ಸಾಪ್ತಾಹಿಕಪ್ರಭ

ಧರ್ಮನಿಂದನೆ ವಿರುದ್ಧದ ಬಂಡಾಯ

Published On :

ಯುವ ಬರಹಗಾರ ಜಿ.ಎಸ್. ಯುದಿಷ್ಠರ ಅವರು ಓದುಗರ ಕೈಗೆ 'ಸ್ಥಿತಿ' ಕಾದಂಬರಿಯನ್ನಿಟ್ಟಿದ್ದಾರೆ.
ಈ ಕಾದಂಬರಿಯ ಟ್ಯಾಗ್‌ಲೈನ್ 'ಎ ಸ್ಟೋರಿ ಆಫ್ ರೆವೋಲ್ಟ್ ಎಗೇನ್ಸ್ಟ್ ದಿ ಬ್ಲಾಸ್‌ಫೀಮ್‌'. ಅಂದರೆ, ಧರ್ಮನಿಂದನೆಯ ವಿರುದ್ಧದ ಕ್ರಾಂತಿ. ನಿಜಕ್ಕೂ 'ಸ್ಥಿತಿ' ಓದಿದಾಗ ಆ ಭಾವ ಆವರಿಸುತ್ತದೆ. ಆದರೆ, ಕೆಲವು ಅಪ್ರಿಯವಾದ ಸತ್ಯಗಳನ್ನು ತುಂಬಾ ನಯ ನಾಜೂಕಿನಿಂದ ಹೇಳಬೇಕು. ಅದು ಎದುರಿಗಿದ್ದವರಿಗೆ ಅರ್ಥವಾಗುವಂತಿರಬೇಕು. ಅದನ್ನು ಒರಟಾಗಿ ಹೇಳಿದರೆ ಎದುರಿಗಿದ್ದವ ಕೇಳಿಸಿಕೊಳ್ಳಲಾರ. ಆಗ ನಿಮ್ಮ ಒಟ್ಟಾರೆ ಪ್ರಯತ್ನಕ್ಕೆ ಸೋಲಾಗುತ್ತದೆ. ಅಂಥದ್ದೇ ಭಾವ ಇಲ್ಲಿದೆ. ಯುಧಿಷ್ಠರ ತಮ್ಮ ಹೆಸರಿನಂತೆ ಸತ್ಯ ಹೇಳುವ ಭರದಲ್ಲಿ ಕೆಲವು ಅಪ್ರಿಯ ಸತ್ಯವನ್ನು ಅಪ್ರಿಯ ಮಾರ್ಗದಲ್ಲೇ ಹೇಳಿದ್ದಾರೆ!
ವಿವೇಚನೆಯುಕ್ತ ಕ್ರಾಂತಿ ದೀರ್ಘ ಬಾಳಿಕೆ ಬರುತ್ತದೆ. ಆದರೆ, ರೊಚ್ಚಿಗೆಬ್ಬಿಸುವ ಕ್ರಾಂತಿಯ ಆಯುಸ್ಸು ತುಂಬಾ ಕಡಿಮೆ. ಆ ಕ್ಷಣಕ್ಕೆ ಅದು ವಿಜೃಂಭಿಸುವುದು. ಆದರೆ, ದೀರ್ಘಕಾಲದಲ್ಲಿ ಅದಕ್ಕೆ ಸೋಲು ಗ್ಯಾರೆಂಟಿ.
ಇದೇ ತಳಹದಿಯ ಮೇಲೆ ಸ್ಥಿತಿ ಆರಂಭವಾಗಿ ಅಂತ್ಯವಾಗುತ್ತದೆ. ಸ್ಥಿತಿ ನಿಮ್ಮನ್ನು ರೊಚ್ಚಿಗೆಬ್ಬಿಸುವ ಮನಸ್ಥಿತಿಗೆ ಕರೆದೊಯ್ಯುತ್ತದೆ. ಯಾವುದೇ ಸಾಹಿತ್ಯ ನಿಮ್ಮನ್ನು ವಿವೇಚನೆಗೊಳಪಡಿಸಬೇಕೇ ಹೊರತು ರೊಚ್ಚಿಗೆಬ್ಬಿಸಬಾರದು. ಆದರೆ, ಲೇಖಕ ಸ್ವತಂತ್ರ. ಆತನಿಗೆ ಸೃಜನಶೀಲ ವ್ಯಕ್ತಿತ್ವವಿದೆ. ಹಾಗಾಗಿ, ವಿವೇಚನೆಯಾಗಲಿ, ರೊಚ್ಚಿಗೆಬ್ಬಿಸುವ ಮನೋಧರ್ಮವಾಗಲಿ ಪ್ರಶ್ನಿಸಲು ಸಾಧ್ಯವಿಲ್ಲ. ಅದನ್ನು ಓದುಗರು ನಿರ್ಧರಿಸುತ್ತಾರೆ.
'ಸ್ಥಿತಿ'ಯಲ್ಲಿನ ಕಥಾನಾಯಕ ಏನೂ ಇಲ್ಲದಂತೆ ಕಂಡರೂ ಎಲ್ಲವನ್ನು ಒಳಗೊಂಡಿರುವ ಮತ್ತು ಬಲ್ಲವ. ಹಾಗಾಗಿ, ನೈತಿಕತೆ- ಅನೈತಿಕತೆ, ಧರ್ಮ- ಅಧರ್ಮಗಳ ನಡುವಿನ ತೊಳಲಾಟದಲ್ಲಿ, ಕೊನೆಗೆ ತನಗೆ ಸರಿ ಅನಿಸಿದ ಪಕ್ಷದಲ್ಲಿ ಹೊರಳುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಾಪಿತ ಧರ್ಮಗಳಲ್ಲಿ ಮೌಢ್ಯತೆ, ಅನ್ಯಾಯ, ಅಕ್ರಮ ವಿರೋಧಿಸುವ ಜನರ ಪ್ರತಿನಿಧಿಯಂತೆ ಕಾಣುತ್ತಾನೆ. ಇಲ್ಲಿರುವ ಸಿದ್ಧಾರ್ಥ ಆ ಸಿದ್ಧಾರ್ಥ(ಬುದ್ಧ)ನಂತಲ್ಲ. ವ್ಯವಸ್ಥೆಯೊಳಗೆ ಇದ್ದುಕೊಂಡೇ ಪ್ರತಿಭಟಿಸುವ ಮತ್ತು ಸಾಮಾಜಿಕ ನ್ಯಾಯ ಹಾಗೂ ಧರ್ಮವನ್ನು ವಿಮರ್ಶೆಗೊಳಪಡಿಸುವ ಕಾಯಕ ಮಾಡುತ್ತಾನೆ. ಸತ್ಯಶೋಧನೆಯಲ್ಲಿ ತೊಡಗುವ ಸಿದ್ಧಾರ್ಥ, ಧರ್ಮ ಇದ್ದಲ್ಲಿ ಅಧರ್ಮ, ಸುಳ್ಳು ಇದ್ದಲ್ಲಿ ಸತ್ಯ, ನಂಬಿಕೆ ಇದ್ದಲ್ಲಿ ಮೋಸ... ಹೀಗೆ ವಿರೋಧಾಭಾಸಗಳ ನಡುವೆ ಸಾಗುತ್ತಾನೆ. 'ಸ್ಥಿತಿ'ಯಲ್ಲಿ ನಾಯಕನ ಮನಸ್ಥಿತಿಯೂ ಪ್ರಶ್ನಾರ್ಹ. ಹಾಗಾಗಿಯೇ, ಅಲ್ಲಲ್ಲಿ ಗೊಂದಲಕ್ಕೆ ಬೀಳುತ್ತಾನೆ, ಏಳುತ್ತಾನೆ. ಮುನ್ನಡೆಯುತ್ತಾನೆ. ಆದರೆ, ಧರ್ಮನಿಂದನೆ ವಿರುದ್ಧ ಕ್ರಾಂತಿಯಲ್ಲಿ ಸಫಲನಾಗುತ್ತಾನಾ? ಅದನ್ನು ಓದುಗರೇ ನಿರ್ಧರಿಸಬೇಕು.
ಹಾಗಂತ ಈ ಕೃತಿಯಲ್ಲಿ ಕೊರತೆಗಳು ಇಲ್ಲ ಅಂತಿಲ್ಲ. ಮುಖ್ಯವಾಗಿ ಭಾಷೆ ಬಳಸಿಕೊಳ್ಳುವುದರಲ್ಲಿ ಕೊಂಚ ಎಡವಿದ್ದಾರೆ ಅನಿಸುತ್ತದೆ. ಬಿಸಿ ರಕ್ತದ ವಿವೇಚನೆಗಳು ಹಾಗೆ ಅಕ್ಷರ ರೂಪದಲ್ಲಿ ಢಾಳಾಗಿ ಕಾಣುತ್ತವೆ. ಆದರೆ, ಸಾಹಿತ್ಯವೆಂಬುದು ಮುಂದಿನ ತಲೆಮಾರಿಗೆ ದಾಟುವಂಥದ್ದು. ಹಾಗಾಗಿ ಸಂಯಮ ವಹಿಸಿದ್ದರೆ ಇನ್ನಷ್ಟು ಚೆಂದವಾಗಿರುತ್ತಿತ್ತು ಈ ಕಾದಂಬರಿ.
ಯುಧಿಷ್ಠರ ಅವರು ಕಾದಂಬರಿಯಲ್ಲಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆಯಾ ಅಧ್ಯಾಯ ಆರಂಭದ ಮುಂಚೆ, ಆಯಾ ದಾರ್ಶನಿಕರು, ಕವಿಗಳ, ಸಾಹಿತಿಗಳ ಕೋಟ್ ಬಳಸಿದ್ದಾರೆ. ಆ ಕೋಟ್‌ಗಳ ಆಯಾ ಅಧ್ಯಾಯಗಳ ಪ್ರತಿಬಿಂಬದಂತೆ ಗೋಚರಿಸುತ್ತವೆ.
ಕೃತಿ: ಸ್ಥಿತಿ, ಲೇಖಕರು: ಜಿ.ಎಸ್.ಯುದಿಷ್ಠರ
ಪ್ರಕಾರ: ಕಾದಂಬರಿ
ಪ್ರಕಾಶಕರು: ನೇಕಾರ ಪ್ರಕಾಶನ, ಸೊರಬ
ಬೆಲೆ: 320, 280
= ಮಲ್ಲಿಕಾರ್ಜುನ ತಿಪ್ಪಾರ



ಮತ್ತೆ ಜಿಡ್ಡು ಜಿಡ್ಡು
ಜಿಡ್ಡು ಕೃಷ್ಣಮೂರ್ತಿಯವರಿಗೆ ಒಬ್ಬರು ಒಮ್ಮೆ 'ನೀವು ಭಾಷಣ ಮಾಡುವುದೇಕೆ?' ಎಂದು ಪ್ರಶ್ನಿಸಿದ್ದರು. 'ಸತ್ಯವನ್ನು ಕಂಡುಕೊಳ್ಳುವ ದಾರಿ ಯಾವುದೆಂದು ನಿಮಗೆ ಹೇಳುವುದು ಬಹುಶಃ ನನ್ನ ಉದ್ದೇಶ. ಇದೇ ದಾರಿ ಎಂದು ವ್ಯವಸ್ಥೆಗೊಳಿಸುವುದಲ್ಲ... ಸ್ವತಃ ನೀವೇ ಸತ್ಯವನ್ನು ಕಂಡುಕೊಂಡಾಗ ಈ ಭಾಷಣಕಾರ ಒಬ್ಬನೇ ಇರುವುದಿಲ್ಲ. ನಾವೆಲ್ಲರೂ ಮಾತನಾಡಲು ತೊಡಗಿರುತ್ತೇವೆ...' ಎಂದು ಜೆಕೆ ಉತ್ತರಿಸಿದ್ದರು. ಜೆಕೆ ಯಾವುದೇ ಟಿಪ್ಪಣಿಗಳು, ಇತರ ಸಿದ್ಧತೆಗಳನ್ನು ಮಾಡಿಕೊಳ್ಳದೆ ಸಹಜ ಸ್ಫೂರ್ತಿಯಿಂದ ಬೀಜರೂಪಿ ಸತ್ಯ ನುಡಿಯುತ್ತಿದ್ದರು. ಜಗತ್ತಿನಾದ್ಯಂತ ಜೆಕೆ ಅಭಿಮಾನಿಗಳು ಇದ್ದಾರೆ. ಕನ್ನಡ ಮಾತನಾಡುವವರಿಗೆ ಜೆಕೆಯವರ ವಿಚಾರಗಳನ್ನು ತಲುಪಿಸಲು ಜಿಡ್ಡು ಕೃಷ್ಣಮೂರ್ತಿ ಫೌಂಡೇಶನ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೆಕೆಯವರ ಮೂರು ಕೃತಿಗಳು ಈಗ ಕನ್ನಡದಲ್ಲಿ ಬಂದಿವೆ. 'ದಿ ಬುಕ್ ಆಫ್ ಲೈಫ್: ಡೈಲಿ ಮೆಡಿಟೇಶನ್ಸ್ ವಿತ್ ಕೃಷ್ಣಮೂರ್ತಿ' ಕೃತಿಯನ್ನು ಇಂಗ್ಲೆಂಡಿನ ಮಾರ್ಕ್ ಲೀ ಜೆಕೆಯವರ ಮಾತುಗಳನ್ನು ಸಂಗ್ರಹಿಸಿ ಸಂಪಾದಿಸಿದ್ದು. ಅದನ್ನು ವಿದ್ವಾಂಸರಾದ ಓ.ಎಲ್. ನಾಗಭೂಷಣಸ್ವಾಮಿಯವರು 'ಅನುದಿನ ಚಿಂತನ' ಹೆಸರಿನಲ್ಲಿ ಕನ್ನಡದಲ್ಲಿ ನಿರೂಪಿಸಿದ್ದಾರೆ. ಇನ್ನೊಂದು 'ಫಸ್ಟ್ ಆ್ಯಂಡ್ ಲಾಸ್ಟ್ ಫ್ರೀಡಂ' ಕೃತಿ. ಇದನ್ನು ರುಕ್ಮಿಣಿ ಕೃಷ್ಣಮೂರ್ತಿ 'ಮೊದಲ ಹಾಗೂ ಕೊನೆಯ ಬಿಡುಗಡೆ' ಹೆಸರಿನಲ್ಲಿ ಅನುವಾದಿಸಿದ್ದಾರೆ. ಮೂರನೆಯ ಕೃತಿ 'ಮೀಟಿಂಗ್ ಲೈಫ್‌'. ಇದನ್ನು 'ಬದುಕಿನ ಕಡೆಗೆ' ಹೆಸರಿನಲ್ಲಿ ಎಸ್.ಡಿ. ಕಾಶೀಕರ್ ಮತ್ತು ವನಮಾಲಾ ರಂಗನಾಥರಾವ್ ಕನ್ನಡಿಸಿದ್ದಾರೆ. ಜೆಕೆಯವರ ಮೂಲ ಅಧ್ಯಾತ್ಮಿಕ ಪಾರಿಭಾಷಿಕಗಳಿಗೆ ಕುಂದುಂಟಾಗದಂತೆ ಅನುವಾದದಲ್ಲಿ ಲಕ್ಷ್ಯ ವಹಿಸಲಾಗಿದೆ.
ಕೃತಿ: ಜಿಡ್ಡು ಕೃಷ್ಣಮೂರ್ತಿಯವರ 3 ಕೃತಿಗಳು
ಲೇ: ಓ.ಎಲ್. ನಾಗಭೂಷಣಸ್ವಾಮಿ
ಪ್ರಕಾರ: ಚಿಂತನೆ
ಏಕೆ ಓದಬೇಕು?: ಜೆಕೆ ಅರಿಯಲು
ಪ್ರ: ವಸಂತ ಪ್ರಕಾಶನ, ಬೆಂಗಳೂರು

ಅಲೆಮಾರಿಯ ಅಂತರಂಗ
'ಅಲೆಮಾರಿಯ ಅಂತರಂಗ'ವು ನನಗೆ ಇಷ್ಟವಾಗಲು ಒಂದು ಮುಖ್ಯ ಕಾರಣವಿದೆ. ಈ ಕೃತಿಯಲ್ಲಿ ಲೇಖಕರ ವೈಯಕ್ತಿಕ ವೈಭವೀಕರಣವಿಲ್ಲ. ವೈಯಕ್ತಿಕ ವಿಷಯಗಳನ್ನು ನಿರೂಪಿಸುತ್ತಲೇ ಒಂದು ಜನಾಂಗದ ಪಯಣವನ್ನು ಚಿತ್ರಿಸುವ ಸಮಚಿತ್ತತೆಯಿದೆ. ಮೊದಲು ತನ್ನ ಕತೆಯೇ ಆಗುತ್ತದೆ; ಮುಂದುವರಿದಂತೆ ಕುಟುಂಬದ ಕಥನವಾಗುತ್ತದೆ. ಇನ್ನೂ ಮುಂದುವರಿದಂತೆ ಒಂದು ಜನಾಂಗದ ಕಥನವಾಗುತ್ತದೆ. ಹೀಗೆ ಮೂರು ನೆಲೆಗಳಲ್ಲಿ ನೇರ ನಿರೂಪಣೆಯಲ್ಲಿ ಮೂಡಿಬಂದು ಆತ್ಮರತಿಯ ಆತಂಕಗಳನ್ನು ಮೀರುತ್ತದೆ- ಹೀಗೆಂದು ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಬರಗೂರು ರಾಮಚಂದ್ರಪ್ಪನವರು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಉಳಿದವರಿಗೂ ಈ ಕೃತಿ ಇಷ್ಟವಾಗುತ್ತದೆ. ದೊಂಬಿದಾಸರ ಜನಾಂಗದವರಾದ ಕುಪ್ಪೆ ನಾಗರಾಜ ಅವರು ತಮ್ಮ ವಿವರಗಳನ್ನು ನೀಡುತ್ತಲೇ ಒಂದು ಸಂಸ್ಕೃತಿಯ ಚಿತ್ರಣವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಮನುಷ್ಯ ಸಂಬಂಧಗಳಲ್ಲಿ ನಂಬಿಕೆಯನ್ನು ಹೆಚ್ಚಿಸುವ ಹಲವು ಘಟನೆಗಳ ವಿವರಗಳೂ ಇವೆ.
ಕೃತಿ: ಅಲೆಮಾರಿಯ ಅಂತರಂಗ, ಪ್ರಕಾರ: ಆತ್ಮಕಥನ, ಏಕೆ ಓದಬೇಕು?: ದೊಂಬಿದಾಸರ ಬಗ್ಗೆ ಅರಿಯಲು
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 216, ಬೆಲೆ ರು. 125

ಕನ್ನಡದಲ್ಲಿ ಶಿಶು ಸಾಹಿತ್ಯ ಇನ್ನೂ ಶೈಶವದಲ್ಲಿಯೇ ಇದೆ ಎಂದು ಹೇಳಬೇಕು. ಬೆಕ್ಕೇಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ?, ನಾಗರ ಹಾವೇ ಹಾವೊಳು ಹೂವೆ, ನಾಯಿಮರಿ ನಾಯಿ ಮರಿ ತಿಂಡಿಬೇಕೆ ಇತ್ಯಾದಿ ಶಿಶು ಪ್ರಾಸದಿಂದ ಕೂಡಿದ ಹಾಡುಗಳೇ ಇಂದಿಗೂ ನಮಗೆ ಮೆಚ್ಚುಗೆಯಾಗುತ್ತಿವೆ. ಅವನ್ನು ಮೀರಿಸುವ ರಚನೆಗಳು ಬಂದದ್ದು ಕಡಿಮೆ. ಇದೀಗ ಮಕ್ಕಳ ಪದ್ಯಗಳ ಎರಡು ಕೃತಿಗಳನ್ನು ಸಿ.ಎಂ. ಗೋವಿಂದರೆಡ್ಡಿ ಹೊರತಂದಿದ್ದಾರೆ. ಒಂದು 'ಪದ್ಯ ಹೇಳುವ ಮರ', ಇನ್ನೊಂದು 'ಚಿಣ್ಣರ ಲೋಕದ ಬಣ್ಣದ ಹಾಡು'. ಮೊದಲಿನ ಕೃತಿಯಲ್ಲಿ ಕೆಲವು ಉತ್ತಮ ಕಥನ ಕವನಗಳೂ ಇವೆ. ಸುತ್ತಲ ಪರಿಸರ, ಪ್ರಾಣಿ, ಸಂಬಂಧಿಗಳು ಕವಿತೆಗಳಲ್ಲಿ ಬರುತ್ತಾರೆ. ಪುಟ್ಟ ಮಕ್ಕಳು ಇಲ್ಲಿಯ ಕವಿತೆಗಳನ್ನು ಎಷ್ಟು ಕಾಲ ನೆನಪಿಟ್ಟುಕೊಳ್ಳುತ್ತಾರೆ ಎಂಬುದೇ ಕೃತಿಗೆ ಮಾನದಂಡ. ಸರಳವಾದ ಭಾಷೆ, ಪುಟ್ಟ ಪುಟ್ಟ ವಾಕ್ಯಗಳು, ಇಂಪಾದ ಶಬ್ದಗಳ ಬಳಕೆ ಗೋವಿಂದರೆಡ್ಡಿಯವರ ಯಶಸ್ಸಿನ ಗುಟ್ಟು.
ಕೃತಿ: ಪದ್ಯ ಹೇಳುವ ಮರ ಮತ್ತು ಚಿಣ್ಣರ ಲೋಕದ ಬಣ್ಣದ ಹಾಡು, ಲೇ: ಸಿ.ಎಂ. ಗೋವಿಂದರೆಡ್ಡಿ
ಪ್ರಕಾರ: ಮಕ್ಕಳ ಪದ್ಯಗಳು, ಏಕೆ ಓದಬೇಕು?: ಓದಿನ ಖುಷಿಗೆ, ಪ್ರ: ಅನನ್ಯ ಪುಸ್ತಕ ಪ್ರಕಾಶನ, ಮಾಲೂರು

ನಯನಮೋಹನ ವೈಚಿತ್ರ್ಯ
ವೈದ್ಯಕೀಯ ವಿಚಾರಗಳನ್ನು ಸರಳ ಕನ್ನಡದಲ್ಲಿ ಬರೆಯುವುದು ತುಂಬ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನೇ ಇಷ್ಟಪಟ್ಟು ಮಾಡುತ್ತಿರುವವರಲ್ಲಿ ಡಾ.ಎಚ್.ಎಸ್. ಮೋಹನ್ ಪ್ರಮುಖರು. 'ವೈದ್ಯ ವೈಚಿತ್ರ್ಯ'ವೆಂಬ ಅವರ ಈ ಕೃತಿಯಲ್ಲಿ 22 ಲೇಖನಗಳಿವೆ. ಮೊದಲ ಭಾಗದಲ್ಲಿ ವೈದ್ಯಕೀಯದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತ 14 ಲೇಖನಗಳಿವೆ. ಎರಡನೆಯ ಭಾಗದಲ್ಲಿ ಕಣ್ಣಿಗೆ ಸಂಬಂಧಿಸಿದ ಎಂಟು ಲೇಖನಗಳಿವೆ. ರೋಬೋಟಿಕ್ ಸರ್ಜರಿ ಇಂದು ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲಿ ಒಂದಾಗಿದೆ. ಈ ತಂತ್ರಜ್ಞಾನದಿಂದ ಉದರದೊಳಗಿನ ಶಸ್ತ್ರಕ್ರಿಯೆನ್ನು ನಡೆಸಬಹುದು. ರೋಬೋಟ್‌ಗಳ ಮೂಲಕ ನುರಿತ ವೈದ್ಯ ಎಷ್ಟೋ ದೂರದಲ್ಲಿರುವ ವ್ಯಕ್ತಿಯ ಶಸ್ತ್ರಕ್ರಿಯೆಯನ್ನು ನಡೆಸಬಹುದು. ಇಂಥ ಸರಳ ಮಾಹಿತಿಯನ್ನು ಮೋಹನ್ ನೀಡುತ್ತಾರೆ. ದೀರ್ಘಾಯುಷ್ಯದ ರಹಸ್ಯವನ್ನು ಕೆದಕುತ್ತಾರೆ. ಕ್ಯಾನ್ಸರ್ ಚುಚ್ಚುಮದ್ದಿನ ವಿವಾದದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸಾಮಾನ್ಯರೂ ಅರಿತುಕೊಳ್ಳಬೇಕಾದ ಹಲವು ವಿಚಾರಗಳು ಈ ಕೃತಿಯಲ್ಲಿವೆ.
ಕೃತಿ: ವೈದ್ಯ  ವೈಚಿತ್ರ್ಯ
ಲೇ: ಡಾ.ಎಚ್.ಎಸ್. ಮೋಹನ್
ಪ್ರಕಾರ: ವೈದ್ಯಕೀಯ ಲೇಖನಗಳು
ಏಕೆ ಓದಬೇಕು?: ವೈದ್ಯಕೀಯ ಅರಿಯಲು
ಪ್ರ: ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 156 ಬೆಲೆ ರು. 85

ವಿಶ್ವ ಕಥಾವಾಹಿನಿ
ಒಂದು ದೇಶದ ಕತೆಗಳೆಂದರೆ ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿಗಳ ಸಮಗ್ರ ಮೊತ್ತ. ಇತಿಹಾಸ ಎನ್ನುವುದು ರಾಜರುಗಳ ಕತೆಗಳು ಮಾತ್ರವಲ್ಲ, ಅದು ಆಯಾ ದೇಶಗಳ ಜನಸಾಮಾನ್ಯರ ಅನುದಿನದ ನೋವು ನಲಿವಿನ ದಾಖಲೆಯೂ ಹೌದು. ನಿರಂಜನ ಕಾವ್ಯನಾಮದ ಕುಳಕುಂದ ಶಿವರಾಯರು ಸಂಪಾದಿಸಿದ 'ವಿಶ್ವಕಥಾಕೋಶ'ದ 25 ಸಂಪುಟಗಳು ಕನ್ನಡ ಸಾಹಿತ್ಯದಲ್ಲಿ ಒಂದು ಅಕ್ಷಯ ಸಂಪತ್ತು. ಇವು ಬಂದು 3 ದಶಕಗಳಾಗಿವೆ. ಇವುಗಳಲ್ಲಿ ಕೆಲವು ಮರು ಮುದ್ರಣಗಳನ್ನೂ ಕಂಡಿವೆ. ಈ ಎಲ್ಲ ಸಂಪುಟಗಳಿಗೂ ನಿರಂಜನರು ಅಧ್ಯಯನಪೂರ್ಣ ಪ್ರಸ್ತಾವನೆ ಬರೆದಿದ್ದರು. ಇವುಗಳಲ್ಲಿ ಪ್ರತಿಯೊಂದು ದೇಶದ ಸಾಹಿತ್ಯದ ಬಗ್ಗೆ ಬೆಲೆಯುಳ್ಳ ಒಳನೋಟದ ಮಾತನ್ನು ಹೇಳಿದ್ದಾರೆ. ಈ ಪ್ರಸ್ತಾವನೆಗಳ ಮೂಲಕವೇ ಜಗತ್ತಿನ ಇತಿಹಾಸವನ್ನು ಅರಿಯುವ ಒಂದು ಅವಕಾಶ ಒದಗುತ್ತದೆ. ಈ ಎಲ್ಲ ಪ್ರಸ್ತಾವನೆಗಳನ್ನು ಸೇರಿಸಿ 'ವಿಶ್ವ ಕಥಾವಾಹಿನಿ' ಹೆಸರಿನಲ್ಲಿ ನವಕರ್ನಾಟಕ ಪ್ರಕಾಶನದವರು ಹೊರತಂದಿದ್ದಾರೆ.
ಕೃತಿ: ನಿರಂಜನ ವಿಶ್ವ ಕಥಾವಾಹಿನಿ
ಪ್ರಕಾರ: ಪ್ರಸ್ತಾವನೆಗಳ ಸಂಕಲನ
ಏಕೆ ಓದಬೇಕು?: ವಿಶ್ವಕಥಾಪರಂಪರೆ ಅರಿಯಲು
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು,
ಪುಟಗಳು 352, ಬೆಲೆ ರು. 200

ಆರದ ಕಥೆಗಳನ್ನು ಕೊಟ್ಟ ಆರಗ
ಸೂ.ವೆಂ. ಆರಗ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸಿದ ಪ್ರೊ. ಎ.ಎಸ್. (ಅ.ಸೂ.) ವೆಂಕಟರಾಮಯ್ಯ ಅವರು ಸಾಹಿತ್ಯದ ಉತ್ತಮ ವಿಮರ್ಶಕರೂ ಬೋಧಕರೂ ಆಗಿದ್ದರು. ಹೀಗಿದ್ದೂ ಸಾಹಿತ್ಯ ರಚನೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲಿಲ್ಲ. ನವೋದಯ ಕಾಲದಲ್ಲಿಯೇ ಸಾಹಿತ್ಯ ರಚನೆ ಆರಂಭಿಸಿ ನಡುವೆ ಬಿಟ್ಟುಬಿಟ್ಟರು.
ಇತ್ತೀಚೆಗೆ ನಮ್ಮನ್ನು ಅಗಲಿದ ಆರಗ ಅವರು ಉಳಿಸಿಹೋದ ಬರೆಹಗಳನ್ನು ಕಲೆಹಾಕಿದ ಅವರ ಕುಟುಂಬದವರ ಸಹಕಾರದಿಂದ ಮೂರು ಕೃತಿಗಳು ಕನ್ನಡ ಸಾಹಿತ್ಯ ಲೋಕದ ಗ್ರಂಥಭಂಡಾರಕ್ಕೆ ಸೇರಿವೆ. 'ವಿಫಲ ಯಾತ್ರೆ' ಎಂಬುದು ಕಥಾಸಂಕಲನ, 'ಕುಸುಮ ಸಂಕೋಲೆ' ಕಾದಂಬರಿ ಹಾಗೂ 'ಬರಹದ ಸುತ್ತಮುತ್ತ' ವಿಮರ್ಶೆಗಳ ಸಂಕಲನ. ಈ ಮೂರು ಕೃತಿಗಳ ಮೂಲಕ ಕಳಚಿಕೊಂಡಿದ್ದ ಕೊಂಡಿಯೊಂದು ಮರು ಜೋಡಣೆಯಾದಂತೆ ಆಗಿದೆ.
'ಬರಹದ ಸುತ್ತಮುತ್ತ' ಕೃತಿಗೆ ಮುನ್ನುಡಿಯನ್ನು ಬರೆದಿರುವ ಪ್ರೊ. ಎಂ.ಎಚ್. ಕೃಷ್ಣಯ್ಯನವರು ಆರಗ ಅವರ ಬರೆವಣಿಗೆಯ ಸಾಮರ್ಥ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ತಮ್ಮ ಅಧ್ಯಾಪನಕ್ಕಾಗಿ ಮಾಡಿಟ್ಟುಕೊಂಡ ಟಿಪ್ಪಣಿಗಳು, ಪ್ರಶ್ನೆಗೆ ಪ್ರಬಂಧ ರೂಪದ ಉತ್ತರ, ನಿಯತಕಾಲಿಕೆಗಳಿಗೆ ಬರೆದ ಲೇಖನಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು ಈ ಕೃತಿಯಲ್ಲಿವೆ. ಉತ್ತಮ ಒಳನೋಟಗಳನ್ನು ಹೊಂದಿದ್ದ ವಿಮರ್ಶಕರು ಅವರಾಗಿದ್ದರು ಎಂಬುದಕ್ಕೆ ಇದರಲ್ಲಿ ಪುರಾವೆಗಳು ಸಿಗುತ್ತವೆ.
'ಕುಸುಮ ಸಂಕೋಲೆ' ಕಾದಂಬರಿ. ಇದಕ್ಕೆ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮುನ್ನುಡಿ ಬರೆದಿದ್ದಾರೆ. ಮೂವರು ಹೆಣ್ಣುಮಕ್ಕಳ ದಯನೀಯ ಕತೆ ಇಲ್ಲಿಯ ವಸ್ತು. ಪುರುಷ ಪ್ರಧಾನ ಜಗತ್ತಿನಲ್ಲಿ ಹೆಣ್ಣು ಹೇಗೆ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಆರಗ ವಿವರಿಸುತ್ತಾರೆ. ಯಾವ ಸ್ತ್ರೀಪಾತ್ರವೂ ಈ ಶೋಷಣೆಯ ವಿರುದ್ಧ ಸಿಡಿದೇಳದಿರುವುದು ಈ ಕಾದಂಬರಿ ರಚನೆಗೊಂಡ ಕಾಲದ ಸಮಾಜದ ರೀತಿನೀತಿಯ ಪರಿಣಾಮವಾಗಿರಬಹುದು. ಕಾದಂಬರಿಯದು ಸುಕುಮಾರ ಶೈಲಿ.
'ವಿಫಲ ಯಾತ್ರೆ' ಕಥೆಗಳ ಸಂಕಲನ. ಇದಕ್ಕೆ ಅ.ರಾ. ಮಿತ್ರ ಸುದೀರ್ಘವಾದ ಮುನ್ನುಡಿ ರೂಪದ ವಿಮರ್ಶೆಯನ್ನು ಬರೆದಿದ್ದಾರೆ. ಹಿ.ಮ. ಬಸವಯ್ಯನವರು ಇದಕ್ಕೆ ಪೀಠಿಕೆಯ ಮಾತುಗಳನ್ನು ಬರೆದಿದ್ದಾರೆ. ಹದಿನಾಲ್ಕು ಕತೆಗಳು ಇದರಲ್ಲಿವೆ. ಆಧುನಿಕ ಕನ್ನಡದ ಆರಂಭಕಾಲದ ಸತ್ವಶಾಲಿ ಕತೆಗಾರರಲ್ಲಿ ಆರಗ ಅವರಿಗೂ ಸ್ಥಾನ ಸಲ್ಲಬೇಕು ಎಂಬ ಮಾತನ್ನು ಅ.ರಾ. ಮಿತ್ರ ಹೇಳಿದ್ದಾರೆ. ಅದೇನು ಉತ್ಪ್ರೇಕ್ಷೆಯ ಮಾತಲ್ಲ ಎಂಬುದು ಇಲ್ಲಿಯ ಕತೆಗಳನ್ನು ಓದಿದಾಗ ಗೊತ್ತಾಗುತ್ತದೆ. ಸುಮಾರು ಅರವತ್ತು ವರ್ಷಗಳ ಹಿಂದೆ ಬರೆದ ಈ ಕತೆಗಳನ್ನು ಇವತ್ತಿನ ಓದುಗ ಕೂಡ ಒಪ್ಪಿಕೊಳ್ಳುತ್ತಾನೆ. ಮನುಷ್ಯಧರ್ಮದ ತಾಕಲಾಟಗಳು ಇಲ್ಲಿವೆ. ತಂತ್ರಕ್ಕಿಂತ ಕತೆ ಹೇಳುವ ರೀತಿ ಆರಗ ಅವರಿಗೆ ಮುಖ್ಯವಾದದ್ದು. ಕತೆಯ ಪರಿಣಾಮದ ಬಗ್ಗೆ ಮಾತ್ರ ಅವರ ಲಕ್ಷ್ಯ. 'ಯಾರ ಮಗು', 'ಕೆಡೆದ ಹರಿಣಿ' ಎಂಬ ಅನುವಾದಿಸಿದ ಕತೆಗಳೂ ಇಲ್ಲಿವೆ. ವಿವಿಧ ರೀತಿಯ ಮನುಷ್ಯವ್ಯಾಪಾರಗಳಲ್ಲಿ ಕೊನೆಗೆ ಮಾನವೀಯತೆಯನ್ನೇ ಅವರು ಗೆಲ್ಲಿಸುವುದು.
ಪ್ರೊ.ಸೂ.ವೆಂ. ಆರಗ ಅವರ ಪೂರ್ವಜರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹತ್ತಿರದ ಆರಗದವರು. ಚಿಕ್ಕಮಗಳೂರಿನ ಗೋಣಿಬೀಡಿನಲ್ಲಿ 1930 ಜು.2ರಂದು ಆರಗ ಜನಿಸಿದರು. ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡವನ್ನು ಬೋಧಿಸುತ್ತಿದ್ದ ಅವರು 2012 ಮೇ 6ರಂದು ನಮ್ಮನ್ನಗಲಿದರು.

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.