ಮಕ್ಕಳ ರಾಜ್ಯ
ಸೂಜಿ ಕಲಿಸಿದ ಪಾಠ
ಅವನೊಬ್ಬ ಭಾರೀ ಶ್ರೀಮಂತ. ಅವನಿಗೆ ಆಸ್ತಿ ಗಳಿಸುವುದರಲ್ಲಿ ತೃಪ್ತಿಯೇ ಇಲ್ಲ. ಎಷ್ಟು ಸಂಪಾದಿಸಿದರೂ ಮತ್ತಷ್ಟು ಬೇಕು ಎಂಬ ದುರಾಸೆ. ಇದರ ಜತೆಗೆ ತುಂಬಾ ಜಿಪುಣನಾಗಿಯೂ ಇದ್ದ. ಊರಿನವರೆಲ್ಲಾ ಇವನ ಜಿಪುಣತನ ಕಂಡು ಅಪಹಾಸ್ಯ ಮಾಡುತ್ತಿದ್ದುದೂ ಉಂಟು. ದೇವರ ಮುಂದೆ ಊದುಬತ್ತಿ ಹಚ್ಚಿದರೆ ಆ ತತ್ಕ್ಷಣವೇ ಆರಿಸಿಬಿಡುತ್ತಿದ್ದನು. ಕನ್ನಡಿಯ ಮೇಲೆ ನೆರೆಮನೆಯ ದೀಪ ಬೀಳುವಂತೆ ಮಾಡಿ ಆ ಬೆಳಕು ತನ್ನ ಮನೆಗೆ ಪ್ರತಿಫಲಿಸುವಂತೆ ಮಾಡುವನು. ತನ್ನ ಮಕ್ಕಳನ್ನು ನೆರೆಮನೆ ಹುಡುಗರ ಜತೆ ಆಟವಾಡಿ ಬರಲು ಕಳುಹಿಸಿದಾಗ ಆ ಹುಡುಗರು ತಲೆಗೆ ಎಣ್ಣೆ ತಿಕ್ಕಿಕೊಂಡಿದ್ದರೆ ಇವನ ಮಕ್ಕಳು ಅವರೊಂದಿಗೆ ಬೆರೆತು ತಮ್ಮ ಮಕ್ಕಳ ತಲೆಗೂ ಎಣ್ಣೆ ಸಿಗುವಂತೆ ಮಾಡುತ್ತಿದ್ದನು. ಒಟ್ಟಿನಲ್ಲಿ ಎಲ್ಲೆಲ್ಲಿ ಜಿಪುಣತನವನ್ನು ಸಾಧಿಸಲು ಸಾಧ್ಯವೋ ಅಲ್ಲೆಲ್ಲಾ ಇವನ ಪಾಂಡಿತ್ಯ ಎಲ್ಲೆ ಮೀರುತ್ತಿತ್ತು.
ಒಂದು ಸಲ ಈ ಜಿಪುಣಾಗ್ರೇಸರ ಚಕ್ರವರ್ತಿ ಪಕ್ಕದ ಹಳ್ಳಿಗೆ ನಡೆದುಹೋಗುತ್ತಿದ್ದ. ಎದುರಿಗೆ ಒಬ್ಬ ಮುದುಕ ಭೇಟಿ ಆದ. ಕುಶಲ ಪ್ರಶ್ನೆಗಳ ನಂತರ, 'ಯಜಮಾನರೇ, ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು; ನಿಮ್ಮ ತಂದೆ ಬಂದು ಬಹಳ ಹೊತ್ತು ಮಾತನಾಡಿದರು. ಅವರು ಈಗ ಸ್ವರ್ಗದಲ್ಲಿ ವಾಸಿಸುತ್ತಿದ್ದಾರಂತೆ. ಅವರ ಬಟ್ಟೆಗಳೆಲ್ಲವೂ ಹರಿದು ಚಿಂದಿಯಾಗಿವೆಯಂತೆ. ತಕ್ಷಣವೇ ಒಂದು ಸೂಜಿಯನ್ನು ತೆಗೆದುಕೊಂಡು ನೀವು ಸ್ವರ್ಗಕ್ಕೆ ಹೋಗಿ ಅವರಿಗೆ ಸೂಜಿ ಕೊಡಬೇಕಂತೆ. ತೆಗೆದುಕೊಳ್ಳಿ ಈ ಸೂಜಿಯನ್ನು' ಎನ್ನುತ್ತಾ ಶ್ರೀಮಂತನ ಮುಂದೆ ಸೂಜಿ ಹಿಡಿದ. ಈ ಅನಿರೀಕ್ಷಿತ ಪ್ರಸಂಗದಿಂದಾಗಿ ಶ್ರೀಮಂತನ ಮನಸ್ಸಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಉದ್ಭವಿಸಿದವು. 'ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ದೇಹವನ್ನು ಬಿಟ್ಟು ಹೋಗಬೇಕು. ಅಂದಮೇಲೆ ಈಗ ನಾನು ಜಿಪುಣತನದಿಂದ ಗಳಿಸಿರುವ ಈ ಆಸ್ತಿ, ಸಂಪತ್ತು, ಧನಕನಕ ವಸ್ತುಗಳು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ಇದೆಲ್ಲಾ ನನ್ನ ವ್ಯಾಮೋಹವಲ್ಲದೆ ಮತ್ತೇನಿಲ್ಲ' ಎನ್ನುತ್ತ 'ಇಂದು ಈ ಸೂಜಿ ನನಗೊಂದು ಉತ್ತಮವಾದ ಪಾಠ ಕಲಿಸಿದೆ. ಇನ್ನು ಮುಂದೆ ನನ್ನನ್ನು ನಾನು ತಿದ್ದಿಕೊಂಡರೆ ಕ್ಷೇಮ' ಎನ್ನುತ್ತಾ ಆ ಮುದುಕನಿಗೆ ಧನ್ಯವಾದಗಳನ್ನು ಅರ್ಪಿಸಿದ.
(ತೆಲುಗು ಜಾನಪದ ಕಥಾ ಸಂಗ್ರಹ)
= ಎ.ಕೆ. ಪಟ್ಟಾಭಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

