ಸಾಪ್ತಾಹಿಕಪ್ರಭ

ಹೊಳ್ಳ ಹೊಳಪು

ಹೊಳ್ಳ ಹೊಳಪು
Published On :

ಕರಾವಳಿ ಮತ್ತು ಮಲೆನಾಡು ಜನರ ಮನಸೂರೆಗೊಂಡ ಕಲೆ ಯಕ್ಷಗಾನ. ಈ ಕಲೆ ಸೀಮೋಲ್ಲಂಘನೆ ಮಾಡಿ ಪರ ಊರಲ್ಲಿ ಪ್ರದರ್ಶನ ಏರ್ಪಡಿಸುವಾಗ ಉದ್ಭವಿಸಿದ ಸಮಸ್ಯೆ ಭಾಷೆಯದ್ದು. ಹೊರ ರಾಜ್ಯ, ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡುವಾಗ ಎದುರಾದ ಭಾಷಾ ಸಮಸ್ಯೆಗೆ ಹಿಂದಿಯಲ್ಲೂ ಭಾಗವತಿಕೆ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದವರು ಪುತ್ತಿಗೆ ರಘುರಾಮ ಹೊಳ್ಳ. ಒಟ್ಟು 9 ರಾಜ್ಯಗಳಲ್ಲಿ, 300 ಕ್ಕೂ ಅಧಿಕ ಹಿಂದಿ ಯಕ್ಷಗಾನದಲ್ಲಿ ಇವರು ಭಾಗವತಿಕೆ ನಿರ್ವಹಿಸಿದ್ದಾರೆ. ಯಕ್ಷ ಮಂಜೂಷ ತಂಡದ ವತಿಯಿಂದ ಹಿಂದಿ ತಂಡ ದೇಶಾದ್ಯಂತ ಸಂಚರಿಸಿದೆ. ತೆಂಕು ತಿಟ್ಟಿನಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಜನಪ್ರಿಯತೆ ಗಳಿಸಿದ್ದ ಹೊಳ್ಳರು, ಹೊರ ರಾಜ್ಯಗಳಲ್ಲಿ ಹಿಂದಿಯಲ್ಲೂ ಹಾಡಿ ಸೈ ಎನಿಸಿಕೊಂಡವರು.
ಸಂಗೀತ ಶುದ್ಧಿ, ಸ್ವರ ಶೈಲಿ ಎರಡೂ ಮಿಳಿತವಾಗಿ ಈಗ ಪುತ್ತಿಗೆ ಶೈಲಿ ಎಂದೇ ಯಕ್ಷಗಾನದಲ್ಲೀಗ ಪ್ರಸಿದ್ಧಿ. ಕೆಲವರು ಇವರ ಭಾಗವತಿಕೆಯಲ್ಲಿ ಅಗರಿ ಶೈಲಿಯನ್ನೂ ಕಾಣುವುದುಂಟು. ಅಪಾರ ಪ್ರಸಂಗಜ್ಞಾನ, ಹತ್ತಾರು ವರ್ಷಗಳ ಮೇಳದ ತಿರುಗಾಟದಿಂದ ಸಿದ್ಧಿ ಗಳಿಸಿಕೊಡವರು. ಇವರಿಗೆ ಅಭಿಮಾನಿಗಳೆಲ್ಲ ಕಲೆತು ಷಷ್ಟ್ಯಬ್ಧದ ಹೊಸ್ತಿಲಲ್ಲಿರುವ ಪುತ್ತಿಗೆ ರುಘರಾಮ ಹೊಳ್ಳರಿಗೆ ಮೊನ್ನೆ ಮಂಗಳೂರಲ್ಲಿ 'ರಘುರಾಮಾಭಿನಂದನಮ್‌' ಆಯೋಜಿಸಿದ್ದರು. 34 ವರ್ಷಗಳ ಸಾರ್ಥಕ ಸೇವೆ ಸಾಧನೆಯ ಅವಲೋಕನವನ್ನು ಈ ಮೂರು ದಿನಗಳ ಸಮ್ಮಾನದೊಂದಿಗೆ ನಡೆಸಿದರು. ಜತೆಗೆ ಪುತ್ತಿಗೆ ಹೊಳ್ಳರ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆ, ಪ್ರದರ್ಶನವೂ ಇತ್ತು. ಅಭಿಮಾನಿಗಳಿಂದ ಸಂಗ್ರಹಿಸಿದ ರು. 5,55,555 ನಿಧಿ ಸಮರ್ಪಣೆಯನ್ನೂ ಮಾಡಲಾಯಿತು.
ಮೊದಲು ಚಂಡೆ...
ಆರಂಭದಲ್ಲಿ ಇವರು ಯಕ್ಷರಂಗ ಪ್ರವೇಶಿದ್ದು ಚಂಡೆ, ಮದ್ದಳೆ ವಾದಕರಾಗಿ. ಇದಕ್ಕಾಗಿ ಮವ್ವಾರು ಕಿಟ್ಟಣ್ಣ ಭಾಗವತರಲ್ಲಿ ಕಲಿತೂ ಆಗಿತ್ತು. ಸ್ವತಃ ಭಾಗವತರಾಗಿ ಪ್ರಸಿದ್ಧಿ ಪಡೆದಿದ್ದ ತಂದೆ ಪುತ್ತಿಗೆ ರಾಮಕೃಷ್ಣ ಜೋಶಿಯವರಿಂದ ವಂಶಪಾರಂಪರ್ಯವಾಗಿ ಹಾಡುಗಾರಿಕೆ ಗೊತ್ತಿತ್ತು. ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದ್ದರು. ಚಂಡೆ ಮದ್ದಳೆ ವಾದನವೂ ಗೊತ್ತಿತ್ತು. ಎಲ್ಲ ಸೇರಿ ಬಳಿಕ ಪರಿಪೂರ್ಣ ಭಾಗವತರಾಗಿ ರೂಪುಗೊಂಡರು.

= ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.