ಸಾಪ್ತಾಹಿಕಪ್ರಭ

ಕವಿ(ತೆ)ಯ ಕತೆ

ಅದು ಕನ್ನಡ ಸಾಹಿತ್ಯದಲ್ಲಿ ನವ್ಯ ಚಳುವಳಿಯ ಉಚ್ಛ್ರಾಯ ಕಾಲ. ಲಂಕೇಶ್ ನನಗೆ ಮೇಸ್ಟರಾಗಿದ್ದರು. ವೈಯೆನ್ಕೆ ಆಪ್ತರಾಗಿದ್ದರು. ಆ ಇಬ್ಬರ ಗಾಢ ಪ್ರಭಾವದಲ್ಲಿ...

ಕವಿ(ತೆ)ಯ ಕತೆ
Published On :

1965. ನನಗಾಗ ಹತ್ತೊಂಬತ್ತು ವರ್ಷ ವಯಸ್ಸು. ಟೀನೇಜಿನ ಕೊನೆಯ ಸ್ಟೇಜು. ಬೆಂಗಳೂರಿನ ಸರ್ಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ (ಗ್ಯಾಸ್ ಕಾಲೇಜ್) ಬಿಎ ಎರಡನೆಯ ವರ್ಷ ಮುಗಿಸಿ ಅಂತಿಮ ವರ್ಷಕ್ಕೆ ಕಾಲಿಡುವವನಿದ್ದೆ. ಬೇಸಿಗೆ ರಜಕ್ಕೆಂದು ನನ್ನೂರಾದ ಚಿಂತಾಮಣಿಗೆ ಬಂದಿದ್ದೆ.
     ಅದು ಕನ್ನಡ ಸಾಹಿತ್ಯದಲ್ಲಿ ನವ್ಯ ಚಳುವಳಿಯ ಉಚ್ಛ್ರಾಯ ಕಾಲ. ಲಂಕೇಶ್ ನನಗೆ ಮೇಸ್ಟರಾಗಿದ್ದರು. ವೈಯೆನ್ಕೆ ಆಪ್ತರಾಗಿದ್ದರು. ಆ ಇಬ್ಬರ ಗಾಢ ಪ್ರಭಾವದಲ್ಲಿ ನಾನು ರೂಪುಗೊಳ್ಳುತ್ತಿದ್ದೆ. ಆ ವೇಳೆಗೆ ನನ್ನ ಮೊದಲ ಕಥೆ 'ಚಂದನದ ಗೊಂಬೆ' ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕೆಲವು ಕವನಗಳು ಗೋಕುಲ, ಲಹರಿ ಮತ್ತು ಸಂಕ್ರಮಣ ಮುಂತಾದ ಪತ್ರಿಕೆಗಳಲ್ಲಿ ಅಚ್ಚಾಗಿದ್ದವು. ಹೀಗಾಗಿ ಸಾಹಿತಿಯ ಪ್ರಭಾವಳಿಯನ್ನು ನನ್ನ ತಲೆಯ ಸುತ್ತ ನಾನೇ ನಿರ್ಮಿಸಿಕೊಂಡು, ಹೊತ್ತು ತಿರುಗುತ್ತಿದ್ದೆ. ನವ್ಯ ಚಳುವಳಿಯ ಎಲ್ಲ ಒಲವು ನಿಲುವುಗಳಿಗೂ ಆಗಿನ ನನ್ನಂಥ ಮರಿ ಸಾಹಿತಿಗಳು ಅಂಧಶ್ರದ್ಧೆಯಿಂದ ಬದ್ಧರಾಗಿದ್ದೆವು. ಹೀಗಾಗಿ, ಇದೊಂದು ದೇವರಿಲ್ಲದ ಲೋಕ, ಇಲ್ಲಿ ಮನುಷ್ಯ ಅನಾಥ, ಒಬ್ಬಂಟಿ, ಅವನ ಬಾಳು ತನ್ನಷ್ಟಕ್ಕೇ ನಿರರ್ಥಕ, ತಾನು ಕೊಟ್ಟುಕೊಂಡಷ್ಟೇ ಅರ್ಥ, ಕಂಡುಕೊಂಡದ್ದೇ ಗುರಿ, ಪ್ರೀತಿ ಪ್ರೇಮ ಇತ್ಯಾದಿಗಳಿಗೆ ಸ್ವಾರ್ಥವೇ ಮೂಲ, ಭಾವಕ್ಕಿಂತ ಬುದ್ಧಿ ಪ್ರಧಾನ- ಇಂಥ ಸಿದ್ಧಾಂತಗಳನ್ನು ನಾವು ಇಂಗ್ಲಿಷ್ ಪುಸ್ತಕಗಳಿಂದ ಅನಾಮತ್ತಾಗಿ ಎತ್ತಿಕೊಂಡು, ಸ್ವಾನುಭವದ ನಿಕಷಕ್ಕೆ ಒಡ್ಡದೆ, ತರಾತುರಿಯಲ್ಲಿ ನಮ್ಮ ಜೀವನದೃಷ್ಟಿ, ಆಲೋಚನೆ, ನಡೆ ನುಡಿಗಳ ಮೇಲೆ ಆವಾಹಿಸಿಕೊಂಡಿದ್ದ, ಆರೋಪಿಸಿಕೊಂಡಿದ್ದ ಕಾಲ ಅದಾಗಿತ್ತು.
      ನಮ್ಮ ಮನೆಯ ಎದುರುಗಡೆಯ ಮನೆಗೆ ಒಂದು ಹೊಸ ಬ್ರಾಹ್ಮಣ ಕುಟುಂಬ ಬಾಡಿಗೆಗೆ ಬಂದಿತ್ತು. ಅದರಲ್ಲಿ ಒಬ್ಬ ಚೆಲುವೆಯಾದ ನವ ತರುಣಿಯೂ ಇದ್ದಳು. ಅವಳಿಗೆ ಒಬ್ಬ ಅಣ್ಣ ಮತ್ತು ಹಲವು ತಂಗಿಯರಿದ್ದರು. ಅವಳು ಪಿಯುಸಿಯಲ್ಲಿ ಡುಮ್ಕೀ ಹೊಡೆದು ಮನೆಯಲ್ಲೇ ಉಳಿದಿದ್ದಳು. ಹೀಗಾಗಿ ದಿನನಿತ್ಯ ಹಲವು ಬಾರಿ ತನ್ನ ಮನೆಯ ಮುಂಬಾಗಿಲಿಗೆ ಬಂದು ನಿಲ್ಲುತ್ತಿದ್ದಳು ಅಥವಾ ಬಾವಿಯಕಟ್ಟೆಯ ಮೇಲೆ ಕೂರುತ್ತಿದ್ದಳು. ನಾನು ನನ್ನ ಮನೆಯ ವೆರಾಂಡದಲ್ಲಿ ಕೂತು, ಓದುವ ಸೋಗಿನಲ್ಲಿ, ಅವಳ ಮೇಲೆ ಕಣ್ಣಾಡಿಸುತ್ತಿದ್ದೆ. ಇದು ನನ್ನ ತಂದೆಯ ಗಮನಕ್ಕೆ ಬಂತು. ಅವರು ಒಂದು ದಿನ ನನಗೆ ವ್ಯಂಗ್ಯವಾಗಿ ಹೀಗೆಂದರು, 'ಏನು, ಆ ಹುಡುಗಿಯ ಮೇಲೆ ತಮಗೆ ಮನಸ್ಸಾದಂತಿದೆಯಲ್ಲ. ಅವಳ ತಂದೆಯ ಹತ್ರ ಮಾತಾಡಲಾ?' ನಾನು ಶಾಂತಚಿತ್ತದಿಂದ ಹೀಗೆಂದೆ, 'ಅದೇ ಉದ್ದೇಶ ಇರಬೇಕೂಂತ ನಿಯಮವಿದೆಯ? ಇದು ನನ್ನ ಒಂದು ಕಥೆಗೆ ಅಥವಾ ಕವನಕ್ಕೆ ಕಾರಣವಾದರೂ ಆಗಬಹುದಲ್ಲ?' 'ಓಹೋ, ಹಾಗೋ' ಎಂದು ನನ್ನ ತಂದೆ ಒಂದು ತಿರಸ್ಕಾರದ ನಗೆ ನಕ್ಕು ಹೊರಟುಹೋದರು.
      ನನ್ನ ಮಾತನ್ನು ಸಾಬೀತು ಪಡಿಸಲೋ ಎಂಬಂತೆ, ಬೆಂಗಳೂರಿಗೆ ಹಿಂತಿರುಗಿದ ಕೂಡಲೇ, 'ವಾಸಂತಿ'  ಮತ್ತು 'ಪ್ರೇಮ ಗೀಮ' ಎಂಬ ಎರಡು ಕವನಗಳನ್ನು ಬರೆದೆ. ಅವು 'ಗೋಕುಲ'ದಲ್ಲಿ ಪ್ರಕಟವೂ ಆದವು. ಹಾಗೆಯೇ, 'ಪ್ರೇಮಿಸಲಾರೆ' ಎಂಬ ಶೀರ್ಷಿಕೆಯಲ್ಲಿ ಒಂದು ಕಥೆ ಸಹ ಬರೆದೆ. ಅದನ್ನು ಪ್ರಜಾವಾಣಿ  ದೀಪಾವಳಿ ಕಥಾಸ್ಪರ್ಧೆಗೆ ರವಾನಿಸಿ, ಮರೆತುಬಿಟ್ಟೆ.
      ಆಗ್ಗೆ ನಾನು ಬೆಂಗಳೂರಲ್ಲಿ ಬಿಡಾರ ಹೂಡಿದ್ದದ್ದು ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿದ್ದ(ಈಗಲೂ ಇರುವ) ಬಬ್ಬೂರುಕಮ್ಮೆ ವಿದ್ಯಾರ್ಥಿ ನಿಲಯದಲ್ಲಿ. ಟಿ.ಎನ್.ಸೀತಾರಾಮ್, ಸಮುದಾಯದ ಪ್ರಸನ್ನ, ಎಂ.ಎಸ್.ನರಸಿಂಹಮೂರ್ತಿ, ಎಸ್.ಎನ್.ಶ್ರೀಧರ್ ಮುಂತಾದ(ಮುಂದೆ ಖ್ಯಾತನಾಮರಾದ) ಹಲವರು ಆಗ ಅದೇ ಹಾಸ್ಟೆಲಿನಲ್ಲಿದ್ದರು. ಆದರೆ ನನಗೆ ಪರಿಚಿತರಾಗಿರಲಿಲ್ಲ.
      ಸೆಪ್ಟೆಂಬರ್ ತಿಂಗಳ ಒಂದು ಭಾನುವಾರ ಅಂತ ಕಾಣುತ್ತೆ. ಬೆಳಿಗ್ಗೆ ನಾನಿನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ಸೀತಾರಾಮನ ನೇತೃತ್ವದಲ್ಲಿ ಒಂದಷ್ಟು ಮಂದಿ ಹಾಸ್ಟೆಲಿನ ವಿದ್ಯಾರ್ಥಿಗಳು ನನ್ನ ಕೊಠಡಿಯ ಬಳಿ ಬಂದು, ಧಡಧಡ ಬಾಗಿಲು ತಟ್ಟಿ, ನನ್ನನ್ನು ಹಾಗೂ ನನ್ನ ಸಹವಾಸಿಗಳನ್ನು ಸಿಹಿನಿದ್ದೆಯಿಂದ ಎಬ್ಬಿಸಿದರು. ಬಾಗಿಲು ತೆಗೆದ ಕೂಡಲೇ ಎಲ್ಲರೂ ಒಳಕ್ಕೆ ನುಗ್ಗಿಬಂದು, ನನ್ನ ಕೈಕುಲುಕಿ ಅಭಿನಂದನೆ ತಿಳಿಸಿದರು. ನಾನು ಏಕೆಂದು ತಿಳಿಯದೆ ಕಕ್ಕಾವಿಕ್ಕಿಯಾದೆ. ಸೀತಾರಾಮ ಹೇಳಿದ, 'ನಿಮ್ಮ ಕಥೆಗೆ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಮೆಚ್ಚಿಗೆಯ ಬಹುಮಾನ ಬಂದಿದೆ ಕಣ್ರೀ.. ಇಂದಿನ ಪೇಪರಿನಲ್ಲಿ ನಿಮ್ಮ ಹೆಸರು, ಹಾಸ್ಟೆಲಿನ ವಿಳಾಸ ಎಲ್ಲಾ ಪ್ರಕಟವಾಗಿದೆ. ನಮಗೆಲ್ಲ ತುಂಬ ಸಂತೋಷವಾಗಿದೆ. ನಿಮ್ಮಂಥ ಒಬ್ಬ ಉದಯೋನ್ಮುಖ ಸಾಹಿತಿ ನಮ್ಮ ಹಾಸ್ಟೆಲಿನಲ್ಲಿ ನಮ್ಮೊಂದಿಗಿರುವುದು ನಮಗೆಲ್ಲ ತುಂಬ ಹೆಮ್ಮೆಯ ವಿಷಯ'. ನಾನು ಖುಷಿಯಿಂದ, 'ಹೌದಾ..' ಎಂದು ಬೀಗಿದೆ (ಸದ್ಯ ಅವರು ಹಾರ ತುರಾಯಿ ತಂದಿರಲಿಲ್ಲ). ನಂತರ ಎಲ್ಲರೂ ಒಟ್ಟಿಗೆ ಹೋಟೆಲಿಗೆ ಹೋಗಿ ಎಸ್ಕೇಸಿ ಪಾರ್ಟಿ ಮಾಡಿ ಬಂದೆವು. ಅಲ್ಲಿಂದಾಚೆ ನಮ್ಮ ಹಾಸ್ಟೆಲಿನಲ್ಲಿ ನಾನು ಸಾಹಿತ್ಯದ ಒಬ್ಬ ಗಂಭೀರ ವಿದ್ಯಾರ್ಥಿಯಾಗಿ, ಕವಿ ಕಥೆಗಾರನಾಗಿ ಎಲ್ಲರಿಂದಲೂ ಗುರುತಿಸಲ್ಪಟ್ಟೆ. ಸೀತಾರಾಮ, ಪ್ರಸನ್ನ, ನರಸಿಂಹಮೂರ್ತಿ ಮತ್ತು ಶ್ರೀಧರ ನನ್ನ ಆಪ್ತ ಗೆಳೆಯರಾದರು. ಆ ಗೆಳೆತನ ಇಂದಿಗೂ ಹಸಿರಾಗಿ ಉಳಿದೇ ಇದೆ.
     'ವಾಸಂತಿ' ಮತ್ತು 'ಪ್ರೇಮ ಗೀಮ' ಕವನಗಳು 1971ರಲ್ಲಿ ಹೊರಬಂದ ನನ್ನ ಮೊದಲ ಕವನ ಸಂಕಲನ 'ಗೋಪಿ ಮತ್ತು ಗಾಂಡಲೀನ'ದಲ್ಲಿ ಸೇರಿವೆ. ಆದರೆ 1980ರಲ್ಲಿ ಪ್ರಕಟವಾದ ನನ್ನ ಮೊದಲ ಕಥಾ ಸಂಕಲನ 'ಜೆಸ್ಚರ್‌'ನಲ್ಲಿ 'ಪ್ರೇಮಿಸಲಾರೆ' ಕಥೆ ಎಡೆ ಪಡೆಯಲಿಲ್ಲ. ಎಳಸು, ಅಪ್ರಬುದ್ಧ ಅನ್ನಿಸಿ ಕೈಬಿಟ್ಟಿದ್ದೆ. ಆದರೆ ಅದೂ ಸಹ ನನ್ನ ಬೆಳವಣಿಗೆಯ ಒಂದು ಸಹಜ ಹಂತ ಎಂಬ ವಿನಯ ಮತ್ತು ನಿರ್ಭಿಢೆಯಿಂದ  ಆ ಕಥೆಯನ್ನೂ ಸಹ ಇಲ್ಲಿ ದಾಖಲಿಸಿದ್ದೇನೆ. (ಈ ಕಥೆ ಮುಂದಿನ ಸಂಚಿಕೆಗಳಲ್ಲಿ ಪ್ರಕಟವಾಗಲಿದೆ).

- ಬಿ.ಆರ್.ಲಕ್ಷ್ಮಣರಾವ್
lakshmanaraobr@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.