ಜುಂಪಾ ಜಂಪ್
ಮತ್ತೆ ಪ್ರಶಸ್ತಿಗಳ ಬಗ್ಗೆ ಮಾತನಾಡುವ ಕಾಲ. ಬೇಡ ಬೇಡ ಅಂದರೂ ಬೂಕರ್ ಪಟ್ಟಿ ಕಣ್ಣಿಗೆ ಬಿದ್ದೇ ಬೀಳುತ್ತದೆ. ನಮ್ಮವರ್ಯಾರಾದರೂ ಇದ್ದಾರೋ ಎಂದು ಕಣ್ಣು ಹುಡುಕುತ್ತದೆ. ಹಾಗೆ ಈ ಬಾರಿಯ ಪಟ್ಟಿಯಲ್ಲಿ ಕಾಣಿಸಿಕೊಂಡವಳೇ ಜುಂಪಾ ಲಾಹಿರಿ. 'ಈಕೆ ಯಾವ ಸೀಮೆ ನಮ್ಮವಳು?' ಎಂಬ ಕುಹಕ ಬೇಡ. ಬಂಗಾಳದಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿ ಇಂಗ್ಲಿಷ್ನಲ್ಲಿ ಬರೆಯುತ್ತಿರುವ ಈಕೆಯ ಕಥಾವಸ್ತು ಅಪ್ಪಟ ಭಾರತೀಯ.
ಜುಂಪಾಳ 'ದಿ ಲೋಲ್ಯಾಂಡ್' ಕಾದಂಬರಿ ಈ ಸಲದ ಬೂಕರ್ ಶಾರ್ಟ್ಲಿಸ್ಟ್ ಸೇರಿದೆ. ಸೆಪ್ಟೆಂಬರ್ನಲ್ಲಿ ಹೊರಬರಲಿರುವ ಈ ಕೃತಿಯ ಕತೆ ಭಾರತದ ನಕ್ಸಲ್ ಚಳವಳಿ ಹಾಗೂ ಒಂದು ಕುಟುಂಬವನ್ನು ಒಟ್ಟಿಗೇ ಬೆಸೆದು ಹೇಳುತ್ತದಂತೆ. ಈಕೆಯ ಮೊದಲ ಕಥಾಸಂಕಲನ 'ಇಂಟರ್ಪ್ರಿಟರ್ ಆಫ್ ಮೆಲಡೀಸ್' ಕಾಲಕ್ಕೆ ಈಕೆ ಯಾರೆಂದೇ ಅಮೆರಿಕನ್ನರಿಗೆ ಗೊತ್ತಿರಲಿಲ್ಲ. ಆದರೂ ಭಾರತದಲ್ಲಿ ಹೆಸರು ಮಾಡಿದ್ದಳು. ಎರಡನೇ ಕೃತಿ 'ನೇಮ್ಸೇಕ್' ಕಾಲಕ್ಕಾಗಲೇ ಅಮೆರಿಕದಲ್ಲೂ ಬೆಸ್ಟ್ಸೆಲ್ಲರ್ ಎನಿಸಿಕೊಂಡಿದ್ದಳು.
ಲಾಹಿರಿ ಬರಹಗಳ ಬಗ್ಗೆ ಇಲ್ಲಿ ಹೇಳಲೇಬೇಕಾದ ಮಾತು: ಅವು ಬೆಸ್ಟ್ಸೆಲ್ಲರ್ ಆಗಿದ್ದರೂ ಸೆಲ್ಲಿಂಗ್ಗಾಗಿಯೇ ಬರೆದವುಗಳಲ್ಲ. ಮಾರುಕಟ್ಟೆಯಲ್ಲಿ 'ಮೂವ್' ಅಗುವ ಶೈಲಿಯನ್ನು ಈಕೆ ರೂಢಿಸಿಕೊಂಡವಳಲ್ಲ. ನಿಧಾನವಾಗಿ ವಿವರಗಳಲ್ಲಿ ಬೆಳೆಯುತ್ತ, ಸುದೀರ್ಘವಾಗಿ ಹಬ್ಬಿ ನಿಂತು, ಆಳವಾಗಿ ಕಲಕುವ ಶೈಲಿಯದು.
ಮತ್ತೆ ಗೆಲಿಯಾನೋ
ಎಡುವರ್ಡೋ ಗೆಲಿಯಾನೋ ಹೊಸ ಪುಸ್ತಕ ಹೊರತರುತ್ತಾನೆಂದರೆ ಲ್ಯಾಟಿನ್ ಅಮೆರಿಕದ ಓದುಗರು, ವಿಶ್ವಾದ್ಯಂತ ಆತನ ಬರಹಗಳಿಗೆ ಫಿದಾ ಆಗಿರುವವರು ಪುಳಕಗೊಳ್ಳುತ್ತಾರೆ. ಈಗಲೂ ಹಾಗೇ, ಅವನ ಹೊಸ ಪುಸ್ತಕ 'ಚಿಲ್ಡ್ರನ್ ಆಫ್ ದಿ ಡೇಸ್' ಹೊರಬಂದಿದೆ. ಇದು ವರ್ಷದ 365 ದಿನಗಳಿಗೊಂದರಂತೆ, ಇತಿಹಾಸದಲ್ಲಿ ಆಯಾ ದಿನದ ಮಹತ್ವ ತೆರೆದಿಡುವ ಕೃತಿ. 'ಮಾಮೂಲಿ ಬುಕ್ ಆಫ್ ಡೇಸ್' ಅಂದುಕೊಳ್ಳಬೇಡಿ. ಅವು ಚರಿತ್ರೆಯ ಆಯಾ ದಿನದ ಅಮಾನವೀಯ ತುಣುಕೊಂದನ್ನು ತೆರೆಯುವಂಥದು.
ಗೆಲಿಯಾನೋ ಕನ್ನಡ ಓದುಗರಿಗೆ ಅಪರಿಚಿತನಲ್ಲ. ಆತನ 'ಮೆಮೊರೀಸ್ ಆಫ್ ಫೈರ್' ಅನ್ನು ಕವಿ, ವಿಮರ್ಶಕ ಕೆ.ಪಿ.ಸುರೇಶ್ 'ಬೆಂಕಿಯ ನೆನಪು' ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇತಿಹಾಸಪೂರ್ವ, ಚರಿತ್ರೆ, ವರ್ತಮಾನದ ಉರಿಯುವ ತುಣುಕುಗಳು ಅವು.
ವಸಾಹತುಶಾಹಿಯ ಪ್ರಬಲ ವಿರೋಧಿಯಾದ ಈತ ಕೆಲಕಾಲ ಜಗತ್ತಿಗೆ ಅಪರಿಚಿತನಾಗಿಯೇ ಇದ್ದ. ಈತನ 'ಓಪನ್ ವೇನ್ಸ್ ಆಫ್ ಲ್ಯಾಟಿನ್ ಅಮೆರಿಕ' ಕೃತಿಯನ್ನು ವೆನಿಜುವೆಲದ ಅಧ್ಯಕ್ಷ ಹ್ಯೂಗೋ ಚಾವೆಝ್, ಅಮೆರಿಕದ ಬರಾಕ್ ಒಬಾಮಗೆ ಉಡುಗೊರೆ ಕೊಟ್ಟಾಗ ಎಲ್ಲೆಡೆ ಈತನ ಬರಹಗಳ ಬಗ್ಗೆ ಕುತೂಹಲ ಎದ್ದಿತು. ಅಮೆಝಾನ್ ಪುಸ್ತಕದಂಗಡಿಯಲ್ಲಿ 60 ಸಾವಿರ ಚಿಲ್ಲರೆ ರ್ಯಾಂಕ್ನಲ್ಲಿದ್ದ ಕೃತಿ ಒಮ್ಮೆಲೇ 2ನೇ ರ್ಯಾಂಕ್ಗೆ ಜಿಗಿಯಿತು.
'ಪ್ರತಿಭಟನೆಗಳು ಎಷ್ಟೇ ಅಲ್ಪಾವಧಿಯದ್ದಾಗಿರಲಿ, ಮೊದಲ ಪ್ರೇಮವಿದ್ದಂತೆ. ಕ್ಷಣಿಕವಾದರೂ ಅದರ ಮಾಧುರ್ಯ, ಪರಿಣಾಮ ನಿಜ' ಎಂದು ಹೇಳುವ ಗೆಲಿಯಾನೊ, ನಾವು ಮತ್ತೆ ಮತ್ತೆ ಬರಮಾಡಿಕೊಳ್ಳಬೇಕಾದ ಲೇಖಕ.
ಚಳಿಗಾಲ
ಈ ರಾತ್ರಿ ಈ ಭಾರದ
ಭೂಮಿ ಬೀಳುತ್ತಿದೆ
ತಾರೆಗಳಿಂದ ದೂರ
ಒಂಟಿತನದಲ್ಲಿ
ಎಲ್ಲೋ ಇವನೆಲ್ಲ
ಹಿಡಿದ ಅದ್ಯಾರದೋ
ಶಾಂತ ಅನಂತ ಕೈಗಳು
ಬೀಳುತ್ತಿವೆ.
- ರೈನರ್ ಮಾರಿಯಾ ರಿಲ್ಕೆ
- ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

