ಸಾಪ್ತಾಹಿಕಪ್ರಭ

ಮೌನ ಮುರಿಯಬೇಕು ಎಂ.ಎಸ್. ಧೋನಿ

Published On :

ಈಗ ಸುದ್ದಿಯ ಸುಳಿಯಲ್ಲಿ ಸಿಕ್ಕಿರುವ ಕ್ರಿಕೆಟ್ ಹೀರೋ ಮಹೇಂದ್ರ ಸಿಂಗ್ ಧೋನಿಗೆ ಸಿಕ್ಕಿರುವಷ್ಟು ಪ್ರಚಾರ, ಅದಕ್ಕೆ ಮುಂಚೆ ಅವರು ಸಾಧಿಸಿರುವ ವಿಕ್ರಮಗಳನ್ನು ಒಂದೇ ಕಡೆ ದಾಖಲಿಸಿದರೆ, ಅದೊಂದು ಬೃಹತ್ ಆಕರ ಗ್ರಂಥವೇ ಆಗಬಹುದು.
ಇದೆಲ್ಲವನ್ನು ಧೋನಿ ಸಾಧಿಸಿರುವುದು ಅವರ 32ನೇ ವರ್ಷದ ವೇಳೆಗೇ. ಜೀವನದಲ್ಲಿ, ಕ್ರಿಕೆಟ್ ಪ್ರಪಂಚದಲ್ಲಿ, ಇತ್ತೀಚಿನ ವರದಿಗಳನ್ನೇ ಗಮನಿಸಿದರೂ ಕ್ರೀಡಾ, ವಾಣಿಜ್ಯ ರಂಗದಲ್ಲಿ ಅವರು ಬಹುದೂರ ಸಾಗುವ ಅವಕಾಶವಿದೆ. ಆತುರವೇನೂ ಬೇಕಾಗಿಲ್ಲ. ಪ್ರಾಯಶಃ ಆ ಕಾರಣಕ್ಕೇ ಇರಬೇಕು, ತಮ್ಮ ವ್ಯವಹಾರಗಳ ಸಂಬಂಧದಲ್ಲಿ ಪ್ರಕಟವಾಗುತ್ತಿರುವ ಯಾವ ವಿಚಾರದಲ್ಲೂ ಇದುವರೆಗೆ ಒಂದು ಮಾತೂ ಆಡಿಲ್ಲ. ಅದಕ್ಕೂ ಕಾಲ ಕೂಡಿ ಬರಬೇಕಂತೆ.
ಧೋನಿ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ್ದು 2004ರಲ್ಲಿ, ರಾಂಚಿ ಮೂಲದ ಯುವಕನಾಗಿ. ಆಗ ನಾಡಿನ ಪ್ರಸಿದ್ಧ ಕ್ರೀಡಾ ವರದಿಗಾರರೆಲ್ಲ ಹುಬ್ಬುಗಳನ್ನು ಮೇಲೇರಿಸಿ 'ವಾರೆವ್ವಾ! ಜಾರ್ಖಂಡದಂಥ ರಾಜ್ಯ ದಿಂದಲೂ ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರ ಬಂದಂತಾಯಿತು' ಎಂದು ಉದ್ಘರಿಸಿದ್ದರು. ಅವರಲ್ಲಿ ಮೊದಲಿಗರು ಕೃಷ್ಣಮಾಚಾರಿ ಶ್ರೀಕಾಂತ.
2004ರ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಧೋನಿ ಮೊದಲನೇ ಬಾಲ್‌ನಲ್ಲೇ ರನ್‌ಔಟ್ ಆದರು. ಅದು ಈಗ ಐತಿಹಾಸಿಕ ದಾಖಲೆ. ಅದಾದ ನಾಲ್ಕೇ ವರ್ಷಗಳಲ್ಲಿ ಧೋನಿ ಟ್ವಿಂಟಿ-ಟ್ವೆಂಟಿ, ಏಕದಿನದ ವರಸೆ ಹಾಗೂ ಟೆಸ್ಟ್ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಈ ಮೂರು ಪ್ರಕಾರಗಳಲ್ಲೂ ಅವರೇ ಭಾರತೀಯ ತಂಡದ ಕ್ಯಾಪ್ಟನ್.
ಧೋನಿ ಬದಲಾಗಿದ್ದಾರೆ. ಅವರು ಮೂಲತಃ ಜಾರ್ಖಂಡದ ಬುಡಕಟ್ಟು ಸಂಸ್ಕೃತಿಯವರಲ್ಲ. ಅವರೇ ಹೇಳಿಕೊಂಡಿರುವಂತೆ, ಅವರದು ಉತ್ತರಾಖಂಡದ ರಜಪೂತ  ಕುಟುಂಬ. ಅವರ ತಂದೆ ಡಾರ್ಜಿಲಿಂಗ್‌ನ ಚಹದ ತೋಟದಲ್ಲಿ ನೌಕರಿಯಲ್ಲಿದ್ದರು. ರಾಂಚಿಗೆ ವಲಸೆ ಬಂದ ಕುಟುಂಬವದು. ಧೋನಿಯ ಆರಂಭದ ಶಿಕ್ಷಣ ರಾಂಚಿಯ ಶಾಲೆಗಳಲ್ಲೇ ಆಗಿದ್ದು. ಖರಗಪುರದಲ್ಲಿ ರೈಲ್ವೆ ಟಿಕೆಟ್ ಎಕ್ಸಾಮಿನರ್, ಕೆಲಸವನ್ನು ಮಾಡಿದ್ದರು. ಮುಂದೆ ಏರ್‌ಲೈನ್ಸ್‌ನಲ್ಲಿ ಅಧಿಕಾರಿ. ಈಗ ಇಂಡಿಯಾ ಸಿಮೆಂಟ್ಸ್ (ದೇಶದ ಅತಿ ದೊಡ್ಡ ಸಿಮೆಂಟ್ ತಯಾರಿಕಾ ಸಂಸ್ಥೆ) ಉಪಾಧ್ಯಕ್ಷ, ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಾಯಕ.
ಹಿಂದೆ ಅವರ ಟ್ರೇಡ್ ಮಾರ್ಕ್: ತಲೆಯ ಕೂದಲು ಕುತ್ತಿಗೆಯನ್ನು ಮುಚ್ಚುವ ರೀತಿಯಲ್ಲಿ ಇಳಿಬಿದ್ದ ರೀತಿ. ಒಂದು ಕಾಲದಲ್ಲಿ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅದನ್ನು ಮೆಚ್ಚಿಕೊಂಡಿದ್ದು, ಯಾರು ಕೇಳಿದರೂ ಈ ಕೂದಲನ್ನು ಕತ್ತರಿಸಬೇಡ ಎಂದು ಹೇಳಿದ್ದರು. ಈಗ ಅದು ಫ್ಯಾಷನ್ ಕ್ರಾಪ್.
ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ಗಳನ್ನೂ ಗೆದ್ದಿದೆ. ಕ್ರಿಕೆಟ್ ತಾರಾಮಣಿಗಳಿಗೂ, ಜಾಹಿರಾತು ವಾಣಿಜ್ಯ ಪ್ರಪಂಚಕ್ಕೂ ಗಂಟು ಹಾಕಿಕೊಂಡ ಮೇಲೆ ಶ್ರೀಮಂತಿಕೆಯ ಶಿಖರವನ್ನೇರುವುದು ಧೋನಿಗೆ ಸುಲಭ ಸಾಧ್ಯವಾಗಿದೆ. ಕೆಲವರ ಅಂದಾಜಿನಂತೆ ಧೋನಿಯ ಜಾಹಿರಾತು ಮೂಲದ ಗಳಿಕೆ ವಾರ್ಷಿಕ ಲೆಕ್ಕದಲ್ಲಿ ಚಲನಚಿತ್ರ ರಂಗದ 'ಧೃವತಾರೆ' ಶಾರುಖ್ ಖಾನ್ ಅವರ ಗಳಿಕೆಗೆ ಹತ್ತಿರ. ಇನ್ನೊಂದು ಅಂದಾಜಿನಂತೆ ಜಗತ್ತಿನ ಅತಿ ಶ್ರೀಮಂತ 31 ಕ್ರೀಡಾಪಟುಗಳಲ್ಲಿ ಅವರೂ ಒಬ್ಬರು. ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೂ ಸಿಕ್ಕಿದೆ.
ಅವರ ಬಾಲ್ಯ ಹಾಗೂ ಯೌವನದ ಮಿತ್ರರು 'ಧೋನಿ ಈಗ ಬದಲಾಗಿರಬಹುದು, ಗೊತ್ತಿಲ್ಲ. ಆದರೆ ನಮ್ಮ ಮಹಿ ಎಂದೆಂದಿಗೂ ಬದಲಾಗುವುದಿಲ್ಲ' ಎನ್ನುತ್ತಾರೆ.
ಧೋನಿಗೆ ಉತ್ತರಾಖಂಡದ ಸಾಕ್ಷಿ ರಾವತ್ ಜತೆ ನಡೆದ ವಿವಾಹವೂ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಅನೇಕ ಪ್ರಚಾರಕರು ಇದೊಂದು ದಿಢೀರ್ ಮದುವೆ ಎಂದರು. ಒಂದೇ ದಿನದಲ್ಲಿ ಹೆಚ್ಚು ಸದ್ದುಗದ್ದಲವಿಲ್ಲದೇ ಎಲ್ಲ ಸಂಪ್ರದಾಯವೂ ಮುಗಿದು ಹೋಗಿತ್ತು. ವಿವಾಹವಾದ ಎಷ್ಟೋ ದಿನಗಳ ಅನಂತರ ಧೋನಿಯ ಆಪ್ತವಲಯದ ತಾರೆ ಬಿಪಾಶ ಬಸು ಕೆಲವರಿಗೆ ಈ ಮದುವೆಯ ತಯಾರಿ ಒಂದು ವರ್ಷದಿಂದ ನಡೆದಿತ್ತು ಎಂದು ತಿಳಿಸಿದ್ದರು. ಅದನ್ನು ಧೋನಿಯ ಕ್ರಿಕೆಟ್ ಮಿತ್ರರು ನಂಬಿರಲಿಲ್ಲ.
ಧೋನಿ ಕ್ರಿಕೆಟ್ ಪ್ರಪಂಚದಲ್ಲಿ, ಜೀವನದಲ್ಲಿ ರಾಕೆಟ್‌ನಂತೆ ಮೇಲೇರಿದರೂ, ಇತ್ತೀಚಿನವರೆಗೂ ಅವರು ಜನರ ಬಾಯಿಗೆ ಬಿದ್ದಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಕೀಟಲೆಗೆ, ತುಂಟತನದ ಮಾತಿಗೆ ಈಡಾಗಿರಬಹುದು. ಈಗ ಧೋನಿ ಚಾಂಪಿಯನ್ ಲೀಗ್‌ನ ಕಟ್ಟಕಡೆಯ ಅವತಾರದಲ್ಲಿ ಪಾಲುಗೊಂಡಿದ್ದಾರೆ. ಆದರೂ, ಭಾರತದಲ್ಲಿ ಹಾಗೂ ಕ್ರಿಕೆಟ್ ಪ್ರೇಮಿಗಳಿರುವ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಪ್ರಚಾರ - ಚರ್ಚೆಗೆ ಗುರಿಯಾಗಿರುವ ವಿಷಯ ಧೋನಿಯ ಕ್ರಿಕೆಟ್ ಅಲ್ಲ, ಕ್ರಿಕೆಟ್‌ನ ವ್ಯಾಪಾರ. ಕ್ರೀಡಾಪಟುಗಳ 'ಧರ್ಮದ' ವಿಚಾರ. ಕೆಲವರಿಗೆ ಧೋನಿಯ ಜಾಹಿರಾತು ವ್ಯವಹಾರದ ಕೆಲವು ವಿಚಾರಗಳು ಹಿಂದೆಯೇ ತಿಳಿದಿದ್ದರೂ, ಅದು ಹಾದಿ-ಬೀದಿಯ ಮಾತಾಗಿರುವುದು ಈಗಲೇ.
ಧೋನಿಯವರ ಜಾಹಿರಾತು ವ್ಯಾಪಾರವನ್ನೆಲ್ಲ ನೋಡಿಕೊಳ್ಳುವ ರಿತಿ ಸ್ಪೋರ್ಟ್ಸ್‌ನ ಪ್ರಾಯೋಜಕ, ಅವರ ದೀರ್ಘ ಕಾಲದ ಸಂಗಾತಿ ಅರುಣ ಪಾಂಡೆ. ಆ ಸಂಸ್ಥೆ ಇತರ ಕೆಲವು ಆಟಗಾರರ ವ್ಯಾಪಾರೀ ಹಿತವನ್ನು ನೋಡಿಕೊಳ್ಳುತ್ತಿದೆ. ಅದರಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಶೇಕಡಾ 15ರಷ್ಟು ಷೇರುಗಳ ಪಾಲಿತ್ತಂತೆ. ಅದನ್ನು ಅವರು ಮೂರು ಲಕ್ಷ ರುಪಾಯಿಗಳನ್ನು ಕೊಟ್ಟು ಕೊಂಡಿದ್ದರಂತೆ. ಈಗ ಅದು ಇಲ್ಲವಂತೆ. ಆ ಮಾತು ಬೇರೆ.
ಧೋನಿಯ ಪಾಲುದಾರಿಕೆ ಇದ್ದ ಕಂಪನಿಯ ಸಹವಾಸದಲ್ಲಿದ್ದ ಇತರ ಆಟಗಾರರ ಹಿತವನ್ನು (ವ್ಯಾಪಾರದಲ್ಲಿ, ಕ್ರಿಕೆಟ್‌ನಲ್ಲಿ) ರಕ್ಷಿಸುವುದು ಧೋನಿಗೆ ಲಾಭದಾಯಕ ದಂಧೆಯೇ ಆಯಿತು ಎನ್ನುವುದು ತರ್ಕಬದ್ಧವಾದ ಮಾತು. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಧೋನಿ, ತಂಡದ ಆಯ್ಕೆಯಲ್ಲಿ, ಆಟದ ಮೈದಾನದಲ್ಲಿ ಅವರ ಪರವಾಗಿ ಪಕ್ಷಪಾತದ ರೀತಿಯಲ್ಲಿ ವರ್ತಿಸಿದ್ದರೋ, ಇಲ್ಲವೋ ಬೇರೆ ಮಾತು. ಆದರೆ ಅಂತಹ ಅವಕಾಶವಿತ್ತು ಎನ್ನುವುದಂತೂ ನಿಜ. ಅದೇ ಹಿತಾಸಕ್ತಿಯ ಸಂಘರ್ಷದ ತಿರುಳು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ (ಈಗ ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿದಿದ್ದಾರೆ. ಆ ಸ್ಥಾನವನ್ನು ಕಳೆದುಕೊಂಡಿಲ್ಲ) ಶ್ರೀನಿವಾಸನ್, ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಪ್ರಮುಖರೂ ಹೌದು. ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಿಕರೂ ಹೌದು ಎನ್ನುವುದರಲ್ಲಿ ವಿವಾದ ಇಲ್ಲ. ಈಗ ಅವರ ಅಳಿಯನ ಮೇಲೆ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಆರೋಪಗಳೂ ಕೇಳಿಬಂದಿವೆ. ತನಿಖೆ ನಡೆಯುತ್ತಿದೆ.
ಇವೆಲ್ಲವೂ ಸೇರಿಕೊಂಡು ಒಂದು ಬಲೆಯನ್ನೇ ಹೆಣೆದಂತಾಗಿದೆ. ಅದರಲ್ಲಿ ಭಾರತ ತಂಡದ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್, ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಮಹೇಂದ್ರ ಸಿಂಗ್ ಧೋನಿ ಯಾವ ಪಾಲನ್ನೂ ಪಡೆಯದೇ ಇದ್ದರೂ, ಯಾವ ಪಾತ್ರವನ್ನೂ ನಿರ್ವಹಿಸದೇ ಇದ್ದರೂ ತಮ್ಮ ಪ್ರಾಮಾಣಿಕತೆಯನ್ನು ಋಜುವಾತು ಮಾಡಬೇಕಾಗಿ ಬಂದಿದೆ. ಧೋನಿ ತಮ್ಮ ಮೌನವನ್ನು ಮುರಿಯದೇ ಇದ್ದರೆ ಅದು ಹೇಗೆ ಸಾಧ್ಯ?
ಅವರ  ಪಾತ್ರ ಇದ್ದರೆ, ಅದಕ್ಕೆ ಸಾಕ್ಷ್ಯ-ಆಧಾರ ಸಿಗಬಹುದು. ಆದರೆ ಇಲ್ಲದೇ ಇರುವ ಪಾತ್ರಕ್ಕೆ ಪುರಾವೆಯನ್ನು ತರುವುದಾದರೂ ಎಲ್ಲಿಂದ? <

-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.