ಸಾಪ್ತಾಹಿಕಪ್ರಭ

ನಿತೀಶ್ ಕುಮಾರ್ ಮುಗಿದ ತೊಳಲಾಟ

Published On :

ಗುಜರಾತ್‌ನ ಗೋಧ್ರಾದಲ್ಲಿ, ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರಿದ್ದ ಸಬರಮತೀ ಎಕ್ಸ್‌ಪ್ರೆಸ್‌ನ ವಿಶೇಷ ಬೋಗಿಗೆ ಬೆಂಕಿ ಬಿದ್ದಿದ್ದು 2002ರ ಫೆ.27ರಂದು. ಆಗ ಬಿಜೆಪಿಯ ನರೇಂದ್ರ ಮೋದಿ, ಗುಜರಾತ್‌ನ ಸಿಎಂ. ಬಿಹಾರದ ಜೆಡಿಯು ನಾಯಕ ನಿತೀಶ್ ಕುಮಾರ್ ಒಂದು ಮಾತನ್ನೂ ಆಡಲಿಲ್ಲ. ಈ ಘಟನೆಯ ಅನಂತರ, ಅದಕ್ಕೆ ಪ್ರತೀಕಾರ ಎನ್ನುವ ರೂಪದಲ್ಲಿ ಗುಜರಾತ್‌ನ ಅನೇಕ ಜಿಲ್ಲೆಗಳಲ್ಲಿ ನರಮೇಧವೇ ನಡೆದು ಹೋಯಿತು. ಆ ಸಂದರ್ಭದಲ್ಲಿ ಮೋದಿ ವಿರುದ್ಧ ಹಲವು ಜನವರ್ಗಗಳಲ್ಲಿ ವಿಪರೀತ ಕೋಪವಿತ್ತು. ಮತಾಂಧ- ನರರಾಕ್ಷಸ ಇತ್ಯಾದಿ ಗುಣವಾಚಕಗಳ ಹೇರಳ ಬಳಕೆಯಾಗಿತ್ತು. ಆಗಲೂ ನಿತೀಶ್ ಕುಮಾರ್ ಒಂದೇ ಒಂದು ಮಾತನ್ನೂ ಆಡಿರಲಿಲ್ಲ.
ಆ ಘಟನೆಗಳಾದ ನಂತರದ ಎರಡು ದಶಕಗಳಲ್ಲಿ ಬೇಕಾದಷ್ಟು ಬದಲಾವಣೆಗಳಾದವು. ನಿತೀಶ್ ಬಿಹಾರಕ್ಕೆ ಹಿಂದಿರುಗಿ, ಲಾಲೂ ಪ್ರಸಾದ್ ಯಾದವ್‌ರನ್ನು ಸೋಲಿಸಿ, ಬಿಜೆಪಿಯ ಜತೆ ಸೇರಿ, ಸಿಎಂ ಆದರು. ಬಿಜೆಪಿ- ಜೆಡಿಯುಗಳೆರಡೂ ರಾಷ್ಟ್ರೀಯ ಜನತಾಂತ್ರಿಕ ಕೂಟದ ಸಂಗಾತಿಗಳಾಗಿ 17 ವರ್ಷ ಕೆಲಸ ಮಾಡಿವೆ.
ಈ ಅವಧಿಯಲ್ಲಿ ನಿತೀಶ್ ಪ್ರಯತ್ನದಿಂದ, ಬಿಹಾರದಲ್ಲಿ ಲಾಲೂಪ್ರಸಾದ ಯಾದವ್ ನಗಣ್ಯರಾದರೆ, ಕಾಂಗ್ರೆಸ್‌ಗೆ ಹೇಳಲು ಹೆಸರೇ ಇಲ್ಲದಂತಾಯಿತು. ಕೇಂದ್ರದಲ್ಲಿ ರೇಲ್ವೆ ಮಂತ್ರಿಯಾಗಿ ಒಳ್ಳೆಯ ಕೆಲಸವನ್ನೇ ಮಾಡಿದ್ದ ನಿತೀಶ್, 10 ಬಿಹಾರದ ಸಿಎಂ ಆಗಿ, ಆ ಬಡರಾಜ್ಯದ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ರೀತಿಯಲ್ಲಿ ಪವಾಡ ಸದೃಶ ಬದಲಾವಣೆಯನ್ನು ಸಾಧಿಸಿದ್ದು ನಿಜ.
ಆ ಪವಾಡ ಸದೃಶ ಮೌನ ಕ್ರಾಂತಿಯ ಪ್ರಧಾನ ಫಲಾನುಭವಿಗಳು ಬಿಹಾರದ ಅತ್ಯಂತ ಹಿಂದುಳಿದ ಜಾತಿ ಪಂಗಡಗಳ ಕಡುಬಡವರು. ಆ ಜನವರ್ಗವೇ ಈಗ ಬಿಹಾರದಲ್ಲಿ ನಿತೀಶ್‌ಗೆ ರಾಜಕೀಯವಾಗಿ ರಕ್ಷಾ ಕವಚದಂತೆ ನಿಂತಿರುವುದು. ಸ್ಥಳೀಯ ಬಿಜೆಪಿ ಮುಖಂಡರ ಜತೆ, ಮುಖ್ಯಮಂತ್ರಿಯ ಸಂಬಂಧ ಅತಿ ಮಧುರ. ಆದರೆ ನರೇಂದ್ರ ಮೋದಿ ಅವರನ್ನು ಹೊಗಳುವ ಸಂಘದ ನಾಯಕರ ವಿಚಾರದಲ್ಲಿ ನಿತೀಶ್ ತಮ್ಮ ಮನಸ್ಸಿನ ಅತೃಪ್ತಿಯನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ.
ಇದ್ದಕ್ಕಿದ್ದಂತೆ, 2012ರ ಜೂನ್‌ನಲ್ಲಿ ನಿತೀಶ್‌ಗೆ ರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡುವ, ದೆಹಲಿಯ ಗದ್ದುಗೆಯ ಮೇಲೆ ಕೂಡುವ ಕನಸು ಬಿದ್ದಿರಬೇಕು. ಆ ಕಾಲದಲ್ಲೇ ಅವರು ಯಾವುದೇ ಪ್ರಚೋದನೆ ಇಲ್ಲದೇ, ಅವರಿಗೆ ರಾಷ್ಟ್ರೀಯ ರಾಜಕೀಯದ ಮಹತ್ವಾಕಾಂಕ್ಷೆ ಏನೂ ಇಲ್ಲವೆಂದೂ, ಪ್ರಧಾನಿ ಪೀಠದ ಕನಸೂ ಬಿದ್ದಿಲ್ಲವೆಂದೂ ಪ್ರಕಟಿಸಿದರು. ಅದರ ಅವಶ್ಯಕತೆಯೇ ಇರಲಿಲ್ಲ.
ಇನ್ನೊಮ್ಮೆ ಈ ವರ್ಷದ ಮಾರ್ಚ್‌ನಲ್ಲಿ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ ಪ್ರಧಾನಿ ಪೀಠದ ಅಭ್ಯರ್ಥಿಗೆ ಕೋಮುವಾರು ಹಿಂಸಾಚಾರದ ಕಳಂಕ ಇರಬಾರದು ಎಂದು ಘೋಷಿಸಿದ್ದರು. ಇದರ ಅರ್ಥ ಸ್ಪಷ್ಟ. ಮೋದಿಗೆ ಬಿಜೆಪಿ ಪಟ್ಟ ಕಟ್ಟಲು ಹೊರಟರೆ ತಮ್ಮ ಆತ್ಮಸಾಕ್ಷಿ ಕೂಟದಲ್ಲಿ ಮುಂದುವರಿಯಲು ಬಿಡುವುದಿಲ್ಲ ಎಂದೂ ಅವರು ಹೇಳಿದ್ದರು. ನಿತೀಶ್ ರಾಜಕೀಯವನ್ನು ಪ್ರವೇಶಿಸಿದ್ದೇ ಕಾಂಗ್ರೆಸ್ ವಿರೋಧಿಯಾಗಿ. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲೇ ಅವರಿಗೆ ಲೋಕನಾಯಕ ಜಯಪ್ರಕಾಶ ನಾರಾಯಣರಿಂದಲೇ ರಾಜಕೀಯ ದೀಕ್ಷೆ ಸಿಕ್ಕಿತ್ತು. ಕರ್ಪೂರಿ ಠಾಕೂರ್, ಲಾಲೂ ಪ್ರಸಾದ್ ಯಾದವ್, ಜಾರ್ಜ್ ಫರ್ನಾಂಡಿಸ್ ಅವರೆಲ್ಲರೂ ನಿತೀಶ್ ಸಂಗಾತಿಗಳೇ. ಆದರೂ ನಿತೀಶ್ ಆರಾಧಿಸುತ್ತಿದ್ದದ್ದು ರಾಮಮನೋಹರ ಲೋಹಿಯಾ ಅವರನ್ನೇ.
ಬಿಹಾರದಲ್ಲಿ ಕಾಂಗ್ರೆಸ್ ಧೂಳೀಪಟವಾಗಿ, ಜನತಾ ಪರಿವಾರದ ಸರ್ಕಾರ, ಲಾಲೂ ಪ್ರಸಾದ್ ಯಾದವ್‌ರ ನೇತೃತ್ವದಲ್ಲಿ ಬಂದಾಗ, ಆ ಸರ್ಕಾರ ಹತ್ತೇ ವರ್ಷಗಳಲ್ಲಿ ಕೆಟ್ಟ ಹೆಸರನ್ನು ಪಡೆಯುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆ ಸರ್ಕಾರವನ್ನು ವಿರೋಧಿಸಲೆಂದೇ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್ ಸಮತಾ ಪಕ್ಷ ಸ್ಥಾಪಿಸಿದರು. ಮೊದಲ ಪ್ರಯತ್ನದಲ್ಲಿ ಸೋತರು. ಆಗಲೇ ಅವರಿಗೆ ಅರಿವಾಗಿದ್ದು ಲಾಲೂ ಪ್ರಸಾದ್ ಯಾದವರ ಸೇನೆ ಸೋಲಿಸಲು, ಬಿಜೆಪಿಯ ನೆರವು ಪಡೆಯಲೇಬೇಕು ಎನ್ನುವುದು. ಆ ಒಕ್ಕೂಟವೂ ರಚನೆಯಾಗಿ ಬಿಹಾರದಲ್ಲಿ ಸಮತಾ- ಬಿಜೆಪಿ ಸರ್ಕಾರ ಸ್ಥಾಪನೆಯಾಗಿ, ನಿತೀಶ್ ಸಿಎಂ ಆದರು. ಮುಂದೆ ಸಮತಾ ಪಕ್ಷವೇ ಸಂಯುಕ್ತ ಜನತಾ ದಳವಾಗಿ ಪರಿವರ್ತನೆಯಾಗಿದ್ದು.
ಕಾಲಚಕ್ರ ಉರುಳಿದಂತೆ ನಿತೀಶ್ ಅವರ ವೈಯಕ್ತಿಕ ತೊಳಲಾಟ (ಬಿಜೆಪಿ ಕೂಟದಲ್ಲಿ ತಮಗೆ ಮೊದಲ ಸ್ಥಾನ ಸಿಗುವುದಿಲ್ಲ ಎನ್ನುವುದರ ಅರಿವು) ಹಾಗೂ ಸೈದ್ಧಾಂತಿಕ ತೊಳಲಾಟ (ಬಿಜೆಪಿಯಂಥ ಬಲಪಂಥೀಯ ಪಕ್ಷದ ಜತೆ ಸೇರಿಕೊಂಡಿರುವುದು ತಪ್ಪು ಎನ್ನುವುದು) ಹೆಚ್ಚಾಗುತ್ತಲೇ ಬಂದಿತ್ತು.
ಆದರೂ ಮೋದಿಯವರನ್ನು ಬಿಹಾರದಿಂದ ದೂರವಿಟ್ಟು, ಬಿಹಾರದ ಬಿಜೆಪಿ ನಾಯಕರ ಜತೆ ಅತ್ಯುತ್ತಮ ವೈಯಕ್ತಿಕ ಸಂಬಂಧ ಬೆಳೆಸಿಕೊಂಡು, ಸಮಗ್ರ ಬಿಹಾರ ರಾಜ್ಯದ ಅಭ್ಯುದಯದಲ್ಲೇ ವೈಯಕ್ತಿಕ ಪ್ರಗತಿ ಹಾಗೂ ಸಾರ್ಥಕತೆಯನ್ನು ಕಂಡುಕೊಂಡಿದ್ದ ನಿತೀಶ್‌ಗೆ ಬಿಜೆಪಿಯ ಬಂಧನದಿಂದ ಬಿಡಿಸಿಕೊಳ್ಳುವ ಬಯಕೆ ತೀವ್ರವಾಗಿದ್ದು ಈ ವರ್ಷದ ಮೇನಲ್ಲಿ.
ಬಿಜೆಪಿಯಲ್ಲಿನ ಬಹುಮಂದಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್ ಸಾಧನೆಯ ಅನಂತರ (ವಿಧಾನಸಭೆ ಚುನಾವಣೆ) ಅವರೇ ಪಕ್ಷದ ರಾಷ್ಟ್ರೀಯ ನಾಯಕರೆಂದು ಒಪ್ಪಿದ್ದು ಸ್ಪಷ್ಟವಾಗಿತ್ತು. ಆಡ್ವಾಣಿಯಂಥ ಹಿರಿಯರ ವಿರೋಧವಿದ್ದರೂ ನರೇಂದ್ರ ಮೋದಿ ಪಕ್ಷದ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ನಿತೀಶ್‌ರ ವೈಯಕ್ತಿಕ, ಸಂಯುಕ್ತ ಜನತಾದಳದ ಸೈದ್ಧಾಂತಿಕ ತೊಳಲಾಟವನ್ನು ಅಂತ್ಯಗೊಳಿಸುವುದಕ್ಕೆ ಒಂದು ನೆಪದಂತೆ ಸಿಕ್ಕಿತ್ತು.
ಆ ವೇಳೆಗಾಗಲೇ ಕಾಂಗ್ರೆಸ್ ಪರವಾಗಿ, ಪ್ರಧಾನಿ ಮನಮೋಹನ ಸಿಂಗ್ ಅವರೇ ನಿತೀಶ್‌ಗೆ ಸೆಕ್ಯುಲರ್ ಲೀಡರ್ ಎನ್ನುವ ಅರ್ಹತಾ ಪತ್ರವನ್ನೂ ನೀಡಿದ್ದರು. ಕೆಲವು ಸಮಾಜವಾದಿ ಗೆಳೆಯರು, ದಶಕಗಳ ಹಿಂದೆ ದೇಶದ ಸಮಾಜವಾದಿ ಚಿಂತಕರಲ್ಲಿ ಬೌದ್ಧಿಕ ನಾಯಕತ್ವವನ್ನು ಪ್ರದರ್ಶಿಸಿದ್ದ ಅಶೋಕ ಮೆಹತಾ ಅವರ ಕಾರ್ಯಸೂಚಿಯ ವಿವರಗಳನ್ನು ಮನದಟ್ಟು ಮಾಡಿಕೊಟ್ಟರು. ಸ್ವಂತ ಹಿತ, ಸೈದ್ಧಾಂತಿಕ ಶುಭ್ರತೆಯ ರಕ್ಷಣೆಗೆ ಅಶೋಕ ಮೆಹತಾ ರೂಪಿಸಿಕೊಂಡಿದ್ದ ಸೂತ್ರವನ್ನು ಬಳಸಿಕೊಂಡು ಭವಿಷ್ಯದಲ್ಲಿ ಕಾಂಗ್ರೆಸ್‌ನ ಸಂಗಾತಿಯಾಗುವ ನಿರ್ಧಾರವನ್ನು ಈಗ ನಿತೀಶ್ ಗಟ್ಟಿ ಮಾಡಿದಂತಿದೆ. ಮುಂದಿನ ರಾಜಕೀಯದಲ್ಲಿ ಕಾಂಗ್ರೆಸ್ಸಿಗೆ ನಿತೀಶ್ ಬೇಕು, ಬಿಹಾರದಲ್ಲಿ ಲಾಲೂ ಸೇನೆಯನ್ನು ಎದುರಿಸಲು ಕಾಂಗ್ರೆಸ್ ನೆರವು ನಿತೀಶ್‌ಗೆ ಬೇಕಾಗಬಹುದು. ಅದನ್ನು ನಿತೀಶ್ ಒಪ್ಪಿದಂತಿದೆ. ಈ ನಿರ್ಧಾರವೇ ಗಟ್ಟಿಯಾದರೆ, ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿಯೂ ಹೊರಹೊಮ್ಮಬಹುದು.
ನಿತೀಶ್ ಓದಿದ್ದು ಎಂಜಿನಿಯರಿಂಗ್. ಸ್ವಲ್ಪ ಕಾಲ ಬಿಹಾರ ವಿದ್ಯುತ್ ಮಂಡಳಿಯಲ್ಲಿ ನೌಕರಿ ಮಾಡಿದ್ದರು. ಅನಂತರ ಲೋಕನಾಯಕ ಜಯಪ್ರಕಾಶ ನಾರಾಯಣರ ಆಕರ್ಷಣೆಗೊಳಗಾದರು. ಅವರ ಪತ್ನಿ ಮಂಜುಕುಮಾರಿ ಸಿನ್ಹಾ ಅಧ್ಯಾಪಕಿಯಾಗಿದ್ದರು. ಅವರೀಗ ಇಲ್ಲ. ತೀರಿಕೊಂಡಿದ್ದಾರೆ. ದಂಪತಿಗೆ ಒಬ್ಬನೇ ಮಗ. ಪಟ್ನಾದಲ್ಲೇ ಉದ್ಯೋಗದಲ್ಲಿದ್ದಾರೆ. ನಿತೀಶ್ ಈಗ ಅರವತ್ತರ ಆಜೂಬಾಜೂ ವಯೋವಾನವರು. ರಾಜಕೀಯವಾಗಿ ರಾಷ್ಟ್ರೀಯ ಚಟುವಟಿಕೆಗೆ ಪಕ್ವವಾದ ವಯಸ್ಸು ಅದು. ವೈಯಕ್ತಿಕವಾಗಿ ಅವರು ಪಟನಾದಲ್ಲೇ ಇರಲಿ, ದೆಹಲಿಗೇ ಹೋಗಲಿ ಒಂದು ಜನಪರ ಶಕ್ತಿಯ ಸಂಕೇತವಾಗಿಯೇ ಇರುತ್ತಾರೆ. ಬಿಹಾರದಲ್ಲಿ ಲಾಲೂ, ದೆಹಲಿಯಲ್ಲಿ ಬಿಜೆಪಿಯನ್ನೂ ನಿಭಾಯಿಸುವ ಶಕ್ತಿಯೂ ಅವರಿಗಿದೆ. 

-ಸತ್ಯ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.