ಬದುಕಿನ ದಾಹದಲ್ಲಿ...
ಈ ಬದುಕೆಂಬ ಕ್ರೂರ ಕಾಡಿನಲ್ಲಿ ಮೊದಲ ಬಾರಿಗೆ ಆತ ಕಳ್ಳತನ ಮಾಡಿ ನಂತರ ಆ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲಾಗದೆ ಮತ್ತೆ ಕದ್ದ ವಸ್ತುವನ್ನು ಯಥಾಸ್ಥಳದಲ್ಲಿ ಇಟ್ಟುಬರುವ ಒಂದು ಪ್ರಸಂಗ 'ಈ ಊರಿನಲ್ಲಿ ಕಳ್ಳರೇ ಇಲ್ಲ' ನಾಟಕದ ಕಥಾವಸ್ತು.
ಸಣ್ಣ ಹಳ್ಳಿಯೊಂದರಲ್ಲಿ ಆನಾ ಮತ್ತು ದಮಾಸೋ ಎಂಬ ದಂಪತಿಗಳಿರುತ್ತಾರೆ. ಬಡತನದ ಬೇಗೆ. ಆ ಊರಿನಲ್ಲಿ ಒಂದು ಬಿಲಿಯರ್ಡ್ಸ್ ಬಾಲ್ ಕ್ಲಬ್ ಇರುತ್ತದೆ. ದಮಾಸೋ ಆ ಚೆಂಡನ್ನು ಕದ್ದು ಬರುತ್ತಾನೆ. ಇಡೀ ಊರಿಗೆ ಊರೇ ಈ ಘಟನೆಯಿಂದ ವಿಚಿತ್ರ ತಲ್ಲಣಗಳಿಂದ ಚದುರಿ ಹೋಗುತ್ತವೆ. ಕೊನೆಗೂ ದಮಾಸೋ ಈ ವಿಚಿತ್ರ ಮನಸ್ಥಿತಿಯಿಂದ ಪಾರಾಗಲು ಕದ್ದ ಚೆಂಡನ್ನು ಮೊದಲಿದ್ದ ಜಾಗದಲ್ಲಿಯೇ ಇಟ್ಟು ಬರುತ್ತಾನೆ. ಈ ಕಥೆ ಬರೆದವನು 1982ರ ನೊಬೆಲ್ ಪುರಸ್ಕೃತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್. ಈತ ಲ್ಯಾಟಿನ್ ಅಮೆರಿಕದ ಕೊಲಂಬಿಯಾ ದೇಶದವನು.
ಇಲ್ಲಿ ಕೇವಲ ಚೆಂಡು ಕಳ್ಳತನವಾದರೂ, ಅದು ಸಾಂಕೇತಿಕವಾಗಿ ಈಗಾಗಲೇ ಸಮಾಜದಲ್ಲಿ ಆವರಿಸಿರುವ ಮತೀಯತೆ, ವರ್ಣಭೇದ, ವರ್ಗಭೇದ, ಕಲುಷಿತ ರಾಜಕೀಯ, ಬಡತನ, ಬಡತನಕ್ಕೆ ಕಾರಣವಾದ ಸಾಮಾಜಿಕ ಸಂರಚನೆಗಳು ಇವುಗಳೆಲ್ಲವನ್ನು ಪ್ರತಿಬಿಂಬಿಸುವ ಸಾಕಾರವಾಗುತ್ತದೆ. ಇದೇ ನಮಗೆ ಈ ನಾಟಕ ನೀಡುವ ಸಂಕೀರ್ಣ, ಪರಿಣಾಮಕಾರಿ ಅನುಭವ. ಚೆಂಡು ಮತ್ತು ಅದರ ಮಾತು ಎಲ್ಲೆಲ್ಲಿ ಚಲಿಸುತ್ತದೆಯೋ ಅಲ್ಲೆಲ್ಲ ಪ್ರೇಕ್ಷಕ ಕೂಡಾ ಚಲಿಸುತ್ತಾ ಒಂದು ಸಮಾಜದ ಎಲ್ಲಾ ಆಯಾಮಗಳನ್ನು ಮೂರ್ತ ರೂಪದಲ್ಲಿ ಕಾಣುತ್ತಾ ಸಾಗುತ್ತಾನೆ. ಸಂಬಂಧಗಳ, ಅವರ ಮಧ್ಯೆ ಇರುವ ಬಿರುಕುಗಳ, ವ್ಯವಸ್ಥೆಯಲ್ಲಿರುವ ಕೊಳಕುತನವನ್ನು ಸಾದರಪಡಿಸಲು ನಿರ್ದೇಶಕ ಉದ್ದೇಶ ಪೂರ್ವಕವಾಗಿಯೇ ಕೈಗೊಳ್ಳುವ ಹಲವರ ದೃಷ್ಟಿಕೋನಗಳಿಂದ ಸಮಾಜವನ್ನು ನೋಡುವ ಪರಿಯೂ ಚೆನ್ನಾಗಿದೆ. ಪರಿಕಲ್ಪನೆ, ವಿನ್ಯಾಸ, ನಿರ್ದೇಶನದಲ್ಲಿ ಎಚ್.ಕೆ. ದ್ವಾರಕನಾಥ್, ಸಂಗೀತದಲ್ಲಿ ಪ್ರಶಾಂತ್ ಹಿರೇಮಠ್, ಬೆಳಕಿನ ವಿನ್ಯಾಸದಲ್ಲಿ ಕೃಷ್ಣಕುಮಾರ್ ನಾರ್ಣಕಜೆ ಮತ್ತು ಮಹೇಶ್ ಕುಮಾರ್ ಮಿಂಚಿದ್ದಾರೆ.
ಜುಲೈ 16ರ ಮಂಗಳವಾರ ಸಂಜೆ 7.30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನವಿದೆ.
- ರಾಮಚಂದ್ರ ಗಂಗಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

