ಉಲ್ಫಾ ಉಗ್ರನ ಪಾಠ
ನಾಗತಿಹಳ್ಳಿ ಮೇಷ್ಟ್ರಿಗೆ ಅಮೆರಿಕವೆಂದರೆ, ನಾವು ನೀವೆಲ್ಲ ಬಾತ್ರೂಮಿಗೆ ಓಡಾಡುವಷ್ಟೇ ಸಲೀಸು! ಬೋರ್ಡೊಂದಿಲ್ಲ ಬಿಟ್ಟರೆ ವಿಮಾನಗಳೆಲ್ಲ ಬಿಎಂಟಿಸಿ ಬಸ್ಸಿನಂತೆ!...

ನಾಗತಿಹಳ್ಳಿ ಮೇಷ್ಟ್ರಿಗೆ ಅಮೆರಿಕವೆಂದರೆ, ನಾವು ನೀವೆಲ್ಲ ಬಾತ್ರೂಮಿಗೆ ಓಡಾಡುವಷ್ಟೇ ಸಲೀಸು! ಬೋರ್ಡೊಂದಿಲ್ಲ ಬಿಟ್ಟರೆ ವಿಮಾನಗಳೆಲ್ಲ ಬಿಎಂಟಿಸಿ ಬಸ್ಸಿನಂತೆ! ನಮ್ಮದು ಯಾವ ದೇಶಎಂಬ ಪ್ರಶ್ನೆಗೆ 'ಅಮೆರಿಕ' ಎಂದುತ್ತರಿಸಿದರೂ ಈ ಮೇಷ್ಟ್ರಿಂದ ಅರ್ಧ ಮಾರ್ಕ್ಸಿಗಂತೂ ಮೋಸವಿಲ್ಲ. ಹತ್ತಾರು ಗೆಳೆಯರುಳ್ಳ ಸ್ಟೇಟು, ಕೊಲಂಬಿಯಾ ವಿವಿಯಲ್ಲಿ ಮಗಳಿಗೆ ಸಿಕ್ಕಿರುವ ಸೀಟು... ಇವೆಲ್ಲ ಮೇಷ್ಟ್ರು ಹೇಳುವ ಇತ್ತೀಚಿನ ನೆಪಗಳು.
36 ದೇಶಗಳನ್ನು ಸುತ್ತಿರುವ ಮೇಷ್ಟ್ರ ಕಾಲಿನಲ್ಲಿ ಚಕ್ರವಿದೆ. 'ಸಾಹಿತಿಗಳೇ ಭಾರತ ಬಿಟ್ಟು ತೊಲಗಿ' ಎಂದು ಬಾವುಟಹಾರಿಸಿದರೂ ಎಲ್ಲ ದೇಶಗಳ ಮೇಲಿನ ಹತ್ತು ವರ್ಷದ ವೀಸಾ ಇದೆಯೆನ್ನುತ್ತಾ ಅದೇ ಮುಗುಳು ಬೀರುತ್ತಾರೆ. ಭಾರತದ ಉದ್ದಳತೆಯನ್ನು ಯಾವತ್ತೋ ಕಂಡಿದ್ದಾರೆ. ಚಲಿಸುವುದೂ ಒಂದು ಚಟ. ಬೇಂದ್ರೆ, ಕುವೆಂಪು, ಲಂಕೇಶರಂತೆ ಕುಳಿತಲ್ಲೇ ವಿಶ್ವಸೃಷ್ಟಿಸುವುದನ್ನು ಇವರು ಸುತಾರಾಂ ಒಪ್ಪುವುದಿಲ್ಲ. ಅದರಲ್ಲೂ ಚಿತ್ರತಂಡವನ್ನು ಶೂಟಿಂಗ್ಗಿಂತಲೂ ಪ್ರವಾಸದ ಹುಮ್ಮಸ್ಸಿನಲ್ಲೇ ಕರೆದೊಯ್ದು, ಅಲ್ಲಿನ ಸಂಸ್ಕೃತಿ ಯನ್ನು ಪರಿಚಯಿಸುವುದು ಇವರ ಮುಖ್ಯ ಪಾಠಗಳ ಲ್ಲೊಂದು.
ಇದು ಭಾರತದ್ದೇ ಕಥೆ. 'ಹೂಮಳೆ' ಶೂಟಿಂಗಿಗೆಂದು ನಟ ರಮೇಶ್ ಮತ್ತು ಇತರೆ ಕಲಾವಿದರೊಂದಿಗೆ ಮೇಷ್ಟ್ರು ಅಸ್ಸಾಂನ ಗುವಾಹಟಿಗೆ ಹೋಗಿದ್ದರು. ಗುವಾಹಟಿಯ ಹೊರವಲಯ ದಾಟಿದರೆ ಸಿಗುವುದು ಗೊಲಘಾಟ್. ಸಮೀಪದಲ್ಲೇ ಇದೆ, ಕಾಝಿರಂಗ್ ಅಭಯಾರಣ್ಯ. ಅಲ್ಲೊಂದು ವಿಶಿಷ್ಟ ಮನೆ. ಸುತ್ತ ಕಡಿದಾದ ಮರಗಳ ಕೋಟೆ. ಮೇಷ್ಟ್ರಿಗೆ ಆ ಮನೆ, ಶೂಟಿಂಗಿಗೆ ಹೇಳಿಮಾಡಿಸಿದಂತೆ ಕಾಣಿಸಿತು. ಆದರೆ, ಈ ಅಪರಿಚಿತರನ್ನು ಆ ಮನೆಯವರು ಒಪ್ಪಬೇಕಲ್ಲ! ಅಲ್ಲಿದ್ದವರು ಐದಾರು ಹುಡುಗರು. ತಾಸುಗಟ್ಟಲೆ ಕನ್ವಿನ್ಸಿಂಗ್ನ ಬಳಿಕ, ಕೆಲವು ಷರತ್ತುಗಳ ಮೇಲೆ ಅವರು ಮನೆ ಬಿಟ್ಟುಕೊಡಲು ಒಪ್ಪಿಕೊಂಡರು .ಒಂದೆ ರಡು ದಿನಗಳಲ್ಲಿ ಆ ಹುಡುಗರೆಲ್ಲ ಗೆಳೆಯರಾಗಿಬಿಟ್ಟರು.
ಒಂದು ಹಿಂದಿನ ದಿನ. ಆ ಹುಡುಗರಲ್ಲೊಬ್ಬ 'ನಾಳೆ ಸಂಜೆ ಆರು ಗಂಟೆ ನಂತರ ಬಂದು ಶೂಟಿಂಗ್ ಮಾಡಿ' ಎಂದು ಹೇಳಿ ಹೋದ. ಇವರಿಗೇನೋ ಕೆಲಸ ಇರಬಹುದು ಎಂದುಕೊಂಡು ಮೇಷ್ಟ್ರೂ 'ಆಯ್ತಪ್ಪ, ಹಾಗೆಯೇ ಆಗಲಿ' ಎಂದು ಅಸ್ತು ಸೂಚಿಸಿದರು. ಆದರೆ, ಯಾವುದೋ ಲಹರಿಯಲ್ಲಿ ಮರುದಿನ ಮಧ್ಯಾಹ್ನ ಎರಡು ಗಂಟೆಗೇ ಆ ಪ್ರದೇಶಕ್ಕೆ ತಲುಪಿತು ಮೇಷ್ಟ್ರ ತಂಡ. ಕೆಳಗಿನಿಂದ ನೋಡಿದಾಗ, ಆ ಮನೆಯ ಬಾಗಿಲು ಹಾಕಿತ್ತು. ರಮೇಶ್ ಚೇಷ್ಟೆ ಶುರುಮಾಡಿಕೊಂಡರು. 'ಮೇಷ್ಟ್ರೇ, ಮೆತ್ತಗೆ ಹೋಗಿ ಬಾಗಿಲು ತಟ್ಟೋಣ. ಅವರು ಓಪನ್ ಮಾಡಿದ ತಕ್ಷಣ ವ್ಹಾ ಎಂದು ಜೋರಾಗಿ ಕೂಗಿ ಹೆದರ್ಸೋಣ' ಅಂತ ಮಕ್ಕಳಾಟದ ಐಡಿಯಾ ಕೊಟ್ಟರು. ಆ ಹುಡುಗರ ಮೇಲಿದ್ದ ಸಲುಗೆ ಗಮನಿಸಿ, ಮೇಷ್ಟ್ರು ಒಪ್ಪಿಕೊಂಡರು. ಮಿಕ್ಕವರನ್ನೆಲ್ಲ ಕೆಳಗೇ ಇರಲು ಹೇಳಿ, ಕಳ್ಳಹೆಜ್ಜೆಯಲ್ಲಿ ಮೇಷ್ಟ್ರು ಮತ್ತು ರಮೇಶ್ ಮನೆಯ ಬಾಗಿಲತ್ತ ನಡೆಯತೊಡಗಿದರು. ಎರಡು ಬಾರಿ ಬಾಗಿಲಿನೆದೆ ತಟ್ಟಿದರು. ಬಾಗಿಲು ಮೆತ್ತನೆ, ತುಸುವಷ್ಟೇ ತೆರೆಯಿತು. ರಮೇಶ್ ಜೋರಾಗಿ 'ವ್ಹಾ' ಎಂದು ಕೂಗುತ್ತಿದ್ದಂತೆ, ಒಳಗಿದ್ದವ ಎ.ಕೆ. 47 ಗನ್ನಿನ ಕುದುರೆಯನ್ನು ಅರ್ಧದಷ್ಟು ಎಳೆದು ಢಂ ಅನ್ನಿಸಲು ಮುಂದಾದ. ಅಷ್ಟರಲ್ಲೇ ಒಳಗಿದ್ದ ಹುಡುಗರು ಟ್ರಂಕುಗಳಲ್ಲಿದ್ದ ಗನ್ನುಗಳನ್ನು ಹಿಡಿದು, ಫೈರ್ ಮಾಡಲು ಸಜ್ಜಾದರು.
ಆ ಹುಡುಗರು, ಉಲ್ಫಾ ಉಗ್ರರು! ಬಂದಷ್ಟು ಇನ್ಕಂ ಬರಲಿ ಎಂದು ಅವರ ಮನೆಯನ್ನೇ ಶೂಟಿಂಗಿಗೆ ಬಿಟ್ಟುಕೊಂಡಿದ್ದರು. ತಾವು ಉಗ್ರರೆಂದು ಗೊತ್ತಾದ ಮೇಲೆ, ಇನ್ನಿವರಿಗೆ ಜಾಗ ಕೊಡಬಾರದೆಂದು ಅವರಿಗೂ ಅನ್ನಿಸಿತು. ಅಲ್ಲದೆ, ಈ ಅಡಗುತಾಣದ ವಿಷಯ ಯಾರಿಗೂ ಹೇಳಬಾರದೆಂದು ಗದರಿಸಿ, ಇವರನ್ನು ಅಸ್ಸಾಮಿನ ಗಡಿ ದಾಟುವ ವರೆಗೂ ಫಾಲೋ ಮಾಡಿ, ಓಡಿಸಿದರಂತೆ!
ಹೋದ ಪ್ರದೇಶಗಳಲ್ಲಿ ಇಂಥ ಹಲವು ಸಂಕಷ್ಟಗಳ ಅನುಭವ ಮೇಷ್ಟ್ರಿಗಾಗಿದೆ. ಆದರೂ, ಸುತ್ತಾಟದ ಚಟಕ್ಕೆ ವಿರಾಮ ಹಾಕುವುದಿಲ್ಲ. ನಾಗತಿಹಳ್ಳಿ ಚಿಕ್ಕವರಿದ್ದಾಗ ಅವರ ಮೇಷ್ಟ್ರು, 'ಇವತ್ತು ಇನ್ಸ್ಪೆಕ್ಟ್ರು ಬರ್ತಾರೆ. ಎಲ್ರೂ ಡಾಕ್ಟ್ರು, ಎಂಜಿನಿಯರ್ ಆಗ್ಬೇಕು ಅಂತ ಹೇಳ್ಬೇಕು ಗೊತ್ತಾಯ್ತಾ' ಎಂದಿದ್ದರಂತೆ. ಬಂದ ಇನ್ಸ್ಪೆಕ್ಟರ್, 'ಮುಂದೆ ಏನಾ ಗ್ತಿಯೋ?' ಅಂತ ಕೇಳುತ್ತಾ ಬಂದರು. ಎಲ್ಲರ ಉತ್ತರವೂ ಅದೇ ಆಗಿತ್ತು. ಆದರೆ, ನಾಗತಿಹಳ್ಳಿ ಮಾತ್ರ, 'ಲಾರಿ ಡ್ರೈವರ್ ಆಗ್ಬೇಕು' ಅಂದಿದ್ದರು. ಇನ್ಸ್ಪೆಕ್ಟರ್ಗೆ ಸಿಟ್ಟು ನೆತ್ತಿಗೇರಿ,ಇವರ ಮೇಷ್ಟ್ರಿಗೂ ಬಯ್ದು ಹೊರಟು ಹೋದರಂತೆ. ಮೇಷ್ಟ್ರು, ನಾಗತಿಹಳ್ಳಿಯವರ ಕೈಗೆ ಕೋಲಿನ ರುಚಿ ತೋರಿಸಿದ್ದರಂತೆ.
ನಾಗಮಂಗಲ ತಾಲೂಕಿನ ನಾಗತಿಹಳ್ಳಿ, ಹೈವೇ ಪಕ್ಕದ ಊರು. ಅಲ್ಲಿ ಸದಾ ಲಾರಿಗಳು ಓಡಾಡುತ್ತಿರುತ್ತವೆ. ಆ ಲಾರಿ ಹತ್ತಿದರೆ ಇಡೀ ಜಗತ್ತು ನೋಡಬಹುದೆಂಬ ಕನಸನ್ನು ಮೇಷ್ಟ್ರು ಚಿಕ್ಕಂದಿನಲ್ಲೇ ಕಟ್ಟಿದ್ದರು. ನಾಗತಿಹಳ್ಳಿಯವನೇ ಒಬ್ಬ ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಂಡಿದ್ದ. ಹಿಟ್ಲರ್ ಪಡೆಯಲ್ಲಿ ಸೈನಿಕನಾಗಿದ್ದನಂತೆ. ಆ ಊರಿನವರಿಗೆಲ್ಲ ವಿಶ್ವ ಸುತ್ತುವ ಗುಣ ರಕ್ತದಲ್ಲೇ ಬಂದಿದೆ ಎನ್ನುತ್ತಾರೆ ಮೇಷ್ಟ್ರು.
ಮೇಷ್ಟ್ರು ಎಲ್ಲೂ ಮೂರು ದಿನದ ಮೇಲೆ ನಿಲ್ಲುವವರಲ್ಲ. ಹೋದ ಸ್ಥಳಗಳ ಮೇಲೆ ಒಂದೆರಡು ದಿನದಲ್ಲಿ ಶೂನ್ಯ ಕುತೂಹಲ ಆವರಿಸುತ್ತದೆ. ಬರೀ ಹುಡುಕಾಟ. ಯಾವ ಹುಡುಕಾಟ ಅಂತ ಅವರಿಗೂ ಗೊತ್ತಿಲ್ಲ. ಗುಡ್ಡದ ಕೆಳಗಿನ ಊರಿಗೆ ತಪಸ್ಸಿಗೆ ಕೂರ್ತೀನಿ ಎನ್ನುತ್ತಾ ಮರುದಿನವೇ ಅಲ್ಲಿಂದ ಓಡಿಬರುತ್ತಾರೆ.
ಮೇಷ್ಟ್ರು ಮೊನ್ನೆ ಅಮೆರಿಕದ ವಾಂಕೋವರ್ನಿಂದ ಅಲಾಸ್ಕಾಕ್ಕೆ ಹಡಗಿನಲ್ಲಿ ಹೊರಟರು. ಈ ಟೂರಿಗೆ ಮೈಸೂರಿನ ಫ್ರೆಂಡು, ನಿವೃತ್ತ ಡಿವೈಎಸ್ಪಿ ಜಕ್ಕೇನಹಳ್ಳಿ ರಂಗಸ್ವಾಮಿ ಬರ್ತೀನಿ ಅಂತಲೂ ಹೇಳಿದ್ದರು. ಮಗಳ ಅಡ್ಮಿಶನ್ಗಾಗಿ ಮುಂಚೆಯೇ ಅಮೆರಿಕ ತಲುಪಿದ್ದ ಮೇಷ್ಟ್ರು, ಗೆಳೆಯನಿಗಾಗಿ ಬಹಳ ಹೊತ್ತು ಕಾದರು. ವೀಸಾ ಸಿಗದ ಕಾರಣ ಜಕ್ಕೇನಹಳ್ಳಿ ಕೈಕೊಟ್ಟರು. ಆದರೆ, ಕ್ರೂಸ್ನವರಿಗೆ ಕೊಟ್ಟ ಟಿಕೆಟ್ ದುಡ್ಡನ್ನು ವಾಪಸ್ ಪಡೆಯಬೇಕಲ್ಲ. ವೀಸಾ ಸಿಗಲಿಲ್ಲ ಎಂದರೆ ಮುಜುಗರದ ಸಂಗತಿ. 'ಜಕ್ಕೇನಹಳ್ಳಿಗೆ ಹೃದಯಾಘಾತವಾಗಿದೆ' ಎಂದು ಹೇಳಿ ಪರಿಸ್ಥಿತಿ ನಿಭಾಯಿಸಿದರಂತೆ.
'ಸುತ್ತಾಡುವವರೆಲ್ಲ ತತ್ತ್ವಜ್ಞಾನಿಗಳಲ್ಲ. ಅಲೆಮಾರಿಗಳೂ ಆಗಿರುತ್ತಾರೆ. ಹಕ್ಕಿಪಿಕ್ಕಿಗಳೂ ಆಗಿರುತ್ತಾರೆ. ನಾನು ತತ್ತ್ವಜ್ಞಾನಿಯಲ್ಲ' ಎನ್ನುತ್ತಾ, 'ಹಾಗಾದರೆ ನಾನೇನು?' ಎಂಬ ಪ್ರಶ್ನೆಯಲ್ಲೇ ಮೇಷ್ಟ್ರು ತಮ್ಮನ್ನು ಹುಡುಕಾಡುತ್ತಾರೆ.
-ಕೀರ್ತಿ
kolgarkeerthi @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


