ಸಾಪ್ತಾಹಿಕಪ್ರಭ

MAKING OF ಮಾಲೆಗಾಂವ್ ಸೂಪರ್‌ಮ್ಯಾನ್

ನಾನು ಶೇಕ್ ನಾಸಿರ್. ಕನಸಿನ ನಗರಿ ಮುಂಬೈಯಿಂದ ಬರೋಬ್ಬರಿ 296 ಕಿಮೀ ದೂರದ ಮಾಲೆಗಾಂವ್ ಎಂಬ, ದಿನದ ಹನ್ನೆರಡು ಗಂಟೆ ಕರೆಂಟಿಲ್ಲದ ಪುಟ್ಟಹಳ್ಳಿಯ 'ಜಗತ್ಪ್ರಸಿದ್ಧ'...

MAKING  OF  ಮಾಲೆಗಾಂವ್ ಸೂಪರ್‌ಮ್ಯಾನ್
Published On :

ಬಾಲಿವುಡ್‌ಗೆ ನೂರು ವರ್ಷ. 1913ರಲ್ಲಿ ಫಾಲ್ಕೆ ಮಾಡಿದ 'ರಾಜಾ ಹರಿಶ್ಚಂದ್ರ'ದಿಂದ ಶುರುವಾದ ಈ ಅದ್ಭುತ ಯಾತ್ರೆ ದಾಖಲಿಸಿದ ಏಳುಬೀಳುಗಳ ಚರಿತ್ರೆಯೇ ಒಂದು ಮಹಾಸಿನೆಮಾ ಆಗಬಹುದೋ ಏನೋ. ಹೊಸತಂತ್ರಜ್ಞಾನದ ಯಾವ ಸೋಂಕೂ ಇಲ್ಲದೆ ಕೈಯಲ್ಲಿ ಕಾಸಿಲ್ಲದೆ ಸಿನೆಮದ ಎಬಿಸಿಡಿಯನ್ನು ಔಪಚಾರಿಕವಾಗಿ ಕಲಿಯದೆ, ದಿನದಿನದ ಕೂಲಿಗೂ ತತ್ವಾರವಿರುವ ಸಂದರ್ಭದಲ್ಲೂ ತಮ್ಮ ಜೀವಂತಿಕೆಯನ್ನು ಹಸಿಹಸಿಯಾಗಿ ತೆರೆಯ ಮೇಲೆ ಮೂಡಿಸಿ ನಮ್ಮ ಎದೆಗೂಡುಗಳನ್ನು ಬೆಚ್ಚಗೆ ಮಾಡುವ ಮಾಂತ್ರಿಕರು ಇರಲು ಸಾಧ್ಯವೇ? ನಾವಿಲ್ಲವೆ ಅಂತ ನಗುವ ಈ ಮಾಲೆಗಾಂವಿನ ಸೂಪರ್‌ಮನುಷ್ಯರನ್ನು ನೋಡಿ!


ನಾನು ಶೇಕ್ ನಾಸಿರ್. ಕನಸಿನ ನಗರಿ ಮುಂಬೈಯಿಂದ ಬರೋಬ್ಬರಿ 296 ಕಿಮೀ ದೂರದ ಮಾಲೆಗಾಂವ್ ಎಂಬ, ದಿನದ ಹನ್ನೆರಡು ಗಂಟೆ ಕರೆಂಟಿಲ್ಲದ ಪುಟ್ಟಹಳ್ಳಿಯ 'ಜಗತ್ಪ್ರಸಿದ್ಧ' ಫಿಲ್ಮ್ ಡೈರೆಕ್ಟರ್. ನೀವು, ನಾನು ಮಾಡಿದ ಶೋಲೆ, ಶಾನ್ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ನನ್ನ ವಿಶ್ವವಿಖ್ಯಾತ ಸೂಪರ್‌ಮ್ಯಾನ್ ಚಿತ್ರ ಕೂಡ. ಬಿಡಿ, ಸೂಪರ್‌ಮ್ಯಾನ್ ಕತೆ ಹೇಳೋ ಮೊದಲು, ನನ್ನ ಮತ್ತು ನಮ್ಮ ಹಳ್ಳಿಯ ಕತೆ ಸ್ವಲ್ಪ ಹೇಳ್ತೀನಿ. ಕತೆಗೆ ಮುನ್ನ ಪೀಠಿಕೆ, ಚಿತ್ರಕ್ಕೆ ಮುನ್ನ ಫ್ಲ್ಯಾಶ್‌ಬ್ಯಾಕ್ ತುಸು ಇಂಟರೆಸ್ಟಿಂಗ್ ಆಗಿರುತ್ತೆ.
ಅಂದ ಹಾಗೆ, ನನ್ನೂರಿನ ಹೆಸರನ್ನು ನೀವು ಕೇಳಿರಬಹುದು, ಓದಿರಬಹುದು. ಕೋಮುಘರ್ಷಣೆಗೆ ಬಹಳ ಪ್ರಸಿದ್ಧವಾದ ಊರು ನನ್ನದು. ಹಳ್ಳಿಯ ನಡುಮಧ್ಯೆ ಗೌರಮ್ಮ ಬೈತಲೆ ತೆಗೆದ ಹಾಗೆ ಒಂದು ನದಿ ಹರಿಯುತ್ತೆ. ಅದರಾಚೆ ಹಿಂದೂಗಳು, ಈಚೆ ಮುಸ್ಲಿಮರು ಬದುಕ್ತಾ ಇದಾರೆ. ಇರೋರಲ್ಲಿ ಮುಕ್ಕಾಲುಭಾಗ ಮುಸ್ಲಿಮರೇ ಇರೋದು. ನಮ್ಮ ಬಿಕನಾಸಿ ಉದ್ಯೋಗಗಳಿಗೆ ಒಂದು ಹೆಸರು ಅಂತ ಕೂಡ ಇಲ್ಲ. ಗುಜರಿ, ಪೇಪರ್, ಚಾದಂಗಡಿ, ಗಾಡಿ ರಿಪೇರಿ, ಪಂಚರು, ಪ್ಲಂಬರ್, ಬಟ್ಟೆ ಅಂಗಡಿ, ಕ್ಷೌರ- ಹೀಗೆ ಮಧ್ಯಾಹ್ನ ರೊಟ್ಟಿ ತಟ್ಟೋದಕ್ಕೆ ಆಗುವಷ್ಟು ಕೂಲಿ ಹುಟ್ಟಿದರೆ ಸಾಕು, ಅದೇ ಒಂದು ಉದ್ಯೋಗ. ಇವತ್ತು ಗಡ್ಡ ಹೆರೆದವನು ನಾಳೆ ಬೋರ್ಡು ಬರೀಬಹುದು, ನಿನ್ನೆ ಟೈರ್ ಹೊಲಿದು ಪಂಚರ್ ಹಾಕಿದೋನು ಇವತ್ತು ಟೈಲರ್ ಆಗಬಹುದು. ಒಟ್ಟಲ್ಲಿ ಹೇಳುವುದಾದರೆ, ಈ ಊರಿನ ಸಮಸ್ತರೂ ಸಕಲಕಲಾವಲ್ಲಭರು.
ಹರಿದ ಚಾಪೇಲಿ ಮಲಗಿದರೂ ಆಕಾಶದ ನಕ್ಷತ್ರ ಕಾಣದೆ ಇರುತ್ಯೇ? ನನ್ನೂರಿನ ಖುಷಿ, ಸಂಭ್ರಮ, ಶ್ರೀಮಂತಿಕೆಯನ್ನು ನೋಡಬೇಕಾದರೆ ಶುಕ್ರವಾರ ಬನ್ನಿ. ಜುಮ್ಮಾ ಮಸೀದಿಯಲ್ಲಿ ನಮಾಜ್ ಮುಗೀತಾ ಇದ್ಹಾಗೇ ಊರಿನ ಎಂಟು ಥಿಯೇಟರ್‌ಗಳಿಗೆ ಜನ ನುಗ್ಗೋ ಪರಿ ನೀವು ಕಣ್ಣಾರೆ ನೋಡಿಯೇ ತಿಳಿಯಬೇಕು. ಶಾಂತವಾಗಿ ಕೂತ ದೊಡ್ಡ ಗೂಡಿಗೆ ಗುರಿಯಿಟ್ಟು ಕಲ್ಲೆಸೆದರೆ ಹುಚ್ಚೆದ್ದು ಹಾರುವ ದುಂಬಿಗಳ ಹಾಗೆ, ಮಸೀದಿಯಲ್ಲಿ ಒಟ್ಟಾದ ಜನ ಇಲ್ಲಿ ಥಿಯೇಟರಿಗೆ ಓಡಿ ಬಂದು ಸೀಟು ಹಿಡಿದು ಪಿಚ್ಚರ್ ನೋಡುತ್ತಾರೆ. ನಂಬ್ತೀರೋ ಬಿಡ್ತೀರೋ, ಹಳೇ ಅಜ್ಜಮ್ಮನ ಕಾಲದ ಗಿ 'ಅಗ್ನಿಪಥ್‌' ಚಿತ್ರ ನಮ್ಮ ಟಾಕೀಸಿನಲ್ಲಿ ಇನ್ನೂ ಓಡ್ತಾ ಇದೆ. ಟಾಕೀಸಿಗೆ ಟಾಕೀಸೇ ಕಾರ್ಗಲ್ಲಲ್ಲಿ ಬೇಲಿ ಎಳೆದ ಹಾಗೆ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಒಂದು ಮಿಥುನ್ ಫ್ಯಾನ್‌ಗಳ ಗುಂಪು, ಇನ್ನೊಂದು ಅಮಿತಾಭ್ ಬಚ್ಚನ್ ಗುಂಪು. ಇವೆರಡರಲ್ಲಿ ಯಾರು ಹೆಚ್ಚು ಬೊಬ್ಬೆ ಹೊಡೀತಾರೆ, ಸಿಳ್ಳೆ ಹಾಕ್ತಾರೆ ಅನ್ನೋ ಸ್ಪರ್ಧೆ ಬೇರೆ ನಡೆಯುತ್ತೆ. ಪಿಚ್ಚರ್ ನಡೀತಾ ಇದ್ದ ಹಾಗೆ, ಥಿಯೇಟರ್ ಒಳಗೆ ಮಾಲೆಪಟಾಕಿ ಹಚ್ಚಿ ಸಿಡಿಸ್ತಾರೆ. ನಮ್ಮ ನಮ್ಮ ಆರಾಧ್ಯದೈವಗಳಿಗೆ ಇಲ್ಲೇ ಗುಡೀನೂ ಕಟ್ಟಿಕೊಂಡಿದ್ದೇವೆ. ನೋಡಿ ಇದು- ಮಿಥುನ್ ಚಕ್ರವರ್ತಿ ದೇವರ ಗುಡಿ. ಹೇಗಿದೆ?
ಇಂಥಾ ಹುಚ್ಚು ಊರಲ್ಲಿ ನಾನೊಂದು ಫಿಲ್ಮು ತೆಗೆದೆ. 'ಶೋಲೆ' ಅಂತ. ಇದು ರಾಂಪುರದ್ದಲ್ಲ, ಮಾಲೆಗಾಂವಿನ ಶೋಲೆ. ಒಂದು ಬಸ್ಸನ್ನು ಏಳೆಂಟು ರೌಡಿಗಳು ಬೈಕಿನಲ್ಲಿ ಓಡಿಸಿಕೊಂಡು ಹೋಗಿ ದರೋಡೆ ಮಾಡುವುದೇ ಕಥಾವಸ್ತು. ಅದು ಹಿಟ್ಟಾದ ಪರಿಯನ್ನು ಹೇಗೆ ಅಂತ ಬಣ್ಣಿಸಲಿ? ಬಿಡುಗಡೆಯಾದ ಮೂರು ತಿಂಗಳು ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಉಚ್ಚೆ ಹೊಯ್ದಲ್ಲಿ ಬರೇ ಅದರದ್ದೇ ಮಾತು ಅನ್ನೋ ಹಾಗೆ ಆಗಿಹೋಯಿತು. ಮಾಲೆಗಾಂವಿಗೆ ಮಾಲೆಗಾಂವೇ ಮುಗಿಬಿದ್ದು ಹತ್ತತ್ತು ಸಲ ಈ ಪಿಚ್ಚರ್ ನೋಡಿ ನನ್ನ ಜಲ್ಮವನ್ನು ಪಾವನ ಮಾಡಿತು.

ತಿಕೀಟುಗಳು ಹೊರಗೆ ಬ್ಲ್ಯಾಕ್‌ನಲ್ಲಿ ಮಾರಾಟವಾದವು. ನಿರ್ದೇಶಕನಿಗೆ ಜೀವನದಲ್ಲಿ ಒಮ್ಮೆಯಾದರೂ ಇಂತಹ ಸೌಭಾಗ್ಯ ಅನುಭವಿಸೋದಕ್ಕೆ ಸಿಗಬೇಕು, ನೋಡಿ!
ನನಗೆ ಫಿಲ್ಮು ಹುಚ್ಚು ಬಿಟ್ಟಿರಲಿಲ್ಲ. ಬಾಲಿವುಡ್ ಎಲ್ಲ ಜಾಲಾಡಿದ ಮೇಲೆ ಹಾಲಿವುಡ್ಡಿಗೆ ಹೋದೆ. ಬ್ರೂಸ್ಲೀ, ಜಾಕಿಚಾನ್, ಅರ್ನಾಲ್ಡ್ ಶಿವಾಜಿನಗರ ಅಂತ ಹತ್ತಾರು ಹೀರೋ- ಸೂಪರ್‌ಹೀರೋಗಳ ಫಿಲ್ಮು, ಚಿತ್ರ, ಪೋಸ್ಟರು ಎಲ್ಲ ಗುಡ್ಡೆ ಹಾಕಿ ಕಣ್ಣುಗುಡ್ಡೆಗಳಿಗೆ ಎಣ್ಣೆ ಬಿಟ್ಟುಕೊಂಡು ಹಗಲುರಾತ್ರಿ ತಪಸ್ಸು ಮಾಡಿದೆ. ಕೊನೆಗೆ ಒಂದು ದಿನ, ವಿಶ್ವಾಮಿತ್ರನಿಗೆ ಮೇನಕೆ ಇಳಿದು ಬಂದ ಹಾಗೆ, ನನ್ನೆದುರಿಗೆ ನನ್ನ ಭವಿಷ್ಯದ ಹೀರೋ ಬಂದೇಬಿಟ್ಟ. ಯಾರವನು ಅಂತೀರಿ? ಸೂಪರ್‌ಮ್ಯಾನ್! ಗಾಳಿಯಲ್ಲಿ ಹಾರಾಡುವ, ಇಂದ್ರಲೋಕಕ್ಕೆ ಕ್ಷಣಮಾತ್ರದಲ್ಲಿ ನೆಗೆಯುವ, ಪ್ಯಾಂಟ್‌ಮೇಲೆ ಚಡ್ಡಿ ಹಾಕೋ ಸೂಪರ್‌ಮ್ಯಾನ್!
ಕೂಡಲೇ ಮುಂಬೈ ರೈಲು ಹತ್ತಿದೆ. ಅಲ್ಲಿ ಗಲ್ಲಿಗಲ್ಲಿ ಅಲೆದಾಡಿದೆ. ಸೂಪರ್‌ಮ್ಯಾನ್ ಫಿಲ್ಮುಗಳು, ಪುಸ್ತಕಗಳನ್ನು ಕೊಂಡೆ. ಚೀಪಾಗಿ ಸಿಕ್ಕ ಒಂದೊಂದು ಮೀಟರ್ ನೀಲಿ ಮತ್ತು ಕೆಂಪುಬಟ್ಟೆ ಕೊಂಡುತಂದೆ. ನಮ್ಮೂರ ಟೈಲರ್ ಕಂಫ್ಯೂಶನ್ ಡಿಸೈನರ್ ಹಮೀದನ ಬಳಿ ಬಂದು ಆ ಬಟ್ಟೆಗಳನ್ನು ಕೊಟ್ಟು ನಿಂತಲ್ಲೇ ಒಂದು ಚೀಟಿಯಲ್ಲಿ ಸೂಪರ್‌ಮ್ಯಾನ್ ಚಿತ್ರ ಬರೆದು ಅಂಗಿ ಪ್ಯಾಂಟು ಚಡ್ಡಿ ಹೇಗೇಗೆ ಬರಬೇಕು ಅಂತ ವಿವರಿಸಿ ಕೂಡ್ಲೆ ಮಾಡು ಮಾರಾಯ ಅಂತ ಗೋಗರೆದು ಆರ್ಡರ್ ಕೊಟ್ಟೆ.
ಸೂಪರ್‌ಮ್ಯಾನ್ ಹಾರೋದು, ನೆಗೆಯೋದನ್ನೆಲ್ಲ ಸ್ಪೆಷಲ್ಲಾಗಿ ನೈಜ ಅನ್ನುವಂತೆ ತೋರಿಸಬೇಕಾದರೆ ಕ್ರೋಮ್ ಅನ್ನುವ ತಂತ್ರಜ್ಞಾನ ಬೇಕು. ಅದಕ್ಕೂ ಒಬ್ಬ ಪರಿಚಯದ ಟೆಕ್ನಿಷಿಯನ್ ಅಂಗಡಿಗೆ ಹೋದೆ. ಅವನು ಎರಡುಲಕ್ಷ ಆಗುತ್ತೆ ಅಂದಾಗ, ಸರಿ ಈಗ ಬರ್ತೀನಿ ಅರ್ಜಂಟ್ ಕೆಲಸ ಇದೆ ಎಂದು ಈಚೆ ಬಂದು ನೀರು ಕುಡಿದೆ. ಎರಡು ಲಕ್ಷ ಚೆಲ್ಲೋದಾದರೆ ಇವನ ಹತ್ರ ಯಾಕ್ ಬರ್ತಿದ್ದೆ ಸ್ವಾಮಿ, ಅದೇ ದುಡ್ಡಲ್ಲಿ ನಾಕು ಫಿಲಮ್ಮು ಮಾಡಿ ಚಿಂದಿ ಉಡಾಯಿಸ್ತಿದ್ದೆ. ಇವನ ಕ್ರೋಮ್ ಮನೆ ಹಾಳಾಗಲಿ ಅಂತ ಶಾಪ ಹಾಕಿ ಮತ್ತೆ ಹೋಲ್ಸೇಲ್ ಅಂಗಡಿಯಿಂದ ಒಂದು ದೊಡ್ಡ ಥಾನು ಹಸಿರು ಬಟ್ಟೆ ಖರೀದಿಸಿದೆ. ಇದನ್ನು ಒಂದು ಲಾರಿಗೆ ಪರದೆಯಂತೆ ಇಳಿಬಿಟ್ಟರೆ, ಅದೇ ಕ್ರೋಮು!
ನಮ್ಮೂರಲ್ಲಿ ಅತಿಮಾನುಷ ವ್ಯಕ್ತಿಗಳಿಗೇನೂ ಬರವಿಲ್ಲ. ಶಫೀಕ್ ಶೇಖ್ ಕೂಡ ಅಂಥವನೇ. ಯಾಕೆಂದರೆ, ಯಾವ ಆಂಗಲ್‌ನಿಂದ ನೋಡಿದರೂ ಅವನು ಮನುಷ್ಯಪ್ರಾಣಿಯ ಹಾಗೆ ಕಾಣಿಸ್ತಾ ಇರಲಿಲ್ಲ. ಬಟ್ಟೆ ಚಪ್ಪಲಿ ಸಮೇತ ಅವನನ್ನು ಎತ್ತಿ ತೂಕಕ್ಕೆ ಹಾಕಿದರೂ ಮೂವತ್ತು ಕೇಜಿ ದಾಟ್ತಿರಲಿಲ್ಲ. ಹಂಚಿಕಡ್ಡಿಗೆ ಪ್ಯಾಂಟು ಹಾಕಿದ ಹಾಗೆ ಓಡಾಡ್ತಿದ್ದ ಈ ಹುಡುಗನ ಒಳಗೆ ಫಿಲ್ಮ್ ಮಾಡಬೇಕು ಅನ್ನುವ ಆಸೆ ಮಾತ್ರ ಅದಮ್ಯವಾಗಿತ್ತು. ಒಂದು ದಿನ ಇವನನ್ನು ಹತ್ತಿರ ಕೂರಿಸಿಕೊಂಡು, ನೋಡಯ್ಯ ನಾನೊಂದು ಪಿಚ್ಚರ್ ತೆಗೀತಿದ್ದೇನೆ. ಮಾಲೆಗಾಂವಿನ ಸೂಪರ್‌ಮ್ಯಾನ್ ಅಂತ. ಹೀರೋ ನೀನೇ ಅಂತ ಹೇಳಿ ಭುಜ ತಟ್ಟಲು ಹೋದರೆ, ಅವನು ಕರೆಂಟು ಶಾಕ್ ಹೊಡೆಸಿಕೊಂಡವರಂತೆ ಧಡ್ಡೆಂದು ನೆಲಕ್ಕೆ ಬಿದ್ದ.
ಚಿತ್ರೀಕರಣ ಶುರುವಾಯಿತು. ನಮ್ಮ ಯುನಿಟ್ ಹೋದಲ್ಲೆಲ್ಲ ಜನವೋ ಜನ. ಇದ್ಯಾರು ನೀಲಿ ಬಟ್ಟೆಯ ಮೇಲೆ ಕೆಂಪುಚಡ್ಡಿ ಹಾಕ್ಕೊಂಡು ವೀರಾಧಿವೀರನಂತೆ ನಡೆದುಹೋಗೋನು ಅಂತ ಜನರಿಗೆ ಕುತೂಹಲ. ನಮ್ಮ ಫಿಲ್ಮು ನದಿಯಲ್ಲಿ, ಗುಡ್ಡದಲ್ಲಿ, ರೋಡಲ್ಲಿ, ಗ್ಯಾರೇಜಲ್ಲಿ ಎಲ್ಲೆಂದರಲ್ಲಿ ನಡೀತಾ ಇತ್ತು. ಖಳನಾಯಕನನ್ನು ಮಟ್ಟಹಾಕಬೇಕಾದರೆ ಸೂಪರ್‌ಮ್ಯಾನ್ ಹೀಗೆ ಮಾಲೆಗಾಂವಿನ ತುಂಬ ಓಡಾಡ್ತ ಹಾರಾಡ್ತ ಇರುವುದು ಅಗತ್ಯವೂ ಆಗಿತ್ತು. ಒಂದು ದಿನ ನಮ್ಮ ಸೂಪರ್‌ಮ್ಯಾನ್, ಖಳನಾಯಕನನ್ನು ಹೊಡೆಯಲು ಲೈಟ್‌ಕಂಬ ಏರುವ ಸೀನು ಇಟ್ಟುಕೊಂಡಿದ್ದೆವು. ಆ ಕಂಬವೋ ಬುಡಗಟ್ಟಿಯಿಲ್ಲದೆ ಓಲಾಡುತ್ತಾ ಇತ್ತು. ಸುತ್ತ ನೆರೆದ ಇಡೀ ಹಳ್ಳಿ ದೇವರ ಕೃಪೆಯಿಲ್ಲದೆ ಕಂಬ ಬಿದ್ದಿದ್ದರೆ ಹತ್ತಿರದ ಅಷ್ಟೂ ಜನ, ಸೂಪರ್‌ಮ್ಯಾನೂ ಸೇರಿ ಕರಟಿ ಇದ್ದಿಲಾಗಿ ಹೋಗುತ್ತಿದ್ದರು. ಪುಣ್ಯಕ್ಕೆ ಏನೂ ಆಗಲಿಲ್ಲ.
ಸಿನೆಮಾ ಅಂದರೆ ನನ್ನ ಊರಿಗೇ ಊರೇ ತಲೆಕೆಟ್ಟು ಕುಣಿದರೂ, ನಾವ್ಯಾರೂ ಇಮಾಮ್ ಸಾಬಿಯ ನಿಯಮಗಳನ್ನು ಮುರಿಯುವಂತಿಲ್ಲ. ಅದೆಂದರೆ, ಮಾಲೆಗಾಂವಿನ ಹೆಣ್ಣುಮಕ್ಕಳು ಸಿನೆಮಗಳಲ್ಲಿ ನಟಿಸುವುದಾಗಲೀ, ಥಿಯೇಟರಿಗೆ ಹೋಗಿ ಪಿಚ್ಚರು ನೋಡುವುದಾಗಲೀ ಸಂಪೂರ್ಣ ನಿಷಿದ್ಧ. ಇದಕ್ಕೆ ವಿರುದ್ಧವಾಗಿ ಹೋದವರೆಲ್ಲ ನಮ್ಮೂರಿನ ಖಬರಸ್ತಾನದಲ್ಲಿ ತಣ್ಣಗೆ ಮಲಗಿ ಆಕಾಶ ನೋಡ್ತಿದ್ದಾರೆ. ಸಾಯುವ ಮೊದಲು ಈ ಪಿಚ್ಚರು ಪೂರ್ತಿ ಮಾಡಬೇಕು ಅಂದುಕೊಂಡಿದ್ದರಿಂದ ನಾನು ನಿಯಮ ಮುರಿಯುವ ಸಾಹಸಕ್ಕೆ ಕೈ ಹಾಕದೆ, ಪಕ್ಕದೂರಿನಿಂದ ಒಂದು ಹುಡುಗಿಯನ್ನು ಎರಡು ದಿನದ ಮಟ್ಟಿಗೆ ಕರೆತಂದೆ. ಅವಳೇ ನಮ್ಮ ಪಿಚ್ಚರಿನ ಹೀರೋಯಿನ್. ನಮ್ಮ ಪಿಚ್ಚರು ಬಹಳ ಲೋ ಬಜೆಟ್ಟಿನದು. ನಿನಗೆ ಬಿಸ್ಲೆರಿ ಗಿಸ್ಲೆರಿ ಕೊಡೋದಕ್ಕೆ ನಮ್ಮಲ್ಲಿ ದುಡ್ಡಿಲ್ಲಮ್ಮ. ನಿನ್ನ ಊಟತಿಂಡಿಯ ವ್ಯವಸ್ಥೆ ನಿನ್ನದೇ. ಮೇಕಪ್ಪೂ ನಿನ್ನದೇ, ಬಟ್ಟೆಯೂ ನಿನ್ನದೇ ಅಂತ ಗಾಳಿದೀಪಗಳೆಲ್ಲ ನಿನ್ನದೇ ಅನ್ನುವ ಪದ್ಯ ಹಾಡಿ ಅವಳ ಕೈಯಿಂದ ಕೆಲಸ ಮಾಡಿಸಿಕೊಂಡೆ. 
ಇನ್ನು ವಿಲನ್ ಯಾರು ಅಂತೀರಿ? ನಮ್ಮ ಅಕ್ರಮ್ ಭಾಯಿಯೇ ವಿಲನ್. ಅವನೇ ನಮ್ಮ ಚಿತ್ರದ ಫೋಟೋಗ್ರಾಫರ್, ಎಡಿಟರ್, ಮ್ಯೂಸಿಕ್ ಡೈರೆಕ್ಟರ್ ಎಲ್ಲವೂ. ಚಿತ್ರದ ಮೊದಲರ್ಧದ ಎಲ್ಲಾ ಕೆಲಸ ಚಕಾಚಕ್ ಮಾಡಿ ಒಂದು ಹಂತಕ್ಕೆ ಬಂದಾದ ಮೇಲೆ, ತಲೆ ಬೋಳಿಸಿಕೊಂಡು ವಿಲನ್ ಆದ. ಈ ವಿಲನ್ನಿಗೆ ಕೊಳಕು ಅಂದರೆ ಬಹಳ ಇಷ್ಟ. ಇಡೀ ಮಾಲೆಗಾಂವಿನಲ್ಲಿ ಜನ ಎಲ್ಲೆಂದರಲ್ಲಿ ಥೂಥೂ ಎಂದು ತುಪ್ಪುತ್ತಾ ಇರಬೇಕು, ಗುಟಕಾ ತಿಂದು ಉಗುಳಬೇಕು ಅಂತ ಬಯಸುವ ದುಷ್ಟ ಅವನು. ಅಂತಹ ಖಳನನ್ನು ಹಿಡಿದು ತಲೆ ಒಡೆದು ಮಾಲೆಗಾಂವನ್ನು ರಕ್ಷಿಸುವವನು ಸೂಪರ್‌ಮ್ಯಾನ್. ಇದು ಕತೆ. ನಡುನಡುವೆ, ಖಳ ತನ್ನ ಬಲಿಪಶುಗಳಾಗಿ ಮಕ್ಕಳನ್ನು ಎತ್ತಿ ಬ್ರಿಜ್ ಮೇಲಿಂದ ನೀರಿಗೆ ಎಸೆಯುತ್ತಾನೆ. ಸೂಪರ್‌ಮ್ಯಾನ್ ಹೋಗಿ ಮಕ್ಕಳನ್ನು ನೀರಿಂದ ರಕ್ಷಿಸಿ ತರುತ್ತಾನೆ. ಮಕ್ಕಳೇನೋ ಖುಷಿಯಿಂದಲೇ ಜಿಗಿದು ನೀರಿಗೆ ಬಿದ್ದರು. ಆದರೆ ನಮ್ಮ ಶಫೀಕ್ ಸಾಹೇಬರಿಗೆ ಈಜೋದಕ್ಕೆ ಬರೋಲ್ಲವೆ! ಅವನು ನೀರು ನೋಡಿ ಹಿಂದೆ ಹಾರುತ್ತಿದ್ದ. ನಾವು ರೋಸಿ ಹೋಗಿ ಕೊನೆಗೆ ಅವನನ್ನು ಬಲಾತ್ಕಾರದಿಂದ ನೀರಿಗೆ ಹಾಕಿ ಶಾಟ್ ತಗೊಂಡೆವು. ಅದಾಗಿ ಎರಡು ದಿನ ಸೂಪರ್‌ಮ್ಯಾನ್ ನಡುಗುತ್ತ 'ಚಳಿಚಳಿ' ಅಂತ ಕುಂಯ್ಗುಡುತ್ತಿದ್ದ.
ನಮ್ಮ ಪಿಚ್ಚರಿಗೆ ದುಡ್ಡಿನದೇ ಮುಗ್ಗಟ್ಟು. ಆಗ ಕೆಲವು ವರ್ತಕರು, ನಾವು ದುಡ್ಡು ಕೊಡ್ತೇವೆ, ಆದರೆ ನಮ್ಮ ಅಂಗಡಿ ಪಿಚ್ಚರಲ್ಲಿ ಬರಬೇಕು ಅಂತ ಹೇಳಿದರು. ನಮ್ಮ ಸ್ಕ್ರಿಪ್ಟ್ ರೈಟರ್ ಫರೋಗ್, ಕತೆಯನ್ನು ಹೇಗೆ ಬೇಕಾದರೂ ತಿರುಚಿ ಬರೀತೇನೆ ಅಂತ ಹುರಿದುಂಬಿಸಿದ. ಲಲ್ಲೆ ಮಿಲ್ಕ್ ಸೆಂಟರ್- ಮಾಲೆಗಾಂವಿನ ಜನಕ್ಕೆಲ್ಲ ಗೊತ್ತಿರುವ ಹಾಲಿನಂಗಡಿ. ಖಳನೆದುರು ಏಗಲಾಗದೆ ಬಳಲಿ ಬೆಂಡಾಗಿ ಕೂತ ಸೂಪರ್‌ಮ್ಯಾನಿಗೆ ಅವನ ತಂದೆ 'ಮಗಾ, ಲಲ್ಲೆ ಅಂಗಡಿಯ ಹಾಲು ಕುಡಿ. ಹಾರಲು ಶಕ್ತಿ ಬರುತ್ತೆ' ಅಂತ ಹೇಳುತ್ತಾನೆ. ಸೂಪರ್‌ಮ್ಯಾನ್, ಲಲ್ಲೆಗೆ ಹೋಗಿ ಹಾಲು ಕುಡಿದು ಭೀಮಬಲ ಪಡೆಯುತ್ತಾನೆ. ಲಲ್ಲೆಯ ಮಾಲೀಕ ಕೊಟ್ಟ ಎಂಟು ಸಾವಿರದಿಂದ ನಮಗೂ ಭೀಮಬಲ ಬಂತು!
ನೀನು ಮಾಡ್ತಾ ಇರೋದು ಕಾಪಿ ಅಲ್ಲವಾ ಅಂತ ಕೇಳೋರಿಗೆ ನಾನು ಇಂತಹ ದೃಶ್ಯಗಳನ್ನು ತೋರಿಸ್ತೇನೆ. ಇದು ಹೇಗೆ ಸ್ವಾಮಿ ಕಾಪಿ ಆಗುತ್ತೆ? ಹಾಲಿವುಡ್ ಫಿಲ್ಮಲ್ಲಿ ಹಾಲು ಕುಡಿಯೋ ಸೂಪರ್‌ಮ್ಯಾನನ್ನು ತೋರಿಸಿ ನೋಡೋಣ? ಹೆಸರು ಎತ್ತಿಕೊಂಡ ಮಾತ್ರಕ್ಕೆ ಚಿತ್ರವೇ ಕಾಪಿ ಆಗಿಬಿಡುತ್ತಾ? ಅವನು ಹಾರಾಡಿದಾಗ ಕಾಣೋ ಊರು ನಮ್ಮದು. ನಮ್ಮ ಜನ, ನಮ್ಮ ಮನೆ, ನಮ್ಮ ಆಡು, ಕುರಿ, ಕೋಣ. ನಾವಿಲ್ಲಿ ಮಾತಾಡ್ತಾ ಇರೋದು ನಮ್ಮೂರ ಸಮಸ್ಯೆಗಳ ಬಗ್ಗೆ. ಉದಾಹರಣೆಗೆ ನಮ್ಮೂರಲ್ಲಿ ಮೊಬೈಲ್ ನೆಟ್‌ವರ್ಕ್‌ನ ಸಿಗ್ನಲ್ ಸಮಸ್ಯೆ ಇದೆ. ಟವರ್ ಹತ್ತಿರ ಮೊಬೈಲಿನಲ್ಲಿ ಮಾತಾಡುವಾಗ ಸೂಪರ್‌ಮ್ಯಾನ್, ಒಂದ್ನಿಮಿಷ ತಾಳು ಅಂತ ಹೇಳಿ ಟವರ್ ತುದಿಗೆ ಗಾಳಿಯಲ್ಲೇ ಹಾರಿ ಹೋಗಿ, ಸರಿ ಈಗ ಹೇಳು ಅಂತಾನೆ. ಇದೂ ಕಾಪೀನಾ?
ಹಗಲೂರಾತ್ರಿ ನಡೀತಿದ್ದ ಶೂಟಿಂಗಿನಲ್ಲಿಯೂ ಇರುತ್ತ, ಹಗಲು ಹೊತ್ತು ಮಿಲ್ಲಿನಲ್ಲಿ ಕೆಲಸ ಮಾಡುತ್ತ, ಸಿಗೋ ಎರಡುಮೂರು ಗಂಟೆ ನಿದ್ದೆಯಲ್ಲೂ ಬಣ್ಣದ ಕನಸುಗಳನ್ನು ಕಾಣುತ್ತ ಬಿಜಿಯಾಗಿದ್ದ ಶಫೀಕ್, ಇಷ್ಟೆಲ್ಲ ಉಪದ್ವ್ಯಾಪಗಳ ನಡುವೆಯೇ ಹೆಣ್ಣು ಕೂಡ ನೋಡಿಕೊಂಡು ಬಂದು ಲಗ್ನ ಫಿಕ್ಸ್ ಮಾಡಿಕೊಂಡಿದ್ದ. ಶೂಟಿಂಗಿಗೆ ನಾಲ್ಕು ದಿನ ವಿರಾಮ ಕೊಟ್ಟು ನಾವೆಲ್ಲ ಶಫೀಕನ ಮದುವೆಯಲ್ಲಿ ಸಂಭ್ರಮದಿಂದ ಓಡಾಡಿ ಹೋಳಿಗೆಯೂಟ ಉಂಡು ಬಂದೆವು. ಚಿತ್ರೀಕರಣದ ಮುಂದುವರೆದ ಭಾಗವೋ ಎನ್ನುವ ಹಾಗೆ ಈ ಮದುವೆಯೂ ಫಿಲ್ಮಿಯಾಗಿ ಮುಗಿದುಹೋಯಿತು.
ಹೀಗೆ ಅನೇಕ ಸುಖದುಃಖಗಳ ನಡುವೆ, ದುಗುಡ-ದುರಂತಗಳ ನಡುವೆ, ವಿಭ್ರಮ-ವಿಹ್ವಲತೆಗಳ ನಡುವೆ ಶೂಟಿಂಗ್ ಮುಗಿಯಿತು. ಕೊನೆಗೆ ಪಿಚ್ಚರು ಅದ್ಭುತ ಅನ್ನುವಷ್ಟು ಅದ್ಭುತವಾಗಿ ಬಂತು. ಐದನೇ ಕ್ಲಾಸೂ ತುಳಿಯದ ಹುಡುಗರು ತಯಾರಿಸಿದ ಪಿಚ್ಚರು ಅಂತ ಹಾಲಿವುಡ್ಡಿನ ಹೈಕಳೂ ಹೇಳಲಿಕ್ಕಾಗದಷ್ಟು ಅದ್ಧೂರಿಯಾಗಿ ರೆಡಿಯಾಯಿತು. ನಮ್ಮ ಹಳ್ಳಿಯ ಟೆಂಟು ಥಿಯೇಟರಲ್ಲಿ ಬಿಡುಗಡೆಯೂ ಆಯಿತು. ಊರಿನ ಹತ್ತುಸಮಸ್ತರು ಬಂದು ಪಿಚ್ಚರ್ ನೋಡಿ ಚಪ್ಪಾಳೆ-ಶಿಳ್ಳೆ ಹೊಡೆದು ಪಟಾಕಿ ಹಚ್ಚಿ ಸಂಭ್ರಮಿಸಿದರು. ಖುಷಿಯಿಂದ ಹಾರಾಡುತ್ತ ನಮ್ಮ ಹಸನ್‌ಭಾಯಿ 'ಏ್ಖಕಖ ಋ್ಖಔಔ' ಅಂತ ಒಂದು ತಿಂಗಳಿಡೀ ಬೋರ್ಡು ನೇತಾಡಿಸಿದ.
ನಮ್ಮ ಪಿಚ್ಚರಿಗೆ ಎಲ್ಲ ಕೂಡಿಕಳೆದು ನಾವು ಸುರಿದದ್ದು ಒಂದು ಲಕ್ಷಕ್ಕೂ ಕಮ್ಮಿ. ಶೂಟಿಂಗಿನಲ್ಲಿ ಒಂದು ಸಲ ಹೊಳೆಯ ನೀರಿಗೆ ಬಿದ್ದರೂ ರಿಪೇರಿಯಾಗಿ ಬಂದು ನನ್ನ ಕನಸು ಕಾಪಾಡಿದ ಕ್ಯಾಮೆರಕ್ಕೂ ನಾನು ಋಣಿಯಾಗಿರಬೇಕು. ಹೇಳಿಕೇಳಿ ಇಡೀ ಪಿಚ್ಚರನ್ನು ತೆಗೆದಿದ್ದೇ ಈ ಒಂದು ಕ್ಯಾಮೆರದಿಂದ, ಸ್ವಾಮಿ!
ಕನಸುಗಳಿಗೆ ಸರಪಳಿ ಬಿಗಿಯುವುದು ಸಾಧ್ಯವಿಲ್ಲ. ಜೇಬಿನ ದುಡ್ಡು ಬರುತ್ತದೆ, ಹೋಗುತ್ತದೆ. ಆದರೆ, ಪುಟ್ಟ ಎದೆಗೂಡೊಳಗೆ ನಾವು ಸದಾ ಕಾಯ್ದುಕೊಳ್ಳಬೇಕಾದ ಬೆಂಕಿಯಂಥ ಕನಸಿನ ಹಕ್ಕಿ ಗರಿಬಿಚ್ಚಿದರೆ ಎಷ್ಟು ಎತ್ತರಕ್ಕೂ ದೂರಕ್ಕೂ ಹಾರಿಕೊಂಡು ಹೋಗಬಲ್ಲುದು. ಬಾಲಿವುಡ್ ಮಂದಿಗೆ ತೋರಿಸೋದಕ್ಕೆ ಅಂತ ನಮ್ಮ ಸಿನೆಮದ ಪ್ರೀಮಿಯರ್ ಶೋ ಇಟ್ಟುಕೊಂಡಿದ್ದ ದಿನ, ಶೋ ಮುಗಿದ ಮೇಲೆ ಸಂತೃಪ್ತಿಯಿಂದ ತನ್ನ ಬದುಕಿನ ಶೋ ಕೂಡ ಮುಗಿಸಿ ಹೊರಟುಹೋದ ಶಫೀಕನ ಕಣ್ಣುಗಳಲ್ಲೂ ಇದ್ದದ್ದು ಅದೇ ಬೆಂಕಿಯೇ. ಕ್ಯಾನ್ಸರ್ ಬಂದು ಜೀವ ಹಿಂಡಿದರೂ ಸೂಪರ್‌ಮ್ಯಾನಾಗಿ ಸತ್ತೆನಲ್ಲ ಅನ್ನುವ, ನವಿಲಿನ ಗರಿಯಂಥ ಕನಸಿನ ಬೆಂಕಿ ಅದು. <


-ರೋಹಿತ್ ಚಕ್ರತೀರ್ಥ
rohithmath@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.