಪೊಲೀಸರೆಂದರೆ ಉರಿವ ದರ್ಪದ ಕಣ್ಣುಗಳು, ನಟ ದೇವರಾಜ್- ಸಾಯಿಕುಮಾರ್ ನೆನಪಿಸುವಂತೆ ಕಟ ಕಟ ಬೂಟುಗಳು. ಕರುಣೆ, ಸೌಜನ್ಯ ಯಾವ ಠಾಣೆಯಲ್ಲೂ ಸಿಕ್ಕದು. ಪೊಲೀಸರನ್ನು ಭಯದಿಂದ ನೋಡುವ ನಮ್ಮ ಮನಸ್ಥಿತಿಗೆ ಕಾವ್ಯ ಒಂದು ಬೆಸುಗೆ. 'ರಾಜ್ಯದ ಲಕ್ಷ ಖಾಕಿಯೊಳಗೆ ಒಬ್ಬೊಬ್ಬ ಕವಿ ಜಾಗೃತನಾದರೆ, ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ' ಎಂಬುದು ರಾಜಪ್ಪ ಅವರ ನಂಬಿಕೆ.
ಸಮಾಜದ ಮೇಲಿನ ಆಘಾತಗಳು ಪೊಲೀಸರನ್ನು ಪರಿಪರಿಯಾಗಿ ಕಾಡುತ್ತವೆ. ಇಂಥ ವೇಳೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಮನುಷ್ಯನಾಗಿ ಸ್ಪಂದಿಸಬೇಕು. ಒಳಗೊಬ್ಬ ಕವಿ ಕೂತಿದ್ದರೆ ಸಮತೋಲನ ಸಾಧ್ಯ. ಆ ಸಮತೋಲನಕ್ಕೆ ಯಾವುದೂ ಸವಾಲಲ್ಲ. ಮಾನವೀಯ ಸ್ಪಂದನವೇ ನೈಜ ಕಾವ್ಯ. ಅವೇ ಸಾಲುಗಳಾಗಿ ಹೊರಹೊಮ್ಮಿದಾಗ ರಾಜಪ್ಪರಂಥವರು ಹುಟ್ಟಿಬರುತ್ತಾರೆ.
ಕಾವ್ಯ ಪೊಲೀಸರನ್ನು ಮೃದುಮಾಡಬಲ್ಲದು!

ಶಿಸ್ತೆಂದರೆ ಅಲರ್ಜಿ!

ಬಾಲ್ಯದಲ್ಲಿ ಡಿ.ಸಿ. ರಾಜಪ್ಪ ಅವರಿಗೆ ಶಿಸ್ತೆಂದರೇನೇ ಅಲರ್ಜಿ. ಮಲ್ಲಾಡಿಹಳ್ಳಿಯಲ್ಲಿ ಹೈಸ್ಕೂಲ್‌ಗೆ ಸೇರಿದ್ದಾಗ 'ತಿರುಕ' ಸ್ವಾಮೀಜಿ ಹೇಳಿಕೊಡುತ್ತಿದ್ದ ಯೋಗ ತರಗತಿಗೆ ಇವರು ಚಕ್ಕರ್ ಹಾಕಿದ್ದೇ ಹೆಚ್ಚು. ಅತಿ ಶಿಸ್ತಿನ ಕಾರಣಕ್ಕೇ ಅವರು ಆ ಶಾಲೆ ತೊರೆದು, ಬೇರೆಡೆ ಸೇರಿದರು. ಅಂದಹಾಗೆ, ರಾಜಪ್ಪ ಎಸ್ಸೆಸ್ಸೆಲ್ಸಿ ಫೇಲ್! ಶಿವಮೊಗ್ಗದಲ್ಲಿ ಕಟ್ಟಿ ಪಾಸು ಮಾಡಿಕೊಂಡರು. ಇನ್ಷಿಯಲ್ಲು ಡಿ.ಸಿ. ಅಂತ ಇದ್ದ ಕಾರಣ, ಡಿಸಿ ಆಗಬೇಕೆಂಬ ಕನಸಿತ್ತು. ಆದರೆ, ಡಿಸಿಪಿ ಆದರು!


ಸೇವೆ ಮಾಡುವುದು ಹೀಗೆ...
ಒಮ್ಮೆ ಮಂಗಳೂರಿಗೆ ಬಂದಿದ್ದ ಮದರ್ ತೆರೇಸಾರ ಜತೆ ಮೂರು ಗಂಟೆ ಕಳೆಯುವ ಭಾಗ್ಯ ರಾಜಪ್ಪ ಅವರಿಗೆ ಸಿಕ್ಕಿತ್ತು. ಸಿಸ್ಟರ್ ನಿರ್ಮಲಾ ಕೂಡ ಜತೆಗಿದ್ದರು. ತೆರೇಸಾ ಆಗೊಂದು ಮಾತು ಹೇಳಿದರು, 'ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೆ ಸೇವೆ ಮಾಡು'. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋದರೆ, ರಾಜಪ್ಪ ಅವರ ಛೇಂಬರಿನೊಳಗೆ ಈ ಸಾಲುಗಳು ಗಮನ ಸೆಳೆಯುತ್ತವೆ.


ಖಾಕಿ ಕವಿಗೋಷ್ಠಿ!
ರಾಜಪ್ಪ ನೇತೃತ್ವದಲ್ಲಿ 2004ರಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪೊಲೀಸ್ ಕವಿಗೋಷ್ಠಿ ನಡೆದಿತ್ತು. 32 ಮಂದಿ ಪಾಲ್ಗೊಂಡಿದ್ದರು. ಮತ್ತೊಂದು ಗೋಷ್ಠಿಯನ್ನು ಬಳ್ಳಾರಿಯಲ್ಲೂ ನಡೆಸಿದರು. ವಿವೇಕ್ ರೈ ಕೂಡ ಪಾಲ್ಗೊಂಡಿದ್ದರು. ಬಿಜಾಪುರದಲ್ಲೂ ಉತ್ತರ ವಲಯ ಮಟ್ಟದ ಕವಿಗೋಷ್ಠಿ ಮಾಡಿದ್ದರು ರಾಜಪ್ಪ. ಈಗ ರಾಜ್ಯ ಪೊಲೀಸ್ ಸಾಹಿತ್ಯ ವೇದಿಕೆ ಕಟ್ಟಿಕೊಂಡಿದ್ದಾರೆ. ಇಲಾಖೆಯೊಳಗೆ ಯಾರೇ ಕವಿತೆ ಬರೆದರೂ ರಾಜಪ್ಪ ಅವರಿಗೆ ಕಳುಹಿಸಿಕೊಡುತ್ತಾರೆ.


ಟಿಪ್ಪು ನಂತರದ ಟಿಪ್ಪಣಿ
ಡಾ. ರಾಜಪ್ಪನವರ ಡಾಕ್ಟರೇಟ್ ಪ್ರಬಂಧವೇ ವೈಶಿಷ್ಟ್ಯಪೂರ್ಣ. ಟಿಪ್ಪು ಮರಣಾನಂತರದ 1800-81ರ ಅವಧಿಯನ್ನು ಪ್ರಬಂಧ ವಿಷಯವಾಗಿ ತೆಗೆದುಕೊಂಡರು. ಅಲ್ಲಿಯವರೆಗೆ ರಾಜಾಶ್ರಯದಲ್ಲಿ ಬದುಕಿದ್ದಂಥ ಗುಡಿ ಕೈಗಾರಿಕೆಗಳು ಅಸುನೀಗಿದವು. ಬ್ರಿಟಿಷರು ಇಲ್ಲಿನ ಸಂಪತ್ತುಗಳನ್ನು ಲೂಟಿ ಹೊಡೆದು, ಸಾರಿಗೆ ಅಭಿವೃದ್ಧಿಯ ನೆಪದಲ್ಲಿ ಎಲ್ಲವನ್ನೂ ಬ್ರಿಟನ್ನಿಗೆ ರವಾನಿಸತೊಡಗಿದರು. ಈ ವೇಳೆ ಚನ್ನಪಟ್ಟಣದ ಗೊಂಬೆಗಳು, ಬಿದರಿ ಕಲೆಗಳು ನಾಶವಾದ ಬಗ್ಗೆ ಇವರ ಪ್ರಬಂಧ ಸವಿಸ್ತಾರ ಮಾಹಿತಿ ನೀಡುತ್ತದೆ.


- ಕೀರ್ತಿ ಕೋಲ್ಗಾರ್
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.