ಬುಕ್ ಕೆಫೆ
ಕಾದಂಬರಿಯ ಪುಟಗಳೂ ಕಾಫಿಯ ಸಿಪ್ಪುಗಳೂ ಏಕಕಾಲಕ್ಕೆ ಒಳಗೆ ಇಳಿಯುವ ಪರಿಯನ್ನು ನೀವು ಕಾಫಿ ಡೇಯಲ್ಲೇನೋ ಅನುಭವಿಸಬಹುದು. ಆದರೆ ಅಲ್ಲಿ ಪುಸ್ತಕಗಳು ಸಿಗುವುದಿಲ್ಲ. ಲೈಬ್ರರಿಯಲ್ಲಿ ನಿಮಗ್ಯಾರೂ ಕಾಫಿ ಟೀ ಸೇವಿಸಲು ಬಿಡುವುದಿಲ್ಲ. ಪುಸ್ತಕಗಳೂ ಸಿಗಬೇಕು, ಕಾಫಿಯೂ ಸಿಗಬೇಕು ಎಂದಿದ್ದರೆ? ಬುಕ್ ಕೆಫೆಗಳಿಗೇ ಹೋಗಬೇಕು.
ನಗರವಾಸಿಗಳ ಪುಸ್ತಕ ಓದಿಗೆ ಪ್ರಶಾಂತ ತಾಣ ಒದಗಿಸಿಕೊಡಲಾರಂಭಿಸಿದ ಬುಕ್ ಕೆಫೆ ಸಂಸ್ಕೃತಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. 1999ರಲ್ಲಿ ದಿಲ್ಲಿಯಲ್ಲಿ ಹೀಗೊಂದು ಕೆಫೆ ಶುರುವಾದಾಗ ಅದು ಉದ್ಧಾರವಾಗುತ್ತದಾ ಎಂದು ಕೇಳಿದವರೇ ಹೆಚ್ಚು. ನಂತರ 2001ರಲ್ಲಿ ಕೋಲ್ಕತಾದಲ್ಲಿ ಆಕ್ಸ್‌ಫರ್ಡ್ ಮಳಿಗೆಯವರು ಆರಂಭಿಸಿದ 'ಚಾ ಬಾರ್' ಗೆದ್ದಿತು. ಇಂದು ದೇಶಾದ್ಯಂತ ಚಾ ಬಾರ್‌ನ 30 ಶಾಖೆಗಳಿವೆ.
ಜನ ಇಲ್ಲಿಗೆ ಯಾಕೆ ಹೋಗುತ್ತಾರೆ? ಮುಖ್ಯವಾಗಿ, ಅದೊಂದು ಡಿಫರೆಂಟ್ ಅನುಭವ ಎಂಬುದಕ್ಕಾಗಿ. ಸಮಾನ ಮನೋಭಾವದ ಮಂದಿ ಬಂದು, ಕೂತು, ಓದಿ, ಹರಟೆ ಹೊಡೆದು ಹೋಗುತ್ತಾರೆ. ಪುಸ್ತಕಗಳು ಇಲ್ಲಿ ಮಾರಾಟಕ್ಕಿಲ್ಲ. ಈಗ, ತಮ್ಮದೇ ಪುಸ್ತಕವನ್ನು ತಂದು ಅಲ್ಲಿಟ್ಟು, ಬೇರೊಬ್ಬರ ಪುಸ್ತಕವನ್ನು ಕೊಂಡೊಯ್ಯುವ ವ್ಯವಸ್ಥೆಯೂ ಬಂದಿದೆ. ಓದುವಿಕೆ ತೀರ ಖಾಸಗಿಯಲ್ಲ, ಅದೊಂದು ಸೆಲೆಬ್ರೇಷನ್ ಎಂದು ಸಾರುವ ಹುನ್ನಾರವೂ ಇಂಥ ಕೆಫೆಗಳ ಹಿಂದಿರುವಂತಿದೆ.
ಕೋಡ್ ಸೀಕ್ರೆಟ್
ನಿಮ್ಮಲ್ಲಿ ಹೆಚ್ಚಿನವರು 'ಡಾವಿನ್ಸಿ ಕೋಡ್' ಪುಸ್ತಕ ಓದಿರಬಹುದು. ಇಲ್ಲವಾದರೆ, ಇದೇ ಹೆಸರಿನ ಸಿನೆಮಾವನ್ನಾದರೂ ನೋಡಿರುತ್ತೀರಿ. ಇದನ್ನು ಬರೆದ ಡ್ಯಾನ್ ಬ್ರೌನ್, ಇಂದು ಬೇಡಿಕೆಯ ಕಾದಂಬರಿಕಾರ. 2003ರಲ್ಲಿ ಈತ ಪ್ರಕಟಿಸಿದ ಡಾವಿನ್ಸಿ ಕೋಡ್ ಬೆಸ್ಟ್‌ಸೆಲ್ಲರ್ ಆಗಿ, ಸಿನೆಮಾ ಆಗಿ, ಕ್ರೈಸ್ತರ ಕೆಲ ಪಂಗಡಗಳ ಕ್ರೋಧಕ್ಕೂ ಕಾರಣವಾದ್ದೊಂದು ಕತೆ.
ಈ ಕಾದಂಬರಿ ಪ್ರಕಟವಾದಾಗ, ಮೈಖೇಲ್ ಬೈಜೆಂಟ್ ಎಂಬ ಕೃತಿಕಾರ ಬ್ರೌನ್‌ನ ಮೇಲೆ ಕೇಸು ಹಾಕಿದ. 1982ರಷ್ಟು ಹಿಂದೆಯೇ ಈತ ಬರೆದ 'ದಿ ಹೋಲಿ ಬ್ಲಡ್ ಆಂಡ್ ದಿ ಹೋಲಿ ಗ್ರೇಲ್' ಎಂಬ ಚಾರಿತ್ರಿಕ ಪುಸ್ತಕಗಳಿಂದ ವಿಷಯಗಳನ್ನು ಆಯ್ದುಕೊಂಡು ಬ್ರೌನ್ ಕಾದಂಬರಿ ಬರೆದಿದ್ದಾನೆ ಎಂಬುದು ಆತನ ವಾದವಾಗಿತ್ತು. ಯೇಸುಕ್ರಿಸ್ತನಿಗೆ ಮದುವೆಯಾಗಿತ್ತು, ಮೇರಿ ಮ್ಯಾಗ್ದಲೀನ ಆತನ ಹೆಂಡತಿಯಾಗಿದ್ದಳು, 'ಪ್ರಿಯೊರಿ ಆಫ್ ಸಿಯೊನ್' ಎಂಬ ನಿಗೂಢ ಗುಂಪು ಈ ಸತ್ಯವನ್ನು ಮುಚ್ಚಿಟ್ಟಿದೆ ಎಂದು ಆತ ಬರೆದಿದ್ದ. ಅದು ಬೆಸ್ಟ್‌ಸೆಲ್ಲರ್ ಕೂಡ ಆಗಿತ್ತು. ಇದಕ್ಕೆ ಒಂದಷ್ಟು ಪತ್ತೇದಾರಿ ಮಸಾಲೆ ಸೇರಿಸಿ ಬ್ರೌನ್ ಕಾದಂಬರೀಕರಿಸಿದ್ದ. ಆದರೆ ತೀರ್ಪು ಬ್ರೌನ್ ಪರ ಬಂತು. ತನ್ನ ಕಲ್ಪನೆಯ ಕೂಸನ್ನು ಕಣ್ಣೆದುರೇ ಇನ್ನೊಬ್ಬ ಕದ್ದು ಗೆದ್ದುದನ್ನು ನೋಡಿ ದಿಗ್ಭ್ರಮೆಗೊಂಡ ಬೈಜೆಂಟ್, ಮೊನ್ನೆ ತನ್ನ 65ನೇ ವರ್ಷದಲ್ಲಿ ಸತ್ತುಹೋದ.
ಈ ಕೇಸಿನ ಪ್ರಕರಣವನ್ನು ಸಾಹಿತ್ಯ ಜಗತ್ತಿನ ಒಂದು ರೂಪಕವಾಗಿಯೂ ನೋಡಬಹುದು. ಚರಿತ್ರೆಯ ವಾಸ್ತವಾಂಶಗಳನ್ನು ಇದ್ದಂತೆ ಬರೆದರೆ ಅದು ಸಂಶೋಧನಾ ಕೃತಿಯಾಗಬಹುದಷ್ಟೇ. ಆದರೆ ಅವನ್ನೇ ಕತೆಯಂತೆ ಹೆಣೆದು ರುಚಿಕಟ್ಟಾದ ಶೈಲಿಯಲ್ಲಿ ಬಡಿಸಿದರೆ ಅದು ಸಾಹಿತ್ಯ ಕೃತಿಯಾಗುತ್ತದೆ, ಕಾದಂಬರಿಯಾಗುತ್ತದೆ. ನಮ್ಮಲ್ಲಿ ಇದಕ್ಕೆ ಉದಾಹರಣೆ: ಕೆ.ಎನ್.ಗಣೇಶಯ್ಯ.
ಏಟು ಝಡ್
ಒಂದು ಬಸ್ಸಿನಲ್ಲಿ ನಾಲ್ಕು ಮಂದಿ ಅಕ್ಕಪಕ್ಕ ಕೂತಿದ್ದರು. ಮಾತುಕತೆ ಮೊದಲಾಯಿತು. ಒಬ್ಬ ಹೇಳಿದ- 'ನಾನು ಶೇರು ದಲ್ಲಾಳಿ. ತಿಂಗಳಿಗೆ ಹತ್ತು ಲಕ್ಷ ಪಡೆಯುತ್ತೇನೆ'. ಎರಡನೆಯವನೆಂದ- 'ನಾನು ಸಾಫ್ಟ್‌ವೇರ್ ಎಂಜಿನಿಯರ್. ತಿಂಗಳಿಗೆ ಒಂದೂವರೆ ಲಕ್ಷ ಗಳಿಸುತ್ತೇನೆ'. ಮೂರನೆಯವ ಹೇಳಿದ- 'ನಾನು ಡಾಕ್ಟರ್. ತಿಂಗಳಿಗೆ ಒಂದು ಲಕ್ಷ ದುಡಿಯುತ್ತೇನೆ'. ನಾಲ್ಕನೆಯವ ದೀರ್ಘವಾಗಿ ಯೋಚಿಸುತ್ತಾ ಹೇಳಿದ- 'ನನ್ನ ತಿಂಗಳ ಆದಾಯ ಒಂದು ಸಾವಿರ ಇರಬಹುದೋ ಏನೋ...' ಅವನ ಮಾತು ಮುಗಿಯುವ ಮೊದಲೇ ಉಳಿದ ಮೂವರೂ ಕೇಳಿದರು- 'ಹೌದಾ? ನೀನು ಕವನ ಬರಿಯೋದೋ, ಕಥೇನೋ?'
- ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

