ಸಾಪ್ತಾಹಿಕಪ್ರಭ

ತಾತನೂರು

ತಾತನೂರು
Published On :

ನೀಲಾಕಾಶದ ಕೆಳಗೆ ಕಾದಾಡುವ ಮದ್ದಾನೆಗಳು, ಗಗನ ಚುಂಬಿಸುವ ಕೊಡುಗಲ್ಲುಗಳು, ಹಾರಲು ಸಿದ್ಧವಾಗಿರುವ ಗರುಡ ಪಕ್ಷಿ- ಹೀಗೆ ಹಲವು ಆಕೃತಿಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡ ಕೈವಾರ ಬೆಟ್ಟ ಸಮೂಹ ವೈವಿಧ್ಯತೆಗಳನ್ನು ಹೊರಚೆಲ್ಲುವ ನಿಸರ್ಗ ನಿರ್ಮಿತ ಕಲಾಶಾಲೆಯಂತಿದೆ.  
ಅನೇಕ ಗವಿಗಳು ಹಾಗೂ ಶಿಲಾಶ್ರಯಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಈ ಕೈವಾರ ಸೀಮೆಯಲ್ಲಿ ಹರಡಿವೆ. ಇಲ್ಲಿ ಶಿಲಾಯುಗದ ಚಿತ್ರಕಲೆಯ ಕುರುಹುಗಳು ಇರಬಹುದೆಂಬ ಊಹೆಗಳಿದ್ದರೂ ಈವರೆಗೂ ಅವುಗಳ ಲಭ್ಯವಿಲ್ಲ. ದೇಗುಲಗಳು, ಶಿಲ್ಪಗಳು, ಉಬ್ಬುಶಿಲ್ಪಗಳು ಹಾಗೂ ಗಾರೆಶಿಲ್ಪಗಳು ಇಲ್ಲಿನ ಸೌಂದರ್ಯ ರಾಯಭಾರಿಗಳು.
ಕೈವಾರ ಅಮರನಾರೇಯಣ ದೇಗುಲಕ್ಕೆ ಪ್ರಸಿದ್ಧಿ. ಇದನ್ನು ತನ್ನ ತಪೋಭೂಮಿ ಹಾಗೂ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಸಂತ ಕವಿ ನಾರೇಯಣ ತಾತಯ್ಯನವರ ಅನುಯಾಯಿಗಳು ಅಭಿವೃದ್ಧಿಪಡಿಸಿರುವ ಅನೇಕ ಕಟ್ಟಡಗಳು ದೈವೀಕತೆಯನ್ನು ತೋರುವ ಹಲವು ಚಿತ್ರಕಲಾಕೃತಿಗಳನ್ನೊಳಗೊಂಡಿದೆ. ನಾರೇಯಣರ ಅನೇಕ ಬೋಧನೆಗಳನ್ನು ಮನೆಮನಕ್ಕೆ ತಲುಪಿಸಿದವರು. ಭಕ್ತಿಯ ಮೂಲಕ ಮೋಕ್ಷ ಪಡೆಯುವ ಸರಳ ಹಾದಿಯನ್ನು ಹಾಕಿಕೊಟ್ಟವರು.
ಅಧ್ಯಾತ್ಮದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೀವನದ ಅಂಗವನ್ನಾಗಿ ಮಾಡಿಕೊಂಡ ತಾತಯ್ಯ, ಭಜನೆಗಳಿಗೆ ಹೆಚ್ಚು ಒತ್ತುಕೊಟ್ಟವರು. ಶತಕಗಳು ಉರುಳಿ ಹೋದರೂ ತಾತಯ್ಯ ಅವರ ತತ್ವಪದಗಳನ್ನು ನಿರರ್ಗಳವಾಗಿ ಹೇಳುವ ಮತ್ತು ಭಜನೆಗಳಿಗೆ ಅವುಗಳನ್ನು ಒಗ್ಗಿಸುವ ಜನ ಇಂದಿಗೂ ಕಡಿಮೆಯಾಗಿಲ್ಲ. ಕೈವಾರ ಇದೀಗ ಭಜನೆ, ಕುಣಿತ, ಸಂಗೀತ, ಹರಿಕಥೆ, ಬುರ್ರಕಥೆಗಳ ಸ್ವರ್ಗ. ತಾತಯ್ಯನವರ ಧ್ಯಾನಸ್ಥ ಭಾವಚಿತ್ರಗಳು ಈ ನಾಡಿನ ಅಸಂಖ್ಯ ಮನೆಗಳಲ್ಲಿ ಸ್ಥಾನ ಪಡೆದುಕೊಂಡಿದೆ.  ದೃಶ್ಯಲೋಕದ ಮೂಲಕ ತಾತನವರ ಬದುಕಿನ ಕಥನವನ್ನು ಅನಾವರಣಗೊಳಿಸುವ ಕಾರ್ಯವನ್ನು ಆಶ್ರಮದ ಮುಖ್ಯಸ್ಥ ಡಾ. ಎಂ.ಆರ್. ಜಯರಾಂ ಈಗ ಪೂರ್ಣಗೊಳಿಸಿದ್ದಾರೆ. ಹೆಸರಾಂತ ಕಲಾವಿದ ಶ್ರೀರಂಗಪಟ್ಟಣದ ಕೃಷ್ಣಸ್ವಾಮಿ, ತಾತನವರ ಇಪ್ಪತ್ತಕ್ಕೂ ಹೆಚ್ಚು ತೈಲಚಿತ್ರಗಳನ್ನು ಮಠದ ಒಳಾವರಣದಲ್ಲಿ ರಚಿಸಿದ್ದಾರೆ. ಬಹು ಸರಳವಾಗಿ ರೂಪುಗೊಂಡಿರುವ ಕಲಾಕೃತಿಗಳು ನೋಡುಗರ ಮನದ ಕದ ತಟ್ಟುತ್ತವೆ.  
ಕೈವಾರ ಬೆಟ್ಟದ ವಾಸ್ತುಶಿಲ್ಪಗಳು ಕಲೋಪಾಸಕರಿಗೆ ಮುದ ನೀಡುತ್ತವೆ. ಇಲ್ಲಿನ ನಾರೇಯಣ ಸಭಾಂಗಣದಲ್ಲಿ ರಾಮಾಯಣದ ಆಳೇತ್ತರದ ಇಪ್ಪತ್ತು ಕೃತಿಗಳು ಗಮನ ಸೆಳೆಯುತ್ತವೆ. ಇಲ್ಲಿ ರಾಮಾಯಣದ ಕಥೆಗಳು ವಿಶಾಲವಾಗಿ ಅರಳಿವೆ.

-ಎನ್. ಜಗನ್ನಾಥ ಪ್ರಕಾಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.